||ಪಲ್ಲ||
ಮನ್ಮಥನ ಪಿತಾ ಅನಂತ ರೂಪ ಶ್ರೀಪತಿ |
ನಿನ್ನ ನೋಡಿ ಕಾಮದಿಂದ ಹೊರಳ್ಯಾಳ ಪದ್ಮಾವತಿ ||
ಚೌಕ – ೧
||ನುಡಿ||
ಗೆಳತ್ಯಾರ ಕೂಡಿ ಹೋಗುವಾಗ ಅರಸಿ ವನದಲ್ಲಿ
ನಾನಾ ತರದ ವಜ್ರ ರತ್ನದ ಹಾರಗಳ ಇಟ್ಟ ಕೊರಳಲ್ಲಿ||೧||
ತ್ರಯೋದಶಿ ವೀಳ್ಯೆ ಮಡಮಡಚಿ ಹಿಡದ ಮುಖದಲ್ಲಿ |
ಎಡ ಬಲಕ ಹಸ್ತ ಕೊಟ್ಟಾಳ ದೂತ್ಯಾರ ಕೈಯಲ್ಲಿ||೨||
ಜಾಜಿ ಸಂಪಿಗಿ ಹಾರಾ ಬಿಗದ ತನ್ನ ಹೆರಳಲ್ಲಿ |
ಸುಗಂಧ ಪುಷ್ಪ ಮಾಡ್ಯಾಳ ಅರಸಿ ನಗಿಯಲ್ಲಿ||೩||
||ಚಾಲ||
ಹೋ ಸಖಿ ಯಾರಿಗೆ ಹೋಗಿ ಅಪ್ಪುತಾ | ವನಜಾಕ್ಷತಾ||೧||
ಬಹು ಹರುಷದಿ ಲೋಲಾಡಿ ಮುಡಿಗಳ ತೀಡುತಾ | ಮುಂದಕ್ಕೋಡುತಾ||೨||
ಕಾಶೆ ಪ್ರದ್ಯುಮ್ನನಂತೆ ಹುಬ್ಬಗಳೇರಿಸಿ ನೋಡುತಾ | ನಲ್ಲಾಡುತಾ||೩||
||ಏರ ||
ಬಂದಾನ ವನದಲ್ಲಿ ಚಂದ ಅಶ್ವವು ಮುಂದಕ ಚ್ಯಾಚುತಲೆ ಮುಕುಂದನು |
ಆನಂದದಿ ವನದಲ್ಲಿ ಗೋವಿಂದನು |
ನೋಡಿ ಆನಂದ ಮನದಲ್ಲಿ ಮುಕುಂದನು |
ಎಂದು ಕಂಡಿಲ್ಲ – ಎಂದು ಕಂಡಿಲ್ಲ ಇಂಥಾ ಮೇಲಾದ ಸ್ತ್ರೀಯಳ ವೃಂದದಿ
ಸುರರಂತೆ ತ್ರಿಜಗಕಾಂತಿ |
ಮಲ್ಲಿಗೆ – ದುಂಡಮಲ್ಲಿಗೆ ||
||ಕೂ.ಪ.||
ಏನ ಮಾಡಿದರಿವಳು ಎನಗ ಆದಾಳ ಪ್ರಾಣ ಸತಿ||೧|| ||ನಿನ್ನ||
ಚೌಕ – ೨
||ನುಡಿ ||
ಪದ್ಮಾವತಿನ ಕರದ ಹರಿ ಅಂದ ಪದ್ಮ ಲೋಚನೆ |
ನಿನ್ನ ತಾಯಿ ತಂದಿ ಯಾರ್ಯಾರ ನಿನ್ನ ಹೆಸರೇನೆ||೧||
ತಾಯಿ ಧರಣಿದೇವಿ ತಂದಿ ಆಕಾಶ ರಾಜಾನೆ |
ದೊರಿ ಪ್ರೀತಿ ಮಗನ ನನ್ನ ಕೆಣಕದ್ಹೋಗೊ ಸುಮ್ಮನೆ||೨||
ಕೇಳ ಜಾಣಿ ನಿನ್ನ ರೂಪಕ್ಕೆ ಭ್ರಮೆಗೊಂಡೀನೆ |
ಒಪ್ಪುವಂಥಾ ತೊಡಿಗಿ ಅರ್ಧಾಂಗಿ ಆಗಬಾರ್ದೇನೆ||೩||
ಸರಿಬಾರ್ದ ಮಾತಾ ಮಾತಾಡಿದರ ಬೇಡೀ ತರಸಿ ಜಡಸೀನೆ |
ನಮ್ಮ ತಂದಿಗ್ಹೇಳಿ ನಿನ್ನ ಜೀವದಿಂದ ಕೊಂದ ಹಾಕ್ಸೀನೆ||೪||
||ಚಾಲ||
ಹೋ ವೇಣಿ ನಿನ್ನ ಧ್ವನಿ ಕೇಳಿ ಹರುಷಾಗಿ | ಬಾರ ಎದುರಿಗಿ||೧||
ನಿನ್ನ ಕಡಿನೋಟ ಬೇಡೀ ಕಡೀದಾಂಗ ಹಾಕಿದಿ ಕಾಲೀಗಿ | ನಡಿ ಮಾಲೀಗಿ||೨||
ಕುಡ ವಚನ ಗಡದಿಂದ ತಡಾಮಾಡಿ ಅನಬ್ಯಾಡ ನಾಳೀಗಿ | ಪ್ರಾಣ ತಗಿಬಿಗಿ ||೩||
||ಏರ||
ವೆಂಕಟೇಶನ ಮಾತ ಪಂಕಜಾಕ್ಷಿ ಕೇಳಿ ಕೊಂಕಾಡಿ ಕೋಪವ ಮಾಡುತಲಿ |
ಬಹುಬಿಂಕದಿ ಸಖಿಯರು ಕೊಡುತಲಿ |
ಅಲ್ಲಿ ಹಂಕಾರ ಕಲ್ಲೀಲೆ ದೂಡುತಲಿ |
ಎಲ್ಲಾ ಗೆಳತ್ಯಾರ-ಎಲ್ಲಾ ಗೆಳತ್ಯಾರ ಕೂಡಿ ಕಲ್ಲಿಲಿ ಒಗದಾರ
ಅಲ್ಲಿ ಅವನ ಅಶ್ವ ಬಿದ್ದಿತ ಧರಿಗೆ |
ಮಲ್ಲಿಗೆ – ದುಂಡ ಮಲ್ಲಿಗೆ ||
||ಕೂ.ಪ.||
ಆ ಕುದರಿ ಬಿಟ್ಟ ಉರಗನ ಏರಿದ ಶ್ರೀಪತಿ || ನಿನ್ನ ||
ಚೌಕ – ೩
||ನುಡಿ ||
ಮಾರ ಪಿತನ ರೂಪಕ್ಕೆ ಹಾತೋರಿ ಧರಣಿ ಕುಮಾರಿ |
ಎರಡು ಜಂಗ ನಡಗುತ ರೋಮ ನಿಂತಾವ ನಿಗರಿ||೧||
ಕುಚ ಉಬ್ಬಿ ಕಂಚುಕಿ ಸಡಲಿ ಆದಾಳ ಗಾಬರಿ |
ಸರ್ವಾಂಗ ಕಪ್ಪ ಆಗಿ ಧರಿಗಿ ಬಿದ್ದಾಳ ಸುಂದರಿ||೨||
ಬಾಯಮುಚ್ಚಿ ಭಾಷಣಿಲ್ದ ಸಖಿಯರೆಲ್ಲಾ ಹೌಹಾರಿ |
ರಾಣಿ ವಾಸದಲ್ಲಿ ತಂದ ಹಾಕ್ಯಾರಾಕಿನ ಹಾತೋರಿ||೩||
ಅನ್ನ ಉದಕ ತ್ಯಾಗ ಮಾಡ್ಯಾಳ ಕಾಮ ತಾಪ ಏರಿ |
ಎಡ ಬಲಕ ತಾಯಿ ತಂದಿ ಹಲಬತಾರ ಪರಿಪರಿ||೪||
||ಚಾಲ||
ಹೋ ತೆಕ್ತಿಯೊಳಗ ಬಿಗದಪ್ಪ್ಯಾರು | ದುಃಖ ಮಾಡ್ಯಾರು||೧||
ಚಿಕ್ಕ ಮಗಳಿಗೆ ಯಾಕಿಂಥಾ ಕಾಲ ಒದಗಿತಂದಾರು | ನೀರ ತಂದಾರು||೨||
ತನ್ನ ದೇಶದೊಳಗೆ ಇರು ಮಂತ್ರಗಾರನ ಕರದ ತಂದಾರು | ಹೇಳ ಅಂದಾರು||೩||
||ಏರ||
ಕಂಜನಾಭನು ಮುಂದೆ ಕೊರವಂಜಿ ರೂಪದಲ್ಲಿ ಕಂಜಾಕ್ಷಿ ಬಳಿಯಲ್ಲಿ ಬರತಿದ್ದನು |
ಗುಲಗಂಜಿ ಹಾರ ಕಂಠಕ ಹಾಕಿದನು |
ಬಹಾರಸಿ ಕೋಲು ಕೋಲು ಎಂಬುವನು |
ಸಲ್ಲ ಕೇಳೂತ-ಸಲ್ಲ ಕೇಳೂತ ಅರಸಿ ತಾ ಭರದಿಂದ ಬಂದಾಳ
ಇದು ಏನು ಧ್ವನಿಯೆಂದು ಅರಮನಿಹೊರಗೆ |
ಮಲ್ಲಿಗೆ-ದುಂಡ ಮಲ್ಲಿಗೆ ||
||ಕೂ.ಪ.||
ಹರಿಶಬ್ದ ಕೇಳಿ ಕೊರವಿಮ್ಯಾಲ ಆದ್ಳ ಬಹು ಪ್ರೀತಿ||೩|| ||ನಿನ್ನ||
ಚೌಕ – ೪
||ನುಡಿ ||
ಪದ್ಮಾವತಿಯ ತಾಯಿ ಕೈ ಮುಗದ ಕೊರವಿಗೆ ಅಂತಾಳು |
ನನ್ನ ಮಗಳ ಅಲ್ಲ ನಿನ್ನ ಮಗಳ ನೋಡಿ ಕರೆ ಹೇಳು||೧||
ಅರಸಿ ಮಾತ ಕೇಳಿ ಕೊರವಿ ಮುಂದ ಸರದ ಕೂತಾಳು |
ಬೆತ್ತಾ ಮ್ಯಾಲಕ ಎತ್ತಿ ಒತ್ತಿ ಶಕುನ ನುಡದಾಳು||೨||
ಕೇಳಮ್ಮಾ ಅರಸಿ ವನದಲ್ಲಿ ಹೋದಾಗ ಇವಳು |
ಒಬ್ಬ ಪರಮ ಪುರುಷನ ರೂಪಕಂಡ ಬೆರತಾಳು||೩||
ಕಲ್ಲಕಲ್ಲಿಲೆ ಒಗದ ಅವನ ಕುದರಿ ಕೊಂದಾಳು |
ಆ ಮದನ ಶರಕ ಮಾತಾಡದೆ ಇಲ್ಲೆ ಮಲಗ್ಯಾಳು||೪||
ಅರ್ಪಿಸು ಅಂವಗ ನಿನ್ನ ಪುತ್ರಿ ಸುಖಾಪಟ್ಟಾಳು||೫||
||ಚಾಲ ||
ಹೋ ಮಂದಗಮನಿಗೆ ಅಂವ ವಪ್ಪ್ಯಾನು | ಬಿಗಿದಪ್ಪ್ಯಾನು|೧||
ತನ್ನ ಮಗಳನ್ನು ಕೇಳತಾಳು ಕೊರವಿಯ ಮಾತ ಇದ ಖರೆ ಏನು |
ಹುಸಿ ಅಲ್ಲೇನು||೨||
ಕೇಳಿ ಕೊರವಿಯ ಮಾತಿಗೆ ಅರಸಿ ತಾ ಅಂತಾಳ ಕೊಡುವೆsನು |
ಅಂವಗ ಇಡುವೆsನು ||||೩||
||ಏರ ||
ಇನ್ಯಾವ ಪತಿಯಿಲ್ಲ ಭುವನದೊಳಗ ತವಕದಿನಲ್ಲಿ ನೀಡವಗೆ |
ಪ್ರಾಣ ಸಹಿಸಲಾರದೆ ಕೊಡಂವಗೆ |
ಜಗಜ್ಜೀವನು ಅನಸಿದ ಜಗದೊಳಗೆ |
ಒಂದು ಭಾವದಿ-ಒಂದು ಭಾವದಿ ಅರ್ಪಿಸಿಯವಳನ್ನು ಅಂವಗ
ದೇವಾದಿ ದಏವ ಅನಸಿದ ಹರಿಗೆ |
ಮಲ್ಲಿಗೆ – ದುಂಡ ಮಲ್ಲಿಗೆ ||
||ಕೂ. ಪ. |
ಬಾಳಗೋಪಾಳ ಅಂತಾನ ಮುಂದ ಲಗ್ನದ ಕತಿ||೪|| ||ನಿನ್ನ||
ರಚನೆ : ಬಾಳಗೋಪಾಳ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ
Leave A Comment