ಪೂರ್ವ ಮಾತ ನಿಮ್ಮ ಪೂರ್ವಜರೊಳಗಾದ
ಚರಿತ್ರ ಕೇಳೋ ಕ್ಷಿತಿಪತಿ ಅರಸಾ
ಗರ್ವ ಬಂದಾಕ್ಷಣಕ ಆಗತಾರ ನಾಸಾ
ಸರ್ವ ಮಾತಿಗಿ ಕಪಟ ಕೃಷ್ಣನ ಕೆಲಸಾ
ಮೂರು ಲೋಕದ ಗಂಡ ಅನ್ನುವ ಅರ್ಜುನಾ
ಭಂಡ ಆದಾನೋ ಬಲು ಸರಸಾ
ಜನಮೇಜಯ ಇಟ್ಟ ಕೇಳ ತುಸು ಮನಸಾ||ಪಲ್ಲ||

ಬ್ರಹ್ಮ ಹತ್ಯಾ ಹೋಗುದುಕ ಧರ್ಮರಾಜ
ಶ್ಯಾಮಕರ್ಣ ಬಿಟ್ಟ ದೇಶೆಲ್ಲಾ
ತನ್ನ ತಮ್ಮ ಅರ್ಜುನನಿಟ್ಟ ಹಿಂಬಾಲಾ
ಮಹಾ ಪುಂಡ ಭೀಮ ಅವನ ಬೆನ್ನ ಮ್ಯಾಲಾ
ಧೀರ ಪ್ರದ್ಯುಮ್ನ ಬಲುಧೀರ ಬಬ್ರುವಾನ
ಶೂರ ವೃಷಕೇತು ಬಹು ಕುಶಲಾ
ತಾಮ್ರ ಧ್ವಜನ ಪರಾಕ್ರಮಕ ಅಳತಿಲ್ಲಾ
ಹಂಸಧ್ವಜ ನೀಲಧ್ವಜ ಮಯೂರಧ್ವಜ ಮೂವರ
ಚತುರಂಗ ಸೈನ್ಯ ಗಣಿತಿಲ್ಲಾ
ರಣರಂಗ ಮಾಡುವಂಥ ಸುಭಟರ ಪ್ರಬಲಾ
ಶ್ರೀ ರಂಗನ ಕುಮಕ ಅಷ್ಟೂರಿಗೆಲ್ಲಾ
ಸುದರ್ಶನ ಬಿಟ್ಟ ಆಗುದು ದುಂದುಭಿ
ಹಾರಿಸಿ ಬಿಟ್ಟ ಕೃಷ್ಣ ತಾನಾ ಶಿರಸನೆಲ್ಲಾ
ಆತನ ಪುರುಷಾರ್ಥ ಶೇಷಗ
ಗಣಿತ ಹತ್ತಲಿಲ್ಲಾ
ಹೊಡದಾರೋ ದುಂದುಭಿ ನಾದಾ
ನಡದಾರೋ ತಾವು ಮುಂದ ಮುಂದಾ
ತಡದಾರೋ ಹಾದಿ ಒಳಗ ವೀರರೆಲ್ಲಾ
ಮಾತು ಮಾತಿಗೆ ಹರಿ ನುಡದಾನೋ ಅಬಲಾ
ವೇಷಕೇತುನಂಗ ಪ್ರೌಢರ‍್ಯಾರಿಲ್ಲಾ
ಮೂರು ಲೋಕದೊಳಗ ಇವನ ಸರಿ
ಯಾರ‍್ಯಾರನು ಕಾಣೆ ಗರ್ವ ಬಂದಾಕ್ಷಣಕ
ಮುರಿಯಾಂವಾ ಹಲ್ಲಾ
ಹಂಗೂ ಹರಿಯಾಕ ಧನರ್ವಿದ್ಯೆ ಎಲ್ಲಾನು ಬಲ್ಲಾ
ಇಷ್ಟ ಮಾತ ಕೇಳಿ ಬಹಳ ಪೆಟ್ಟ ಹತ್ತಿ ಅರ್ಜುನ
ಸಿಟ್ಟಿನಿಂದ ಮಾಡಿ ಕಣ್ಣ ಕೆಂಪಲಾಲಾ
ಭಿಡೆಬಿಟ್ಟ ಕೃಷ್ಣಗಂದ ಇದು ಎಲ್ಲಾ
ಎಷ್ಟ ಬಂಟತನಾ ಹೇಳತೀರಿ ಇವಂದೆಲ್ಲಾ
ಕಂದ ಬಬ್ರುವಾನನ ತೂರಿ ಹೊಡದೋ ರಥಾ
ಏರಗಟ್ಟಿ ನಿಂತ ಎಂಟ ದಿವಸೆಲ್ಲಾ
ಅಂತರ ಮಾರ್ಗದಲಿ ತೂಗತಿತ್ತ ರಾತ್ರಿ ಹಗಲಾ

||ಚಾಲ||

ಅಂದ ಮಾತ ಕೇಳಿ ವೃಷಕೇತು
ಮುಂದಕ ಸರದ ಬಂದ ಕೂತ
ಸಂದೇಹವಿಲ್ಲದ ನುಡದಾನ
ಕುಂದ ಹತ್ತೀತ ಮಾತಿನ ಕ್ರೋಧವನು
ಹಿಂದ ಯುದ್ಧ ಮಾಡಿ ನೀವು ಎಲ್ಲಿ ಎಂದ
ಜಯಸಿದರಿ ಅಂತ ಪಾರ್ಥಗ ಕೇಳ್ಯಾನು
ಕಂದ ಬಬ್ರು ಕೊಂದಿದ್ದ ನಿನ್ನನು
ಮದಲ ಶ್ಯಾಮಕರ್ಣ ತರುವಾಗ್ಗೆ
ಭೀಮ ಹೋಗಿ ಪರಾಕ್ರಮ ಮಾಡಿ
ಸುಮಕ ಅಳತ ಬಂದಾನು
ಬಲು ಧಿಮಾಕ ಹೇಳಿ ಫಲವೇನು

||ಸಣ್ಣಚಾಲ||

ಮಯೂರ ಧ್ವಜನ ಪಟ್ಟಣದೊಳಗ ಹೋಗಿ
ದಾನಾ ಬೇಡ್ರಿ ಬ್ರಾಹ್ಮಣ ರೂಪಾಗಿ
ಮೂರು ಲೋಕ ಗಂಡ ಅನ್ನು ಬಿರುದಿಗಿ
ಕೊರತಿ ಬಂದೀತೋ ಅರ್ಜುನಾ ಅಲ್ಲ ಗತಿ

||ಏರು||

ಮಿಕ್ಕಿದ ಮಾತಿಗೆ ನಾನು ಕಕ್ಕನಂತೆ ತಾಳಿದೆನೋ
ಲೆಕ್ಕಿಲ್ಲ ಅರ್ಜುನಾ ಆಡಬ್ಯಾಡ ಬಿರಸಾ
ಸೊಕ್ಕ ಮಾಡಿದರ ಒಂದಿನಾ ಆಗತಾರ ನಾಸಾ
ಲಂಕಾಪತಿ ರಾವಣಂದ ಹಾಳಾಯಿತ ವಂಶಾ
ಪೂರ್ವ ಮಾತ ನಿಮ್ಮ ಪೂರ್ವಜರೊಳಗಾದ
ಚರಿತ್ರ ಕೇಳೋ ಕ್ಷಿತಿಪತಿ ಅರಸಾ||೧ನೇ ಚೌಕ||

ಕೋಪದಿಂದ ಪಾರ್ಥ ಸಂತಾಪ ಆಗಿ ಅಂದಾ ನಿಮ್ಮ
ಅಪ್ಪ ಹಿಂದ ಬಂಟತನ ಮಾಡಿಸತ್ತಾ
ನಿನ್ನ ಸ್ವರೂಪ ತಿಳದ ಹೋಯಿತೋ ಪುರುಷಾರ್ಥಾ
ನಿನಗ ಮಾಫ ಮಾಡತೇನೋ ಆಡಿದ ಮಾತಾ
ನುಚ್ಚಿಗಿ ಬಿದ್ದಂತವಗ ಹೆಚ್ಚಿನ ಮಾತ್ಯಾಕೋ
ನಾಚಿಕೆ ಇಲ್ಲದ ಒದರೂದು ವ್ಯರ್ಥಾ
ಹಿಂದ ಮುಚ್ಚಿದ ಕತಿಯ ತಗಿಬ್ಯಾಡ ಮತ್ತಾ
ನಿಮ್ಮ ತಂದಿ ಕರ್ಣ ದುರ್ಯೋಧನನಲಿ ತಿಂದ ಅನ್ನಾ
ಮಂದಿ ಮನಿಕೂಳ ನಿಮಗ ಹಿತಾರ್ಥಾ
ಭಾಳ ನಿಂದೆ ಮಾತ ಆಡತಿಯೋ ಏನಂತಾ
ನಿನ್ನ ಕೊಂದ ಹಾಕುವಷ್ಟು ನನ್ನ ಸಾಮರ್ಥ್ಯ
ತಾಯಿ ಕುಂತಿ ಭಾಳ ನಿನ್ನ ಮಾಯಾದಿಂದ ಸಲುವ್ಯಾಳಂತ
ಕಾಯತೇನೋ ಅದರಿಂದ ನಿನ್ನ ಮಮತಾ
ವ್ಯರ್ಥ ಸಾಯಬ್ಯಾಡ ನನ್ನ ಕೂಡ ಮಾಡಿ ಶರ್ತಾ
ಸಿಟ್ಟ ಹತ್ತಿ ವೃಷಕೇತು ತಟ್ಟನಂತಾನ ಅರ್ಜುನಗ
ಬಂಟತನಾ ಮಾಡಿದಿಯೋ ನೀ ಮಸ್ತಾ
ವಿರಾಟ ರಾಜನಲ್ಲೆ ಸೀರಿ ಉಟ್ಟ ಬಲ ಖಸ್ತಾ
ನಾಟ್ಯ ಮಾಡಿದಂಗ ಅಲ್ಲ ಮಾಡೇನ ಫಸ್ತಾ
ಐದ ಮಂದಿ ಅಣ್ಣಾ ತಮ್ಮರ ದೇಹಿ ಅಂತಾ
ಅನ್ನಾ ಬೇಡುದು ನ್ಯಾಯವೇನೋ ಕ್ಷತ್ರಿಗೆ
ಕ್ಷತ್ರಿ ಧರ್ಮಕ ಹುಟ್ಟಿ ಪೂರ್ತಾ
ಪಾಂಡುರಾಜನ ಹೊಟ್ಟೀಲಿ ಹುಟ್ಟಿ ಬಂದಾಂಗ ಜಂತಾ
ಅರ್ಧಾಂಗಿ ದ್ರೌಪತಿನ ಮಾನಭಂಗ ಮಾಡುವಾಗ
ಮಂಗನಾಂಗ ಕೂತಿದ್ದಿ ನೀನು ಹಲ್ಲ ಕಿಸ್ತಾ
ಹನ್ನೆರಡು ವರುಷ ವನವಾಸ ಭೋಗಿಸುತ್ತಾ
ಹಿಂಗ ಬಡ್ಡಿ ಕಥಿಯಲ್ಲಾ ನಿಮ್ಮ ವೃತ್ತಾಂತಾ
ಮಧ್ಯ ರಾತ್ರಿಯೊಳು ಭಾಳ ಜಿದ್ದಾಗಿ ದುರ್ವಾಸ ಬಂದಾ
ಗೆದ್ದ ಕೊಟ್ಟ ಕೃಷ್ಣ ನಿಮ್ಮದೆಲ್ಲಾ ಪಂಥಾ
ಇಲ್ಲದಿದ್ರ ಪಾಂಡವರು ನೀವ ಯಃಕಶ್ಚಿತಾ

||ಚಾಲ||

ಒಳ್ಳೇ ಉಮೇದಾಗಿ ಪ್ರಮೀಳಾನ ಮೇಲೆ ಹೋಗಿ
ನೀವು ಪರಾಕ್ರಮ ಮಾಡಿದಿರಿ
ಸಿಂಬಿಲಿ ಬಗಸಿಕೊಂಡ ಬಂದ್ರಿ
ನಿನಗ ಧನುರ್ಧಾರಿ ಅಂತ ಸುಳ್ಳ ಕರಿಯುವರು ಎಲ್ಲಾ
ಕಂಡೀತ ನಿನ್ನ ಐಶ್ವರಿ
ನಡೀಷಂಡಾ ತೋರಿಸಬ್ಯಾಡ ಮಾರಿ
ಇಂತಾ ಕೇಡಿನ ಮಾತ ಅರ್ಜುನಗ ಖಚಿತ
ಬರ್ಚಿ ಬಡದಾಂಗ ಆಯಿತ
ಬಿದ್ದೀತ ಅಲ್ಲಿ ಹುರಿ ಹುರಿ
ಪ್ರಳಯಾಗ್ನಿಂದ ನಿಶ್ಚಿತ ಎದ್ದಿತ ಉರಿ

||ಸಣ್ಣಚಾಲ||

ಅರ್ಜುನ ಅಂತಾನ ಏನಂತಿಯೋ ಪೋರಾ
ಜ್ವಾಕಿ ಮಾಡಿದ್ದ ಕಳದಿಯೋ ಉಪಕಾರಾ
ಇನ್ನ ಮಾಡೋ ಎನ್ನ ಕೂಡಾ ಸಮರಾ
ಹೊಡದ ಹಾರಿಸಿ ಬಿಡತೇನ ನಿನ್ನ ಶಿರಾ
ನನಗ ಇದರ ಆಗಿಲ್ಲೋ ಶಂಕರಾ
ಇದರೇನೋ ನಿನ್ನಂತ ಪಾಮರಾ

||ಏರು ||

ವೃಷಕೇತು ಎದ್ದ ನಿಂತ ಕೇಳೋ ಪಾರ್ಥ
ಕರ್ಣ ಸುತ ಖರೇ ಅದರ ನಾನಾ
ಹಾರಸತೇನೋ ನಿನ್ನ ಶಿರಸಾ
ನಿನ್ನ ಧನುರ‍್ವಿದ್ಯೆ ತೋರಿಸೋ
ತೀರಲಿ ಹೌಸಾ
ಹೇಳಿ ಭುಜಾ ಹೊಡದ
ಮಾಡಿ ನಿಂತಾನ ರವಸಾ
ಕವಿ ಬಾಳಗೋಪಾಳ ಸರಸಾ
ಹೇಳ್ಯಾನ ಯುದ್ಧ ಲಾವಣಿ ಹರುಷಾ
ಪೂರ್ವಮಾತ ನಿಮ್ಮ ಪೂರ್ವಜರೊಳಗಾದ
ಚರಿತ್ರ ಕೇಳೋ ಕ್ಷಿತಿಪತಿ ಅರಸಾ||೨ನೇ ಚೌಕ||

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು