ನಾಗಭೂಷಣಗ ಪಾರ್ವತಿದೇವಿ
ಪ್ರಶ್ನೆ ಮಾಡತಾಳ ಪ್ರೀತಿಂದಾ
ರಾಮ ರಾಮ ಅನ್ನು ಮೂಲ ಅಕ್ಷರಾ
ಹ್ಯಾಂಗ ಹುಟ್ಟಿತ ಹೇಳರಿ ಒಡದಾ||ಪಲ್ಲ||

ಹರುಷದಿಂದ ಹರಾ ಅಂತಾನ
ಅರ್ಧಾಂಗಿ ಪ್ರಶ್ನೆ ಮಾಡಿದಿ ತಗದಾ||ಅ.ಪಲ್ಲ||

ಚಿದ್ರ ಕೇಳ ಶಾಸ್ತ್ರರ್ಥಜ್ಞಾನಿಗಳು
ಮನಕ ಆಗುವಂಗ ಆನಂದಾ
ಸಪ್ತ ಋಷಿಗಳು ಮೊದಲಿಗೆ ಆಧಾರಾ
ಕಮಲೋದ್ಭವನಿಂದಾ ಅವನಿಂದಾ
ಕಮಲದಲ್ಲಿ ಕಮಲೋದ್ಭವ ಹುಟ್ಯಾನ
ಸೃಷ್ಟಿಯ ಕಾರಕ ಅನಸಿದಾನ
ಸಪ್ತ ಋಷಿಗಳಲ್ಲಿ ಶ್ರೇಷ್ಠ ವ್ಯಾಸ
ಶತಕೋಟಿ ರಾಮಾಯಣ ನಿವಡಿಸಿದಾ
ನ್ಯಾಯ ಬಿತ್ತ ಮೂರು ಲೋಕ ಆವಾಗ
ಕೇಳ ಎನ್ನ ಮುಂದಾ ತನ್ನ ಮುಂದಾ
ಮೂಢ ಶಾಯಿರಾ ಈ ಹಾಡಿನ ಚಿದ್ರಾ
ನೋಡಿ ತಿಳಿ ಮನಸಿಗೆ ತಂದಾ
ವೇದಶಾಸ್ತ್ರ ಪುರಾಣಗಳ ಗಂಧಾ
ಲಾವಣಿಯಲಿ ಹೇಳ ನೀ ಚಂದಾ|| ೧ನೇ ಚೌಕ ||

ಕೇಳ ನನಗ ನಿನಗ ಅಂತ ನ್ಯಾಯ ಬಿದ್ದೀತ
ಸ್ವರ್ಗಮೃತ್ಯುಪಾತಾಳದ ಒಳಗ
ಸಾಂಬ ಕುಂತ ಆ ನ್ಯಾಯ ಹರದ ಮೂರುಲೋಕಕ
ಮೂರುಭಾಗಮಾಡಿ ಇಟ್ಟ ಮೂರು ಭಾಗ
ಬಾಕಿ ಒಂದ ಕೋಟಿಗ್ರಂಥ ಉಳಿದೀತ
ಪಾಲಾಮಾಡಿದಾನ ಸವನಾಂಗ ಸವನಾಂಗ
ಒಂದ ಸಹಸ್ರ ಉಳಿದೀತ ಸಾಂಬ
ಮೂರು ಭಾಗಮಾಡಿದ ಕಸರಿಲ್ಲಧಾಂಗ
ನೂರಗ್ರಂಥದಲ್ಲಿ ಮೂರುಪಾಲಾಮಾಡಿ
ಬ್ಯಾರೆ ಬ್ಯಾರೆ ಕೊಟ್ಟಾನ ತಿಳಿ ಹಿಂಗ
ಮೂವತ್ತು ಮೂರು ಮೂರು ಒಂದೊಂದು
ಲೆಕ್ಕಾ ಮಾಡಿಕೊಳ್ಳೊ ಹುಚ್ಚ ಮಂಗ
ಶಿಲ್ಕ ಉಳದೀತ ಗ್ರಂಥ ಒಂದಾ
ಇನ್ನ ಮುಂದ ಕೇಳೋ ಕಿವಿ ತೆರದಾ||೨ನೆಯ ಚೌಕ ||

ಒಂದು ಗ್ರಂಥದಲ್ಲಿ ನೂರ ಅಧ್ಯಾಯ ಅಂವ
ಮೂರಲೆ ಭಾಗಿಸಿ ಇಟ್ಟಾನು
ಒಂದು ಅಧ್ಯಾಯಕ ನೂರು ಶ್ಲೋಕದಲ್ಲಿ
ತೆತ್ತೀಸ ತೆತ್ತೀಸ ಕೊಟ್ಟಾನು
ಶಿಲಕ ಒಂದ ಉಳದೀತ ಶ್ಲೋಕ ನಾಕು
ಚರಣಕ ಮೂರು ಪಾಲನ್ನು
ಒಂದು ಚರಣದಲ್ಲಿ ಎಂಟು ಅಕ್ಷರಾ
ಎರಡರಂತೆ ಹಂಚಿ ಕೊಟ್ಟಾನು
ಬಾಕಿ ಎರಡು ರಾಮ ಅನ್ನು ಅಕ್ಷರಾ
ಸಾಂಬ ಹೃದಯದಲ್ಲಿಟಕೊಂಡಾನು
ರಾಮ ರಾಮ ಅನ್ನುವ ಹಾಡಿನ ಅವತಾರ
ಕೇಳಿ ಹೋಗ ನೀನು ಇಲ್ಲಿಂದ
ಕುದರಿ ಮುಂದ ಕತ್ತಿ ಕುಣದಂಗ
ನನ್ನ ಮುಂದ ಎಷ್ಟ ಹೇಳತಿ ಜಿಗಜಿಗದಾ|| ೩ನೆಯ ಚೌಕ ||

ಎತ್ತರೆ ಒದರಾಡಿ ಹೊತ್ತ ಗಳಿಯಬ್ಯಾಡ
ಎತ್ತಾರಾ ಕಳಿಸೇನೋ ಬಿರಿಗ್ಯಾರೇ
ಬೀಡ ಹಾಡಾ ಕಲ್ತು ಕ್ವಾಡಗನಂಗ ಓಡಿ ಬಂದು
ನಮ್ಮ ಕೈಯಾಗ ಸಿಕ್ಕಿ ಕೈಯಾಗ ಸಿಕ್ಕಿ
ತೋಡಿಗೆ ತಡಿ ತಡಾ ಇಲ್ಲದ
ಝಾಡಿಸಿ ತಗೋ ನಿನ್ನ ಹಳಿ ಬಾಕಿ
ಬಾಳೆ ಬಲ್ಲವರಂಗ ಮುಂಚೆ ಬಡಿವಾರ ಮಾಡಿ
ಈಗ ಬಾಯಿ ತೆರದ ಕೂತಿ ಉಸರ‍್ಹಾಕಿ
ಹುಕ್ಕೇರಿ ನಾಡ ಬಿಟ್ಟ ಹುರಿಕೋತ ಕಲಿಗ್ಯಾವರಾ
ತರಕೋತ ಬಂದ ಕೆತ್ತ್ ಕೋತ ರೆಕ್ಕಿ
ಶ್ರೀ ಸಿದ್ದೇಶ್ವರ ಸದ್ಗುರುವಿನ ದಯದಿಂದ
ಯಾರ‍್ಯಾರದಿಲ್ಲ ನಮಗ ಅಂಜಿಕೆ
ಕವಿ ಗೋಪಾಳ ಕಲಗಿ ಹಾಡವರ
ತೆಲಿಮ್ಯಾಗ ಅಗಳಿ ಜಡದಾ ಜಡದಾ|| ೪ನೆಯ ಚೌಕ ||

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು