ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವಾರು ಪ್ರಕಟಣ ಯೋಜನೆಗಳನ್ನು ರೂಪಿಸಿಕೊಂಡು ಕಾರ‍್ಯರೂಪಕ್ಕೆ ತರುತ್ತಿದೆ. ಕರ್ನಾಟಕ ಸರ್ಕಾರವು ೨೦೦೭-೦೮ರ ಆಯವ್ಯಯದಲ್ಲಿ ಘೋಷಿಸಿದಂತೆ ಪ್ರಸಕ್ತ ವರ್ಷ ಡಾ|| ಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್. ನರಸಿಂಹಸ್ವಾಮಿ, ಹುಯಿಲಗೋಳ ನಾರಾಯಣರಾಯ, ನಾಡೋಜ ಚೆನ್ನವೀರ ಕಣವಿ ಹಾಗೂ ಡಿ.ಎಸ್. ಕರ್ಕಿಯವರ ಸಮಗ್ರ ಸಾಹಿತ್ಯ, ಹೀಗೆ ಹಲವಾರು ಪ್ರಕಟಣೆಗಳನ್ನು ಹೊರತರಲಾಗುತ್ತಿದೆ. ಒಬ್ಬ ಲೇಖಕರ ಸಮಗ್ರ ಅಧ್ಯಯನ ಮಾಡಲು ಅನುಕೂಲವಾಗಬೇಕೆಂಬುದು ಈ ಯೋಜನೆಯ ಆಶಯ.

ಈ ಯೋಜನೆಯಡಿ ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಸಾಹಿತ್ಯವನ್ನು ಒಂಬತ್ತು ಸಂಪುಟಗಳಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಡಾ|| ಜಿ.ಎಸ್. ಶಿವರುದ್ರಪ್ಪನವರು ಮೂಲತಃ ಕವಿ; ಇವರು ಹಲವಾರು ಕವನ ಸಂಕಲನಗಳನ್ನು ರಚಿಸಿರುವುದಲ್ಲದೆ, ವಿಮರ್ಶಕರಾಗಿ, ಕಾವ್ಯಮೀಮಾಂಸಕರಾಗಿ ಸುಮಾರು ಇಪ್ಪತ್ತೇಳಕ್ಕೂ ಹೆಚ್ಚು ಗದ್ಯಕೃತಿಗಳನ್ನು, ಹೀಗೆ ಒಟ್ಟಾರೆ ೩೮ ಕೃತಿಗಳನ್ನು ರಚಿಸಿದ್ದಾರೆ. ‘ದಾರಿ ನೂರಾರಿವೆ ಬೆಳಕಿನರಮನೆಗೆ’ ಎಂದು ತಮ್ಮ ಕಾವ್ಯಪ್ರತಿಭೆಯಿಂದ ಬೆಳಕಿನರಮನೆಯನ್ನು ಸಹೃದಯರಿಗೆ ತೆರೆದವರು. ಡಾ|| ಜಿ.ಎಸ್. ಶಿವರುದ್ರಪ್ಪನವರ ಕೃತಿಗಳು ಆಳವಾದ ಪರಂಪರೆಯ ಪ್ರಜ್ಞೆ ಮತ್ತು ವೈಚಾರಿಕ ದೃಷ್ಟಿ ಮೇಳೈಸಿದ ರಸಪಾಕ.

ಹೀಗೆ ಚಿಂತಕ-ಕವಿಯಾಗಿ, ಪ್ರತಿಭೆ ಪಾಂಡಿತ್ಯದಿಂದ ಪ್ರಸಿದ್ಧಿ ಪಡೆದ ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಸಾಹಿತ್ಯವನ್ನು ಇಲಾಖೆಯಿಂದ ಹೊರತರಲು ಒಪ್ಪಿಗೆ ನೀಡಿದ ಡಾ|| ಜಿ.ಎಸ್. ಶಿವರುದ್ರಪ್ಪನವರಿಗೆ, ಈ ಸಂಪುಟಗಳ ಕರಡಚ್ಚನ್ನು ತಿದ್ದಿದ ಶ್ರೀ ಕೆ.ಆರ್. ಗಣೇಶ್ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ ಅವರ ಸಮಗ್ರ ಕೃತಿಗಳ ಪ್ರಕಟಣೆಯನ್ನು ಹೊರತರಲು ಸಹಕರಿಸಿದ ಶ್ರೀ ಎಚ್.ಶಂಕರಪ್ಪ, ಜಂಟಿ ನಿರ್ದೇಶಕರು, (ಸುವರ್ಣ ಕರ್ನಾಟಕ), ವೈ.ಎಸ್. ವಿಜಯಲಕ್ಷಿ , ಸಹಾಯಕ ನಿರ್ದೇಶಕರು, ಪ್ರಕಟಣೆ ಶಾಖೆ ಹಾಗೂ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳು. ಈ ಸಂಪುಟವನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಲಕ್ಷಿ  ಮುದ್ರಣಾಲಯದ ಮಾಲೀಕರಾದ ಶ್ರೀ ಅಶೋಕ್‌ಕುಮಾರ್ ಮತ್ತು ಸಿಬ್ಬಂದಿ ವರ್ಗದವರಿಗೆ ನೆನಕೆಗಳು.

ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯವಾಗಿದೆ. ಪ್ರಸ್ತುತ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಾಹಿತ್ಯಾಸಕ್ತರು ಪ್ರೀತಿಯಿಂದ ಸ್ವಾಗತಿಸುತ್ತಾರೆಂದು ನಂಬಿದ್ದೇವೆ.

ಮನು ಬಳಿಗಾರ್
ನಿರ್ದೇಶಕರು