||ಪಲ್ಲ||

ಅಯೋಧ್ಯಾಪುರದಲ್ಲಿ ಅರಸಕಿ ಮಾಡತಿದ್ದ ದಾಶರಥಿ ರಾಮಚಂದ್ರ ಸ್ವತಾ |
ಅವರ ಗುರು ವನಿಷ್ಠ ಅರುಂಧತಿ ಕಾಂತಾ |
ಸಭಾ ಕೂಡಿತ್ತ ಅಷ್ಟಪ್ರಧಾನ ಮಂಡಳೀ ಸಹಿತಾ ||
ಮಾತಕೇಳಿ ಅಗಸಂದ ರಾಮಗಾತ ಎದಿಗಿ ಬಾಣ ಬಡದಾಂಗ ನಿ ರತಾ |
ಮುಂದ ಕೇಳ್ರಿ ಕಥಾ ||

ಚೌಕ – ೧
||ನುಡಿ||

ಕರದ ಅನುಜನ ಹೇಳಿದ ರಾಮಚಂದ್ರ ಕೇಳತಮ್ಮಾ ಸೌಮಿತ್ರ ನೀನು |
ನಿನಗೊಂದು ಮಾತ ನಾ ಹೇಳುವೆನು |
ನಮ್ಮ ವಂಶಕೆ ಬಂದದ ಇಂದ ಕುಂದವನು ||
ಅಡವಿಗೆ ಒಯ್ದು ಯಾರಿಗೂ ತಿಳಿಯದಂತೆ ಕೊಂದಬಾರೊ ಮುಂಚೆ ಸೀತೆಯನು
ಯಾಕೆ ಚಿಂತೆಯನು ||೧||

ಕೇಳಿ ಲಕ್ಷ್ಮಣ ಕಣ್ಣೀರ ಸುರಿಸಿ ಮಾಡತಾನ ಅತಿ ಶೋಕವನು |
ನೆಲಾ ಬಗಟಿ ಕಚ್ಚತಾನ ಮಣ್ಣವನ |
ಅಣ್ಣಗ ಅಂತಾನ ಬಡದದೇನೊ ಭೂತವನು ||
ತಿರುಗಿ ರಾಮಚಂದ್ರ ಹೇಳಿದ ಆತಗ ಸೀತಾನ ಇಂದ ಕೊಲ್ಲದಿದ್ರ ನೀನು
ಪ್ರಾಣ ಕೊಡುತಿಹೇನು ||೨||

ನನ್ನ ಹತ್ಯಾದೋಷ ನಿನಗ ತಟ್ಟೀತು ಹೋಗಲಾರದ ಕರ್ಮವನು |
ಅಘೋರ ನರಕ ನಿನಗ ತಪ್ಪೀತೇನು |
ಕುಂದ ಬಂದ ಜೀವಿಸಿ ಫಲವೇನು ||
ಕರುಣ ಇಲ್ಲದ ಮಾತ ಕೇಳಿ ಲಕ್ಷ್ಮಣಾ ಸಿದ್ಧಮಾಡಿ ಆಗ ರಥವನ್ನು |
ಬಿಟ್ಟ ಬಂದಾನು ||೩||

||ಚಾಲ||

ಸೀತಾ ಇದ್ದಾಳ ಆಗ ಬಸವಂತಿ-ಅಯ್ಯೋದೈವಗತಿ-ಸಂಚಿತ ಕರ್ಮಾ |
ಏನ ಲಿಖಿತ ಬರೆದ ತಾನೆ ಬ್ರಹ್ಮಾ||೧||

ಖರೆ ಇದ್ದಾಳ ಸೀತಾ ರಾಜ ಪಿಂಡ-ಆದಾಳ ಈಗ ಭಂಡ-ಕಾಲಚಕ್ರ ಮಹಿಮಾ
ಹತ್ತಲಾರದ ನೆಲಿ ಬಹಳ ಗುಮ್ಮಾ||೨||

ಬಿಟ್ಟಿ ಹೋಗೂ ಲಕ್ಷ್ಮಣನ ನೋಡಿ-ಕರಳ ಅಂದ್ರ ಖೋಡಿ-ಅಂತಾಳ ಯಾತರ ಜಲ್ಮಾ|
ಹೊರಳಿ ಬಿದ್ದಾಳ ಭೂಮಿಗಿ ಬೇಫಾಮಾ||೩||

||ಚಾಲ||

ತಂಪಗಾಳಿಗಿ ಕೂತಾಳ ಎಚ್ಚತ್ತಾ |
ಪಾಪದ ರಾಶಿ ಹೆಣ್ಣಿಂದು ಜಲ್ಮವ್ಯರ್ಥಾ||೧||

ಅನಾಥ ಬಾಲಿದ ದುಃಖ ವಿಪರೀತಾ |
ಹಾ ರಾಮಾ ಬಿಟ್ಟೆನೊ ನನ್ನ ಮರತಾ||೨||

ಪಶುಪಕ್ಷಿ ಕೂಡ್ಯಾವು ಸುತ್ತಮುತ್ತಾ |
ನಿರಾಹಾರ ನಿಂತಾವು ಮರುಗುತಾ||೩||

||ಕೂ.ಪ||

ಅಕಸ್ಮಾತವಾಗಿ ಬಂದ ವಾಲ್ಮೀಕಿ ಕೇಳತಾನ ಸರ್ವವೃತ್ತಾಂತಾ |
ಯತಿ ಧರ್ಮದಂತೆ ಕರುಳ ಕರಗುತಾ |
ಆಶ್ರಮಕ ಒಯ್ದಾನ ಅಂದಿನ ಹೊತ್ತಾ|| ಮಾತಕೇಳಿ||೧||  ||ಚೌಕ||

ಚೌಕ-೨
||ನುಡಿ||

ಪರ್ಣಶಾಲೆಯೊಂದು ನಿರ್ಮಿಸಿ ವಾಲ್ಮೀಕಿ ಪರಭಾರೆ ಇರಸಿದ ಅಲ್ಲಿ ||
ಮಗಳಂತ ತಿಳದ ಭಾಗ್ಯ ಮನದಲ್ಲಿ |
ಮತ್ತ ಧೈರ್ಯ ಹೇಳಾಂವ ಮ್ಯಾಲಿಂದ ಮ್ಯಾಲಿ ||
ಅವಳೀ ಮಕ್ಕಳನ್ನ ಹಡೆಯುವೆ ಮಗಳೆ ನನ್ನ ಮಾತ ಆಗದ ಖಾಲಿ |
ಆಶೀರ್ವದಿಸುತಲಿ||೧||

ವಾಲ್ಮೀಕಿ ವಚನದಂತೆ ಹಡೆದಾಳ ಸೀತಾ ನವಮಾಸ ಆಗ ಪೂರ್ಣ ತುಂಬುತಲಿ
ಶುಭತಿಥಿವಾರ ಶುಭ ಲಗ್ನದಲ್ಲಿ |
ಋಷಿಜನ ಪತ್ನಿಯರ ಸಮೂಹದಲ್ಲಿ ||
ಸೂರ್ಯ ಚಂದ್ರಕೂಡಿ ಹುಟ್ಟಿ ಬಂದಾರ ಏನೋ ಅನ್ನುವಂತೆ ಭೂಮೀ ಮ್ಯಾಲಿ |
ಏಕಕಾಲದಲಿ||೨||

ಶುಭ ಮುಹೂರ್ತ ನೋಡಿ ತೊಟ್ಟಲಾಕಟ್ಟಿ ವಾಲ್ಮೀಕಿ ಜೋಗುಳ ಹಾಡುತಲಿ |
ಕುಶಲವರೆಂಬ ನಾಮಕರಣ ಮಾಡುತಲಿ |
ಋಷಿ ಪತ್ನಿಯರು ಆರತಿ ಬೆಳಗುತಲಿ ||
ಮಗಳ ಮಕ್ಕಳಂತ ಎತ್ತಿ ಮುದ್ದಾಡಿ ಅವರ ಬಾಲಲೀಲಾ ನೋಡುತಲಿ |
ಕಾಲಕಳಿಯುತಲಿ||೩||

||ಚಾಲ||

ಅಕ್ಷರಜ್ಞಾನವನು ಮಾಡಿಸಿ-ಉಪನಯನ ತೀರಿಸಿ-ಇಚ್ಛಾ ಭೋಜನಾ |
ಬ್ರಾಹ್ಮಣರಿಗೆ ಮಸ್ತ ದಕ್ಷಿಣಾ||೧||
ರಾಜನೀತಿ ಧರ್ಮವನು ತಿಳಿಸಿ-ತಾಳ ಮೇಳ ಕಲಿಸಿ-ಸಾಮವೇದಗಾನಾ |
ವೀಣಾ ಹಿಡಿದ ಹಾಡುರು ರಾಮಾಯಣಾ||೨||
ಧನುರ್ವಿದ್ಯಾ ಕಲಿಸಿದಾನ ಜೋರ-ಒಳಗಿಂದ ಎಲ್ಲಾ ಸಾರ-ಉಳಿಯ
ಲಿಲ್ಲ ಏನೇನಾ |
ಸಕಲ ವಿದ್ಯಾ ಪಾರಂಗತ ಪೂರ್ಣಾ||೩||

||ಚಾಲ-೨||

ಕುಶಲವರ ವಾಲ್ಮೀಕನ ದಯದಿಂದಾ |
ಸುಖದಿಂದ ಇದ್ದಾರು ಉಂಡತಿಂದಾ||೧||
ಯಜ್ಞ ಹೂಡಿ ರಾಮಚಂದ್ರ ಅಶ್ವಮೇಧಾ |
ಅಯೋಧ್ಯಾದಿಂದ ಅಶ್ವ ಬಿಟ್ಟಿದ್ದಾ||೨||
ಲವ ತಾನು ದೂರಿಂದ ನೋಡಿದ್ದಾ||೩||

||ಕೂ.ಪ.||

ಬಂದ ಅಶ್ವ ಇದು ಯಾರದೇನೊ ಅಂತ ಅಡ್ಡಗಟ್ಟಿ ತರುಬಿ ನಿಂತಾ |
ಪಣಿ ಫಲಕ ಓದಿ ಆದಾನ ತಪ್ತಾ |
ಇಲ್ಲಿ ಬರಲಿ ಅಂದ ಕೌಸಲ್ಯಾಸುತ || ಮಾತ ಕೇಳಿ ||೨||  ||ಚೌಕ||

ಚೌಕ – ೩
||ನುಡಿ||

ಎಂಥಾ ರಾಮ ಅವನ ನೋಡಬೇಕಂತ ಅಂಬುದು ಮನಸಿದ ಉಮೇದ್ವಾರಿ |
ವೀರ ಬಾಹುತಟ್ಟತಾನ ಬೆಂಕಿಕಾರಿ |
ಪಂಥಮಾಡಿ ಕಟ್ಟತಾನ ಆ ಕುದುರಿ |
ಯಾರ ಬಂದ ನನಗ ಏನ ಮಾಡವರಂತ ಬಾಣಿಂದ ಮಾಡಿದ ಝಣತ್ಕಾರಿ |
ಒಳೆ ಶೋಧ ಏರಿ||೧||

ಇಷ್ಟ ಅಂದ ಅವ ನಿಂದ್ರುದರ ಒಳಗ ವೀರ ಭಟರ ಬಂದಾರ ಸಾರಿ |
ಅವರೊಳು ಶತ್ರುಘ್ನ ಮಹಾಪುಂಡ ಅವರ ದೊರಿ |
ಲವ ಹೋಗಲಿಲ್ಲ ಅವರಿಗೆ ಹೆದರಿ ||
ಬಂದ ದಂಡ ಎಲ್ಲಾ ಹಿಂದಕ ಬಡಸಿದಾನ ಬಾಣಿನಿಂದ ಮಾಡಿದ ಶರಸೂರಿ ||
ಸಿಂಹಿನ ಮರಿ||೨||

ರಥಾರೂಢನಾಗಿ ಬಂದ ಶತ್ರುಘ್ನ ಬಾಣ ಒಗದ ಒಳೆ ಹೂಡಿಗುರಿ |
ಲವ ಬಿದ್ದ ಧರಣಿಗೆ ಖಬರ ಹಾರಿ |
ಮೋಡ ಮುಸುಕಿ ಪ್ರಕಾಶ ಆದಾಂಗ ಆತ ಮಾರಿ |
ಕಟ್ಟಿದ ಕುದುರಿ ಅವರು ಬಿಚಗೊಂಡ ಹೋದಾರು ಲವನ ಸಹಿತ ರಥದಲಿ ಹೇರಿ |
ಇಲ್ಲ ಅದೇನು ಬಿರಿ||೩||

||ಚಾಲ||

ಸೀತಾಗ ಮುಟ್ಟಿತ ಈ ಸುದ್ದಿ ಬಂದಾಳ ಆಗ ಜಲ್ದಿ-ಬಾಯಿಬಿಡವೂತಾ |
ಹೊರಳಿ ಮರಳಿ ಧರಣಿಗೆ ಬೀಳೂತಾ||೧||

ಪ್ರೀತಿ ಮಗನ ಗುಣಗಳ ನೆನಸಿ-ಹಲುಬಿ ಹಂಬಲಿಸಿ-ಮಾಡ್ಯಾಳ ಆಕ್ರಾಂತಾ |
ಆಯಿತೇನೊ ಮಗನೆ ನಿನ್ನ ಘಾತಾ||೨||

ಅಷ್ಟರೊಳಗ ಕುಶ ಅಲ್ಲಿಗೆ ಬಂದ-ನಿಂತ ತಾಯಿ ಮುಂದ-ಕೇಳಿದ ವೃತ್ತಾಂತಾ |
ಚಿಂತಿಯಾತಕ ತಾಯಿ ಇದೇನಲ್ಲ ದೊಡ್ಡಮಾತಾ||೩||

||ಚಾಲ-೨||

ಸೂರಿ ಮಾಡಿ ಯಮನ ಪಟ್ಟಣಾ |
ತಿರುಗಿ ತರುವೆ ತಾಯಿ ತಮ್ಮನಾ||೧||

ಹರಹರ ಬ್ರಹ್ಮಾದಿ ಲೋಕವನ್ನಾ |
ಸುಟ್ಟ ಬಿಡುವೆ ಅದಕ ಬ್ಯಾಡಕ್ಷಣಾ||೨||

ಉಳದ ಮಂದಿದ ನನಗ ಪಾಡ ಏನಾ |
ಬೇಗ ತಾರವ್ವಾ ಬತ್ತಳಕಿ ಬಿಲ್ಲ ಬಾಣಾ||೩||

||ಕೂ.ಪ.||

ಬಿಲ್ಲ-ಬಾಣಗಳ ಸಾಕಷ್ಟ ತಕ್ಕೊಂಡ ಹೊರಟಾನ ತಮ್ಮನ ಹುಡಕೂತಾ |
ಮುಂಗಾರಿ ಸಿಡ್ಲಿನಂಗ ಗುಡಗುತಾ |
ಅವರ ಇದ್ದಲ್ಲಿ ಬಂದಾನ ಆಗ ಜಿಕ್ಕೋತಾ || ಮಾತಕೇಳಿ||೩||  ||ಚೌಕ||

ಚೌಕ – ೪
||ನುಡಿ||

ತಂದಿ ಮಕ್ಕಳಂಬು ಗುರುತ ಹತ್ತದೆ ಸಿದ್ಧಾಗಿ ನಿಂತಾರ ಸಂಗ್ರಾಮಕ |
ಭರತ ಶತ್ರುಘ್ನ ಹತ್ತಲಿಲ್ಲ ದರಕಾರಕ
ಉರಳಿ ಬಿದ್ದಾನ ಸೌಮಿತ್ರ ರಥದಿಂದ ನೆಲಕ ||
ವೀರಾದಿ ವೀರರೆಲ್ಲಾ ಬಿದ್ದಾರ ಧರಣಿಗ ಘೋಳಸ್ಯಾಡಿತ ಕೈಲಾಸ ಬೀಳುದಕ |
ಅವನ ದರ್ಪಕ||೧||

ಬಂದ ರಾಮಚಂದ್ರ ನೋಡಿ ದುರದಶಾ ಅಯ್ಯೋ ಅಂದ ಮಾಡತಾನ ಶೋಕ |
ಇದೇನ ಆತ ಅಂದ ಮಹಾ ಕೌತೂಕ |
ಹ್ಯಾಗೆ ಮಾರಿ ತೋರಲಿ ನನ್ನ ಪ್ರಜಾಜನಕ ||
ತಾಯಿ ಸುಮಿತ್ರಾಗ ಏನ ಹೇಳಲಿ ಅಪವಾದ ತಂದ ಇಟ್ಟ ನನ್ನ ಪಾಲಕ|
ತಮ್ಮ ಕಡಿತನಕ||೨||

ಕೋಪಾರೂಢನಾಗಿ ನಿಂತ ರಾಮಚಂದ್ರ ಬಾಣ ಬಿಟ್ಟ ಒಂದು ಕೈಲಾಕ |
ಮುರದ ವಗದಾರ ಕುಶ-ಲವ ನಡಬರಕೆ |
ಮೂರ್ಛಾ ಬಂದ ಬಿದ್ದ ರಾಮಚಂದ್ರ ನೆಲಕ ||
ವಾಲ್ಮೀಕನ ದಯದಿಂದ ಎದ್ದಾರ ಎಲ್ಲಾರು ಶಿರಬಾಗಿ ಅವನ ಪಾದಕ |
ಹೊಂಟಾರ ಅಯೋಧ್ಯಾ ನಗರಕ ||

||ಚಾಲ||

ರಾಮ ಸೀತಾ ಮಕ್ಕಳ್ನ ಕೂಡಿಸಿ-ವಾಲ್ಮೀಕಿ ಋಷಿ-ಮಾಡಿದ ಆಶೀರ್ವಾದ |
ಸುಖದಿಂದ ರಾಜ್ಯ ಆಳಿರೆಂದ||೧||

ಜನಮೇಜಯನ ಅಶ್ವಮೇಧ ತರಸಿ-ಓದ ಪುರಮಾನಿಸಿ-ತಿಳಿಯತತಿ ಭೇದಾ |
ನೋಡುನ ಹಾಡ ಮುಂದಿನ ಸಂದ||೨||

ಶತಕೋಟಿ ರಾಮಾಯಣಿ ಕೆಲಸ-ಹೇಳಿದಷ್ಟ ಹುಲಸ-ಆಗುವದು ಮುಂದಾ |
ಮುಂದ ಬೇಕಾದ ನೋಡುನು ಅಂದಾ ||೩||

||ಚಾಲ-೨||

ನಮ್ಮದು ಕೇಳ ಇರವುದು ಅಥಣಿ ವಾಸ |
ಸಿದ್ಧೇಶ್ವರ ನೆನದಾನು ಅಲ್ಲಿ ಖಾಸ||೧||

ಸುತ್ತಲೆಲ್ಲ ಪೌಳಿ ಅದಾವ ಆರಾಸ |
ನೋಡಿ ಮನಸಿಗೆ ಆಗೂದು ಉಲ್ಲಾಸ ||೨||

ಸೌದಾಗರ ಸುರಸಿದೊ ಕರುಣ ರಸ |
ಗುರು ನಾಡಿಗೆ ಒಪ್ಪುವ ರಾಜ ಹಂಸಾ ||೩||

||ಕೂ.ಪ.||

ಬಾಲ ತುಕಾರಾಮ ತಿಳಿಸಿದಂಥ ಕಲಮ ನಿತ್ಯ ಓದವರ ಶ್ರೀರಾಮಕಥಾ |
ನಮ್ಮ ಮೇಲೆ ಅವರದು ಬಹಳ ಸ್ವತಾ |
ವಸ್ತಾದ ಮುರಲೀಧರನ ಕವಿ ಪ್ರಕಾಶಿತಾ || ಮಾತಕೇಳಿ ||||೪|| ||ಚೌಕ||

ರಚನೆ : ವಸ್ತಾದ ಮುರಲೀಧರ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ