೧ನೇ ಚೌಕ

ಪಾಂಡವರಿಗೆ ಕೊಟ್ಹೆಣ್ಣ ಬಳರಾಮ ನಿಶ್ಚಯ ಮಾಡಿದಾನ ಕೌರವಗ |
ತಾ ಕೊಟ್ಟ ದುರ್ಯೋಧನನ ಮಗಗ |
ಭಾಳ ಪ್ರೀತಿ ಕೃಷ್ಣ ಪಾಂಡವರ ಮ್ಯಾಗ |
ಆಡಿದ ಮಾತಿಗೆ ತಿರುಗಿ ಹೂಡಿದರ –
ಸಿಟ್ಟು ಬಂತು ಆ ಗಿರಿಧರಗ |
ಮುಂದೆ ವತ್ಸಲಾಹರಣ ಹೇಳುವೆನೀಗ |
ಪ್ರಥಮದಲ್ಲಿ ಸುಭದ್ರ ತವರಮನಿಗ್ಹೋದಾಗ ಬಳರಾಮನ್ಹೇಣತಿ |
ಬಸರಿದ್ದಳಾಗ ಆ ರೇವತಿ |
ಸುsಭದ್ರ ಕೇಳ್ಯಾಳ ಅಣ್ಣನ ಹಂತಿ |
ಹೆಣ್ಣು ಹುಟ್ಟಿದರಭಿಮಾನ್ಯಾಗ ಕುಡುವುದು-
ನಿಶ್ಚಯ ಮಾಡಿ ಬಿಟ್ಟಾಳ ಪೂರ್ತಿ |
ಮುಂದ ಹೆಣ್ಣು ಹುಟ್ಟಿತು ಆಕಿಯಂತೈತಿ |
ನಿಶ್ಚಯ ಮಾಡ್ಯಾರ ಬಳಭದ್ರನ ಮಗಳನ್ನ ಅಭಿಮಾನ್ಯಗ ಕೊಟ್ರು ವಚನ್ಹೋಗೈತಿ |
ಭಾಳ ಹರುಷವಾದ ಕೃಷ್ಣ ಮೂರುತಿ |
ಮುಂದ ಪಾಂಡವರು ವನವಾಸಕ್ಹೋಗೂದೈತಿ |
ವಿದುರನ ಮನೆಯಲೆ ಇಟ್ಟು ಸುಭದ್ರಾನ-
ಹೊಂಟು ಹೋದರು ಬಿಟ್ಟು ಹಸ್ತಿನಾವತೀ |
ಭೂಮಿಸೀಮಿ ಕಳಕೊಂಡು ಆಗಿ ಫಜೀತಿ ||
ಇತ್ತ ಕೌರವನ ಮಗಗ ಹೆಣ್ಣ ಬೇಕಾಗಿ ಶಕುನಿ ತೆಗೆದಾನ ಯುಕ್ತಿ |
ಬಳರಾಮನ ಕೇಳಿದಾ ಬಂದು ಮಾಡಿ ಮಮತಿ |
ನಿನ್ನ ಮಗಳನು ಕುಡು ಆಗಲೆಕ್ಕರತಿ |
ಬೇಕಾದ್ದು ಉಂಡಾಳು ಉಟ್ಟಾಳು ತೊಟ್ಟಾಳು-
ಚೂರ ಮಾಡಬೇಡ ನೀ ಚಿಂತಿ |
ಕುಡು ವಚನ ಇದಕ ಹೇಳು ಏನಂತಿ ||

||ಇಳುವು||

ಇಷ್ಟು ಮಾತ ಕೇಳಿ ಕೃಷ್ಣಂತಾನ ಶಕುನಿಗಿ –
ಬಳರಾಮನ ಮಗಳನ್ನ | ಅಭಿಮನ್ಯುಗೆ ಕೊಟ್ಟೈತಿ ವಚನಾ ||
ಕೊಟ್ಟಂಥ ಹೆಣ್ಣ ಮತ್ತ ತಿರುಗಿ ನಿಮಗೆ ನಾನು
ಕೊಡಬೇಕು ಹ್ಯಾಂಗ ಹೇಳಿನ್ನ | ಜನದೊಳಗ ಹೋದಿತೊ ನಮ್ಮ ಮಾನ
ಇದರ ಮ್ಯಾಲ ಬಳರಾಮನ ಖುಷಿ ಬಂದಾಂಗ ಮಾಡಲಿ
ಇಲ್ಲ ಸ್ವಾಧೀನ | ಇದರೊಳಗೆ ಹೋಗುವದಿಲ್ಲ ನಾನು ||
ಕೃಷ್ಣನ ಮಾತಿಗಿ ಬಳರಾಮ | ಸಿಟ್ಟಿಗೆದ್ದು ಅಂತಾನ ಕೇಳೊ ಶ್ಯಾಮ ||
ನಾ ವಚನ ಕೊಟ್ಟಿಲ್ಲೊ ಸತ್ಯ ಧರ್ಮ | ನಕ್ಲಿ ಆಡಿದ ಮಾತೇನೊ ಕಾಯಿಮ ||
ತಂಗಿ ಭಿಡೆಕ ಮಾಡಿನಿ ಸುಳ್ಳೆ ಪ್ರೇಮ | ನನ್ನ ಮನಸು ಇದ್ದಿಲ್ಲ ಕುಡುನೇಮ ||

||ಏರು||

ಕೃಷ್ಣನ ಮಾತ ಮೀರಿ ಕೊಟ್ಟ ಬಳರಾಮ ಕೌರವೇಂದ್ರನ ಮಗ ಲಕ್ಷಣಗ |
ಭಾಳ ಪ್ರೀತಿ ಬಂದು ತನ್ನ ಮನದಾಗ |
ಮದುವಿ ಮಾಡಿಕೋ ಅಂದ ಶಕುನೀ ಮಾಮಾಗ |
ಆಡಿದ ಮಾತಿಗೆ ತಿರುಗಿ ಹೂಡಿದರ-
ಸಿಟ್ಟುಬಂತು ಆ ಗಿರಿಧರಗ | ಮುಂದ ವತ್ಸಲ ಹರಣ ಹೇಳುವೆನೀಗ ||

೨ನೆಯ ಚೌಕ

ಕೇಳಿ ಬಳರಾಮನ ಮಾತಿಗಿ ಶಕುನಿ ಬಂದು ಹೇಳಿ ದುರ್ಯೋಧನಗ |
ಬಳರಾಮ ಹೆಣ್ಣ ಕೊಟ್ಟಾನೊ ನಿಮಗ |
ನಿಶ್ಚ ಮಾಡಿ ಬಂದೆ ನಾ ಲಕ್ಷಣಗ |
ನಾಳೆ ಉದಯಕ ಹೊಂಡರಿ ಲಗ್ನಕ-
ತಡಾ ಮಾಡಬೇಡರಿ ಬೇಗ | ತೀರಿ ಹೋಗಲಿ ಕಾರ್ಯ ತೀವ್ರವಾಗಿ ||
ಕೇಳಿ ದುರ್ಯೋಧನ ತಯಾರ್ನಡಿಸಿದಾ ಚತುರಂಗ ಬಲವೆಲ್ಲ ಸಹಿತಾಗಿ |
ಆನಿ ಕುದರಿ ದಂಡ ಮಾರ್ಬಲ ಸಾಗಿ |
ದಾರಿ ಹಿಡದಾರ ಅರ್ತಿಲಿ ದ್ವಾರಕಿಗಿ |
ಅಗಣಿತ ಬ್ರಹ್ಮರು ಬ್ರಹ್ಮ ಋಷಿಗಳು-
ಮಹಾರಥಿಕರು ಭೂಷಣವಾಗಿ | ಹೀಂಗ ನಡೆದರ್ವಾದ್ಯ ಗಡದಣ ಒಳಗೆ ||
ಇತ್ತ ದ್ವಾರಕಿಯಲ್ಲಿ ಬಳರಾಮ ಲಗ್ನಪತ್ರ ಬರೆದ ಬೀಗ ಬಾಂಧವರೀಗಿ |
ಮತ್ತ ದೂತನ ಕಳಿಸಿದ ಹಸ್ತಿನಾವತಿಗಿ |
ಸುಭದ್ರ ಇದ್ದಳು ವಿದುರನ ಬಳಿಗಿ |
ಬರುವ ದೂತನ ದಾರಿಯೊಳಗ ಸುಭದ್ರ-
ಅರಳಿ ಮರದ ಪ್ರದಕ್ಷಿಣಿಗಿ | ತಾ ಬಂದಾಗ  ಕಂಡಳಾ ದೂತನಿಗೆ ||

||ಇಳುವು||

ನಿಂತು ಸುಭದ್ರ ಅಂತಾಳ ಯಾಕೋ ದೂತಾ-
ಏನು ಕಾರಣ ಬಂದಿ ಇಲ್ಲಗಿ | ಏನು ಸುದ್ದಿ ತವರಮನಿ ಕಡಿಗೀ ||
ಆ ದೂತ ಹೇಳ್ಯಾನ ಬಳರಾಮನ ಮಗಳನ್ನ-
ದುರ್ಯೋಧನನ ಮಗನಿಗಿ | ನಿನ್ನೆ ಕೊಟ್ರು ಲಗ್ನ ನಾಳಿಗಿ ||
ವತ್ಸಲಾನ ಮದುವಿಗಿ ವಿದುರಗ ಬಾಯೆಂದು
ಹೇಳಿ ಹೋಗತಿನಿ ತಿರುಗಿ | ನಾ ಬಂದಿನಿ ಇದರ ಸಲುವಾಗಿ ||
ಕೇಳಿ ಸುಭದ್ರ ಬಿದ್ದಾಳ ಧರಣಿಗಿ | ನೀರು ತಂದ ಅಳತಾಳ ಕಣ್ಣಿಗಿ ||
ತವರ ಮನಿ ಇಲ್ಲಧಾಂಗ ಇಂದಿಗಿ | ಆಗಿ ಹೋಯ್ತು ನನ್ನ ಪಾಲಿಗಿ ||
ನನ್ನ ಮಗಗ ಇಟ್ಟ ಹೆಣ್ಣ ಬೇಕಾಗಿ | ಬಳರಾಮ ಕೊಟ್ಟ ಅವರಿಗಿ ||

||ಏರು||

ಕೃಷ್ಣ ಬುದ್ಧಿ ಹೇಳಲಿಲ್ಲೇನಣ್ಣಗ ಕರುಣವಿಲ್ಲದೆ ಕೊಟ್ಟಾರ ಅವಗ |
ನನಗಾತು ಮುಗಿಲು ಹರಿದು ಬಿದ್ಹಾಂಗ |
ಕಿಚ್ಚ ಸುರುವಿತು ಸುಭದ್ರಾನ ಹೊಟ್ಯಾಗ |
ಆಡಿದ ಮಾತಿಗೆ ತಿರುಗಿ ಹೂಡಿದರ-
ಸಿಟ್ಟು ಬಂತು ಆ ಗಿರಿಧರಗ | ಮುಂದ ವತ್ಸಲಹರಣ ಹೇಳುವೆನೀಗ ||

೩ನೆಯ ಚೌಕ

ತರವಮನಿಯ ಆಶೆಯಿಂದ ನನ್ನ ಪತಿ ಅರ್ಜುನನ ನಾ ಮರೆತೇನೋ |
ನಮ್ಮಣ್ಣಗಳದಿಂದ ಧೈರ್ಯ ಹಿಡಿದೇನೋ |
ನನ್ನ ನೋಡ್ತಾರ ಅಂತ ಭಾಳ ನಂಬಿದೆನೋ |

ಅಯ್ಯಯ್ಯೋ ದೇವಾ ಮುನಿದ್ಯಾ ಇಂದಿಗೆ –
ಅಂಥಾದ್ದೇನು ಅವರಿಗಿ ಮಾಡಿದೆನೊ | ಇಂದೀಗಿ ಕೊಯ್ದಾರ ನನ್ನ ಕೊರಳವನು ||
ಆಸರಿಲ್ಲದೆನಾ ಇರಲಾರೆನು ಅಯ್ಯಯ್ಯೊ ಉರಲ ಹಾಕಿಕೊಳ್ಳಲೇನೊ
ನಮ್ಮಣ್ಣಗಳ ಮುಂದ ಪ್ರಾಣಬಿಡಲೇನೋ |
ಮಾರಿತೋರದೆ ಭೂಮಿಯ ಬಗದ್ಹೊಗಲೇನೊ |
ಎದ್ದೆದ್ದು ಬೀಳತಾಳ ಪದ್ಮ ಗಂಧಿ ಹದ್ದ-
ಹಾವ ಕಚ್ಚಿದಾಂಗ ಅಭಿಮಾನ್ಯನ್ನು
ತೆಕ್ಹಾಯ್ದು ಮಾಡತಾಳ ದುಃಖವನು ||
ಮಗನೆ ನಿನ್ನ ದೈವ ಏನಾತಂತ ಮರಮರಗಿ ಬಡಕೊತಾಳ ಎದೆಯನ್ನು |

ಈಗ ಹೋಗ್ಯಾರ ಪಾಂಡವರು ವನವಾಸವನು |
ಅವರಿದ್ದರ ಬಿಡತಿದ್ದಿಲ್ಲ ಹೆಣ್ಣನ್ನು |
ಯಾರಿಗ್ಹೇಳಲಿ ಏನು ಮಾಡಲಿ ಅಯ್ಯೊ-
ಇಲ್ಲದ್ಹಾಂಗ ಆಗೈತಿ ನನಗ ದಿಕ್ಕವನು |
ಕತ್ತಿದ್ಹಾಂಗ ಹಾರಾಡೂ ಹಕ್ಕಿ ಪಕ್ಕವನು ||

||ಇಳುವು||

ನೆರಕುರುಳ್ಯಾಡತಾಳ ಬಲು ಹೊರಳ್ಯಾಡತಾಳ
ತಳಮಳಿಸಿ ತಾಳದ ಸಂಕಟ |
ಖಬರಿಲ್ಲ ಆಕಿಗೀ ಎಳ್ಳಷ್ಟ ||
ಮಾಡಸ್ತಾನ ಗಾಳಿ ಬೀಸ್ತಾನ ಕೈಹಿಡಿ
ದೆಬ್ಬಸ್ತಾನ ಮಾಡಿ ಕೂಗ್ಯಾಟ |
ಅಭಿಮನ್ಯು ನೋಡಿದ ಕಣ್ಮುಟ್ಟ
ತಾಯಿ ಖಬರ‍್ಹಾರಿ ಹೋದಂಗಾಯ್ತೊ ಜೀವ | ಅಭಿಮನ್ಯು ಅಳ್ತಾನ ಸಣ್ಣವ ||
ನಡುಹೊಳ್ಳಾಗ ಮುಳಗಿದ್ಹಾಂಗ ನಾವು | ನಮಗಾತು ಮುನಿದಾ ಇಂದ ಶಿವ ||

||ಏರು||

ಮತ್ತೆ ಭೌಳಿ ತಿಳಿದೆದ್ದು ಸುಭದ್ರಾ ಎದಿಗುದ್ದಿಕೊಂಡಾಳ ಕಲ್ಲ ಕಯ್ಯಾಗ |
ಆಗ ಧೈರ್ಯ ಬಂತು ಅಭಿಮಾನ್ಯಗ |
ತಾಯಿ ಕೈಯ ಹಿಡಿದ ಆ ಕ್ಷಣದಾಗ |
ಆಡಿದ ಮಾತಿಗಿ ತಿರುಗಿ ಹೂಡಿದರ
ಸಿಟ್ಟು ಬಂತು ಆ ಗಿರಿಧರಗ ಮುಂದ ವತ್ಸಲಹರಣ ಹೇಳುವೆನೀಗ |

೪ನೆಯ ಚೌಕ

ಸುಭದ್ರಾ ಅಳುವುದು ಕೇಳಿ ಅಭಿಮನ್ಯು ಅಳಬೇಡ ತಾಯಿ ಧೈರ್ಯ ಹಿಡಿಯಿನ್ನ |
ನಿಮ್ಮಣ್ಣಗಳ ಆಶಾ ಇನ್ನ ಬಿಡು ನೀನಾ |
ನನಗ ಕೊಟ್ಟಂಥ ಹೆಣ್ಣ ಆ ವತ್ಸಲನ |
ತರದಿದ್ದರ ನಮ್ಮ ತಂದಿ ಅರ್ಜುನನ-
ವೀರ್ಯದಿಂದ ಹುಟ್ಟಿ ಫಲವೇನ |
ಮೂರು ಲೋಕದೊಳಗಾಗುವೆ ಅವಮಾನ ||
ಕೇಳೆ ತಾಯೆ ನಿನ್ನ ದಯಾ ಇದ್ದರ ಪೂರ್ವಾದ್ರಿ ಪಶ್ಚಿಮ ಕಿಡುದರಿದೇನ |
ಪಶ್ಚಿಮಾದ್ರಿ ಪೂರ್ವಕ ತರುವೆನು ನಾನ |
ಒಂದೆ ಬಾಣದಿಂದ ಆರಿಸುವೆ ಸಮುದ್ರವನ |
ವಾಸುಕಿಫಣಿ ಮೆಟ್ಟಿ ಕುಣಿದಾಡಿ ಪಾತಾಳ-
ದಿಂದೆಳತರುವೆನಾ ಶೇಷನ್ನಾ |
ಬುಡಮೇಲ ಮಾಡುವೆ ಬ್ರಹ್ಮಾಂಡವನಾ ||
ಇಂಥಾ ಮಗನು ನಾನಿನ್ಹಂತಿರಲಿಕ್ಕೆ ನೆನಸುದ್ಯಾಕ ನಿಮ್ಮಣ್ಣಗಳನ |
ನೆಪ್ಪತಗಿಬ್ಯಾಡ ದನದ್ಹಿಂಡ ಕಾಯವನ |
ನೆಗಿಲ್ಹೊಡೆವ ಒಕ್ಕಲಿಗನ ಬಳರಾಮನ್ನ
ಮಾನಭಂಗ ಮಾಡಿ ಆ ಹೆಣ್ಣ ತಂದರ-
ಆಗನ್ನ ಪಾಂಡವರ ಕುಲ ರನ್ನಾ |
ಯಾವ ಒಯ್ತಾನ ನಡಿ ಆ ಹೆಣ್ಣನ್ನ ||

||ಇಳುವು||

ಹೀಗಂದು ಅಭಿಮನ್ಯು ನುಡಿದಾ ಒತ್ತರಲಿ
ರಥಾ ಹೂಡಿದ ಸಿಟ್ಟಿಲಿ | ಬಿಲ್ಲ ಬಾಣ ತಗೊಂಡ ಕೈಯಲಿ ||
ತನ್ನ ಬಾಯಿ ಸುಭದ್ರನ ಸಾರಥಿ ಮಾಡಿ ಕುದರಿ-
ಹೊಡ್ಯಾಕ ಹಚ್ಚಿದ ಅವಸರಲಿ | ಆಕಿ ರಥಾ ಹೊಡೆದಳಬ್ಬರಲಿ ||
ದಾರಿ ಹಿಡದಾರ ಸುತ್ತ ಅಂತ ಶರ್ತ ದ್ವಾರಕಿಗಿ
ಸನಿಯಾಗುವಾಂಗ ಹಂಚಕಿಲಿ | ಕುದುರಿ ಜಿಗಿಸ್ಯಾಳ ಅಂತಂತರಲಿ ||
ಮುಂದ ಬಂತು ಅರಣ್ಯದ-ವನಾ | ರಥ ನಡಿಯದು ಗಿಡಮಂಜನ |
ಅಭಿಮನ್ಯು ಏರಿಸಿ ಬಾಣವನಾ | ಹೊಡೆದು ಗಿಡಾಸವರಿದೆಲ್ಲಾನಾ ||
ತನ್ನ ರಥಕ ಮಾಡಿದ ದಾರಿನ | ದರಜಿಲ್ಲ ಅವನಿಗೇನ ||

||ಏರು||

ಲಕ್ಷಾವಧಿ ಗಿಡಗಳೆಲ್ಲ ಲಕ್ಷ್ಯವಿಲ್ಲ ಕಡಿದ ವನದ ರಾಕ್ಷಸರು ಅಭಿಮಾನ್ಯಾಗ |
ತಿನ್ನುವಪೇಕ್ಷೆಯಿಂದ ಮುತ್ತಿಕೊಂಡರವಗ |
ನೋಡಿ ತಾಯಿ ಸುಭದ್ರ ಅಂಜ್ಯಾಳ ಆಗ |
ಆಡಿದ ಮಾತಿಗಿ ತಿರುಗಿ ಹೂಡಿದರ
ಸಿಟ್ಟು ಬಂತು ಆ ಗಿರಿಧರಗ | ಮುಂದ ವತ್ಸಲಹರಣ ಹೇಳುವೆನೀಗ ||

೫ನೆಯ ಚೌಕ

ಆರ್ಭಾಟದಿದ ಅಭಿಮನ್ಯು ಸುಭದ್ರಾಗಂತಾನ ತಾಯಿ
ಅಂಜಬೇಡ ಧೈರ್ಯ ಹಿಡಿದು ನೋಡು ಕುಂತ |
ಹೀಂಗಂದು ಬಾಣ ಹೊಡೆದ ಎಲ್ಲ ಪುರಸತ್ತ |
ಬಂದ ರಾಕ್ಷಸರನೆಲ್ಲ ತರಿದೊಟ್ಟುತ ||

ತೂರಿದ ಬಾಣಗಳಿಂದ ಮೀರಿದ ದೈತ್ಯರ ರುಂಡ-
ಕಾರಿದ ರಕ್ತದೊಳು ಕೆಡಹುತ |
ಚಂಡವಿಲ್ಲದೆ ಬಿದ್ದಾವೊ ದಂಡ ಕುಣಕೋತ ||
ಕೇಳಿ ಸುದ್ದಿ ಘಟೋದ್ಗಜಾ ಹೋಳೀ ಆಡೂನಂದು ಬಂದು ||
ಗೋಳಿಡಿಸಿ ಹೋದ ಚೀರಾಡುತ |
ಅಳತಿಲ್ಲಿದಷ್ಟು ಬಾಣ ಬಂದು ನಡುsತ |
ತಾಳಲಾರದೆ ಅಭಿಮನ್ಯು ಬಿದ್ದ ಸತ್ತ |
ಹೇಳಲಾರೆನಾ ವೇಳೆಯೊಳಗ ಸು-
ಭದ್ರಾ ಕಾಳಗದೊಳು ಮಗನವಚೂತ |
ತೆಕ್ಕಿಹಾಯ್ದು ದುಃಖ ಮಾಡ್ತಾಳ ಬಡಕೋತ ||

ಮಗನೇ, ನಿನ್ನ ಪ್ರಾಣ ಇಲ್ಲೇ ಹೋಗೂದಿತ್ತೇನೋ
ಎಲ್ಲಿ ಅದಾನಂತ ಹುಡುಕಲೆತ್ತ |
ಸೊಲ್ಲು ಸುಲ್ಲಿಗೆ ಕರೆವೆ ಅಭಿಮನ್ಯು ಅಂತ |
ನೀ ನಿಲ್ಲದೆ ಬರುತಿದ್ದ್ಯೊ ಕುಣಕೋತ |

ನಿನ್ನಂಥ ಮಗನ ಬಿಟ್ಟು ಇನ್ನೇನಿರಲಯ್ಯೋ-
ನನ್ನಂಥ ಖೋಡೀ ಪ್ರಾಣ ಹೋಗಲೆಂತ |
ಪ್ರಾಣ ಕೊಡಾಕ ನಿಂತಾಳ ಹರಿ ನೆನೆಯುತ ||

||ಇಳುವು||

ಕೇಳಿ ಕೃಷ್ಣ ಮೂರುತಿ ವನದೇವತಿ ಆಗಿ ಬಂದು
ಅಂತಾನ ಸುಭದ್ರಾ ಪ್ರಾಣ ಕೊಡಬೇಡ |
ನಿನ್ನ ಮಗನ್ನೆಬ್ಬಿಸ್ತೀನು ಧೈರ್ಯ ಬಿಡಬೇಡ ||
ನಿನ್ನ ಎರಡೂ ಹಸ್ತದಲಿ ನಾ ಸಂಜೀವ ಅಭಯ ಕೊಟ್ಟೆ
ನಿನ್ನ ಮಗನ ಮ್ಯಾಲ ನೀ ಎಳೀ ಗಡ |
ಅಂವ ಏಳತಾನ ಹೋಗು ಮಾಡುದಿಲ್ಲ ತಡ ||
ಇಷ್ಟು ಕೇಳಿ ಸುಭದ್ರಾ ತನ್ನ ಬಲಗೈ-
ಹಸ್ತ ಎಳದಾಳ ಮಾಡಿ ದೌಡು |
ಅಭಿಮನ್ಯು ಎದ್ದು ನಿಂತಾ ಬಾಣ ಹಿಡಿದು ಪ್ರೌಢ ||
ಘಟೋದ್ಗಜನ ನೋಡಿ ಬೊಬ್ಬಿರಿದ | ತಡಮಾಡ್ಲಿಲ್ಲ ಬಾಣದಿಂದ ಹೊಡೆದ ||
ಘಟೋದ್ಗಜ ಭೂಮಿಗುರುಳಿದ | ಅಭಿಮನ್ಯುನ ಬಾಣದಿಂದ ಮಡಿದ ||
ಅವನ ತಾಯಿ ಹೇಡಂಬಿ ತಿಳಿದ | ಬಂದು ಅಳತಾಳ ಮಗನ್ಮ್ಯಾಲ ಬಿದ್ದ ||

||ಏರು||

ನಿನ್ನ ಕೊಂದಂಥವ ಯಾವ ಹೇಳೊ ನನ್ನ ಮಗನೆ ಬಿಡೂದಿಲ್ಲ ನಾ ಅವಗ |
ನಿಮ್ಮ ತಂದಿಗ್ಹೇಳಿ ಭೀಮಸೇನನಿಗ |
ಅವನಿಂದ ಕೊಲ್ಲಸ್ತೀನಿ ನಿನ್ನ ಕೊಂದವಗ
ಆಡಿದ ಮಾತಿಗಿ ತಿರುಗಿ ಹೂಡಿದರ-
ಸಿಟ್ಟುಬಂತು ಆ ಗಿರಿಧರಗ | ಮುಂದ ವತ್ಸಲಹರಣ ಹೇಳುವೆನೀಗ ||

||೬ನೆಯ ಚೌಕ||

ಹೇಡಂಬಿ ಅಳುವುದು ಕೇಳಿ ಸುಭದ್ರಾ ಅಂತಾಳ ನಿನ್ನ ಪತಿ ಯಾರಮ್ಮಾ |
ಹೇಡಂಬಿ ಹೇಳ್ಯಾಳ ಪಾಂಡವರ ಭೀಮ |
ವನವಾಸಕ ಬಂದಾಗ ನನಗಾದಮ್ಮ

ಅವನ ವೀರ್ಯದಿಂದ ಹುಟ್ಟಿದಂಥ ಈ-
ಘಟೋದ್ಗಜಾ ನನ್ನ ಮಗನಮ್ಮ
ನಕುಲ ಸಹದೇವ ಅರ್ಜುನ ಮೈದುನ ಭಾವ ಧರ್ಮ ||

ಕೇಳಿ ಸುಭದ್ರಾ ತೆಕ್ಕಾದಾಳ ಹೇಡಂಬಿ ನಾನು ನೀನು ಒಂದೆ ನೆಗಿಯಾಣೆಮ್ಮ
ನಾ ಅರ್ಜುನನ ಸತಿ ಕೇಳಮ್ಮ |
ನಿನ್ನ ಮಗನ್ನೆಬ್ಬಿಸ್ತೀನು ಧೈರ್ಯ ತಾಳಮ್ಮ
ಹೇಳಿ ಸುಭದ್ರಾ ತನ್ನ ಎಡಗೈ ಹಸ್ತ ಘಟೋ-
ದ್ಗಜನ ಮ್ಯಾಲ ಎಳದಾಳ ಆಗಿ ಪ್ರೇಮಾ |
ಘಟೋದ್ಗಜಾ ಎದ್ದು ನಿಂತಾ ಆಗಿ ಜೀವಾತ್ಮಾ ||

ಎದ್ದಾಕ್ಷಣವೆ ಬಾಣ ಹಿಡಿದು ಹೊಡೆಯುತ್ತಿದ್ದ-
ಹೇಡಂಬಿ ಅಂತಾಳ ಮಾಡಬೇಡ ಹಮ್ಮ |
ಇವರ‍್ಯಾರು ಅಭಿಮನ್ಯು ನಿನ್ನ ತಮ್ಮ |
ನಿನ್ನ ತಾಯಿ ಸುಭದ್ರಾಗ ಮಾಡೊ ನಮೋನಮ |

ತಾಯೀ ಮಾತಿಗಿ ನಮಸ್ಕಾರ ಮಾಡಿ
ಕರಕೊಂಡು ಹೊಂಟಾನ ತನ್ನ ಗ್ರಾಮ |
ಬಂದ ಕಾರ್ಯ ಕೇಳ್ಯಾನ ಕುಂತು ಅವನ ಸಮ ||

||ಇಳುವು||

ಅಭಿಮಾನ್ಯಾಗ ಕೊಟ್ಹೆಣ್ಣ ಬಳರಾಮ ಕೌರವನ
ಮಗಗ ಲಗ್ನ ಮಾಡಿ ಕುಡತಾನೋ |
ಅದಕಾಗಿ ಹೊರಟ ಬಂದಿನೋ ||

ಇಷ್ಟು ಮಾತು ಕೇಳಿ ಘಟೋದ್ಗಜಾ ಅಂತಾನ
ಆ ಹೆಣ್ಣ ಹೋಗಿ ತರತಿನೋ |
ನಿಮಗ ಲಗ್ನ ಮಾಡಿ ಕುಡತಿನೋ ||
ಹೀಂಗ ಹೇಳಿ ಘಟೋದ್ಗಜಾ ಜಾ ಜಾಂಗಿ ಮಾಮಾನ
ಕರೆದುಕೊಂಡು ಹೊಂಟಾನೊ |
ಮಾಯಾಪುರ ಹಾದ್ಯಾಗ ಕಟ್ಯಾನೋ |
ಗೋಪಕಂಟಿ ಬೆಳ್ಳಿಬಂಗಾರ ದೀನಸಾ | ವಸ್ತ ಒಡವಿ ಆಗ್ಯಾವ ರಾಕ್ಷಸ
ಬೇಕಾದಂಥ ವಸ್ತ್ರ ಸೆಲ್ಲೆ ಮುಂಡಾಸ | ಆಗಿ ಅಂಗಡಿ ಹಚ್ಚ್ಯಾರ …….
ದುರ್ಯೋಧನನ ನಿಬ್ಣ ನೋಡಿ ಖಾಸ | ತಗೋಳ್ಳಾಕ ಹೋದರಾಗಿ ಉಲ್ಲಾಸ

||ಏರು||

ಹಳಿದು ಕೊಟ್ಟು ಹೊಸದೊಯ್ಯಿರೆಂತ ಹೇಳಿದರ ಕೇಳಿದಂಡ ಮನ…….
ಹಳಿದೊಯ್ದು ಒಗೆದಾರವರಂಗಡ್ಯಾಗ |
ಆಡಿದ ಮಾತಿಗೆ ತಿರುಗಿ ಹೂಡಿದರ
ಸಿಟ್ಟು ಬಂತು ಆ ಗಿರಿಧರಗ | ಮುಂದ ವತ್ಸಲಹರಣ ಹೇಳುವೆನೀಗ

೭ನೆಯ ಚೌಕ

ದುರ್ಯೋಧನನ ದಂಡ ಸುಲಿಸಿಕೊಂಡು ಜಾಂಗೀ ಮಾಮಾ-
ಘಟೋದ್ಗಜಾ ಹೆಂಗಸರಾದರು |
ಬಳರಾಮನರಮನೆಯೊಳಗ್ಹೋದರು |
ರೇವತಿಯ ಮುಂದ ತೋಡ ಹೇಳಿದರು |
ವತ್ಸಲದೇವಿಗಿ ವಸ್ತ ಇಡಿಸಿ ನೋಡೂನಂತ-
ದುರ್ಯೋಧನ ನಮ್ಮನು ಕಳಿಸಿದರು |
ಲಗು ಕರಕೊಂಡು ಬಾ ಅಂತ ಹೇಳಿದರು ||
ಕೇಳಿ ರೇವತಿ ತನ್ನ ಮಗಳನು ಒಪ್ಪಿಸ್ಯಾಳ ತಗೊಂಡ ತಮ್ಮೊನಕ ಜಿಗಿದರು |
ಸುಭದ್ರನ ಮುಂದ ಒಯ್ದು ಇಳಿಸಿದರು |
ನಿನ್ನ ಸೊಸಿನ ತಗೋ ತಾಯಿ ಅಂತಾರು |
ಹೇಳಿ ಘಟೋದ್ಗಜಾ ವತ್ಸಲಾನ ರೂಪಾಗಿ
ಮತ್ತ ಒಯ್ದು ರೇವತಿಗೊಪ್ಪಿಸಿದರು |
ಅಲ್ಲೆ ಮದುವಿ ಆರಂಭ ಅರಿಸಿಣ ಹಚ್ಚಿದರು ||
ದುರ್ಯೋಧನನ ಮಗ ಲಕ್ಷಣ ಕುಮಾರತ ಹಾಸಕ್ಕಿ ಮ್ಯಾಲ
ವಾಸ ಮಾಡಿದಿರು |
ಮಾಯಾ ವತ್ಸಲಾನ ಬಳಿಯಲಿ ನಿಲಿಸಿದರು |
ವೇದ ಘೋಷ ಬ್ರಾಹ್ಮರು ನುಡಿಸಿದರು |
ಅಂತರ್ಪಟ ಹಿಡಿದು ಕೇರಿ ಮಂಗಳಾಷ್ಟಕನ್ನುವಾಗ
ಕಾಲು ತುಳಿದು ಮದುಮಗನ್ನ ಮಾಡಿದ ಜೇರು |
ಅಂಜಿ ಹೊಯ್ಕೊಂಡಾ ಎಲ್ಲಾ ಗಾಬಾದರು ||
ಹೆಂಗಸಲ್ಲ ಇದು ರಾಕ್ಷಸೈತಿ ನನ್ನ
ತಿಂತೈತೆಂತ ಹಾಕಿದ ಕಣ್ಣೀರು |
ಹೀಂಗಂದಾಕ್ಷಣವೆ ಎಲ್ಲರಂಜಿದರು |
ವಸ್ತ ಒಡವಿ ಸೆಲ್ಲೆ ಮುಂಡಾಸದ ರಾಕ್ಷಸರು |
ಹೊಡೆದು ದುರ್ಯೋಧನನ ನಿಬ್ಬಣ ಮಾನಭಂಗ
ಮಾಡಿ ಬತ್ತಲೆ ಓಡಿಸಿದರು |
ಘಟೋದ್ಗಜಾ ಜಾಂಗಿಮಾಮಾ ತಿರುಗಿಬಂದರು ||

||ಇಳುವು||

ಅಭಿಮಾನ್ಯುನ ಮದುವಿಗಿ ಮಾಯಾರೂಪದಿಂದ
ಬ್ರಾಹ್ಮರ ತಂದಾರ ಓಡಾಡಿ |
ಪ್ರತಿಲಗ್ನ ಮಾಡ್ಯಾರ ಗಡಿಬಿಡಿ ||
ಅಭಿಮಾನ್ಯಗ ವತ್ಸಲಾಗ ಲಗ್ನ ಆಯಿತಂತ ಕೃಷ್ಣ
ಚಪ್ಪಳಿಕ್ಕಿ ಹೊಡೆದಾ ಲೋಲಾಡಿ |
ಬಳರಾಮುಗ ಸುಮಾರಾಯ್ತು ನೋಡಿ ||
ಹೀಂಗ ಆಗಬಾರದೆಂದು ತಾ ತಿಳಿದಾ | ತನ್ನ ತಮ್ಮ ಕೃಷ್ಣಗ ಹೇಳಿದ |
ಕೃಷ್ಣ ಅಭಿಮನ್ಯುನ ಕರೆತಂದ | ಪ್ರತಿಲಗ್ನ ಮಾಡಿದ ಗರ್ದಿಯಿಂದ ||
ಕೌರವನ ಮಾನ ಹೋಯ್ತ ಬಂದ | ಹರಿ ತನ್ನ ವಚನ ನಡಿಸಿದ |

||ಏರು||

ಕೊಟ್ಟಂಥ ಭಾಷೆಗೆ ಬಿಟ್ಟು ನಡೆದರ
ಪೆಟ್ಟು ಹತ್ತುವದು ಮನಸ್ಯಾಗ |
ರಾಣು-ಕುಬ್ಬಣ್ಣ ಹೇಳಿದಾನ ಇದರ‍್ಹಾಂಗ |
ಅಂವ ಇರೂದು ಮಾಲಿಂಗಪುರದಾಗ |
ಆಡಿದ ಮಾತಿಗಿ ತಿರುಗಿ ಹೂಡಿದರ-
ಸಿಟ್ಟುಬಂತು ಆ ಗಿರಿಧರಗ | ಮುಂದ ವತ್ಸಲಹರಣ ಹೇಳುವೆನೀಗ ||

ರಚನೆ :
ರಾಣು-ಕುಬ್ಬಣ್ಣ, ಮಹಾಲಿಂಗಪುರ
ಕೃತಿ : ಜೀವನ ಸಂಗೀತ