ಇಂದ್ರಜಿತ ಮಡದ ಸುದ್ದಿ
ಸತಿ ಸುಲೋಚನಾ ಕೇಳಿ
ದುಃಖದಿಂದ ಬಿದ್ದಾಳ ಭೂಮಿಗೆ ತಾ ಹೊರಳಿ
ಅಯ್ಯೋ ಕಾಂತ ರಣಕ ಹೋದ ಮ್ಯಾಲಿ
ಮುಖಾ ನೋಡಲಿಲ್ಲ ಮರಳಿ||ಪಲ್ಲ||

ಪತಿ ಭುಜಗಳು ಬಿದ್ದುವಲ್ಲೆ
ಅಂಗಳದಲ್ಲೆ ಅಂತ್ರದಿಂದ ಹಾರಿ
ಸುಲೋಚನಾ ನೋಡ್ಯಾಳ ಹಾತ್ವಾರಿ
ಖೂನಾ ಹಿಡಿದ ತನ್ನ ಗಂಡನ ಭುಜಗಳು
ಭೂಮಿಗೆ ಬಿದ್ದಾಳು ಕಮರಿ
ದುಃಖ ಮಾಡ್ಯಾಳೊ ಆಕ್ರೋಶದಿಂದ
ತನ್ನತಾ ದೇಹಕಿಲ್ಲ ಖಬರಿ
ದೊರೆಯಲಿಲ್ಲ ನನ್ನ ಕಾಂತನ ಮೋರಿ
ಎರಡು ಭುಜಾ ಎದಿಗಪ್ಪಿಕೊಂಡಾಳಾಕಿ
ಪತಿಯ ಮುದ್ರಿಕಾ ನೋಡ್ಯಾಳ ನಾರಿ
ಸತ್ಯವಾಗಿ ನಾನು ಪ್ರತಿವೃತಾ ಇದ್ದರ
ನನಗ ತೋರಲಿ ರಣರಂಗದ ಸೂರಿ
ಆದ ಸುದ್ದಿ ಕಾಗದ ಮ್ಯಾಗ ಬರಿರಿ
ತಂದ ಇಟ್ಟಾಳ ತಾಡವಾಲಿ
ಲೇಖಣಿ ಮಸಿ ರತ್ನ ಝಾರಿ

||ಚಾಲ||

ಭುಜಾ ಬರಿತ ರಣದಲ್ಲೆ ಪ್ರಾಣಸಖಿ
ಕೇಳ ಲಕ್ಷುಮಣ ಹೊಡೆದಾ
ಶಿರಾ ಒಯ್ದರ ನಂದ ಕಡದಾ
ಎರಡು ಭುಜಾ ನಿನ್ನ ದರ್ಶನ ಆಗುದಕ
ಹಾರಿ ಬಂದಾವ ಸಿಡಿದಾ
ಸುದ್ದಿ ಕೇಳುವ ದಸಿಯಿಂದಾ
ನಿನ್ನ ಹಾದಿ ನೋಡಕೋತಾ
ಅಂತ್ರದಲ್ಲೆ ನಾ ಕುಂತಿದೇನ ತಡದಾ
ಪ್ರಾಣ ಸತಿಯೆ ಬಾರೆ ನಡದಾ

||ಏರು||

ಬರದ ಲಿಖಿತ ತನ್ನ ಧ್ಯಾನಕ ತಂದು
ಭೂಮಿಯ ಮ್ಯಾಗ ಉರಳಿ ಉರಳಿ
ದುಃಖದಿಂದ ಮಾಡಿದಾಳ ಹೋಳಿ
ಇಂದ್ರಜೀತ ಮಾಡಿದ ಸುದ್ದಿ
ದುಃಖದಿಂದ ಬಿದ್ದಾಳ ಭೂಮಿಗೆ ತಾ ಹೊರಳಿ ||೧ನೇ ಚೌಕ||

ಎರಡು ಭುಜಗಳಾ ಹಿಡಿದ ಹಸ್ತದಲ್ಲೆ
ಬಾಳ ದುಃಖ ಮಾಡತಾಳು
ರಾವಣನ ಸಭಾಕ ಬಂದಾಳು
ಪ್ರಾಣನಾಥ ಬರದಂಥಾ ಪತ್ರ
ದಶಕಂಠಗ ತೋರಿಸ್ಯಾಳು
ರಾವಣನ ಇದರಿಗೆ ಹಣಿ ಬಡದು ಬಹು
ಆಕ್ರೋಶ ಮಾಡತಾಳು
ಎದಿ ಬದಿ ಬಡಕೊಂಡಳವಳು
ನಿನ್ನ ಕರ್ಮದಿಂದ ನನ್ನ ಗಂಡನು
ಮಡಿದ ಹೋದಂತ ಬಿದ್ದಾನು
ಜಾನಕಿನ ನೀ ತರದಿದ್ರ ಇಷ್ಟೆಲ್ಲಿತ್ತ ಗೋಳು
ಕುಲಕ್ಷಯ ಮಾಡಿಕೊಂಡು ಹಾಳು
ಕೀರ್ತಿ ಮಾಡಿದಿ ಮೂರು ಜಗದೊಳು
ನನಗಂಡಗಾದಿ ವಿನಾಶ ಕಾಳು

||ಚಾಲ||

ನನ್ನ ಗಂಡ ಸತ್ತ ರಂಡಿ ಆಗದು
ನಿನ್ನ ಮನಸ್ಸಿನೊಳಗ ಇತ್ತು
ಆ ಹರಕೀ ಕೈಗೂಡಿತು
ನಾ ಸತಿ ಆಗುವ ನನ್ನ ಪತಿ ಸಂಗಡಾ
ಕೇಳಿರಿ ನನ್ನ ಮಾತು
ಬಿಡಲಾರೆ ಪ್ರಾಣನಾಥನಾ
ಮಹಾವೀರ ನನ್ನ ಮನೋಹರನಾ ಶಿರಾ
ರಘುವೀರನ ಹಂತೇಲಿ ಹೋಯಿತು
ಅದನ ಕೊಡಸರಿ ಈ ಹೊತ್ತು.

||ಏರು||

ಸೊಸಿ ಮಾತ ಲಾಲಿಸಿ ರಾವಣ
ಕೂಗಿ ಹೊಡ ಹೊರಳಿ ರಣಧೂಳಿ
ರಾಮನಿಂದ ಮಾಡುವೆ ಹೋಳಿ
ಇಂದ್ರಜಿತ ಮಡಿದ ಸುದ್ದಿ
ಸತಿ ಸುಲೋಚನಾ ಕೇಳಿ
ದುಃಖದಿಂದ ಬಿದ್ದಾ ಭೂಮಿಗೆ ತಾ ಹೊರಳಿ||೨ನೇ ಚೌಕ||

ಮಂಡೋದರಿ ಬಂದ ಬುದ್ಧಿಯ ಹೇಳತಾಳ
ಕೇಳ ಸುಲೋಚನಾ ನನ್ನ ಮಾತನ್ನಾ
ಚಿತ್ತ ಇಟ್ಟ ನೋಡೆ ನನ್ನ ವಚನಾ
ದಯಾಸಿಂಧು ಚಿನ್ಮಯ ರಾಮಾ ಅಂವಾ
ಭಕ್ತರಿಗೆಲ್ಲಾ ಸವನಾ
ಸ್ತುತಿಯ ಮಾಡಿ ನಿನ್ನ ಪತಿ ಶಿರಾ ಬೇಡಿ
ನೋಡ ಅವರ ಕರುಣಾ
ಮಾಡೋದಿಲ್ಲ ಎಂದಿಗೂ ಅಪಮಾನಾ
ಕಾಲಗತಿ ಇದ್ದಂಗ ಆದೀತ ಆಗಬ್ಯಾಡ ಖಿನ್ನಾ
ಇರಲಿ ಬಿಂದು ಮಹಾಮೇರು ನುಂಗಿತಂತ
ವ್ಯಾಸ ಮಡಿದ ಗಣನಾ
ಅದರಿಂದ ಆಯಿತು ಲಂಕಾದಹನಾ
ಬೇರ ಸಹಿತ ರಾಕ್ಷಸರ ಬೊರಲಬಿದ್ದಾ
ಹೋದ್ರ ಉಳಿತ ಏನಾ

||ಚಾಲ||

ಅತ್ತಿ ಮಾವನ ಚರಣಕ ನಮಿಸಿ
ಸುಲೋಚನಾ ಹೊಂಟಾಳ ಹಾದಿ ಹಿಡದಾ
ರಾಮನ ಹಂತೇಲಿ ಬಂದಾಳ ನಡದಾ
ನಿಂತ ಸ್ತುತಿ ಮಾಡ್ಯಾಳ ಆಗ ಲಕ್ಷ್ಮೀ-
ಕಾಂತಗ ಗುಪ್ತ ನೀ ಮುಕುಂದಾ
ಉತ್ಪತ್ತಿ ಸ್ಥಿತಿ ನಿನ್ನಿಂದಾ
ಅಷ್ಟು ದುಷ್ಟ ದೈತ್ಯರನ ನಷ್ಟ ಮಾಡುದಕ
ಹುಟ್ಟಿದಿ ಗೋವಿಂದಾ
ಅಷ್ಟು ಪಾಪ ಪುಣ್ಯ ತಿಳಿದಾ

||ಏರು||

ಶೇಷಶಯನ ನೀ ರಾಮನಾಗಿ
ಮಹಾಶಕ್ತಿ ಜನಕ ಬಾಳಿ
ಏಳನೆಯ ಅವತಾರವ ತಾಳಿ
ಇಂದ್ರಜಿತ ಮಡದ ಸುದ್ದಿ
ಸತಿ ಸುಲೋಚನಾ ಕೇಳಿ
ದುಃಖದಿಂದ ಬಿದ್ದಾಳ ಭೂಮಿಗೆ ತಾ ಹೊರಳಿ||೩ನೇ ಚೌಕ||

ಭಕ್ತಿಯಿಂದ ಸುಲೋಚನೆಯ ಸ್ತುತಿಗೆ ರಘು-
ಪತಿಯ ಮುಂದ ಕರದಾ
ಕಾಲಮ್ಯಾಲ ಬಿದ್ದಂತಾಕಿನ್ನ ಹಿಡದಾ
ಏಳೆ ಮಗಳೇ ಸಾಕ ಮಾಡ ಸ್ತುತಿಯ ಭಾಳ
ಆಯಿತ ಪ್ರೇಮಾನಂದಾ
ಶಿರಾ ಇಲ್ಲಿಗೆ ನಾವ ತಂದ ಸುದ್ದಿ ನಿನಗ
ಹ್ಯಾಂಗ ತಿಳೀತ ಇಂದಾ
ಭಿಡೆ ಬಿಟ್ಟ ಹೇಳ ಎಲ್ಲಾ ಒಡದಾ
ಆದ ಮಾತಿಗೆ ಆ ಪತ್ರ ತಗದ ಸುಲೋ-
ಚನಾ ಇಟ್ಟಾಳ ಮುಂದಾ
ಭುಜಾ ಬರದ ಲಿಪಿ ನೋಡಿ ಸರ್ವರು
ಅಂತಾರ ಹೆಚ್ಚಿಂದಾ
ನಾವು ಎಲ್ಲಿ ಕಂಡಿಲ್ಲ ಇಂಥಾದಾ
ಖರೆ ಪತಿವೃತಾ ಇದ್ದರ ಶಿರಾ
ನಗಸಿ ಒಯ್ಯಲ ಇಕಿಯಿಂದಾ

||ಚಾಲ||

ಚಮತ್ಕಾರ ನೋಡುದಕ ವಾನರರ
ದಂಡ ಕೂತಾರ ಸಂವಚಿತ್ತಾ
ಘಳಿಗಟ್ಟಿ ಕೂತಾರ ಸುತ್ತಾ
ಆಶ್ಚರ್ಯ ಅಂತಾರ ಹನುಮಂತ ಅಂಗದಾ
ನಳಾ ನೀಳಾ ಜಾಂಬುವಂತಾ
ನೋಡೇನ ಅಂತಾರ ಅದ್ಭುತಾ
ಮಧ್ಯ ಭಾಗದಲ್ಲಿ ಪದ್ಮಲೋಚನಾ
ಸರಿಯಾಗಿ ಶಿರಾ ಹಿಡದ ಮಸ್ತಾ
ಹಲುಬತಾಳ ಪತಿವೃತಾ.

||ಏರು||

ಮಾಡಿದಂತ ತನ್ನ ಕ್ರೀಡಾ ವಿನೋದಾ
ಶಿರದ ಮುಂದ ಹೇಳಿ
ನೆಲಕ ಬಿದ್ದಾಳ ಬಂದ ಬವಳಿ
ಇಂದ್ರಜಿತ ಮಡದ ಸುದ್ದಿ
ಸತಿ ಸುಲೋಚನಾ ಕೇಳಿ
ದುಃಖದಿಂದ ಬಿದ್ದಾಳ ಭೂಮಿಗೆ ತಾ ಹೊರಳಿ||೪ನೇ ಚೌಕ||

ಎಷ್ಟ ನಾರಿ ತಾ ಕಷ್ಟ ಪಟ್ಟರೂ
ಪತಿ ಶಿರಾ ನಗವಲ್ಲದೂ
ಕಮಲ ಮುಖಾ ಬಾಡಿತಾಕೀದು
ದೋಷ ಇಲ್ಲದ ನಾ ಹಾಸ್ಯವಾಗುವ್ಯಾಳೆ
ಈಗ ಬಂದೀತು ಎಂಥಾದು
ಅಂತಾಳಾಗ ಎಂಥಾ ವಿಪರೀತ ಆದೀತಂತ
ತಿಳಿಯಲಿಲ್ಲ ಮುಂದಿಂದು
ನನ್ನ ಪ್ರಾಣನಾಥ ಹಿಂಗ ಬೀಳುವದು
ನಮ್ಮ ತಂದಿನ ನನಗಂಡ ಕುಮಕಿಗೆ
ಈಗಿಂದೀಗ ನಿಲಸತೀನಿ ತಂದು
ಪದ್ಮಗಂಧೀ ಮಾತ ಕೇಳಿ ಶಿರಾ ಆಗ ಖದಾ
ಖದಾ ನಗುವುದು ನಗುವುದು
ನೋಡ್ಯಾರ ಎಲ್ಲಾರು ಭ್ರಾಂತಿ ಬಡದು
ಲಕ್ಷ್ಮಣನು ವಿಚಕ್ಷಣೆ ಮಾಡತಾನು
ರಾಮಗ ಕೈ ಮುಗಿದು

||ಚಾಲ||

ಶಿರಾ ಯಾತರ ದಸಿಯಿಂದ ನಕ್ಕೀತು
ರಘುಪತಿ ಹೇಳಿರಿ ಪ್ರೀತಿಯಿಂದ
ಸರ್ವಾತ್ಮ ನಿನ್ನಿಂದಾ
ಶಿರಾ ನಕ್ಕ ಮೂಲ ಎಲ್ಲರಿಗ್ಹೇಳಿದಾ
ರಾಮ ಕೇಳಿರಿ ಮುಂದ ಸರದಾ
ಮಾಂವ ಕುಂತ ಅಳಿಯಾನ ಹೊಡದ ಶೇ-
ಷಾವತಾರದ ಇವನ ಮಗಳ ಖುದ್ದಾ
ಕುಮಕ ಹೇಳ್ಯಾಳ ತಂದೀದಾ

||ಚಾರು||

ನಿಮ್ಮ ತಂದಿ ನನ ಕೊಂದಾ
ಹೋದಾನಂತ ನಕ್ಕಿತ ಶಿರಾ ಕೇಳಿ
ನೀನೆ ಶೇಷಾವತಾರಿ ಬಂತಾಳಿ
ಇಂದ್ರಜಿತ ಮಡದ ಸುದ್ದಿ
ಸತಿ ಸುಲೋಚನಾ ಕೇಳಿ
ದುಃಖದಿಂದಾ ಬಿದ್ದಾಳ ಭೂಮಿಗೆ ತಾ ಹೊರಳಿ||೫ನೇ ಚೌಕ||

ಕೇಳಿ ರಾಮನ ಮಾತ ಲಕ್ಷ್ಮಣಾ ಬಿದ್ದಾನ
ತಳಮಳಿಸಿ ತಳಮಳಿಸಿ
ಅಂವ ಮನಸಿನಲ್ಲಿ ಹೊಂದಿದಾನ ಕಸವಿಸಿ
ಅಣ್ಣಗ ಹೇಳತಾನ ಅಳಿಯಾನ ಪ್ರಾಣದಾನ
ಕೊಡಿರಿ ಈಗ ಎಬ್ಬಿಸಿ
ಕೇಳಿ ರಘುವೀರಾ ದೈತ್ಯನ ಎಬಿಸುವದು
ಪುರಮಾಸಿ ಪುರಮಾಸಿ
ನೋಡಿ ವಾನರರು ನಿಂತಾರ ಡಳಸಿ
ಸರ್ವರೂ ತಲೆಗೂಡಿಸಿ
ಅವಮಾನದ ಹನುಮಂತ ಹೇಳತಾನ
ರಾಮಗ ಕೈ ಜೋಡಿಸಿ ಜೋಡಿಸಿ
ಕಲ್ಪನಾ ತಗಿಯಬ್ಯಾಡಿರಿ ಎಣಿಸಿ
ಇನ್ನ ಮ್ಯಾಲ ಇಂದ್ರಜಿತ ಅಂವಾ ಎದ್ದರ
ಸರ್ವರು ಆದೀರಿ ಘಾಸಿ

||ಚಾಲ||

ಸುಲೋಚನಾ ಕರದ ಇಂದ್ರಜಿತನ ಶಿರಾ
ಕೊಟ್ಟ ಹನುಮ ಕಳಿಸಿದ ರಮಿಸಿ
ತಾಯಿ ಹಿಡಬ್ಯಾಡ ಆಶೀ
ಆಗ ಪತಿವೃತಾ ಪತಿ ಶಿರಾ ಸಹಿತ
ಹೋಗಿ ಅಗ್ನಿಕುಂಡ ರಚಿಸಿ
ಆದಾಳ ಸ್ವರ್ಗವಾಸಿ
ಮಗಾ ಸೊಸಿ ಹೋದರಂತ ರಾವಣಾ
ಬಿದ್ದ ದುಃಖ ವ್ಯಾಪಿಸಿ
ಮುಂದ ಆದೀತು ಅಸುರ ನಾಸಿ

||ಏರು||

ಬಾಳಗೋಪಾಳ ಅಂತಾರ ಕತಿ ಮುಂದ
ಬೆಳಸಿದರ ಆದೀತ ರಗಳಿ
ಶಾಹೀರ ಮ್ಯಾಗ ಬಂದೀತ ಹೊಸಾ ಅಗಳಿ
ಅಯ್ಯೋ ಕಾಂತ ರಣಕ ಹೋದ ಮ್ಯಾಲಿ
ಮುಖಾ ನೋಡಲಿಲ್ಲ ಮರಳಿ
ಇಂದ್ರಜಿತ ಮಡದ ಸುದ್ದಿ
ಸತಿ ಸುಲೋಚನಾ ಕೇಳಿ
ದುಃಖದಿಂದ ಬಿದ್ದಾಳ ಭೂಮಿಗೆ ತಾ ಹೊರಳಿ||೬ನೇ ಚೌಕ||

ರಚನೆ : ಬಾಳಗೋಪಾಳ
ಕೃತಿ : ಜಾನಪದ ಝೇಂಕಾರ