|| ಪಲ್ಲ ||

ಕುಂತಿಹೊಟ್ಟಿಲೆ ಮಕ್ಕಳ ಹುಟ್ಟಿದಾರ ಧರ್ಮ, ಭೀಮ ಅರ್ಜುನ ವೀರಾ |
ನಕುಲ ಸಹದೇವ ಇವರು ಮಾದ್ರಿಯವರಾ |
ಹೀಗೆ ಐದು ಮಂದಿ ಹುಟ್ಯಾರೋ ಪಾಂಡವರಾ ||
ಗಾಂಧಾರಿ ಹೊಟ್ಟೆಲೆ ನೂರಾ ಒಂದಮಂದಿ ಅವರಿಗೆ ಅಂತಾರೊ ಕೌರವರಾ |
ಇರುವುದು ಹಸ್ತಿನಾಪೂರಾ ||

ಚೌಕ – ೧

||ನುಡಿ||

ಭಾದ್ರಪದ ಶುದ್ಧ ಅಷ್ಟಮಿಯ ದಿವಸ ನಾರದಮುನಿ ಬಂದ್ರರುಸಿಸೂರಾ |
ನೋಡಿ ಗಾಂಧಾರಿ ಜೋಡಿಸ್ಯಾಳ ತನ್ನ ಎರಡು ಕರಾ |
ಕೈ ಮುಗದ ಮಾಡಿದಾಳ ನಮಸ್ಕಾರ ||
ಸಿಂಹಾಸನ ಮೇಲೆ ಸ್ವಾಮಿಗೆ ಕೂಡ್ರಿಸಿ ಪೂಜಾ ಮಾಡ್ಯಾಳ ಎಂಟ ಪ್ರಕಾರ |
ಎಲ್ಲಾ ಉಪಚಾರ||೧||

ನಾರದ ಮುನಿಗೆ ಅಂತಾಳ ಗಾಂಧಾರಿ ಎಲ್ಲಾ ವೃತಾ ನೀವು ಬಲ್ಲವರಾ |
ಮತ್ತ ಪುಣ್ಯೆ ಆಗುದು ಹೇಳಬೇಕ್ರಿ ಜರಾ |
ಅದರಿಂದ ಆಗುದು ನನ್ನ ಉದ್ಧಾರಾ ||
ಗಜಗೌರಿವಾಹನ ವೃತಾ ಕೊಟ್ಟಿದಾನ ಮುಂದ ಕೇಳರಿದರ ಮಜಕೂರಾ |
ಧ್ಯಾನಗೊಟ್ಟ ಪೂರಾ||೨||

ಮಣ್ಣಿನ ಆನಿ ತಯ್ಯಾರ ಮಾಡಿ ವಸ್ತ್ರ ಅಲಂಕಾರ ಶೃಂಗಾರಾ |
ತಂತೋ – ತಂತುವಾದ್ಯ ಘನಸುಸ್ವರಾ |
ಮ್ಯಾಲ ಕುಣಸಿ ಗಾಂಧಾರಿನ ವಯ್ಯ ಚದುರಾ ||
ಕುಂತಿ ಮನಿಗೆ ಬಾಗಿನ ಕುಡಲಾಕ ಹೋಗಬೇಕ ನೀವು ಮಾಡಿತ್ವರಾ |
ಬ್ಯಾಡ ಅವಸರಾ||೩||

||ಚಾಲ||

ಇಷ್ಟ ಹೇಳಿ ನಡದ ನಾರದ ಕೈಲಾಸಕ ಹ್ವಾದ ಕಳಬಳಿಸಿ ಎಲ್ಲಾ ಇಟ್ಟಾ |
ಕಳಬಳಿಸಿ ಎಲ್ಲಾ ಇಟ್ಟಾ||೧||

ಗಾಂಧಾರಿ ಮಕ್ಕಳನ ಕರದ ಹೇಳಿದಾಳ ಎಲ್ಲಾ ವಡದ ಕೇಳರಿ ಸುಭಟಾ |
ಕೇಳರಿ ಸುಭಟಾ||೨||

ಗಜಗೌರಿವಾಹನ ಹೆಚ್ಚಿಂದ ನಾರದ ಇಲ್ಲಿ ಬಂದ ಹೋದ ವೃತಾಕೊಟ್ಟಾ ||
ಹೋದ ವೃತಾಕೊಟ್ಟಾ||೩||

||ಕೂ.ಪ ||

ತಾಯಿ ಮಾತಕೇಳಿ ಮಣ್ಣ ತರಸಿ ಅವರು ಆನಿ ಮಾಡಿದಾರ ತಯ್ಯಾರ |
ಸಜ್ಜ ಸೃಂಗಾರ ಇಡಿಸಿ ಬಳೇ ಬರ್ಜರಾ |
ವಾದ್ಯ ಬಾರಸತಾರ ಮುಂದ ನಾನಾ ಪ್ರಕಾರ ||
ಕುಂತಿಮನಿಗೆ ಬಾಗಿಣ ಕುಡಲಾಕ ಹ್ವಾದ ಗಾಂಧಾರಿ ಸಂಗಾಟ ಇದ್ರ ಕೌರವರಾ |
ತೊಟ್ಟ ಹಂಕಾರ ||

ಚೌಕ – ೨

||ನುಡಿ||

ಹೊರಗ ಕರದ ಕುಂತಿನ ಗಾಂಧಾರಿ ಹೇಳತಾಳ ಆಗ ಆಕಿಗಿ ಏನಾ |
ನಾವು ಕಡಲಿಕ್ಕೆ ಬಂದೀವ ಬಾಗೀಣಾ |
ಸವ್ವಾಯಿ ಸಾಲ ಅಲ್ಲ ಇದು ಕೈಗಡ್ಣಾ ||
ನಮ್ಮ ಬಾಗಿಣ ನಮಗ ತಿರಗಿ ಕೊಡಬೇಕರಿ ಇಲ್ಲದಿದ್ರ ಆದೀತ ಅಪಮಾನ |
ಅಂದ ದುರ್ಯೋಧನಾ||೧||

ಇಸ್ಟಮಾತ ಕೇಳಿ ತಿರಿಗಿ ಬಂದಾಳ ಕುಂತಿ ಮಾಡತಾಳ ಚಿಂತಿಯನಾ |
ಶಿವಶಿವಾ ಏನ ಕಳವಿದಿ ನಮಗ ಈ ವಿಘ್ನಾ |
ಅಸ್ಟರೊಳಗ ಬಂದಾನಲ್ಲಿ ಭೀಮಸೈನಾ ||
ತಾಯಿ ಮುಂದ ಬಂದನಿಂತ ಕೇಳತಾನ ಯಾಕ ಬಾಡೇದ ತಾಯಿ ನಿನ್ನ ವದನಾ ||

ಅದಕ ಏನ ಕಾರಣಾ||೨||

ಕುಂತಿ ಅಂತಾಳ ಆಗ ನೀವು ಐದಮಂದಿ ಹ್ಯಾಂಗ ತರುವುದು ಎಲ್ಲಿದಮಣ್ಣಾ |
ಮಣ್ಣತಂದ ಮಾಡುದತಿ ಆನಿಯನಾ |
ಮುತ್ತ ಮಾಣಿಕ ಜಡಿಸಿ ಕುಂದನಾ ||
ಬಂಡಿಮೇಲೆ ಆನಿಹೇರಿ ಮೇಲೆ ಕುತಕೊಂಡ ಗಾಂಧಾರಿಗೆ ಕೊಡುದತಿ ಬಾಗಿಣಾ |
ಅದರ ಕೈಗಡ್ಣಾ||೩||

ಇಷ್ಟ ಮಾತಕೇಳಿ ಎದ್ದ ಭೀಮಸೈನ ಗದಾತುಗೊಂಡ ಹೊಂಟಾನ ಜಾಣಾ |
ಸಿಟ್ಟಿಗಿ ಬಂದ ಆಗಿದಾವ ಕೆಂಡದಾಂಗ ಕಣ್ಣಾ |
ಹೊಳಿದಂಡಿ ಕೆಡವಿ ಮಾಡಿದಾನ ಸವನಾ |
ನೀರಕಲಸಿ ಗುಂಡಮಾಡಿ ಒಗಿತಾನ ನೋಡಿ ಹುಚ್ಚ ಆತ ಎಲ್ಲಾ ಜನಾ |
ಅದಕ ಮಾಡುದೇನಾ||೪||

||ಚಾಲ ||

ಡಿಗ್ಗ ಬಿತ್ತ ಅಲ್ಲಿ ಮಣ್ಣಿಂದ ಹೋಗಿ ಬರುವುದು ಹಾದಿ ಆತ ಬಂದಾ |
ಹಾದ ಆತ ಬಂದಾ||೧||

ಧರ್ಮ ಅರಸ ಆಗ ಏನ ಅಂದ ಹೋಗ ನೀ ಜಲದ ಭೀಮನ ಬಾಕರದಾ |
ಭೀಮನ ಬಾ ಕರದಾ||೨||

ಮಾತ ಕೇಳಿ ಪಾರ್ಥ ವೀರ ನಡದ ಭೀಮನ ತಾಕರದ ಮನಿಗಿ ಬಾ ಅಂದಾ |
ಮನಿಗೆ ಬಾ ಅಂದಾ||೩||

||ಕೂ.ಪ||

ಮಣ್ಣಿನ ಆನಿ ಮಾಡಿ ಆಡತಾವ ಅಡವ್ಯಾಗ ದನ ಕಾಯುವ ಹುಡುಗುರಾ |
ನೀ ಏನ ಹಚ್ಚೇದಿ ಒಣ ಬಡಿವ್ಯಾರಾ |
ನಾ ಹೇಳತಿನಿ ಅದರ ಮಜಕೂರಾ |
ಇಂದ್ರ ಲೋಕದ ಅನಿ ಐರಾವತ ಬಾಗಿಣ ಕುಡುಲಾಕ ತರುವುದು ತ್ವರಾ |
ನೀವು ಬರಿರಿ ಪತ್ರಾ ||

ಚೌಕ – ೩

||ನುಡಿ ||

ಪತ್ರ ಬರದ ಅರ್ಜುನಾ ಈಗ ನಿಮ್ಮ ಆನಿ ಕೊಡಬೇಕರಿ ನಾಲ್ಕದಿನಾ |
ಆನಿ ಮ್ಯಾಲ ಕುಣಸಿ ನಮ್ಮ ತಾಯಿನಾ |
ಗಾಂಧಾರಿಗಿ ಕುಡುವದತಿ ಬಾಗೀಣಾ |
ಪತ್ರದ ಒಳಗ ಹಿಂಗ ಬರದಾನ ಮಜಕೂರಾ ಇಂದ್ರ ಲೋಕಕ ಬಿಟ್ಟಾನ ಬಾಣಾ |
ಅವ ಅರ್ಜುನಾ||೧||

ಇಂದ್ರ ಸಭಾದಾಗ ಬಾಣ ಹೋಗಿ ಬಿದ್ದಿತ ಕಣ್ಣಿಲೆ ಕಂಡಿದಾರ ಸರ್ವಜನಾ |
ಬಂದ ನಾರದ ಮುನಿ ಅಲ್ಲಿ ಹೇಳಿದ ಏನಾ |
ಚಿತ್ತವಿಟ್ಟ ಕೇಳರಿ ನೀವು ಕೊಟ್ಟ ಧ್ಯಾನಾ ||
ಮರ್ತ್ಯುಲೋಕಕ ಆನಿ ಕುಡಬ್ಯಾಡರಿ ಅಲ್ಲಿಂದ ಹೋದಿತ ನಿಮ್ಮ ಅವಸಾನಾ |
ತಿಳಿಯರಿ ಇನ್ನಾ||೨||

ಹುಚ್ಚ ಹತ್ತಿ ಆನಿ ಹುಲ್ಲ ಮೆಯುದುಲ್ಲ ಆಗಿ ನಿಂತತಿ ಒಳೇ ಬೇಬಾಣಾ |
ನೀವು ಬಂದ ಕೇಳರಿ ಬ್ಯಾಡನ ಮೇಣಾ |
ಗುರು ಬ್ರಹಸ್ಪತಿ ಹೇಳಿದಾರ ಖೂನಾ |
ಪತ್ರ ಒಳಗ ಹಿಂಗ ಉತ್ತರ ಬರೆಯಿರಿ ತಿಳಕೊಂಡಾರ ಪಾಂಡು ನಂದನಾ |
ಇದರ ಸಂಧಾನಾ||೩||

ಬಾಣ ತಿರಗಿ ಬಿಟ್ಟಾರ ಹಸ್ತಿನಾಪುರಕ ಧರ್ಮರಾಜಾ ನೋಡಿದ ಅರ್ಜುನ
ಬಂದ ಒಯ್ಯರಿ ಅನ್ನುದು ಏನ ಕಾರಣಾ |
ಅಷ್ಟರೊಳಗ ಬಂದಾನಲ್ಲಿಗೆ ಭೀಮ ಸೈನಾ ||
ಬಾಣ ಪ್ಯಾವಟಗಿಮಾಡಿ ಮ್ಯಾಲ ಏರ‍್ಯಾನೊ ಭೀಮರಾಜಾ ಅವ ಸುಖಜಾಣಾ
ನೋಡಿದ ಟಿಕಾಣಾ||೪||

||ಚಾಲ||

ಸಭಾಮಾಡಿ ಕೂತಿದ್ರ ದೇವಿಂದ್ರ ತೆತ್ತೀಸ ಕೋಟ ದೇವ್ರ ಭೀಮ ಅಲ್ಲಿ ಹ್ವಾದಾ
ಭೀಮ ಅಲ್ಲಿ ಹ್ವಾದಾ||೧||

ಕೈ ಮುಗಿದ ಮಾಡಿದ ನಮಸ್ಕಾರ ಅಂತಾನ ದೇವೀಂದ್ರ ಕೂಡ್ರಿ ನೀವು ಅಂದ
ಕೂಡ್ರಿ ನೀವು ಅಂದಾ||೨||

ಮಾಹುತ ಬಿಟ್ಟಾನ ಆನಿ ಹೋತ ರವಾನಿ ಭೀಮಗ ಹಿಡಿ ಅಂದಾ |
ಭೀಮಗ ಹಿಡಿ ಅಂದಾ||೩||

||ಕೂ.ಪ ||

ಹೊತ್ತ ಅರವಿ ಎಲ್ಲಾ ಕಳದ ಭೀಮಸೈನಾ ಆಗಿ ಹೊಂಟಿದಾನ ತಯ್ಯಾರ
ಆನಿ ಸೊಂಡಿ ಹಿಡದ ತಿರವಿದ ಗರರರರಾ |
ತೆಳಗ ಕೆಡವಿ ಆನಿ ಮಡಿದ ಜೇರಾ ||
ನಾಲ್ಕು ಕಾಲಕಟ್ಟಿ ತೆಲಿಗಿ ಅಡಗಾಸಿ ಇಂದ್ರ ಲೋಕಕ ಬಂದ ರಣಸೂರ
ನಿಂತ ಫರಭರಾ ||

ಚೌಕ – ೪

||ನುಡಿ ||

ಆನಿ ಕಾಲ ಬಿಚ್ಚಿ ಮಾಡಿದಾರ ಶೃಂಗಾರಾ ತುಗೊಂಡ ಬಂದ ಅವ ವೃಕೋದರ
ಹಸ್ತಿನಾಪುರಕೆ ಬಂದಾನ ಮಾಡಿ ಅವಸರಾ ||
ಧರ್ಮ ಅರಸಗ ಮಾಡಿದಾನ ನಮಸ್ಕಾರಾ ||
ಉದ್ದ ಅಡ್ಡಾಗಲ ಏಸ ಯೋಜನಾ ಆನಿ ಇತ್ತ ಎಸ್ಟು ಉಪ್ಪರಾ |
ಕೇಳ ಶಾಹೀರಾ||೧||

ಅರ್ಧಾ ಯೋಜನ ಇತ್ತ ಅಡ್ಡಾಗಲಾ ನೂರ ಪತಿ ಇತ್ತ ಸುಮಾರಾ |
ಮೂವತ್ತ ಯೋಜನ ಆನಿ ಉಪ್ಪರಾ |
ನೂರ ಮಾರಿ ಇದ್ದು ಎಲ್ಲಾ ಏಕಂದರಾ |
ಒಂದೊಂದ ಮಾರಿಗೆ ಎಂಟ ಹಲ್ಲಾ ಹಲ್ಲಿನ ಮೇಲೆ ಕ್ವಾರಿ ಸುಂದರಾ |
ತುಂಬ್ಯಾವ ನೀರಾ||೨||

ನೀರಿನೊಳಗೆ ಕಮಲ ಹೂವ ಇದ್ದಾವೋ ಗುಂಜಿ ಹಾಕತಾವು ಭ್ರಮರಾ |
ಮುಂದ ಕುಣಿಯತಾರ ರಂಭಾ ಪಾತರಾ |
ಕಥಾ ಕಲ್ಪತರು ನೀವು ಓದರಿ ಶಾಸ್ತರಾ ||
ಎಂಟನೇ ತಬಕದಾಗ ಇಪ್ಪತ್ತೊಂದನೇ ಅಧ್ಯಾಯದೊಳಗಿಂದಾ ತಗದಿವ ಸಾರಾ |

ಕೇಳರಿ ಮಜಕೂರಾ||೩||

ಹಿಂಥಾ ಆನಿ ಮ್ಯಾಲ ಏರಿ ಅಂಬಾರಿ ಕುಂತಿನ ಕುಣಸ್ಯಾರ ಮ್ಯಾಲ ಪಾಂಡವರಾ |
ಮುಂದ ನಡದಾರ ಎಲ್ಲಾ ಸರದಾರಾ |
ತಂತೋ ತಂತುವಾದ್ಯ ಘನ ಸುಸ್ವರಾ ||
ಬಾಗಿಣ ಕುಡಲಾಕ ಹ್ವಾದು ಗಾಂಧಾರಿಗೆ ನೋಡಿ ನಡಗತಾರ ಕೌರವರಾ |
ಬಿತ್ತ ಗುಡಾಚಾರಾ||೪||

||ಚಾಲ||

ಕುಂತಿ ಗಾಂಧಾರಿನ ಕರೆದ ಹೇಳತಾಳ ಒಡದ ಬಾಗಿಣ ತುಗೋರಿ ನಿಮ್ಮದಾ ||
ತುಗೋರಿ ನಿಮ್ಮದಾ||೧||

ಧೃತರಾಷ್ಟ್ರ ಲಗುಬಗಿ ಬಂದ ನಿಂತ ಅವರ ಮುಂದ ಕೇಳತಾನ ಬಾಯಿ ತೆರದಾ ||
ಕೇಳತಾನ ಬಾಯಿ ತೆರದಾ||೨||

ಧರ್ಮ ಆಗ ಏನ ಅಂದ ಹಿಡಿರಿ ಅವರ ಪಾದ ನಡಿರಿ ಅಂದ ಹಿಂದಾ ||
ನಡಿರಿ ಅಂದ ಹಿಂದಾ||೩||

||ಕೂ.ಪ. ||

ನಿಮ್ಮ ಬಾಗಿಣ ನಿಮಗ ಕೊಟ್ಟಿದಿವ ನಮ್ಮ ಮೇಲೆ ಇಲ್ಲ ಏನ ಉಪಕಾರಾ |
ಇಷ್ಟಂದ ತಿರಿಗಿ ಬಂದಾರ ಪಾಂಡವರಾ |
ದುರ್ಯೋಧನ ದುಶ್ಯಾಸನಗ ಬಿದ್ದಿತ ಘೋರಾ ||
ಮೊದಲ ಜಗಳ ಹುಟ್ಟಿತ ಕೌರವ – ಪಾಂಡವರಿಗೆ ಬಿತ್ತವೈರಾ |
ತೊಟ್ಟ ಹಂಕಾರಾ ||

ಚೌಕ – ೫

||ನುಡಿ ||

ಕೊಟ್ಟ ಬಾಗಿಣ ತಿರಗಿ ಬಂದಾರ ಆನಿ ಕಳಿವ್ಯಾರ ಇಂದ್ರ ಲೋಕಕಾ |
ಕೌರವರೊಳಗೆ ಪಾಂಡವರದು ಬಿತ್ತ ಬೆಳಕಾ |
ಶ್ರೀ ಕೃಷ್ಣ ಮಾಡಿದಾನ ಸಾರ್ಥಕಾ ||
ಇಂದ್ರಲೋಕದ ಆನಿ ತಂದಾರ ನಾಡಾಗ ಹೆಚ್ಚಿಂದ ಕೌತುಕಾ |
ಅಂತಾರ ಜನ ಲೋಕಾ||೧||

ಒಂದ ಅಧ್ಯಾಯ ಮುಗದತಿ ಇಲ್ಲಿಗೇ ಶಾಸ್ತ್ರದೊಳಗಿನ ಕವಿ ಹಾಡ
ಶಾಹಿರ ಕೇಳೊ ಆನಿಯ ಲೆಕ್ಕಾ |
ನಿಮ್ಮ ಜವಾಬ ತಗೊರಿ ಕುಂತ ಜಾಗಾಕಾ ||
ಕಲ್ತ ಹಾಡಾವರಿಗೆ ಕವಿ ಮಾಡಾವರಿಗೆ ಭೂಮಿ ಮುಗಲದಷ್ಟು ಐತಿ
ನೀವು ಹಿಡಿರಿ ತರಕಾ||೨||

ಮನಿಮನಿಗೆ ಈಗ ಹಾಡಾವರ ಆಗಿದಾರ ಕೇಳುಮಂದಿ ಕೈಲಾಕಾ
ಗಾಳಿ ಮಟ್ಟಿ ಕಟ್ಟಿದರ ಅದರಿಂದ ಅಲ್ಲ ಟೀಕಾ |
ಚಲು ರುಚಿ ಹತ್ತಬೇಕ ಕೂತಂತಾ ಜನಕಾ ||
ಬಲ್ಲಂತವರು ಬದ ಕೇಳಿದರ ಹಾಡ ಹತ್ತಬೇಕ ಶಾಸ್ತ್ರಕಾ |
ಹಿಂಗ ಕಡಿತನಕಾ||೩||

ಮೋಕ್ಷದಾಯಕ ವಸ್ತ್ರಾದ ಧರಣಪ್ಪ ಕವಿದಾದಾ ಅವರ ಸೇವಕ
ಅವರ ಅಕ್ಷರ ಹಿಡಿಮುತ್ತ ಮಾಣಿಕಾ |
ಆಗ್ಗಿನ ಗಾಡಿ ಓಡಿದಾಂಗ ಇಲ್ಲ ತೊಡಕಾ ||
ಡಪ್ಪಿನ ಮೇಲೆ ಮುತ್ತಿನ ತುರಾಯಿ ಬಿರದ ಹಚ್ಯಾರ ಮುಂಗಲಿ
ಅವರದ ಬಿತ್ತ ಬೆಳಕಾ||೪||

||ಚಾಲ||

ಶಿವಾ ಅರ್ಜುನ ಹಾಡಿನೊಳಗ ಸೂರಗರ್ವ ಇಲ್ಲ ಜರಾ ಸದಾ ಆ ಸದಾ ಅತಿ ಡೌಲಾ||೧||
ದತ್ತು ಬಾಬು ಜ್ಯೋಡಿ ಶಿಷ್ಯಾರಾ ಮಾಡುದಲ್ಲ ಅವಸರ ಹಾಡಿನ
ಹಾಡಿನೊಳಗೆ ಮೇಲಾ||೨||

ಕವಿ ಮಾಡುದಕ ಇಲ್ಲಿ ಬಾಳ ಘೋರ ದರಜ ಇಲ್ಲ ಚೂರ ಹಿಡ
ಹಿಡದ ಸೂರ ತಾಲಾ||೩||

||ಕೂ.ಪ||

ಗಂಡ ಮೆಟ್ಟ ನನ್ನ ಪುಂಡವಸವಾಡ ದಕ್ಷಿಣ ದೇಶದಾಗ ಜಾಹೀರ
ಶೇಕ ಧರ್ಮ ಇದ್ದಾನ ನಮ್ಮ ಪೀರಾ |
ಅವರ ಆಧಾರ ಅತಿ ನಮಗ ಬರ‍್ಪೂರಾ ||
ಪುಣೆ ಮುಂಬಯಿ ತನಕಾ ಹಾಡ ಹ್ವಾದು ಅವರು ಚಿಬ್ಬಿ ನಾಡ ಮುಂದ
ಈಕಡಿ ಮೈಸೂರಾ||೫||

ರಚನೆ : ದತ್ತು ಬಾಬು ಜೋಡಿ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ