ಮಾರಜನಕನಾಟವು ದಾರಿಗೂ ನಿಲಕದ್ದು
ಸರಿ ಅನಬೇಕಂವ ಮಾಡಿದ್ದು
ತ್ರೈಜಗದ ಕರ್ತಾ ಎಂದೆನಿಸುವುದು
ಹರಿ ಬ್ರಹ್ಮಗ ಅಸಾಧ್ಯವಾದದ್ದು
ಕೇಳೋ ಧರಣಿ ಪತಿ ರಾಜಾ ಜನಮೇಜಯಾ
ಬಾಣಾಸುರನ ಭುಜಭಾರ ಇಳಿದದ್ದು
ಹೇಳುವೆ ಅನಿರುದ್ಧ ಉಷಾಕೂಡಿದ್ದು||ಪಲ್ಲ||

ವರದ ಪುತ್ರ ಈಶ್ವರಗ ಬಾಣಾಸೂರ ಭಾಳಧೀರ
ಸಹಸ್ರ ತೋಳಿಂದ ಶೋಭಿಸುವಾಗ
ಅವಗ ಇದರ ಗೊಡವೆ ವೀರಲಿಲ್ಲ ಧರಿಯೊಳಗ
ಬಹಳ ಗರ್ವ ಬಂದೀತ ಆತನ ಮನಸಿನೊಳಗ
ಮೂರು ಲೋಕದೊಳಗ ನನ್ನ ಸರಿಗಟ್ಟಿ ನಿಲ್ಲುವಂಥ
ವೀರರಿಲ್ಲ ನಿರ್ವೀರರಾದರೀಗ
ಯುದ್ಧ ಮಾಡದೆ ಭುಜ ಭಾರಗೊಂಡಾವ ಎನಗ
ಮದ ಮಸ್ತ ಆಗಿ ಬಂದ ಪಾರ್ವತಿ ಸಹಿತ
ಕೈಲಾಸ ಪತಿ ಇದ್ರ ಆನಂದದೊಳಗ
ಹಸ್ತ ಮುಗಿದ ನಿಂತ ಕೇಳತಾನ ಈಶ್ವರಗ
ಎನ್ನ ದಣಿಸುವಂಥ ವೈರಿ ಕೊಡು ಕಣದೊಳಗ
ಕೇಳಿ ಬಾಣಾಸೂರನ ಮಾತೆ ಹೇಳಿದ ಉಮಾಕಾಂತ
ಕಾಳ ವೇಳಿ ಕೂಡಿ ಎಂತ ನಿಂದ ಬೇಗ
ವೈರಿ ಆದ ತಿಳಿ ಧ್ವಜ ಕಳಿಸ ಬಿದ್ದಾಂಗ
ಬಂದಾನ ಅಸುರ ಮಂತ್ರಿಗೆ ಅಂದಾನ ನನ್ನ ಶತ್ರು
ಹುಟ್ಯಾನ ಇಂದಿಗಿ ಪೃಥ್ವಿಯ ಒಳಗ
ಧ್ವಜ-ಸ್ತಂಭ-ಕಳಸ ಕಾಯಿರಿ ಇನ್ನ ಒಳಿತಂಗ
ಭಾಳ ಬಂದೂಬಸ್ತ ನದರ ಇರಲಿ ಅದರ ಮ್ಯಾಗ
ಹೇಳಿ ತನ್ನ ಗರ್ವಿನಲಿ ದಂಡದಳ ತಯಾರಲಿಂದ
ಹುಷಾರಗೊಂಡ ಇದ್ದ ತನ್ನ ಪುರದೊಳಗ
ಮುಂದ ತಪ್ಪಲಿಲ್ಲ ಜಗದೀಶ ಭವಿಷ್ಯ ಹೇಳಿದಂಗ
ಬಾಣಾಸೂರನ ಮಗಳ ಉಷಾ ಜಾಣ ಪ್ರಾಯದಿಂದ ಉಮಾ-
ಮಹೇಶ್ವರ ಇದ್ದಲ್ಲಿ ಹೋದಾಳ ಆಗ
ಮನ ಭ್ರಮಿಸಿ ಬಿಟ್ಟಾಳ ನಾಮ ಸ್ತುತಿ ಒಳಗ
ಉಮಾಧೀಶ ಪ್ರೇಮದಿಂದ ಹಿಡದ ಆಕಿನ್ನ ಕೈಯಾಗ
ಏನ ಬೇಡತಿ ಬೇಡು ಮಗಳ ಕೊಡವೇನ ಇಂದಿಗಿ
ಸುಖ ಇಡುವೆನ ನೋಡುವೆನ ಐಶ್ವರ್ಯ ಹ್ಯಾಂಗ
ಪೂರ್ಣ ಮಾಡುವೆನ ಮನಸಿನೊಳಗ ಇದ್ದಾಂಗ

||ಚಾಲ||

ಉಷಾ ಅಂತಾಳ ಸಾಂಭವಿ ಪ್ರಾಣಕಾಂತನ ಹೊರ್ತ
ಮನ್ಮಥನ ಯತಿಯು ನಿಂತ ಹೇಳತಾರೆ
ಏಕಾಂತ ಇಲ್ಲದ ತಾಳಲಾರೆ
ಚಂದ್ರನ ಹೊರತ ಚಕೋರ
ಜಲದ ಹೊರತ ಜಲಚರ
ಸೊರಗಿದಂತೆ ಕರಗಿ-ಮರಗಿರಲಾರೆ
ಧರಗೆರಗಿ ಬಿದ್ದ ಏಳಲಾರೆ
ಪ್ರಾಣದೊಲ್ಲಭ ಇಲ್ಲದೆ ಎನ್ನ ಲಾವಣ್ಯ ಸುಟ್ಟ
ಸುಣ್ಣದ್ಹರಳಿನಂತೆ ಸುಡಲಾರೆ
ಕಾಯಾ ಕಣ್ಣಿನಿಂದ ಕ್ಷಣ ನೋಡಲಾರೆ

||ಸಣ್ಣ ಚಾಲ||

ಮೂರು ಲೋಕದೊಳಗ ಎಲ್ಲಾ ಮಹೇಶ್ವರಿ
ಸುರತಕಿರಲಾಕಿಲ್ಲ ಆತನ ಸರಿ
ಎನ್ನ ಚಲ್ವಿಕಿಗಿ ಒಪ್ಪುವಂಥ ದೊರಿ
ಎಂದ ಕಂಡೆನವ್ವಾ ಅಂತಾ ಐಶ್ವರಿ
ಕೇಳಿ ಸಂತೋಷದಿಂದಲೇ ಗೌರಿ
ಚಿಂತಿ ಮಾಡಬೇಡ ಅಂತಾಳ ಸುಕುಮಾರಿ
ವೈಶಾಖ ಶುದ್ಧ ದ್ವಾದಶಿ ದಿವಸ ನಿನ್ನ
ಸ್ವಪ್ನದೊಳು ಪುರುಷ ಬಂದು
ನಿನ್ನಲ್ಲಿ ರತಿ ಕ್ರೀಡಾ ಆಡುವುದು
ಭಾಳ ಸರಸ ಸಂಗ ಸವಿ ಸುಖ ನೀಡುವುದು
ನೀನು ಖಾಸ ತಿಳಿ ಆತನ ನಿನ್ನ ಪತಿ ಎಂದು
ಕೇಳೋ ಧರಣಿ ಪತಿ ರಾಜಾ ಜನಮೇಜಯ
ಬಾಣಾಸುರನ ಭುಜ ಭಾರಾ ಇಳಿದದ್ದು
ಹೇಳುವೆ ಅನಿರುದ್ಧ ಉಷಾ ಕೂಡಿದ್ದು ||೧ನೇ ಚೌಕ||

ಕೇಳಿ ಉಷಾನ್ಹರುಷ ಮೂರು ಲೋಕದೊಳು ಮೀರಿ ಹಿಂದಿನ
ಮಾರನೇಟ ದುಃಖವೆಲ್ಲಾ ಮರತಾಳು
ಕೈ ಬೆರಳಲ್ಲಿ ದಿನಗಳ ಎಣಿಸಿ ನೋಡತಾಳು
ನಾಳಿ ಗಿರಜೆ ಕೊಟ್ಟ ವರದ ತಿಥಿ ಅಂದಾಳು
ಎದ್ದು ಉಷಃಕಾಲದಲ್ಲಿ ಕರೆದು ಚಿತ್ರರೇಖಾ ಪ್ರಾಣ
ನಾಥ ಬರುವನಿಂದು ನಿದ್ರಿ ಸ್ವಪ್ನದೊಳು
ಭಾಳ ನಲ್ಲೆ ತಾನೆಲ್ಲೂ ಸಿಂಗರಿಸಿದಳು
ಉನ್ನತ ನಿಲುಗನ್ನಡಿ ನಿಲ್ಲಿಸಿ ಪನ್ನೀರಲಿ ಮುಖ ತೊಳಿದಳು
ಅರಿಷಿಣ ಬೆವರ ಎರಡೂ ಗಲ್ಲಕೇರಿಸಿದಳು
ಚಿನ್ನದ್ಹಣಿಗಿಲ್ಹಿಕ್ಕಿ ಸರಳ ಬೈತಿಲೆ ತಗದಳು
ಹರಳ ಹವಣಾದಿಂದೊಡಮುರಿದ ಜಡಿ ಹೆಣೆಯುವಳು
ಒದ್ದೆ ಪಾವಡದಿಂದ ಬೆನ್ನು ಹೆಡಕು ಹೆಗಲ ಕೊರಳಿನೊಳು
ಬಂದಂತ ಬೆವರ ಮುಂಚೆ ವರಿಸಿಹಳು
ಭಾಳ ಸಿಸ್ತದಿಂದ ಒಂದೊಂದ ವಸ್ತ ತೊಡುವಳು
ರನ್ನದಿ ಕೆತ್ತಿಸಿದಂಥಾ ರಾಗುಟಿ ಚವಲಿ ಹೆರಳಿನಲ್ಲಿ
ನಲವುಗೊಂಡೆ ಮ್ಯಾಲೆ ಮುತ್ತಿನ ಕುಂಚೆಗಳು
ಹೊಸ ಚಿನ್ನದ ಅರಗಿಳಿ ಇಟ್ಟು ನಲಿಯುವಳು
ಹಸರ ಜರದ ಬಣ್ಣದ ಕುಬಸ ಬಿಗಿದು ತೊಡುವಳು
ಸುಲದ ಹಲ್ಲಗಿ ನಾರಿ ಜಾಚಿಲಿ ವರಿಸಿಹಳು
ಬಿಸಿ ಜಲದಿ ನೀರ ಮುಕ್ಕಳಿಸಿ ಉಗುಳುವಳ
ಚಿನ್ನಗಿಳಿ ದುಂಬಿ ಮುಖಾ ನೋಡಿ ನಗುವಳು
ಸಣ್ಣ ಚಂದ್ರಗಾಮಿ ಪಂಚವರ್ಣ ಪೈಠಾಣಿ ಸೀರಿ
ಜರತಾರ ಉಟ್ಟ ನಿರಿಗೆ ತೀಡುವಳು
ಕನ್ನೆ ಶಿರೋಮಣಿ ತಾಟ ಮಾಟ ಮಾಡುವಳು
ತನ್ನ ಕಣ್ಣಿಗೊಪ್ಪುವಂಥಾ ಆಭರಣಗಳು
ಜಾತ ಮುತ್ತಿನ ಎಳಿ ಜಾಣಿ ಬೈತಲಿ ತಳಪೀಗಿ
ಆತು ಇಮ್ಮಡಿಸಿ ಎರಡು ಕಡೆ ಬಿಗಿದಿಹಳು
ಮುಡಿಯ ಮುಂದೆಲೆಯಲಿ ಸೂರ್ಯ ಚಂದ್ರರ ಇಟ್ಟಿಹಳು

||ಚಾಲ||

ನಾಗರ ಕ್ಯಾದಗಿ ಚಂದ್ರಕೋರು ಚೆಂದದಿಂದ ಮುಂದ ಅರಳೆಲಿ
ಒಪ್ಪುವ ಹೆರಳಲಿ ತಿಲಕ ಕಸ್ತೂರಿ ಪತ್ರ ಬಟ್ಟ ಅದರಲಿ
ಕೂಡಿದ ಕುಡಿ ಹುಬ್ಬು ಪ್ರದ್ಯುಮ್ನನ ಬಿಲ್ಲು ಮೂಡಿದಂತೆ ಕಡೀಲಿ
ನಸಲ ಕೊರೆದಾಳು ಮಧ್ಯದಲ್ಲೊಪ್ಪುವ ಕಾಡಿಗಿ ಹಚ್ಚಿ ವಿರಳಿ ನೋಟದಲಿ
ಫುಲ್ಲಲೋಚನೆ ಕಿವಿಯಲ್ಲಿ ಹೊಳೆಯುವಂಥಾ ಚಳ ತುಂಬಟ್ಟ
ಮೀನ ಬಾವಲಿ ದ್ರಾಕ್ಷಿಬಳ್ಳಿ ಸಿಗಸಿ ಸುರಳ ಗುರಳಲಿ

||ಸಣ್ಣ ಚಾಲ||

ಮುತ್ತಿನ ಬುಗಡಿ ಮೂಗುತಿ ಮೂಗಿನಲಿ
ಅಂಥಾ ರತ್ನ ಯಾರ ಮಾಡ್ಯಾರ ಬೆಲಿ
ಸರಗಿ ಚಿಂತಾಕ ಸರಮುತ್ತ ಕೊರಳಲ್ಲಿ
ಮೆರೆವ ಏಕಾವಳಿ ಮ್ಯಾಲೆ ಜೋಮಾಲಿ
ಸರ ಸರದಾಳಿ ಮೋಹನ ಮಾಲಿ
ಸರ್ವ ಉರದಲೊಪ್ಪುವ ಪದಕ ಅದರಲ್ಲಿ
ತರತರದ ತಾವರೆ ಅಂತೆ ಪರಿಪರಿ ಆಭರಣ
ಹರಿಣಾಕ್ಷಿ ಕೊರಳಲ್ಲಿಟ್ಟ ನಲಿದಾಡುವುದು
ಮೀರಿದ ಲಾವಣ್ಯ ಮತ್ತಿಷ್ಟು ಎದ್ದು ತೋರುವುದು
ಮುಂಚಿನಕ್ಕಿಂತ ನೂರಪಾಲ ಹೆಚ್ಚು ಗಣಿಸುವುದು
ಕೇಳೋ ಧರಣಿಪತಿ ರಾಜಾ ಜನಮೇಜಯ ||೨ನೇ ಚೌಕ||

ವಜ್ರಟಕ್ಕೆ ಗೆಜ್ಜಿಟಕ್ಕೆ ಚಂದ್ರಹಾರ ಮಧ್ಯದೊಳು
ನೀಲವರ್ಣ ಹರಳ ಕೆತ್ತಿಸಿದಂಥಾ ಪದಕಾ
ಕಲಶ ಕುಚದಲಿ ಕುಂಕುಮ ಕೇಸರಿ ರೇಖಾ
ವರಿಸಿ ಚಿನ್ನದ ಅರಗಜ ಜ್ಯೋತಿಯ ಅದಕಾ
ಕರದಲ್ಲಿ ಕಂಕಣ ದ್ವಾರಿ ಮೀರಿದ ಹಸ್ತ ಕಡಗನಿಟ್ಟು
ಹರಡಿ ಕೈಕಟ್ಟಿ ರತ್ನದ ತುಣಕಾ
ಹವಳ ಪಾಟ್ಲಿ ಕುಂದಣ ತೋಡೆ
ಸರಸಿ ಇಡುವೋಳು ಹಿಂದಕಾ
ಹೊಳೆಯುವ ವಜ್ರ ಕೆಚ್ಚಿದುಂಗುರ ಹತ್ತು ಬೆರಳಿನಲ್ಲಿಟ್ಟು
ತೋಳ ಬಂದಿ ಹಾಕಿ ನಾರಿ ಒನಪಕ್ಕಾ
ಭಾಳ ಮೀರಿದ ಒಂಕಿ ಬಾಪುರೆ ಬಾಜುಬಂದಕಾ
ಕೆಳಗ ಇಳಿಯ ಬಿಟ್ಟಾಳ ಮುತ್ತಿನ ಗೊಂಡೆ ತಿಳಿಪಕ್ಕಾ
ಥಳಿಥಳಿಸುವ ಸೂರ್ಯಶಶಿ ಉಸರ ಹಾಕಿ ನೋಡುವರು
ಕಳೆಗುಂದಿ ಕಮ್ಮಿ ಆದೀತಾ ಬೆಳಕಾ
ಇನ್ನು ಇಳಿಯೊಳಗಿಲ್ಲಾ ಇಕಿ ಸ್ವರೂಪಕ್ಕಾ
ಮೇಲಾಗಿ ಒಡ್ಯಾಣ ಕೀಲಿ ಸೂತ್ರಿ ಬಿರಕಿ ಬಿಗಿದು
ಹಲಿವಿರುಳಿ ಕಾಲಿನಲಿ ಇಟ್ಟ ಜೋಕಾ
ಕಾಲಕಡಗ ಮುರಡಿ ಸರಪಳಿ ಭಾರಕಾ
ಕೆಳಗೆ ಪೈಜಣಿಟ್ಟ ಹೆಜ್ಜೆ ಚೆಲ್ಲುವಳು ಮೆಲ್ಲಕಾ
ಕಾಲುಂಗರ ಕಿರಿಪಿಲ್ಲೆ ಮೀನ ಮೆಂಟಕಿ
ಭರದಿಂದ ಅಣಿಮೆಂಟ ಇಟ್ಟಾಳ ಒಂದ ಸವತೂಕಾ
ಪಾದಾ ಸರಸಿ ಇಟ್ಟ  ನೋಡತಾಳ ಹಾದ ಮುಂದಕಾ
ಸುರಹೊನ್ನಿ ಜಾಜಿ ಮಲ್ಲಿಗಿ ಹಾರ ತುರಬಿಗಿ ಹಾಕಿ
ತುರಬ ಕೇತಕಿಯಿಂದ ಶೋಭಿಸುವ ಮಸ್ತಕಾ
ನಾರಿ ಸಿರಿಗಂಧ ಹಚ್ಚಿ ಕಡಕಾ
ಅಭಿರ ಅಷ್ಟಗಂಧ ಹಚ್ಚಿ ತನ್ನ ಕಂಠಕಾ
ಹಸಿರ ಜರದ ಶಾಲ ಜಾಣಿ ವಿಚಾರದಿಂದ ಮುಸಕ ಹಾಕಿ
ಕಿರಿಯ ನಗುವ ನಗುವುತ ಹೊರಗಿನಂಗಳಕಾ
ದೂತೆ ಕರದಲ್ಲಿ ಕರ ಇಟ್ಟ ಬಂದಳಾಕ್ಷಣಕಾ

||ಚಾಲ||

ಸಾಲ ಸಾಲ ದಾಸೇರ ಮೇಲೆ ಮೇಲೆ ನಿಂತ ತಾಂ-
ಬೂಲವನ್ನು ಮಡಚಿ ಕೊಡುವ ತಾರೀಪಾ
ಮುದ್ದ ಸುರಸುವಂಥಾ ಶಬ್ದ ಅಪರೂಪಾ
ಹರದ ಹೊಂಟೀತ ಸುತ್ತ ಹರದಾರಿ
ನಾರಿ ಸರಸಿಜಾಕ್ಷಿ ಮೈ ಸುಗಂಧ ಧೂಪಾ
ದರದರ ಹೆಜ್ಜಿಗೊಂದಂದಾ ವನಪಾ
ಚಲ್ವ ಪಾದ ಕಂಡ ಕೂರ್ಮ ಮಡಾ ಧೃತಿ-
ಗೆಟ್ಟು ಕಾಲಗತಿ ನೋಡಿ ಸಂತಾಪಾ
ಕೊಳಾ ಸೇರೀತ ತುಡಗಲಿ ಹೋಗಿ ಗಪ್ಪಾ

||ಸಣ್ಣಚಾಲ||

ಹೊಳೆವ ಚದುರಿ ಮಣಕಾಲ ಮಣತೀಗಿ
ಬಿಲ್ಲ ಅಡಗೀತ ಮನ್ಮಥನ ಬೆನ್ನೀಗಿ
ಕೋಮಲವಾದ ದುಂಡ ತೋಳ ತೊಡಗಿ
ಬಾಳಿ ಹೊಡಿ ಚೆಲ್ಲಿ ನಿಂತೀತ ತಲಿಬಾಗಿ
ಬಾಗಿ ಬಳಕುವಂತೆ ಚಿಕ್ಕ ನಡುವಿಗಿ
ಸಿಂಹ ನಾಚಿ ಗವಿ ಸೇರಿತ ಹೋಗಿ

||ಕೂಡಪಲ್ಲ||

ರಂಭಿ ಎದಿಮ್ಯಾಲ ತುಂಬಿ ಬಂದಂಥ ಕುಚಗಳ ಕಂಡು
ಕುಂಬ ಸ್ಥಳಕ ಗಜ ಮಣ್ಣ ಜಗೆಯುವುದು
ಹೊಳೆಯುವಂಥಾ ಕರಗಳ ಸರ್ಪಾ ನಿಂತ ನೋಡುವುದು
ನಾಚಿಕಿಂದ ನಲುಗಿ ಭೂಮಿ ಸೇರಿತ ಬಗಿದು
ಕೇಳೋ ಧರಣಿಪತಿ ರಾಜ ಜನಮೇಜಯ||೩ನೆ ಚೌಕ||

ಕೆಂಬಲ್ಲಿ ಹೋಲ್ವಿಕೆ ನೋಡಿ ದಾಳಿಂಬರಿ ಬಳಲಿ ಬಳಲಿ
ಭಾಳ ನಾಚಿ ತನ್ನ ಬಾಯ ತೆರದೀತು
ನಿಂಬಿ ರಂಬೆ ಮೈ ಬಣ್ಣಕ ಹುಳಿ ಆದೀತು
ಹೊಳೆಯುವಂಥಹ ಕಣ್ಣುಗಳಿಗೆ ಎರಳಿ ಬೆದರೀತು
ಸುರಳಿಗುರಳ ಭೃಂಗ ಕಂಡ ಕಟ್ಟಿಗೆ ಸರದೀತು
ಒಳೇ ಸರಳ ಮೂಗ ನೋಡಿ ಸಂಪಿಗೆ ಬೆಚ್ಚೀತು
ಮುಖ ಕಮಲ ಚಂದ್ರಾಮ ನಡುವೆ ಕಪ್ಪಾಯಿತು.
ಜಾಣಿ ಶಿರೋಮಣಿ ವಾಣಿ ಸರಸ್ವತಿ ತಾನೇ ಕೇಳಿ
ಪಂಚ ಬಾಣನಿಂದ ಸಿಲ್ಕಿಯು ಹೊತ್ತು
ರತಿದೇವಿ ಸ್ತ್ರೀಯರಿಗೆಲ್ಲಾ ಭ್ರಾಂತಿ ಬಡಕೊಂಡಿತ್ತು
ಇಕಿ ಊಳಿಗ ಮಾಡೀವಂದ್ರ ದೂರಿದ್ದಾಂಗಾಯಿತು
ಮೀರಿದ ಲಾವಣ್ಯ ಮತ್ತೆಷ್ಟು ವರ್ಣಿಸ್ಹೇಳಲಿ
ಕವಿ ನಾಲಿಗೆ ದಣಿದ ಬ್ಯಾಸತ್ತ ನಿಂತು
ಈ ವರ್ಣನೆಗಿಂತ ಇಕಿ ಸ್ವರೂಪ ಹೆಚ್ಚಾಯಿತು
ಚಪ್ಪರ ಪಲಂಗ್ಹಾಸಿಗೆ ಮೇಲೆ ಗಿರವಿಲೇಪ ತಡಿ ಇಟ್ಟು
ಮಲ್ಲಿಗ್ಹೂವ ತೆಲ್ಯಾಡ್ಯಾಳ ಸುತ್ತಮುತ್ತ
ನಾಲ್ಕು ಮೂಲಿಗೆ ಕರ್ಪುರ ದೀವಿಗೆ ಹೊತ್ತು
ಮಲಗಿಕೊಂಡಾಳ ಮೇಲ ಕಾಲ ಜೋಡಿ ಹೊತ್ತು
ತಲಿ ಬುಡಕ ತೋಳ ಕೊಟ್ಟ ವಲ್ಲಭನ ದಾರಿ ನೋಡ್ತ
ಸ್ವಲ್ಪ ನಿದ್ರಿ ಕಣ್ಣಿಗೆ ಜೊಂಪ ಹೊಡದೀತು
ಆಗ ಪಾರ್ವತಿ ವರ ಅಲ್ಲೆ ಖರೇ ಆದೀತು
ಬಂದಾನ ಅನಿರುದ್ಧ ಮಧ್ಯರಾತ್ರಿ ಉಷಾನ ಸ್ವಪ್ನದೊಳು
ಆಕಿ ನೀಡಿದ ತೆಕ್ಕಿ ಅಪ್ಪಿದಂತಾಯ್ತು – ಮುದ್ದಿಸಿ ಮುಖ
ನೋಡಿದಳಂತಾನ ತೊಡಿಯ ಮ್ಯಾಲ ಕುಂತು
ಒಳ್ಳೆ ಸುರತು ಸ್ವಾಶ ಸವಿ ಸುರದಂಗಾಯ್ತು
ಅಧರದೊಳು ಅಧರಿಟ್ಟು ಹೃದಯಕ್ಕೆ ಹೃದಯವಿತ್ತು
ಸುಖ ಸ್ವಾದ ಸವಿ ಸುರದಂಗ್ಹಾಯ್ತು
ಆತ ಕ್ರೀಡಾ ಮಾಡಿ ಕೂಡ್ಯಾರ ಆ ಹೊತ್ತು.

||ಚಾಲ||

ಮಲಗಿ ಸ್ವಪ್ನದೊಳು ಲೋಲ್ಯಾಡುತಂತಾಳ
ಪ್ರಾಣವಲ್ಲಭ ಮಾತ ಕೇಳರಿ
ಎನ್ನ ಅಗಲಿ ಎತ್ತ ಹೋಗಬೇಡಿರಿ
ಕಾಮನಾಟದ ಘೋರಕ ಶ್ರಮಗೊಂಡಿರಿ
ಇಂದಿಗ ಭಾಳ ಇನ್ನೊಮ್ಮೆ ಮುಖವ ನೋಡಿರಿ
ಮಧುರ ರಸ ಸರಸ ಸುರಿಸರಿ
ಬಾಯಿ ತೆರದೇನ ಪತಿರಾಯಾ
ಮಾಯಾ ಇಟ್ಟ ನನ್ನ ದೇಹದ ಕಡಿಗಿ ನೋಡಿರಿ
ನಾ ತೊತ್ತ ಇಲ್ಲ ನಿಮ್ಮ ಮೀರಿ

||ಸಣ್ಣ ಚಾಲ||

ಇಷ್ಟ ಆನಂದ ಆಗಿ ಕನಸಿನಲ್ಲಿ ಉಷಾ
ಮಲಗಿ ಮಾತನಾಡ್ಯಾಳು ಕೌತುಕಾ
ಹೊರಗ ಬೆಳಕಾಗಿ ಬಿದ್ದಿತ ಬೆಳಕಾ
ಎಚ್ಚರಾಗ್ಯಾಳ ಕೋಕಿಲ ಶಬ್ದಕಾ
ನಾರಿ ಅಡರಾಸಿ ನೋಡತಾಳ ಟಕಮಕಾ
ಎದ್ದ ಹಾದಾಳ ಗ್ವಾಡಿ ಕಂಬಕಾ

||ಕೂಡಪಲ್ಲಾ||

ಬಂದಂತ ಪುರುಷ ಎತ್ತ ಬಿಟ್ಟ ಹೋದನೆಂದು
ಸುತ್ತಮುತ್ತ ದಿಕ್ಕ ತಪ್ಪಿದಂಗ ನೋಡ್ಯಾಳ ಎದ್ದಾ
ಏ ಪ್ರಾಣನಾಥಾ ಎತ್ತ ಹ್ವಾದಿ ಒಗದ ನನ್ನ ಎನ್ನುತಾ
ಕಡದ ಬಾಳೀ ಉಳಿಸಿದಂತೆ ಉರಳ್ಯಾಳ ಬಿದ್ದಾ
ಕೇಳೋ ಧರಣಿ ಪತಿ ರಾಜಾ ಜನಮೇಜಯ||೪ನೇ ಚೌಕ||
ಎಚ್ಚರಾಗಿ ಉಷಾ ಹುಚ್ಚಿಯಂತೆ ಚಂಚಲಾಗಿ
ನಿಶ್ಚಿಂತ ಧರಿಗಿ ಬಿದ್ದಾಳ ಹಾರಿ ಪಾಮಾ
ಬಾಯಿ ಬಿಚ್ಚಿ ಮಾತನಾಡದಂತೆ ಸುಮ್ಮಾ
ಮಂಚದಿಂದ ಉರುಳಿ ಅಂತಾಳ ಎತ್ತ ಹ್ವಾದೋ ಶಾಮಾ
ಪ್ರಾಣಕಾಂತ ಬಂದ ಕ್ಷಣಕ ಹೊತ್ತೆ ನಗೆಮುಖಾ ಈಗ
ಗುರಿ ಮಾಡಿ ಎತ್ತ ಬಿಟ್ಟ ಪೋದನಮ್ಮಾ
ಶಾಂತ ಮಾಡಲಿಲ್ಲ ಎನ್ನ ಮನಸಿನ ಪ್ರೇಮಾ
ಚಿತ್ರರೇಖಾ ಉಷಾಗಂತಾಳ ಯಾಕಮ್ಮಾ ದೊರಿಶಾನಿ
ನಿನಗೇನಂತಾ ದುಃಖವಾಗೇದ್ಹೇಳಮ್ಮಾ
ಮೂರ ಲೋಕದೊಳಗ ಮಿಕ್ಕಿದ ಕಾರ್ಯ ಮಾಡೇನಮ್ಮಾ
ನೀನು ಸಾಕಿದಂಥಾ ತೊತ್ತು ನಾನು ನೋಡಮ್ಮಾ
ಕೇಳಿ ಉಷಾ ಅಂತಾಳಾಗ ಪ್ರಾದಿ ಸಖಿ ನಿನಗ
ಹೇಳೆನಂದರ ಎನಗ ಹೇಳಾಣಾಗದಮ್ಮಾ
ಎನ್ನ ಹರಣ ಹಾರಿ ಪ್ರಾಣ ಸೈರಿಸದಮ್ಮಾ
ರಾತ್ರಿ ಸ್ವಪ್ನದೊಳು ರತಿಕ್ರೀಡೆ ಆಡಿದಂತೆ ಪತಿ
ಎತ್ತ ತಪ್ಪಿಸಿ ಹೋದ ನೋಡಮ್ಮಾ
ಎದಿಗೆ ಎದಿ ಹೋಲುವಂಥಾ ಗದ್ದಾ ಹಿಡಿದನಮ್ಮಾ
ಅಂತವನ್ಹೊರತ ಜಡದೇಹ ನಂದು ಸುಡಲಮ್ಮಾ
ಈರೇಳು ಲೋಕದೊಳಗಿಲ್ಲ ಚಲ್ವಿಕಿಗೆ ಹೋಲುವುದಿಲ್ಲ
ಏನು ಸುಡತಿ ತಗಿ ಕಪ್ಪ ಚಂದ್ರಾಮಾ
ಅವನ ಮೇಲಿಂದ ನಿವಾಳಿ ಮಾಡಿ ಒಗಿ ಕಾಮಾ
ವಿರಹ ತಾಪದಿಂದ ಅರ್ಧ ಕ್ಷಣ ಆದರೂ ತಾಳಲಾರೆ
ದಾರ ಮುಂದ ದುಃಖ ಹೇಳಲಮ್ಮ
ಅಂತಾದೇನು ಮಾಡಿ ಬಂದೀದೇನು ನಾ ಕರ್ಮಾ
ಗಂಡ ಇಲ್ಲದ ಭಂಡ ಆದೀತವ್ವಾ ನನ್ನ ಜಲ್ಮಾ
ಚಿತ್ರರೇಖಾ ಅಂತಾಳ ತಾಯಿ ಮತ್ತ ಬಿಡು ದುಃಖಾ ಎನಗ
ನಾರದ ಕೊಟ್ಟ ವರದ ಒಂದು ಅಡೀ ಅಮ್ಮಾ
ಆ ಜೋಲಿನಿಂದ ನಿನ್ನ ಪತಿಯ ತರುವೆನಮ್ಮಾ

||ಚಾಲ||

ಮೂರು ಲೋಕದೊಳಗೆ ಇದ್ದ ಪುರುಷನ
ತರಿಸಿ ವೀರರನ್ನೆಲ್ಲಾ ಬರೀತೇನೆ
ದಾರಿ ನೋಡವ್ವ ಇದರಾಗ ನಿನ್ನ ಪತಿ
ಚಿತ್ರ ಬರೆದ ತೋರಿಸ್ಯಾಳ ಆಗ ಗೆಳತಿ
ಇದು ಸ್ವರ್ಗ ವಿಸ್ತಾರಾ ಭಾಳ ನದರಿರಲಿ
ವರುಣ, ಯಮ, ಇಂದ್ರ, ತಾರಾಪತಿ,
ಅಗ್ನಿ, ಕುಬೇರ, ಮಾರುತಿ, ಬ್ರಹಸ್ಮತಿ
ಉಷಾ ಅಂತಾಳ ಲೋಕದಾಗ ಪ್ರಾಣಪತಿ
ಇಲ್ಲ ತಗಿ ಸುಳ್ಳ ಯಾಕ ತೋರಸತಿ
ಆಗ ತೋರಸ್ಯಾಳ ಪಾತಾಳದ ಅಳತಿ

||ಸಣ್ಣ ಚಾಲ||

ಉಷಾ ಅಂತಾಳ ಇಲ್ಲಮ್ಮ ಇದರಾಗ
ಮೃತ್ಯುಲೋಕ ತೋರಿಸ್ಯಾಳ ಆವಾಗ
ದ್ವಾರಕಾ ಪಟ್ಟಣದ ಸಮುದ್ರದೊಳಗ
ಅಲ್ಲಿ ತಸ್ವೀರ ಬರದಾಳ ತಾನು ಬೇಗ
ಉಷಾ ನಾಚಿ ಶರಗ ಹಾಕ್ಯಾಳ ತಲಿಮ್ಯಾಗ
ಪತಿ ನೋಡವ್ವ ಮಲಿಗ್ಯಾನ ಮಂಚದ ಮ್ಯಾಗ

||ಕೂಡ ಪಲ್ಲ||

ಮಧ್ಯರಾತ್ರಿಯೊಳಗ ಅನಿರುದ್ಧನ ತಂದರ ಸಖಿ
ಕೊಡುವೆ ನಿನಗ ಏನ ಬೇಕಿದ್ದು
ಅಂದ ಮಾತಿನಿಂದ ಪ್ರಾಣ ಹೋಯಿತ ಸೈರಿಸದು
ಚಿತ್ರರೇಖಾ ಅಂತಾಳ ಚಿಂತಿ ಬಿಡ ತರುವುದು
ಕೇಳೋ ಧರಣಿಪತಿ ರಾಜಾ ಜನಮೇಜಯ||೫ನೇ ಚೌಕ||

ಚಿತ್ರರೇಖಾ ಬಿದ್ದಾಳ ನಾರದ ಋಷಿ ಪಾದಮ್ಯಾಗ
ಹೇಳ್ಯಾಳೆಲ್ಲಾ ಬಿಡದೊಂದು ವರ್ತಮಾನಾ
ಅನಿರುದ್ಧನ ತರುದಕ್ಕ ಹೋಗುವಾಕಿ ನಾನಾ
ದ್ವಾರಕಾದ ಕಾವಲ ತಿರುಗುವದು ಸುದರ್ಶನಾ
ಅಂದಾನ ನಾರದ ಋಷಿ ಚಿತ್ರರೇಖಾ ಚಿಂತಿ ಬಿಡ
ನನ್ನಾಣಿ ಹಾಕಿದರ ನಿಂದ್ರೂದ ತಾನಾ
ಮಂತ್ರ ಹೇಳುವೆ ಅನಿರುದ್ಧ ಏಳದ್ಹಂಗ ಪುನಾಃ
ಬಂದಾಳ ದ್ವಾರಕಾಕ್ಕೆ ತಿರುಗಿ ಸುದರ್ಶನಕ
ಚಿತ್ರರೇಖಾ ನಾರದನ ಆಣಿ ಹಾಕ್ಯಾಳ ತಾನಾ
ಲಗು ಒಳಗ ಹೋಗಿ ನೋಡ್ಯಾಳ ಮಲಗಿದ್ದ ಅನಿರುದ್ಧ
ಮೋಹನಾಸ್ತ್ರ ಹಾಕಿ ಮಂಚ ನೆಗಿವ್ಯಾಳಾಕ್ಷಣಾ
ಅಂತ್ರ ಮಾರ್ಗದಿಂದ ಬಹಳ ತೀವ್ರದಲಿ ಬಂದ
ಉಷಾನ ಮಂದಿರದಲ್ಲಿ ಇಳಿಸ್ಯಾಳ ಆತನಾ
ನೋಡಿ ಉಷಾನ ಹರುಷಾ ಹಿಡಿಸವಲ್ದ ತ್ರಿಭುವನಾ
ಚಿತ್ರರೇಖಾ ಅನಿರುದ್ಧರ ಎಚ್ಚರ ಮಾಡಿ ಆಗಿನ ಕ್ಷಣ
ಸುತ್ತಮುತ್ತ ನೋಡ್ತಾನ ಖಬರಿಲ್ಲ ಏನಾ
ನೋಡ್ಯಾನೆಡಕ ಬಲಕ ನಿಂತಿರುವ ಸ್ತ್ರೀಯರನಾ
ಯಾವಾರ ಹೇಳಿರಿ ಇದು ಯಾವ ಮಾರಿ ರಾಜಾ ಇಲ್ಲೆ
ನೀವು ಯಾಕ ತಂದಿದೀರಿ ನನ್ನ ಸುಮ್ಮನಾ
ಖರೇ ಮಾತ ಹೇಳಿರಿ ಮೂಲ ಕಾರಣನಾ
ಚಿತ್ರರೇಖಾ ಅಂತಾಳ ಉಷಾ ಪ್ರಾಣಪ್ರಿಯದರಿಸಿ ಇಕೀ
ಜೀವದ ಗೆಳತಿ ಆಗಬೇಕ ನಾನಾ
ಗಿರಿಜೆ ವರವಿನಿಂದ ಬಿತ್ತ ಇವಳಿಗೆ ಸ್ವಪನಾ
ನೀವು ಭೋಗ ಕೊಟ್ಟ ಹೋದಿರಿ ಮೂಲ ಕಾರಣಾ
ಹೆದರಬ್ಯಾಡೋ ಪ್ರಾಣನಾಥಾ ನದರ ಇಡತಿ ದಾಸಿ ಮ್ಯಾಗ
ಇದರಾಗ್ಯಾವ ಮಾತ ಹೆಚ್ಚಿಂದಿಲ್ಲ ಇನ್ನಾ
ಇದರ ದಶಿಯಿಂದ ತಂದಿದ್ದೀವ ನಿಮ್ಮನ್ನಾ

||ಚಾಲ||

ಬಾಣಾಸುರನ ನಗರ ಇದು ಶೋಣಿತಪುರವು
ಪ್ರಾಣಪ್ರಿಯದರಸಿ ನಿಮಗ ಇಕಿ ಉಷಾ
ಚಿತ್ತ ಇಟ್ಟಾಳ ನಿಮ್ಮ ಪಾದಕಾ
ಕೇಳಿ ಅನಿರುದ್ಧ ಅಂತಾನ ಇಂಥಾ ವ್ಯಭಿಚಾರ
ಮಾಡೋದಕಿಂತ ಬಾಣಾಸುರಗ ಹೇಳಿ ಲಗ್ನಕಾ
ಏನ ಅಂಜಿಕಿತ್ತ ಹೇಳಿ ಕರಿಕಳಿಸುವದಕಾ
ನಿಮ್ಮ ತಂದಿ ಜರ ನಿಮ್ಮ ಮಾತ ಕೇಳದಿದ್ರ
ಒಂದ ಪತ್ರ ಕಳಿಸಬೇಕ ದ್ವಾರಕಾಕ್ಕಾ
ತಯಾರಾಗಿ ಬರತಿದ್ದೀವ ಯುದ್ಧಕಾ

||ಸಣ್ಣ ಚಾಲ||

ಜಾರ ಕರ್ಮ ಮಾಡುದಿಲ್ಲ ಸರಿ
ನಮ್ಮ ಸ್ಥಳಕ ನಮ್ಮನ್ನ ಕಳಿಸಿರಿ
ಉಷಾ ಹಾತೊರೆದು ಅಂದಾಳು
ಚಂದ್ರಬಿಂಬದ ಮುಖವ ನೋಡಿರಿ
ಚಕೋರ ಪಕ್ಷಿಯಂಥಾ ಕುಚ ಹಿಡಿಯಿರಿ
ಒಳ್ಳೆ ಅಕ್ಕರತೆಯಿಂದ ಸುಖ ಸುರಿಸಿರಿ
ಧಿಕ್ಕಾರ ಮಾಡಿ ಎನ್ನ ಹಾರಿಸಿ ಒಕ್ಕೊಟ್ಟ ನಡೆದರೆ
ನಿಮ್ಮ ಪಾದಕ್ಕ ನಿಶ್ಚಿಂತ ಪ್ರಾಣ ಕೊಡುವುದು
ಅಂತ ತೆಕ್ಕಿಲೆ ಹಿಡದಾಳ ಕೊರಳಿಗೆ ಬಿದ್ದು
ನಿಮ್ಮ ಲೆಕ್ಕಿಲ್ಲ ನನ್ನ ಬಯಕೆ ತೀರಿಸುವುದು
ಕೇಳೋ ಧರಣಿಪತಿ ರಾಜಾ ಜನಮೇಜಯ||೬ನೇ ಚೌಕ||

ಬೇಕಾಗಿ ಅನಿರುದ್ಧ ಯಾಕ ಆಗ ಒಲ್ಲದು ಸಖಿ
ಕೋಕಿಲದಂಥಾ ಶಬ್ದ ಕೇಳಿ ಮನಸೋತಾ
ರಂಗಮಂಟಪಕ ಹೋಗಿ ನಡಿಶ್ಯಾರವರು ಏಕಾಂತಾ
ಭಾಳ ಖುಷಿಯಿಂದ ಮನದಂಗಾಗಿ ಸಮ್ಮತಾ
ಅದೇ ವೇಳೆಯಲ್ಲಿ ಧ್ವಜಕಂಬ ಖಡ ಕಡಡಡ
ಧಡಧಡಿಸಿ ಬಿದ್ದೀತ ಅಡ್ಡ ಅವಚಿತ್ತಾ
ನೋಡಿ ಕಾವಲದವರೆದ್ದಾರಾ ಅಡಬಡಿಸುತಾ.
ದೂತರೋಡಿ ಬಂದ ರಾಜ ಕೂತಿದ್ದ ಸಭಾದಲಿ
ನಿಂತ ಅಂತಾರ ಕೇಳೋ ಪೃಥ್ವಿಯನಾಥಾ
ಧ್ವಜಕಂಬ ಕಳಸ ಬಿದ್ದೀತ ರಾಜಾ ಈ ಹೊತ್ತಾ
ಕೇಳಿ ಬಾಣಾಸೂರ ಆದ ಚಿಂತಾಕ್ರಾಂತಾ
ಅಂದಾನ ಇಂದೀಗಿ ವೈರಿ ಬಿದ್ದಾನ ನನಗೆ ಮುಂಚೆ
ಮಹಾದೇವ ಕೊಟ್ಟಂತಾ ವರವು ಖಚಿತಾ
ಈಗ ಬಂದೀತ ಪ್ರತಿತಿ ನನಗ ಆ ಮಾತಾ
ಅಷ್ಟ ಹೊತ್ತಿನೊಳಗ ದಾಸಿ ಬಂದಿದ್ದಾಳೆ ಅರಸಾ ನಿಮ್ಮ
ಮಗಳ ಕೃತ್ಯ ಏನ ಹೇಳಲಿ ವಿಪರೀತಾ
ಆರ ತಿಂಗಳಾಯಿತ ಪರಪುರುಷನ ಸಂಗಾತಾ
ನಿತ್ಯ ಕ್ರೀಡಾದಲ್ಲಿ ಇರತಾಳಾಕಿ ಭ್ರಮೀಸುತಾ
ನೋಡಿಕೋರಿ ನೀವು ಬೇಕಾದ ಮಾಡಿಕೋರಿ ನಾಳಿಗೆ
ಆಡಿಕೊಂಡಿರಂತೆ ಹೇಳುವೆ ಅಂಜುತಾ
ಧರಣಿ ಕೂತಾಳ ಮನಿಯಲ್ಲಿ ತರೂತಾ
ಕೇಳಿ ಬಾಣಾಸೂರ ಕಣ್ಣ ಕರ‍್ತದಂತೆ ಮಾಡಿ ತನ್ನ
ಸೈನ್ಯಕ ಹೇಳ್ಯಾವ ಲಗು ತಯಾರಾಗಲೆಂತಾ
ಗಗನ ಬಿಚ್ಚುವಂಥಾ ಗಡಣವಾದ್ಯ ಹೊಡೆಯುತಾ
ಉಷಾನ ಮಂದಿರಕೆ ಹಾಕ್ಯಾರ ಮುತ್ತಿಗಿ ಸುತ್ತ ಮುತ್ತಾ
ಸರ್ವರು ದೈತ್ಯರು ಎದ್ದು ಚೀರುವರು ಜಿಗ್ಗಾಸ ಕೊಟ್ಟಾ
ಹಾರುವು ತೋರುವರು ತಮ್ಮ ಪುರುಷಾರ್ಥಾ
ನಿಂತ ಕುರಿಯುವರು ವೈರಿಯನ್ನು ಬಾ ಅಂತಾ

||ಚಾಲ||

ಉಷಾ ಅನಿರುದ್ಧನ ವಿನೋದದಲ್ಲಿ ಇದ್ದ ವೇಳೆ
ಭಾರಿ ಘೋರ ಶಬ್ಧ ಬಿದ್ದಿತಾಕಿ ಕಿವಿಗಿ
ಎದ್ದ ಕೂತ ಕೇಳ್ಯಾನ ಭ್ರಾಂತ್ಯಾಗಿ
ರಾಜಹಂಸ ಪಕ್ಷಿ ಹಿಡದ ಪಂಜರದೊಳಗ
ಹಾಕಿದಂಗ ಆದೀತ ಇಂದೀಗಿ
ಮುಕ್ತಾ ಫಳ ಒಗದ್ಹಂಗ ಬೆಂಕೀಗಿ
ಅಮೃತದ ಕುಪ್ಪೆ ಕೆಸರೊಳಗ ಸುರವಿದಾಂಗ
ನೀವ ಬಂದ ಸಿಕ್ರಿ ನಮಗಾಗಿ
ನಮ್ಮ ಕಾಳ ಒದಗೀತ ಇಂದೀಗಿ

||ಸಣ್ಣ ಚಾಲ||

ಅನಿರುದ್ಧ ಆದಾನಿ ಸುಮ್ಮನಾ
ಮಾತನಾಡದಾ ಕೂತಾನ ಏನೇನಾ
ಖಡ್ಗದಿಂದ ಕೊಯ್ಯಿರಿ ಎನ್ನ ಗೋಣಾ
ತಪಾ ಮಾಡದೆ ಹೋಗಲಿ ಮುಂದೆ ಪ್ರಾಣಾ
ಅಂವಾ ಅಂತಾನ ಸಖಿ ಇದೇನಾ
ಯಾಕ ಪ್ರಾಣ ಹೋಗಲೆಂತಿ ಸುಮ್ಮನಾ

||ಕೂಡ ಪಲ್ಲ||

ಅನಿರುದ್ಧ ಅಂತಾನ ಸಖಿ ಇದ್ಯಾಕಿಷ್ಟ ದುಃಖ ಬಂದ
ಕ್ಷಣದಲ್ಲಿ ಚೆಲ್ಲುವೆ ಸಾಲಸಾಲ ಕೊರೆದು
ಕುಲದೀಪ ಇದ್ದೇನೆ ನಾ ಯಾವಂದು
ಹಲ್ಲ ಮುರಿದು ಬಿಸುಡುವೆ ಆತನ ಸಿರಹರಿದು
ಕೇಳೋ ಧರಣಿ ಪತಿ ರಾಜಾ ಜನಮೇಜಯಾ||೭ನೇ ಚೌಕ||

ವೀರ ಉಡಗಿ ಉಟ್ಟ ಬಾಗಿಲ ಸರಳ ಕೈಯಾಗಕಿತ್ತು
ಹಾರಿದ ಒಮ್ಮಗಿಲೆ ನಡವ ದಂಡಿನ ಒಳಗ
ಕರಿ ವೀರರನ್ನೆಲ್ಲಾ ಸವರ‍್ಯಾನ ಹರಿಮರಿಹಂಗ
ತಿರವಿ ಬಿಸರಾಡಿ ಹೊಡದಾನ ತನ್ನ ಬಲ್ಲಾಂಗ
ಸೋಲಾದಾವ ಎಲ್ಲಾ ಹೊಟ್ಟಿ ಮೇಲು ಮಾಡಿಕೊಂಡು ಬಿದ್ದು
ಕೋಲಾಹಲ ಹಿಡಿಸಿದ ಒಂದ ಗಳಿಗ್ಯಾಗ
ಹೆಣಾ ಸಾಲ ಮೇಲ ಬಾಳಿದಂಡ ಕೊರದ್ಹಂಗ
ಪುಂಡ ದೈತ್ಯರನೆಲ್ಲಾ ತುಂಡ ತುಂಡ ಮಾಡಿದಾತಿರುಗಿ
ಹಿಂಡೆ ಗ್ಹಾಂಡ ಹಂಗ ಓಡತಾರ ಕುರಿ ಮರಿ ಹಂಗ
ಕಂಡ ಬಂಡಾಗಿ ಬಿದ್ದಾವ ಮಣ್ಣ ಬಾಯಾಗ
ಕಂಡಗ ಮಾಂಸದಿಂದ ಕೆಕ್ಕರ ಹಣ್ಣು ಬಚ್ಚಿದ್ಹಾಂಗ
ತಂಡ ತಂಡ ವೀರರನೆಲ್ಲಾ ತುಂಡ ತುಂಡ ಮಾಡಿದ ಕೈ
ಮಂಡ ಮಂಡ ಮಾಡಿಕೊಂಡು ಬಿದ್ದು ರಣದೊಳಗ
ಭಾಳ ಅಮಿತದಿಂದ ಹೊಡತದ ಒಳಗ
ಕೆಲವರ ಓಡ್ಯಾರ ಮತ್ತೆ ಕೆಲವರ ಬಿದ್ದಾರ ಸತ್ತ
ಕೆಲವರ ತೇಲ್ಯಾಡತಾರ ರಕ್ತದ ಒಳಗ
ಕೆಲವು ಹೆಣಗೋಳ ಉಳ್ಯಾಡತಾವ ಗಾಯದೊಳಗ
ದಂಡ ಚೆಲ್ಲಾಪಿಲ್ಲಿ ನೆಲ್ಲಿಕಾಯಿ ಮಟ್ಟಿ ಒಲದಂಗ
ಕಾಲಾ ಬಾಲಾ ಎಲ್ಲಾ ಹೊಟ್ಟೆ ಮೇಲ ಮಾಡಿಕೊಂಡ ಬಿದ್ದು
ಸುಳ್ಳ ಉಂಡುಂಡು ತಿರಗವರ ಎಲ್ಲಾ ರಣದೊಳಗ
ಅಲ್ಲಾ ಖಂಡಗ ಮಾಲಿದಿ ಉಂಡಿ ನುಂಗಿದ್ಹಂಗ
ಗಾಯದಿಂದ ಉಳಿದ ಸೈನ್ಯ ಏಳತ ಬೀಳತ ಬಾಣಾಸುರಗ
ಅಳುತ ನೆಳ್ಳುತ ಹೇಳತಾರಾವಾಗ
ಉಳದ ಬಂದಾಂಗಾತರಿ ಅರಸಾ ಕಾಳನ ಬಾಯಾಗ
ನಾಳೆ ಗುಳೇ ಕಟ್ಟು ವ್ಯಾಳೆ ಬಂತು ನಮಗ ನಿಮಗ
ಕೇಳಿ ಬಾಣಾಸೂರ ಕೋಲಾಹಲ ಮಾಡಿದ ನಿಂತ
ಭುಜಗಳ ಚಪ್ಪಡಿಸಿ ಹಿಡಿದು ಕೈಯಾಗ
ಓಡಿ ಹ್ವಾದಾನ ಒಮ್ಮಿಗೀಲೆ ಅನಿರುದ್ಧನ ಮ್ಯಾಗ

||ಚಾಲ||

ಬತ್ತಿ ಹಿಡಿದ ಅನಿರುದ್ಧನ ಮೇಲೆ
ಎತ್ತಿ ಕತ್ತಿ ನೆಗವಿದ ಅವನ ಕುತ್ತಿಗಿ ಕೊಯ್ಯಲಾಕ
ನೆಗವಿದ ಕೈಯ ಹಿಡಿದ ಮಂತ್ರಿ ಮೇಲಕ
ಇವನ ಕೊರಳ ಕೊಯ್ದರ ನಿಮ್ಮ ಮಗಳಿಗಿ
ರಂಡಿತನಾ ಬಂದೀತ್ರ ಆಕಿ ಪಾಲಕ
ತಿಳದ ಕೊಯ್ಯಿರಿ ಇದ ಅಲ್ಲ ನಿಮ್ಮ ಲೆಕ್ಕ
ಅಂದ ಮಂತ್ರಿಯ ಮಾತ ಕೇಳಿ
ಅವನ ಬಂದಿಯಲ್ಲಿ ಇಟ್ಟಿದ್ದು ನೋಡಿ
ನಾರದ ಹ್ವಾದಾನು ದ್ವಾರಕಾಕ
ನೀವ ಕೂತರಿ ಯಾಕ ಸುಮ್ಮಕ

||ಸಣ್ಣಚಾಲ||

ನಿಮ್ಮ ಮೊಮ್ಮಗನಿಟ್ಟಾರ ಬಂದಿಯಲಿ
ನೀವು ಕೂತಿರೇನು ಚಿಂತಿ ಇಲ್ಲದಲಿ
ಕೇಳಿ ಕೃಷ್ಣನಾಗ ಕೋಪದಲಿ
ಛಪ್ಪನ್ನ ಕೋಟಿ ಯಾದವರ ಸಹಿತದಲಿ
ಬಂದ ಮುತಗಿ ಹಾಕ್ಯಾರ ಬಾಣಾಸೂರನ ಮ್ಯಾಲಿ
ಘೋರ ಯುದ್ಧ ನಡದೀತ ಕಣದಲಿ

||ಕೂಡಪಲ್ಲ|

|ಕಲಹ ಹಚ್ಚಿಸುವದಕೆ ನಾರದ ಕೈಲಾಸಕ್ಹೋಗಿ
ಬೇಗ ತ್ರಿಶೂಲಧರಗ ನಿಂತ ಹೇಳುವದು
ಏನ ಹೇಳತಿ ನಿಮ್ಮ ಮಗ ಬಾಣಾಸುರಂದು
ಹೆಸರ ಮುಳಗಿಹೋತ್ರಿ ನಿಮ್ಮ ಪುತ್ರೆಂಬುದು
ಕೇಳೋ ಧರಣಿಪತಿ ರಾಜಾ ಜನಮೇಜಯಾ||೮ನೇ ಚೌಕ||

ಪಿಶಾಚಿ ಗಣ ಸಹಿತ ಮಹೇಶ ಬಂದಾನ ರಣ
ಆಕ್ರೋಶ ನಡೆಸೀದ ಘಡಣದ ನಾದಾ
ಪುರಮಾಸಿ ತ್ರಿಶೂಲ ಹಿಡಕೊಂಡ ಬಂದಾ
ನಿಂತ ಅಸೂರಗಂತಾನ ಅಂಜಬ್ಯಾಡ ನನ್ನ ಕಂದಾ
ಹೊಡಿವೀನಿ ಇಂದಿಗಿ ಕೃಷ್ಣನ ಕೆಡವೀನಿ ನೆಲಕ ಬಂದ
ಇಂದ ನನ್ನ ಕೈಯಾಗ ಸಿಕ್ಕಿದಾ
ನಂದಿ ಹೊಡದಾನ ಕೃಷ್ಣನ ಮೇಲಿ ಭರದಿಂದಾ
ಈಶ್ವರ ಅಂತಾನ ಹರಿ ನೀ ಈಗ ಪ್ರಳಯ ನಾನು
ಸಂಹಾರ ಮಾಡುವೆ ಲೋಕಪಾಲನೆ ನಿಂದಾ
ದಾರ ಆಟ ಸಾಗೋಣಿಲ್ಲ ಕೃಷ್ಣ ನನ್ನ ಮುಂದಾ
ಹರಿ ನಕ್ಕೋತ ಮಹಾದೇವಗಂದಾ
ಕೊಲ್ಲಾವೆಲ್ಲ ನೀ ಖರೆ ಕಾಯಾಂವೆಲ್ಲಾ ನಾನಲ್ಲ
ಕಾಯಾಂವ ಮುಂದ ಕೊಲ್ಲಾವೇನ ಮಾಡುವದಾ
ಅಂದ ಮೋಹನಾಸ್ತ್ರ ಹಾಕಿ ಹರನ ಕೆಡವಿದಾ
ಇತ್ತ ಕಾರ್ತಿಕಸ್ವಾಮಿ ಮನ್ಮಥ ಇಬ್ಬರದ
ಒಳ್ಳೆ ಅದ್ಭೂತ ನಡೀತ ಘೋರ ಯುದ್ಧ
ಷಣ್ಮುಖ ಅಂತಾನ ಮದನಗ ಏನ ಎಲ್ಲೋ ಇದರಂದಾ
ನೀನು ಕೆಡಗಿನ ಕಡೆಗೆ ಸ್ತ್ರೀಯರ ಬಳಗ ಇರುವುವದಾ
ಮದನ ಅಂತಾನ ಷಣ್ಮುಖಗ ನಿನಗೇನ ಗೊತ್ತಪ್ಪಾ
ಗುಡ್ಡ ಗಹ್ವರದಲ್ಲಿ ನಿಂತ ತಪಾ ಮಾಡುವದಾ
ಇಲ್ಲಿ ಸಾಗಾದಪ್ಪಾ ರಣದ ಕೆಲಸ ನಿನ್ನಿಂದಾ
ಸ್ತ್ರೀಯಾಸೆ ಬಿಟ್ಟ ಕ್ಷಣಕ ಕೋಟ್ಯಾನಕೋಟಿ ಹೆಂಗಸರಾ
ಎಲ್ಲಾ ಷಣ್ಮುಖನ ರಥದ ಸುತ್ತ ಮುತ್ತಗಿ ಕವಿದರಾ
ಗಡಿಬಿಡಿಸಿ ಷಣ್ಮುಖ ಅಂಜಿ ಅತ್ತ ಓಡಿ ಹೋದಾ
ಹಂಗ ಹೆಂಗಸೆರೆಲ್ಲಾ ಹತ್ಯಾರ ಅವನ ಬೆನ್ನ ಹಿಂದಾ
ತಿರುಗಿ ನಿಂತ ಅವರಿಗೆಲ್ಲಾ ನೀಡಾನ ಶಾಪ ಕೊಟ್ಟಾ
ನನ್ನ ಮಾರಿ ನೋಡಿದ್ದಕ್ಕ ಇನ್ನ ಮುಂದಾ
ಏಳು ಜನ್ಮ ತನಕಾ ರಂಡಿತನಾಭೋಗಿಸಂದಾ

||ಚಾಲ||

ಕೃಷ್ಣ ಸುದರ್ಶನ ಬಿಟ್ಟ ಬಾಣಾಸುರನ
ನಾಶ ಆದಾನವ್ವ ಹಸ್ತ ಕತ್ತರಸಿ ಒಗದಾ
ಎರಡು ಹಸ್ತ ಶಿಲ್ಕಿ ಅವಗ ಕಾಯದಾ
ಮೂರ್ಛಿ ಸಾವರಿಸಿ ಎದ್ದ ಸಾಂಬ ಬಾಣಾಸುರನ
ಹಿಡದ ಕೃಷ್ಣನ ಕೈಯಾಗ ನೀಡಿದಾ
ಜ್ವಾಕಿ ಮಾಡಂತ ಭಕ್ತನ ಬಿರದಾ
ಪುನಃ ಲಗ್ನ ಮಾಡಿಕೋದಕ್ಕ ಹಿಡದಾ

||ಸಣ್ಣಚಾಲ||

ಉಷಾ ಅನಿರುದ್ಧ ಇಬ್ಬರಿಗಿ ಆಜ್ಞೆ ಮಾಡಿ
ತಿರಗಿ ಬಂದಾರ ದ್ವಾರಕಾಕ್ಕ ತಾವು ಕೂಡಿ
ಹರುಷ ಆದಾರ ಸರುವ ಸೈನ್ಯ ನೋಡಿ
ಜಯಾ ತಕ್ಕೊಂಡ ಯುದ್ಧ ಮಾಡಿ
ಪ್ರಾಂತದೊಳಗ ಕರ್ನಾಟಕ ಬಾಗೇವಾಡಿ
ಗುರು ಅಣ್ಣಾರಾವಜಿ ಹೇಳಿದಂತ ನುಡಿ

||ಕೂಡಪಲ್ಲ||

ಬಾಳಗೋಪಾಲನ ಕವಿತೆ ತೋಡಿ ಮುತ್ತಿನಂತೆ ಇದು
ತಿಳಿದವರಿಗೆ ಅಮೃತದಂತೆ ಹತ್ತುವದು
ತಿಳಿಯದವರ ಮುಂದೆ ಸುಳ್ಳ ಒದರಿ ಸಾಯುವದು
ಸವಿ ತಗೊಂಡಾನು ಸವಿಗಾರ ಅವರದ್ದು
ಕೇಳೋ ಧರಣಿಪತಿ ರಾಜಾ ಜನಮೇಜಯಾ||೯ನೇ ಚೌಕ||

ರಚನೆ : ಬಾಳಗೋಪಾಳ
ಕೃತಿ : ಜಾನಪದ ಝೇಂಕಾರ