ಒಂದು ದಿವಸ ಕೈಲಾಸದಲ್ಲಿ ಶಿವ
ಶಕ್ತಿ ಕೂತಿದ್ರ ಆನಂದದೊಳಗ
ವಾಮಭಾಗದಲ್ಲೆ ಕೂತ ಪಾರ್ವತಿ
ಪ್ರಶ್ನೆ ಕೇಳೂಳ ಈಶ್ವರಗ ||ಪಲ್ಲ||

ಜಗದ ಭರಿತ ಕೈಲಾಸದೊಡೆಯಾ ನೀ
ಎನ್ನ ಬಿನ್ನಹ ಕೇಳರಿ ಮುನ್ನಾ
ಪಿಂಡ ಬ್ರಹ್ಮಾಂಡ ಪಂಚ ತತ್ವಗಳು
ಮೊದಲ್ಹ್ಯಾಂಗ ಆದು ಹೇಳರಿ ಖೂನಾ
ಕೃಪಾ ಸಾಗರಾ ದಯಾ ಸಮುದ್ರಾ
ಛಿದ್ರ ಮಾಡಿ ಹೇಳರಿ ಇದನಾ
ಪಿಂಡ ಬ್ರಹ್ಮಾಂಡಕ ಪಂಚ ತತ್ವಗಳು
ಹ್ಯಾಂಗ ಆಗಿ ನಿಂತಾವ ಸವನಾ
ಸಾಂಬ ಅಂತಾನ ವಾಹವಾರೆ ಪಾರ್ವತಿ
ಭಲೆ ಮಾಡಬಹುದು ಪ್ರಶ್ನಾ
ಕೇಳಬಹುದು ನೀ ಹೇಳಬಹುದ ನಾ
ಪಿಂಡ ಬ್ರಹ್ಮಾಂಡದೊಳಗಿನ ಕದನಾ
ಪ್ರಥಮ ಇತ್ತ ಓಂಕಾರ ಎಂಬುವಾ
ಪ್ರಣವದೊಳಗ ಹುಟ್ಟ ಮೂರು ಗುಣಾ
ಅಕಾರ, ಉಕಾರಾ, ಮಕಾರಾ ಇವು ಮೂರಾ
ಬೀಜಾಕ್ಷನ ಅಂತ ಮೊದಲ ತಿಳಿ ನೀನಾ
ಅಕಾರ ಎಂಬುದು ನಾದ ಆದಿತು
ಉಕಾರ ಬಿಂದು ಅಕ್ಷರ ಕೇಳ ನೀನಾ
ಮಕಾರದೊಳಗ ಕಳೆ ಹುಟ್ಟಿತು
ಮೂರಕ ಮೂರ ಆಧಾರ ಮುನ್ನಾ
ನಾದ ಬಿಂದು ಕಳೆ ಮೂರಕ ಆಧಾರ
ಪ್ರಕೃತಿ ಮಾಡಿಟ್ಟ ನಿರಂಜನಾ
ಅಂಥಾ ಪ್ರಕೃತಿಗೆ ಪ್ರಾಣ ಆಧಾರ
ಒಂದೊಂದು ಕೇಳ ಇದರ ಸಂಧಾನಾ
ಪ್ರಾಣಕ ಆಧಾರ ಲಿಂಗ ಎನಿಸುವದಾ
ಪಿಂಡ ಬ್ರಹ್ಮಾಂಡದಿಂದ ನಿರ್ಮಾಣಾ
ಅ ಅಂದ್ರ ಅಣು ಅಂತಾ ಉ ಅಂದ್ರಾ ನಾದವು
ಈ ಮಾತ ಸಂಪೂರ್ಣ ತಿಳಿ ನೀನಾ
ಮ ಅಂದ್ರ ಬಿಂದು ಕೂಡಲು ಇವು ಎಲ್ಲಾ
ಶಿವಾ ಶಕ್ತಿ ಆದರು ಬ್ಯಾಗಾ
ಒಂದು ದಿವಸ ಕೈಲಾಸದಲ್ಲಿ
ಶಿವ ಶಕ್ತಿ ಕೂತಿದ್ರ ಆನಂದದೊಳಗ

ಶಿವಾ-ಶಕ್ತಿ ಈ ಪಿಂಡ ಬ್ರಹ್ಮಾಂಡಾ
ಕೂಡಿದಾಗ ಆತ ಆ ಝೇಂಕಾರಾ
ಪಂಚಭೂತ ಉತ್ಪತ್ತಿ ವಿವರಗಳ
ಛಿದ್ರ ಮಾಡಿ ಹೇಳುವೆ ನಾ ಪೂರಾ
ಸದ್ಯೋಜಾತ ಮುಖದಿಂದ ಪೃಥ್ವಿದಾ
ಆಗ ಉತ್ಪನ್ನಾದಿತ ಆಧಾರಾ
ವಾಮದೇವ ಮುಖದಿಂದ ಆದಿತು ಅಪ್
ಅಘೋರದಲ್ಲಿ ಅಗ್ನಿ ಪೂರಾ
ವಾಯು ಉತ್ಪನ್ನ ತತ್ಪುರುಷ ಮುಖದಿಂದ
ಚಿತ್ತಗೊಟ್ಟ ಕೇಳರಿ ನೀವೆಲ್ಲಾ ಪಂಡಿತರಾ
ಈಶಾನ ಮುಖದಿಂದ ಆಕಾಶ ಹುಟ್ಟಿತು
ಪಿಂಡ ಬ್ರಹ್ಮಾಂಡದೊಳಗಿನ ಸಾರ ಪಂಚಭೂತಗಳು
ಪಂಚಭೂತದಿಂದ ಹುಟ್ಟಿದಾವ ಈ ಪರಿ ಪ್ರಕಾರಾ
ಪಂಚಭೂತ ಧರ್ಮಕರ್ಮವರ್ಣಾದಿಗಳು
ಗುಣಾ ಹೇಳುವೆನು ಸಾರಾ ಸಾರಾ
ಪೃಥ್ವಿ ತತ್ವದಲ್ಲೆ ಶಬ್ದ, ಸ್ಪರ್ಶ, ರೂಪಗಳು,
ರಸಾ, ಗಂಧಾ, ಐದ ಇವ ಪೂರಾ ಪೂರಾ
ಅಪ್ ತತ್ವದಲ್ಲೆ ಶಬ್ದ, ಸ್ಪರ್ಶ, ರೂಪಗಳು
ರಸಾ ನಾಲ್ಕು ಗುಣಾ ಆಧಾರಾ ಆಧಾರಾ
ಇದರ ಹಾಂಗ ಇನ್ನ ಪಿಂಡ ಉತ್ತತ್ತಿ
ಚಿತ್ತಗೊಟ್ಟ ಕೇಳರಿ ಸ್ಥಿರಾ ಸ್ಥಿರಾ
ಶ್ವೇತ ವರ್ಣ ಇರುವುದು ಆದಿಯಲಿ
ದೇವತೆ ವಿಷ್ಣು ನಿಂತಾನ ಧೀರಾ
ಅಗ್ನಿ ತತ್ವದಲ್ಲೇ ಶಬ್ದ-ಸ್ಪರ್ಶ-ರೂಪಗಳು
ಮೂರು ಗುಣಾ ಇರುವದು ಕೇಳ ಕವೀಶ್ವರಾ
ಉಷ್ಣಾ ಧರ್ಮ ಅಗ್ನಿ ತತ್ವದಲ್ಲೇ ಇವು
ಉಂಟ ಪಚನ ಕರ್ಮಾಶಾಸ್ತ್ರದ ಆಧಾರಾ
ಅಗ್ನಿ ಬಣ್ಣ ಅತಿ ಕೆಂಪ ಇರುವುದು
ರುದ್ರ ದೇವತಾ ಕೇಳ ಬ್ಯಾಗ,
ಒಂದು ದಿವಸ ಕೈಲಾಸದಲ್ಲಿ ಶಿವ
ಶಕ್ತಿ ಕೂತಿದ್ರ ಆನಂದದೊಳಗ||೨||

ವಾಯು ತತ್ವದಲ್ಲೆ ಶಬ್ದ ಸ್ಪರ್ಶ ಎರಡಗುಣಾ
ಇರುದು ಕೇಳರಿ ಶಾಶ್ವತಾ
ಚರಿಸುವ ಬ್ರಹ್ಮ ವಾಹನಾದಿ ಕರ್ಮಾ
ಬುದ್ಧಿವಂತಗಾದೀತ ಅರ್ಥಾ ಅರ್ಥಾ
ರೀತಿ ವರ್ಣ ಆದಿ ದೇವತೆ ಈಶ್ವರಾ
ವಾಯು ತತ್ವ ಕರಮನ ಖಚಿತಾ
ಆಕಾಶ ತಾತ್ವಿಕ ಶಬ್ದ ಒಂದ ಗುಣಾ
ಬೈಲ ಧರ್ಮ ಇವ ನಿಶ್ಚಿತಾ
ಕೃಷ್ಣವರ್ಣ ಆಕಾಶಕ ಆದಿ ದೇವ
ತಾನೇ ತಾನು ಉಮಾಕಾಂತಾ
ಇನ್ನ ಜಗದ ಉತ್ಪತ್ತಿ ಕೇಳರೀ
ಮೂಲ ಹಿಡದ ಹೇಳುವೆ ಶಿಸ್ತಾ ಶಿಸ್ತಾ
ಆಪಾ, ತೇಜ, ವಾಯು, ಆಕಾಶ, ಪೃಥ್ವಿ,
ಸೂರ್ಯ, ಚಂದ್ರ, ಆತ್ಮದ ಮಾತಾ
ಅಷ್ಟವರ್ಣ ಇವು ಶಿವನ ಅಷ್ಟತನಗಳು
ಮೊದಲು ಹಿಂಗ ತಾ ನಿರ್ಮಿಸುತಾ
ಇದರ ಹಾಂಗ ಇನ್ನ ಪಿಂಡ ಉತ್ಪತ್ತಿ
ಚಿತ್ತಗೊಟ್ಟ ಕೇಳರಿ ಸ್ವಸ್ಥಾ.
ಅಸ್ತಿ, ಮಾಂಸ, ಚರ್ಮಾ, ನರಾ, ರೋಮಾ
ಐದು ಪೃಥ್ವಿ ತತ್ವದಿಂದ ಉತ್ಪನ್ನಾ
ಬ್ಯಾರೆ ಪಂಚ ತತ್ವದ ಉತ್ಪತ್ತಿ
ಕೂತ ಕೇಳರಿ ಸಭೇದಾಗ ಸರ್ವರಾ,
ಒಂದು ದಿವಸ ಕೈಲಾಸದಲ್ಲಿ ಶಿವ
ಶಕ್ತಿ ಕೂತಿದ್ರ ಆನಂದದೊಳಗ

ಶ್ಲೇಷ್ಮಾ, ಮೂತ್ರಾ, ಪಿತ್ತ, ಶುಕ್ಲ, ರಕ್ತಾ
ಐದು ಆಪ್ ತತ್ವದಿಂದ ಉತ್ಪನ್ನಾ
ಹಸಿವು, ನೀರಡಿಕಿ, ನಿದ್ರಿ, ಆಲಸ್ಯ, ಕಾಮಾ,
ಐದು ಅಗ್ನಿಯಿಂದ ರಚನಾ ರಚನಾ
ಪರಿವ, ಪಾರುವ, ಸುಳುವ, ಕೂಡುವ, ಅಗಲುವ
ಐದು ವಾಯುವಿನ ಗುಣಾ ಗುಣಾ
ರಾಗ, ದ್ವೇಷ, ಭಯಾ, ಲಜ್ಜಾ, ಮೋಹ
ಐದು ಆಕಾಶದಿಂದ ನಿರ್ಮಾಣಾ ನಿರ್ಮಾಣಾ
ಪಂಚ ತತ್ವದಿಂದ ಪಂಚವೀಸ ಗುಣಗಳು
ಛಿದ್ರ ಮಾಡಿ ಹೇಳಿದೆ ನಾನಾ ನಾನಾ
ಇದರ ಹಾಂಗ ಇನ್ನ ಪಂಚ ತತ್ವದಾದಿ
ಭೇದ ಗುಣಾ ಕೇಳರಿ ಖೂನಾ ಖೂನಾ
ಪೃಥ್ವಿಗೆ ಇಪ್ಪತ್ತೈದು ಗುಣಗಳು
ಅಪ್‌ರಿಗೆ ಇಪ್ಪತ್ ಕೇಳ ನೀನಾ ನೀನಾ
ಅಗ್ನಿಗೆ ಹದಿನೈದು ವಾಯುಕ ಹತ್ತಾ
ಆಕಾಶಕ ಐದು ಪ್ರಮಾಣಾ
ಒಟ್ಟಿಗೆ ಇಪ್ಪತ್ತೈದ ಗುಣಗಳು
ಪಿಂಡ ಬ್ರಹ್ಮಾಂಡದಿದ ನಿರ್ಮಾಣಾ
ಪಂಚಭೂತದ ಪ್ರಕೃತಿ ಕೇಳ ಪಾರ್ವತಿ
ಮಾಡಬ್ಯಾಡ ನೀನು ಅನುಮಾನಾ
ಪಂಚತತ್ವ ಒಂದಕ್ಕೊಂದ ತೊಡಕ ಬಿದ್ದ
ಮಂದ ಆಗುವ ಪಿಂಡದ ರಚನಾ
ಇದರ ಹಾಂಗ ಇನ್ನ ಪಂಚ ತತ್ವದಲ್ಲೆ
ಪಂಚ ಪ್ರಾಣ ಹೇಳುವೆ ಮುನ್ನಾ
ಪೃಥ್ವಿ ತತ್ವದಲ್ಲೆ ಪ್ರಾಣ ವಾಯು ಅದಾ
ಅಪ್ ತತ್ವದಲ್ಲೆ ಅಪಾನಾ
ಅಗ್ನಿ ತತ್ವದಲ್ಲೆ ವ್ಯಾನ ವಾಯು ಅದಾ
ಪಂಚ ಪ್ರಾಣ ನಿರ್ಮಾಣ ಹಿಂಗಾ
ಒಂದು ದಿವಸ ಕೈಲಾಸದಲ್ಲಿ ಶಿವ
ಶಕ್ತಿ ಕೂತಿದ್ರ ಆನಂದದೊಳಗ||೪||

ಪಂಚ ಜ್ಞಾನೇಂದ್ರಿಯ ಪಂಚ ಕರ್ಮೇಂದ್ರಿಯ
ದಶ ಇಂದ್ರಿಯ ಇರುವದು ಒಟ್ಟಾ
ಜ್ಞಾನದ ಇಂದ್ರಿಯಗಳ ಛಿದ್ರ ಹೇಳತೇನ
ಬ್ಯಾರೆ ಬ್ಯಾರೆ ಹಾಸಲ ಫೂಟಾ
ಕಿವಿ, ತ್ವಚಾ, ಕಣ್ಣ, ನಾಲಿಗಿ, ಘ್ರಾಣಾ
ಐದ ಜ್ಞಾನ ಇಂದ್ರಿಯ ಗುಟ್ಟಾ
ಕರ್ಣೇಂದ್ರಿಯಕ್ಕೆ ಭೂತ, ಆಕಾಶ
ಆದಿ ದೇವತಿಯ ಚೆಲ್ಲಾಟಾ
ಶಬ್ದ ವಿಷಯ ಅಕ್ಷರ ಅನಾಕ್ಷರ
ಎರಡ ಭೇದ ಇರುದು ಸ್ಪಷ್ಟಾ
ತ್ವಚೇಂದ್ರಿಯಕ್ಕೆ ವಾಯು ಭೂತಾತ್ಮ
ಚಂದ್ರನಾದಿ ದೈವತದಾಟಾ
ಸ್ಪರ್ಶದ ವಿಷಯ ಶೀತ, ಉಷ್ಣ, ಮೃದು
ಕಠಿಣ ಐದು ಭೇದ ತಿಳೀರಿಷ್ಟಾ
ನೇತ್ರ ವಿಷಯಕ್ಕ ಅಗ್ನಿ ಭೂತಾತ್ಮಾ
ಸೂರ್ಯ ದೈವತದಾಟಾ ಅಟಾ
ರೂಪ ವಿಷಯಕ್ಕೆ ಈ ನೇತ್ರ ಇಂದ್ರಿಯಕೆ
ಕೂತ ಕೇಳರಿ ಚಿತ್ತಿಟ್ಟಾ ಚಿತ್ತಿಟ್ಟಾ
ಜಿಹ್ವಾ ಇಂದ್ರಿಯಕೆ ಅಪ್‌ಭೂತ ಅಲ್ಲಿ
ವರುಣ ದೈತ್ಯನ ಉದ್ಘಾಟಾ ಉದ್ಘಾಟಾ
ರಸದ ವಿಷಯ ಈ ಜಿಂವ ಇಂದ್ರಿಯಕೆ
ಕೂತ ಕೇಳರಿ ಚಿತ್ತಿಟ್ಟಾ ಚಿತ್ತಿಟ್ಟಾ
ಸಾರ ವೇದಾಂತ ಛಿದ್ರ ಹೇಳತೇನ
ಸುಳ್ಳ ಅನ್ನಾವನ ಬಾಯಾಗ ಗೊರಟಾ
ಮಧುರ, ಆಮ್ಲ, ಖಾರ, ವಗುರು, ಕಹಿ
ಲವಣ, ಆರು ಭೇದ ಹುಟ್ಟು ತಾ
ಘ್ರಾಣ ಇಂದ್ರಿಯಗೆ ಪೃಥ್ವಿ ಭೂತ
ಅಶ್ವಿನಿ ದೈವತನ ಉದ್ಘಾಟಾ
ಗಂಧ ವಿಷಯ ಸುಗಂಧ ದುರ್ಗಂಧಾ
ಪಂಚ ಜ್ಞಾನೇಂದ್ರಿಯ ತಿಳಿರಿ ಹಿಂಗ
ಒಂದು ದಿವಸ ಕೈಲಾಸದಲ್ಲಿ ಶಿವ
ಶಕ್ತಿ ಕೂತಿದ್ರ ಆನಂದದೊಳಗ

ಪಂಚ ಕರ್ಮೇಂದ್ರಿಯ ಬಿಚ್ಚಿ ಹೇಳತೇನ
ಮುಚ್ಚಿದ ಮಾತ ಇವ ತಗಿಬಾರದು
ತಗಿಯದಿದ್ದರ ಉಳಿದ ಜನರಿಗೆಲ್ಲಾ
ಒಳಗಿನ ಭೇದ ಹ್ಯಾಂಗ ತಿಳಿಯುವದು
ವಾಕ್, ಪಾಣಿ, ಪಾದ, ಗುದಾ, ಗುಹ್ಯಾ
ಇಂದ್ರಿಯ ಹೊರ್ತೇನ ಇಲ್ಲ ಹೆಚ್ಚಿಂದು
ವಾಕಾ ಇಂದ್ರಿಯಕೆ ನಾಗ ವಾಯು
ಸರಸ್ವತಿ ದೈವತಾ ಇರುವುದು
ಸುವಾಕ್ಯ ದುರ್ವಾಕ್ಯ ಈ ಎರಡು ಪ್ರಕಾರ
ಇರುವುದು ಅದರ ವಿಷಯವದು
ಕೈ ಇಂದ್ರಿಯಕೆ ಕೂರ್ಮ ವಾಯು
ಇಂದ್ರನಾದಿ ದೈವತಾ ಪ್ರಸಿದ್ಧಾ
ಆದಾನ ಪ್ರದಾನ ಎರಡು ವಿಷಯ ಅಲ್ಲೇ
ಪಾದೇಂದ್ರಿಯ ಕೇಳ ಮುಂದಿನದು
ಕ್ರುಸುರ ವಾಯು ವಿಷ್ಣು ದೈವತಾ ಅಲ್ಲೆ
ಗಮನಾಗಮನ ಹೋಗ ಬರವುವದು
ಪಾಯವೀಂದ್ರಯಕೆ ದೇವದತ್ತವಾಯು
ಮೃತ್ಯು ದೈವತಾ ಹೆಚ್ಚಿಂದು
ಸರ್ಜನಾ ವಿಸರ್ಜನಾ ಈ ಎರಡು
ಪ್ರಕಾರ ಇರುವುದು ವಿಷಯದ್ದು
ಗುಹ್ಯೇಂದ್ರಿಯಕೆ ಧನಂಜಯ ವಾಯು
ಬ್ರಹ್ಮನಾದಿ ದೈವತಾ ಕೇಳ ಒಂದೊಂದು
ಆನಂದ ಆನಾನಂದ ಈ ಎರಡು
ಪ್ರಕಾರ ಇರುವುದು ವಿಷಯದು
ದಶವಾಯುಗಳ ಸ್ಥಾನ ಹೇಳತೇನ
ಇನ್ನೊಂದು ಹಾಡಿಗೆ ನಾ ತೆರೆದು
ಕವಿತ್ವದಲ್ಲಿ ಬುದ್ಧಿ ಕೊಟ್ಟ ಅಣ್ಣಾರಾವಜಿ
ಶಿಷ್ಯಾಗ ತಿಳಿಸ್ಯಾನ ಕವಿ ಬಾಳಗೋಪಾಳಗೆ.

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು