“ಅಕ್ಕ ಕುಂಕುಮದಕ್ಕ” ಕುಂದನಾಡಿನ ಜನಪದ ಹಾಡುಗಳ ಸಂಕಲನವನ್ನು ಸಂಪಾದಿಸಿದ ಶ್ರೀಮತಿ ಯು.ವರಮಹಾಲಕ್ಷ್ಮೀ ಹೊಳ್ಳೂರು ಕುಂದಗನ್ನಡದ ಸವಿ ಉಂಡವರು. ಉಂಡು ಕಂಡವರು. ಈ ಕೃತಿಯ ಮೂಲಕ ಇತರರಿಗೂ ಉಣ ಬಡಿಸುವವರು.  ಅವರು ಸಂಗ್ರಹಿಸಿದ ಹಾಡುಗಳು ಸಾವಿರಕ್ಕೂ ಮಿಕ್ಕದವು. ಇಲ್ಲಿರುವುದು ನೂರಾರು ಮಾತ್ರ.

ಹೆಣ್ಣಿನ ಕಣ್ಣಿಗೆ ಕಾಣುವುದು ಭಾವನಾ ಪ್ರಪಂಚ. ಅದರ ಹೊರತಾಗಿಯೂ ಹೊರ ಜಗತ್ತಿನಲ್ಲಿರುವ ಕಾಠಿಣ್ಯ, ಕ್ರೌರ್ಯ, ಅಹಮಿಕೆ ನಿತ್ಯ ಸತ್ಯವಾದರೂ ಒಂದರ ಮೇಲೆ ಇನ್ನೊಂದು “ವಿಜಯ” ಸಾಧಿಸಬೇಕೆಂಬ ಹಠವಿಲ್ಲದ ಮಧುರ ಸಾಮರಸ್ಯ, ಸುಖದ ಬದುಕಿಗೆ ಅತ್ಯವಶ್ಯ.

“ಜಯ-ವಿಜಯ”ರು ಗರ್ಭಗುಡಿಯ ಹೊರಗೆ ದ್ವಾರಪಾಲಕರಾಗಿ ಇರುವಾಗಲೇ ಒಳಗುಡಿಯಲ್ಲಿ ಉಮಾ-ಮಹೇಶ್ವರ, ಲಕ್ಷ್ಮೀನಾರಾಯಣ, ಹರಿಹರ ಏಕಾತ್ಮಕತೆ ಏಕಾಂತತೆ ನಿಚ್ಚಳವಾಗಿರುವ ಸಂಗತಿ. ಜನಪದ ಹೆಣ್ಣು ಕಂಡುಕೊಂಡ ಜೀವನ ಸತ್ಯ.

ಜನಪದರ ಬದುಕು ಬಟ್ಟಂಬಯಲಿನಲ್ಲಿ, ಪಂಚಭೂತಾತ್ಮಕ ಸೃಷ್ಟಿಯ ನೇರ ಮಡಿಲಲ್ಲಿ. ಇಲ್ಲಿ ಗುಡಿ ಗೋಪುರಗಳ ಗೋಡೆಗಳಿಲ್ಲ. ಮನುಷ್ಯ ನಿರ್ಮಿತ ಅಂತಸ್ತುಗಳಿಗೆ ಮಾನ್ಯತೆ ಇಲ್ಲ. ಅಸಾಮಾನ್ಯ ಸಾಮರಸ್ಯ. ಸರ್ವರಿಗೂ ಸಮಬಾಳು…

ಪ್ರಖರ ಜ್ಞಾನದ ದಾಹವಿಲ್ಲದೇ ಪಾಲಿಗೆ ಬಂದದ್ದನ್ನು ಆಸ್ವಾಧಿಸುವ, ಅದಕ್ಕೂ ಕೃತಜ್ಞತೆ ತೋರುವ, ಪರಸ್ಪರ ಅರಿಯುವ, ಬೆರೆಯುವ, ನನ್ನದೇನಿಲ್ಲ- ಎಲ್ಲ ಅವನದು-ಎಂಬ ವಿನೀತ ಭಾವದ ಅಸಾಧಾರಣ ಧನ್ಯತೆ ಇಲ್ಲಿದೆ.

ಹೇಗಾದರೂ ಈ “ಚಕ್ರ” ಸಾಗಬೇಕು. , ಆಶೆ, ಆಕಾಂಕ್ಷೆ, ನೋವು, ನಲಿವು ಏನಿದ್ದರೂ ಅದೆಲ್ಲ ನಮ್ಮದು ನಮ್ಮೊಳಗಿನದ್ದು ಎಂದುಕೊಂಡು, ಹೊರ ಸಮಾಜಕ್ಕೆ ಹೊಂದಿಕೊಂಡು “ರಥ” ನಡೆಸುವ ಕಾಳಜಿ ಕಾಣುತ್ತದೆ. ಯಾರು ರಥ, ಯಾರು ರಥಿಕ, ಯಾರು ಎಳೆಯುವವರು, ಯಾವುದು ಕೊಂಡಿ ಅದೆಲ್ಲದರ ಬಿಡಿ, ಬಿಡಿ ಒಡೆದು ಕಾಣದೇ “ಗೋಸ್ಟಾರೆ ಒಟ್ಟು ಸೂತ್ರ” ವನ್ನು ಅರಿತವರು. ಅಂತೆಯೇ ನಡೆವವರು.

ಇಲ್ಲಿ ಚಿಂತನೆಯ ಜೊತೆಗೆ ಭಾವ ಸಮೃದ್ಧಿ ವಿಪುಲ. ಅನುಭವವು ಅನುಭಾವವಾಗುವುದು ಸಹಜ.  ಈಗಿನ ಆಧುನಿಕ ಬದುಕಿಗೆ ಇದು ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬ ಮಾತೂ ಇರಬಹುದು. ಆದರೆ ಆಧುನಿಕತೆ ಎಂಬುದು ನಿತ್ಯ ಸತ್ಯವಾಗಬೇಕಿಲ್ಲ.

ಆಧುನಿಕತೆಯ ಓಟದಲ್ಲಿ ಯಾರಿಗೂ ಪುರುಸೊತ್ತಿಲ್ಲದಾಗ- ಈ ಹಾಡು – ಅದರ ಆಂತರ್ಯದ- ಆತ್ನೀಯತೆಯ ಅರಿವು ಕಾಣಿಸದೇ ಹೋಗಬಹುದು. ಆದರೆ ಅದಕ್ಕಾಗಿ ತಹತಹಿಸುವ ಜನ ಸಾಮಾನ್ಯರಿಗೆ ಬೇಕಾಗಿರುವುದು ಒಣ ಶ್ರೀಮಂತಿಕೆಯಲ್ಲ. ಭೌತಿಕ ಅಭಿವೃದ್ಧಿ ಮಾತ್ರವಲ್ಲ. ನಮ್ಮ ನಮ್ಮೊಳಗಿನ ದೈನಂದಿನ ಚಟುಟಿಕೆಗಳಲ್ಲಿ ಸಾಧಿತವಾಗುವ ಸಂಬಂಧದ ಕೊಂಡಿ. ಪ್ರೀತಿ,ವಿಶ್ವಾಸ, ಭರವಸೆಯ ಸಾಮರಸ್ಯ.

ಆದರೆ ಈ ಜೀವ ಕಾರುಣ್ಯ, ಈ ಶೃದ್ಧೆಯ, ಅನುಕಂಪ, ಪ್ರೇಮ, ಸಹನೆ, “ಸಂಸ್ಕಾರ” ದಿಂದ ಬರುವಂತಹುದು. “ಸಂಸ್ಕಾರ” ಬಹುಕಾಲದ ಮಾಗಿದ ಪಾಕ ವಿಶೇಷ. ಬೇಜವಾಬ್ದಾರಿಯಿಂದ ಇಂದು ಬೇಡವೆಂತೆನಿಸಿ ಹೊರಬಿಸಾಡುವ ಸೊತ್ತಲ್ಲ.  ಇದು ನಮ್ಮ ಹಿರಿಯರ, ನಮ್ಮವರ “ಜೀವನಾಮೃತ”, ಅದು ನಮ್ಮದೂ ಹೌದು. ನಮ್ಮ ಜೀವನಾಮೃತವೂ ಹೌದು.

ಇಂದಿನ ಭೋಗ ಪ್ರಧಾನ, “ಹೇಗಾದರೂ” ಒಂದು ಹೆಜ್ಜೆ ಮುಂದೆ,ಒಂದಿಷ್ಟು ಮೇಲೆ” ಎಂಬ ಪೈಪೋಟಿಯ ಕಾಲದಲ್ಲಿ ಸಾಮರಸ್ಯ- ಔದಾರ್ಯಗಳು ದೌರ್ಬಲ್ಯ, ಎಂದು ಕಾಣಬಹುದಾದರೂ, ಒಟ್ಟು ಸಮಾಜದ ಹಿತದಲ್ಲಿ ಅವು ಅತ್ಯವಶ್ಯ. ಅನಿವಾರ್ಯ.

ಈ ದೃಷ್ಟಿಯಲ್ಲಿ ಶೀಘ್ರವಾಗಿ ಮರೆಯಾಗುತ್ತಿರುವ ಪ್ರಾದೇಶಿಕ ಭಾಷೆ, ಜನಪದರ ಅನುಭವದ ಹಾಡು, ಪಾರಂಪರಿಕ ಜ್ಞಾನ, ಪರಿಸರಕ್ಕೆ ವಿಶಿಷ್ಟವಾದ ಜಿವನ ಕಲೆಯ ಬಗ್ಗೆ ಆಸ್ಥೆ, ಅಧ್ಯಯನ ಅವಶ್ಯ.

ಇದು ಬರಿಯ ತಿಳುವಳಿಕೆಗಾಗಿ ಮಾತ್ರವಲ್ಲದೆ, ತಲೆಯಲ್ಲಿ ಉಳಿಯದೇ, ಹೃದಯಕ್ಕೂ ಹರಿದು ನಮ್ಮ ಮನಸ್ಸನ್ನು ಸಂಸ್ಕಾರಗೊಳಿಸಿದರೆ ನಾವು ನಮ್ಮ ಹಿರಿಯರ ಹೆಸರು ಹೇಳಿಕೊಳ್ಳಲು ಅರ್ಹರಾಗುತ್ತೇವೆ.  ಪರಂಪರೆಯ ಮುಂದುವರಿಕೆಯಲ್ಲಿ “ಭಾಗಿದಾರ”ರಾಗುತ್ತೇವೆ.

ಉಪ್ಪುಂದದ “ಕುಂದ ಅಧ್ಯಯನ ” ಸಂಸ್ಥೆ ಈ ದಿಸೆಯಲ್ಲಿ ಕೆಲಸ ಮಾಡುತ್ತಿದೆ.  ತನ್ನ ಮಿತಿಯಲ್ಲಿ ತಾನೇ ಕಂಡುಕೊಂಡ ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ.

ಈ ಹಿಂದಿನ ಕೃತಿ 1. “ಕುಂದನಾಡಿನ ದೇವಾಲಯಗಳು- ಸಾಂಸ್ಕೃತಿಕ ಅಧ್ಯಯನ”, 2. ಕಥಾ ಸಂಕಲನ “ಅಜ್ಜಿ ಸಾಂಕಿದ ಮಗ”, 3. “ಕುಂದನಾಡಿನ ಜನಪದ ಹಾಡುಗಳು- “ಕ್ಯಾಸೆಟ್, 4. “ಕುಂದನಾಡಿನ ನದಿಹರಿವುಗಳು”, 5.ಶೀರೂರ ಫಣಿಯಪ್ಪಯ್ಯ”, 6. ವಡ್ಡರ್ಸೆ ರಘುರಾಮ ಶೆಟ್ಟಿ- ಕೊನೆಯ ದಿನಗಳು”, ಇವುಗಳ ಜೊತೆಗೆ “ಅಕ್ಕ” ಕುಂದಕುಮದಕ್ಕ “ಹೊರಬರುತ್ತಿದೆ.  ಕುಂದನಾಡಿನ ಬೈಂದೂರು ಭಾಗದ ಈ ಹಾಡುಗಳು ಅಪೂರ್ಣವಾಗಿದ್ದು, ಬಹುತೇಕ ಪ್ರಥ ಬಾರಿಗೆ ಅಕ್ಷರ ಜೋಡಣೆಯಿಂದ  ಹೊರಬರುತ್ತಿವೆ.

ಇದು ಬೆಳಕಾಗಿ, -ಹತ್ತು ಬತ್ತಿ ಉರಿವಾಗ- ಸಾವಿರ- ಹತ್ತು ಸಾವಿರವಾಗಿ ಬೆಳಗಲು ಹೆಚ್ಚು ಕಾಲ ಬೇಕಿಲ್ಲ. ಅಂತ ಕಾಲ ಬೇಗ ಬರಲಿದೆ ಎಂಬ ಜೀವನಿಷ್ಠೆ ನಮಗಿದೆ.  ಶ್ರೀಮತಿ ಹೊಳ್ಳೂರು ದೀಪಧಾರಿಣಿಯಾಗಿ ನಿಂತಿದ್ದಾರೆ. ಅವರಿಗೆ ಸ್ವಾಗತ. ಇದು ಸಾಲಾಗಿ ಬರಲಿ. ಸಾವಿರವಾಗಲಿ.

ಈ ಪುಸ್ತಕಕ್ಕೆ ಮುನ್ನುಡಿ ಬರೆದು ಪ್ರೋತ್ಸಾಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಜನಪದ ತಜ್ಞ ಡಾ. ಕೆ.ಚಿನ್ನಪ್ಪ ಗೌಡರಿಗೆ, D.T.P. ಮಾಡಿದವರಿಗೆ, ಮುದ್ರಕರಿಗೆ, ಮುಖಪುಟ ಚಿತ್ರಕಲಾವಿದೆ ಕು. ಭಾರತಿ, ರಕ್ಷಾಪುಟದ ವಿನ್ಯಾಸಕರಾದ ಶ್ರೀ ಚಂದ್ರ ಎಸ್.ಕೋಡಿ, ಇದನ್ನು ಅಭಿಮಾನದಿಂದ ಓದುವ ಎಲ್ಲರಿಗೂ ವಂದನೆಗಳು.

 

ಯು.ಸಿ.ಹೊಳ್ಳ,
ಕುಂದ ಅಧ್ಯಯನ ಕೇಂದ್ರ ಉಪ್ಪುಂದ
ಉಪ್ಪುಂದ
18-09-2004