ಅತ್ರಿಮ ಮುನಿಸತಿ ಅನಸೂಯಾ ಪತಿವ್ರತ ಪೃಥ್ವಿ ಮೇಲೆ ಆಕಿ ಪ್ರಖ್ಯಾತಿ
ನೀತಿಯಿಂದ ಬ್ರಹ್ಮ ವಿಷ್ಣು ಮಹೇಶ್ವರರ ಹೆಂಡರನ್ನ ಮಾಡ್ಯಾಳ ಫಜೀತಿ||ಪ||

ಧಾನ್ಯ ಕುಟ್ಟುವಾಗ ತನ್ನ ಗಂಡ ಕರದ ಮೇಲಕ್ಕೆತ್ತಿದ್ಲಬಿಟ್ಟಾಳ ಒನಕಿ |
ಪುನಃ ಬಂದು ಆಕಿ ತಾನೆ ತಗೊಳ್ಳುತನ ಏನೇನು ಆಗಿದ್ದಿಲ್ಲ ಅದಕ ಧಕ್ಕಿ |

ನಾರದ ನೋಡಿ ಹೋಗಿ ಶಾರದಿ ಲಕ್ಷ್ಮಿ ಪಾರ್ವತಿ ಮುಂದ ಹೇಳಿದ ಬೆರಕಿ |
ಘೋರ ಬಿಡಲಿಕ್ಕೆ ಹೋಗಿ ಮಾರಿ ಮೂಗು ಒಡಕೊಂಡ
ಮೂರು ಮಂದಿ ಅತ್ತಾರ ಬಿಕ್ಕಿ ಬಿಕ್ಕಿ ||

ಅರಿತ ಬ್ರಹ್ಮಪುತ್ರ ಗುರುತ ಹಿಡದ ಅಂದ ನಿಮಗ ಇಲ್ಲರೆವ್ವ ತಿಳಿವಳಿಕೆ |
ಗರತಿ ಇದ್ದರ ತುರ್ತ ನಿಂದ್ರುವದು ಇಲ್ಲದಿದ್ರ ಬೀಳುದು ನಕ್ಕಿ ||
ಅಪಮಾನ ಆತ ಇದಕ ಉಪಾಯ ಏನಂತ ಹಪಾಪಿ ಹತ್ತೀತ ಬಡಬಡಕಿ |
ತಪಾಸ ಮಾಡಿ ವ್ರತಭಂಗ ಮಾಡುವ ಯುಕ್ತಿ ತಗದಾರ ಮೂವರು ಹುಡಿಕಿ ||

ನಿಷ್ಟೂರ ಮಾಡಿ ತಲಿ ಕಟ್ಟಿ ಮಲಗಿದಾರ ಬಿಟ್ಟು ಬಿಡದೆ ಘಟ್ಟಿ ಕದ ಹಾಕಿ |
ಸೃಷ್ಟಿ ಸ್ಥಿತಿ ಲಯ ಕರ್ತರು ಬಂದು ದಿಟ್ಟಿಸಿ ನೋಡತಾರ ಹಣಿ ಹಣಿಕಿ ||

ಹಸದ ಹಾವಾಗಿ ಹಲ್ಲ ಕಿಸದ ಚೀರತಾರ ಮುಸಕ ತಗಿಯವಲ್ಲರು ಮಿಸಕಿ |
ಗುಸಮಿಸಿ ಏನೈತಿ ಹಸನಾಗಿ ಹೇಳಿರೆಂತ ತ್ರಿಮೂರ್ತಿಗಳು ಕೇಳತಾರ ಮಿಡಕಿ ||

ನಾವು ಹೇಳಿದಾಂಗ ನೀವು ಕೇಳಬೇಕ ವಚನ ಕೊಡ್ರಿ ಕೈ ಮೇಲೆ ಕೈ ಹಾಕಿ |
ಅವಾಗ ಎದ್ದು ನಿಮ್ಮ ಸೇವೆ ಮಾಡತೇವ ಜೀವದಿಂದ ಇರತೇವ ಬದುಕಿ ||

||ಚಾಲ||

ಕ್ರಿಯಾ ಕೊಟ್ಟಾರ ಮಾಡಲಿಲ್ಲ ಸುಸ್ತಾ |
ಮಾಯ ಕಾರ್ತಿಗಳಿಗಾದೀತೊಳೆ ಸಿಸ್ತಾ ||
ಜಯವಾಯಿತು ಮನಸಿನಂತಾ |
ಭಯ ಬಿಟ್ಟ ಅಡಿಗಿ ಮಾಡುತಾ ||
ಎಲ್ಲಾರು ಉಂಡಾರ ನಕ್ಕೊಂತಾ |
ಅಲ್ಲಿಂದ ತಗದಾರ ಆ ಮಾತಾ ||

||ಏರು||

ಮೃತ್ಯುದೊಳಗೆ ಋಷಿ ಪತ್ನಿ ಅನಸೂಯನ್ನ ವ್ರತಭಂಗ ಮಾಡುವ ಕುಶಕ್ತಿ||೧||

ಮೂವರು ದೇವರು ಬಾವಾಗಳ ರೂಪಾಗಿ ತಾವಾಗಿ ಬಂದಾರ ಭೂಲೋಕಕ
ಕಾವಿಯು ಮೈಯಾಗ ಆವಿಗಿ ಕಾಲಾಗ ಭವತಿ ಭಿಕ್ಷಾಂದೇಹಿ ಕ್ಷಣ ಕ್ಷಣಕ |
ಪತಿವ್ರತಾ ಶಿರೋಮಣಿ ವ್ರತಭಂಗ ಮಾಡುವ ಕುತೂಹಲವಾಗಿ ಪರ್ಣ ಕುಠೀರಕ |

ಮತಿವಂತಿ ಅನಸೂಯಾ ಸ್ವತಃ ಬಂದಾಳ ಬೇಗ ಅತಿಥಿ ಸತ್ಕಾರ ಮಾಡುದಕ |
ಸುತ್ತರಿದು ಮೂವರು ನಿಂತ ಮಾತಾಡತಾರ ಅತ್ರಿಮ ಆಶ್ರಮ ಬಾಗಿಲಕ |
ಬತ್ತಲೆಯಾಗಿ ಬಂದು ಭಿಕ್ಷಾ ನೀಡಿದರ ಆತ್ಮಾನಂದ ನಮ್ಮ ಆತ್ಮಕ ||
ತಥಾಸ್ತು ಅಂಥ ಹೇಳಿ ನಮಸ್ಕಾರ ಮಾಡಿ ಸತಿ ಅನಸೂಯಾ ಹೋದ್ಲ ಒಳಿಯಾಕ
ಸ್ತುತಿ ಸುತ ಓಂಕಾರ ಯತಿಗಳಿಗೋಸ್ಕರ ತೊಳಕೊಂಡ ತಂದ್ಲ ಪತಿ ಪಾದೋದಕ
ಪಾದ ತೀರ್ಥ ಸಾಧುಗಳಿಗೆ ಉಗ್ಗಿದಳು ಕೂಸ ಆಗಿ ಬಿದ್ದಾವ ನೆಲಕ |
ಮೋದದಿ ಮೊಲೆ ಉಣಿಸಿ ಒಯ್ದು ತೊಟ್ಟಿಲಕ್ಹಾಕಿ ಜೋಗುಳ ಹಾಡುತಾಳ ನಕ್ಕ ನಕ್ಕ

ಜೋಗಳ ಪದ್ಯ

ಶಂಭೋ ಶಂಕರಾ ಬ್ರಹ್ಮ ವಿಷ್ಣು | ಜೋ ಜೋ |
ಕುಂಬಿನಿಗಿ ಕೂಸ ಅದ್ರಿ | ಜೋ ಜೋ |
ಶೀಲ ಪರೀಕ್ಷೆ ಮಾಡುವ ದಶಿಯಿಂದ
ಮೇಲಿನಿಂದ ಇಳದ | ಭೂಲೋಕಕ್ಕೆ ಬಂದ |
ದರ್ಶನ ಕೊಟ್ಟಿ ಜೋ ಜೋ |
ಆಶ್ರಮ ಪಾವನವಾಯ್ತು ಜೋ ಜೋ |
ಇಲ್ಲಿಗೆ ಬಂದ ಈ ಸ್ಥಿತಿಯಾಯ್ತ ಜೋ ಜೋ |
ಕೆಲಸ ಯಾರಿಗೆ ಒಪ್ಪಿಸಿ ಬಂದ್ರಿ ಜೋ ಜೋ |
ಮೂವರೂ ದೇವತಾ ಸ್ತ್ರೀಯರು ಭಾವನೆ ತಪ್ಪಿದರು |
ತಾವೆ ಬರುವರು ಮಲಗಿ ಕೊಳ್ಳಿರಿ | ಜೋ ಜೋ |
ಆವಾಗ ನೋಡುನು ಮಜಾ ಜೋ ಜೋ |
ವೀಣಾ ಶಾರದ ಜಾಣ ನಾರದ ಟಣ್ ಟಣ್ ಜಿಗದಾನ ಮೇಲಕ |
ಪ್ರಾಣ ಪತಿಗಳ ಪ್ರಾಣ ಸಂಕಟವನ್ನು ಮೂರು ಮಂದಿ ಅವ್ವಗಳಿಗೆ ಹೇಳುದಕ ||
ಆರ್ವಮಜಕರು ಸಾರಿದವರ ಮುಂದ ಲಕ್ಷ್ಮವ್ವಂದು ತಪ್ಪಿತ ದಿಕ್ಕ |
ಗರ್ವ ಮುರಿದು ಪಾರ್ವತೆವ್ವ ಅಂತಾಳ ಸರ್ವೇಸಿಲ್ಲದ ಹ್ಯಾಂಗ ಇರಬೇಕ ||
ಸರಸ್ವತೆವ್ವನವರು ಮರಾ ಮರ ಮರಗ್ಯಾರ ಬರಮಪ್ಪನವರು ಇಲ್ಲದಕ ||
ನಾರದ ಗುರುಗಳನ್ನು ಕರಕೊಂಡ ಹೋದಾರ ಪತಿದಾನ ಕೊಡ ಅಂತ ಕೇಳುದಕ ||

||ಚಾಲ||

ಹೋಗಿ ಹಿಡಿದಾರ ಮುನಿ ಮಡದಿ ಪಾದ |
ತಗೊಳ್ರೆಂದಾಳ ಗುರ್ತ ಹಿಡಹಿಡದ ||
ಗುರ್ತಾ ತಪ್ಪಿಬ್ಬರನ ಒಬ್ರ ಹಿಡದ |
ದತ್ತಾತ್ರೇಯ ಮೂರ್ತಿ ಜನಿಸಿದ ||
ನಾರಿ ಪಾದೋದಕ || ಸಿಡಿಶ್ಯಾಳ ತಂದ |
ಹರಬ್ರಹ್ಮ ಎದ್ರ ಗೋವಿಂದ ||
ಹುಲಕುಂದ ಭೀಮನ ಕವಿಚಂದ |
ಹಲವು ರಿಕಾರ್ಡದಾಗ ಅಂವ ಅಂದ ||

||ಏರು||

ಖಾತ್ರಿ ಜನಪದದ ಮಿತ್ರ ಬೆಟಗೇರಿಯವರು ಧಾತ್ರಿಯೊಳಗ ಹೇಳಿದ ಕಥಿ||೨||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು