ಪೂರ್ವ ಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ
ಎಲ್ಲಿ ಹೋದರೂ ಸಾಡೇಸಾತಿ ಹಿಂಬಾಲಾ
ಭೋಗ ತೀರದ ಹೊರತು ಅದು ತಪ್ಪಿಲ್ಲಾ
ಕೇಳೋ ಧರ್ಮಜಾ ನಿನಕಿಂತ ಹರಿ-
ಶ್ಚಂದ್ರನ ವನವಾಸಕಳತಿಲ್ಲಾ ಹೇಳುವೆನೆಲ್ಲಾ||ಪಲ್ಲ||

ಸೂರ್ಯ ವಂಶದಲ್ಲಿ ಶೌರ್ಯ ಭಾಳಾ
ಔದಾರ್ಯ ಧೀರ ಅವ ಗಂಭೀರಾ
ಮೂರ ಲೋಕ ಹೊಡೆಯತ್ತಿತ್ತ ಡಂಗುರಾ
ಧರ್ಮಶೀಲ ಪರಾಕ್ರಮಿ ಖರೇ ಧೀರಾ
ಬಂತ ಕಾಲ ಮುಂದ ಇಂದ್ರಲೋಕದಲಿ
ಕೂಡ್ಯಾರ ಒಂದಿನಾ ದೇವತರಾ ಮತ್ತು ಋಷಿ ಜನರಾ
ಅಮರನಾಥ ಸುರಪತಿ ಗುರು ಬ್ರಹಸ್ಪತಿ
ವಸಿಷ್ಠ ವಿಶ್ವಾಮಿತ್ರ ಉಳಿದ ಯೋಗೀಶ್ವರರಾ
ರಂಭಾ ಊರ್ವಶಿ ನಾಚರಂಗ ಮನೋಹರಾ
ಫಳಿಗಟ್ಟಿ ನಿಂತಾರ ಎಲ್ಲ  ಗಾಯಕರಾ
ಬಂದ ನಾರದ ಅವಚೀತಾ ಅಲ್ಲಿ ಎದ್ದ
ಕೈಯ ಮುಗದ ಋಷಿ ಮುನೀಶ್ವರರಾ ಯೋಗಿಶ್ವರರಾ
ನಾರದ ಅಂತಾನ ಮೃತ್ಯು ಲೋಕದಲಿ
ಸಂಪತ್ತಿಗೆ ಶ್ರೇಷ್ಠ ಅಯೋಧ್ಯಾ ನಗರಾ
ಅದಕ್ಕ ಸರಿಯಲ್ಲ ನಿನ್ನ ಅಮರಪುರಾ
ಬ್ರಹ್ಮ ಲೋಕದಾಗಪ್ಪಾ ಆದರಕ್ಕೋಸ್ಕರಾ
ಅಲ್ಲ ತಗಿ ವೈಕುಂಠ ಕೈಲಾಸಾ
ತ್ರಿ ಜಗದೊಳು ಅಂತಾ ನಗರಾ ಇಲ್ಲಾ ನಿರ್ಧಾರಾ
ಸತ್ವ ಶೀಲ ಹರಿಶ್ಚಂದ್ರ ರಾಜಾ ತಾರಾ
ಮತಿ ಸತಿ ರೋಹಿದಾಸ ಕುಮಾರಾ
ಸತ್ಯ ವಚನಿ ಸತ್ಯ ಶ್ರೇಷ್ಠ ಮಹಾವೀರಾ
ಕೊಟ್ಟ ವಚನ ತಪ್ಪುದಿಲ್ಲ ಭಲೇ ಧೀರಾ
ಕೇಳಿ ವಸಿಷ್ಠ ತಲಿದೂಗಿ ಖರೇ ಅಂದಾ
ಅವರಂಗ ಇಲ್ಲ ಮತ್ತ ಯಾರ‍್ಯಾರಾ ಇದ ಕರಾರಾ
ಆಡಿದ ಮಾತಿಗೆ ನುಡದಾನ ವಿಶ್ವಾಮಿತ್ರಾ
ಹರಿಶ್ಚಂದ್ರ ಯಾವ ದೊಡ್ಡ ರಣಶೂರಾ
ಅವನ ಸತ್ವ ಕೆಡಿಸೋದು ಯಾತರ ಘೋರಾ
ಹತ್ತುದಿಲ್ಲ ಘಳಿಗಿ ಕ್ಷಣ ಭಂಗುರಾ
ಪುನಃ ಸೃಷ್ಟಿ ಮಾಡಿದ ವಿಶ್ವಮಿತ್ರ
ನನ್ನಲ್ಲಿ ಅದಾವ ವರಾ ಎಂಥವರಾ ಬಲಿ ಹರಿಹರರಾ
ವಸಿಷ್ಠ ಅಂತಾನ ಹಂಗಾಗದು ಎಂದೆಂದಿಗೂ
ಭಾನುವಂಶಿ ಇದ್ದಾನ ಶೂರ ಕುವರಾ
ಉದಯ ಆದಾನ ಪಶ್ಚಿಮಕ ಭಾಸ್ಕರಾ
ಮೇರು ಪರ್ವತ ಇರವಿ ನುಂಗಿತ ಪೂರಾ
ಆಗದ ಮಾತ ಆದಾವ ಖರೆ ಹರಿಶ್ಚಂದ್ರಾ
ಕೊಟ್ಟ ವಚನಾ ಫೇರಾ ಆಗದು ದೂರಾ

||ಚಾಲ||

ವಿಶ್ವಾಮಿತ್ರಗ ಬಂದಿತೋ ಕೋಪಾ ಭಾಳ ಸಂತಾಪ
ಬೆಂಕಿ ಮ್ಯಾಗ ತುಪ್ಪ ಸುರವಿದಾಂಗ ಆಗಿ
ಅಂತಾನ ವಸಿಷ್ಠ ಋಷಿಗಿ ಸಿಟ್ಟಾಗಿ
ಅರವತ್ತ ಸಾವಿರ ವರುಷ ತಪ ನಂದ
ಮೂರು ಲೋಕ ಗೆದ್ದ ಸೃಷ್ಟಿ ಕರ್ತನೆಂದ
ನಾನು ಅದರಿಂದ ಪುನಃ ಸೃಷ್ಟಿಗಿ
ಮಾಡಿಬಿಟ್ಟ ತಾ ಲಗುಬಗಿ ಲಗುಬಗಿ
ಹರಿಶ್ಚಂದ್ರನ ಸತ್ವ ಕಳದೇನ ಪುಣ್ಯ ಅಳದೇನ
ಅವನ ಎಳದೇನ ನಾನ ಇಂದಿಗಿ
ಅಂದ್ರ ಋಷಿ ಅಂತ ಕರಿ ನನಗಾಗಿ

||ಚಾಲ||

ಹಿಂಗ ವಾದ ಹಾಕ್ಯಾರ ಇಬ್ಬರು
ಇಂದ್ರ ಸಭಾದಲ್ಲಿ ಗಡಬಡಿಸ್ಯಾರು
ಆಗ ಕಚೇರಿ ಮುರದ ಎದ್ದಾರು
ತಮ್ಮ ತಮ್ಮ ಸ್ಥಾನಕ ಹೋದಾರು
ವಿಶ್ವಾಮಿತ್ರ ವಸಿಷ್ಠ ಇಳದಾರೋ
ಮೃತ್ಯು ಲೋಕದಲ್ಲೆ ಬಂದಾರೋ

||ಏರು||

ಬಂದ ವಸಿಷ್ಠ ಹರಿಶ್ಚಂದ್ರಗ ಅಂತಾನ
ರಾಜಾ ಬಂತೋ ನಿನ್ನ ಜೀವದ ಮ್ಯಾಲಾ
ನಿನ್ನ ವಂಶದೊಳಗ ಸತ್ವ ಯಾರೂ ಬಿಟ್ಟಿಲ್ಲಾ
ಜ್ವಾಕಿ ಮಾಡಿಕೊಳ್ಳೋ ಪ್ರಾಣ ಹೋದರು ಚಿಂತಿಲ್ಲಾ
ಪೂರ್ವ ಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ…..||೧ನೆಯ ಚೌಕ||

ಈ ಕಡೆಗೆ ವಿಶ್ವಾಮಿತ್ರ ಆಶ್ರಮದಲಿ ಬಂದ
ಮಾಯಾ ಮಾಡ್ಯಾನ ಒಳ್ಳೆ ಅದ್ಭುತಾ
ಯಜ್ಞ ಹೋಮ ನಡಸಿಬೇಕಂತಾ
ತನ್ನ ದೇಹ ಕಡಿದು ಅಗ್ನಿಯಲಿ ಒಗೆಯುತಾ
ಪ್ರಸನ್ನವಾಗಿ ನಿಂತಾಳ ಭವಾನಿ ಆಗಾ
ಏನ ಬೇಕ ಬೇಡ ಕೊಡುವೆನು ಪೂರ್ತಾ
ಹೋಮ ಬಿಡು ಅಂತಾ ಕಡದ ದೇಹ ದಿವ್ಯ ಆಗಿ
ಹೋಮದೊಳಗಿಂದ ಹುಲಿಗಳೆದ್ದಾವ ವಿಪರೀತಾ
ನಾಡ ತುಂಬ ಓಡಾಡತಾವ ಗುಡುಗುಡಿಸುತಾ
ಹರಿಶ್ಚಂದ್ರನ ನಗರ ಸುತ್ತ ತಿರುಗುತ್ತಾ
ನೋಡಿ ಪ್ರಜೆಗಳೆಲ್ಲಾ ರಾಜಾಗ ಹೇಳತಾರ
ಸ್ವಾಮಿ ಬಂದಿತೋ ಪ್ರಾಣದ ಸುತ್ತಾ
ಹುಲಿಗಳ ಆ ಕಾಂತಾ ದೃಷ್ಟಾಂತಾ
ಕೇಳಿ ರಾಜಾ ಬೇಟಿ ಆಡೋದಕ ನಡದಾ
ಚತುರಂಗ ಸೈನ್ಯ ಸಹಿತಾ ಆಗಿಂದಾಗಾ
ಹೊಂಟ ಅರಣ್ಯದಲ್ಲಿ ಹುಲಿ ಹೊಡಕೊಂತಾ
ಸನೆ ಆದೀತ ಅವಗ ಕಾಡು ಹೊತ್ತಾ
ಹೊತ್ತ ಮುಳಗಿ ಅಲ್ಲಿ ವಸ್ತಿ ಮಾಡಿದಾನ
ರಾತ್ರಿ ಸ್ವಪ್ನ ಬಿದ್ದೀತ ಪೂರ್ತಾ
ಆದೀತ ಅಘಟೀತಾ ಅಘಟೀತಾ
ನವಖಂಡ ಪೃಥ್ವಿದಾನ ನಿಂತ
ನೀಡ್ಯಾನ ಬ್ರಾಹ್ಮಣಗ ನಗನಗತಾ
ಎಚ್ಚರಾಗಿ ಘಾಬರ‍್ಯಾದ ಅವಚೀತಾ
ವಿಶ್ವಾಮಿತ್ರ ಬ್ರಾಹ್ಮಣನಾಗಿ ಬಂದ ಹರೇಹೊತ್ತಾ
ಕೊಡೋ ರಾಜಾ ಸುವರ್ಣದಾನ ನಿನ್ನ ತೂಕಾ
ತೂಕಾ ಈಗ ಪೂರ್ತಾ ಅಂತ ಅನ್ನು ತಾ
ರಾಜಾ ಹೇಳತಾನ ನೀವ ನಡಿರಿ ಸ್ವಾಮಿ
ನಮ್ಮೂರ ಒಳಗ ಕೊಡುವೆನು ಖಚಿತಾ
ತಾರಾಮತಿ ಹೆಣತಿ ಎದ್ದಾರ ಸಂಗಾತಾ
ಆದರೂ ಹೇಳ್ಯಾಳ ಕೊಡತೇವ ಅಂತಾ
ನಡೆದು ವಿಶ್ವಾಮಿತ್ರ ಕಾಡೊದಕ ಹತ್ಯಾನ
ತಪ್ಪದು ಹಿಂದಿನ ಸುಕೃತಾ
ಬ್ರಹ್ಮ ಲಿಖಿತಾ
ತಾರಾಮತಿ ಸಿಂಹಾಸನದ ಮ್ಯಾಲ ಕೂಡ್ರುದು ನೋಡಿ
ವಿಶ್ವಾಮಿತ್ರ ಆದ ಬಹಳ ಕ್ರೋಧಿಪ್ತಾ
ಮನಿಮಾರಾ ರಾಜ್ಯ ದ್ರವ್ಯ ನಮ್ಮದನ್ನು ಭ್ರಾಂತಾ
ಬಿಟ್ಟುಕೊಡ ತಾರಾಮತಿ ನೀ ಮರತಾ
ಹೋಗಿ ಹೇಳೋಗ ನವಖಂಡ ಪೃಥ್ವಿಯಲಿ
ನಿಂದೇನ ಇಲ್ಲ ಬ್ರಾಹ್ಮಣನದಂತಾ ಇದ ಖಚಿತಾ
ತಾರಾಮತಿ ಆಗಿ ಘಾಬರಿ ಬಂದಾಳ ಹಾತ್ವಾತಿ ಅಂತಾಳ
ಏ ದೊರಿ ಏನ ಹೇಳು ಹಿಂಗ ಬಂದೀತ ಋಷಿಯ ಬಾಯಲಿ
ಹರಿಶ್ಚಂದ್ರ ಆವಾಗ ಓಡಿ ಬಂದ ಹಿಡಿದ ಮುನಿಯ ಪಾದಾ
ವಿಶ್ವಾಮಿತ್ರ ಅಂದ ಅಂವಗ ಕೋಪದಲಿ ಕೋಪದಲಿ
ಕೊಡೋ ದಾನಾ ಇನ್ನ ತೀವ್ರದಲಿ ಇನ್ನ ತೀವ್ರದಲಿ
ಹರಿಶ್ವಂದ್ರ ಪ್ರಧಾನಿನ ಕರದ ಅವಗ ಹೇಳಿದ ಬಂಗಾರ
ಒಳಗಿಂದ ತೂಕ ಕ್ಷಣದಲಿ ತೂಕ ಕ್ಷಣದಲಿ
ಹಾಕಿ ಕಳಿಸ ಋಷಿಯ ಪದರಲಿ ಪದರಲಿ

||ಚಾಲ||

ವಿಶ್ವಾಮಿತ್ರ ನೋಡಿದ ನಕ್ಕಾನು
ಯಾರ ದ್ರವ್ಯ ಕೊಡತಿ ಅಂದಾನು
ಸ್ವಪ್ನದೊಳಗ ಭೂಮಿದಾನ ನೀನು
ರಾಜಾ ನೀ ನನಗ ಕೊಡಲಿಲ್ಲ ಏನು
ಇಲ್ಲಂತ ಹೇಳ ಹೋಗತೇನು
ಹೌದ ಅಂದ ಮ್ಯಾಲ ಕೊಡು ಹೇಮವನು

||…||

ನವಖಂಡ ಪೃಥ್ವಿಯಲ್ಲಾ ಕೊಟ್ಟಿದಿ ನನಗ
ಇದರ ಒಳಗ ನಿಂದ ಏನೇನ ಇಲ್ಲಾ
ಇಲ್ಲಿ ಇರುವ ದ್ರವ್ಯ ನಿನಗ ಹಿಡಿಗೊಡುವದಿಲ್ಲಾ
ಕೊಡು ತೂಕ ಬಂಗಾರಾ ನೀ ಇನ್ನ ಮ್ಯಾಗಾ
ಪೂರ್ವ ಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ||೨ನೆಯ ಚೌಕ||
ವಿಶ್ವಾಮಿತ್ರ ಹರಿಶ್ಚಂದ್ರ ರಾಜಾ ತಾರಾಮತಿ ಸತಿ
ರೋಹಿದಾಸ ಅವರ ಕುವರನನ್ನು ಕರೆದಾ
ಮುನಿ ಒಳಗಿಂದ ಅಂಗಳದಾಗ ನಿಂದ್ರಿಸಿದಾ
ವಸ್ತ್ರಾಲಂಕಾರ ಅರವಿ ತಗೊಂಡಾನ ಕಸದಾ
ಕೊಡೋ ರಾಜಾ ನಿನ್ನ ತೂಕ ಬಂಗಾರಾ
ಹಿಡಿಗೊಡುವದಿಲ್ಲ ನಿನ್ನ ರಾಜದೊಳಗಿಂದಾ
ಲಗು ಕೊಡು ಜಲದಾ ಮತ್ತು ಜಲದಾ
ರಾಜ್ಯ ದಾನ ಕೊಟ್ಟಿಲ್ಲ ಅಂದ್ರ ನೀನಾ
ತಗೋತೀನ ನಿನ್ನ ಸತ್ವ ಕಳದಾ
ಹರಿಶ್ವಂದ್ರ ಹಿಡದ ಆತನ ಪಾದಾ
ಅವಸರ ಮಾಡಬ್ಯಾಡರಿ ಅಂತಾನ ಕೈ ಮುಗಿದಾ
ದಾನ ಕೊಟ್ಟಿದ್ದ ಖರೆ ಅಂವ ದಕ್ಷಿಣಿದ್ದಾ
ಪುರಸತ್ತ ಕೊಡಬೇಕ ಇಂದಿಂದ ಹಿಡದ ವರ್ಷದ್ದಾ
ಮುನಿ ರೋಹಿದಾಸನ ಬಡಬಡದ ಕೇಳತಾನ
ಖರೇ ಸುಳ್ಳ ಹೇಳ ದಾನ ಕೊಟ್ಟಿದ್ದಾ
ಇಲ್ಲಂತ ಹೇಳಿ ಕಳಿಸ್ಯಾನ ಕೂಸಿನುಬೈದಾ
ರೋಹಿದಾಸ ತಿರುಗಿ ಆತಗ ಅಂದಾ
ಸುಳ್ಳ ಮಾತ ಭೂಮಂಡಲ ತಿರುಗಿ ಬಿದ್ದರ
ಸೂರ್ಯ ವಂಶಕ ಕುಂದಾ ಆಗುದು ಎಂದಾ
ಹೊತ್ತ ಅರಿವಿ ಎಲ್ಲಾ ಚೆಲ್ಲಿ ಬರಿ ಮೈಲೆ
ಮೂವರು ನಡದಾರು ಹೊರಬಿದ್ದಾ
ಪುರಜನಾ ಬೆನ್ನಹತ್ತಿದಾರು ದುಃಖದಿಂದಾ
ಹ್ಯಾಂಗ ಹೊಂಟ ಅರಸಾ ನೀ ನಮ್ಮನೊಗದಾ
ಜ್ವಾಕಿ ಮಾಡು ತಾಯಿ ತಂದಿ ಆಗಲ್ಯಾರಂತಾ
ಪುರ ಉಳ್ಳ್ಯಾಡತಾರ ಧರಣಿಗೆ ಬಿದ್ದಾ ಖಬರಿಲ್ಲದಾ
ಹಕ್ಕಿ ಪಕ್ಷಿ ಪಶು ಮೊದಲು ಮಾಡಿಕೊಂಡು
ಕಣ್ಣೀರು ಚೆಲ್ಲುತಾ ಬಾಯಿ ತೆರದಾ
ಹರಿಶ್ಚಂದ್ರ ಅರಣ್ಯದ ಹಾದಿ ಹಿಡದಾ
ತಾರಾಮತಿ ರೋಹಿದಾಸ ಬೆನ್ನ ಹಿಂದಾ
ನಡಸಿದ ವಿಶ್ವಾಮಿತ್ರ ಕೆಡಸುದಕಾ
ಅವನ ಸತ್ವ ಬಂದಾನ ಬ್ರಾಹ್ಮಣ ವೇಷದಿಂದಾ
ಅಲ್ಲೆ ತರುಬಿದಾ ಕಾಲಾಗಿರೋ ಪಾದರಕ್ಷೆ
ನಿಂತ ಭಿಕ್ಷೆ ಬೇಡುತಾ ತಕ್ಕೊಂಡಾಗ ಮೂವರದಾ
ಒಳ್ಳೆ ಬ್ಯಾಸಿಗಿ ಬಿಸಿಲು ಚೈತ್ರ ಮಾಸದ್ದಾ
ಮಾಯಾದಿಂದ ಹಾದ್ಯಾಗ ಮಳಲು ಹಾಕಿಸಿದಾ
ಸೂರ್ಯನ ಧ್ಯಾನ ಮಾಡಿ ಹನ್ನೆರಡರ ಕಳೆದಿಂದಾ
ಮೂವರ ಮ್ಯಾಗ ಕಣ್ಣ ತೆರಿ ಅಂದಾ ಕಾಪಟ್ಯದಿಂದಾ

||ಚಾಲ||

ನಿಂತ ವರುಣಗ್ಹೇಳ್ಯಾನ ಆ ಕ್ಷಣಕ
ಇವರಿಗೆ ಕುಡಿಲಾಕ ನೀರ ಒಂದ ಗುಟಕ
ಇರಬಾರದ್ಹಾದ್ಯಾಗ ಇರಬಾರದ್ಹಾದ್ಯಾಗ
ಎಲ್ಲಾ ಅಟ್ಟಿಸಿ ಬಗಿಚಿ ಭೂಮ್ಯಾಗ
ವರುಣ ಭೂಮಿ ಒಳಗ ನೀರ ಜಗ್ಗಿವಗದ
ಸೂರ್ಯ ತನ್ನ ಕಣ್ಣ ತೆರದ ಆಗಿಂದಾಗ
ಭೂಮಿ ಬಿಲ್ಲಾ ಆದೀತ ಕಾಯ್ದ ಕೆಂಡದ್ಹಂಗ
ಸಣ್ಣ ಮಳಲು ಹಾಕ್ಯಾನ ಅದರಾಗ
ಇಂಥಾ ಬಿಸಿಲು ಬಿದ್ದಾಗ ಭೂಮಿಗಿ
ಕಲ್ಲ ಹೋದಾವ್ರಿ ಕರಗಿ ಕರಗಿ
ಬ್ರಹ್ಮಾಂಡದ ಗುಳಿಗಿ ಆದೀತ ಆವಾಗ
ಶೇಷ ತೆಲಿ ಝಾಡಿಸಿದ ಕೆಳಗ ಕೆಳಗ

||ಚಾಲ||

ಭೂಮಿ ನೆಗವಿ ಹಿಡದ ಕೂರ್ಮನು
ತನ್ನ ಬಾಲ ಸರಿಸ್ಯಾಡತಾನು
ಹಿಂತದರಾಗ ಹರಿಶ್ಚಂದ್ರನು
ಮಗಾ-ಹೆಣತಿ ಸಹಿತ ನಡದಾನು
ರೋಹಿದಾಸ ಬೆನ್ನ ಹತ್ಯಾನು
ಕಾಲ ಸುಟ್ಟ ಕಾದೀತ ದೇಹವನು

||ಏರು||

ಬಾಯಿ ಒಣಗಿ ನೀರಡಿಸಿ ಮೂವರಿಗೆ
ನಿಂತೇನಂದ್ರ ನೆರಳಿಲ್ಲಾ ಇಲ್ಲಾ
ಚೂರ ಅರವಿ ಇಲ್ಲಾ ಅವರ ಮಯ್ಯಾಗಾ
ಕಳವಳಿಸಿ ತಾಳವಲ್ಲದು ಬಿಸಿಲಾ
ಪೂರ್ವಕರ್ಮ ಹರಿಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ||೩ನೆಯ ಚಾಲ||

ತಲ್ಲಣಿಸುವ ಉರಿ ಕಿಚ್ಚಿನಲಿ ನಡದಾರ
ಕಾಲ ಸುಟ್ಟ ಹಾಕತದ ಚರ್ಮವನು
ತಾರಾಮತಿ ಮಾಡತಾಳ ದುಃಖವನು
ಐದ ವರುಷ ಕೂಸ ರೋಹಿದಾಸ ಮಗನು
ಬಾಯಿ ಒಣಗಿ ಬಾಡಿ ಕಳೆಗುಂದಿದನು
ಹಾಕತದ ಪ್ರಾಣವನು ವ್ಯಾಕುಳನು
ಜಾಗಾ ಜಾಗಾ ನೀರಿನ ಅರವಟಿಗೆ ಹಾಕಿಸಿದನು
ವಿಶ್ವಾಮಿತ್ರನು ತಾರಾಮತಿಗೆ ಅಂತಾನು
ನೀರ ಕುಡಿತಿ ಏನ ನೀನು
ಹರಿಶ್ಚಂದ್ರ ಕುಡದ ಮುಂದ ಹೋದನು
ತಾರಾಮತಿ ಅಂತಾಳ ಆಗದೆಂದಿಗೂ
ಅರವಟಿಗೆಯೊಳಗಿನ ಜಲವ ನೋಡುವದಿಲ್ಲವನು
ಅಂತ ನಡದಾಳ ಹೇಮಕಾಂತಿ ಮುಂದಕ
ಬಾಡಿದ ವದನವನು ಬಾಡಿದ ವದನವನು
ಹಿಂದ ದೂರ ಉಳಿದ ರೋಹಿದಾಸ ಮಗನು
ವಿಶ್ವಾಮಿತ್ರ ಬಗಲಾಗ ಅವನಪ್ಪಿದನು
ನಡಿಯೋ ಕಂದ ಅನ್ನ ಉಂಡ ನೀರ ಕುಡದು
ಮನೆಯಲಿ ಇರನಡಿ ಸ್ವಸ್ಥವನು ನಿನಗ ಚಿಂತೇನು
ರೋಹಿದಾಸ ಅಂತಾನ ವಿಶ್ವಾಮಿತ್ರನ
ಸಾಲ ಕೊಡಬೇಕ ತೂಕ ಬಂಗಾರವನು
ಅನ್ನ ಛತ್ರದೊಳಗಿನ ಅನ್ನವನು ಮುಟ್ಟುದುಲ್ಲ
ಮಾಡಬ್ಯಾಡ್ರಿ ನನಗ ನೀವ ಜುಲಮಿಯನು
ಮಹಾಪ್ರಳಯವಾಗಿ ಪೃಥ್ವಿ ಮುಳಗಿದರು
ಸೂರ್ಯವಂಶಕ ಕುಂದವನು ಹಚ್ಚಲಾರೆನು
ಇಷ್ಟ ಮಾತ ಕೇಳಿ ವಿಶ್ವಾಮಿತ್ರ ಕೋಪದಿಂದ
ಬಗಲಾಗಿಂದ ಒಗದಾನು ರೋಹಿದಾಸನನು
ತಾಯಿ ಬೆನ್ನ ಹತ್ಯಾನು ಹತ್ಯಾನು
ವಿಶ್ವಾಮಿತ್ರ ಕಪಟ ಅಲ್ಲಿ ಮಾಡಿದನು
ಮೂವರ ಸುತ್ತಗಟ್ಟಿ ಬೆಂಕಿ ಹಚ್ಚಿದನು
ಸುಟ್ಟ ಹೋಗಲಿ ಇವರೆಂದಾನು ಅಂದಾನು
ಅಗ್ನಿ ಕ್ರೋಧವನು ಅಗ್ನಿ ಪ್ರಳಯವನು
ಮೀನ ಮರಿಯು ಬಿಸಿಲೊಳಗ ಮರಗಿದ್ಹಂಗ
ಮರುಗತಾರ ಇನ್ನೂ ಬರೀಲೇನು ಬರೀಲೇನು
ಒಡಲೊಳಗ ಸುಡತದೆ ಕಿಚ್ಚವನು
ಹೊಗಿ ಮಂಜಿನೊಳಗ ಕಾಣಿಸ ಒಲ್ಲದು ದಾರಿಯನು
ಹನ್ನೆರಡರ ಕಳೆಯಿಂದ ಬಡಿಯುವ ಬಿಸಿಲು
ಅದರೊಳಗ ಸುತ್ತಗಟ್ಟಿ ಬೆಂಕಿಯನು
ದುಃಖ ಹೇಳಲಿ ಏನು ಮತ್ತೇನು

||ಚಾಲ||

ವಿಶ್ವಾಮಿತ್ರ ತಾರಾಮತಿಗಿ ಅಂದ
ರೋಹಿದಾಸ ಮಗಾ ಸತ್ತ ಇಂದ
ಹರಿಶ್ಚಂದ್ರ ಮುಂದ ಬೆಂಕಿ ಒಳಗ ಹೋಗಿ
ಸುಟ್ಟ ಸುತ್ತ ನೋಡ ಪ್ರೇತಾಗಿ
ಇಷ್ಟ ಮಾತ ಕೇಳಿ ಕಡಿದ್ಹಂಗ ಎಳಿಬಾಳಿ
ತಾರಾಮತಿ ಬಿದ್ದಾಳೋ ಧರಣಿಗಿ
ನೆಲಾ ಬಗಟಿ ಎಸದಳೋ ಬಾಯಿಗಿ
ವಿಶ್ವಾಮಿತ್ರನ ಸಾಲ ಉಳದೀತ ಹ್ಯಾಂಗ್ಹೋದಿ
ಆ ಕಾಂತಾ ಕಠಿಣ ಬಂತ ಹೊತ್ತ ಇಂದೀಗಿ
ಎಂದ ನೋಡೇನ ನನ್ನ ಕೂಸಿಗಿ

||ಏರ ಚಾಲ||

ತಾರಾಮತಿ ಬಾಯಿ ತೆರದಾಳು
ಖಬರಿಲ್ಲದಾ ಮುಂದಕ ನಡದಾಳು
ಹರಿಶ್ಚಂದ್ರ ಹೋಗೋದು ಕಂಡಾಳು
ಓಡಿ ಹೋಗಿ ಪಾದಕ ಎರಗ್ಯಾಳು
ಹಿಂತಿರುಗಿ ಮಗನ ನೋಡ್ಯಾಳು
ಬಿಗಿದಪ್ಪಿ ಮುದ್ದ ಕೊಟ್ಟಾಳು

||ಏರು||

ನವಖಂಡ ಪೃಥ್ವಿ ಎಲ್ಲಾ ದಾಟಿ ದಶ-
ಖಂಡ ಕಾಶಿ ಹೊಕ್ಕರೆಲ್ಲಾ
ಇದರೊಳಗೆ ವಿಶ್ವಾಮಿತ್ರಂದ ಏನಿಲ್ಲಾ
ಅಂತ ತಿಳಿದ ಆಗಿದರ ಋಷಿಯಾಲಾ
ಪೂರ್ವ ಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ||೪ನೆಯ ||

ಕಾಶಿಯೊಳಗ ಬಂದಾಕ್ಷಣಕ ವಿಶ್ವಾಮಿತ್ರ
ನಿಂತಾನ ಅವರ ಬೆನ್ನ ಹಿಂದಾ
ವಾಯದೆ ಸನೆ ಬಂತೋ ರಾಜಾ ಇಂದಾ
ನಮ್ಮ ನಿಮ್ಮದಾ ಮಾತಿಂದಾ
ಕೊಡು ತೂಕ ಬಂಗಾರಾ ನಾಳಿಗಿ ಜಲದಾ
ರಾಜಾ ಹೇಳತಾನ ಮೂವರನ ಪ್ಯಾಟಿ ಒಳಗಾ
ಮಾರಿಕೊಂಡ ಮುಟ್ಟಿಸಿಕೊಳ್ಳರಿ ದೇಣೆದ್ದಾ
ರಿಣದೊಳಗಿಂದ ನಿಮ್ಮ ರಿಣದೊಳಗಿಂದಾ
ಯಾಕ ಆಗ ಒಲ್ಲದು ಎಂದಾ ಹಿಗ್ಗಿನಿಂದಾ
ವಿಶ್ವಾಮಿತ್ರ ಮೂವರನ ತಗೊಂಡ ಓಣಿಲಿ ನಡದಾ
ಯಾರ ಬೇಕಾದರ ತಗೋಬೇಕೆಂದಾ ಕೂಗಿದಾ
ಪುರಜನ ಕೂಡಿದಾರ ಏನೆಂಬುವದಾ
ಕರುಣಾ ಇಲ್ಲದ ಇವರ ಧಾರಣಿ ಹೇಳತಾನ
ತೂಕಾ ತೂಕಾ ಇವರ ಬಂಗಾರ ಕೊಡುವುದಾ
ಇವರನ ಒಯ್ಯುವುದಾ ದುಡಿಸುವುದಾ
ತಾರಾಮತಿ ರೂಪ ನೋಡಿ ಪಾತ್ರದವರಾ
ಬೇಡತಾರ ಬಂದ ಬಂದಾ ಆಗಿಂದಾಗಾ
ಕೊಡರಿ ಇಕಿನ್ನ ನಮಗ ಒಯ್ಯತೇವ ಇಂದಾ
ತಾರಾಮತಿ ಅಂತಾಳ ಕೈಯ ಮುಗದಾ
ಪಾತ್ರದವರಿಗೆ ಕೊಡಬ್ಯಾಡೋ ಸ್ವಾಮಿ
ಪತಿವ್ರತಾ ಧರ್ಮಕ ಬರುವುದು ಕುಂದಾ
ನಡಿರೆಂದ ನಡಸಿದಾನ ಮುಂದ ಮುಂದಾ
ಕೊಂಡ ತಗೊಂಡ ಕೌಂಡಣ್ಯ ಋಷಿ
ತಾರಾಮತಿ ರೋಹಿದಾಸನ ಅಂದಾ
ಹಿಂದ ಹರಿಶ್ಚಂದ್ರ ರಾಜಾ ಒಬ್ಬ ಉಳದಾ
ವಿಶ್ವಾಮಿತ್ರ ಕರ್ ಕೊಂಡ ಓಣಿಲೆ ನಡದಾ
ಹೋಗಿ ಹೊಲಗೇರ‍್ಯಾಗ ಡೊಂಬರನ ಕರದಾನ
ಕೊಂಡ ತಗೋಳೋ ಇವನೆಂದಾ ಅವಗ ಹೇಳಿದಾ
ಡೊಂಬ ಅಂತಾನ ನೀವು ಕ್ಷತ್ರಿಯರು
ನಾವ ಅಂತ್ಯಜರು ಹ್ಯಾಂಗ ತಗೋಳೂದಾ
ಋಷಿ ಅಂತಾನ ಕಾರಣ ನಮಗ ಬಂಗಾರದಾ
ಹರಿಶ್ಚಂದ್ರ ಯಾಕ ಆಗ ಒಲ್ಲದು ಅಂದಾ
ಆಗುವ ಭವಿಷ್ಯವೆಲ್ಲಾ ಆಗಿ ಹೋಗಲಿ
ಹಿಂತಾದಕ್ಯಾಕ ಇನ್ನಂಜುದಾ ನಮ್ಮ ಪ್ರಾರಬ್ಧಾ
ನಿಂತಾನ ಹೊಲಿಯಾನ ಮನಿಯಾಗ ಹರಿಶ್ಚಂದ್ರಾ
ಸಾಲ ಮುಟ್ಟಿತ ವಿಶ್ವಾಮಿತ್ರಂದಾ
ಮತ್ತಲ್ಲಿ ಹತ್ತಿದಾನ ಆತಗ ಕಾಡುವುದಾ
ಏನ ರೇಖಾ ಬ್ರಹ್ಮ ಹಣಿಯಲಿ ಬರದಿದ್ದಾ
ಪೃಥ್ವೀ ಪಾಲನ ಮಾಡುವಂತಾ ರಾಜಾ ಹೊಲಗೇರ‍್ಯಾಗ
ದುಡಿಯಾಕ ಹತ್ತಿದಾ ಕೇಳರಿ ಮುಂದಾ

||ಚಾಲ||

ಹೊಲಿಯಾ ಅಂತಾನ ಹರಿಶ್ಚಂದ್ರಗ ಮನಿಯಾಗ
ನೀರ ತಂದ ಮ್ಯಾಗ ಮ್ಯಾಗ – ಸುರುವ ಹರಿವಾಣಕ
ಈ ಚಾಕರಿ ಒಪ್ಪಿತ ನಿನಗ – ಈಗ
ಹರಿಶ್ಚಂದ್ರ ಕೊಡಾ ಹೊತ್ತಾನ ನೀರ ತರತಾನ
ಹರವೀಗಿ ಹಾಕತಾನ ತಾನು ಲಗು ಬ್ಯಾಗಾ
ಜಲಧಾರಿ ಹೊಂಟಾವ ಕಣ್ಣಾಗ ಕಣ್ಣಾಗಾ
ವಿಶ್ವಾಮಿತ್ರ ಮಾಡಿದ ಬೇತಾ ಬೇತಾ
ಹರವಿ ಬುಡಕ ತೂತಾ ತೂತಾ
ತಗದ ಬೇಕಂತಾ ನೀರ ಇಲ್ಲದ್ಹಾಂಗ
ತೆರುವ ಮಾಡುವನು ಅವ ಬರುವದರೊಳಗ

||ಏರಚಾಲ||

ಮನಿಯ ಚಾಕರಿ ಆಗುವದಿಲ್ಲಾ
ಸುಡಗಾಡದಲ್ಲಿ ಮಾಡೋ ಕಾವಲಾ
ದರ ಹೆಣಕ ಒಂದ ರೂಪಾಯಿ ಹಾಸಲಾ
ಹೊಲ್ಯಾನ ಹೆಣತಿ ಒದ್ದಾಳ ಬೆನ್ನಮ್ಯಾಲಾ

||ಏರು||

ಹೊಲಿಯಾನ ಮಾತ ಕೇಳಿ ಕಾಲಕ್ಷೇಪಾ
ಮಾಡುತ ಸುಡಗಾಡದಲಿ ಹರಿಶ್ಚಂದ್ರ ನಿಂತಾ
ದರ ದರ ಹೆಣದ ಹಾಸಲ ಇಸಕೊಳ್ಳುತಾ
ಅಷ್ಟರಲಿ ಈ ಕಡೆ ಆದೀತ ಒಂದ ವಿಪರೀತಾ
ರೋಹಿದಾಸ ಅರಣ್ಯದಲಿ ಸತ್ತಾಗ ತಾರಾಮತಿಗೆ
ಆದೀತ ಆ ಕಾಂತಾ ಭೂಮಿಗೆ ಹೊರ್‌ಳೂತಾ
ಪೂರ್ವಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ||೫ನೆಯ||

ಅಯ್ಯೊ ಮಗನೆ ವನವಾಸಾ ದುಃಖ ಎಲ್ಲಾ
ಮರತಿದ್ದೆ ನಾ ಹಿಡದ ನಿನ್ನ ಅಂತಾ ಹಲುಬುತಾ
ಗಂಡ ಅಗಲಿ ಹೋದ ಪೃಥ್ವಿನಾಥಾ
ರಾಜಾ ಆದಾವ ದುಡಿಯತಾನ ನೀರ ಹೊತ್ತಾ
ಮಾಡಿದಿ ಘಾತಾ ಮಾಡಿದಿ ಘಾತಾ
ತುಟಿ ಒಣಗಿ ನೆಲಾ ಬಗಟಿ ಕೂಸಿನ ಎದಿಗಪ್ಪಿ
ಹೌಹಾರಿ ಬಿದ್ದಾಳ ಮೂರ್ಛಿತಾ ಧರಣಿಗಿ
ಅಯ್ಯೋ ಕಂದಾ ಹ್ಯಾಂಗ ಇರಲಿ ನಿನ್ನ ಮರತಾ
ಸೂರ್ಯವಂಶ ಇಂದ ಆದೀತ ಸಮಾಪ್ತಾ
ನಡದಾಳ ಕೂಸಿನ ಹೊತ್ತಾ ಕಂದನ ಹೊತ್ತಾ
ಹಿಡದಾಳ ಸುಡಗಾಡದ ಹಾದಿ ಬಿಡಲಾರದ ಕರ್ಮಾ
ಬ್ರಹ್ಮ ಲಿಖಿತಾ ಆದೀತ ವ್ಯರ್ಥಾ ಆದೀತ ವ್ಯರ್ಥಾ
ಕಿಚ್ಚಿನೊಳಗ ಮುಂಚೆ ತಂದ ಹುಚ್ಚಿ ಹಾಂಗ
ಬಾಯಿ ತಗದ ಹಾಕ್ಯಾಳ ಅತಗೋತಾ
ಹರಿಶ್ವಂದ್ರ ಅಲ್ಲಿ ಕೂತಿದ್ದ ಕಾಯುತಾ
ಓಡಿ ಬಂದ ಹೆಣಾ ಜಗ್ಗಿ ಒಗದಾತಾ
ಹಾಸಲ ಕೊಡಿರಿ ಮುಂಚೆ ಎಲ್ಲಿಂದ ಬಂದಿದಿರಿ
ಯಾರ ಕೇಳಿ ಸುಡತೀರಿ ಪ್ರೇತಾ
ತಗೊಂಡ ಹೋಗಿರಿ ಅತ್ತಾ ಈ ಪ್ರೇತಾ
ತಾರಾಮತಿ ಅಂತಾಳ ಖೂನಾ ಹಿಡಿರಿ ಸ್ವಾಮಿ
ನಿಮ್ಮ ಸತಿ ನಾನ ನನ್ನ ಬಿಟ್ಟಿರಿ ಮರತಾ
ಇವ ಮಗ ರೋಹಿದಾಸ ನಿಮ್ಮ ಸುತಾ
ಇನ್ನಾರಾ ಅಪ್ಪಣಿ ಕೊಡಬೇಕರಿ ಪೂರ್ತಾ
ಹರಿಶ್ಚಂದ್ರ ಅಂತಾನ ಅದೆಲ್ಲಾ ಖರೆ
ನಮ್ಮ ಧನಿಯಾಗ ಏನ ಹೇಳಲಿ ಅಂತಾ
ಆಡಿರಿ ಮಾತಾ ಆಡಿರಿ ಮಾತಾ
ಹಾಸಿಲ ಕೊಡದ ಹೊರತ ಬಿಡುವದಿಲ್ಲಂತಾ
ಮುಂದ ಹೋಗಿ ತರಬ್ಯಾನ ಬೇಕಂತಾ
ಕೇಳಿ ತಾರಾಮತಿ ಆದಾಳ ಭ್ರಾಂತಾ
ಕಣ್ಣೀರ ಹೊಳಿ ಆಗಿ ಹರಿಯುತಾ
ಮಗಾ ಸತ್ತಗಿಂತ ಗಂಡ ಆಡಿದ ಮಾತಾ
ಗುಂಡ ಬಡದ್ಹಂಗ ಆಯಿತ ಖಚಿತಾ
ಮತ್ತ ಭೂಮಿಗಿ ಹೊರಳುತಾ ಹೊರಳುತಾ

||ಚಾಲ||

ಅಯ್ಯೋ ಮಗನೆ ನಿನ್ನ ಹಡದಾಂವ
ನಿನ್ನ ಮರತಾನ ಮರತಾನ
ಹೊರಗೆಳೆದನ ಕರುಣ ಇಲ್ಲದಾ
ಇನ್ನ ಕೊಡಲಿ ಹಾಸಲ ಎಲ್ಲಿಂದಾ
ಹಡದಾಂವ ಮಗನ ನೋಡಲಿಲ್ಲಾ
ಖೂನಾ ಹಿಡಿಯಲಿಲ್ಲಾ ಹಿಡಿಯಲಿಲ್ಲಾ
ಎನ್ನ ಕೈಯಾಗಿಲ್ಲ ಹಾಸಲ ಕೊಡುವುದಾ
ಏನ ಬ್ರಹ್ಮ ಬರಿಯ ಬರದಾ ಬರದಾ

||ಏರಚಾಲ||

ಹಡದ ತಾಯಿ ಅಲ್ಲೇನೋ ಮಗನೆ
ನನ್ನ ಬಿಟ್ಟ ಹೋಗುವದೇನು ಖುಸಿಯಲಾ
ಒಂದಿವಸ ಸುಖಾ ನಿನಗ ಕೊಡಲಿಲ್ಲಾ
ಕೈಯ ತಾರೋ ಮಗನೇ ಬಾ ತೊಡಿಮ್ಯಾಲಾ
ರಾಜ ಸಂಪತ್ತಿ ಇಷ್ಟೆಲ್ಲಾ ಹೋಗಿ ಕಟ್ಟ ಕಡೆಗೆ
ಹಿಂಗ ಆಗುವದಿತ್ತೇನೋ ಇತ್ತೇನೋ

||ಏರು||

ಅನ್ನಂಬುದು ಅಪರೂಪ ಆಯಿತೇನೋ
ಒಂದ ತುತ್ತಿಗೆ ಪಿರಿಯ ಆಗಿ ಕುಂತೇನೋ
ಸತ್ವಶೀಲ ಕುಲದೀಪ ಮಗನೆ ಇನ್ನೆಂದೋ
ಬಿಗಿದಪ್ಪಿ ಮುದ್ದ ಕೊಟ್ಟಾಳೋ ಅತ್ತಾಳೋ
ಪೂರ್ವ ಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ….||೬ನೆಯ ||

ಕರುಣಾ ಇಲ್ಲೋ ನಿನ್ನ ಹಡದಂವಗ
ಅಯ್ಯೋ ಮಗು ಬಾಯಿ ತೆರಯಿತೇನೋ
ಮೀನ ಮರಿಯಂಗ ನಾ ಮರಗತೇನೋ
ಹಲುಬಿ ಆ ಕಾರಕ ಬಾಯಿ ತೆರೆದರೂ
ನಿನ್ನ ಪಿತಗ ಕರುಣೆ ಇಲ್ಲೇನೋ
ಯಾಕ ಹಡದಿಹನೋ ನಿನ್ನನೋ
ಹಲುಬಿ ಹಲುಬಿ ಮಗನ ಬಳಲಿಕೆಯೊಳಗ
ತಾರಾಮತಿ ಕಣ್ಣು ಮುಚ್ಯಾಳೋ ತಾನೋ
ವಿಶ್ವಾಮಿತ್ರ ಅಲ್ಲಿ ಕಪಟ ಮಾಡಿದಾನೋ
ರೋಹಿದಾಸನ ಕರುಳ ಹಿರದ ತಗದಾನೋ
ನಿದ್ದಿ ಗಣ್ಣಿಲೆ ಮಲಗಿದ ತಾರಾಮತಿ ಕೊರಳಿಗಿ
ಕರುಳ ಸುತ್ಯಾನೋ ಬಾಯಾಗ ಹಾಕ್ಯಾನೋ
ಮರುದಿವಸ ಮುಂಜಾನೆ ಪುರಜನರ ನೋಡಿ
ಆಶ್ಚರ್ಯದಿಂದ ಅಂತಾರ ಇದ ಏನು
ವಿಶ್ವಾಮಿತ್ರ ರಾಜಾಗ ಹೋಗಿ ಹೇಳಿದನು
ನಿನ್ನ ಪುರದಲಿ ಬಂದೈತಿ ಒಂದ ಭೂತನು
ಒಳಗ ಸತ್ತಂತ ಪ್ರೇತ ಎಲ್ಲಾ ಅಂತಾಳು
ಹಿಡದ ಬಾಲಕರು ಆಕಿ ಆಹಾರವನು
ರಾಜ ಅಪ್ಪಣಿ ಕೊಟ್ಟನಾಗ ಕೊಟ್ಟನಾಗ
ಜನರು ತಾರಾಮತಿಗೆ ಕೊಟ್ಟಾರು ತಾಡಣವನು
ಎರಡು ರಟ್ಟಿಗೆ ಹಚ್ಯಾರ ಹಗ್ಗವನು
ಬೆನ್ನ ಮ್ಯಾಗ ಹಾಕತಾರ ಭಾರವನು
ಹೊಡದ ಬಡದ ಆಕಿನ ಹಿಡದ ಶೂಲಕ
ಹಾಕುವದಕ ಮಾಡಿದಾರ ಸಿದ್ಧವನು
ರಾಜಾ ಹೇಳತೇನು ಆಗುವ ದುಃಖವನು

||ಚಾಲ||

ಹರಿಶ್ವಂದ್ರನ ಕರದಾರ ಆ ಕ್ಷಣಕ
ಇಕಿನ್ನ ಕಡಿಯಲಾಕ ಕಡಿಯಲಾಕ
ರಾಜಾನಂತ ಜಲದ ಹುಕುಮಾ ಕೊಟ್ಟಿದಾ
ಹರಿಶ್ಚಂದ್ರ ಕತ್ತಿ ನೆಗವಿದಾ
ಇಷ್ಟೆಲ್ಲ ನಾರದ ನೋಡಿ ಆದಾನ ಗಡಬಿಡಿ
ವೈಕುಂಠಕ ಓಡಿಹೋಗಿ ಹೇಳಿದಾ
ನೋಡೋ ಹರಿ ಕಣ್ಣ ತೆರದಾ
ಎಷ್ಟ ಕಷ್ಟ ಬಿಡತಾರ ಭಕ್ತರಾ
ಸತ್ವ ಬಿಡಒಲ್ಲರು ನಿನ್ನ ಸ್ಮರಿಸುವರಾ
ಏಕ ಭಾವದಿಂದಾ ಏಕ ಭಾವದಿಂದಾ
ಹಾಳಾಯಿತೇನೋ ನಿನ್ನ ಬಿರದಾ

||ಏರಚಾಲ||

ಆಗ ಹರಿಯು ಎಚ್ಚರಾದಾನೂ
ಮೂವರಿಗೆ ಅಭಯ ಅಂದಾನೂ
ವಿಶ್ವಾಮಿತ್ರ ಕಾಡಿ ದಣದಾನೂ
ಏನ ಬೇಡತಿ ಬೇಡ ಅಂದಾನೂ
ಹರಿಶ್ಚಂದ್ರ ವರವ ಬೇಡ್ಯಾನೂ
ಆಗ ಹಿಡಿದ ಮುನಿಯ ಪಾದವನೂ

||ಏರು||

ತಾರಾಮತಿಯಂತ ಸತಿಯನೂ
ರೋಹಿದಾಸನಂತ ಮಗನನೂ
ವಶಿಷ್ಠ ಗುರು ಕಾಯುವ ಪ್ರಬಲಾ
ಕಾಡಾಂವ ಇರಬೇಕ ಕಡಗಿನ ಕಾಲಾ
ದಯಾ ಇರಲಿ ಬಾಳಗೋಪಾಳನ ಮ್ಯಾಲಾ
ಪೂರ್ವ ಕರ್ಮ ಹರಿ ಬ್ರಹ್ಮಾದಿಕರಿಗೆ
ಬಿಟ್ಟಿಲ್ಲ ಹತ್ತೀತ ದುಂಬಾಲಾ…….

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು