ವೀರಭದ್ರವೀರ ರಣಶೂರ ಧೀರ ಶಂಕರನ ಪುತ್ರ ಕರ್ತ
ನಿಮ್ಮ ಸ್ತುತೀ ಮತೀ ಸದ್ಗತೀ ರತಿ ನನಗೊರವಾಗಿರಿ ತುರ್ತ ||
ದಕ್ಷಬ್ರಹ್ಮ ಹಮ್ಮ ಇಟ್ಟ ಹೋಮ ನೇಮ ಸಾಂಬಾಗ ಸುಟ್ಟೆನಂದ
ಶಂಕರಾಹರ ಬಂತು ಬೆವರ ಧುಮರದಾಗ ಹುಟ್ಟಿ ಬಂದಿ ಕಂದ ||

ಕಡಕಡಿಯ ಬತ್ತಿಸ ಹತಿಯಾರ ಜೋರ ಹಂಕಾರದ ಹೆಚ್ಚಿಂದ
ತಂದಿ ಹುಕುಮಗಿಕಮ ಕೊಟ್ಟ ರಕಮ ಹಕಮ ಇಂದ, ದೈತ್ಯರಿಗ್ಹೊಡಿಯಂದ ||
ಹೊಡಹೊಡದ ಕಡದ ಹೋದು ಮಡದ ನಡದ ಹೋಗಿ ದಕ್ಷನ ತಲಿ ಕೊಯ್ದ
ಪಾರ್ವತಿ ರತಿ ಶಿವನ ಸತೀ ಗತಿ ಹಾರಿ ಬೆಂಕ್ಯಾಗ ಆಕಿ ಬಿದ್ದ ||

ಶಿವಧ್ಯಾನ ಮಾನಾ ಕಾಯೊ ನೀನ ನನ್ನ ಹೀಂಗಂದಾಳ ಪಾರ್ವತಾ
ನಿಮ್ಮ ಸ್ತುತೀ ಮತೀ ಸದ್ಗತೀ ರತೀ ನನಗೊರವಾಗಿರಿ ತುರ್ತ ||೧ನೇ ಚೌಕ||

ಶಿವಶಬ್ದ ಲುಬ್ದ ಕೇಳಿದ್ದ ಎದ್ದ ಹೋಗಿ ಬೇಕೆಂದು ವೀರ್ಯ ತೆಗೆದ
ಶಕ್ತಿ ಸ್ವರೂಪ ಗಿರೂಪ ಏನ ತಾರೀಪ ಬೇರೂಪ ಆಯ್ತ ಕಾಳಮ್ಮ ಆಗೆಂದ ||
ದೈತ್ಯರಿಗಿ ಎರಗಿ ಹೊಡೆದ ತಿರಗಿ ಕರಗಿ ಮರಮರಗಿ ಸತ್ತು ಮಡಿದ
ವೀರಪುಂಡ ದಕ್ಷನ ದಂಡ ರುಂಡ ಕುರಿ ಚಂದ ತಾನಿಟ್ಟ ಜೀವ ಪಡೆದ ||

ನಿಮ್ಮ ಸೊಲ್ಲ ಗುಲ್ಲ ಕೇಳಿ ಝಲ್ಲ ಎಲ್ಲ ಕಲ್ಲೊಡೆದು ಆಯ್ತ ತುಣುಕ
ಖಡಖಡಲ ಧಡಲ ಅಂಜಿ ಒಡಲ ಗಿಡಲ ಕೋಟಿ ಸಿಡಲ ಬಿದ್ದಂಗ ನೆಲಕ ||
ನಿಮ್ಮ ಜರ್ಬ ಅರ್ಬ ಬಿತ್ತ ದಾಬ ಗಾಬ ಇಂದ್ರ ಸಭಾ ಆಯ್ತ ಮೂಕ
ಗಂಧರ್ವ ಗಾಯಕರ ಮುನಿಯ ಶೂರ ಸರುವರಿಗಿ ಬಿತ್ತ ಧಾಕ ||

ಆ ಬ್ರಹ್ಮ ವಿಷ್ಣು ಇಲ್ಲ ಕಮ್ಮ ದಮ್ಮ ಬೀಳಲಿಲ್ಲ ಅವರ ಜೀವಕ
ಬಿಟ್ಟ ಸ್ವರ್ಗ ಗಿರ್ಗ ಆಗಿ ಬೆರ್ಗಹೊರಗ ಅಂಜಿ ಹತ್ತ್ಯಾರ ಓಡುದಕ ||
ಕೈಕಾಲ ಗೋಲ ಬಾಳಿ ಪೀಲ ಡೌಲ ನಿಮ್ಮ ಚಂದ್ರನ್ಹಂಗ ಸುರತ |
ನಿಮ್ಮ ಸ್ತುತೀ ಮತೀ ಸದ್ಗತೀ ರತೀ ನನಗೊರವಾಗಿರಿ ತುರ್ತ||೨ನೇ ಚೌಕ||

ಪೋಶ್ಯಾಕ ಲಾಕ ಏನ ಜೋಕ ಠೀಕ ನೀವು ಕಾಶಿ ಉಡುದು ಅರಿದ
ಅಂಗಿ ಚೀಟ ಗೀಟ ಮ್ಯಾಲ ಕೋಟ ಘಾಟಿ ಮೈಯಾಗ ನೀವು ತೊಡುದ ||
ನೀವು ವರಿಷ್ಠ ದೃಷ್ಟ ಭಾಳ ಶ್ರೇಷ್ಠ ಕಿರೀಟ ನಿಮ್ಮ ತಲಿಯ ಮ್ಯಾಲ ಮೆರುದ
ನಾಗಪುರದ ಜರದ ಧೋತರದ ಹೊರುದ ನಿಮ್ಮ ಪೋಷಾಕ ತರತರದ ||
ನಿಮ್ಮ ರಟ್ಟಿ ಹೊಟ್ಟಿ ಮಾಡಿ ಕುಟ್ಟಿ ಗಟ್ಟಿ ನೀವು ರಣದ ಒಳಗ ಮರದ
ಮೈ ಕಟ್ಟಿ ಗಿಟ್ಟ ಭಾಳ ದಿಟ್ಟ ಸಿಟ್ಟ ನಿಮ್ಮ ಉಗ್ರ ಎಷ್ಟ ಉರುದ ||
ನಿಮ್ಮ ಹಸ್ತ ಶಿಸ್ತ ಇಟ್ಟ ವಸ್ತ ಮಸ್ತ ರುಳಿ ಕೈಯಾಗ ಬಂಗಾರದ
ಕಪ್ಪಗೊರಳ ಸರಳ ಕೈಬೆರಳ ಹರಳ ಮ್ಯಾಲ ಹೊಳೆವುದ ಕುಂದಲದ ||
ಉರಿಗಣ್ಣ ಕಣ್ಣ ಮೈ ಬಣ್ಣ ಸಣ್ಣ ತುಟಿ ಕ್ವಾರಿ ಮೀಸಿ ಕೊರದ
ಮೂಗ ತಿಳಿಪ ಹೊಳಪ ನಿಮ್ಮ ರೂಪ ದೀಪ ಮುಂದ ಚಂದ್ರ ಜ್ಯೋತಿ ಉರುದ ||

ಕೈಕಾಲ ಸೋಲ ಬಾಳಿ ಪೀಲ ಡೌಲ ನಿಮ್ಮ ಚಂದ್ರನಂತ ಸುರತ
ನಿಮ್ಮ ಸ್ತುತಿ ಮತೀ ಸದ್ಗತಿ ರತೀ ನನಗೊರವಾಗಿರಿ ತುರ್ತ||೩ನೇ ಚೌಕ||

ವರಸೀಗಿ ಒಮ್ಮ ಇಲ್ಲ ಕಮ್ಮ ನೇಮ ನಿಮ್ಮ ಬಾದಮ್ಯಾಗ ಆರತಿ
ಹಲಗೀಯ ಮೆರುಣಗಿ ಮೆರೆಸಿ ಬಾರಿಸಿ ಮುಂದ ವಾದ್ಯಕಿಲ್ಲ ಅಳತಿ ||
ಪರವಂತಗಿಂತ ಆಡಿ ನಿಂತ ಎಂಥ ನಿಮ್ಮ ಸತ್ಯದಲ್ಲಿ ಸರತಿ
ನಿಮ್ಮ ಕಡಗ ಗಿಡಗ ನೋಡಿ ನಡಗ ದಿಡಗ ನಾಲಗ್ಯಾಗ ಶಸ್ತ್ರವೊತ್ತಿ ||
ನಿಮ್ಮ ಅಗ್ಗಿ ಲಗ್ಗಿ ಹೂ ಮಗ್ಗಿ ಜಗ್ಗಿ ಒಳಗ ಒಗೆದು ಮಾಡಿರಿ ಶಾಂತಿ
ಉರಿಗಿಚ್ಚ ಕಿಚ್ಚ ನೀವು ಹೆಚ್ಚ ಮುಚ್ಚ ತುಳ ತುಳದು ನೋಡುದು ಅಳತಿ ||
ಅಕ್ಕರತಿ ಸರತಿಗಿಲ್ಲ ಕೊರತಿ ಅರತಿಲಿಂದ ಮಾಡುವೆ ಮಂಗಳಾರತಿ
ಹರದಾಸ ವೇಸ ನಿಮ್ಮ ಕೂಸ ಧ್ಯಾಸ ನನ್ನ ಮ್ಯಾಲ ಇರಲಿ ಭಕ್ತಿ ||
ಸಂಗಪ್ಪ ಸರಸಿ ಹೊಡೆದ ಬರ್ಚಿ ತರ್ಚಿ ವೈರೀಗಿ ಬೆಂಕಿ ಹತ್ತಿ
ಶಿಶ್ಯಾ ಖಾಜ ರಾಜ ಕವಿ ಸಾಜ ಮೋಜ ಹಾಡುಣಕಿ ಸಭಾಕ ಭರ್ತಿ ||
ಹಲಸಂಗಿ ಊರ ಗುಲಜ್ಯಾರಶ್ಯಾರ ಬಾಜಾರ ಪ್ಯಾಟ ಶಿಸ್ತ
ನಿಮ್ಮ ಸ್ತುತೀ ಮತೀ ಸದ್ಗತೀ ರತೀ ನನಗೊರವಾಗಿರಿ ತುರ್ತ||೫ನೇ ಚೌಕ||

 ರಚನೆ : ಖಾಜಾಭಾಯಿ
ಕೃತಿ : ಜೀವನ ಸಂಗೀತ