ಪತಿವ್ರತೆಯಲ್ಲಿ ಸತಿ ಸಾವಿತ್ರಿಯ ಕಥಿ ಕೇಳಿರಿ ಕೂತ ಮತಿವಂತರಾ |
ಸತ್ತಗಂಡ ಸತ್ಯವಾನನ ಪ್ರಾಣ ಮತ್ತೆ ಉಳಿಸಿ ಪಡಕೊಂಡ್ಲ ಹೆಸರಾ||ಪ||

ಪೂರ್ವ ಕಾಲದಲ್ಲಿ ಮದ್ರ ದೇಶದ ದೊರಿ ಅಶ್ವಪತಿ ಎಂಬ ಮಹರಾಜರಾ |
ಸರ್ವ ಪ್ರಾಣಿಗಳಲ್ಲಿ ದಯಾವಂತನಾಗಿ ಧರ್ಮದಿ ನಡಿಸಿದ್ದ ಕಾರಭಾರಾ ||

ಮಾಳವಿ ದೇವಿ ಎಂಬ ಬಾಳ್ವೆವಂತ ಸತಿ ಹೇಳಲಾರದಷ್ಟು ಶಡಗರಾ |
ವ್ಯಾಳೆ ವ್ಯಾಳೆಕ ವ್ರತಗಳ ಮಾಡುವ ಬೋಳೆ ಸ್ವಭಾವದ ಸಂಸಾರಾ ||

ಪವಿತ್ರವಾದ ಸಾವಿತ್ರಿ ವ್ರತದ ಸೇವೆಯ ಕೈಕೊಂಡು ನಿರಂತರಾ |
ಆವಾಗ ದೇವಿಯು ಭಾವಕ ಮೆಚ್ಚಿ ಪ್ರಸನ್ನಾಗಿ ಕೊಟ್ಟೋದ್ಲವರಾ ||

ಅಶ್ವಪತಿ ಅರಸ ಮಾಳವಿ ರಾಣಿಯ ಉದರದಿ ತೊಟ್ಟಳು ಅವತಾರಾ |
ವಿಶ್ವದೊಳಗೆ ಅಷ್ಟೈಶ್ವರ್ಯದಿಂದ ಸಾವಿತ್ರಿ ಅಂತ ಇಟ್ಟಾರ ಹೆಸರಾ ||

ಸದ್ಗುರುವಿನಲ್ಲಿ ವಿದ್ಯಾಭ್ಯಾಸ ಮಾಡಿ ಬುದ್ಧಿವಂತ ಆದಳು ಪೂರಾ |
ಸದ್ಗತಿ ಹೊಂದುವ ಅಧ್ಯಾತ್ಮ ಶಾಸ್ತ್ರ ಓದಿಕೊಂಡ ವೇದಾಂತ ಸಾರಾ ||

||ಚಾಲ||

ಮದವಿಗೆ ತಕ್ಕ ಕಾಲವನ್ನು ಎದುರು ನೋಡುತ್ತಾ |
ಉದಯದ ಪೌರ್ಣಿಮಿ ಚಂದ್ರನಂತೆ ಹೊಳೆಯುತ್ತಾ |
ಹೃದಯ ವಿಶಾಲವಾಗಿ ಸೌಮ್ಯ ಸ್ವಭಾವ ಬೀರುತ್ತಾ |
ಮುದದಿಂದ ಯೌವ್ವನದ ಭಾರದಿಂದ ಬಳಕುತ್ತಾ ||

||ಚಲ್ತಿ ಚಾಲ||

ವರ ಬಂದ ಮರಳಿ ಹೋಗುತ್ತಾ |
ಅರಸರು ಧೈರ್ಯ ಗುಂದುತ್ತಾ ||
ಭಾರಿ ಐತಿ ಇಕಿಯ ಕಿಮ್ಮತ್ತಾ |
ಸರಿ ಜೋಡಿ ನಾವು ಅಲ್ಲಂತಾ ||

ಶ್ಲೋಕ

ರಥ ಹತ್ತಿ ಸ್ವತಾ ಹೋದಳು ಪತಿ ಶೋಧ ಮಾಡುತಾ |
ಅತಿ ಮಹತ್ವದ ಆಶ್ರಮಾಶ್ರಮ ಅರಣ್ಯದೊಳು ಸಂಚರಿಸುತಾ ||

||ಏರು||

ಮಾತಾ ಪಿತ್ರರ ಪ್ರೀತಿ ಪಾತ್ರನಾದ ನೀತಿವಂತ ಸಿಕ್ಕ ಋಷಿ ಕುವರಾ||೧||
ಸಾಲ್ವದೇಶ ಆಳುವ ದ್ಯುಮಸ್ತೇನರಾಯ ವೃಧ್ಯಾಪ್ಯದೊಳು ಕಣ್ ಕಾಣದಕ |
ಬಲ ಹೀನನಾಗಿ ರಾಜ್ಯ ಕಳಕೊಂಡು ಮೇಧಾರಣ್ಯದೊಳು ಇದ್ದ ಆಶ್ರಮಕ ||
ಆತನ ಹೊಟ್ಟಿಲೆ ಸತ್ಯವಾನನೆಂಬ ಸಾತ್ವಿಕ ಮಗ ಇದ್ದ ರಕ್ಷಣಕ |
ಜಾತಿ ಗೋತ್ರ ಸೂತ್ರ ಖಾತ್ರಿ ಮಾಡಿಕೊಂಡ್ಲ ಸತಿ ಸಾವಿತ್ರಿ ಹೋಗಿ ಅಲ್ಲಿ ತನಕ ||
ಆರಾಯುಷ್ಯದ ಗಂಡ ಕುರುಡ ಮಾವಯ್ಯನು ಅರಣ್ಯದೋಳು ಕಾಲ ಕಳೆಯುದಕ |
ದೊರಿ ಸಿರಿತನ ಬಿಟ್ಟು ನಾರಿನ ಸೀರಿಯ ಉಟ್ಟ ಇರಲಿಕ್ಕೆ ತಯಾರಾದ್ಲ ಆಕ್ಷಣಕ |
ಹುಟ್ಟಿದ ಮನಿಯೋಳು ಮೃಷ್ಟಾನ ಉಣ್ಣುವ ಬಿಟ್ಟ ಘಟ್ಟಿಯಾದ್ಲ ಕಷ್ಟ ಸೋಸುದಕ |
ದಿಟ್ಟತನದಿಂದ ಕಟ್ಟಡವಿಯೋಳು ಹುಟ್ಟಿದ ಗಡ್ಡೆ ಗೆಣಸು ತಿನ್ನುದಕ ||
ಅತ್ತಿ ಮಾವರ ಸೇವೆ ಅಚ್ಚು ಮೆಚ್ಚಾಗಿ ಮಾಡಿ ಹೆಚ್ಚಿನ ಪದವಿಗ ಏರುದಕ ||
ಅತಿಥಿ ಸತ್ಕಾರ ಭಕ್ತಿ ಭಾವದ ಉತ್ತಮ ಕೀರ್ತಿ ಗಳಿಸುದಕ ||
ಒಂದಾನೊಂದು ದಿನ ಉಂಡ ಅಡವಿಗ್ಹೋದ ಗಂಡ ಸೌದೆಯನ್ನು ತರವುದಕ |
ಕಂಡ ಆಗ ಹಿಂಬಾಲ ಹೋದಳು ಆಯುಷ್ಯ ಮುಗಿದಿತ್ತ ವಂದಕಾಲಕ್ಕೆ ||

||ಚಾಲ||

ಯಮದೇವ ನೇಮದಿಂದ ಫಾಸಿ ಕೊರಳಿಗ್ಹಾಕುತ್ತಾ |
ಕ್ರಮದಂತೆ ಸತ್ಯವಾನನ ಪ್ರಾಣವನ್ನು ಒಯ್ಯುತ್ತಾ ||
ಸಮಕ್ಷಮ ಸಾವಿತ್ರಿದೇವಿ ಸ್ವತಾ ಮುಂದೆ ನಿಂದ್ರುತ್ತಾ |
ನನ್ನ ಪತಿವ್ರತಾ ಧರ್ಮ ಉಳಿಸಬೇಕ್ರಿ ನೀವು ತುರ್ತಾ ||

||ಚಲ್ತಿಚಾಲ||

ಇಬ್ಬರಿಗಿ ನಡದ ಧರ್ಮವಾದಾ |
ಮಬ್ಬಿಗಿ ಯಮರಾಯ ಬಿದ್ದಾ ||
ಉಬ್ಬಿ ಏನ ಬೇಡತಿ ಬೇಡಂದಾ |
ಅಬ್ಬಬ್ಬಾಶ್ಯಾಣ್ಯಾಳಕಿ ಅಂದಾ ||

ಶ್ಲೋಕ

ಕುರುಡ ಮಾವಗ ಕಣ್ಣು ಬರಲಿ |
ಮರಳಿ ರಾಜ್ಯ ಅವಗ ದೊರೆಯಲಿ ||
ನೂರು ಮಂದಿ ನನಗೆ ಮಕ್ಕಳಾಗಲಿ |
ನಾಲ್ಕನೂರ ವರುಷ ಪತಿ ಬಾಳಲಿ ||

||ಏರು||  

ನೀತಿಲೆ ವರ ಪಡೆದ ಮುಕ್ತಿ ಹೊಂದಿದಳೆಂದು ಖ್ಯಾತಿವಂತ ಹುಲಕುಂದ  ಭೀಮೇಶ್ವರಾ  ||೨||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು