||ಪಲ್ಲ||

ರಾಮ ಲಕ್ಷ್ಮಣ ಇಬ್ಬರು ಬಹಳ ಪರಾಕ್ರಮಿ ಇದ್ದಾರ ಯಾರೂ ಇಲ್ಲ
ಅವರ ಸರಿ ಲೋಕದಾಗ |
ಬಿರದ ಭಟ್ಟಂಗಿ ಸಾರತತಿ ನಾಡಾಗ |
ಮೂರು ಲೋಕದಾಗ ಸೂರ್ಯ ಚಂದ್ರಾಮ ಇದ್ದಾಂಗ ||
ಎದ್ದ ಬಂದ ರಾವಣ ಕದ್ದಲೆ ಓದ ಸೀತಾನ ಗೋಮ ಹತ್ತಿ ಕಡಿತನಕ ಬಿತ್ತಡಾಗ |
ಮುಂದ ಆಗುಕಾಲ ತಪ್ಪೋಣಿಲ್ಲ ಯಾವ ಯಾವಗ ||

ಚೌಕ – ೧
||ನುಡಿ||

ಅಗ್ನಿ ದಿಕ್ಕಿನ ಮ್ಯಾಲ ಐಶ್ವರ್ಯಾ ಲೆಂಕಾ ಇತ್ತ ರಾವಣೇಶ್ವರನ ರಾಜಕೀಲಿ ಲಂಕಾದಾಗ |
ತೆತ್ತೀಸಕೋಟಿ ದೇವರನ ಎಲ್ಲಾ ಇಟ್ಟ ಬಂಧಿಯೊಳಗ |
ಚಂದ್ರಸೂರ್ಯ ಬ್ರಹ್ಮದೇವರ ಚಾಕರಿ ಮಾಡ್ಯಾರ ಆತಗ ||
ಅಂಥ ಪಟ್ಟಣ ಆಳೂವಂಥ ಬಂಟ ರಾವಣೇಶ್ವರ ಇದ್ದ ಅಷ್ಟಜೋರ
ಇದ್ದಿದ್ದಿಲ್ಲ ಯಾವ ಯಾವಗ |
ಹಿಂಥಾ ರಾಜ್ಯ ಯಾವ ಮಾಡಲಿಲ್ಲ ಭೂಮಿ ಮ್ಯಾಗ||೧||

ಮುನ್ನೂರದರವತ್ತಾರ ಯೋಜನ ಅಡ್ಡಗಲ-ಉದ್ದ ಲೆಂಕಾ ಇತ್ತ ಹಮಚೌಕ ಒಳಗ |
ಹೊರಗ ಎಪ್ಪತ್ತೆರಡ ಸಾವಿರ ಅಗಸಿ ಇದ್ದು ಲಂಕಾದಾಗ |
ಶಾಣೌ ಹಜಾರ ಹೂಡೆಗಳ ಇದ್ದು ಅದರೊಳಗೆ ||
ಏಳ ಲಕ್ಷ ಬಂಗಾರ ಮನಿ ಹತ್ತ ಲಕ್ಷ ಬೆಳ್ಳಿಮನಿ ಹದಿನೆಂಟ ಲಕ್ಷ
ವಜ್ರಮುನಿ ಮುತ್ತಿನ ಕೋಟ್ಯಾಗ |
ಮತ್ತ ಮೂರ ಲಕ್ಷ ಹಿತ್ತಾಳಿ ಮನಿ ಮೇಲುಪ್ಪರಗಿ ಮ್ಯಾಗ||೨||

ಕಲ್ಲ ಕಟಗಿ ಹುಲ್ಲಮನಿ ಲೆಕ್ಕ ಇಲ್ಲ ಲಂಕಾದಾಗ ರತ್ನದೀಪ ಹದಿನೆಂಟ ಲಕ್ಷ ಒಳಗ |
ಒಳಗ ಮತ್ತ ಕರ್ಪುರದೀಪ ಕೋಟಿ ಉರಿತಾವ ಮ್ಯಾಗ |
ಹಿಂಗ ತುಪ್ಪದ ದೀಪ ಎಂಬತ್ತ ಲಕ್ಷ ಇದ್ದು ತೆಳಗ |
ಎಣ್ಣಿದೀಪ ಲೆಕ್ಕವಿಲ್ಲ ಓಣಿಓಣಿ ಉರಿತಾವ ಚಂದ್ರದ್ಯೋತಿ ಉರಿತಾವ ಮಹಾಲದೊಳ |
ಮತ್ತ ಹಂತಾ ವರುವ ಕೊಟ್ಟ ಸಂಬ ರಾವಣೇಶ್ವರಗ||೩||

||ಚಾಲ||

ಊದ ಬಾರಸವರ ಗಣಿತಯಿಲ್ಲ ದಿನಾ ಜಾಂಗಟಿ ಝಣಝಣಾ ಪಾತ್ರಗಾಯನಾ |
ಯಾವ ಮಾತಿಂದ ಕಡಿಮಿ ಇಲ್ಲ ಏನಾ||೧||

ರಾವಣೇಶ್ವರ ಏನ ದೈವಾನಾ ಶಿವ ಕೊಟ್ಟಾನಾ ಸರ್ವಸಂಪನ್ನಾ |
ಒಟ್ಟ ಮುಕ್ತಾರ ಸರ್ವ ದಂಡಿನಾ||೨||

||ಕೂ.ಪ.||

ತುಂಬಿದ ಹೊಳಿ ನಡದಾಂಗ ರಾವಣೇಶ್ವರ ಹೊಂಟಬಂದ ಸಾಂಬ
ಸರ್ವ ನಡಿಸಿಕೊಟ್ಟ ರಾವಣೇಶ್ವರಗ |
ಅಂವ ಸದಾ ಆನಂದ ಇದ್ದ ಸುಖದಾಗ |
ಮುಂದ ಶನೀಶ್ವರ ಗಂಟಬಿದ್ದ ರಾವಣೇಶ್ವರಗ || ಎದ್ದಬಂದ||೧||

ಚೌಕ-೨

||ನುಡಿ||

ನಾರದ ಮುನಿ ಬಂದ ರಾವಣೇಶ್ವರಗ ಹೇಳತಾನ ಯಾರೂ ಇಲ್ಲ
ನಿನ್ನ ಸರಿ ಲೋಕದಾಗ |
ಕಟ್ಟ ಪಾರೇಕ ಹಾಕಿದೀರಿ ಶನೀಶ್ವರಗೆ |
ಅವನ ಅಂಗಾತ ಮಾಡಿ ತುಳಿಬೇಕ ನೀ ಎದಿಮ್ಯಾಗ ||
ತುಳದ ಆರ ತಿಂಗಳದಾಗ ರಾವಣೀಶ್ವರನ ಮರಣಯಿತ್ತ
ಆಗೂಕಾಲ ತಿಳೀಲಿಲ್ಲ ರಾವಣೇಶ್ವರಗ|
ಅಂವ ಅಂಗಾತಮಾಡಿ ತುಳದಾನ ಶನೀಶ್ವರಗ||೧||

ಅರ್ಧ ಜಲ್ಮ ಆಶೆಯಿತ್ತ ಮರಣಕಾಲ ಸನಿಬಂತ ಕದನ ಬಿತ್ತ ನೋಡ್ರಿ
ಮುಂದ ಸೀತಾನ ಕಾಲಾಗ |
ಅವನ ಮರಣ ಇತ್ತ ರಾಮಚಂದ್ರನ ಕೈಯಾಗ |
ಹಿಂಗ ಬರದ ಬರಿ ತಪ್ಪೋಣಿಲ್ಲ ಯಾಂವ ಯಾಂವಗ ||
ಕರ್ಮದಾತಾ ಸೀತಾನದಿಂದ ವರ್ಮ ಸೊಕ್ಕಿರಾವಣ ಗರ್ವದಿಂದ
ಏರಿಹೋದ ರಾಮನ ಮ್ಯಾಗ |
ಅವ ರಾಮರದಂಡ ಇಡಲಿಲ್ಲ ಖಾತ್ರಿದಾಗ||೧||

ಏರಿಹೊಂಟ ರಾವಣೇಶ್ವರ ಸಾರತಾನ ದಂಡಿನ್ಯಾಗ ಕೂಗತಿದ್ದ
ನಿಂತಕೊಂಡ ರಥದಾಗ |
ರಥ ಹೋಗತಿತ್ತ ಅಗ್ನಿ ಉರಿ ಎದ್ದಾಂಗ |
ರಥದ ಒಳಗ ರಾವಣ ಸಾಂಬ ಇದ್ದಾಂಗ ||
ನಿಂತಕೊಂಡ ರಥದಾಗ ಅಂತ್ರದಿಂದ ಹೋಗತಿದ್ದ ತಪ್ತ ಆಗಿ
ರಾವಣೇಶ್ವರ ರಾಮರ ಮ್ಯಾಗ |
ನಿಂತ ವಜ್ರಬಾಣ ಜಗ್ಗಿ ಹಿಡಿದ ತನ್ನ ಕೈಯಾಗ||೨||

ಮಂಡೋದರಿ ರಾವಣೇಶ್ವರಗ ಅರ್ಜಮಾಡಿ ಹೇಳತಾಳ ನೀವು
ಹಟಾ ಮಾಡಬ್ಯಾಡ್ರಿ ಈಗ
ಅವರು ದೇವರ ಮಂದಿ ಹ್ಯಾಂಗ ಕೇಳ್ಯಾರ ನಮಗ |
ನಾವು ದೈತರ ಮಂದಿ ಸಾಗುದಿಲ್ಲ ಅವರ ಮ್ಯಾಗ ||
ಹುಲ್ಲ  ರಾಮಗ ದಂಡ ಇಲ್ಲ ಬಿಸಾಟ ನನಗ ಏನ ಒರಸಿ ಹಿಟ್ಟ
ಮಾಡತೀನ ಅವನ ಗಳಿಗ್ಯಾಗ
ಸಂಹಾರ ಮಾಡತೀನ ಅದರ ಚಿಂತಿ ಯಾಕ ನಿನಗ||೩||

||ಚಾಲ||ಭೂಮಿ ತುಂಬ ದಂಡ ಕೈಯಾಗ ಇತ್ತ ರಾವಣಗ ಅಷ್ಟು ದಂಡಿನಾ |
ಸರ್ವ ಸಾಹಿತ ತಗೊಂಡ ಬಿಲ್ಲ ಬಾಣಾ||೧||

ಸಿಟ್ಟಿಗೇರಿ ರಥದ ಒಳಗ ಕೂಗಿ ಬಹಳ ತಪ್ತ ಆಗಿ ನಿಂತ ರಾವಣಾ |
ರಾಮರ ದಂಡಿನ ಮ್ಯಾಲ ಬಿಟ್ಟ ಬಾಣಾ||೨||

||ಕೂ.ಪ.||

ಕೆಳಗ ಬಿದ್ದ ಲಕ್ಷ್ಮಣ ಕಳವಳ ಆತ ಆ ಕ್ಷಣ ರಾವಣೇಶ್ವರನ ಬಾಣ ಬಡಿತ ಆತಗ
ಅಲ್ಲಿ ಮಾರುತಿ ಹೋಗಿ ದ್ರೋಣಾಗಿರಿ ತಂದಾನ ಆಗ |
ಔಷಧ ಹಾಕಿ ಎಬ್ಬಿಸಿದಾಗ ಆಗ ಲಕ್ಷ್ಮಣಗ || ಎದ್ದ ಬಂದ||೨||

ಚೌಕ – ೩
||ನುಡಿ ||

ರಾಮರದಂಡ ತಯ್ಯಾರ ಆಗಿ ಭೂಮಿತುಂಬ ನಡದೀತ ಲಕ್ಷ್ಮಣ
ಹೋಗುದ ಅಂದ ರಾವಣನ ಮ್ಯಾಗ
ನಳ-ನೀಳ ಅಂಗದ ಇದ್ದಾನೆ ಬೆನ್ನ ಮ್ಯಾಗ |
ಸುಗ್ರೀವನ ಕುಮಾರ ಅದು ಬ್ಯಾರಿ ಮ್ಯಾಗ |
ರಾಮಚಂದ್ರ ಹಿಡಿದ ಬಾಣ ಆಕಾಶಕ ಮೂಡಿದಾಂಗ ಲಕ್ಕಾಟ
ಕೋಲಮಿಂಚ ಹೊಲದಾಂಗ
ದೇವೀಂದ್ರ ಸ್ವರ್ಗ ಲೋಕದಿಂದ ಇಳದಾನ ಆಗ||೧||

ಮಾರುತಿ ಅಲ್ಲಿ ಬಹಳ ಅರಭಾಟ ಮಾಡತಾನ ಗಗನಕ ಹಾರತಾನ
ಸುಳಿತಾನ ದಂಡಿನಾಗ
ಗಿಡಾ ಗುಡ್ಡಾ ಕಿತ್ತ ಒಗಿತಾನ ಮ್ಯಾಗ |
ದ್ರೋಣಗಿರಿ ಪರ್ವತ ಅಗಾಧಯಿಲ್ಲ ಅವಗ ||
ಎಳದ ದೈತರ ನೆಲ್ಲಾ ತುಳದ ಮಾರುತಿ ರಾವಣ ಬಂದ ನಿಂತಿದಾನ ರಥದಾಗ
ಹಿಂಗ ಲಢಾಯಿ ನಡೆದಿತ ರಾಮ-ರಾವಣಗ||೨||

ರಾಮಚಂದ್ರ ಹಿಡದ ಬಾಣ ನಿರತದಿಂದ ಬಿಡತಾನ ಸರತದಿಂದ
ಬಡಿತಾವ ರಾವಣಗ |
ಒಂದೊಂದ ತೆಲಿ ಹಾರತಾವ ಚಂಡಿನಾಂಗ |
ಕೆಳಗ ಮ್ಯಾಲ ಮತ್ತ ಚಿಗಿತಾವ ಹ್ಯಾಂಗ ಇದ್ದಾಂಗ |
ಗುಡ್ಡದಾಂಗ ತೆಲಿ ಢಿಗಾರ ಬಿದ್ದಾವ ಸ್ಪಷ್ಟ ಮರಣ ಆಗವಲ್ದ ರಾವಣಗ |
ರಾಮಚಂದ್ರ ಮಾಡ್ಲಿ ಅಂತಾನ ಹ್ಯಾಂಗ||೩||

ಲಂಕಾದಾಗ ಹುಟ್ಟಿಬಂದ ಬಿಭೀಷಣ ಕೂಲಕೊಟ್ಟ ಕಳಿ ಎಲ್ಲಾ ಹೇಳಿದಾನ ರಾಮಚಂದ್ರಗ |
ರಾವಣನ ಮರಣ ಐತಿ ಎದಿ ಗುಂಡಿಗ್ಯಾಗ |
ರಾಮಕೇಳಿ ಬಾಣ ಒಗದ ಎದಿಯ ಮ್ಯಾಗ ||
ರಾಮಚಂದ್ರ ಒಗದ ಬಾಣಕ ಮರಣ ಆಗಿ ಭೂಮಿ ಮ್ಯಾಲ ರಾವಣ
ಬಿದ್ದ ದೊಡ್ಡ ಗುಡ್ಡದಾಂಗ |
ಬಿಭೀಷಣಗ ಓದ ಕೂಡ್ರಿಸಿದಾರ ಗಾದಿಮ್ಯಾಗ||೪|

||ಚಾಲ||

ಸೂರ್ಯಚಂದ್ರ ಮುಳಗಿದಾಂಗ ಆತ ಲಂಕಾದ ಧರಿ, ಸುತ್ತ ಕಾಳಗತ್ತಲಾ |
ಗವದಿತ ಮುಂಜಾನ ಸುತ್ತೆಲ್ಲಾ||೧||

ರಾಮರದಂಡ ಮುತ್ತಿಗಿ ಹಾಕಿ ಎಲ್ಲಾ ಮಾಡತಾರ ಕಬುಲಾ ಆತ ಅಮಲಾ |
ಕರಕೊಂಡ್ರ ಸೀತಾನ ಹಿಂಬಾಲಾ||೨||

||ಕೂ.ಪ.||

ತುರಾಯಿದವರ ಹಾಡತಾರ ಜಲಪೂರದಾಗ ಇರತಾರ ಕವಿ ಸಾರತಾರ ನಾಡಾಗ |
ರುದ್ರನ ಹಾಡ ಬಹಳ ಜಡಾ ಆಗತಾವ ಹಿಂಗ |
ಅಂವ ಕವಿ ಮಾಡಿ ಹೇಳತಾನ ಸಭಾದಾಗ || ಎದ್ದಬಂದ||೩||

ರಚನೆ : ರುದ್ರಕವಿ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ