||ಪಲ್ಲ||

ಮಾರನಾಟಕೆ ತಾನು ಬಾರದೆ ನಿಂತಾನು ಸತ್ಯಭಾಮಾ ಮಾಡೂಳು ಮಾಶೋಕವು |
ಎಂದಮ್ಮಾ ಬಂದಾನು ವಾಸುದೇವಕಂದನು ಚಂದಮ್ಮ ತೊರದು ನರಲೋಕವು |
ಇಡಲಾರೆ ಅಳಂಕಾರ ನೋಡಲಾರೆ ಶೃಂಗಾರ ಬಿಡಲಾರೆ ಕಾಣದೆ ಸ್ವಾಮಿ ಮುಖವು |
ಮನಸಿಗೆ ನಿದ್ರಿಲ್ಲ ನೆನಸು ಸಮಯದೊಳು ಕನಸಿನ ಪರಿಯಂತೆ ಈ ದುಃಖವು |
ಸ್ತ್ರೀಯರ ಜಲ್ಮಕ ಇಲ್ಲ ಸುಖವು ||

ಚೌಕ – ೧

||ನುಡಿ||

ಅಷ್ಟ ಐಶ್ವರ್ಯ ಇಷ್ಟಿದ್ದ ಏನ ಫಲಾ ಕಷ್ಟವ ಪಡಬೇಕ ಎಷ್ಟಮ್ಮಾ
ಗೊಲ್ಲರ ಹುಡಿಗಿಂವ ಅಲ್ಲದ ಮಾಡಾಂವ ಹಾಲಮಸರ ಕುಡದಂವ ನಷ್ಟಮ್ಮಾ |
ಮ್ಯಾಲ ತುಡಗರ ಒಳಗ ಕೋಲಾಟ ಆಡಾಂವ ಅಲಲ ಬಿಡಾಂವಲ್ಲ ಸ್ಪಷ್ಟಮ್ಮಾ |
ಇಂದು ಗೋವಿಂದಗ ತಂದು ಮುಕುಂದಗ ಚಂದವಾಗಿ ತೋರಿದರ ಸ್ರಷ್ಟಮ್ಮಾ
ಈತಗ ಕುಲಯಿಲ್ಲ ಭ್ರಷ್ಟಮ್ಮಾ||೧||

ಪಾಂಡವರನ್ನ ಕಡಿಹುಟ್ಟು ದೊಡ್ಡವರನ್ನ ಮಾಡಿಟ್ಟ ಕಾಡಿದವರ್ನ
ಕಾಯಲಿಲ್ಲ ಕ್ಯಾಟ್ಟಮ್ಮಾ |
ಶ್ರೀಪಾಲ ವಕ್ಕರದಂತೆ ಅನ್ಯಾಯ ಮಾಡದಂತೆ ಆಶೀರ್ವಾದ ದೈತ್ಯಗ ಕೊಟ್ಟಮ್ಮಾ |
ಮೈಸಾಬ ಇದ್ದಲ್ಲಿ ಶಿಶುಪಾಲ ಬಂದಲ್ಲಿ ಸುದರ್ಶನ ಅವನ ಮ್ಯಾಲ ಬಿಟ್ಟಮ್ಮಾ |
ಕಲ್ಲ ಮನಸಿನಾಂವ ನಿಲ್ಲಲಾರದೆ ಜೀಂವ ಒಲ್ಲೆಂದು ಹೋಗದೆ ಸೃಟ್ಟಮ್ಮ
ಬರವಲ್ಲ ಇಂವ ಬಲ ವಟ್ಟಮ್ಮಾ||೨||

ಹಿಂಡ ಗೋಪ್ಯಾರ ಒಳಗ ಪುಂಡ ಅದಾನ ಇವನ ಕಂಡ್ರ ಬರತತಿ ಸಿಟ್ಟಮ್ಮಾ
ಆದಿ ಅನಾದಿ ಬಾಡಿರಿ  ಬುನಾದಿ ದೇವ-ದೇವರಿಗೆಲ್ಲಾ ಇವ ದಿಟ್ಟಮ್ಮಾ
ಮಾನ ಅಪಮಾನ ಆತಗ ಸವನಾ ಅಭಿಮಾನ ಅವತಾರ ತೊಟ್ಟಮ್ಮಾ |
ವರಗುರು ತಾ ಖರೆ ಮರುಗುತ ಕೂತಿದ್ದ ಭೃಗುಮುನಿ ಲಾತ್ತಿ ಪೆಟ್ಟಮ್ಮಾ |
ಇಷ್ಟೆಲ್ಲಾ ತಾಳಿಕೊಂಡ ಬಂಟಮ್ಮಾ||೩||

||ಚಾಲ||

ಕೆಟ್ಟ ಸಂವತಿಮನಿ ಸಿಟ್ಟಿಲಿ ಸೇರಿದ ಬಿಟ್ಟಕೊಟ್ಟ ಬೆರಗಾಗಿ ಹೋದಮ್ಮಾ |
ಕಪಟ ನಾಟಕನ ಆಟವ ತಿಳಿಯದು ಲಂಪಟ ಅವಳಿಗೆ ಆದಮ್ಮಾ |
ಸರಸದಿಂದಲೆ ಕಮಲ ನೇತ್ರಗೆ ಪತ್ರವ ಬರಿಬೇಕವೇಳ ಚಂದಮ್ಮಾ ||

||ಕೂ.ಪ.||

ಅರಗಿಳಿ ಕೈಯಲ್ಲಿ ಪತ್ರವ ಕಳವೂನು ಉತ್ರವ ತಿಳವೂನು ಮಾಟಕವು || ಎಂದಮ್ಮಾ ||

ಚೌಕ – ೨

||ನುಡಿ||

ಶ್ರೀ ಲೋಕದಲ್ಲಿ ನಾಥ ಇರುವಂಥ ಪಾರಿಜಾತ ವರಪುತ್ರ ಆತಗ ಮುಟ್ಟಿಸಿದನೆ |
ನಾಕ ಲೋಕದ ಪುಷ್ಪ ನಾರದಮುನಿ ತಂದು ವಾಸುದೇವ ಕಂದಗ ಮುಟ್ಟಿಸಿದನೆ |
ನರಹರಿ ಪ್ರೇಮದಿ ನಾರಿ ರುಕ್ಮಿಣಿಯ ತುರಬಿನಲಿ ಪುಷ್ಪ ಇಡಸಿದನೆ |
ಅರಮನಿಯೊಳು ಬಂದು ವರಮುನಿ ಹೇಳಿ ಹೋದ ವರ್ಮಕ ಧರ್ಮವ ಮಾಡ್ಸಿದನೆ |
ಅಂದಿಗಿ ಎನ್ನ ಮನ ಒಡಸಿದನೆ||೧||

ಹತ್ತ ಅವತಾರ ತಗೊಂಡ ಸರ್ವೆಲ್ಲಾ ಸಾಲ ದೈತ್ಯರನ ಓಡಸಿದನೆ |
ಮಚ್ಛಕೂರ್ಮವರಾಹ ನರಸಿಂಹ ಅವತಾರ ವಾಮನ ‘ಬಳಿಗಿ’ ಮಣ್ಣ ಕುಡಸಿದನೆ |
ಸೃಷ್ಟಿಗಿ ಪರಶುರಾಮ ನಿಷ್ಕಪಟ ರಘುರಾಮ ಎಂಟನೆಯವ
ಗೋಪಾಲ ಗೋಕುಲ ಕೆಡಸಿದನೆ |
ಬೌದ್ಧ ಕಲಂಕಿ ತಿಳಿವಲ್ದೇನಂತಿ ಕಲಿಯೊಳು ರಣಭೇರಿ ಹೊಡಸಿದನೆ |
ಸಾಧೂರ ಬಿರದವ ನಡಸಿದನೆ||೨||

ಕಂಸರಾಜ ಬಲವಂತ ಸತ್ತಹೋದ ಸಾಕ್ಷರತ ಜರಾಸಂಧರಾಜಾ ಭಂಡಸಿದನೆ |
ಕೆಟ್ಟಕಾಲಕ ಅಂವಗ ಕಪಟದಿಂದ ಹತ್ತೂರೊಳಗ ಮುಕ್ಕುಂದಕೋಪಿಲಿ ಸುಡಸಿದನೆ |
ಬಾಣಾಸುರನ ಸಾವಿರ ಭುಜಗಳ ಕಡಸಿದ ರಾಜೇಕ ಹುಲಿಗಾಳಿ ಹಿಡಸಿದನೆ |
ಸದ್ಯಾಗಿ ಪುರಂಧರ ಕಾಯಲಿಲ್ಲ ಭೂಭಾರ ಮಾಯದ ರಾಕ್ಷಸ ಹೊಡಸಿದನೆ |
ಕಾನನ ವನದೊಳು ನಡಸಿದನೆ||೩||

||ಚಾಲ||

ಆತಂದ ಪ್ರಬಲ ಬಲ್ಲವನೆ ಬಲ್ಲ ಬರತಾನೇನ ನೋಡಬೇಕ |
ಪುರುಷ ಇಲ್ಲದ ಒಂದು ವರುಷವ ಆದೀತ ಅರಸಕಿ ತಗೊಂಡೇನ ಸುಡಬೇಕ |
ಸುವಾಸ ಸಂಪಿಗಿ ಪುಷ್ಪದ ಹಾಸಿಗಿ ಅರಸ ಇಲ್ಲದೆ ಏನ ಮಾಡಬೇಕ ||

||ಕೂ.ಪ.||

ಬಿದ್ದ ಧರಣಿಗೆ ಸಾಯತೀನ ಸೊರಗಿ ಯಾರಿಗೆ ಬೇಕ ಈ ನರಕವು || ಎಂದಮ್ಮಾ ||

ಚೌಕ – ೩

||ನುಡಿ||

ಸತ್ರಾಜಿತನ ಪುತ್ರ ಮಿತ್ರಂದು ಗುಣ ನೆನಸಿ ಅಂತ್ರಕೂನ ಜಾಣೋಸಿ ಅಳತಿದ್ದಳು |
ಹಿರಿಭಾವ ಐರಾವಣ ನನ್ನ ದೊರಿ ಮೈರಾವಣ ಪರಿಪರಿಯಿಂದ ಹೇಳಿ ಬಳಲಿದಳು |
ಕಪಟ ಹೇಳಿ ಕೊಂದಾಂಗ ಕೆಟ್ಟಬಾಸಿ ಎನಗ ಮುಟ್ಟಲಿಲ್ಲ ವಚನಕ್ಕ ಹೇಳಿದಳು |
ಹಿಂದಿನ ಮಾತ ಇವ ಇಂದಾಡಿ ಫಲವೇನ ಮಂದ್ಯಾಗ ಹೇಳವಳ್ಳ ಮಲಗಿದಳು |
ಪಂಚಾರತಿ ಮನದೊಳು ಬೆಳಗಿದಳು||೧||

ಹಿಂದಿನ ಕಥಿಸುಡ ಮುಂದ ಆಡೂದಬ್ಯಾಡ ಮಂದಗಮನಿ ಬಾಳ ಸೊರಗಿದಳು |
ಸತ್ಯಭಾಮೆ ಮಾಡು ದುಃಖ ಶೇಷಗ ಆ ಲೆಕ್ಕ ಸಂಖೆಯಾಗದಷ್ಟು ಬಳಲಿದಳು |
ಜಲ ಇಲ್ಲ ಜಲಚರ ವನ ಇಲ್ಲ ವನಚರ ತಳಮಳಸಿದಂಗ ನಾರಿ ಕರಗಿದಳು
ಅನ್ನ ಇಲ್ದ ನಿರಾಧಾರ ನೀರ ಇಲ್ದ ಮರಮರ ನಿದ್ರಿ ಇಲ್ದ ಕಣ್ಣಿಗಿ ಹೊರಳಿದಳು
ಬಂದಲ್ಲಿ ಧರಣಿಗಿ ಎರಗಿದಳು||೨||

ಕೃಷ್ಣ ಆದ ಕೊರವಂಜಿ ಉತ್ಕೃಷ್ಟ ಭಾವ ತೇಜಿ ದೃಷ್ಟಿ ಶೋಕಮಾರಿ ತೋರಿದಳು |
ನಾಲ್ಕಮಾರಿ ಬ್ರಹ್ಮಗ ಬಾಲಕನ ಮಾಡಿ ಬಗಲಾಗ ಲೋಕದಲ್ಲಿ ಡಂಗೂರ ಸಾರಿದಳು
ಜಡಿಕೂಸ ಎತ್ತಿಕೊಂಡ ನಡುವಿನ ಮ್ಯಾಲ ನಿಲ್ಲಿಸಿಕೊಂಡ ನಾಡನಾಡ
ಶೋಕ ಮಾಡಿದಳು
ಮೇಲಾದ ಕೊರವಂಜಿ ಕೋಲನಾಡುತ ಸಹಜ ಸತ್ಯಭಾಂಮಿ
ಮಾಲದೊಳು ಸೇರಿದಳು
ಮೇಲುಪ್ಪರಗಿ ಮಾಲದೊಳು ಏರಿದಳು||೩||

||ಚಾಲ||

ಭಾವಕ್ಕಿ ಎದ್ದಾಳ ಧಾವಿಸಿ ಬಂದಾಳ ಶಕುನವ ನಿನಗೊಂದು ಹೇಳತೀನ ||
ಕನಸೀನ ಮಾತಬಲ್ಲೆ ಮನಸೀನ ಮಾತಬಲ್ಲೆ ಧ್ಯಾನಸ್ತವಾಗಿನ್ಯಾಳ್ಳತೀನ ||
ಕೊರವಂಜಿ ನಾನೆ ಸತ್ಯಭಾವಿ ನೀನೆ ಅಂತರಸಾಕ್ಷಿ ಮಾತೊಂದ ಹೇಳತೀನ ||

||ಕೂ.ಪ.||

ಪುರುಷರನ ಒಲಸುದ ಬಲ್ಲೆ ಸ್ತ್ರೀಯರನ ಒಲಸುದ ಬಲ್ಲೆ ಆಗಸುದ ಬಲ್ಲೆ
ಆದಿ ಮುಖವು || ಎಂದಮ್ಮಾ ||

ಚೌಕ – ೪

||ನುಡಿ||

ಸ್ಯಾರಿಮುಕ್ಕ ಕಾಳದಕ್ಕ ಮರತುಂಬ ಜೋಳದಕ್ಕಿ ಹಂತವಳಲ್ಲ ನಾ ಸುಳ್ಳ ಬುರಕಿ |
ಮಂತ್ರವ ನಾಬಲ್ಲೆ ಯಂತ್ರವ ನಾಬಲ್ಲೆ ತಂತ್ರವ ನಾಬಲ್ಲೆ ಗಿಡ ಮೂಲಕಿ |
ಹುಚ್ಚ ಮದ್ದ ನಾಬಲ್ಲೆ ಮೆಚ್ಚ ಮದ್ದ ನಾಬಲ್ಲೆ ನೀಚ ವಿಚಾರ ನಾಒಲ್ಲೆ ಬ್ಯಾಸರಕಿ |
ಹತ್ತು ಅವತಾರ ಬಲ್ಲೆ ಸಪ್ತಸಾಗರ ಬಲ್ಲೆ ನಕ್ಷತ್ರ ಬಲ್ಲೆ ನಾ ಕಡಮುರಿಕಿ |
ದುಷ್ಟರನ ಕಟ್ಟಸಾಕ್ಕಿ ಹೆಡಮುರಕಿ||೧||

ಶ್ರೀಲೋಕ ನಾಬಲ್ಲೆ ನರಲೋಕ ನಾಬಲ್ಲೆ ವರಲೋಕ ತಪಲೋಕ ಬಲ್ಲಾಕಿ |
ಮೂಲೋಕ ನಾಬಲ್ಲೆ ಯಮಲೋಕ ನಾಬಲ್ಲೆ ವೈಕುಂಠ ಕೇಳನಾ ನಿಲ್ಲುವಾಕಿ |
ಸತ್ಯಲೋಕ ನಾಬಲ್ಲೆ ಶಿವಲೋಕ ನಾಬಲ್ಲೆ ಸಪ್ತಲೋಕ ಭೂಮಿ ಸವಲಕ್ಕಿ |
ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಸುತ್ತಕ್ಕಿ |
ಏಳು ಪಾತಾಳ ಸಲಹುವಂಥಾಕಿ||೨||

ಅಂಡಾಂಡ ನಾಬಲ್ಲೆ ಪಿಂಡಾಂಡ ನಾಬಲ್ಲೆ ಬ್ರಹ್ಮಾಂಡ ನಾಬಲ್ಲೆ ಹೆಚ್ಚಿನಾಕಿ |
ಕೃತ ತ್ರೈತಾಯುಗ ದ್ವಾಪರ ಕಲಿಯುಗ ನಾಲ್ಕುಯುಗ ದಾಟಿ ಮುಂಚಿನಾಕಿ |
ಮುಚ್ಚಿದ ಮಾತಗಳ ಬಿಚ್ಚಿ ಆಡಕ್ಕ್ಯಾಲ ಹಚ್ಚಾಕಿ ಸಾರಸಾಕಿ ಮೋಜಿನಾಕಿ |
ನಿಂದೇನಾಡು ಮಂದಿಗೆ ಎಂದಿಗಿ ಬಿಡವಳಲ್ಲ ಗುದ್ದ್ಯಾಡು ಮಂದಿಗಿ ಬಿಗಸಕ್ಕಿ |
ಬಂದಿಕಾನೆಯೊಳಗ ಸಿಗಸಕ್ಕಿ||೩||

||ಚಾಲ||

ಏಳಮ್ಮಾ ಕೊರವಂಜಿ ಬಾಳಾತ ನನ್ನ ಮರಜಿ ಉಣ್ಣಾಕ ಬಾ ಅಂತ ಕರಿತೀನು |
ಎರಡೂ ಕರವ ಜೋಡಿಸಿ ಉಪಚಾರ ಮಾಡಿಸಿ ಸಮಾಚಾರ ಹೇಳ ಬಾಯ   ತೆರಿತೀನು |
ಕೊರವಂಜಿ ಉಂಡಾಳ ಬಾಳನ್ನ ತಗೊಂಡಾಳ ಬಿಸಿನೀರ ಕೂಸಿಗಿ ಎರಿತೀನು

||ಕೂ.ಪ.||

ಕೂಸಿನ ಎರೆದಾಳ ದೃಷ್ಟಿಯ ಮುರಿದಾಳ ಸಂತೋಷ ಕೊರವಂಜಿ ನಗಿ
ಮುಖವು || ಎಂದಮ್ಮಾ ||

ಚೌಕ – ೫

||ನುಡಿ||

ಸತ್ಯಭಾಮಿ ಕೇಳಮ್ಮಾ ನಿನ್ನ ಪುರುಷ ಮೇಘಶ್ಯಾಮದೇವ ಕೊರವಂಜಿ ನಾ ಸುಳ್ಳಲ್ಲಾ |
ಕೃಷ್ಣಂದ ಉತ್ಪತ್ತಿ ವಂಶಾವಳಿ ಕಥಿ ತಿಳಿಸುವೆ ಬೇಚಾಳೀಸ ಬೆಡಗೆಲ್ಲಾ |
ಹೇಳತೀನ ಸಾಧಾರಣ ಆದಿಯಲ್ಲಿ ನಾರಾಯಣ ಅವನ ಪುತ್ರ ಬ್ರಹ್ಮ ಹೌದಲ್ಲಾ |
ಬ್ರಹ್ಮನಸುತ ಸೋಮವಂಶಗಾತ್ರ ನಾಲ್ಕನೆಯ ಬ್ರಹ್ಮನಾದ ಸಣ್ಣಬಾಲಾ |
ಬ್ಯಾರೆ ಬ್ಯಾರೆ ಹೇಳತೀನ ತಪಶೀಲಾ||೧||

ಸುಗಂಧ ಪ್ರೇಮನು ಸುವೈಚರಿತ್ರನು ಮತ್ತೊಬ್ಬ ಏಳನೆಯವ ದೈತ್ಯಪಾಲ |
ಸುಂದರ ಕಾಯನು ಮೂಲಚಂದರಾಯನು ಹತ್ತನೆಯವ ಭೃಗು ಜಗಪಾಲಾ |
ಪಾತಕಂದ ಬೆಡಗ ಹನ್ನೊಂದನೆಯ ಯುಗ ಭಾವಾರ್ಥ ನೀನು ತಿಳಿಮೂಲಾ |
ಹನ್ನೆರಡನೇದವಗ ಸಿತಾಳ ಬಂಧುಗ ಮೃದು ಭಾಗ ಪುತ್ರ ಆದಮ್ಯಾಲಾ |
ಹದಿಮೂರ ಬೆಡಗಾದುವ ಒಂದು ಪಾಲಾ||೨||

ಸಾನು ಸೂಚರ ಮಗ ಅವನಿಂದ ಸುವೇಗ ಸುದರ್ಶನ ಮೊಮ್ಮಗ ಭೂಪಾಲಾ |
ಬಳಿರಾಮ ಮರಿಮಗ ವಾಸುದೇವ ಜಿರಿಮಗ ಕಡಿಯದಲ್ಲಿ ಹುಟ್ಟಿದ ಗೋಪಾಲಾ |
ಯಾದವರ ಗೋತ್ರ ಬೇಚಾಳೀಸ ಪುತ್ರ ಪವಿತ್ರ ಮಾಡಾಂವ ಜಗಪಾಲಾ |
ಸತ್ಯಭಾಂವಿ ತಿಳದಾಳ ತನ್ಮಯ ಆದಾಳ ಕೊರವಂಜಿ ರೂಪಬಿಟ್ಟ ಯದುಕುಲಾ |
ಇಬ್ಬರದು ಆದೀತ ಅನುಕೂಲಾ||೩||

||ಚಾಲ||

ಸ್ವರ್ಗದಿಂದ ಕೃಷ್ಣನಾಥ ಕಿತ್ತತಂದ ಪಾರಿಜಾತ ಸತ್ಯಭಾಂವಿ
ಬಾಗಿಲದೊಳಗ ನಿಲಸಿದನೆ |
ಸತ್ಯಭಾಂವಿ ರುಕ್ಮಿಣಿ ಇಬ್ಬರದ ಚಕ್ರಪಾಣಿ ಮನಕ ಮನ ಕೂಡಿಸಿ ಒಲಸಿದನೆ |
ಕೊರವಂಜಿ ವಿಸ್ತಾರ ಹೇಳುದಕ ಮುಕ್ತಾರ ಅಪರಾಳ ತಮ್ಮಣ್ಣ ಬಲ್ಲಿದನೆ ||

||ಕೂ.ಪ.||

ಕಲ್ಲ ಅಂಕಲಿಗೆವರು ತುಸುತುಸು ಬಲ್ಲವರು ಮಾಲಿಂಗ ಇಮಾಮಭಾಯಿ
ಕವತೂಕವು ||ಎಂದಮ್ಮಾ||

ರಚನೆ : ಮಾಲಿಂಗ ಇಮಾಮಭಾಯಿ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ