ಕುರು ಪಾಂಡವರೊಳು ಘೋರ ಲಢಾಯಿ
ಕೇಳೋ ಕ್ಷಿತಿಪತಿ ಅರಸಾ
ವರ್ಣಿಸಿ ಹೇಳುವೆನು ನಾ ಸಾರಾ ಸಾರಾ ಪಟ್ಟಾ-
ಗಟ್ಟ್ಯಾರೋ ಭೀಷ್ಮಗ ಸೇನಾಪತಿ ಕೆಲಸಾ |
ಹತ್ತು ಸಾವಿರ ಅತಿರಥಿ ಮಹಾರಥಿ
ನಿತ್ಯ ಕೊಲ್ಲುದು ನಿಯಮಾ
ಇಂಥಾ ಪಂಥಾ ಹಾಕಿದನೋ ಭೀಷ್ಮಾ
ಅದ್ಭುತ ಯುದ್ಧ ಒಂಭತ್ತು ದಿವಸ ತನಕಾ
ನಡದೀತ ಸಂಗ್ರಾಮಾ
ಮುಂದ ಒಂದ ದಿವಸ ಉಳಿದೀತ ಯುದ್ಧ
ಆಗುದು ಕಾಯಿಮಾ
ಡೇರೆದಲಿ ಕೂತಾನ ಆರಾಮಾ
ದುರ‍್ಯೋಧನ ಬಂದ ದುಃಖ ಮಾಡತಾನ
ಹಿಡದ ಪಾದಪದ್ಮಾ ಪಾದಪದ್ಮಾ
ಎಷ್ಟ ನೀವು ಕಷ್ಟ ಪಟ್ಟರೂ
ನಷ್ಟ ಆಗವಲ್ಲ ಧರ‍್ಮ ಸುಟ್ಟ
ಬಿಡವಲ್ಲರಿ ವೈರಿ ಭೀಮಾ
ಸೃಷ್ಟಿಯೊಳಗೆ ಶ್ರೇಷ್ಠನಾದ ಅರ್ಜುನಾ
ಕೆಟ್ಟ ನಮ್ಮ ಜಲಮಾ
ನಾಳಿ ನೀವು ಲಢಾಯಿ ಮಾಡೋದು
ಉಳಿತ ನಾಲ್ಕು ಯಾಮಾ
ನಮ್ಮ ಮ್ಯಾಲ ಇಲ್ಲ ನಿಮ್ಮ ಪ್ರೇಮಾ
ಪಕ್ಷ ಹಿಡಿದು ಲಕ್ಷ ಇಟ್ಟಿರಿ ಪಾಂಡವ-
ರೊಳಗ ಉಳಿತ ನನಗ ವರ್ಮಾ
ನನ್ನ ಕರ್ಣ ಬಾಣ ಹಿಡಿವಲ್ಲ ನಿಮ್ಮ
ಸಮರಾಂಗನಾ ಆಗೋತನಕಾ
ಇದ್ದು ಇಲ್ಲದಂಗ ಆಗ್ಯಾನ ಸುಮ್ಮಕ
ಧೀರ ಕರ್ಣ ಬಾಣ ಹಿಡಿತಿದ್ದಂದರ
ಹುರುದು ಪಾಂಡವರು ಕಾಟಕಾ
ಉಳಿ ಬಲ್ಲರೇನೋ ಇಷ್ಟೊತ್ತನಕಾ.

||ಚಾಲ||

ಸುಟ್ಟ ಹೋಯಿತು ನಿಮ್ಮ ಭಂಡತನವೆಲ್ಲ
ನಮಗ ಆದೀತೋ ತ್ರಾಸಾ
ನೀವು ಹೋಗೋತನಕಾ ಬಾರದು ಲೇಸಾ
ಪುಟ್ಟಪೂರಾ ರಥಿ ಭೀಷ್ಮಾಚಾರಿ
ಅರ್ಧ ರತಿ ಆದಿರಿ ಕರ್ಣಗ
ಖರೆ ನಾವು ಅನ್ನೋಣ ಯಾತರಮ್ಯಾಗ
ಯುದ್ಧ ಮಾಡಿ ಗೆದ್ದಿರೆಂಬೋದು
ಕಂಡೇವ ರಣದಾಗ

||ಏರು||

ಹೀಂಗ ಕಪಟ ಪ್ರಸಂಗ
ಮಾಡೀರಂತ ತಿಳಿದಿದ್ರ ನಮಗ
ಮೊದಲ ಪಟ್ಟ ಗಟ್ಟತಿದ್ದಿಲ್ಲ ನಿಮಗ
ಯುದ್ಧ ಸೂರಿ ಮಾಡತಿದ್ದ ಪಟ್ಟಿ ಗಟ್ಟಿ
ತಿದ್ದೇವೆಂದ್ರ ಸೂರ್ಯನ ಸುತಗ
ಕುರು ಪಾಂಡೋರೋಳು ಘೋರ ಲಢಾಯಿ||೧||

ಪಾಂಡವರ ಕೊಂದ ಜಯ ತರತೀರೆಂದು
ಧೈರ‍್ಯ ನಮಗೆ ಮನದೊಳಗ
ಭರವಸೆ ಭಾಳ ಇತ್ತ ಹಿಂಗ
ನಮ್ಮನೆಲ್ಲ ಕೊಂದ ಪಾಂಡವರೊಳಗ
ಇರೋದು ನಿಮ್ಮ ನ್ಯಾಯ ಹ್ಯಾಂಗ
ದುರ್ಯೋಧನನ ದುರ್ವಾಕ್ಯ
ಭೀಷ್ಮಾಚಾರಿ ಕೇಳಿದ ಕ್ಷಣದಾಗ
ಕೋಪಾದ ಪ್ರಳಯ ರುದ್ರನಾಂಗ
ಭುಜ ನೆಲಕ ಅಪ್ಪಳಿಸಿ ಜ್ವಾಲಿ
ಉಕ್ಕಿ ನೇತ್ರದೊಳಗೆ
ಕಾಲ ನೆಲಕ ಬಡದ ಹೊಡದ ವೀರ ನೋಟ
ಕಿತ್ತೀತ ಕವಚ ಉಬ್ಬಿ
ಕೇಳೋ ದುರ್ಯೋಧನನ ನಾಳೆ ಸಮರದಲ್ಲಿ
ಕಾಳ ಬಂದರ ಕೇಳತೇನೋ ತರಬಿ
ವ್ಯರ್ಥ ಸಾಯಬ್ಯಾಡೊ ಹಲಬಿ
ಪಂಚ ಪಾಂಡವರನ ಹಿಡಕೊಂಡ
ಹತ್ತು ಸಾವಿರ ಬಂದ ಉಬ್ಬಿ
ನೋಡೋ ಲಢಾಯಿ ಕಣ್ಣ ತುಂಬಿ
ಕೇಳೋ ದುರ್ಯೋಧನಾ ಭೀಷ್ಮ ಪ್ರತಿಜ್ಞಾ
ಪಾಂಡವರನು ಕೊಲ್ಲುದು ಖಾಸಾ
ಅಥವಾ ನಾ ಬೀಳುವೆನು ನಾಳಿನ ದಿವಸಾ
ಭೀಷ್ಮ ಪ್ರತಿಜ್ಞಾ ಕೇಳಿದಾನ
ದುರ್ಯೋಧನ ಬಹಳ ಹರುಷಾದಾ
ಮುಗುಳು ನಗೆ ನಕ್ಕು ತಿರುಗಿ ನಡದಾ
ಆದ ಸುದ್ದಿ ಪಾಂಡವರಿಗೆ ಹತ್ತೀತ
ಭೀಷ್ಮ ಪ್ರತಿಜ್ಞಾ ಆದದ್ದಾ

||ಚಾಲ||

ಇಂಥಾ ಪಂಥ ಕೇಳಿ ಪಂಚ ಪಾಂಡವರಾ
ಆಗಿ ಕೂತಾರ ಸ್ತಬ್ಧಾ ನಿಶ್ಯಬ್ಧಾ
ದುಃಖ ಮಾಡತಾರ ಭೂಮಿಗೆ ಬಿದ್ದಾ
ಭೀಷ್ಮ ಪ್ರತಿಜ್ಞದೊಳಗ ನಾಳೆ ದಿನಾ
ನಾವು ಹ್ಯಾಂಗ ಪಾರ ಆಗೋದಾ
ಐದು ಮಂದಿ ಕೂಡಿ ಸರಿ ರಾತ್ರ್ಯಾಗ
ಬಂದಾರ ಹೊರಬಿದ್ದಾ
ಹಿಡದಾರೋ ಶ್ರೀಕೃಷ್ಣನ ಪಾದಾ
ಪಂಥ ಮಾಡ್ಯಾನೋ ಮುತ್ತ್ಯಾ |
ಭೀಷ್ಮಾಚಾರಿ ನಾಳಿಗೆ ಕೊಲ್ಲುದಾ
ಹ್ಯಾಂಗ ಕಾಯತಿ ಕಾಯೋ ಮುಕುಂದಾ
ನಿನ್ನ ಭಕ್ತರ ಬಿರುದಾ ಬಿರುದಾ
ಧರ‍್ಮರಾಯ ಹರಿ ಕೊರಳಿಗೆ ಬಿದ್ದಾ
ಸೂತ್ರಧಾರಿ ಸರ‍್ವಾತ್ಮ ಮುಕುಂದಾ
ನಿನಗ ಯಾತರ ಅರದಾ ಅರದಾ
ಇಂಥಾ ಪಂಥ ಕೇಳಿ ಹರಿ ಆದ ದುಃಖಾ.

||ಏರು||

ವ್ಯಾಳ್ಯಾ ಬಂತ ಇಂತಾದ್ಯಾಕಾ
ಹರಿಹರ ಬ್ರಹ್ಮರು ಕಾಯಲರಿಯರಾ
ಭೀಷ್ಮ ಪ್ರತಿಜ್ಞೆಕ ಪ್ರತಿಜ್ಞೆಕ
ಯಾರು ನಿಂತಾರು ಸಮುಖಾ
ಕುರು ಪಾಂಡವರೊಳು ಘೋರಾ ಲಢಾಯಿ||೨||

ನಮ್ಮನೆಲ್ಲ ಯುದ್ಧದಲಿ ಕೊಲ್ಲಿಸಿ
ತಿರುಗಿ ಹೋಗಲ್ಹೆಂಗ ದ್ವಾರಕಕ
ನಕ್ಕೀತು ಮೂರು ಲೋಕಾ
ರಿಣಾ ಕಡದೀತು ನಮ್ಮ ನಿಮ್ಮದಾ
ಮರಣ ಬಂದೀತೋ ರಾಸಾ
ಮಾಡಿರಿ ಮುಂಚೆ ಉಳಕೊಳ್ಳು ಸಾಹಸಾ
ಐದು ಮಂದಿ ಕೂಡಿ ದುಃಖ ಮಾಡತಾರ
ಹರಿಯೇ ಹಿಂಗ ಬಂತೇನೋ ಮನಸಿಗೆ
ಅಗ್ನಿ ಜಿಗಿದು ಸಾಯೋದು ಛೊಲೋ
ಸಿಗಬಾರದು ಅವರ ಕೈಯಿಗಿ
ಒಂದು ಮಾತನಾಡಲಿಲ್ಲ ಐದು ಮಂದಿ
ಸುಮ್ಮನ ಬಂದಾರ ತಿರುಗಿ
ದುಃಖದಿಂದ ಧರ‍್ಮ ಭೀಮ ಅರ್ಜುನರಾ
ಕರದಾರ ದ್ರೌಪತಿಗಿ
ಸಾವ ಬಂತ ನಾಳಿಗಿ ಮುತ್ತೈದಿತನಾ
ಬೇಡಿಕೊಳ್ಳೇ ಮುಕುಂದನ ಹಂತೇಲಿ ಹೋಗಿ
ಪ್ರಾಣ ಹೋಗುದಕ ಬಂತು ಅಂದ
ಆ ಕ್ಷಣಕ ದ್ರೌಪದಿ ಧರಣಿಗಿ
ಮೂರ್ಛಿ ಬಂದು ಬಿದ್ದಾಳೋ ಧರಿಗಿ
ಮೇಘಶಾಮನ ಡೇರೇಕ
ಮೃಗಾಕ್ಷಿ ನಡೆದಾಳ ಲಗುಬಿಗಿ

||ಚಾಲ||

ತನ್ನ ಮನಸಿನೊಳಗ ಹರಿಧ್ಯಾನಾ
ಹಿಡಿದ ಅವನ ಪಾದಕ ಬಿದ್ದಾಳು
ಅನಾಥ ನಾಥ ಲಕ್ಷ್ಮೀಕಾಂತ
ದೀನ ಭಕ್ತರ ದಯಾಳು
ಭಕ್ತಿಪೂರ‍್ವಕ ದ್ರೌಪತಿ ಮಾತ ಕೇಳಿ
ಅಂತಾನ ತಂಗಿ ಏನಬೇಕ ಹೇಳು
ಹಸ್ತ ಇಟ್ಟ ಮ್ಯಾಗ ಏಳು

||ಏರು||

ನಿಂತಾಳ ದ್ರೌಪತಿ ಅಂತಾಳ ಶ್ರೀಪತಿ
ಮೊದಲ ಕೊಟ್ಟ ಕುಬಸಾ
ರಾಜಸೂಯ ಯಜ್ಞದೊಳಗ ಲೇಸಾ
ಕುರು ಪಾಂಡವರೊಳು ಘೋರ ಲಢಾಯಿ||೩||

ಮಾನ ಭಂಗ ಆಗುವಾಗ
ಶ್ರೀರಂಗ ಉಡಿಸಿದ ಶಾಲಿ
ನಿಂತ ಕೌರವರ ಸಭಾದಲಿ
ಬಾಕಿ ನಿಮ್ಮ ಕಡಿ ಬಳಿ ಇಡಿಸೋದು
ಉಳಿದೀತ ವನಮಾಲಿ
ನನ್ನ ಐವರ ಪ್ರಾಣಾ ಉಳಿಸೋ ಸಮರದಲಿ
ಕೃಪಾ ಇಟ್ಟ ನೀವ ತಂಗಿ ಮ್ಯಾಲೆ |
ಖರೇ ಅವರ ಮನಿ ಆದೀತ
ಕೀರ್ತಿ ಭವನದಲಿ ಭವನದಲಿ
ಭಕ್ತಿ ಪೂರ‍್ವಕ ದ್ರೌಪತಿ ಮಾತ ಕೇಳಿ
ಎದ್ದಾನ ತೀವ್ರದಲಿ ತೀವ್ರದಲಿ
ತಂಗೀನ ಹಿಡದಾನ ಕೈಯಲಿ
ಯಾಕ ಚಿಂತಿ ನಾವು ನೀವು ಕೂಡಿ
ಹೋಗೋಣ ಭೀಷ್ಮನ ಹಂತೀಲಿ

||ಚಾಲ||

ಹೀಗಂದ ಹರಿಯು ಮುಂದಾದ
ದ್ರೌಪದಿಗೆ ಆಗಿ ಮೋತಾದಾರಾ
ಭಕ್ತರ ಆಧೀನ ಮುರಲೀಧರಾ
ಬಂದಾರ ಭೀಷ್ಮನ ಡೇರೇದ ಹೊರಗ
ಅಡಗ್ಯಾರ ಸರ‍್ವೇಶ್ವರಾ
ಒಳಗ ಹೋದಾಳು ಸುಂದರಾ
ಧ್ಯಾನಸ್ಥ ಭೀಷ್ಮ ಇದ್ದಾಗ
ದ್ರೌಪತಿ ಮಾಡ್ಯಾಳ ನಮಸ್ಕಾರಾ
ಸ್ತುತಿ ನಡಿಸ್ಯಾಳ ಅನಿವಾರಾ

||ಏರು||

ಇಟ್ಟ ಪಾದಾ ಗಟ್ಟಿ ಹಿಡದಾಳ ದೈನಾಸಾ
ನೋಡಿ ಭೀಷ್ಮ ಆದಾನ ಸಂತೋಷಾ
ಕುರು ಪಾಂಡವರೊಳು ಘೋರ ಲಢಾಯಿ||೪||

ಖೂನಾ ತಿಳಿಯದ ಆಕಿ ಸ್ತುತಿಗೆ
ಪ್ರೇಮಳ ಆಗಿ ಆಶೀರ್ವಾದ ಕೊಟ್ಟ
ಅಖಂಡ ನಿನಗಿರಲಿ ಕುಂಕುಮಬಟ್ಟ
ಅಷ್ಟಪುತ್ರ ಸೌಭಾಗ್ಯವತಿ
ಆಗಂತ ಹಸ್ತಾ ಇಟ್ಟಾ ಇಟ್ಟಾ
ಕೇಳಿ ಆಶೀರ‍್ವಾದ ಮನಸಿನಲಿ
ಭಾಳ ಆದಾಳು ಸಂತುಷ್ಟಾ
ಹೇಳತಾಳ ಕೇಳರಿ ಚಿತ್ತವಿಟ್ಟಾ
ಆಡಿದಂಗ ಖರೇ ಮಾಡಬೇಕರಿ
ನಾಳಿಗೆ ಫಟ್ಟಿ ಮುಟ್ಟಾ
ಪಂಚ ಪಾಂಡವರಲಿ ಕೃಪಾ ಇಡಿರಿ
ನೀವು ಮಾಡಬ್ಯಾಡಿರಿ ನಷ್ಟಾ
ವಚನದಲಿ ಆಗಬಾರದು ಭ್ರಷ್ಟಾ
ಏಕವಚನ ಅಂತ ಬಿರುದು ಸಾರತದ
ಭೀಷ್ಮಾಚಾರಿ ಶ್ರೇಷ್ಠಾ
ಫಾಶಿಯೊಳಗ ಬಿದ್ದ ಮೋಸ ಆದ
ಭೀಷ್ಮಗ ಹತ್ತೀತ ಮಾತಿನ ಪೆಟ್ಟಾ
ಮನಸಿನಲಿ ತಿಳದ ನೋಡ್ಯಾನ ಸ್ಪಷ್ಟಾ
ಕೃಷ್ಣನ ಹೊರತ ಈ ಕೆಲಸ ಆಗಿಲ್ಲ
ಅವ ಮಾಡಿದ ಕಪಟ.

||ಚಾಲ||

ಕೃಷ್ಣ ಬಂದ ಅಂತ ತಿಳದ
ಭೀಷ್ಮ ಸಿಂಹಾಸನ ಇಳದು ಬಂದ
ಚಂದ್ರಜ್ಯೋತಿ ಹಚ್ಚ್ಯಾನ ಜಲದಾ
ಭೀಷ್ಮ ಗೊತ್ತ ಹಿಡದಾನಂತ
ಕೃಷ್ಣ ಹೋಗಿ ಚಿಪ್ಪಾಡ್ಯಾಗ ಅಡಗಿದ
ಗಂಗಾತನಯ ಅಲ್ಲಿಗೆ ಹೋದಾ
ಏಳೋ ಕೃಷ್ಣಾ ಅಂತ ಕೈಯ ಹಿಡದಾ
ಚರಣದಲಿ ಬಿದ್ದಾ ಬಿದ್ದಾ
ಸ್ತುತಿ ಮಾಡಿದಾ ಮಾಡಿದಾ
ಪಾಂಡವರನ ಕಾಯಬೇಕಂತ
ದ್ರೌಪತಿಗೆ ಆದೀತ ತ್ರಾಸಾ
ಅದಕ ನಾ ಆಗತೇನಿ ಕೈವಾಸಾ
ಕುರು ಪಾಂಡವರೊಳು ಘೋರ ಲಢಾಯಿ||೫||

||ಏರು||

ಭಕ್ತವತ್ಸಲಾ ನಿನ್ನ ಕೃಪಾ
ಪಾಂಡವರಲ್ಲಿ ಇರು ತನಕಾ
ಅವರಿಗೆ ಯಾವ ಮಾತಿಂದ ಇಲ್ಲ ದುಃಖ
ದುಷ್ಟ ಗುಣಾ ದುರ್ಯೋಧನಗ
ಆಗೂದ ಅವರ ಬುದ್ಧಿ ತನಕಾ
ಹ್ಯಾಂಗ ಮನಾ ಹ್ಯಾಂಗ ಘನ
ಭಗವಾನ ನಿನ್ನ ಬಿಟ್ಟ ಪ್ರತ್ಯೇಕ
ಯಾವುದಿಲ್ಲ ಬ್ರಹ್ಮಾಂಡ ನಾಯಕ
ಅಣುರೇಣು ತೃಣಕಾಷ್ಟ ಮಾಯಾ
ಆಗಿ ಹೆಚ್ಚ ನಿನ್ನ ಬೆಳಕಾ
ನರ ನಾರಾಯಣ ಇಬ್ಬರಾ
ನೀವು ಭೂಭಾರ ಇಳಿಸುದಕಾ
ಧರಿಸೀರಿ ಅವತಾರಾ ಪ್ರಭುವನಕಾ
ತಿಳಿಯಲಾರದೇ ವಿರೋಧ ಮಾಡಿ
ದುರ್ಯೋಧನನಾದಾ ಕೆಡಕಾ
ನಾಳಿನ ಸಮರದಲ್ಲಿ ತಂದಾ
ಶಿಖಂಡಿ ನಿಲ್ಲಿಸೋ ಮುಂದಕಾ
ಬೆನ್ನ ಹಿಂದ ಅರ್ಜುನನಿರಲಿ ಕುಮಕಾ
ನಪುಂಸಕನ ಮ್ಯಾಲ ಬಾಣ ಹೊಡ್ಯುದಿಲ್ಲ
ಶಸ್ತ್ರ ಇಡತೇನಿ ನೆಲಕ

||ಚಾಲ||

ಇಷ್ಟ ವಚನ ತಕ್ಕೊಂಡ ಬಂದಾನ
ಹರಿ ದ್ರೌಪತಿನ್ನ ಕರಕೊಂಡ
ಆಗ ಆದ ಸುದ್ದಿ ಎಲ್ಲ ಬಿಡದ ಹೇಳತಾನ
ಹೋಯಿತ ಜೀವನ ಹೋಡಾ
ಯುದ್ಧ ಮಾಡಲಿ ಘಡಮಡಾ

||ಏರು||

ಅಣ್ಣಾ ರಾವಜಿ ಹಿಂಗ ಅಂದಾ
ಮುಂದಿನ ಸಂದಾ ಭಾಳ ಸರಸಾ |
ಬಾಳ ಗೋಪಾಳಾ ಕವಿ ಕಳಸಾ
ಬಾಗೋಡ್ಯಾಗಿರತೇನಿ ಕರಿ ಕಳಸಾ
ಕುರು ಪಾಂಡವರೊಳು ಘೋರ ಲಢಾಯಿ||೬||

ರಚನೆ : ಬಾಳಗೋಪಾಳ
ಕೃತಿ : ಜಾನಪದ ಝೇಂಕಾರ