ಸತ್ರಾಜಿತನ ಪುತ್ರಿ ಸತ್ಯಭಾಮಾ
ಹೊರಳಿ ಬಿದ್ದಾಳ ದುಃಖದಲಿ |
ಒಂದು ದಿವಸ ಮುಕ್ಕುಂದನ ಕಾಣದೆ
ಮತ್ತ ಹ್ಯಾಂಗ ತಾಳಿರಲಿ||ಪಲ್ಲವಿ||

ಸರಿ ಸವತಿ ಮನಿಗೆ ಹೋಗಿ ಸೇರಿದನವ್ವಾ
ಬಿಟ್ಟು ನನ್ನ ಮಮತಿ
ನಿಮಿಷ ಹೋದರ ಒಂದು ವರ್ಷ ಹೋದ್ಹಾಂಗ
ಆದಿತ ನನ್ನ ಗತಿ
ಪೂರ್ವದಲ್ಲಿ ಮಾಡಿದ್ದ ಕರ್ಮಕ
ಯಾಹ ಏನ ಮಾಡುದೈತಿ
ಬ್ರಹ್ಮ ಬರೆದ ಫಣಿಯಲ್ಲಿ – ನನ್ನ ದೇಹ
ಸುಣ್ಣದ್ಹಾಂಗ ಸುಡತೈತಿ ||
ಎನ್ನ ಪಾಪ ಏಳೇಳು ಜನಮಕೂ
ತಟ್ಟದ ಬಿಡಬ್ಯಾಡ ಶ್ರೀಪತಿ
ಹೆಣ್ಣು ಹೆಣ್ಣು ಅಂತ ಹಲುಬುತ ನೀ ನೀ –
ರಾಗ ಮಚ್ಛನಾಗೋ ದುರ‍್ಮತಿ ||

||ಚಾಲ||

ಶ್ರೇಷ್ಠ ದೊರೆಯು ನೀನು ಆಗಲಿ – ನಿನ್ನ
ಅಷ್ಟು ಐಶ್ವರ್ಯ ನಷ್ಟವಾಗಿ ಹೋಗಲಿ
ಎಷ್ಟು ನಾನು ಕಷ್ಟ ತಾಳಲಿ-ಕಪಟ ನಾಟಕನ
ಕೆಟ್ಟ ಬುದ್ಧಿ ಎಷ್ಟು ಪೇಳಲಿ
ಪಟ್ಟ ಮಂಚವ ನೋಡಿದರೆನಗೆ
ಕಷ್ಟ ಸೈರಿಸಲಾರೆನಿಂದು
ಬಿಟ್ಟು ನಾಥನ್ಹ್ಯಾಂಗ ಉಳಿಯಲಿ
ಇಂದು ಎನ್ನ ಪ್ರಾಣ ಹೋಗಲಿ ||

||ಧಾಟಿ||

ಅಮ್ಮಯ್ಯದೂತೆ ಈ ಪರಿ ಸ್ತ್ರೀಯ ದೋಷ

||ಬದಲು||

ಅವನಿಗೆ ತಡವದೆ ಬಿಡುವದೇ
ಮಡದಲಿ ಬಿದ್ದು ಕೂರ್ಮನಾಗು
ಇನ್ನಷ್ಟು ಕರಗಿ ಮರಗಿ ಸೊರಗು
ನೀನು ಮಡದಿ ಕಾಣದ ವರಾಹನಾಗು
ಮಲ್ಲಿಗಿ ದುಂಡ ಮಲ್ಲಿಗಿ
ತರಳಾಕ್ಷಿಮಣಿ ತಾನು ತಳಿರು ಹಾಸಿಗೆ ಮೇಲೆ
ಹೊರಳುತಲಿ ಕಣ್ಣು ಮುಚ್ಚುತಲಿ ಹಾಕಿ-
ದರಳು ಮಲ್ಲಿಗಿ ಹಾರು ಚುಚ್ಚುತಲಿ-ಪದ್ಮ
ಸರಳ ಸಂತಾಪವು ಹೆಚ್ಚುತಲಿ-ಕಂಡು
ದುರುಳ ಕೃಷ್ಣನ ಬುದ್ಧಿ ತರಳಾಕ್ಷಿತಾ ಕಂಡ
ಹೊರಳಿ ಬಿದ್ದಾಳಾಗ ಮಂಚದ ಕೆಳಗೆ
ಮಲ್ಲಿಗೆ ದುಂಡ ಮಲ್ಲಿಗೆ

||ಏರು ||

ನರಸಿಂಹನಾಗಿ ಕ್ರೂರ ಬುದ್ಧಿಯಿಂದ
ತಿರಗ್ಹೋಗೊ ಅರಣ್ಯದಲಿ
ಒಂದು ದಿವಸ ಮುಕ್ಕುಂದನ ಕಾಣದೇ
ದೂತೆ ಹ್ಯಾಂಗ ತಾಳಲಿ….
ನಾಲ್ವರೊಳಗೆ ನೀ ನನ್ನ
ನಗ್ಗೇಡ ಮಾಡಿದಿ ಈ ಪರಿ||೧ನೆಯ ಚೌಕ||

ಮನಸಿನೊಳಗೆ ಮರುಗಿ ಮರುಗಿ
ಸಾವತೇನೋ ಶ್ರೀಹರಿ
ವಿಧಿಯ ತನಯ ವಿಧಿಯಾಗಿ ಬಂದೆನಗೆ
ಸುದ್ದಿ ಹೇಳಿದ ಇದು ಸರಿ
ಇಂದ್ರಲೋಕದ ಪಾರಿಜಾತ ಕೊಟ್ಟು
ಸವತಿಯ ಕೈ ಸೇರಿ
ಹಿಂತಾ ತಾಪದಿಂದ ಕಾಂತೆ ಬಳಲುವಳು
ತೀರಿಸೊ ನೀನು ಮುರಹರಿ
ಪ್ರಾಯ ಬಂದ ಉಕ್ಕೇರಿ ಹೋಗತತಿ
ಗೋವಿಂದ ಕೇಳೊ ಎನ್ನ ಮೊರಿ

||ಚಾಲ||

ನನ್ನ ಶಾಪ ತಟ್ಟಿ ನೀನು ಕಾನನದೊಳಗ
ದನಗಳ ಕಾಯೋ ತಿರುಗಿ
ಇನ್ನು ನಿನಗೆ ಕರುಣೆ ಬಾರದೇ ಮಾತೃಹತ್ಯ
ಘಟಿನಲಿ ಪಂತವಾಗಿ
ಹುಡುಗ ನೀನು ಕಡವ ಹತ್ತಿ ಪೊಡವಿ
ಲೋಪ ಮಾಡು ನೀನು ಈಗ ನೀಗಿ
ತಡವು ಯಾಕೆ ಪ್ರಾಣ ಕೊಡುವೆನು ಹೀಗೆಂದು
ಹೊರಳಿ ಬಿದ್ದಾಳು ಬಿಟ್ಟ ಮಂಚವನು
ಅವ್ವಯ್ಯ ದೂತೆ ಬ್ರಹ್ಮ ಎನ್ನ
ಸ್ತ್ರೀ ಜನ್ಮಕ್ಕೆ ಹಾಕುದಕ್ಕಿಂತ
ಅಡವಿಯಲಿ ಜಡವೃಕ್ಷ ಮಾಡಬಾರದೆ
ಮಲ್ಲಿಗೆ ದುಂಡ ಮಲ್ಲಿಗೆ
ಹ್ಯಾಂಗ ಮಾಡಲಿ ಅಮ್ಮ ಅಂಗಜಪಿತ ಎನ್ನ
ಭಂಗ ಮಾಡಿದ ಕ್ಷಣ ತಾಳಲಾರೆ – ಅವನ
ಸಂಗವಿಲ್ಲದೆ ನಾನು ಬಾಳಲಾರೆ – ರತ್ನ
ರಂಗನ ಬುದ್ಧಿಯ ನೋಡಲಾರೆ
ತಿಂಗಳಾಯಿತು ಅಂಗಸಂಗವು ಇಲ್ಲದೆ
ಹ್ಯಾಂಗ ಸೇರಿದ ನನ್ನ ಸವತಿಯ ಮನಿಗೆ
ಮಲ್ಲಿಗೆ ದುಂಡು ಮಲ್ಲಿಗೆ

||ಏರು||

ಕರುಣವಿಲ್ಲದೆ ಕಲ್ಮನ ಮಾಡಿದ
ಬಿಟ್ಟರ ಸಾವತೇನ ಬಳಲಿ
ಒಂದು ದಿವಸ ಮುಕ್ಕುಂದನ ಕಾಣದೆ
ದೂತೆ ಹ್ಯಾಂಗ ತಾಳಲಿ….||೨ನೆಯ ಚೌಕ||

ಕಠಿಣ ಮನಸು ಎಷ್ಟಂತ ಮಾಡಿದಿಯೊ
ತಾಳಲಾರೆ ಸರಿ ನಾನು
ದಾರಿ ನೋಡಿ ಶ್ರೀಹರಿಯನು ಅಂಗದೊಳು
ಕರಗಿ ಮರುಗಿ ಸೊರಗಿದೆನು
ಕ್ಷಣ ಮಾತ್ರ ನಿನ್ನ ಮುಖವ ಕಾಣದೆ
ನೆನೆದು ಪ್ರಾಣ ಕೊಡುವೆನು
ಮೂರು ತಾಪವನು ತಾಳಲಾರದೆ
ಹೊರಳಿ ಹಿಡದಾಳೋ ಕ್ಷಿತಿಯನ್ನು
ಅನ್ನ ನೋಡಿದರ ವೈರಿ ಕಂಡಾಂಗಾ
ಊಟ ಮಾಡಲಾರೆನೋ ನಾನು
ನೀನು ಬಂದು ಚಂದದಿಂದ
ಎನ್ನ ಕೂಡ ಗೋವಿಂದ ಮಾತನಾಡು
ಮಡದಿ ಎಂದು ಕಾಡಿನಲ್ಲಿ ಹುಡುಕುತ ತಿರಗು
ನಿನಗೆ ಬಿಡದೆ ತಟ್ಟಲಿ ಶಾಪ ತಟ್ಟಲಿ
ಶ್ರೀಹರಿಯೆ ನಿನಗ ಕರುಣವಿಲ್ಲೇನೋ
ಉದರದಲಿ ನಿನ್ನ ಉದರದಲಿ

||ಚಾಲ||

ಸತ್ರಾಜಿತನ ಪುತ್ರಿ ಸತ್ಯಭಾಂಮಾ
ಅಂತರಂಗದಲಿ ಹೊರಳುದು ಕಂಡು
ಹರಿಯು ತಾನು ಘೋರ ತಾಪ ತಿಳಿದು
ಘೋರ ತಾಪ ಪರಿಹರಿಸಿದನಾಗ
ಮಲ್ಲಿಗೆ ದುಂಡ ಮಲ್ಲಿಗೆ
ಪ್ರಾಂತದೊಳಗ ಬಹು ಶಾಂತ
ಬಾಗೋಡಿಯ ಕಾಂತ
ವಿಶ್ರಮಿಸುವ ಸಿದ್ಧಪತಿ-ನಾ
ನಿತ್ಯ ಮಾಡುವೆ ನಿಮ್ಮ ಸ್ತುತಿ-ಮುತ್ತು
ಮಾಣಿಕ ಸರಗೋಳು ಕವಿಯ ಮತಿ
ಬಹು ವಿಖ್ಯಾತಿ ಗುರುರಾವಜಿ ದಯದಿ
ನಿಧಿತನಾದವನು ನಿಧಿತನಾದವನು
ಹಸ್ತವನಿಟ್ಟರು ಮಸ್ತಕದ ಮ್ಯಾಗೆ
ಮಲ್ಲಿಗೆ ದುಂಡು ಮಲ್ಲಿಗೆ

||ಏರು||

ಬಾಳಗೋಪಾಳ ಕೂತ ಹೇಳತಾರ
ಹತ್ತ ಅವತಾರದಲಿ
ಒಂದು ದಿವಸ ಮುಕ್ಕುಂದನ ಕಾಣದೆ
ದೂತೆ ಹ್ಯಾಂಗ ತಾಳಲಿ….||೩ನೆಯ ಚೌಕ||

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು