ಮಾನವ ಜನ್ಮಕ ವಿಚಾರ ಬಹಳ ಬೇಕ ಪ್ರಪಂಚ ಮಾಡುವಾಗ||ಪ||

ಮೈಮರತ ಇರಬಾರ‍್ದ ಜಗದೊಳಗ
ಮಹಾಪತಿವ್ರತ ಮೋಸ ಹೋದ ಕಥಿ ಸೋಸಿ ಕೇಳರೀಗ||ಸೋ||

ಹೇಳುವೆನು ನಿಂತ ಸಭಾದಾಗ ||
ಗೌತುಮ ಮುನಿ ಸತಿ ಅಹಲ್ಯಾ ಪತಿವ್ರತ ಇದ್ರ ಆನಂದದೊಳಗ||ಇ||

ಆಶ್ರಮ ಕಟಗೊಂಡ ಅಡಿವ್ಯಾಗ ||
ಕಣ್ಣ ಕಮಲ ಮೈ ಬಣ್ಣ ಲಿಂಬಿಹಣ್ಣ ಗಲ್ಲ ಕನ್ನಡಿ ಹಂಗ||ಕು||

ಸಂಪಿಗೆ ತೆನೆಯಂತೆ ಅಕಿ ಮೂಗ ||
ತೋಳ ತೊಡಿಗಳು ಬಾಳಿದಿಂಡಿನಂತೆ ಕುಚ ಬೊಗರಿ ಹಂಗ||ಕು||

ನಡಿಗಿ ನಡುತಿದ್ಲ ನವಿಲಿನ್ಹಂಗ ||
ಸುಂದರ ರೂಪಕ ಇಂದ್ರ ಮೆಚ್ಚಿ ಬಂದ ಮಧ್ಯ ರಾತ್ರಿಯೊಳಗ||ಮ||

ಮಸಲತ ಮಾಡಿದ್ದ ಮನದೊಳಗ ||
ಕೀಳತನ ನೋಡ್ರಿ ಕೋಳಿಯಾಗಿ ಹೋಗಿ ಕೂಗ್ಯಾನ ಆವಾಗ||ಕೊ||

ಗೌತುಮ ಮುನಿ ಎಚ್ಚರಾದ ಬೇಗ ||
ಅನುಷ್ಟಾನಕ ವ್ಯಾಳೆ ಆತ ಅಂತ ನದಿಗೆ ಹೋಗ್ಯಾನ ಅವಾಗ||ನ||

ಸಾಧಿಸಿತು ಇಂದ್ರ ಹೋದ ವಳಗ |
ಇದ್ದಿದ್ದಿಲ್ಲ ಖಬರ ನಿದ್ರಿ ಅಹಲ್ಯಾಗ ಕದ್ದಿಲಿ ಮಗ್ಗಲದಾಗ||ಕ||

ಮಲಗಿಕೊಂಡ ನಡಿಶಾನ ಸಂಭೋಗ |

||ಚಾಲ||

ಹೊಳಿಗೆ ಹೋದಂಥಾ ಗೌತುಮ ಮುನಿನಾಥ |
ಬೆಳಗ ಆಗಿಲ್ಲ ಅಂಬುದು ಹಿಡಿದಾನ ಗುರುತಾ |
ಹೊರಳಿ ಆಶ್ರಮಕ ಬಂದಾನ ಆಗ ತುರತಾ |
ಹೇಣತಿ ಹತ್ತರ ಮಲಗಿದ ಮಾಡಿ ಮಮತಾ |
ಇಷ್ಟೊತನಕ ಭೋಗಿಸಿದೀ ನನ್ನ ಕಾಂತಾ |
ಇನ್ನೂ ಆಗಿಲ್ಲ ಏನ ಅಂತಾಳ ತೃಪ್ತಾ |
ಜ್ಞಾನ ದೃಷ್ಟಿಲಿ ತಿಳಕೊಂಡ ಇಂಗಿತಾ |
ನೀತಿ ತಪ್ಪಿ ಆತ ಅಂದ ಘಾತಾ ||

||ಏರು||

ಅಲ್ಲದ್ದ ಮಾಡಿದಿ ಕಲ್ಲಾಗಿ ಬೀಳಂತ ಶಾಪಕೊಟ್ಟ ಆಗ||ಶಾ||
ಮೈಮರತ ಇರಬಾರ‍್ದ ಜಗದೊಳಗ||೧||
ಅಪರಾಧಿ ನಾನಲ್ಲ ಕೃಪಾ ಮಾಡಿರೆಂದು ಬಿದ್ದಾಳ ಪಾದಕ್ಕ||ಬಿ||
ಬಿಕ್ಕಿ ಬಿಕ್ಕಿ ಅಳತಾಳ ಮಾಡಿ ದುಃಖ ||
ಮೋಸ ಆಯ್ತ ಶ್ಯಾಪಕೊಡಿರಿ ಇನ್ನ ಕ್ಷಮಾ ಮಾಡಬೇಕ||ಕ್ಷ||
ನಾಶ ಆದ್ನಿ ಎಚ್ಚರಿಲ್ಲದಕ ||
ಹಲವು ಪರಿಯಿಂದ ಹಂಬಲಿಸುದ ಕಂಡ ಬಂತ ಕಡೀಕ||ಕ||
ಮರಳಿ ದಯದೋರಿದ ಆಕ್ಷಣಕ ||
ಸ್ವಾಮಿ ಭಗವಂತನು ರಾಮವತಾರ ತಾಳಿ ಬರುವ ಭೂಮಂಡಲಕ||ಭೂ||
ಅವನಿಂದ ನಿನಗಾಗುದು ಮೋಕ್ಷ ||
ಹಿಂಗ ಹೇಣತಿಗ್ಹೇಳಿ ಇಂದ್ರಗಂತಾನು ಎಷ್ಟೈತವನ ಸೊಕ್ಕ||ಎ||
ವೀರ್ಯಕೋಶ ನಾಶ ಆಗಲಿ ಚೊಕ್ಕ ||
ದಶರಥನ್ಹೊಟ್ಟಲೆ ಹುಟ್ಟಿಬಂದ ಶ್ರೀ ರಾಮಚಂದ್ರ ಅಯೋಧ್ಯಕ||ರಾ||
ಭಕ್ತರನ್ನ ರಕ್ಷಣ ಮಾಡುದಕ ||
ವಿಶ್ವಾಮಿತ್ರ ಋಷಿ ಕರಕೊಂಡ ಹೊರಟನು ಯಜ್ಞದ ಕಾವಲಕ||ಯ||
ಧನುರ್ವಿದ್ಯೆ ಕಲಿಸುವ ಗೋಸ್ಕುರಕ ||
ಜನಕ ರಾಜನ ಮಗಳ ಜಾನಕಿ ಸ್ವಯಂವರ ಮಂಟಪಕ||ಸ್ವ||
ವಿದ್ಯೆ ಕಲಿತ ಹೊರಟರು ಆ ಕಾಲಕ್ಕ ||
ಎಲ್ಲಾರು ಹೋಗುವಾಗ ಕಲ್ಲಾಗಿ ಬಿದ್ದಿದ್ಲ ಅಹಲ್ಯಾ ಅಲ್ಲಿ ತನಕ||ಅ||
ಉದ್ಧಾರಾಗುವ ಕಾಲ ಬಂತ ಸನೀಕ ||

||ಚಾಲ||

ಶ್ರೀರಾಮಂದು ಬಿದ್ದಿತು ಅಲ್ಲಿ ಚರಣಾ |
ಚರಣ ಸ್ಪರ್ಶದಿಂದ ಶಾಪ ವಿಮೋಚನಾ ||
ಪತಿವ್ರತಿ ಆದಾಳೋ ಉದ್ಧರಣಾ |
ಕಲ್ಲಹೋಗಿ ಅಹಲ್ಯಾ ಉತ್ಪನ್ನಾ ||
ರಾಮಸ್ವಾಮೀದ ಹಿಡಿದಳು ಆಗ ಚರಣಾ |
ನಿನ್ನಿಂದ ಈ ಜನ್ಮ ಪಾವನಾ ||
ಹುಲಕುಂದ ದೊಡ್ಡ ಪಟ್ಟಣಾ |
ಕವಿ ಮಾಡಿ ಹೇಳ್ಯಾನ ಭೀಮಣ್ಣಾ ||

||ಏರು||
ನರ ಜಲ್ಮಕ ಬಂದ ಅರವಿಲಿ ನಡದರ ದೊರೆಯದು ಸುಖಭೋಗ||ದೊ||
ಮೈ ಮರತ ಇರಬಾರ‍್ದ ಜಗದೊಳಗ||೨||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು