೧ನೇ ಚೌಕ

ಜನಮೇಜಯನ ಮುಂದ ವೈಶಂಪಾಯ್ನನ ಕತಿ
ಅರಸ ಕೇಳಿ ತೂಗಿದದ ತಲಿ |
ಯುದ್ಧಾಗಿ ಹೋಯ್ತು ದ್ವಾಪತದಲಿ |
ಆ ಭೀಷ್ಮ ಲಡಾಯಿ ಮಾಡಿದ್ದ ಕೊಲಿ |
ಪಾಂಡು ಪ್ರತಾಪದೊಳಗಾದ ಕೌತುಕಾ –
ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||
ಧರ್ಮ ದುರ್ಯೋಧನಗ ವರ್ಮ ಸೊಕ್ಕಿ
ಒಳಿತಾಗಿ ಹಿರಸ ಬಿದ್ದಿತ್ತು ಕಿಡಿ
ಪರಮಾತ್ಮ ಆದ ಪಾಂಡವರ ಕಡಿ |
ಪೃಥಿವಿ ಭೂಭಾರ ಇಳಸೂನು ನಡಿ |
ನರನಾರಾಯಣ ಅವತಾರ ತೊಟ್ಟು
ಅರ್ಜುನ ಕೃಷ್ಣ ಇಬ್ಬರು ಕೂಡಿ | ಮಸಲತ ಮಾಡಿ ||
ಯುದ್ಧ ಮಾಡೂದನು ಸಧ್ಯ ನೇಮಿಸಿ ತಾ |
ಉದ್ದ ತಂದು ರಣಗಂಬ ಹೂಡಿ |
ಆ ಭೀಷ್ಮ ಇದ್ದ ಬೆಂಕೀಯ ಕಿಡಿ |
ದಂಡ ತಯಾರಾಗಿ ಬಂತು ಎರಡು ಕಡಿ |
ರಣಗಂಬದ ಪೂಜೆ ಮಾಡಿ ಹಾಕಾರಿ-
ಹೊಡೆದು ಹೇಳತಾನ ಖಡಾ ಮುಡಿ | ಹಿಡಿಲಿಲ್ಲ ಭಿಡಿ ||

||ಇಳುವು||

ತಮ್ಮ ದಂಡಿನ ಕಡೀ ಮಾರ‍್ಯಾಗಿ ಹೊಡಿದ ಹಾಕಾರಿ | ಹೇಳತಾನ ಒದರಿ
ಪಾಂಡವರ ಸಾರಥಿ ಅನುಕೂಲ ಆದಾ ಕೈವಾರಿ | ತಾನೆ ಗಿರಿಧಾರಿ ||
ಜಯ ಪ್ರಾಪ್ತಿ ಆದ ಪಾಂಡವರಿಗಿಂತ ಬ್ರಹ್ಮಚಾರಿ | ಹೇಳಿದಾ ಸಾರಿ ||
ಇಂದ ಬೇಕಾದ ಹೋಗಿರಿ ಭಡಡಡ-
ಪಾಂಡವರ ಕಡಿ ಹೊಂಟ | ಹೊಂಟ ನೀವು ಹೊಂಟ ||
ರಥ ಏರಿ ಹೊಡೆದ ಘಡಡಡ
ದಂಡಿನೊಳಗ ಭಂಟ | ಭಂಟ ತಾನು ಭಂಟ ||
ಮೀಸಿ ಹುರಿಯ ಹಾಕಿ ಖಡಡಡ
ಬಾಣ ಜಗ್ಗಿ ಬಿಟ್ಟ | ಬಿಟ್ಟ ತಾನು ಬಿಟ್ಟ ||

||ಏರು||

ಪೈಲಿ ಪ್ರಥಮದಾಗ ಭೀಷ್ಮ ಲಡಾಯಿಗಿ
ಸೈನ್ಯದೊಳಗ ಇದ್ದಂಗ ಹುಲಿ |
ಬಾಣದ ಮಂಟಪ ಹಾಕಿದ್ದ ಬಲಿ |
ಸೂರ್ಯ ಮುಣಗಿದಂಗ ಬಿತ್ತು ಕತ್ತಲಿ |
ಪಾಂಡು ಪ್ರತಾಪದಾಗ ಆದ ಕೌತುಕಾ –
ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||

೨ನೆಯ ಚೌಕ

ಮುತ್ತ್ಯಾನ ಪಾದಕ ಬಾಣ ತಗದು
ಅರ್ಜುನ ಬಿಟ್ಟಾನ ನೋಡಿ ನಿರತ |
ಅಂವ ನಮಸ್ಕಾರ ಮಾಡಿದ ಪಾರ್ಥ |
ಭೀಷ್ಮ ಆಶೀರ್ವಾದ ಕೊಟ್ಟಾನ ಪೂರ್ತಾ |
ವೀರ ಖರೇ ರಣಶೂರ ಫಾಲ್ಗುಣ –
ಹತ್ತು ಹೆಸರಿನವ ಸಮರ್ಥ | ಇಲ್ಲ ನಿನ್ನ ಹೊರತ |
ಪಾರ್ಥ ಅರ್ಜುನಗ ಸಾರ್ಥಿ ಕೃಷ್ಣ ಆಗಿ
ಮುಂದ ಕೂತು ನಡಿಸ್ಯಾನ ರಥ |
ಮ್ಯಾಲ ಧ್ವಜಸ್ತಂಭದಲಿ ಹನುಮಂತ
ಕೂತು ಹುಂಕಾರ ಮಾಡಿದಾ ವಾಯುಸುತ |
ವಿಷ್ಣು ಸಾಂಬನಾಂಗ ಸರಿಯ ಸಮಾನಿಕಾ –
ಭೀಷ್ಮ ಇದ್ದ ರಣ ಪಂಡೀತ | ಪಂಡುರಾಯನ ಪಿತ ||

||ಇಳುವು||

ತ್ವಾಳಾಗಿ ಹೊಕ್ಕ ಅರ್ಜುನ ಮಾಡಿ ಕುರಿ ಹಿಂಡ | ಕೌರವರ ದಂಡು
ಗರ್ಜನೆ ಮಾಡಿ ಬಾಣ ಬಿಟ್ಟು ಹಾರಿಸಿದ ರುಂಡ | ಆಡಿದಂಗ ಚಂಡ
ಆ ಭೀಮ ಹೊಡೆದ ಹಾಕಾರಿ ಗದಾ ಎತಗೊಂಡ | ಹೊಕ್ಕನಂವ ಪುಂಡ
ಆನಿ ಸೊಂಡಿ ಹಿಡಿದು ಗರರರ ತಿರುವಿಕೇರಿ ಒಗೆದ | ಒಗೆದ ತಾ ಒಗೆದ
ಕಾಲ ಮಂದಿನ ಹಿಡಿದು ದರರರ ಎಳದು ಭೀಟಿ ಜಿಗಿದ | ಜಿಗಿದಾ ತಾ ಜಿಗಿದ ||
ಸಿಟ್ಟಿಗೇರಿ ಭೀಷ್ಮ ಕರರರ ಹಲ್ಲ ತಿಂದು ತೆಗೆದ | ತೆಗೆದ ಬಾಣ ತೆಗೆದ ||

|| ಏರು ||

ಹೊಡೆದು ಶವಾ ಮಾಡಿ ಕೆಡವಿದ್ದ ರಣದಾಗ
ಹೆಣಕ ತಟ್ಟಿದವು ರಥದ ಗಾಲಿ |
ನೆತ್ತರದು ಹರಿದಿತರಿ ಕಾವಲಿ |
ತಗಿಲಾಕ ಹೊಂಟಿತರಿ ನದಿಯ ನೆಲಿ |
ಪಾಂಡು ಪ್ರತಾಪದಾಗ ಆದ ಕೌತುಕಾ ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||

೩ನೇ ಚೌಕ

ದೇವರ ಗೂಡ ನೇಮ ಮಾಡಿ ಆ
ಭೀಷ್ಮ ಖಡತರ‍್ಹಾಕಿದ್ದ ಪಣ |
ಚಕ್ಕರ ಹಿಡಿಸೇನ ಸುದರ್ಶನ |
ಹಿಡಿಲಾಕ ಇಲ್ಲಂದ ಮೇಘವರ್ಣ |
ನನ್ನ ಇದರಿಗಿನ್ನೇನು ಟಿಕಾಸ್ಯಾ –
ಸಣ್ಣಕೂಸ ಭಾಳ ಅರ್ಜುನ | ಅಂದು ಬಿಟ್ಟ ಬಾಣಾ ||
ಗಂಗಾ ಕಂದ ಹೀಗಂದು ಹೊಡೆದು
ಕೆಡವಿದ್ದ ಏಟಿಗೊಂದೊಂದು ಹೆಣ |
ಮೂರ್ಛಿ ಬಂದು ಪಾರ್ಥ ಮುಚ್ಚ್ಯಾನ ಕಣ್ಣ |
ಆಗ ಹೊರಳಿ ನೋಡಿದಾ ನಾರಾಯಣ |
ಘಾತಾಯಿತಂತ ತಗೊಂಡು ಚಕ್ಕರಾ –
ಭೀಷ್ಮ ಹಿಡಿದ ದೇವರ ಚರಣ | ಇನ್ನ ತಗೋ ಪ್ರಾಣ ||
ಪಾಂಡವರ ಸೈನ್ಯದಲಿ ಶ್ರೇಷ್ಠನಾದ ಕೃಷ್ಣ
ವರ್ಣನ ಮಾಡಿದಾ ಭೀಷ್ಮನ ಗುಣ |
ಪಂಚ ಪಾಂಡವರ ಮ್ಯಾಲ ಇಟ್ಟು ದಯ ಕರುಣ |
ನೀ ಮಾಡೊ ಇನ್ನ ಅವರ ಸಂರಕ್ಷಣ |
ಪರಶುರಾಮಗ ಸರಿಸಿಬಿಟ್ಟೀದಿ –
ನಿನ್ನ ಗುರುವಿನ ಕಾಣಾಕಾಣಾ | ಆಗಿ ನಿಪುಣ ||

||ಇಳುವು||

ಸಾವಧಾನ ಆಗಿ ಅರ್ಜುನಗ ಬಂದಿತೊ ತಾಪ | ತಗೊಂಡಾನ ಚಾಪ ||
ದೇವರ  ಅಂದ ಭೀಷ್ಮಾಚಾರಿ ಹೊಡೆದ ಒಂದು ಧುರಪ | ದಂಡ ಬಿತ್ತು ತೆಪ್ಪ |
ರಣದೊಳಗ ಯಶ ಇಲ್ಲೇನೋ ತಟ್ಟಿತೋ ಪಾಪ | ಮಂದಿ ಆಯ್ತ ಖಪ್ಪ ||
ಕಿರೀಟಿ ತುಟಿಯ ಕಚ್ಚಿ ಧನನನ
ಧನುಷ ಎತ್ತಿ ಹಿಡಿದ | ಹಿಡಿದ ತಾ ಹಿಡಿದ ||
ಅಗಳಾಡಿಸಿಕೇರಿ ಘಣಣಣ
ಚಾಪಿನ ಗಂಟಿ ಬಡಿದ | ಬಡಿದ ತಾ ಬಡಿದ ||
ಅಂದ ಎರಡು ಕೈಲೆ ಸಣಣಣ
ಬಾಣ ಜಗ್ಗಿ ಹೊಡಿದ | ಹೊಡಿದ ತಾ ಹೊಡಿದ ||

||ಏರು||

ಶರ್ತ ಲಡಾಯಿ ಮಾಡಿ ಬೆವತ ಮುಕುಟ –
ಹನಿ ನೀರ ಬಂತು ಕಣ್ಣೀನ ಬಳಿ |
ತೆಗೆದೊಗೆದ್ರೊಳಗ ಕೆಲಸಾಯಿತಲ್ಲಿ |
ಭೀಷ್ಮ ಹತ್ತು ಸಾವಿರ ಹಾರಿಸಿದ್ದ ತಲಿ |
ಪಾಂಡುಪ್ರ ತಾಪದಾಗ ಆದ ಕೌತುಕಾ –
ಎಷ್ಟಂತ ನಾ ವರ್ಣಿಸಲಿ ಒಂದು ಬಾಯೀಲಿ ||

೪ನೆಯ ಚೌಕ

ಚಿಂತಿಯೊಳಗ ಗೋತಾಸಿ ಕುಂತ
ಅರ್ಜುನಗ ಹೇಳತಾನ ಅಣ್ಣ ಧರ್ಮ |
ಹಂಕಾರ ಬಿಡ್ರಿ ಮನದಾನ ಹಮ್ಮ |
ಮುತ್ತ್ಯಾಗ ಶರಣು ಹೋಗುನು ಸುಮ್ಮ |
ಮಾತ ಮನಸಿಗೀ ತಂದು ತಲಿಯದೂಗಿ
ಹೇಳತಾನ ಆ ಪರಮಾತ್ಮ | ನಡಿರೆಂದ ಭೀಮ ||
ರಾತ್ರಿ ಕಾಲಕ ಆರು ಮಂದಿ ಕೂಡಿ
ಹೊಂಟು ಹೋದರವರು ಆಗಿ ಜಮ್ಮಾ |
ಕೂತಿದ್ದ ಢೇರೆದಾಗ ಭೀಷಮಾ |
ನಾಮಸ್ಮರಣಿ ಮಾಡತಿದ್ದ ರಾಮ ರಾಮ |
ನಮಸ್ಕಾರ ಮಾಡಿ ಪಾಂಡವರು ಅಂತಾರ
ಉದ್ಧಾರಾಯಿತರಿ ನಮ್ಮ ಜನ್ಮ | ಸರಿದಿತು ಕರ್ಮ ||
ಬಿದ್ದು ಪಾದಕ ಎದ್ದು ಹೇಳತಾರ
ನೀವು ಲಡಾಯಿ ಮಾಡಿದಿರಿ ಶಮ |
ಗಟ್ಟ್ಯಾಗಿ ಹಿಡಿದಿರಿ ಒಂದೇ ನೇಮ |
ನಮ್ಮ ದಂಡ ಖಪ್ಪ ಆಗಿ ಹೋಯ್ತರಿ ನಿಯಮಾ |
ಯಶ ಅರ್ಪಣಿ ಮಾಡಿರಿ ನಮಗ –
ಕೇಳಬೇಕ್ರಿ ಲಡಾಯಿ ವರಮ | ಒಳಗಿನ ಹೊಲಮ ||

||ಇಳುವು||

ಆಡಿವರ್ಗ ಆಗಿ ಆ ಭೀಷ್ಮ, ದೇವರಿಗಿ ಅಂದಾ | ಬಾಲ ಮುಕುಂದಾ ||
ನನ್ನ ಬಾಳ್ಯಾಗಳನ ರಕ್ಷಣ ಮಾಡು ಗೋವಿಂದ | ದೇವಕೀಕಂದ ||
ಯಶ ಕುಡತ ಶಿಕಂಡಿ ಮಾಡಿ ಬಿಡತ ಅರ್ಜುನನ ಮುಂದ | ಹೊಡಿರಿ ನಮಗಂದ ||
ಇಷ್ಟ ಮಾತ ಕೇಳಿ ಹಿರಿರಿರಿ
ಹಿಗ್ಗಿ ಧರಮೆದ್ದ | ಎದ್ದ ತಾ ಎದ್ದ ||
ಅರ್ಜುನ ಬಂದ ಭಿರಿರಿರಿ
ಹಿಗ್ಗಿ ಧರಮೆದ್ದ | ಎದ್ದ ತಾ ಎದ್ದ ||
ಅರ್ಜುನ ಬಂದ ಭಿರಿರಿರಿ
ಶಿಕಂಡಿ ಮುಂದ ಇದ್ದ | ಇದ್ದ ಮುಂದಿದ್ದ
ಧನಂಜಯ ಹೊಡೆದ ಗಿರಿರಿರಿ
ಗಿರಕಿ ಬಂದು ಬಿದ್ದ | ಬಿದ್ದ ಭೀಷ್ಮ ಬಿದ್ದ ||

||ಏರು||

ಹತ್ತು ದಿನ ಹೀಂಗ ಮಾಡಿ ಲಡಾಯಿ
ದೇಹ ಬಿಟ್ಟಾ ತನ್ನ ಇಚ್ಛಾದಲಿ |
ಶರಪಂಜರ ಮ್ಯಾಲ ಬಿದ್ದಾ ಅಂತರಲಿ |
ತೂಗಾಡಿ ಝೋಲಿ ತಿಂದಿತೋ ತಲಿ |
ಪಾಂಡುಪ್ರತಾಪದಾಗ ಆದ ಕೌತುಕಾ
ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||

೫ನೆಯ ಚೌಕ

ಎರಡೂ ದಂಡಿನಾಂಗ ಅಕ್ರಾಂತಾಯಿತೋ
ಯಾರೂ ಇಲ್ಲ ಇವನ ಸರಿ |
ಇಂದ ನೆಲಕ ಬಿದ್ದ ದಂಡೀನ ಧೊರಿ |
ಭೀಷ್ಮ ಪರ್ವದೊಳಗ ಆಗಿಹೋತ್ರಿ ಸೂರಿ |
ಶಂತ್ನುರಾಯನ ಸುತ ಅಂದ ದೇವರಿಗೆ
ಲಗು ಮಾಡಿ ದುರ್ಯೋಧನಗ ಕರಿ | ತಲಿದಿಂಬ ತರ್ರಿ ||
ಕೇಳಿ ದುರ್ಯೋಧನ ಅರಳಿ ಲೋಡ ತಂದಾ
ನೀರು ತುಂಬಿ ಬಂಗಾರ ಝಾರಿ |
ಹಾಸೀಗಿ ತಕ್ಕ ಲೋಡಲ್ಲ ಸರಿ |
ಕಣ್ತೆರೆದು ನೋಡಿದ ಅರ್ಜುನನ ಮಾರಿ |
ಬಾಣದ ತಿಗಟಿ ಕಟ್ಟಿ ಕೊಟ್ಟಾನ –
ಆವಾಗ ಮಾತಾ ಸರಾಸರಿ | ಕೂಡಿತರಿ ||
ಶ್ವೇತವಾನ ಹೊಡದಾನ ಬಾಣ
ಪಾತಾಳದಂದು ತಗದಾನ ಝರಿ |
ಪುಟಿದೀತೋ ಮ್ಯಾಲ ಕಾರಂಜಿ ಪರಿ |
ಬಾಯಾಗ ಬಿತ್ತು ನೀರಿನ ಧಾರಿ |
ದುರ್ಯೋಧನ ಜಂಬುಕನ ಸಮಾನ
ನೀನೆ ಒಬ್ಬ ಸಿಂಹದ ಮರಿ | ಅಂದಾ ಭೀಷ್ಮಾಚಾರಿ ||

||ಇಳುವು||

ಯಾರೂ ಸುಟ್ಟಿರಬಾರದು ಅಲ್ಲಿ ಸುಡು ಅಂತ ಹೇಳಿ ವಚನ | ಕೇಳಿದ ಕೃಷ್ಣನ ||
ಎಂಟು ದಿನ ಲಡಾಯಿ ಆಗೂತಾನ ನೋಡಿ ಸಂಪೂರ್ಣ | ಅಲ್ಲಿಂದ ಬಿಟ್ಟ ಪ್ರಾಣ ||
ಭೀಷ್ಮನ ತಗೊಂಡು ಮೂರು ಲೋಕ ತಿರುಗಿ ಜಾಗ ವೈನ | ಇಲ್ಲಂದ ಭಗವಾನ ||
ಕೈಯೊಳಗ ಕಿಚ್ಚ ಕೊಟ್ಟ ದೇವರ ನೋಡಿಕೇರಿ ಭಕ್ತಿ | ಭಕ್ತಿ ಅವನ ಭಕ್ತಿ ||
ಭೀಷ್ಮ ಪರ್ವ ಮುಗಿಸಿ ದೇಹ ಇಟ್ಟು | ಆಗಿ ಹೋದ ಮುಕ್ತಿ | ಮುಕ್ತಿ ಆಗಿ ಮುಕ್ತಿ |
ನಾಗನಾಥಗ ಒಬ್ಬ ದೊಡ್ಡಾಕಿ
ಹಾಳ ನಮ್ಮ ಶಕ್ತಿ | ಶಕ್ತಿ ನಮ್ಮ ಶಕ್ತಿ ||
ಸೋಮಾರ ದಿನ ಪದ ಮುಗಿತು ಹಲಸಂಗ್ಯಾಗ
ಹಾಡತಾರ ಒಳೇ ಮೋಜೀಲಿ |
ಗುಡು-ಬಾಳು ಹೇಳಿದಾರ ಇದರ ಕೀಲಿ |
ಸಿದ್ದು ಶಿವಲಿಂಗ ಹಾಡ್ಯಾರ ನೌಕೀಲಿ |
ಪಾಂಡುಪ್ರತಾಪದಾಗ ಆದ ಕೌತುಕಾ –
ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||

ರಚನೆ : ಸಿದ್ದು-ಶಿವಲಿಂಗು
ಕೃತಿ : ಜೀವನ ಸಂಗೀತ