ಪಾಂಡವರಿಗೆ ಬಂದಿತ ಹೊತ್ತಾ ಬ್ರಹ್ಮ
ಲಿಖಿತ ಯಾರಿಗೆ ತಪ್ಪಿಲ್ಲಾ ಶನಿ
ಹತ್ತಿತಪ್ಪಾ ಕಾಡುವ ಕಾಲಾ ಅವರು
ಲೆತ್ತ ಆಡ್ಯಾರ ಜಗಳದ ಮೂಲಾ
ರಾಜ ಸಂಪತ್ತಿ ದ್ರೌಪತಿ ಸತಿಯನ್ನ
ಕಳದಾರೋ ಎಲ್ಲಾ ಕಳದಾರೋ ಎಲ್ಲಾ||ಪಲ್ಲ||

ವಿದುರ ಹೇಳಿದ ಲೆತ್ತ ಆಡಬ್ಯಾಡಂತ ಕೇಳ
ಲಿಲ್ಲ ಧರ್ಮ ಮಹಾಪಾಶಕ ಬಿದ್ದಾನು
ಧನ ದ್ರವ್ಯ ಪೃಥಿವಿ ಕಳದಾನು ದ್ರೌ-
ಪತಿನ ಮೊದಲ ಮಾಡಿ ಸೋತಾನು
ಹರ್ಷಾದಾನು ದುರ್ಯೋಧನನು ದುರ್ಯೋಧನನು
ಧರ್ಮ ಭೀಮ ಅರ್ಜುನ ಕುಂತ ಸಭಾ
ದೊಳಗ ಕೆಳಗ ಮಾಡ್ಯಾರ ಮುಖವಾ
ದೀನರಾಗಿ ಕುಂತಾರ ನಕುಲ ಸಹದೇವಾ
ಕೈ ಸಾಗದಂಗ ಆಗಿ ಏನೇನು ವೇಳೆ
ತಂದೀತು ದ್ರೌಪತಿಗೆ ಮಾನ ಭಂಗವನು

ಕರ್ಣ ಶಕುನಿ ದುರ್ಯೋಧನನು
ದುಶ್ಯಾಸನ ಕರದ ಹೇಳ್ಯಾರ ಹುಕುಮವನು
ಎಳಕೊಂಡ ಬಾರೋ ಪಾಂಚಾಲಿಯನು
ದುಶ್ಯಾಸನ ಇಷ್ಟ ಕೇಳಿದನು
ತಡಿಲಿಲ್ಲ ಕ್ರೋಧದಿ ನಡದಾನು

ಹಿರದ ಕತ್ತಿ ತೆರದ ಕಣ್ಣ ಕರದ ದ್ರೌಪತಿ
ಹೊರಗ ಬಾರೆ ಅಂದಾನು ಧರ್ಮರಾಜ ನಿನ್ನ ಸೊ
ನೀನಾದೆ ಈಗ ನಮ್ಮೆಲ್ಲರ ಸೊತ್ತವನು
ತಡಮಾಡಬ್ಯಾಡ ನಡೀ ಇನ್ನ
ಸಭಾದೊಳಗ ನೀನು ಸಭಾದೊಳಗ ನೀನು

ದ್ರೌಪತಿ ಅಂತಾಳ ಭಾವಯ್ಯ ಕೈಯ
ಮುಗಿತೇನ ಒಯ್ಯ ಬ್ಯಾಡರೀ
ನಾ ನಿಮ್ಮ ಗಾಂಧಾರಿಗೆ ಸರಿ ಬಿಡರಿ ಕೈಸೇರಿ
ಮಾತ ಕೇಳರಿ ಕೇಳರಿ
ಸಿಟ್ಟಾಗಿ ದುಶ್ಯಾಸನ ಎಳದಾಕಿನ ಬಿರಿಬಿರೀ

||ಕೂಡಪಲ್ಲ||

ಎಳಿ ಬ್ಯಾಡೋ ದುರುಳಾ ನನ್ನ
ಬ್ಯಾಟಿಗಾರಗ ಹರಣಿ ಸಿಕ್ಕಂಗ
ಮೀನ ಬಿಸಲ ಒಳಗ ಬಿದ್ಹಂಗ
ದ್ರೌಪತಿ ಮಾಡ್ಯಾಳ ದುಃಖಾ
ಭೂಮಿಗಿ ಹೊರಳೂತ ಬಿದ್ದಾಳ ಖಬರಿಲ್ಲಾ
ದುಶ್ಯಾಸನ ಹಿಡದ ಕೂದಲಾ
ಎತ್ತತ್ತ ಹೋದರ ಬಿಡವಲ್ಲಾ ಮರಾಮರಾ
ಮರಗತಾಳ ಪದ್ಮಿನಿಗಂಧಿ ನೆಲಾ ಬಗಟ
ನೆಲಾಬಗಟ ಭೂಮಿ ತಾ ಕೆದರಿ
ಬಾಯಿ ಬಿಡತಾಳ ಗುಬ್ಬಿ ಪರಿ
ಹುಲ ಬಾಯಾಗ ಸಿಕ್ಕಾಂಗ ಚಿಗರಿ
ಬ್ಯಾಟಿಗಾರನ ಬಲ್ಯಾಗ ಸಿಕ್ಕಾಂಗ ಮಲಾ
ರಾಜ ಸಂಪತ್ತಿ ದ್ರೌಪತಿ ಸತಿ ||೧ನೆಯ ಚೌಕ||

ಹಿಡದಾನ ತುರಬಾ ಬಿಡವಲ್ಲಾ ತಕ್ಕೊಂಡ
ನಡದಾನ ಆಕಿನ ಬಿರಿಬಿರಿ
ಹೊಡದಾನ ಕಾಲಿಲೆ ಹತವಾರಿ
ಸಭಾದಾಗ ಹಿಡದ ನಿಂತ ಒದರಿ
ಕರ್ಣ, ಶಕುನಿ, ದುರ್ಯೋಧನರದು
ಹಿಡಸವಲ್ಲದುಮೇದ್ವಾರಿ ಉಮೇದ್ವಾರಿ

ಭೀಷ್ಮ ದ್ರೋಣರಿಗೆಲ್ಲಾ ಕೈಮುಗಿದಂತಾಳ
ಬಾಯಿ ತೆರದ ದ್ರುಪದಿ ಕುಮಾರಿ
ಶ್ರೇಷ್ಠ ಸಭಾದೊಳಗ ಕುಂತೀರಿ
ನೀವ ಬುದ್ಧಿ ಹೇಳೊಲ್ಲಿರಿ ಹೇಳೊಲ್ಲಿರಿ
ಮಾತ ಕೇಳ ಒಲ್ಲ ಧೃತರಾಷ್ಟ್ರ ಹಾಕಿದ
ಕೆಳಗ ಮಾರಿ ನಾಚಿ ಕೆಳಗ ಮಾರಿ
ಐದು ಸಿಂಹ ಸಿಕ್ಕಾಂಗ ಬಲಿ ಒಳಗ
ಪಾಂಡವರೊಳಗ ಧರ್ಮ ಹೊಡದ ಉಸ್ಕರಿ
ಗದ ತಕ್ಕೊಂಡ ಭೀಮ ನಿಂತ ಒದರಿ
ಹುಲಿ ಎದ್ದ ನೋಡಿದ್ಹಂಗ ಚಿಗರಿ
ಧರ್ಮರಾಜ ಅಂತಾನ ಭೀಮನ ಸ-
ತ್ವಕ ಹತ್ತಿತ ಇಂದ ಉರಿ ಹತ್ತಿತ ಇಂದ ಉರಿ
ನಿನಗ ಸಿಟ್ಟ ಬಂದರ ನಿನ ಗದಾ ಹಾಕೋ
ನನ್ನ ತಲಿಯ ಮ್ಯಾಲಿ ಪ್ರೀತಿಯಲಿ
ಭೀಮ ಧರ್ಮರಾಜನ ಮಾತ ಕೇಳಿ ಕುಂತಾ
ಸಿಟ್ಟ ನುಂಗಿ ಗದಾ ಕೆಳಗ ಚೆಲ್ಲಿ
ಅಶ್ವತ್ಥಾಮ ಕೃಪಾಚಾರ್ಯ ಭೀಷ್ಮ ದ್ರೋಣ
ಗುರು ಸಹಿತ ಕುಂತಾರ ಮೌನ ಏರಿ

||ಕೂಡಪಲ್ಲ||

ದ್ರೌಪತಿಗೆ ಕರ್ಣ ಅಂದನು-ಗೆದ್ದ
ತಗೊಂಡ ಬಂದೇವ ನಿನ್ನನು-ಆಶೆ
ಬಿಡು ಪಾಂಡವರದು ನೀನು
ದುರ್ಯೋಧನಗ ಆಗ ನೀ ಸತಿ
ಪಟ್ಟ ದೈವತಿ ನೀನೇ ಸುಳ್ಳಲ್ಲಾ
ಅಷ್ಟು ರಾಜ್ಯ ಐಶ್ವರ್ಯವೆಲ್ಲಾ
ನಿನ್ನ ಹೊರತ ಯಾರಿಲ್ಲ
ರಾಜ ಸಂಪತ್ತಿ ದ್ರೌಪತಿ ಸತಿ ||೨ನೆಯ ||

ಹೇಮ ನಗರವಾಸಿ ಕೋಮಲಾಂಗ ಹರಿ
ಶ್ಯಾಮ ಸುಂದರ ಭಕ್ತ ಕೈವಾರಿ
ನಿಮ್ಮ ತಂಗೀದ ಆಗೇಲೆ ಸೂರಿ
ಓಡಿ ಬಾರೋ ಮುಕುಂದ ಮುರಾರಿ
ಅಲ್ಲಿ ಆದರದಿಂದ ಪ್ರಹ್ಲಾದನ ಕಾಯ್ದಿ
ಕಾಯ್ದಿ ಭಕ್ತರರ ಪರಿಪರಿ

ಸಭಾದೊಳಗ ನನ್ನ ಅಭಿಮಾನ ಹೋದಿತೋ
ಎಷ್ಟು ಕರಿಲಿ ನಾ ಒದರಿ ಒದರಿ
ಬಾಯಿ ಬಿಡತೇನ ಗುಬ್ಬಿಯ ಪರಿ
ಕೈಯ ಮುಗಿಯತೇನ ಹತ್ತವಾರಿ
ಕುಂದ ಬರತದ ನಿನ್ನ ಬಿರುದಿಗೀಗ
ದೀನ ಉದ್ಧಾರಿ ದೀನ ಉದ್ಧಾರಿ
ಏನ ಕೊಟ್ಟ ವಿಭೀಷಣ ನಿಟ್ಟ
ಅಭಯ ಪಟ್ಟಗಟ್ಟಿ ಸಿದಿರಿ
ದೈತ್ಯರ ನಳದಿರಿ ದಶ ಅವತಾರಿ
ತ್ರಿಭುವನ ಸೂತ್ರಧಾರಿ
ನಿನ್ನ ಹೊರತ ನನ್ನ ಮಾನ ಕಾಯಾವರಿಲ್ಲ
ಬಾರೋ ಕಂಸಾರಿ ಬಾರೋ ಕಂಸಾರಿ

ಕಂಡ ಬಂತ ನಿನ್ನ ಪುಂಡಪಾಂಡವರ
ಐದು ಮಂದಿ ಗಂಡರದು ಕೇಳ ಐಶ್ವರಿ
ಆಗಿ ಕುಂತಾರ ಹೆಂಡರ ಪರಿ
ಭಂಡ ಮಾಡತಾರ ಕಳದುಟ್ಟ ಸೀರಿ
ಕ್ಷಣ ತಡಿಬ್ಯಾಡೋ ಬಾರೋ ನೀ ಏರಿ
ಪ್ರಾಣಕ ಬಂದಿತೋ ಚೂರಿ ಬಂದೀತೋ ಚೂರಿ

ಬಾಯಿ ಬಿಡತಾಳ ಗುಬ್ಬಿಯ ಹಂಗ ನಿಂತ
ಸಭಾದಾಗ ಕಣ್ಣ ಮುಚ್ಚಾಳೋ
ಕೈಯಲಿ ಮಾರಿ ಮುಚ್ಚಾಳೋ ಮಾಡಿ ದ್ವಾರಕದ ಕಡಿ
ಕೃಷ್ಣನ ರೂಪ ನೋಡಿ ಧ್ಯಾನ ಹಚ್ಚಾಳೋ
ತನ್ನ ಭಕ್ತಿ ಎಂಬ ಬಾಣ ಮಾಡಿ
ಗುರಿ ಹೂಡಿ ಹೊಡದ ಚುಚ್ಚಾಳೋ ಚುಚ್ಚಾಳೋ

||ಕೂಡಪಲ್ಲ||

ದ್ರೌಪತಿ ಶಬ್ದ ಬಾಣಕ ಗಾಬರಿ ಆಗಿ
ಕ್ಷಣಕ ಗರುಡನ ಹಾಕಿದ ಹಿಂದಕ
ತನ್ನ ಮನಸಿನಕ್ಕಿಂತ ಮುಂದಾಗಿ ಸಭಾದಾಗ
ಬಂದ ನಿಂತ ತಂಗಿ ಬೆನ್ನಮ್ಯಾಲಾ
ಲೀಲಾ ಮಾಡಿದ ಭಕ್ತ ಪ್ರತಿಷ್ಠಾ
ದ್ವಾರಕಾವಾಸಾ ನೀನು ಗೋಪಾಲಾ
ನಿನ್ನ ಹೊರತ ಯಾರಿಲ್ಲಾ
ರಾಜ ಸಂಪತ್ತಿ ದ್ರೌಪತಿ ಸತಿ||೩ನೆಯ ಚೌಕ||

ದ್ರೌಪತಿಯ ಸಂಕಟಕ ಕೃಷ್ಣ ಬಂದದ್ದು ಭೀಷ್ಮಾ
ದ್ರೋಣರಿಗಿ ತಿಳದೀತ ಪೂರಾ
ಕೈ ಬಡದ ತೋರಸ್ತಾನ ವಿದುರಾ
ನೋಡರೆ ಇದರ ಚಮತ್ಕಾರಾ
ಮುಕುಂದನ ನೋಡಿ ಆನಂದಾದ್ರು ಪಾಂಡವರಾ

ದುಶ್ಯಾಸನ ಮಾಡತಾನ ಜರಬಾ
ಹಿಡದ ಸೀರಿಯ ಪದರ ತುರಬಾ
ನಿಂತ ಕಳಿಯತಾರ ಸೀರಿಯ ಬರಾಬರಾ
ಸೀರಿ ಹೊಂಟೀತ ಒಳಗ ಹೊಸತರಾ
ಒಂದರ ಹಿಂದ ಒಂದ ಉಡಾಣಾ
ಆತ ಆಚರಾ ಆತ ಆಚರಾ

ಹಿಂಗ ಕಳಿಯತಾನ ಜಗ್ಗಿ ಸೇರಿ
ಎಷ್ಟ ಉಡಸೋಣ ಆದ ಅಚ್ಚರಾ
ಕಳದಿಟ್ಟ ಸೀರಿ ಸಭಾದಾಗ
ಬಿದ್ದಿತ ದಿಗ್ಗ ಬಿದ್ದಾಂಗ ಪರ್ವತ ತೋರಾ
ದುಶ್ಯಾಸನಗ ಅಂತಾನ ವಿದುರಾ
ಕೇಳೋ ಪಾಮರಾ ಕೇಳೋ ಪಾಮರಾ

||ಕೂಡಪಲ್ಲ||

ಬಂತೋ ವಿಪರೀತಾ ವಿಪರೀತಾ
ಪಾಂಡವರ ಪಂಚಪ್ರಾಣಾ ಕಾಯಾಂವ ಕೃಷ್ಣಾ
ಇದ್ದಾನಾ ಸಾಕ್ಷಾತ್ಕಾರ ಸಾಕ್ಷಾತ್ಕಾರ
ದ್ರೌಪತಿನ ಕೆಣಕಿ ಸಭಾದಾಗ
ಸಾಯ ಬ್ಯಾಡರಿ ಬಿದ್ದ ಬೆಂಕ್ಯಾಗ
ನಿಮ್ಮ ಮರಣ ಬಂತ ಸನಿದಾಗ
ಇಷ್ಟ ಕೇಳಿ ದುಶ್ಯಾಸನ ನೆಲಾ ಬಡದಾ ಮುಂಗೈ
ಜಗ್ಗಿ ಕೊಟ್ಟಾನ ಜಿಗ್ಗಾಲಾ
ತಿಂತಾನ ಕರಾ ಕರಾ ಹಲ್ಲಾ
ಎತ್ತ ಹೋದರ ಬಿಡ ಒಲ್ಲಾ
ರಾಜ ಸಂಪತ್ತಿ ದ್ರೌಪತಿ ಸತಿ ||೪ನೆಯ ಚೌಕ||

ಎಷ್ಟು ಕಳದರಾಕಿ ಅಂಗುಷ್ಟ ತೋರಲಿಲ್ಲ
ಮುಸುಕ ಹಾಕಿದ ಮುಕುಂದಾ
ದುರ್ಯೋಧನನು ಸಭಾದಲಿ ಬಂದಾ
ದುಶ್ಯಾಸನನ ಕರದ ಹೇಳಿದಾ
ಹೊಂಟ ಸೀರಿ ಎಲ್ಲಾ ದಿಂಡ ಕಟ್ಟಿ ಮನಿಗಿ
ಕಳಿಸಿಕೊಡೋ ಈಗ ಮುಂದಾ
ಕಳಿಸಿ ಕೊಡೋ ಈಗ ಮುಂದಾ
ಇಷ್ಟ ಆಗುದರೊಳಗ ಸೀರೆಲ್ಲಾ
ಗುಪ್ತ ಆಗಿ ಹೋತು ಸ್ಥಳಕಾ
ಕಾಣಸ ಒಲ್ಲದು ಒಂದ ಒಂದಾ
ಯುಕ್ತಿ ತಗದ ಗೋವಿಂದಾ
ದ್ರೌಪತಿನ ಕೈಯಿಂದ ಹಿಡದಾ ತನ್ನ
ಮೈಮ್ಯಾಲಿನ ಪೀತಾಂಬರ ಹೊಚ್ಚಿದಾ

ಆಕಿ ಸುತ್ತ ಸುದರ್ಶನ ಚಕ್ರ ಕಾವಲಾ
ಇಟ್ಟಾನ ಹರಿ ಪ್ರೀತಿಲಿಂದಾ
ವಿದರ ಹೇಳತಾನ ಸಭಾದಲಿ ಬಂದಾ
ಜೋಕಿ ಮಾಡಿಕೊಳ್ಳೋ ನಿನ್ನ ಪ್ರಾಣಾ ಇಕಿನ
ಹಿಡಿದರ ಹ್ವಾದಿಯೋ ಜೀವದಿಂದಾ ಜೀವದರಸಿಂದಾ

ಸುದರ್ಶನಕ ಕಣ್ಣಮುಚ್ಚಿ ಮೂರ್ಚೆ ಬಂದಾ
ಕಬರ ಹಾರಿ ಕರ್ಣ ಶಕುನಿದಾ
ಧೈರ್ಯ ಆಗ ಒಲ್ಲದು ಯಾವಂದಾ
ಕಣ್ಣು ತೆರದು ನೋಡುವಷ್ಟಾ
ತ್ರಾಣ ಇಲ್ಲೋ ಯಾವಂದಾ ಯಾವಂದಾ

ಧೃತರಾಷ್ಟ್ರ  ದ್ರೌಪತಿನ ಕರದ
ಗದ್ದಾ ತುಟಿ ಹಿಡದ ರಮ್ಮಿಸಿ ಅಂತಾನ
ಮನಿಗ್ಹೋಗ ತಾಯಿ ಇನ್ನ ಮ್ಯಾಗ ನಿನ್ನ
ಕಾಯಾಂವಾ ದೇವರು ಇದ್ದಾನ
ನಿನಗ ಚೇಷ್ಟಾ ಆಡಿದ ದುಷ್ಟರಾ
ಫಲಾ ಉಂಡಾರ ಇದರ ಸುಖವನ್ನಾ

||ಕೂಡಪಲ್ಲ||

ಧೃತರಾಷ್ಟ್ರ ಕಳಿಸಿದ ರಮ್ಮಿಸಿ ಭಕ್ತ ಪಾಲಾ
ಹರಿ ಜಗದೀಶಾ ಬಾಳಗೋಪಾಳಾ
ಜಗನ್ನಾಥ ನಿನ್ನ ಹೊರತ ಕಾಯುವರ‍್ಯಾರಿಲ್ಲಾ
ಲೀಲಾ ಮಾಡಿದ ಭಕ್ತಾ ಪೃಥ್ವಿ ಪಾಲಾ
ದ್ವಾರಕಾಧೀಶಾ ನೀನು ಗೋಪಾಲಾ
ರಾಜ ಸಂಪತ್ತಿ ದ್ರೌಪತಿ ಸತಿ||೫ನೆಯ ಚೌಕ||

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು