ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವಾರು ಪ್ರಕಟಣ ಯೋಜನೆಗಳನ್ನು ರೂಪಿಸಿಕೊಂಡು ಕಾರ‍್ಯರೂಪಕ್ಕೆ ತರುತ್ತಿದೆ. ಕರ್ನಾಟಕ ಸರ್ಕಾರವು ೨೦೦೭-೦೮ರ ಆಯವ್ಯಯದಲ್ಲಿ ಘೋಷಿಸಿದಂತೆ ಪ್ರಸಕ್ತ ವರ್ಷ ಡಾ|| ಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್. ನರಸಿಂಹಸ್ವಾಮಿ, ಹುಯಿಲಗೋಳ ನಾರಾಯಣರಾಯ, ನಾಡೋಜ ಚೆನ್ನವೀರ ಕಣವಿ ಹಾಗೂ ಡಿ.ಎಸ್. ಕರ್ಕಿಯವರ ಸಮಗ್ರ ಸಾಹಿತ್ಯ, ಹೀಗೆ ಹಲವಾರು ಪ್ರಕಟಣೆಗಳನ್ನು ಹೊರತರಲಾಗುತ್ತಿದೆ. ಒಬ್ಬ ಲೇಖಕರ ಸಮಗ್ರ ಅಧ್ಯಯನ ಮಾಡಲು ಅನುಕೂಲವಾಗಬೇಕೆಂಬುದು ಈ ಯೋಜನೆಯ ಆಶಯ.

ಈ ಯೋಜನೆಯಡಿ ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಸಾಹಿತ್ಯವನ್ನು ಒಂಬತ್ತು ಸಂಪುಟಗಳಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಡಾ|| ಜಿ.ಎಸ್. ಶಿವರುದ್ರಪ್ಪನವರು ಮೂಲತಃ ಕವಿ; ಇವರು ಹಲವಾರು ಕವನ ಸಂಕಲನಗಳನ್ನು ರಚಿಸಿರುವುದಲ್ಲದೆ, ವಿಮರ್ಶಕರಾಗಿ, ಕಾವ್ಯಮೀಮಾಂಸಕರಾಗಿ ಸುಮಾರು ಇಪ್ಪತ್ತೇಳಕ್ಕೂ ಹೆಚ್ಚು ಗದ್ಯಕೃತಿಗಳನ್ನು, ಹೀಗೆ ಒಟ್ಟಾರೆ ೩೮ ಕೃತಿಗಳನ್ನು ರಚಿಸಿದ್ದಾರೆ. ‘ದಾರಿ ನೂರಾರಿವೆ ಬೆಳಕಿನರಮನೆಗೆ’ ಎಂದು ತಮ್ಮ ಕಾವ್ಯಪ್ರತಿಭೆಯಿಂದ ಬೆಳಕಿನರಮನೆಯನ್ನು ಸಹೃದಯರಿಗೆ ತೆರೆದವರು. ಡಾ|| ಜಿ.ಎಸ್. ಶಿವರುದ್ರಪ್ಪನವರ ಕೃತಿಗಳು ಆಳವಾದ ಪರಂಪರೆಯ ಪ್ರಜ್ಞೆ ಮತ್ತು ವೈಚಾರಿಕ ದೃಷ್ಟಿ ಮೇಳೈಸಿದ ರಸಪಾಕ.

ಹೀಗೆ ಚಿಂತಕ-ಕವಿಯಾಗಿ, ಪ್ರತಿಭೆ ಪಾಂಡಿತ್ಯದಿಂದ ಪ್ರಸಿದ್ಧಿ ಪಡೆದ ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಸಾಹಿತ್ಯವನ್ನು ಇಲಾಖೆಯಿಂದ ಹೊರತರಲು ಒಪ್ಪಿಗೆ ನೀಡಿದ ಡಾ|| ಜಿ.ಎಸ್. ಶಿವರುದ್ರಪ್ಪನವರಿಗೆ, ಈ ಸಂಪುಟಗಳ ಕರಡಚ್ಚನ್ನು ತಿದ್ದಿದ ಶ್ರೀ ಕೆ.ಆರ್. ಗಣೇಶ್ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ ಅವರ ಸಮಗ್ರ ಕೃತಿಗಳ ಪ್ರಕಟಣೆಯನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸುವರ್ಣ ಕರ್ನಾಟಕ) ವೈ.ಎಸ್. ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು, ಪ್ರಕಟಣೆ ಶಾಖೆ ಹಾಗೂ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳು. ಈ ಸಂಪುಟವನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಲಕ್ಷ್ಮೀ ಮುದ್ರಣಾಲಯದ ಮಾಲೀಕರಾದ ಶ್ರೀ ಅಶೋಕ್‌ಕುಮಾರ್ ಮತ್ತು ಸಿಬ್ಬಂದಿ ವರ್ಗದವರಿಗೆ ನೆನಕೆಗಳು.

ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯವಾಗಿದೆ. ಪ್ರಸ್ತುತ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಾಹಿತ್ಯಾಸಕ್ತರು ಪ್ರೀತಿಯಿಂದ ಸ್ವಾಗತಿಸುತ್ತಾರೆಂದು ನಂಬಿದ್ದೇವೆ.

-ಮನು ಬಳಿಗಾರ್, ನಿರ್ದೇಶಕರು
೨೦೦೯


ಐದನೆಯ ಮುದ್ರಣಕ್ಕೆ ನನ್ನ ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ. ಈ ಸಮಗ್ರ ಕಾವ್ಯ ಸಂಪುಟವು ಈವರೆಗಿನ ನನ್ನ ಹದಿನಾಲ್ಕು ಕವನ ಸಂಗ್ರಹಗಳನ್ನು ಒಳಗೊಳ್ಳುತ್ತದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಎಚ್. ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರಿಗೆ ಮತ್ತು ಈ ಸಂಪುಟವನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ. ಕೆ.ಆರ್. ಗಣೇಶ್ ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

-ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯