||ಪಲ್ಲ||

ಈ ಶಾಸ್ತ್ರ ಕೇಳರಿ ಹೇಳತೀನ ಕೈ ಮುಗದಾ |
ಮಾಯಾ ಬಹಳ ಮಕ್ಕಳ ಮೇಲೆ ಧರಣಿ ಕೇಶವರಾಯಂದಾ ||

ಚೌಕ – ೧

||ನುಡಿ ||

ಮಾಡಿದ ಬದಕ ಮನಿಯಾಗ ಏನ ಫಲ ಇದ್ದಾ |
ಮಾರಿ ನೋಡಿದರಂತ ಜನರ ಹಿಂಗ ಅನ್ನೂದಾ||೧||

ಧರಣಿ ಅಂತಾಳ ಸ್ವಾಮಿ ಈಗ ಕೇಳರಿ ನಂದಾ |
ಇನ್ನ ಹ್ಯಾಂಗ ಮಾಡಬೇಕ ಕಾಸಿಗೆ ಹೋಗುದು ಮುಂದಾ||೨||

ಮಕ್ಕಳಿಲ್ಲದ ಭೋಗಾ ಏನ ಉಪಾಯಕ ಆಗೂದಾ||೩||

||ಚಾಲ-೧||

ದಾನ ಮಾಡರಿ ಬೆಳ್ಳಿ ಬಂಗಾರ-ಮುತ್ತ ಮನಿಮಾರ-ಎಲ್ಲಾ ಲೂಟಿ |
ಮಡದಿ ಹೇಳತಾಳ ಕೇಶವರಾಯಗ ಗಟ್ಟಿ||೧||

ಮನ ಒಂದs ಆದರ – ಏಕ ಜೀವಾ ಇದ್ದರ – ಬ್ಯಾಡ ಖೊಟ್ಟಿ |
ಮಾಡಿದ ಬದಕ ಆಗಲಿ ಲೂಟಿ||೨||

||ಚಾಲ-೨||

ದಾನಾ ಮಾಡುದು ಬೆಳ್ಳಿ ಬಂಗಾರ ತಾವು ನಿಂತ ನಿರಧಾರ | ಸಂಬ ಹರಹರಾ |
ಅವ್ರು ದಾರಿ ಹಿಡದಾರು ಕಾಶಿ ರಾಮೇಶ್ವರ ಮಕ್ಕಳ ಬೇಡುತಾರಾ | ಸಂಬ ಹರಹರಾ |

||ಕೂ.ಪ.||

ವನವಾಸದ ಮಾತಾ ಇನ್ನ ಕೇಳರಿ ಮುಂದಾ || ಮಾಯಾ ||

ಚೌಕ – ೨

||ನುಡಿ||

ಬಾಣ ಬಿಲ್ಲ ತಗೊಂಡ ಕೇಶವರಾಯ ಕೈಯಾಗ |
ಒಂದ ಸರ್ಪ ಬಂದ ನಿಂತಿತ ಹಾದಿಯ ಮ್ಯಾಗ||೧||

ಧರಣಿ ಅಂತಾಳ ನಮಗ ಶಕುನ ಯಾಕ ಆತ ಹಿಂಗ |
ಹೊಡಿ ಬಾಣ ಹೆಡಿ ಮ್ಯಾಗ ಕಡದ ಬೀಳಲಿ ತೆಳಗ||೨||

ಹೆದಿ ಏರಿಸಿ ಬಾಣಾ ಬಿಟ್ಟ ಸರ್ಪಿನ ಮ್ಯಾಗ |
ಸಾವ ಇತ್ತ ಶೇಷಂದ ಕೇಶವರಾಯನ ಕೈಯಾಗ||೩||

||ಚಾಲ-೧||ಲಗು ಮಾಡಿ ಕಿತ್ತಾರೊ ಬಾಣಾ |
ಬಾಳ ಹತಿ ಆದಿತೊ ನನ್ನ ಪ್ರಾಣ||೧||

ನೀವು ಬಂದ ಮಾಡಿದಿರಿ ಮರಣಾ |
ಶಾಪ ತಗೋರಿ ಹಿಡಿ ಮಣ್ಣಾ||೨||

||ಚಾಲ-೨||

ಶಾಪ ಕೊಟ್ಟಾನ ಆವಾಗ-ಅವರ ಉಡಿಯಾಗ-ಕೇಶವರಾಯಾಗ |
ಸಂಬಹರಹರಾ |
ಶೇಷಬಿದ್ದ ಕೇಳ್ರಿ ಆವಾಗ-ಭೂಮಿಯ ಮ್ಯಾಗ-ದೋಷ ಅವರಿಗೆ |
ಸಂಬಹರಹರಾ ||

||ಕೂ.ಪ.||

ಕೆಡಗಾಲ ಹ್ವಾರೆ ಕಾಡುದ ಬಂದಿತ ಮುಂದಾ || ಮಾಯಾ ||
ಚೌಕ – ೩

||ನುಡಿ||ಮಕ್ಕಳಿಲ್ಲದ ಜಲ್ಮ ಯಾತಕ ಬೇಕರಿ ಜೋಡಾ |
ಮನಾ ಬಿಚ್ಚಿ ಮಾತಾಡತಾಳ ಧರಣಿ ಕೇಶವ ರಾಯನ ಗೂಡಾ||೧||

ಅವರ ಮಾತಿಗಿ ಚಿಗರಿ ಬಂದ ಹಾದಿತ ಅಡ್ಡಾ |
ಸಿಟ್ಟ ಆದಾಳ ಧರಣಿ ತನ್ನ ಕಣ್ಣಿಲೆ ಕಂಡಾ||೨||

ಜೀವ ಬಾಣ ಹೊಡೀರಿ ಗೋಣ ಹಾರಲಿ ರುಂಡಾ |
ಭರಭರಾ ಬಾಣಬಿಟ್ಟ ಮಾಡಿದ ಎರಡ ತುಂಡಾ||೩||

||ಚಾಲ-೧||

ಬಳಲಿಸಿ ಬಿದ್ದಿತೊ ಮರಿಗಿ |
ಸರಾಪ ಕೊಟ್ಟಿತ ಅವರೀಗಿ||೧||

ಮುಂದ ಶ್ರಾವಣ ಹುಟ್ಟುವ ಧರಣಿಗಿ |
ನನ್ನಂಗ ಬಾಣ ಬಡಿಲಿ ಅವನ ಎದಿಗಿ||೨||

||ಚಾಲ-೨||

ಇದ ಒಂದು ಶಾಪ ನಿನಗ-ಚಿಗರಿಯ ಶಾಪಕಟ್ಟ ಪದರಾಗ-ಸಂಬ ಹರಹರಾ ||
ಬಾಯಿ ಕಚ್ಚಿತ ಕಪಕಪಾ-ಪ್ರಾಣ ಹೋತ ಗಪ್ಪಾ-ಅವರ ಕೈಯಾಗ | ಸಂಬ ಹರಹರಾ ||

||ಕೂ.ಪ.||

ದೋಷಕ ಗುರಿ ಆದಾರು ಎರಡು ಜೀವಗಳ ಹೊಡದಾ || ಮಾಯಾ ||

ಚೌಕ – ೪

||ನುಡಿ||

ಮತಾಡುತ ಹೋದಾರು ಗಿಡದ ನೆರಳವ ನೋಡಿ |
ಮಂಗ್ಯಾ ಮಗನ ಆಡಸ್ತಿತ್ತ ಟೊಂಗಿ ಮ್ಯಾಗ ಜಿಗದಾಡಿ||೧||

ಮನಕ ಹರುಷ ಆದಾಳು ಧರಣಿ ಆವಾಗ ನೋಡಿ |
ಆ ಮಂಗ್ಯಾನ ಕಡಿಂದ ಕೂಸಿನ ತಗೋರಿ ಈ ಕಡೆ||೨||

ಸರ್ಪಬಾಣ ಬಿಟ್ಟಾನು ಕೂಸಿನ ತಾಯಿಯ ಕಡೆ |
ಕೂಸಿನ ಅಡ್ಡ ಹಿಡದಿತೋ ಅವನ ಕಡೆ ಮಾಡಿ||೩||

||ಚಾಲ-೧||

ನನ್ನ ಮಲಿ ಉಣ್ಣ ತಿದ್ದ ಸಣ್ಣ ಬಾಲಾ |
ಬಂದ ಬಾಣ ಬಡಿತಾವ ಬೆನ್ನ ಮ್ಯಾಲಾ||೧||

ತಣ್ಣಗಾದು ಕೂಸಿನ ಕೈ ಕಾಲಾ |
ತಾಯಿ ಬಿದ್ದ ಅಳತಾಳ ಬೆನ್ನಮ್ಯಾಲಾ||೨||

||ಚಾಲ-೨||

ನನ್ನ ಮಗನದ ಹೋತ ಪ್ರಾಣಾ-ಬಿದ್ದಿತ ಹೆಣಾ-ಅಳತಾಳ ಗಳಗಳಾ |
ಸಂಬ ಹರಹರಾ ||

ನಾ ಶಾಪ ಕೊಡತೀನ ಕೇಳ ಅಣ್ಣಾ-ಹೋಗಲಿ ನಿಮ್ಮ ಕಣ್ಣಾ-ಆಗಲಿ
ಕಂಗಳಾ | ಸಂಬ ಹರಹರಾ ||

||ಕೂ.ಪ.||

ಊರ ದೂರ ಮಹಾದೇವನ ಗುಡಿಗೆ ಹೋದಾರು ಮುಂದಾ || ಮಾಯಾ ||

ಚೌಕ – ೫

||ನುಡಿ||

ಮುಕ್ಕಾಮ ಮಾಡಿದಾರ ಮಹಾದೇವನ ಗುಡಿಗೆ ಹೋಗಿ |
ಕೈ ಕಾಲ ಹೋದಾವ ಕಣ್ಣಗೊಂಬಿ ಮತ್ತ ತಿರಗಿ||೧||

ಬಾಳ ದುಃಖ ಮಾಡತಾಳ ನಸೀಬ ಕಮ್ಮ ಇಲ್ಲೀಗಿ |
ಮಹಾರಾಜನ ಪೂಜಿಗಿ ಗೊರವ ಬಂದಾನ ಅಲ್ಲೀಗಿ||೨||

ತಮ್ಮ ಹಾಸಿಗಿ ಒಳಗ ಹೇಸಿಕಿ ಹೊರಕಡಿಗಿ |
ಗೊರವ ಸಿಟ್ಟ ಮಾಡತಾನ ಎಲ್ಲಿಂದ ಬಂದಾವ ಗುಡಿಗಿ||೩||

||ಚಾಲ-೧||

ಧರಣಿ ಹೇಳತಾಳ ಕೇಶವರಾಯಗ |
ಕಾಲ ಇದ್ರ ಹೋಗತಿದ್ದೀವ ಹೊರಗ||೧||

ಕಳಕಳಿ ಬಂದಿತ ಆ ಗೊರವಗ |
ಯಾರವ್ವ ತಾಯಿ ನೀ ಹೇಳ ನಮಗ||೨||

||ಚಾಲ-೨||

ಧರಣಿ ಹೇಳ್ಯಾಳ ಗೊರವನ ಮುಂದ-ಆಗ ಬಾಯಿ ತೆರದ | ಸಂಬ ಹರಹರಾ |
ಆಗ ಹಾಸಿಗಿ ತಗದ ತೊಳದ-ಬಳದ ಮುನಿಗಿ ಹೋದ | ಸಂಬ ಹರಹರಾ ||

||ಕೂ.ಪ. ||

ಅಡಗಿ ದಿಡಗ ಮಾಡಿ ನೈವೇದ್ಯ ತಗೊಂಡ ಬಂದಾ || ಮಾಯಾ ||

ಚೌಕ – ೬

||ನುಡಿ||

ಬಸವಂತಿ ಅದಾಳು ಧರಣಿ ಕಣ್ಣ ಹೋದಿಂದ |
ಒಂಬತ್ತು ತಿಂಗಳ ತುಂಬಿ ಹಡದಾಳು ಅಂದ||೧||

ಕೈಯಾಡಿಸಿ ನೋಡಿ ಕೇಶವರಾಯಾ ಕಣ್ಣಿಗಿ ನೀರ ತಂದಾ |
ಮಗ ಎಂಥಾವ ಹುಟ್ಯಾನ ಮಾರಿ ನೋಡಲಿಲ್ಲ ಅವಂದಾ||೨||

ಬೆಳಗಿನ ತಾಸ ರಾತ್ರಿ ಗೊರವ ಎದ್ದ ಬಂದಾ |
ಇದ ಏನ ಸೋಜಿಗ ಅಂತ ಕೈ ಮುಗದಾ||೩||

||ಚಾಲ-೧||

ನೀರ ಇಟ್ಟ ಎರದಾನ ಮಗನಾ |
ಗುಡಿ ಸಾರಿಸಿ ಸಾಹಿತ ಮಾಡಿ ತಾನಾ||೧||

ಕೇಶವರಾಯ ಕರದಾನ ಗೊರವನಾ |
ಜೋಕಿ ಮಾಡಂದ ತನ್ನ ಮಗನಾ||೨||

||ಚಾಲ-೨||

ಅಂತ್ರ ಫಲಾ ದೇವ್ರ ಕೊಟ್ಟಾನ-ಗೊರವ ಓದಾನ-ತನ್ನ ಮನೀಗಿ | ಸಂಬ ಹರಹರಾ ||
ಗೊರವಗ ಇದ್ರ ಇಬ್ರ ಹೆಂಡರ-ಮಕ್ಕಳಿಲ್ಲದವರ ನಿಂತ್ರ ಬಾಗಿಲಿಗಿ | ಸಂಬ ಹರಹರಾ ||

||ಕೂ.ಪ.||

ಬಾಳ ಪ್ರೀತಿಲಿಂದ ತಗೊಂಡ್ರ ಅವನ ಕೈಯಂದಾ || ಮಾಯಾ ||

ಚೌಕ – ೭

||ನುಡಿ||

ಹೊತ್ಗಿ ತಗಿಸಿ ನೋಡಿ ಹೆಸರ ಇಟ್ಟಾರ ಶ್ರವಣಾ |
ಹೋಲಿಕಿ ನೋಡಿದರ ಚಲುವಿಕಿ ಸೂರ್ಯನ ಕಿರಣಾ||೧||

ಒಂಬತ್ತ ವರ್ಷ ತುಂಬಿ ಹರಿ ಬಂದಿತೊ ಬಣ್ಣಾ |
ಹಡದ ತಾಯಿ ತಂದಿದ ಗೊತ್ತ ಇಲ್ಲ ಶ್ರವಣಾ||೨||

ಗೊರವ ಹೇಳತಾನ ಹೆಂಡತಿಗಿ ತಗದ ಒಂದ ಕಲ್ಪನಾ |
ಗುಡಿಗಿ ಹಚಿಗುಡಬ್ಯಾಡ ಗುಲಾಮ ಬಾಳ ಶ್ರವಣಾ||೩||

||ಚಾಲ-೧||

ಇಷ್ಟ ಹೇಳಿ ಹ್ವಾದ ಊರೀಗಿ |
ಹೆಂಡತಿ ಹೂ ತಂದಾಳ ದೇವ್ರೀಗಿ||೧||

ಶ್ರವಣ ಬಂದಾನ ಇದರೀಗಿ |
ತಾರವ್ವ ಹೋಗತೀನ ಗುಡಿಗಿ||೨||

||ಚಾಲ-೨||

ತಾನಾಗಿ ದೇವರಿಗಿ ಹೋದ-ಗುಡ್ಯಾಗ ನೀವ್ಯಾರಂದ-ನೋಡಿ ಸಿಟ್ಟಾದ |
ಸಂಬ ಹರಹರಾ ||
ಕಾಲ ಹಿಡದ ಎಳದ ಒಗದ-ಪೂಜಿ ಮಾಡಿsದ-ತಿರಗಿ ತಾ ಬಂದ |
ಸಂಬ ಹರಹರಾ ||

||ಕೂ.ಪ.||

ಗೊರವ ಬಂದ ಕೇಳತಾನ ಪೂಜಿಗಿ ಯಾರ ಹೋಗಿದ್ರಿ ಇಂದಾ || ಮಾಯಾ ||

ಚೌಕ – ೮

||ನುಡಿ||ಇಷ್ಟ ಕೇಳಿ ಗೊರವ ತಿರಗಿ ಬಂದಾನ ಹೊರಳಿ |
ಬ್ಯಾಸಗಿ ಬಿಸಿಲ ಆರತಾಸ ಮಧ್ಯಾನ ವ್ಯಾಳಿ||೧||

ತ್ಯಾಕ್ಕಿಲೆ ಹಾದ ಓದಾನು ಕೈಯೆಲ್ಲಾ ಎದ್ದಾವ ಗುರಳಿ |
ನೀರ ಕುಡಿಸಿ ಇಬ್ಬರಿಗಿ ಬೀಸತಾನ ಆಗ ಗಾಳಿ||೨||

ಅವನ ಬಿಟ್ಟ ಬಂದ ಮನ್ಯಾಗ ಮಡದ್ಯಾರಿಗಿ ಹೇಳಿ |
ಹಡದವರನ ನೋಡಲಿಲ್ಲ ನಮ್ಮನೇನ ನೋಡತಾನ ನಾಳಿ||೩||

||ಚಾಲ-೧||

ಶ್ರವಣ ತಂದಾನ ಕಣ್ಣಿಗಿ ನೀರಾ |
ಯಾರವ್ವ ನನ್ನ ಹಡದವರಾ||೧||

ನಾವು ಅಲ್ಲ ನಿನ್ನ ಹಡದವರಾ |
ನಿನ್ನ ತಾಯಿ-ತಂದಿ ನೋಡ ಅವರಾ||೨||

||ಚಾಲ-೨||

ಆವಾಗ ಕಾವಡಿ ಮಾಡಿ-ತಾಯಿ ತಂದಿನ ಕೂಡಿ-ಹೆಗಲಿಗೆ ಹಾಕಿದ್ದಾ |
ಸಂಬ ಹರಹರಾ ||
ತಾಯಿ ತಂದಿಗಿ ಅದು ನೀರಡಿಕಿ-ಕಾವಡಿ ಗಿಡಿಕ ಹಾಕಿ ನಿರೀಗೆ ಹೋದಾ |
ಸಂಬ ಹರಹರಾ ||

||ಕೂ.ಪ.||

ಹುಡಿಕಿ ಗಂಟಹಾಕಿ ಯಲ್ಲಾ ಕೂನ ಮಾಡಿದ್ದಾ || ಮಾಯಾ ||

ಚೌಕ – ೯

||ನುಡಿ||

ನೀರ ತುಂಬತಿದ್ದ ಬಾಣ ಒಗದ ದಶರಥ ನೋಡಿ |
ರಾಮ ಅಂಬು ಶಬ್ದ ಕೇಳಿ ಮತ್ತ ಬಂದಾನ ಓಡಿ||೧||

ಮರಣ ಹೊಂದೀನ ಮಾವಾ ಮಾತ ಕೇಳ ಒಂದ ನುಡಿ |
ನಮ್ಮ ತಾಯಿ-ತಂದಿಗಿ ನೀರ ಒಯ್ಯ ಲಗುಮಾಡಿ||೨||

ಮಾತಾಡದ ನೀರ ಓದ ಬಾಯಿಗಿ ಹಚ್ಯಾನ ಗಿಂಡಿ |
ನೀರ ಕುಡಸತಿಯಲ್ಲಪ್ಪ ಯಾಕ ಬ್ಯಾಸರಕಿ ಮಾಡಿ||೩||

||ಚಾಲ-೧||

ನಾ ಮಗಾ ಅಲ್ಲವ್ವಾ ದಶರಥಾ |
ಶ್ರವಣಗ ಬಾಣ ಬಡದಿತ್ತಾ||೧||

ಕಾವಡಿ ಕಟ್ಟಿ ಹೆಗಲ ಮ್ಯಾಗ ಹೊತ್ತಾ |
ಶ್ರವಣನ ಹಂತೇಲಿ ಇಳಸಿದ ಮತ್ತಾ||೨||

||ಚಾಲ-೨||

ಶ್ರವಣ ಕೇಳಿದ ಆವಾಗ-ಸುಡಗಾಡ ಇಲ್ಲದ ಜಾಗ-ಕಿಚ್ಚಕುಡ ಅಂದಾ ಸಂಬ ಹರಹರಾ
ಬಾಣಕಿತ್ತ ಇಟ್ಟ ತೆಳಗ-ಸುಡಗಾಡ ಇಲ್ಲದ ಜಾಗ-ದಶರಥ ತಿರಗಿ
ತಾ ಬಂದ | ಸಂಬ ಹರಹರಾ

||ಕೂ.ಪ.||

ತನ್ನ ಅಂಗೈ ಒಳಗ ಶರಗ ಒಡ್ಡ್ಯಾನು ತಂದಾ || ಮಾಯಾ ||

ಚೌಕ – ೧೦

||ನುಡಿ||

ಭಸ್ಮ ಮಾಡಿದ ದಶರಥ ತನ್ನ ಅಂಗೈಯಂದಾ |
ಪಿಂಡ ಉತ್ಪತ್ತಿ ರಾಮಾಯಣ ಆಗೂದು ಮುಂದಾ||೧||

ಬಲ್ಲವರ ಕೇಳರಿ ನೀವು ತೇರದಾಳಕ ಬಂದಾ |
ಪ್ರಭು ಸ್ವಾಮಿ ಜಾತರಿ ಕಡಿ ಸೋಮವಾರ ಆಗೂದಾ||೨||

ವಸ್ತಾದ ಅಣ್ಣಾರಾಮ ಹಸ್ತ ಇಟ್ಟಾನು ಚಂದಾ |
ಬಸಲಿಂಗ ಹೇಳ್ಯಾನು ಶಾಸ್ತ್ರ ಶ್ರವಣನ ಸಂದಾ||೩||

||ಚಾಲ-೧||

ಕೇಶವ ದಶರಥಗ ಅಂದ ಒಂದ ನುಡಿ |
ಮಗಾ ಅಂದ ಸತ್ತಿಯೊ ನೆನಪ ಮಾಡಿ||೧||

ತಿರತಿರಗಿ ಹುಡುಗುರದ ನೋಡಿ |
ನಾಗರಹಾವ ಬಂದಾಂಗ ಭೋರ‍್ಯಾಡಿ||೨||

||ಚಾಲ-೨||

ಶಿವಲಿಂಗ ಚನ್ನನ ಅಕ್ಷರಾ – ಅವರ ವಿಸ್ತಾರ-ಸೋಸಿದ ಸಾರಾ | ಸಂಬ ಹರಹರಾ |
ಪ್ರಭು ಮಾಡಿದ ಕೇಳ್ರಿ ಹೊಸತರಾ-ಹಾಡ ತರತರಾ-ಚೊಕ್ಕ ಬಂಗಾರಾ-
ಸಂಬ ಹರಹರಾ ||

||ಕೂ.ಪ.||

ಹರತ ಅಣ್ಣಾರಾಮ ಹಾಡೂದ ಕೇಳ್ರಿ ಒಳೆ ಚಂದಾ || ಮಾಯಾ ||

ರಚನೆ : ಹರಿತ ಅಣ್ಣಾರಾಮ
ಕೃತಿ : ಚಾಪ ಹಾಕತೀವಿ ದಪ್ಪಿನ ಮ್ಯಾಲ