||ಪಲ್ಲ||

ಚಿತ್ತವಿಟ್ಟ ಕೇಳರೆಣ್ಣಾ ಒತ್ತಿ ಒತ್ತಿ ಹೇಳತೀನ ನಿತ್ಯನಾದ ಏಕಲವ್ಯನ ಕಥೆಯನ್ನಾ |
ವ್ಯಾಸ ಭಾರತದೊಳಗ ಬಂದಿರುವಂಥ ಘಟನೆಯನಾ |
ಎಲ್ಲಾರೊಪ್ಪುವಾಂಗ ಆಧಾರಿಟ್ಟ ಹೇಳುವೆನಾ ||
ವರ್ಣದ್ವೇಷದಿಂದ ದ್ರೋಣ ಶಿಷ್ಯನಾಗಿ ತಗೋಳಿಲ್ಲ ಸ್ವಾರ್ಥಕಾಗಿ ಕೃಷ್ಣ
ಕೊಂದ ಅವನನ್ನಾ |
ವ್ಯಾಧರಾಜನಾದ ಬಿಲ್ಲಗಾರ ಗುರುಭಕ್ತನ್ನಾ ||

ಚೌಕ – ೧

||ನುಡಿ||

ಅಸ್ತ್ರವಿದ್ಯಾ ಶಸ್ತ್ರವಿದ್ಯಾ ಶಾಸ್ತ್ರ ವಿಷಯ ಮೊದಲ ಮಾಡಿ ತ್ರಿಷಷ್ಟ ವಿದ್ಯಾದೊಳಗ
ನಿಪುಣ ದ್ರೋಣಾಚಾರಿ |
ಇದನ ತಿಳದಕೊಂಡ ಕರದ ತಂದ ಭೀಷ್ಮಾಚಾರಿ |
ಶಿಷ್ಯರಾಗಿ ಮೊಮ್ಮಕ್ಕಳನ್ನ ಇಟ್ಟ ಬರೋಬರಿ ||
ಪ್ರೀತನಾಗಿ ಭೀಷ್ಮಾಚಾರಿ ಭರದ್ವಾಜ ದ್ರೋಣನಿಗೆ ಮುತ್ತುರತ್ನ ದವಸಧಾನ್ಯ ಜರತಾರಿ |
ಕೊಟ್ಟ ಭವ್ಯವಾದ ಭವನವನ್ನ ಮನಸಾರಿ||೧||

ಒಂದು ದಿನಾ ದ್ರೋಣಾಚಾರಿ ಚಂದದಿಂದ ಶಿಷ್ಯರನೆಲ್ಲಾ ಒಂದ ಮಾಡಿ ಕರೆದ
ತಂದ ಪರಭಾರಿ |
ಅವರ ಮನಸಿನೊಳಗ ಆಶೆ ತುಂಬಿದ ಪರಿಪರಿ |
ಆಗ ಶಿಷ್ಯರೆಲ್ಲ ಹರುಷ ಆದ್ರ ಮಿತಿಮೀರಿ ||
ಗುಟ್ಟಿನಿಂದ ಒಂದ ಮಾತ ಅಷ್ಟೂರಿಗಿ ಕೇಳತಾನ ನಿಷ್ಟಾದಿಂದ ನನ್ನ ಆಶಾ
ತೀರಿಸುವಿರಿ |
ನಿಮ್ಮ ವಿಚಾರವನ್ನ ನೀವು ಏನ ಹೇಳುವಿರಿ||೨||

ಕೇಳಿಮಾತ ಕೌರವರೆಲ್ಲ ಹೇಳಲಿಲ್ಲ ಸುಮ್ಮನಾದ್ರ ತಾಳಹೊಡದಾಂಗ ಎದ್ದ
ನಿಂತ ಧನುರ್ಧಾರಿ ||
ಗುರು ದ್ರೋಣರಿಗೆ ಭಕ್ತಿಲಿಂದ ಮಾಡಿ ಮುಜುರಿ |
ತಾನು ಮಾಡುದಾಗಿ ವಚನಕೊಟ್ಟ ಪಾರ್ಥಸಾರಿ ||
ಹರುಷಗೊಂಡ ದ್ರೋಣಾಚಾರಿ ಪುರುಷವರಗ ಹೃದಯ ತುಂಬಿ ಹರಕಿ
ಕೊಟ್ಟ ಹೇಳತಾನ ನಿನ್ನ ಪರಿ |
ಯಾರು ಲೋಕದಲ್ಲಿ ಆಗದಂಗ ನಿನ್ನ ಸರಿ||೩||

||ಚಾಲ||

ಗುರು ಅರ್ಜುನನ ಮೆಚ್ಚಿಕೊಂಡ – ಮಾಡಲಾಕ ಅವನಪುಂಡ-ಆತನಿಗೆ
ವಚನ ಕೊಟ್ಟಾನು-ವಚನ ಕೊಟ್ಟಾನು ||೧||

ಅಶ್ವತ್ಥಾಮನ ತೋಡಿಗೆ ತೋಡಿ-ವಿದ್ಯಾ ಕಲಿಸಿದಾನ ಜೋಡಿ-
ಉಳಿಲಿಲ್ಲ ಕಸರ ಏನೇನು- ಕಸರ ಏನೇನು ||೨||

ಧನುರ್ವಿದ್ಯಾದಲ್ಲಿ ಪಾರ್ಥಬಲವಂತ-ಆದ ಅವಶಮರಂತ-
ಖಾಸ ದ್ರೋಣ ಶಿಷ್ಯ ಹೌದ ಅವನು-ಶಿಷ್ಯ ಹೌದ ಅವನು ||೩||

||ಕೂ.ಪ.||

ಕತ್ತಲದಾಗ ಒಮ್ಮೆ ಪಾರ್ಥ ತುತ್ತ ಹೋತ ಬಾಯ್ಗೆ ನಿರತ ಗತ್ತಿನಿಂದ
ತಿಳದಕೊಂಡ ಅರ್ಜುನಾ |
ತನ್ನ ಕಣ್ಣ ಕಾಣದ ದೂರವಿರುವ ವಸ್ತುವನಾ |
ಬೇಕಾದಾಂಗ ಹೊಡಿಯ ಬಹುದ ಬಾಣ ಅಂಬುದನಾ ||ವರ್ಣ||

ಚೌಕ – ೨

||ನುಡಿ||

ಕುರು ಪಾಂಡು ಪುತ್ರರೆಲ್ಲ ಗುರು ಕರುಣಾ ಹೊಂದು ಹಾಂಗ ಬ್ಯಾರೆ-
ರಾಜಕುಮಾರರು ಬಂದಾರಲ್ಲಿ |
ಸೂತಪುತ್ರ ಕರ್ಣ ಕೂಡಿಕೊಂಡ ಅವರಲ್ಲಿ ||
ಕುರುಪುತ್ರ ದುರ್ಯೋಧನ ಅವಗ ಬೆಂಬಲಿ ||
ಹಿಂಗ ಆತ ಅವರ ಜೋಡಿ ಅಂಗರಾಜ ಕೌರವಕೂಡಿ ವ್ಯಂಗ್ಯವಾಗಿ
ಪಾರ್ಥನ್ನ ಕಂಡಾರಲ್ಲಿ ||
ಮುಂದ ಬೆಳದ ಬಂತ ವೈರತನ ಅವರಲ್ಲಿ||೧||

ಧನುರ್ವಿದ್ಯಾ ಪ್ರಾಪ್ತಿಗಾಗಿ ವನದರಾಜ ಹಿರಣ್ಯಧನು ತನುಜನಾದ
ಏಕಲವ್ಯ ಬಂದಾನಲ್ಲಿ |
ಒಳೆ ಹರುಷದಿಂದ ವಿದ್ಯೆಗಾಗಿ ದ್ರೋಣನಲ್ಲಿ |
ಪಾದಾಮುಟ್ಟಿ ಮಾಡಿ ನಮಸ್ಕಾರ ಕೇಳ್ಯಾನಲ್ಲಿ ||
ದ್ರೋಣಾಚಾರಿ ಅವನ ನೋಡಿ ಬಾಣವಿದ್ಯಾದೊಳಗ ಇವಗ ಕಾಣುದಿಲ್ಲ
ಸರಿಸಮ ಸರ್ವರಲ್ಲಿ |
ಎಂದು ಪ್ರೀತನಾದ ಗುರುವರ್ಯ ಮನಸಿನಲ್ಲಿ||೨||

ಯೋಧನಾದ ಏಕಲವ್ಯ ವ್ಯಾಧರಾಜನೆಂದು ಕೇಳಿ ಭೇದಬುದ್ಧಿ ಬಂದಿತಾಗ
ದ್ರೋಣನಲ್ಲಿ |
ಅವನ ಶಿಷ್ಯನಾಗಿ ತಗೋಳಿಲ್ಲ ಅವ ತನ್ನಲ್ಲಿ |
ಇಟ್ಟ ಗುರುಭಕ್ತಿ ಏಕಲವ್ಯ ಆತನಲ್ಲಿ ||
ವನಕ ಹೋಗಿ ನಿಷಾದಪುತ್ರ ಮನಕ ಒಪ್ಪು ದ್ರೋಣ ಮೂರ್ತಿ
ಮಾಡಿಯಿಟ್ಟ ಒಂದು ಗಿಡದ ಬುಡದಲ್ಲಿ |
ಒಳೆ ನಿರತನಾದ ಅವ ತನ್ನ ವಿದ್ಯಾದಲ್ಲಿ||೩||

||ಚಾಲ||

ಗುರುಶೃದ್ಧಾ ಇತ್ತ ಅವಗ ಅಚಲ-ಇಲ್ಲ ಮನದಾಗ ಚಂಚಲ-
ಹೂಡಿಹೊಡಿಯತಿದ್ದ ಬಿಲ್ಲ ಬಾಣ-ಬಿಲ್ಲಬಾಣ  ||೧||

ಇಚ್ಛಾಶಕ್ತಿಗಿಲ್ಲ ಏನ ಇದರಾ-ಅದರಾಗ ಅವಂದ ನದರಾ-
ಸತತ ಅಭ್ಯಾಸ ಮಾಡಿದ ಜಾಣ-ಮಾಡಿದ ಜಾಣ  ||೨||

ಅರಿವೆಂಬುದು ಗುರುವಿದು ಸಿದ್ಧಾ-ಅರಿತವನವನೆ ಸಿದ್ಧಾ-
ಏಕಲವ್ಯಗ ಒಲದಿತ ಬಾಣ-ಒಲದಿತ ಬಾಣ  ||೩||

||ಕೂ.ಪ.||

ಗುರಿಹೂಡಿ ಬಾಣಬಿಡುವ ಮತ್ತ ಅದನ ತಿರುಗಿ ಪಡೆವ ಶರದ ಚಾಕಚಕ್ಯ
ಹತ್ತಿತವನ ಬೆನ್ನಾ |
ಹೀಂಗ ಅಸ್ತ್ರ-ಶಸ್ತ್ರ ವಿದ್ಯಾದಲಿ ಆದ ಸಂಪನ್ನಾ |
ಗುರು ದ್ರೋಣರನ್ನ ಮೀರಿನಿಂತ ವಿದ್ಯಾವನಾ ||ವರ್ಣ||

ಚೌಕ – ೩

||ನುಡಿ||

ಹಗಲ-ಇರುಳ ಬಿಟ್ಟು ಬಿಡದೆ ಬೇಗು ಬೆಳಗ ಎನ್ನದಲೆ ಜಾಗ್ರದಿಂದ
ಮಾಡತಿದ್ದ ನಿತ್ಯ ಸಾಧನಾ |
ಅಂಥಾ ಹೊತ್ತಿನ್ಯಾಗ ಒಂದದಿನ ಹೊಕ್ಕವನಾ |
ಬ್ಯಾಟಿ ನಾಯಿಗಳನ ಕೂಡಿಕೊಂಡ ಬಂದ ಅರ್ಜುನಾ ||
ಬ್ಯಾಟಿನಾಯಿ ಬೊಗಳಿಕೊಂತ ಕೆಟ್ಟಗುಲ್ಲ ಮಾಡಿಕೊಂತ-ನಟ್ಟ
ಅಡವಿಯಲ್ಲಿ ಬಂದು ಏಕಲವ್ಯನ |
ಚಿತ್ತ ಕಲಕಿ ಮಾಡಿದಾವ ಅವನ ಬಹಿರ್ಮುಖನ||೧||

ದಯಾಮಯಿ ಏಕಲವ್ಯ ಮಾಯಾದಿಂದ ಶಬ್ದಭೇದಿ ಆಯವಾದ
ಬಾಣಬಿಟ್ಟ ನಾಯಿಮ್ಯಾಗ |
ಆಗ ಏಳೂಬಾಣ ಬಂದನಟ್ಟು ಬಾಯ ಒಳಗ |
ನಾಯಿ ಓಡಿಕೊಂತ ಹೋತಬಾಯಿಮಾಡಿ ಮ್ಯಾಗ ||
ಧನುರ್ಧಾರಿ ಅರ್ಜುನಗ ನೆನದರೇನು ತಿಳಿಯಲಿಲ್ಲ ಏನು ಗಾಯವಿಲ್ಲ
ಬಾಣಬಿಟ್ಟ ಹ್ಯಾಂಗ |
ಇದನ ತಿಳಿಯಬೇಕ ಯಾವ ಅಂವ ಅಂಬುದೀಗ||೨||

ಮೆತ್ತಗಾಗಿ ನಾಯಿಬೆನ್ನ ಹತ್ತಿಕೊಂಡ ಅರ್ಜುನಾದಿ ಇತ್ತಬಂದ
ನೋಡತಾರ ಏಕಲವ್ಯನ |
ಕಪ್ಪುಬಣ್ಣವಿತ್ತ ಹೊಲಸ ಮೆಯ್ಯಮ್ಯಾಲ ಅವನ |
ಬಿಲ್ಲಬಾಣ ಕಯ್ಯೊಳಗ ಸುತ್ತಿ ಕೃಷ್ಣಾಜಿನ ||
ಕೇಳತಾನ ಯಾವ ಗುರು ಹೇಳ ನಮಗ ಕಲಿಸಿದಾರ ತಿಳಿಯಲಿಲ್ಲ ಇಲ್ಲಿಯತನ  ಇದರ ಕೂನ |
ಹೇಳಿದ ಏಕಲವ್ಯ ದ್ರೋಣಾಚಾರಿ ಹೆಸರವನ||೩||

||ಚಾಲ||ಕೇಳಿ ಪಾರ್ಥ ದ್ರೋಣ ಹೆಸರನ್ನ-ಮನದೊಳಗ ಆದ ಅವ ಖಿನ್ನ –
ನನಗರಿಯದ ಕಲಿಸಿದಾನ ಹ್ಯಾಂಗ-ಕಲಿಸಿದಾನ ಹ್ಯಾಂಗ  ||೧||

ಬಂದ ಹೇಳ್ಯಾನ ಗುರುವಿಗಿ ವೃತ್ತಾಂತ-ದ್ರೋಣಾಚಾರಿ ಆದಾನ ಭ್ರಾಂತ
ತಿಳಿಯದ ಹಿಡದ ಕುಂತಾನ ಗುಂಗ-ಕುಂತಾನ ಗುಂಗ  ||೨||

ಅವನ ಬೆಟ್ಟಿಗಿ ಮಾಡ್ಯಾನ ಆತೂರ-ಪಾರ್ಥನ ಕೂಡಿ ಗುರುವರಾ-
ಬಂದ್ರ ಅಡವಿ ಆರ‍್ಯಾಣ ಹಿಂಗ-ಆರ‍್ಯಾಣ ಹಿಂಗ  ||೩||

||ಕೂ.ಪ.||ಗುಡ್ಡ ಗುಡ್ಡ ಹಣ್ಣಿನ ಬನ ಅಡ್ಡ ಅಗಲ ಭ್ರಮರ ಸ್ವನ ಅಡ್ಯಾಡತಾವ
ಚಿಂಕಿ ಭಯ ಇಲ್ಲ ಏನೇನಾ  ||೪||

ಎಲ್ಲಿ ನೋಡಿದಲ್ಲಿ ಕಂಡಿತವರಿಗೆ ತಪಸಿನ ವನಾ |
ಅಂದಾರ ಮನಸಿನ್ಯಾಗ ಏಕಲವ್ಯ ಹ್ಯಾಂತಾ ದೈವಾನಾ ||ವರ್ಣ||

ಚೌಕ – ೪

||ನುಡಿ||

ಗುರುವಿನ ಕಂಡ ಏಕಲವ್ಯ ಎರಗಿದಾನ ಪಾದಮ್ಯಾಲ ಗುರುವು ನಾನು
ನಿನಗ ಹ್ಯಾಂಗ ಹೇಳ ಇದನ |
ದ್ರೋಣ ಕೇಳಿದಾಗ ವ್ಯಾಧ ಮೂರ್ತಿ ತೋರಿದಾನ |
ಹಿಂದ ನಡದ ಘಟನಾ ಎಲ್ಲಾ ಅವಗ ತಿಳಿಸಿದಾನ |
ಮೂರ್ತಿಕಂಡ ಹರುಷಗೊಂಡ ಪಣಾ ನೆನದ ಕರುಬಗೊಂಡ ಅರ್ಜುನಿವನ
ಮೀರುವ ಬಗೆಯ ಮನದಿ ನೆನದಾನು |
ಬಲಗೈ ಹಿರಿಯ ಬೆರಳ ದಕ್ಷಿಣವಾಗಿ ಬೇಕ ಅಂದಾನು||೧||

ಅಂದ ಮಾತ ಬಾಯಿಯಿಂದ ಬಂದಿದ್ದಿಲ್ಲ ಇನ್ನು ಹೊರಗ ಒಂದಿನಿತು
ಮರುಗಲಿಲ್ಲ ತನ್ನ ಮನದಾಗ |
ಬೆರಳ ಕೊಯ್ದ ಇಟ್ಟ ದ್ರೋಣಾಚಾರಿ ಪಾದಮ್ಯಾಗ |
ಅವನ ಕೀರ್ತಿಹೊತ ಗುರುಭಕ್ತಂತ ನಾಡಿನೊಳಗ ||
ಹಿರಿಯ ಬೆರಳ ಪಡೆದ ದ್ರೋಣ ಕಿರಿಯನಾದ ಭೂಮಿಮ್ಯಾಗ
ಬಿರುದು ನಿಷ್ಕಾಮಕರ್ಮಿಯೆಂಬುದಿವನಿಗಿನ್ಹ್ಯಾಂಗ
ಹಿಂಗ ಹಾಡsಹಗಲ ಮಾಡತೈತಿ ನೋಡ ಹಂಗ||೨||

ಏಕಲವ್ಯ ಪಾರ್ಥನಂತೆ ಲೊಕತಿಳಿಯೆ ರಾಯಗುವರ ವರ್ಗಕಲಹವೆಂಬುದಿ ಇಲ್ಲೆ ಇಲ್ಲಾ
ವ್ಯಾಧಾ ಜಾತಿಯಿಂದ ಕಡಿಮೆಯೆಂಬುದೊಂದೆ ಸೊಲ್ಲಾ |
ಅದೇ ವರ್ಣದ್ವೇಷವೆಂಬುದಾಗಿ ಬಂದಿತಲ್ಲಾ ||
ಹಿರಿಯ ಬೇರಳು ಹೋದರೇನು ತೋರ ಮಧ್ಯದಿಂದ ವ್ಯಾಧ ಸರಳ
ಹೂಡಿಹೊಡಿಯತಿದ್ದ ಹಿಡದ ಬಿಲ್ಲಾ
ಎಡಗೈ ಸಾಧನ ಮಾಡು ಪ್ರಸಂಗವಗ ಬಂದೆ ಇಲ್ಲಾ||೩||

||ಚಾಲ||

ಏಕಲವ್ಯ ವ್ಯಾಧರಾಜನಾಗಿದ್ದಾ-ಕೈ ಕಾಲಿಗಿ ಸೇವಾಂಕ ಇರಸಿದ್ದಾ
ಕಂಗಾಲಾಗುದಕ ಇಲ್ಲ ಕಾರಣೇನೇನಾ-ಇಲ್ಲ ಕಾರಣೇನೇನಾ ||೧||

ಹಣ್ಣ ಹಂಪಲ ಧ್ಯಾನ ಸರಕಾ-ಹಾಲ ಜೇನಿನ ಕೊಡಗಳು ನಿರಕಾ-
ಪರಕಿಂಜಲಕಾಶೆ ಮಾಡುದಿನ್ನೇನಾ-ಮಾಡುದಿನ್ನೇನಾ  ||೨||

ತಾಯಿ ಸೇವಾದಲ್ಲಿ ಅವ ನಿರತಾ-ಬೆರಳ ದುಃಖ ಅವ ಮರತಾ –
ಹಿಂಗಂತ ತನ್ನ ಹೆಸರ ಉಳಸಿದಾನ-ಹೆಸರ ಉಳಸಿದಾನ  ||೩||

||ಕೂ.ಪ.||

ಅರ್ಜುನನ ಹಿತಕ್ಕಾಗಿ ಹಿರಿಯ ಬೆರಳು ಪಡೆದು ದ್ರೋಣ ಅಜೇಯನಾಗಿ
ಮಾಡಿಬಿಟ್ಟ ಕ್ಷತ್ರಿಯನ್ನಾ
ಇದು ಏಕಲವ್ಯ ಕಥೆಯಲ್ಲಿ ಮೊದಲಿನದಿನ್ನಾ |
ಕೃಷ್ಣ ಮಾಡಿದಂಥ ಕಪಟವನು ಹೇಳುವೆನಾ  ||ವರ್ಣ||

ಚೌಕ – ೫

||ನುಡಿ||

ಪೂಜ್ಯನಾಗಿ ಏಕಲವ್ಯ ರಾಜ್ಯಭಾರ ಮಾಡತಿದ್ದ ಸಾಜವಾಗಿ ಕಳೆದಹೋದ ದಿನಮಾನಾ
ಮುಂದ ಕೇತುಮಂತ ಹುಟ್ಟಿಬಂದ ಬಲವಾನಾ ||
ಅವಗ ಕಲಿಂಗರಾಜ ಶ್ರುತಾಯುಧನ ಗೆಳೆತಾನಾ ||
ಮಹಾಭಾರತ ಯುದ್ಧದಲಿ ಮಹಾಯೋಧ ಕೇತುಮಂತ ವಾಹಿನಿಯ   ನಾಯಕನಾಗಿ ಸೆಣಸಿದಾನಾ
ಭೀಮ ಗದಾದಿಂದ ಯುದ್ಧದಲ್ಲಿ ಮರಣಹೊಂದ್ಯಾನಾ||೧||

ಬಿಟ್ಟು ಬಿಡದೆ ರಾತ್ರಿ ಹಗಲ ಪಟ್ಟ ಹಿಡದ ಬಿಲ್ಲವಿದ್ಯಾ ನಿಷ್ಟಾದಿಂದ
ಮಾಡುದನ್ನ ಕೃಷ್ಣ ಕಂಡಾನಾ
ಪಾರ್ಥ ಏಕಲವ್ಯನ ಜಯಸುದಕ್ಕ ಆಗದಂದಾನಾ |
ಅಂತೆ ಭಾರತಯುದ್ಧ ಪೂರ್ವದಲ್ಲಿ ಕೊಂದ ಹಾಕ್ಯಾನಾ||
ಜರಾಸಂದ ಚೇದಿರಾಜ ಪರಾಶಕ್ತಿಯಿಂದ ಕೊಂದ ಮೂರಜನಕ ತನ್ನ
ನಂಟನ್ನುಳಸಿದನಾ |
ಇದೇ ರಾಜನೀತಿ ಎಂಬುದನ್ನ ಸಾರಿದನಾ||೨||

ಸತ್ತರೇನು ಏಕಲವ್ಯ ನಿತ್ಯಕೀರ್ತಿ ಉಳಿಸಿಕೊಂಡ ಮತ್ತ ಹುಟ್ಟಿ ಬರೂದಕ್ಕ ಕಾರಣೇನಾ |
ಕೋಪಿ ಆಶ್ವತ್ಥಾಮನ ಸೇಡಿಗಾಗಿ ಜನ್ಮವೇನಾ |
ಹಿಂಗ ಕಲ್ಪನಾಮಾಡು ಪ್ರಜ್ಞಾವಂತರಿಗ್ಹೇಳುದೇನಾ ||
ವ್ಯಾಸ ಬರದ ಭಾರತದಾಗ ಮೀಸಲಾದ ಏಕಲವ್ಯ ದಾಸನಾಗಿ ಹುಟ್ಟಿಸುದು ಚಂದವೇನಾ |
ನಾಲಿಗಿ ಕುಲಾತಿಳಸು ಮಾತಯಿದು ಸುಳ್ಳಯೇನಾ||೩||

||ಚಾಲ||

ಏಕಲವ್ಯನ ಕಥೆಯನು ಮನಮುಟ್ಟಿ-ತಿಳಿದಂಗ ಹೇಳೇನಕಟ್ಟಿ
ಮತಿವಂತರು ಕೇಳ್ರಿ ಚಿತ್ತವಿಟ್ಟ-ಕೇಳ್ರಿ ಚಿತ್ತವಿಟ್ಟ ||೧||

ನಾ ಬಲ್ಲಿನಿ ಅನ್ನುದು ಬರಿಗುಲ್ಲಾ-ತಿಳಿದವರಿಗೆ ಹೇಳುವದಲ್ಲಾ-
ತುಂಬಿದ ಕೊಡ ತುಳುಕುದಿಲ್ಲಗಟ್ಟಿ-ತುಳುಕುದಿಲ್ಲಗಟ್ಟಿ  ||೨||

ಮಹಾಭಾರತದೊಳಗಿನ ಕಥಿಸಾರಾ-ಭಾರತ ಜನರಿದ ಬಲ್ಲವರಾ –
ವ್ಯಾಸ ಪ್ರಮಾಣ ಅಯ್ತಿ ಇಲ್ಲಿ ಗಟ್ಟಿ-ಅಯ್ತಿ ಇಲ್ಲಿ ಗಟ್ಟಿ  ||೩||

||ಕೂ.ಪ.||

ಅಂದಚಂದ ತುಂಗಳಗ್ರಾಮ ಕುಂದಲದೇವಿ ನಮಗ ಪ್ರಾಣ ವಂದ್ಯ
ಶಿವನಗೌಡ ವಸ್ತಾದನಸಿದನಾ |
ಕಂದ ಸಂಗಮೇಶ ಕವಿಯಾಗಿ ಜನಿಸಿದನಾ |
ಲೋಕ ವಂದ್ಯರಿಗೆ ಶಿರಬಾಗಿ ನಮಿಸಿದನಾ || ವರ್ಣ ||

ರಚನೆ : ಸಂಗಮೇಶ
ಕೃತಿ : ಚಾಪ ಹಾಕತೀನಿ ಡಪ್ಪಿನ ಮ್ಯಾಲ