ಮನುಷ್ಯನ ಮೂಲ ಸಂಸ್ಕೃತಿಯ ಭಂಡಾರವಾದ ಜಾನಪದವು ಬದುಕಿನ ವಿವಿಧ ಮುಖಗಳನ್ನು ಅದರ ಸಹಜ ಸ್ವರೂಪದಲ್ಲಿ ದರ್ಶನ ಮಾಡಿಸುವ ವ್ಯಾಪಕ ಕ್ಷೇತ್ರ. ಆಧುನಿಕ ಸಂದರ್ಭದಲ್ಲಿ ಆವಿಷ್ಕಾರಗೊಂಡಿರುವ ಎಲ್ಲಾ ವೈಜ್ಞಾನಿಕ ಸೃಷ್ಟಿಗಳ, ವಿವಿಧ ದೃಷ್ಟಿಕೋನದ ವಿಚಾರಗಳ ಮೂಲ ಹೊಳಹು ಜಾನಪದದಿಂದಲೇ ಬಂದದ್ದು. ಮನುಷ್ಯನ ಹುಟ್ಟಿನಿಂದ ಮೊದಲುಗೊಂಡು ಸಾವಿನವರೆಗೂ ತಬ್ಬಿ ಹಿಡಿದಿರುವ ಜನಪದ ಸಾಹಿತ್ಯವು ಅತ್ಯಂತ ಶ್ರೀಮಂತವಾದುದು ಮತ್ತು ವ್ಯಾಪಕವಾದುದು. ಕರ್ನಾಟಕವು ಇಂತಹ ಅಮೂಲ್ಯವಾದ ಜಾನಪದ ಸಂಪತ್ತಿನ ಆಗರವಾಗಿದೆ.

ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಮೂಲ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದು, ಗ್ರಾಮೀಣ ಸಾಹಿತ್ಯ, ಸಂಸ್ಕೃತಿ, ಕಲೆಗಳಂತಹ ಸೃಜನಶೀಲತೆಗೆ ಧಕ್ಕೆ ಉಂಟಾಗುತ್ತಿದೆ. ಈ ಸಂದಿಗ್ಧ ಕಾಲಘಟ್ಟದಲ್ಲಿ ಸಮುದಾಯಕ್ಕೆ ಸ್ಥಳೀಯ ಜ್ಞಾನ ಸಂಪತ್ತಿನ ಮಹತ್ವವನ್ನು ಮನವರಿಕೆ ಮಾಡಿಕೊಡಲು ಜಾನಪದ ಅಧ್ಯಯನ ಅಗತ್ಯವಾಗಿದೆ.

ಸಮೃದ್ಧ-ಸಮಗ್ರ ಜನಪದ ಸಾಹಿತ್ಯವನ್ನು ಕ್ರೋಢೀಕರಿಸಿ ಒಂದೆಡೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ವಿದ್ವಾಂಸರಾದ ಪ್ರೊ. ಹಿ.ಶಿ. ರಾಮಚಂದ್ರೇಗೌಡರವರ ಅಧ್ಯಕ್ಷತೆಯಲ್ಲಿ ಡಾ. ಸೋಮಶೇಖರ ಇಮ್ರಾಪುರ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಬಿ.ಎ. ವಿವೇಕ ರೈ, ಡಾ. ತೀ.ನಂ. ಶಂಕರನಾರಾಯಣ, ಡಾ॥ಸಿದ್ಧಲಿಂಗಯ್ಯ, ಡಾ. ಕೆ. ಚಿನ್ನಪ್ಪಗೌಡ, ಶ್ರೀಮತಿ ಶಾಂತಿನಾಯಕ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು ಮತ್ತು ಡಾ. ಎಂ.ಎಸ್. ಲಠ್ಠೆ (ದಿವಂಗತ) ಹಾಗೂ ಶ್ರೀ ಕೆರೆಮನೆ ಶಂಭು ಹೆಗಡೆ (ದಿವಂಗತ) ಅವರನ್ನೊಳಗೊಂಡ ಸಂಪಾದಕ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಸಮಿತಿಯ ನೇತೃತ್ವದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದೊಂದಿಗೆ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣಾ ಯೋಜನೆಯನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ.

ಈ ಯೋಜನೆಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಹಾಗೂ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಗಿತ್ತು. ಇವರೆಲ್ಲರ ಶ್ರಮ ಮತ್ತು ಸಹಕಾರ ಹೆಚ್ಚಿನದು, ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಈ ಯೋಜನೆಯ ಮುದ್ರಣಕ್ಕೆ ಸಹಕರಿಸಿದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿಗಳೂ ಈ ಯೋಜನೆಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರೂ ಆದ ಶ್ರೀ ಬಿ.ಆರ್. ಜಯರಾಮರಾಜೇ ಅರಸ್ ಅವರಿಗೆ, ಆಯಾ ಸಂಪುಟಗಳ ಸಂಪಾದಕರು, ಪರಿಶೀಲಕರು ಮತ್ತು ಸಂಪುಟಗಳನ್ನು ಮುದ್ರಣಕ್ಕೆ ಸಿದ್ಧಪಡಿಸಿದ ಯೋಜನೆಯ ಸಂಯೋಜಕರಾದ ಡಾ. ಚಕ್ಕರೆ ಶಿವಶಂಕರ್ ಹಾಗೂ
ಡಾ. ಜಿ.ಎಸ್. ಭಟ್ ಅವರ ಸಲಹೆ-ಸಹಕಾರ ಅಮೂಲ್ಯವಾದುದು. ಹಾಗೆಯೇ ಈ
ಸಂಪುಟಗಳು ಹೊರಬರಲು ನೆರವಾದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಗೊ.ರು. ಚನ್ನಬಸಪ್ಪ ಮತ್ತು ರಿಜಿಸ್ಟ್ರಾರ್ ಡಾ. ಎಸ್. ಪ್ರಸಾದಸ್ವಾಮಿ ಹಾಗೂ ಸಿಬ್ಬಂದಿಗೆ ಮತ್ತು ಮುಖಪುಟ ವಿನ್ಯಾಸ ರೂಪಿಸಿಕೊಟ್ಟ ಕಲಾವಿದರಾದ ಶ್ರೀ ಪ.ಸ. ಕುಮಾರ್ ಅವರಿಗೆ ನನ್ನ ನೆನಕೆಗಳು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸಹಕಾರದೊಂದಿಗೆ ಹೊರತರುತ್ತಿರುವ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳನ್ನು ಕನ್ನಡ ಜನತೆ ಪ್ರೀತಿಯಿಂದ ಸ್ವೀಕರಿಸುತ್ತಾರೆಂದು ನಾನು ನಂಬಿದ್ದೇನೆ.

(ಮನು ಬಳಿಗಾರ್)
ನಿರ್ದೇಶಕರು