ಬಾರ ಬಾರ ಎಲ್ಲಮ್ಮಾ ||ನೀ|| ಪರಶುರಾಮನ ತಾಯಮ್ಮಾ||ಪ||
ರೇಣುಕ ರಾಜನ ಮಗಳಮ್ಮಾ ||ನೀ|| ರೇಣುಕಿ ಅನಿಸಿಕೊಂಡೆಮ್ಮಾ||೧||
ಏಳಕೊಳದಾಗಿಳದೆಮ್ಮಾ ||ನೀ|| ಇಳೆಯೊಳಗೆಲ್ಲಾ ಬೆಳೆದೆಮ್ಮಾ |
ಕರಿಯ ಮಾರಿಯ ಎಲ್ಲಮ್ಮಾ ||ನಿನ್ನ|| ಸರಿಯ ಯಾರು ಇಲ್ಲಮ್ಮಾ||೨||
ಜಯ ಜಯ ಜಯ ಜಯ ಜಗದಮ್ಮಾ ||ನಿನ್ನ|| ಕೈಯಾಗ ಭುವರ‍್ಲೋಕಮ್ಮಾ
ಮಾಯ ಕಾರ್ತಿ ಹೌದಮ್ಮಾ ||ನಿನ್ನ|| ಮಹಿಮೆಯ ಬಲ್ಲವರಾರಮ್ಮಾ||೩||

ಪದ್ಯ

ಪುರುಷರ ತರಿಸಿದಿ | ಸೀರಿ ಉಡಸದಿ |
ಕುಬಸಾ ತೊಡಿಸಿದಿ | ಕೊಡಾ ಹೊರಿಸಿದ |
ಕವಡಿ ಹಾಕಿಸಿದಿ | ಚವಡಿಕಿ ತೊಡಿಸಿದಿ |
ಹಡ್ಡಲಗಿ ಹಿಡಸಿದಿ | ಬಂಡಾರ ಬಡಿಸಿದಿ |
ಕಂಡಾಂಗ ಕುಣಿಸಿದಿ || ಬಾರ ಬಾರ ಎಲ್ಲಮ್ಮಾ||೪||
ಹಿರೀ ಗುಡ್ಡದ ಎಲ್ಲಮ್ಮಾ ನಿನ್ನ ಅರಿಯದವರು ಕಡಿಮೆಮ್ಮಾ |
ಗಂಡ ಹೆಂಡರ ಬಿಡಿಸಿದೆಮ್ಮಾ ಬಂಡಾರ ಚೀಲ ಕೊಡಿಸಿದೆಮ್ಮಾ||೫||
ಬಾಗಿಲ ಭರಮನು ಉತ್ತಮಾ ||ಮತ್ತ|| ಜೋಗುಳ ಬಾಂವಿಯ ಸತ್ಯಮಾ
ಯಣಿ ಗೊಂಡದ ನೀರ ಜಳಕಮ್ಮಾ ನೀ ಎರಕೊಂಡ ತೀರ್ಥ ಹೌದಮ್ಮಾ||೬||

ಪದ್ಯ

ಹುಡಿಗೇರನ ತರಿಸಿದಿ | ಉಡಿಗಿ ಉಡಿಸಿದಿ |
ಜಡಿ ಬಿಡಿಸಿದಿ | ಗೆಜ್ಜಿ ಕಟ್ಟಿಸಿದಿ |
ಹೆಜ್ಜ ಚೆಲ್ಲಿಸಿದಿ | ಸೂಳೇರನ ಕರಿಸಿದಿ |
ಬಳೆ ಒಡಸಿದಿ | ಹೊರಳಿ ಇಡಸಿದಿ |
ಭಿಕ್ಷಾ ಬೇಡಿಸಿದಿ | ಮೋಜ ನೋಡಿದಿ || ಬಾರ ಬಾರ ಎಲ್ಲಮ್ಮಾ||೭||
ಯೋಗಿಗಳಿಂದ ನಿನ್ನ ಜಲ್ಮಮ್ಮಾ ||ನೀ|| ಯೋಗಿನಿಯಾಗಿ ಮೆರೆದೆಮ್ಮಾ
ಯಕ್ಕಯ್ಯ ಜೋಗಯ್ಯ ಅಂದೆಮ್ಮಾ ಅವರ ಚೊಕ್ಕ ನಾಮ ಉಳಿಸಿದೆಮ್ಮಾ||೮||
ಯುಗ ಯುಗದೊಳು ಅಮರಾದೆಮ್ಮಾ ||ಕಲಿ|| ಯುಗದೋಳು ಕೀರ್ತಿ ಬಂತಮ್ಮಾ |
ಅಗಣಿತ ಐಶ್ವರ್ಯದ ಅಮ್ಮಮ್ಮಾ ||ನಿನ್ನ|| ಪೊಗಳಾಂವ ಹುಲಕುಂದ ಭೀಮಾ||೯||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು