ಆದಿ ಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ವಿನಂತಿ
ಬಿಂದು ಕೂಡಿ ಪಿಂಡಾಗಿ ದೇಹದಲ್ಲಿ
ಹ್ಯಾಂಗ ಆಗತತಿ ಉತ್ಪತ್ತಿ ?

ಸಪ್ತಪಾತಾಳನೆಲ್ಲಾ ಸೂತ್ರದಿಂದ
ನಡಿಸಿದ ಆಟಾ ನಡಿಸಿದ ಆಟಾ
ಸ್ಥಾವರ ಜಂಗಮ ಕ್ರಿಮಿ ಕೀಟಕಾ
ಸಲವಿದಿರಿ ಆಹಾರವಿಟ್ಟಾ
ಪಾರ್ವತಿ ಮಾತಿಗೆ ಭೋಳ್ಯಾ ಶಂಕರ
ಮೆಚ್ಚಿ ಹೇಳಿದ ಪಿಂಡದ ಗುಟ್ಟಾ
ಸ್ತ್ರೀಯರ ಮುಟ್ಟಾದ ಚವತಾದಿವಸ
ಕಮಲ ಅರಳಿ ಇರುವದು ಫೂಟಾ
ಸತಿಪತಿ ಏಕಾಂತ ಕೂಡಿದರ
ರಾತ್ರಿ ವ್ಯಾಳೆದಲ್ಲಿ ಆ ಮೆಟ್ಟಾ
ಪುರುಷನ ಬಿಂದು ಬ್ರಹ್ಮ ಸ್ಥಾನದಿಂದ
ಕಮಲದೊಳಗೆ ಇಳಿವೋದು ನೇಟಾ
ಮೊದಲ ತಿಂಗಳಿಗೆ ಕಮಲದ ಒಳಗ
ಬಿಂದು ತುಂಬಿ ಇರುವುದು ಅಷ್ಟಾ
ಎರಡನೆ ತಿಂಗಳಿಗೆ ನೀರ ಆಗಿ ಅದ
ರಸಾ ಕೂಡಿ ಆಗುದು ಒಟ್ಟಾ
ಮೂರ ತಿಂಗಳಿಗೆ ಆಗುದು ರಕ್ತಾ
ನಾಲ್ಕನೆಯ ತಿಂಗಳಿಗೆ ಕೈಕಾಲ ಆಕಾರ ಹುಟ್ಟುತಾ
ಐದನೆಯ ತಿಂಗಳಿಗೆ ತೇಜ ಆಗುವದು ಪ್ರಖ್ಯಾತಾ
ಆರನೆಯ ತಿಂಗಳಿಗೆ ಪಂಚ ತತ್ವ ನಿಶ್ಚಿತಾ
ಏಳನೆಯ ತಿಂಗಳಿಗೆ ಸಪ್ತ ಧಾತು ಪ್ರಖ್ಯಾತಾ
ಎಂಟನೆಯ ತಿಂಗಳಿಗೆ ಅಷ್ಟಾಂಗ ವಿಪರಿತಾ

||ಏರು||

ಒಂಬತ್ತನೆ ತಿಂಗಳಿಗೆ ಉಗರ ರೋಮಗಳ
ಸರುವ ಶರೀರ ಆದೀತ ಶಿಸ್ತ
ಆದಿಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ವಿನಂತಿ ||೧ನೆಯ ಚೌಕ||

ನವಮಾಸ ನವದಿವಸ ತುಂಬುತಲೆ
ಧರಣಿ ಮ್ಯಾಗ ಬಿದ್ದಿತ ಕೂಸಾ
ತಾಯಿ ಉದರದಲ್ಲೆ ಮೋಹ ಚಕ್ರದಿಂದ
ಮಲಿಗೆ ಹಾಲ ಹೊಂಟೀತ ರಸಾ
ಸವ್ವಾ ಮಳಾ ಅಸ್ತಿ ಮಸ್ತಕ ಸುತ್ತಾ
ಪ್ರಮಾಣಕ ಇರುವುದು ರಾಸಾ
ಪಿಂಡದೊಳಗ ಅಳತಿ ಕೇಳರಿ
ಚಿತ್ತ ಇಟ್ಟ ನೀ ಸಾವಕಾಶಾ
ನಾದ ಬಿಂದು ಅಸ್ತಿ ತಂದೀ ಅಂಶದಿಂದ
ಹುಟ್ಟತಾವ ಕೇಳರಿ ಸರಸಾ
ತಾಯಿಯಿಂದ ಹುಟ್ಟುದು ಕೇಳರಿ
ಅಂಶ ರಕ್ತ ನಾಡಿ ಮಾಂಸಾ
ಕರ್ಣದಲ್ಲಿ ನಾಕ ಅಸ್ತಿ ಮೂಗಿನಲ್ಲಿ
ಮೂರ ಅಸ್ತಿ ಇರತಾವ ಖಾಸಾ
ಬಾಯಿ ಒಳಗಿನ ಅಸ್ತಿ ಕೇಳರಿ
ಶಾಸ್ತ್ರದಿಂದ ಅವ ಬತ್ತೀಸಾ
ಎರಡ ಅಸ್ತಿ ಇರತಾವ ಈ ತುಟಿಯಲ್ಲಿ
ಹದಿನೆಂಟ ಕಂಠಸ್ಥಾನ ಗರ್ಭದಲ್ಲಿ
ನೀವ ಕೇಳರಿ ಇನ್ನ ಮ್ಯಾಲಿ
ನಾಲವತ್ತೆರಡ ಎಲವ ಈ ಕರದಲ್ಲಿ
ಎರಡು ಮಗ್ಗಲಿಗೆ ಹದಿನಾರ ಕೀಲಿ
ಜೋಡಿಸಿ ಇಟ್ಟಂಗ ಬಂದೊ ಬಸ್ತಿ

||ಏರು||

ಇಪ್ಪತ್ತೆಂಟ ಎಲವ ಎದಿಯಲಿ
ಇರತಾವ ಹೇಳತಿನ ಕೇಳರಿ ಗಣತಿ
ಆದಿ ಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ವಿನಂತಿ||೨ನೆಯ ..||

ಪಶ್ಚಿಮ ದ್ವಾರಕ ಛಪ್ಪನ್ನ ಆಸ್ತಿ
ಇರತಾವ ಕೇಳರಿ ಸುಳ್ಳಲ್ಲಾ
ಅಠೆಚಾಳಿಸ ಈ ಚರಣಕ ಇರತಾವ
ಗರ್ಭ ಕಾಂಡದೊಳಗಿನ ಕುಶಲಾ
ಮುಖದ ಒಳಗ ಹದಿನಾರ ಅಸ್ತಿಗಳು
ಹೊಟ್ಟಿ ಒಳಗ ಇಪ್ಪತ್ತ ಕೀಲಾ
ವಿಶುದ್ಧ ಸ್ಥಾನಕ ಹದಿನೆಂಟ ಇರತಾವ
ಲೆಕ್ಕ ಮಾಡಿಕೋರಿ ಇನ್ನ ಮ್ಯಾಲಾ
ದ್ವಿದಳಕ ಹದಿಮೂರು ಅಸ್ತಿಗಳು
ಕೂತ ಕೇಳರಿ ದೈವ ಎಲ್ಲಾ
ಹದಿನಾರ ಸಂದಿ ದೇಹದ ಒಳಗ
ಇದರ ಅರ್ಥ ಪಂಡಿತ ಬಲ್ಲಾ
ಚವದಾ ಚಕ್ರ ಹಿಡದ ಬ್ರಹ್ಮ ಪೂಜಿ
ಅಲ್ಲೆ ನಡೆಯತದ ರಾತ್ರಿ ಹಗಲಾ
ಎಪ್ಪತ್ತೆರಡ ಕೋಟಿ ಜಪಾ ಆಗತಾವ
ಕೇಳಿರಿ ಬ್ರಹ್ಮ ರಂಧ್ರದ ಮ್ಯಾಲಾ

ಕೇಳ ತಮ್ಮಾ ಒಂಭತ್ತು ನವದ್ವಾರಾ
ಹತ್ತನದು ನಾಭಿ ಕಮಲ ತಿಳಿ ಶಾಯಿರಾ
ಶಾಸ್ತ್ರದಿಂದ ನೋಡ ಆಧಾರಾ
ಇನ್ನ ನಾಡೀದ ಕೇಳರಿ ಆಕಾರಾ
ನೆತ್ತಿ ಒಳಗ ಇರತಾವ ಮೂರಾ
ಅದಕ ಪುಟ ಒಡದಾವ ಎಪ್ಪತ್ತೆರಡ ಸಾವಿರಾ

 

||ಏರು||

ಮುನ್ನೂರಾ ಅರವತ್ತ ಹುರಿಗಳ ಬಿಗದ
ಬ್ರಹ್ಮ ಸ್ಥಾನಕ ಕಟ್ಟೇದ ಅಳತಿ
ಆದಿ ಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ವಿನಂತಿ||೩ನೆಯ ಚೌಕ||

ಅಂದ ಸ್ವಾದ ನೇತ್ರ ಪುರಿ ಅನ್ನುಹಂತಾ
ವಿಶುದ್ಧಿದಳಾ ತುಂಬಿ ಲಕ್ಷಣಕ
ಅವಟ ಪೀಠ ಗೋಲಾಟ ಸರಾಳ
ತ್ರಿಕೂಟಕ ಆ ರುದ್ರ ಘನವಾಟಕ
ಸಹಸ್ರದಳ ಇದರಂತೆ ತುಂಬಿಕ್ಯಾರಿ
ಕಾವಲ ಇಟ್ಟಾವ ನೇಮಕ ನಕ್ಕಿ
ಕರ್ರಗ ಕೆಂಪಗ ಕುಂಟ ಕುರುಡಾ
ಹುಟ್ಟುದು ಕೇಳರಿ ಕೌತುಕಾ
ಸತ್ಯ ವಚನ ಸಂಭೋಗ ಕೊಟ್ಟರ
ಕೆಂಪ ಪಿಂಡ ಆಗುದು ಲೆಕ್ಕಾ
ತಮೋಗುಣಹಂಕಾರ ಸಂಭೋಗ
ಕೊಟ್ಟರ ಕರ್ರಗ ಹುಟ್ಟುದು ಪಿಂಡಕ
ರಜೋಗುಣದಿಂದ ಕ್ರೀಡಾ ನಾಡಿದರ
ಸಾವಗರದ ಹುಟ್ಟುದು ಠೀಕಾ
ಮನಸ ಚಂಚಳಾ ಭೋಗ ಕೊಟ್ಟರ
ಹುಚ್ಚ ಮಳ್ಳ ಕೂಡಿತ ಅದಕಾ
ಪುರುಷನ ಬಿಂದು ಎರಡ ಪಾಲಾಗಿ
ಸ್ತ್ರೀಯರ ಬಿಂದು ಒಂದ ಪಾಲ ಅದರ
ಅಲ್ಲಿ ಗಂಡ ಹುಟ್ಟೀತ ಫಲಾ
ತಿಳಿ ಶ್ಯಾಯಿರಾ ಸುಳ್ಳಲ್ಲಾ
ಸ್ತ್ರೀಯರ ಬಿಂದು ಎರಡ ಪಾಲಾ
ಪುರುಷನ ಬಿಂದು ಒಂದ ಪಾಲಾ
ಅಲ್ಲಿ ಹೆಣ್ಣ ಹುಟ್ಟೀತ ಧರಿ ಮ್ಯಾಲಾ
ಸತಿಪತಿ ಬಿಂದು ಸಮಾನ ಆದ ಮ್ಯಾಲಾ
ನಪುಂಸಕ ಹುಟ್ಟಿತ ಸುಳ್ಳಲ್ಲಾ
ಗರ್ಭ ಕಾಂಡ ನೋಡಿದವನೇ ಬಲ್ಲಾ

||ಏರು||

ಸಂಗ ಆಗಿ ಅಂಗಾತ ಮಲಗಿದರ
ಅವಳಿ ಜವಳಿ ಹುಟ್ಟುದು ನಿಶ್ಚಿತಿ
ಆದಿ ಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ವಿನಂತಿ||೪ನೆಯ ಚೌಕ||

ಕಣ್ಣ ಮುಚ್ಚಿ ಸ್ತ್ರೀಸಂಗ ಮಾಡಿದರ
ಕುರುಡ ಪಿಂಡ ಇರುವುದು ಒಳಗ
ನಿದ್ದಿಗಣ್ಣಿನ್ಯಾಗ ಭೋಗ ಕೊಟ್ಟರ
ಕಿವುಡ ಆಗಿ ಬರುವದು ಬ್ಯಾಗ
ಗರ್ಭ ಕಾಲಕ ಮನಿ ಮನಿ ತಿರಗಿದರ
ಹೆಳವ ಆಗಿ ಬರುವದು ಹಿಂಗ
ಮುಟ್ಟಾದ ಕಾಲಕ ಪಿಂಡ ನಿಂತರ
ಗಿರಣಿ ಹತ್ತೂದು ದೇಹದ ಒಳಗ
ಮೊದಲ ತಾಸಿನ್ಯಾಗ ಪಿಂಡ ನಿಂತರ
ಸವ್ವಾ ನೂರು ವರುಷ ಆಯುಷ್ಯಾ ಅವಗ.
ಎರಡನಯ ತಾಸಿಗೆ ನೂರ ವರುಷಾ
ಮೂರನೆಯ ತಾಸಿಗೆ ತೊಂಬತ್ತಾ
ನಾಲ್ಕನೆಯ ತಾಸಿಗೆ ಎಂಬತ್ತಾ
ಐದನೆಯ ತಾಸಿಗೆ ಎಪ್ಪತ್ತ ತಿಳಿರಿ ಹಿಂಗ
ಆರನೆಯ ತಾಸಿಗೆ ಅರವತ್ತಾ
ಏಳನೆಯ ತಾಸಿಗೆ ಐವತ್ತ ವರುಷಾ
ಎಂಟನೆಯ ತಾಸಿಗೆ ನಾಲ್ವತ್ತು ವರುಷಾ
ಒಂಬತ್ತನೆಯ ತಾಸಿಗೆ ಮೂವತ್ತು ವರುಷಾ
ಹತ್ತನೆಯ ತಾಸಿಗೆ ಇಪ್ಪತ್ತು ವರುಷಾ
ಹನ್ನೊಂದ ತಾಸಿಗೆ ಹತ್ತು ವರುಷಾ
ಹನ್ನೆರಡನೆಯ ತಾಸಿಗೆ ಹುಟ್ಟುತ್ತಲೇ ಸಾವಾ
ಗರ್ಭ ಕಾಂಡದೊಳಗಿಂದ ತಗದ ರಸಾ.

||ಏರು||

ಪ್ರತಿಪದಾ ದಿವಸ ಪಿಂಡ ನಿಂತರ
ಪಂಡಿತ ಹುಟ್ಯಾನ ಖಚಿತಿ
ಆದಿ ಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ಏನಂತಿ ||೫ನೆಯ ಚೌಕ||

ದ್ವಿತೀಯಾ ದಿವಸ ಪಿಂಡಾ ನಿಂತರ
ಬುದ್ಧಿಶೀಲ ಹುಟ್ಯಾನ ಪುತ್ರಾ
ತೃತೀಯಾ ದಿವಸ ಗರ್ಭ ನಿಂತರ
ತುಡಗ ಆಗಿ ಹುಟ್ಟಿದ ಪೂರಾ
ಚವತಿ ದಿವಸಕ ನಿಂತ ಪಿಂಡಕ
ಮಂದ ಹುಟ್ಟ ತಾನ ಹಂಕಾರಾ
ಪಂಚಮಿ ದಿವಸ ನಿಂತ ಪಿಂಡ ತಾ
ಮುಂದ ಹುಟ್ಟಿ ಮಾಡ್ಯಾನ ಪರೋಪಕಾರಾ
ಷಷ್ಠಿ ದಿವಸ ಪಿಂಡ ನಿಂತರ
ಸತ್ವದಲಿ ಆದಾನ ಧೀರಾ ಗಂಭೀರಾ
ಸಪ್ತಮಿ ದಿವಸ ನಿಂತ ಪಿಂಡ
ಮುಂದೆ ಬಿಕ್ಕೆ ಬೇಡುದು ಕರಾರಾ
ಅಷ್ಟಮಿಗೆ ದರಿದ್ರ ನವಮಿಗೆ ಭೋಳ್ಯಾ
ಹುಟ್ಯಾನ ತಿಳಿ ಶ್ಯಾಯೀರಾ ಹಿಂಗಾ
ದಶಮಿ ದಿವಸ ಪಿಂಡ ನಿಂತರ
ಭಕ್ತಿವಾನ ಆದಾನ ಚೋರಾ
ಏಕಾದಶಿ ಪಿಂಡ ಆದಾನ ಗುಣವಾನಾ
ದ್ವಾದಸಿ ಚತುರ ಜ್ಞಾನಾ ಸುಜ್ಞಾನಾ
ತ್ರಯೋದಶಿ ಸೂರ ಮರ್ಧನಾ
ಚತುರ್ದಶಿ ಜಗಮೈತ್ರವನಾ
ಹುಣವಿ ಅಮವಾಸಿ ನಿಂತರ ಶೂರತನಾ
ಕವಿ ಲಾಘದಿ ತಿಳಿರಿನ್ನಾ ಪೂರಾ
ವಸ್ತಾದ ರಾವಜಿ ದೊರತಾನ ರತ್ನಾ
ಈ ಹಾಡಿನ ಮ್ಯಾಲಿಂದ ನಿವಾಳಸಿ
ಒಗಿಯಬೇಕ ನೂರ ಹಾಡುಗೊಳನಾ.

||ಏರು||

ಬಾಳ ಗೋಪಾಳ ಬಾಗೇವಾಡಿಯಲ್ಲಿ
ಜ್ಞಾನ ತುಂಬಿ ಆಗೇತಿ ಚಡತಿ
ಆದಿ ಶಕ್ತಿ ಪಾರ್ವತಿ ಸಾಂಬಗ
ಮಾಡಿ ಕೇಳತಾಳ ವಿನಂತಿ ||೬ನೆಯ ಚೌಕ||

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು