ಸತಿಯರೊಳಗ ಅತಿ ಪತಿವ್ರತಾ ಅನಿಸಿಕೊಂಡ
ಖ್ಯಾತಿ ಹೊಂದಿದಾಳ ಅನಸೂಯ ಸತಿ
ಅತ್ರಿಮಹರ್ಷಿ ಅಂಬೊವವ ಪತಿ
ಮೂರು ಲೋಕದೊಳು ಸಾರತೈತಿ ಅವರ ಕೀರ್ತಿ ||
ಅನಸೂಯಾನ ಶೀಲ ವ್ರತ ನಷ್ಟಮಾಡಲಿಕ್ಕೆ ಬಂದ
ಕಷ್ಟಕ್ಕ ಈಡಾದ್ರ ದೇವತಾ ತ್ರಿಮೂರ್ತಿ
ಆಕಿ ಉದರದೊಳು ಜನಿಸಿ ಬಂದ್ರ ಜನ್ಮವೆತ್ತಿ ||

ಜ್ಞಾನವಂತಿ ಅನಸೂಯಾ ಧಾನ್ಯ ಕುಟ್ಟತಿದ್ಲ
ಅತ್ರಿ ಪತಿ ಕರದ ಹೊರಗಿಂದಾ
ಕೈಯ್ಯ ಬಿಟ್ಟ ಬಂದ್ಲ ಮ್ಯಾಲಕ್ಕೆತ್ತಿದ್ದಾ
ಆ ವಣಿಕಿ ನಿಂತಿತ್ತ ಅಂತರಲಿಂದಾ ||
ನಾರದ ನೋಡಿ ಹೋಗಿ ಸರಸ್ವತಿ ಲಕ್ಷ್ಮಿಗೆ
ಹೇಳಿದಾನ ಪಾರ್ವತಿ ಮುಂದಾ
ಹಿಂತಾ ಕೆಲಸ ಆಗದ್ದರೆವ್ವಾ ನಿಮ್ಮಿಂದಾ ||

ಕಲ್ಪನಾವಿಲ್ಲದೆ ತಾವು ಕೈಬಿಟ್ಟ ನೋಡಿದಾರ
ನಿಲ್ಲಲಿಲ್ಲ ವಣಿಕಿ ಯಾರಿಂದಾ
ಬ್ರಹ್ಮ ಪುತ್ರ ಗುರತಾ ಹಿಡದ ನಾರದಾ
ನಿಮಗ ಸ್ವಲ್ಪು ತಿಳವಳಿಕಿ ಇಲ್ಲಂದಾ ||
ಗರತೇರ ಅಲ್ಲದವರು ಗದ್ಲಾಸೋಸಿದರ
ಅವರ ಮೇಲೆ ವಣಿಕಿ ಬೀಳುವುದಾ
ಧಕ್ಕಿ ಕೊಡವುವದಾ ||

ಋಷಿ ಪತ್ನಿ ಶೋಧಮಾಡಿ ವ್ರತಭಂಗ ಮಾಡದಿದ್ದರ
ನಮಗ ಬಂದೀತಂತಾರ ಕುಂದಾ
ತಿಳಸೂನಂದ್ರ ತಮ್ಮ ಪತಿಗಳ ಮುಂದಾ
ಗಟ್ಟಿಹಾಕಿ ಮಲಿಗ್ಯಾರ ಬಾಗಿಲ ಕದಾ ||
ಸೃಷ್ಟಿ ಉತ್ಪತ್ತಿ ಲಯ ಕರ್ತರು ಮೂವರು
ದಿಟ್ಟಿಸಿ ನೋಡತಾರ ಬಂದ ಬಂದಾ
ಹಸದ ಹಾಂವಾಗಿ ಹಲಬತಾರ ಹಾಂತವರಿದಾ ||

ಬಂದ ಚಿಂತಿ ಬಯಲ ಮಾಡದಿದ್ರ ಬದಕಲಾರೆವು ನಾವು ಜೀವದಿಂದಾ
ವಚನಾ ತಗೊಂಡಾರ ನಿಂತ ಒಳಗಿಂದಾ
ಊಟಾ ಮಾಡ್ಸಿ ಹೇಳ್ಯಾರ ತಮ್ಮ ಮನದಂದಾ ||
ಬ್ರಹ್ಮ ವಿಷ್ಣು ಮಹೇಶ್ವರ ಮೂವರು ಕೂಡಿಕೊಂಡ
ಭೂಲೋಕದೊಳಗ ಬಂದಾರ ಇಳದಾ
ಭಸ್ಮ ರುದ್ರಾಕ್ಷಿ ವೇಷ ಹಾಕಿ ಸಾದೂರದಾ ||

ಒಂದನೇ ಚಾಲ

ಅತ್ರಿ ಆಶ್ರಮದ ಮುಂದ ನಿಂತಾರು ಬಂದ
ಭವತಿ ಭಿಕ್ಷಾಂದೇಹಿ ಕ್ಷಣ ಕ್ಷಣಕ
ಅನಸೂಯಾ ಬಂದ್ಲ ನೀಡೊದಕ ||
ಕಳದಿಟ್ಟ ನೀನು ಅಂಬರ ಆಗಿ ದಿಗಂಬರ
ನೀಡ ಊಟsಕ್ಕ |
ಅತ್ಯಾನಂದ ನಮ್ಮ ಆತ್ಮಕ್ಕ ||

ಎರಡನೇ ಚಾಲ

ತಂದ ಉಗ್ಗಿದಳು ಪತಿ ಪಾದೋದಕ
ಕೂಸ ಆಗಿ ಬಿದ್ದಾರ ನೆಲsಕ ||
ದೇವತಾ ಸ್ತ್ರೀಯರದು ತಪ್ಪಿತ ಆಗ ದಿಕ್ಕ
ಹೊಂಟಾರು ಪತಿದಾನಾ ಕೇಳುದಕ

||ಏರ||

ಪರ್ಣ ಕುಟೀರಕ್ಕ ಬಂದ ಪತಿಗಳನ್ನು ಪಡಕೊಂಡ್ರ
ಅನಸೂಯಾಗ ಮಾಡಿಕೊಂಡ್ರ ವಿನಂತಿ
ಮುಂದ ಜನಿಸಿ ಬಂದ ದತ್ತಾತ್ರೇಯ ಮೂರ್ತಿ
ತಿಗಡೊಳ್ಳಿ ಮರಿಕಲ್ಲ ಮಾಡಿದ ಬಲಭೀಮನ ಸ್ತುತಿ ||
ಅನಸೂಯಾನ ಶೀಲವ್ರತಾ ನಷ್ಟಮಾಡಲಿಕ್ಕೆ ಬಂದ
ಕಷ್ಟಕ್ಕೀಡಾದ್ರ ದೇವತಾ ತ್ರಿಮೂರ್ತಿ
ಆಕಿ ಉದರದೊಳು ಜನಿಸಿ ಬಂದ್ರ ಜನ್ಮವೆತ್ತಿ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು