ಕೂತ ಕೇಳಿರಿ ವ್ಯಾಸೋಕ್ತ ಗ್ರಂಥದಲಿ
ಮಾತ ತಗದ ನಾ ಹೇಳುವೆನು – ರಘು –
ನಾಥ ಮಾಡಿದಂತ ಪಂಥವನು – ಮಾ –
ರುತಿ ಸಾರಥಿ ಆದವನು
ಶತಮುಖದ ರಾವಣ ಎಂಬವನಾ ಶಿರ
ಶಕ್ತಿ ಕೈಲಿ ಹೊಡಿಸಿದ ತಾನಾ ಕೇಳಿರಿ ಇದನಾ
ಹತ್ತು ತಲಿ ರಾವಣನ ಮಗಾ ಮಹಾ –
ವೀರ ಪೌಂಡ್ರಕಾ ಎಂಬಾವಾ ವಯ-
ದಲ್ಲಿ ಅಂವ ಸಂಣಾವ ಶತ-
ಮುಖನು ಅವನ ಸೋದರ ಮಾವಾ
ಧನುರ್ವಿದ್ಯಾ ಕಲಸುದುಕ್ಕೋಸ್ಕರ ತನ್ನ
ಬದಿಲೆ ಇಟ್ಟಕೊಂಡವಾ – ವಿದ್ಯಾ ಕಲಸಾಂವಾ
ಲಂಕಾದಲಿ ದಶಮುಖ ಸತ್ತ ಅಂತ ಕೇಳ್ಯಾರ
ವಿಭೀಷಣಗ ಆದೀತಂತ ಪಟ್ಟಾ
ಮನದೊಳಗ ಆದಾ ಅಂವಾ ಸಿಟ್ಟಾ
ವೀರ ಪೌಂಡ್ರಕ ಅಂತಾನ ನಮ್ಮ ತಂದಿ
ಗ್ಯಾಕ ಬಂದೀತ ಸಾವಾ – ವಿಚಿತ್ರವಾ
ಕ್ಷಣದೊಳಗ ಇನ್ನ ವಿಭೀಷಣಾ ಪ್ರಾಣಾ
ಹೊಡೆದ ತಗೋಬೇಕ ನಾವಾ
ಇಲ್ಲದಿದ್ರ ವ್ಯರ್ಥ ಎನ್ನ ಜಲ್ಮವಾ
ಹೀಗಂತ ಮಾಡಿದಾನ ಪಂಥವಾ
ಮಾರ್ಬಲ ಸಹ ಶತಮುಖ ರಾವಣನು
ನೋಡ್ಯಾನ ಲಂಕಾದ ವೈಭವ ಕಂಡಾಗ ಶವಾ

||ಚಾಲ||

ಶತಮುಖ ರಾವಣ ಬಂದೆಂಬ ಸುದ್ದಿ ಕೇಳಿ
ವಿಭೀಷಣ ಹೊರಬಿದ್ದು
ಕಳವಳಿಸಿ ದುಃಖ ಮಾಡಿಕೋತ ಅಯೋಧ್ಯಾ
ನೋಡುತ ಬ್ಯಾಗ ಅಂವ ಬಂದಾ
ದುಃಖದಿಂದ ಸುರಸಿ ಕಣ್ಣೀರಾ ಅಂತಾನ
ರಘುವೀರ ಗಾದಿಹೋತ ನಿಂದಾ
ನೀವು ಅಚಲ ಪಟ್ಟಗಟ್ಟಿದು ಶತಮುಖ
ಹೊಡದ ತಕ್ಕೊಂಡೆ ಎಂದಾ
ಲೋಕ ಪತಿ ನಿಮ್ಮ ಮಾತ ಇಂದಿಗೆ
ಸುಳ್ಳ ಆದೀತ ವಚನಾ
ಇಷ್ಟ ಅಂದ ಶೋಕಾಬ್ದಿಯಲ್ಲಿ ಉರಳಿ
ಬಿದ್ದಾನ ವಿಭೀಷಣ ತಾನಾ

||ಏರು||

ರಾಮ ಭಾಷೆ ಕೊಟ್ಟ ವಚನವನು – ಬೆಳ –
ಗಾಗುದರೊಳಗ ಅವನ ಹೊಡೆಯುವೆನು
ನಿನ್ನ ಗಾದಿ ನಿನಗ ಕೊಡಿಸುವೆನು
ಸುಳ್ಳಾದ್ರ ಅಗ್ನಿಯಲಿ ಬೀಳುವೆನು ಕೇಳಿರಿ ಇದನು
ಕೂತ ಕೇಳಿರಿ ವ್ಯಾಸೋಕ್ತ ಗ್ರಂಥದಲಿ
ಮಾತ ತಗದ ನಾ ಹೇಳುವೆನು||೧ನೇ ಚೌಕ||
ಇಷ್ಟ ಮಾತ ಕೇಳಿ ಮತ್ತೂ ವಿಭೀಷಣ
ಹೊರಳ್ಯಾನ ಹೆಚ್ಚಿನ ದುಃಖದಲಿ
ರಾಮ ಕೇಳತಾನ ಅವನ ಮಾತಿನಲಿ
ಯಾಕ ಶೋಕ ವಚನಾ ಕೊಟ್ಟಿ ಮ್ಯಾಲಿ
ಕೇಳಿ ವಿಭೀಷಣ ಹೇಳಿದ ರಾಮಾ
ವಿಚಿತ್ರ ಬಂತು ಈ ಹೊತ್ತಿನಲಿ
ನಿಮ್ಮ ರೀತಿಯಲಿ ರೀತಿಯಲಿ
ಏಕಾದಶಿ ಉಪವಾಸ ಇಂದ ನಾಳಿ
ಪಾರಣಿ ಮಾಡುವ ಉದಯದಲಿ
ಷಣ್ಮಾಸ ದಾರಿ ಲಂಕಾ ಇಲ್ಲಿಂದ ರಾವಣನ
ಹೊಡಿತೇನಿ ಅಂಬುದು ಖಾಲಿ
ಬೀಳೋದಗ್ನಿಯಲಿ ಅಗ್ನಿಯಲಿ
ಇಷ್ಟ ಕೇಳಿ ರಾಮ ಚಿಂತಾಕ್ರಾಂತನಾಗಿ
ಹನುಮಂತನ ಆಗ ಕರಿಸುತಲಿ
ಬಂದಾನು ಮಾರುತಿ ತೀವ್ರದಲಿ
ಸಾಷ್ಟಾಂಗ ರಾಮನ ಚರಣದಲಿ
ಹಾಕಿ ಕರವ ಮುಗಿದ ಇದರಿಗೆ ನಿಂತಾನ
ಯಾಕ ಕರಿಸಿದರಿ ಅನ್ನುತಲಿ
ತಾ ಹೇಳುತಲಿ ಮತ್ತ ಹೇಳುತಲಿ

||ಚಾಲ||

ರಾಮ ಹೇಳ್ಯಾನ ಹನುಮಂತಗ ರಾವಣ
ಶತಮುಖನು ಲಂಕಾ ಹೊಕ್ಕಾನು
ವಿಭೀಷಣನ ಪ್ರಾಣ ಹೊಡದ ಗಾದಿ ತಗೋ-
ಬೇಕಂತಾನು ಅಂತಾನು
ಮಾಡಲೇನು ಬೆಳಗಾಗುದರೊಳಗ
ಹೊಡದೇನು ಅಂತ ವಚನವನು
ನಾ ಕೊಟ್ಟೇನು ಅಂತ ಕೊಟ್ಟೇನು
ನನ್ನ ವಚನ ಹಾನಿ ಆಗುದ ಬಂತಾ
ಈ ಹೊತ್ತು ಕೇಳು ಹನುಮಂತಾ
ಇನ್ನು ಪ್ರಹರದೊಳಗ ನಮ್ಮನೊಯ್ದು ಲಂಕಾ-
ದೊಳಗ ಇಳಿಸಬೇಕು ನೀ ತುರುತಾ
ಕೇಳಿ ಹನುಮ ರುದ್ರ ಅವತಾರ ತಾಳಿ ಭೂಮಿ
ಆಕಾಶಕ ಏಕಾಗಿ ನಿಂತಾ

||ಏರು||

ಅಂಗೈಯೊಳಗ ರಾಮ-ಲಕ್ಷ್ಮಣ ಹಿಡಿದೊಂದು
ಹೆಜ್ಜೆ ಕಿತ್ತಿ ಅಲ್ಲಿ ಇಟ್ಟಾನು
ಅಷ್ಟರೊಳಗೆ ಬಂದೀತ ಲಂಕಾವನು
ಹೊಡಿಯಂತ ರಾಮಗ ಹೇಳಿದನು ಕೇಳಿರಿ ಇದನು
ಕೂತ ಕೇಳಿರಿ ವ್ಯಾಸೋಕ್ತಿ ಗ್ರಂಥದಲಿ
ಮಾತ ತಗದ ನಾ ಹೇಳುವೆನು||೨ನೇ ಚೌಕ||

ಸುದ್ದಿ ಕೇಳಿ ರಾವಣನು ಸಿದ್ದ ಆಗಿ ಬಂದ ಯುದ್ಧಕಾ
ಹತ್ತ ಅರ್ಬುದ ಕಾಲ ಮಂದಿ ಅರ್ಭಾಟಕಾ
ಗರ್ಭಗಳಿತ ಆಗಿ ಅಂಜೇತಿ ಕೇಳ ಲೋಕಾ
ನಾಲ್ಕು ಅರ್ಬುದ ಗಜಾ ಎಂಟ ಅರ್ಬುದ ತೇಜಿ
ಹಾರಿದವೋ ಮ್ಯಾಲಕ ಮ್ಯಾಲಕಾ
ಅಂತ್ರ ಮಾರ್ಗದ ಅಂತ್ರ ಮಾರ್ಗಕಾ
ದ್ವಾದಶ ಅರ್ಬುದ ಮಹಾರಥಿಕರು-ಶರಾ
ತೂರತಾರ ಮ್ಯಾಲಕ ಮ್ಯಾಲಕಾ
ಧೂಳ ವಗದೀತ ಆದಿತ್ಯ ಮಂಡಳಕ
ಬೀರ ಗರ್ಜನೆ ಬೊಬ್ಬಿ ನಾದಕ ಅಂಜಿ
ಹಲ್ಲಗಟ್ಟಿ ವೀರ ಅಷ್ಟ ದಿಗ್ಗಜಗಳ
ಥಳಮಳಸಿ ಬಿದ್ದಾವ ನೆಲಕ ನೆಲಕ
ಕೇಳಿರಿ ಕವತೂಕ ಕವತೂಕ
ವೀರ ರಘುವೀರ ತೂರ‍್ಯಾನ ಶರಗಳ
ಶಿರಗಳು ಹಾರತಾವ ಗಗನಕ
ಶತಮುಖನು ಬಂದ ನಿಂತ ಸುಮ್ಮಕ
ಬಾಣಕ ಹೆದೀ ಏರಿಸಿದಾನ ತಾತ್ಕಾಲಕ
ವೀರ ರಾವಣನ ಕಡದ ಬಾಣದಲೆ
ಹೊಡದ ನಡದ ಮುಂದಕ
ರಣ ಮಂಡಳಕ ರಣ ಮಂಡಳಕ

||ಚಾಲ||

ಒಂದ ರಕ್ತದ ಹನಿಗೆ ನೂರು ಮಂದಿ ರಾವಣರು
ಹುಟ್ಟಿ ಎದ್ದ ಬರತಾರು ಬರತಾರೂ
ಹಿಂಗ ಕೋಟ್ಯಾವಧಿ ರಾವಣರು ಹುಟ್ಟಿ
ಘೋರ ಯುದ್ಧ ನಡಿಸ್ಯಾರು ನಡಿಸ್ಯಾರು
ಬಾಣ ಬಿಟ್ಟ ರಾಮ ದಣಿದಾನ ದಣಿದಾನ
ಅಷ್ಟರಲ್ಲಿ ನಾರದ ಬಂದು ನಿಂತಾನ ನಿಂತಾನ
ರಾಮಗ್ಹೇಳತಾರ ನಾರದ ಕೇಳೈ
ತ್ರಿಲೋಕ ಪತಿ ಎನ್ನ ಮಾತಾ
ಸರ್ವ ಅಂತರಂಗ ಬಲ್ಲಾಂವಾ ನಿನಗ
ನಾ ಏನು ಹೇಳಲಿ ರಘುನಾಥಾ
ನಿನ್ನ ಕೈಯಾಗ ಈತನ ಮರಣಾ ಇಲ್ಲಾ ಮುಂಚೆ
ಕರಿಯ ಕಳಸ ಇಲ್ಲೆ ಸೀತಾ.

||ಏರು||

ಸಾಯುತನಕ ನೀ ಯುದ್ಧ ಮಾಡಿದರ
ಶತಮುಖಗಾಗದ ಮರಣವನು
ಹಿಂಗಂತ ಹೇಳತಾನ ನಾರದನು
ಶಕ್ತಿನ ಕರಸ ಬ್ಯಾಗ ನೀನು ಕೇಳಿರಿ ಇದನು
ಕೂತ ಕೇಳಿರಿ ವ್ಯಾಸೋಕ್ತ ಗ್ರಂಥದಲಿ
ಮಾತ ತಗದ ನಾ ಹೇಳುವೆನು||೩ನೇ ಚೌಕ||

ಕೇಳಿ ನಾರದನ ಮಾತಿಗೆ ರಾಮ ತಾ
ಚಿಂತಿ ಮಾಡಿಕೊಂತ ನಿಂತಾನು
ಹನುಮಂತನ ಮುಖವ ನೋಡ್ಯಾನು
ಸೀತಾನ ತರಬೇಕು ಅಂದಾನು
ಕೇಳಿ ಹನುಮ ಅಲ್ಲಿಂದ ಬಾಗಿ ನಿಂತ ನೋಡ್ಯಾನು
ಅಯೋಧ್ಯಾವನು ಮಹಾವೀರನು
ಮಂಚದ ಮ್ಯಾಲ ಮಲಗಿಕೊಂಡು ಸೀತಾ
ಮಾಡುವಳು ಘೋರ ನಿದ್ರಿಯನು
ಹನುಮಂತ ಮಾಡತಾನ ಯುಕ್ತಿಯನು
ಬಾಲಾ ಹಾಕಿ ಕೋಲು ಎಲ್ಲಾ ಕಿತ್ತಾನು
ತಂದ ರಾಮನ ಮುಂದ ಸೀತಾನ
ಕೋಲು ಮಂಚ ಸುದ್ದಾ ಇಳಿಸ್ಯಾನ
ಎಬಸಂದಾನ-ಶ್ರೀ ರಾಮಗಂದಾನು
ರಾಮ ಸೀತಾಗ ಎಬಸಿ ಹೇಳತಾನು
ರಾವಣ ಬಂದಾನು ಶತಮುಖನು
ಆತಂದ ತಗೋಬೇಕ ಪ್ರಾಣವನು
ಲಗು ಏಳ ಮಾಡಬ್ಯಾಡ  ಸುಸ್ತಿಯನು
ಕೇಳಿ ರಾಮನ ಮಾತಿಗೆ ಸೀತಾನಗುತ
ಹೇಳತಾಳ ಮಾತವನು ಉಪರಾಂತಿಯನು

||ಚಾಲ||

ಹತ್ತು ತಲೆ ರಾವಣನ ಕೈಯಾಗ
ಸಿಕ್ಕನಾ ಬಳಲಿ ಬಿದ್ದೆ ಬಹುದಿವಸಾ
ಆತನ ಬಂದ್ಯಾಗ ಪ್ರಾಣಾನಂದು
ಆದೀತ ಭಾಳ ವನವಾಸಾ
ನೀವ ಬಂದ ಅವನ ಹೊಡೆಯುತನಕಾ ನನ್ನ
ಜೀವದಾಗ ಇದ್ದಿದ್ದಿಲ್ಲ ಉಲ್ಲಾಸಾ
ಏನ ಹಾಸ್ಯ ಮಾಡತೀರಿ ನನಗ ಹತ್ತ
ತೆಲಿ ರಾವಣನ ಹ್ಯಾಂಗ ಹೊಡೆಯವೆನು
ಅಷ್ಟುಶಕ್ತಿ ನನ್ನಲ್ಲಿ ಇದ್ದರ
ಹತ್ತ ತಲಿ ಹೊಡೆದು ಬರತಿದ್ದಿಲ್ಲೇನು
ನಿಮ್ಮ ಹೊರತ ನನ ಆಧಾರ ಇತ್ತ ಇಲ್ಲೊ
ಇಂಥಾ ರಾವಣನ ಹ್ಯಾಂಗ  ಹೊಡೆಯುವೆನು ಎಂದು
ಮಲಗಿಕೊಂಡಾಳ ಜಾನಕಿ ತಾನು
ರಾಮಚಂದ್ರಗ ಹೇಳತಾನ ನಾರದನು
ಎಂದಿಗೆ ಆಗುದುಲ್ಲ ಕಬೂಲವನು ಕೇಳರಿ ಇದನು
ಕೂತ ಕೇಳರಿ ವ್ಯಾಸೋಕ್ತ ಗ್ರಂಥದಲಿ
ಮಾತ ತಗದ ನಾ ಹೇಳುವೆನು||೪ನೇ ಚೌಕ||

ನಾರದ ಅಂತಾನ ಕೇಳೋ ರಘುವೀರಾ
ಹೇಳತೇನ ಶಕ್ತಿಯ ಮಾತಾ ಇಕಿ
ಪೂಜಾ ಮಾಡಬೇಕರಿ ಪೂರ್ತಾ ನೀರ
ಬಿಡೋ ಕೊಡತೇನಂತ ಸೇರ ರಕ್ತಾ
ಅಲ್ಲಿಂದ ಶತಮುಖ ರಾವಣರೆಲ್ಲ ನುಂಗಿ
ಬಿಡತಾಳ ಇಕಿ ಪೂರ್ತಾ ಇದು ಖಚಿತಾ
ಇಷ್ಟ ಕೇಳಿ ರಾಮಚಂದ್ರ ನೀರ ಬಿಟ್ಟಾ
ಸೇರ ರಕ್ತ ನಕ್ಕೀ ಕೊಡತೇನಂತಾ
ಆಗ ಶಕ್ತಿ ಮಾಡ್ಯಾಳ ವಿಪರೀತಾ
ವಿಶಾಲ ರೂಪ ಆಗಿ ಅದ್ಭುತಾ
ಭೂಮಿಗೊಂದ ತುಟಿ ಆಕಾಶಗೊಂದ ತುಟಿ
ಏಕಾಕಿ ನಿಂತಾಳ ಆರ್ಭಟಿಸುತ್ತಾ ಚೀರುತಾ
ಎಲ್ಲಾ ರಾಕ್ಷಸರನ ನುಂಗುತಾ ನಡದಾಳ
ನಮ್ಮ ಮರಣ ಬಂತ್ರಿ ಇಂದಿಗೆ ಅನ್ನುತಾ
ಗರ್ಭ ಗಳಿಸಿ ಅಂಜಿ ಢಳಮಳಿಸುತಾ
ಕೈಯೊಳಗಿನ ಬಾಣಾ ಚಲ್ಲು ಚಲ್ಲುತಾ
ಕಂಗೆಟ್ಟ ಖಬರ ಹಾರುತಾ ನಿಂತಾ
ಹ್ಯಾಂಗ ಮಾಡಲಿ ಅಂತಾ ಮಾಡಲೆಂತಾ

||ಕಾಲ||

ಅರ್ಭಾಟ ಶಕ್ತಿ ರಾಕ್ಷಸನ ನುಂಗಿ
ಗಟಾ ಗಟಾ ರಕ್ತ ಸೀಪ್ಯಾಳು
ಕ್ಷಣದೊಳಗೆ ಶತಮುಖನ ಪ್ರಾಣ ತಕ್ಕೊಂಡಾಳು
ತಾ ನುಂಗಿ ನೀರ ಕುಡದಾಳು ಕುಡದಾಳು
ಕೋಟ್ವ್ಯಾನು ಕೋಟಿ ಸೈನ್ಯ ಎಲ್ಲಾ ನುಂಗಿದರ
ರಕ್ತ ಅಚ್ಛೇರು ಭರತಿ ಆದೀತು ಆದೀತು
ಇನ್ನು ಅಚ್ಛೇರು ರಕ್ತಕ ತಿರುಗಾಳು
ರಾಮ ಲಕ್ಷ್ಮಣರನು ನುಂಗ ಬೇಕಂತು
ಇಷ್ಟ ನೋಡಿ ನಾರದ ಓಡಿ ಬಂದು ಅಂದಾನು
ರಘುವೀರಾ ಘಾತ ಆದೀತು ಆದೀತು

||ಏರು||

ನೀರು ಬಿಡರಿ ತೀವ್ರ ದ್ವಾಪಾರದಾಗ
ಅಚ್ಛೇರ ಕೊಡತೀವಂತ ರಕ್ತವನು
ಇಲ್ಲದಿದ್ದರ ನುಂಗತಾಳ ನಿಮ್ಮನು
ಕೇಳಿದ ತಾ ರಾಮನು ತಾ ರಾಮನು ಕೇಳರಿ ಇದನು
ಕೂತ ಕೇಳರಿ ವ್ಯಾಸೋಕ್ತ ಗ್ರಂಥದಲಿ
ಮಾತ ತಗದ ನಾ ಹೇಳುವೆನು||೫ನೇ ಚೌಕ||

ರಾಮ ನೀರ ಬಿಟ್ಟ ದ್ವಾಪಾರದಾಗ
ಅಚ್ಛೇರ ರಕ್ತ ಕೊಡತೀನಿ ಮುಂದಾ
ಇಷ್ಟ ಶಕ್ತಿ ಕೇಳಿದಾಗ ಕಿವಿಯಿಂದಾ
ಆಗ ಸೂಕ್ಷ್ಮ ಸೀತಾ ಆಗಿ ಚಂದಾ
ಮಲಗ್ಯಾಳ ಜಾನಕಿ ಸ್ವಸ್ತ ತಾನು
ನಿದ್ರಿದಿಂದ ರಾಮ ನೋಡಿದನು
ಪಟ್ಟಗಟ್ಟಿದ ವಿಭೀಷಣ ತಾನು
ಅಭಯ ಹಸ್ತ ಇಟ್ಟ ತಾನು ಆನಂದದಿಂದಾ
ಅವತಾರ ತೀರಿತ ರಾಮಚಂದ್ರಂದಾ
ಕೊಟ್ಟ ವಚನ ಇತ್ತ ಅವಗ ಅಂದಿಂದಾ
ದ್ವಾಪಾರದಾಗ ಮುಂದ ಕೃಷ್ಣನಾಗಿ ತಾನಾ
ಕೌರವ ಪಾಂಡವರಿಗೆ ಯುದ್ಧಾ ಹಚ್ಚಯಾನ ಜಿದ್ದಾ
ಕಾಳ ಶಕ್ತಿ ಅಲ್ಲಿ ರಕ್ತ ಕುಡಿದಾಳು
ಹದಿನೆಂಟು ಅಕ್ಷೋಹಿಣಿ ಸೈನ್ಯಾದ್ದ
ಅಷ್ಟಾದರೂ ಆಗಲಿಲ್ಲಾ ಸುದ್ದಾ
ನವಟಾಕ ಕಡಿಮೆ ಬಿದ್ದಿತ ಮುಂದಾ
ಕೃಷ್ಣ ಹೇಳಿದ ಕಾಳಶಕ್ತಿಗೆ ಕಲಿಯುಗದಾಗ
ಮಾರಾಮಾರಿ ಆಗೂದಾ ರಕ್ತ ಕುಡಿ ಅಂದಾ

||ಚಾಲ||

ಕಲಿಯುಗದ ಮದಲಗೊಂಡ ಇಂದಿನತನಕಾ
ರಕ್ತಾ ಆಗವಲ್ಲದ ಭರತಿ
ದುರ್ಗವ್ವ ಅಂಬೋ ಹೆಸರಾ ಶಕ್ತಿಗೆ
ಮೊದಲಿಂದ ಹಿಂಗ ಬಿದ್ದತಿ
ನವಟಾಕ ರಕ್ತದಲ್ಲೆ ಲೋಕದೊಳಗ ಮಾ-
ಡ್ಯಾಳ ಪ್ರಳಯದ ಗತಿ
ಈ ಸೂತ್ರಧಾರ ಅನಂತನಾಟ ಯಾ-
ರ‍್ಯಾರಿಗೆ ತಿಳಿಯದ ಮುನ್ನ
ಬಾಗೋಡಿ ಜಾಗಾ ರಂಗಲಾಲ ನಾ-
ಡಿಗೆ ಸುರದಂಗ ರನ್ನಾ
ಅಣ್ಣಾರಾವಜಿ ಗುರುವಿನ ಹಾಡ
ನಾಕುಸಲ ಹಚ್ಚಿದ್ಹಾಂಗ ಕಮಲ ಕಸರಿಲ್ಲೇನಾ
ಬಾಳಗೋಪಾಲನ ಹಾಡ ಕೇಳರಿ ಹಸು-
ಗೂಸಿಗಿ ಹಾಕಿದ್ಹಾಂಗ ಕ್ಷೀರವನಾ

||ಏರು||

ತಗಿತಾರ ಶಾಸ್ತ್ರದ ಆಧಾರವನು
ಕೇಳಿ ವೈರಿ ನೋಡಿ ಬೆರತಾನ ತಾನು
ಕೇಳರಿ ಇದನು
ಕೂತ ಕೇಳರಿ ವ್ಯಾಸೋಕ್ತ ಗ್ರಂಥದಲಿ
ಮಾತ ತಗದ ನಾ ಹೇಳುವೆನು||೬ನೇ ಚೌಕ||

ರಚನೆ : ಬಾಳಗೋಪಾಳ
ಕೃತಿ : ಜಾನಪದ ಝೇಂಕಾರ