ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಮೂಲ ಸಂಸ್ಕೃತಿಯ ಮೇಲೆ ಧಾಳಿ ಮಾಡುತ್ತಿವೆ. ಗ್ರಾಮೀಣ ಸಾಹಿತ್ಯ, ಸಂಸ್ಕೃತಿ, ಕಲೆಗಳಂತಹ ಸೃಜನಶೀಲತೆಗೆ ಧಕ್ಕೆ ಉಂಟಾಗಿದೆ. ಈ ಸಂದಿಗ್ಧ ಕಾಲಘಟ್ಟದಲ್ಲಿ ವಿಸ್ಮೃತಿಗೆ ಒಳಗಾಗುತ್ತಿರುವ ಸಮುದಾಯಕ್ಕೆ ಸ್ಥಳೀಯ ಜ್ಞಾನ ಸಂಪತ್ತಿನ ಮಹತ್ವವನ್ನು ಮನವರಿಕೆ ಮಾಡಿಕೊಡಲು ಜಾನಪದವೇ ಮೂಲ ಆಕರವಾಗಿದೆ. ಈ ದಿಸೆಯಲ್ಲಿ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣೆಯು ಅತ್ಯಂತ ಮಹತ್ವದ ಯೋಜನೆಯಾಗಿದೆ.

ಸ್ವಾತಂತ್ಯ್ರ ಪೂರ್ವ ಕಾಲದಿಂದಲೂ ಅನೇಕ ಪ್ರಾತಃಸ್ಮರಣೀಯರು ಜನಪದ ಮತ್ತು ಯಕ್ಷಗಾನ ಸಾಹಿತ್ಯದ ಪ್ರಕಟಣೆಗಳನ್ನು ಹೊರತಂದಿದ್ದಾರೆ. ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು, ಖಾಸಗಿ ಪ್ರಕಾಶಕರು, ಆಸಕ್ತ ಜಾನಪದ ವಿದ್ವಾಂಸರು ಬಿಡಿಬಿಡಿಯಾಗಿ ಪ್ರಕಟಿಸಿರುತ್ತಾರೆ. ಇವರನ್ನೆಲ್ಲಾ ಈ ಹೊತ್ತಿನಲ್ಲಿ ನೆನೆಯುತ್ತಾ, ಸಮೃದ್ಧ ಜನಪದ ಸಾಹಿತ್ಯವನ್ನು ಕ್ರೋಢೀಕರಿಸಿ, ಒಂದೆಡೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣೆಯು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿತು. ಈ ಯೋಜನೆಯನ್ನು ಕಾರ್ಯರೂಪಕ್ಕಿಳಿಸಲು ಜಾನಪದ ವಿದ್ವಾಂಸರಾದ ಪ್ರೊ. ಹಿ.ಶಿ. ರಾಮಚಂದ್ರೇಗೌಡನವರ ಅಧ್ಯಕ್ಷತೆಯಲ್ಲಿ ಡಾ. ಸೋಮಶೇಖರ ಇಮ್ರಾಪುರ, ಡಾ. ಎಂ. ಎಸ್. ಲಠ್ಠೆ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ವಿವೇಕ ರೈ, ಡಾ. ತೀ. ನಂ. ಶಂಕರನಾರಾಯಣ, ಡಾ. ಸಿದ್ಧಲಿಂಗಯ್ಯ, ಶ್ರೀ ಕೆರೆಮನೆ ಶಂಭು ಹೆಗಡೆ, ಡಾ. ಕೆ. ಚಿನ್ನಪ್ಪಗೌಡ, ಶ್ರೀಮತಿ ಶಾಂತಿನಾಯಕ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರನ್ನೊಳಗೊಂಡ ಸಂಪಾದಕ ಸಮಿತಿಯನ್ನು ರಚಿಸಲಾಯಿತು. ಈ ಯೋಜನೆಯ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಞತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲೆಕ್ಕಪತ್ರಾಧಿಕಾರಿಗಳು ಸದಸ್ಯರಾಗಿಯೂ, ಜಂಟಿ ನಿರ್ದೇಶಕರಾದ ಶ್ರೀ ಕಾ.ತ. ಚಿಕ್ಕಣ್ಣ ಅವರನ್ನು ಸಂಚಾಲರಾಗಿರುವಂತೆ ಸಮಿತಿಯನ್ನು ರಚಿಸಲಾಯಿತು.

ಈ ಬೃಹತ್ ಯೋಜನೆ ಕಾರ್ಯರೂಪಕ್ಕಿಳಿಸಲು ಸಂಪಾದಕ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರ ಶ್ರಮ ಮತ್ತು ಸಹಕಾರ ಹೆಚ್ಚಿನದು. ಆಯಾ ಸಂಪುಟಗಳ ಸಂಪಾದಕರು, ಪರಿಶೀಲಕರು ಮತ್ತು ಸಂಪುಟಗಳನ್ನು ಮುದ್ರಣಕ್ಕೆ ಅನುಗೊಳಿಸಿದ ಯೋಜನೆಯ ಸಂಯೋಜಕರಾದ ಡಾ. ಚಕ್ಕರೆ ಶಿವಶಂಕರ್ ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಶ್ರದ್ಧೆ ಸಹಕಾರಗಳು ಅಮೂಲ್ಯವಾದುವು. ಈ ಎಲ್ಲ ಮಹನೀಯರಿಗೆ ಇಲಾಖೆಯ ಕೃತಜ್ಞತೆಗಳು ಸಲ್ಲುತ್ತವೆ. ಹಾಗೆಯೇ ಈ ಸಂಪುಟಗಳ ಮುಖಪುಟ ವಿನ್ಯಾಸ ರೂಪಿಸಿಕೊಟ್ಟ ಕಲಾವಿದ ಶ್ರೀ ಪ.ಸ. ಕುಮಾರ್ ಮತ್ತು ಅಕಾಡೆಮಿ ರಿಜಿಸ್ಟ್ರಾರ್ ಶ್ರೀ ಎಂ. ಮುನಿರಾಜು ಹಾಗೂ ಸಿಬ್ಬಂದಿಗೆ ನನ್ನ ನೆನಕೆಗಳು.

ಈ ಯೋಜನೆಯನ್ನು ಆಗುಮಾಡಿದ ಇಲಾಖಾ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಉಷಾ ಗಣೇಶ್ ಮತ್ತು ಈಗಿನ ಇಲಾಖಾ ಕಾರ್ಯದರ್ಶಿಗಳಾದ ಶ್ರೀ ಐ.ಎಂ. ವಿಠ್ಠಲಮೂರ್ತಿ ಅವರಿಗೆ ಇಲಾಖೆಯ ವಂದನೆಗಳು. ಈ ಸಂಪುಟಗಳನ್ನು ಮುದ್ರಿಸಿಕೊಟ್ಟ ರಾಜಾ ಪ್ರಿಂಟರ್ಸ್‌ರವರಿಗೆ ನಮ್ಮ ಧನ್ಯವಾದ

ಸುವರ್ಣ ಕರ್ನಾಟಕದ ವರ್ಷದ ಸಂದರ್ಭದಲ್ಲಿ ನಿರ್ದೇಶನಾಲಯ ಹೊರತರುತ್ತಿರುವ ಈ ಸಂಪುಟಗಳನ್ನು ಕನ್ನಡ ಜನತೆ ಪ್ರೀತಿಯಿಂದ ಸ್ವೀಕರಿಸುತ್ತಾರೆಂದು ನಾನು ನಂಬಿದ್ದೇನೆ.

(ಕೆ.ಆರ್. ನಿರಂಜನ್)
ಆಯುಕ್ತರು