ನನಗೆ ೧೯೬೭ರಿಂದಲೂ ಪ್ರೊ. ಜಿ.ಎಸ್.ಎಸ್.ರವರೊಂದಿಗೆ ಆತ್ಮೀಯವಾದ ಸಂಬಂಧ.  ಜೊತೆಗೆ ಸಹೋದ್ಯೋಗಿಯಾಗಿ ಮೂರು ದಶಕಗಳ ಒಡನಾಟ.  ನಾನು, ಪ್ರೊ. ಕ.ವೆಂ. ರಾಜಗೋಪಾಲ್ ಹಾಗೂ ಪ್ರೊ. ಆರ್. ರಾಚಪ್ಪ ಸೇರಿ ಅವರಿಗೆ ೫೦ ವರ್ಷಗಳು ತುಂಬಿದ ಸಂದರ್ಭದಲ್ಲಿ ‘ಸ್ನೇಹ ಕಾರ್ತಿಕ’ ಎನ್ನುವ ಅಭಿನಂದನ ಗ್ರಂಥ ಹೊರತಂದೆವು.  ಅದರ ಮಾರಾಟದಿಂದ ಬಂದ ಹಣದಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಎಂ.ಎ. ಪರೀಕ್ಷೆಯಲ್ಲಿ ಕಾವ್ಯಮೀಮಾಂಸೆಯಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು ಒಂದು ಪುದುವಟ್ಟು ಸ್ಥಾಪಿಸಿದೆವು.  ನನಗೆ ಅವರ ‘ಸಮಗ್ರ ಕಾವ್ಯ’ ಹೊರತರಬೇಕೆನ್ನುವ ಆಸೆಯಾಯಿತು.  ಅದನ್ನು ಪ್ರೊ. ಜಿ.ಎಸ್.ಎಸ್. ಅವರಲ್ಲಿ ಹೇಳಿಕೊಂಡಾಗ ನಿಮಗೆ ಪುಸ್ತಕ ಪ್ರಕಾಶನದ ಅನುಭವ ಸಾಲದು; ಸಾಲಮಾಡಿ ಪುಸ್ತಕ ಹೊರತಂದು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಸೂಕ್ಷ ವಾಗಿ ಎಚ್ಚರಿಸಿದ್ದರು.  ನಾನು ಧೈರ್ಯಮಾಡಿ ಕೃತಿ ಹೊರತಂದೆ.  ಪ್ರೊ. ಜಿ.ಎಸ್.ಎಸ್.ರವರ ವಿದ್ಯಾರ್ಥಿಗಳು, ಮಿತ್ರರು, ಅಭಿಮಾನಿಗಳು, ಸಾಹಿತ್ಯಾಸಕ್ತರು ಅದನ್ನು ಕೊಳ್ಳುವ ಮೂಲಕ ನನಗೆ ವಿಶೇಷ ಪ್ರೋತ್ಸಾಹ ನೀಡಿದರು.  ಹೀಗಾಗಿ ಮೊದಲ ಆವೃತ್ತಿ ಮುಗಿದು ಮೂರು-ನಾಲ್ಕು ವರ್ಷಗಳ ಅಂತರದಲ್ಲಿ ಅದರ ಎರಡನೇ ಆವೃತ್ತಿ ಹೊರತಂದೆನು.

ಪ್ರೊ. ಜಿ.ಎಸ್.ಎಸ್. ಅವರ ಮಹತ್ವದ – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ – ಕೃತಿ ‘ಕಾವ್ಯಾರ್ಥ ಚಿಂತನ’ದ ಮೂರನೆಯ ಮುದ್ರಣವನ್ನು ನಾನು ಹೊರತಂದೆ.  ಅದು ಈಗ ಏಳನೆಯ ಮುದ್ರಣ ಕಂಡಿದೆ.  ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರೊ. ಜಿ.ಎಸ್.ಎಸ್. ಅವರ ಸಮಗ್ರ ಗದ್ಯದ ಮೊದಲನೆಯ ಸಂಪುಟವನ್ನು ನಾನು ಹೊರತರಬೇಕಾಯಿತು –  ಶಾರದಾ ಪ್ರಕಟಣಾಲಯದ ಆತ್ಮೀಯ ಮಿತ್ರರಾದ ಶ್ರೀ ಜಿ. ಬಸವರಾಜ್‌ರವರ ಅಕಾಲಿಕ ಮರಣದ ಸಂದರ್ಭದಲ್ಲಿ.  ಅದರ ಪರಿಷ್ಕೃತ ದ್ವಿತೀಯ ಆವೃತ್ತಿಯನ್ನು ೨೦೦೪ರಲ್ಲಿ ನಾನು ಮತ್ತೆ ಪ್ರಕಟಿಸಿದೆ.  ಪ್ರೊ. ಜಿ.ಎಸ್.ಎಸ್. ತಮ್ಮ ಸಮಗ್ರ ಗದ್ಯದ ಮುಂದಣ ಸಂಪುಟಗಳ ದ್ವಿತೀಯ ಪರಿಷ್ಕೃತ ಆವೃತ್ತಿಗಳನ್ನು ನಮ್ಮ ಪ್ರಕಾಶನದ ಮೂಲಕವೇ ಪ್ರಕಟಿಸಬೇಕೆನ್ನುವ ಸದಾಶಯವನ್ನು ವ್ಯಕ್ತಪಡಿಸಿದ್ದರು.  ಅದರಂತೆ ಎರಡನೆಯ ಸಂಪುಟವೂ ಪರಿಷ್ಕೃತ ಆವೃತ್ತಿಯಾಗಿ ಹೊರಬರಲು ಸಕಲ ಸಿದ್ಧತೆಗಳು ನಡೆದಿದ್ದಿತು.  ಇದಕ್ಕೂ ಮೊದಲು ನಾನು ಅವರ ಜನಪ್ರಿಯ ಹಾಡುಗಳ ಸಂಕಲನವಾದ ‘ಪ್ರೀತಿಯಿಲ್ಲದ ಮೇಲೆ’ ಪ್ರಕಟಿಸಿದ್ದೆನು.  ಆನಂತರ ‘ಯಾವುದೂ ಸಣ್ಣದಲ್ಲ’ ಎನ್ನುವ ಗದ್ಯಬರಹಗಳ ಸಂಕಲನವೊಂದನ್ನು ಹೊರತಂದೆನು.  ಈಗ ಅವರ ‘ಸಮಗ್ರ ಗದ್ಯ ಸಂಪುಟ – ೫’ ಮೊತ್ತಮೊದಲಿಗೆ ನಮ್ಮ ಪ್ರಕಾಶನದಿಂದ ಹೊರತರುತ್ತಿರುವೆನು.  ಈ ಸಂಪುಟದಲ್ಲಿ ಸಂಕೀರ್ಣ ವಿಷಯಗಳನ್ನೊಳಗೊಂಡ ಲೇಖನಗಳಿವೆ; ವ್ಯಕ್ತಿಚಿತ್ರಗಳಿವೆ ಮತ್ತು ಅಸಮಗ್ರವಾದ ಪ್ರೊ. ಜಿ.ಎಸ್.ಎಸ್. ಅವರ ಆತ್ಮಕಥನವಿದೆ.

ನಮ್ಮ ಪ್ರಕಾಶನದ ಬಗೆಗೆ ಪ್ರೊ. ಜಿ.ಎಸ್.ಎಸ್. ಅವರಿಗೆ ಅಭಿಮಾನ, ಪ್ರೀತಿ.  ನಾನು ಯಾವುದೇ ಸಂದರ್ಭದಲ್ಲಿ ಪ್ರಕಟಣೆಗೆ ಅವರ ಹೊಸ ಕೃತಿ ಕೇಳಿದರೂ ಇಲ್ಲವೆನ್ನದೆ ನನ್ನನ್ನು ಪ್ರೋತ್ಸಾಹಿಸಿರುವರು. ಒಮ್ಮೊಮ್ಮೆ ಅವರೇ ‘ಈ ಪುಸ್ತಕ ಮಾಡುತ್ತೀರಾ’ ಎಂದು ವಿಶ್ವಾಸದಿಂದ ಕೇಳಿ ಹಸ್ತಪ್ರತಿ ಕೊಟ್ಟಿರುವುದುಂಟು.  ಅದು  ನನ್ನ ಮೇಲಿನ ಅಭಿಮಾನದ ಸಂಕೇತ.  ನನಗೆ ಬೇರೆಯವರಿಗಿಂತ ಅವರಲ್ಲಿ ಹೆಚ್ಚಿನ ಸಲುಗೆ ಇದ್ದುದರಿಂದ ಅವರನ್ನು ‘ಯಾವುದಾದರೂ ಹೊಸದು ಇದ್ದರೆ ಕೊಡಿ ಪ್ರಕಟಿಸುತ್ತೇನೆ’ ಎಂದು ನಿಸ್ಸಂಕೋಚವಾಗಿ ಕೇಳುತ್ತಿದ್ದೆ.  ಸಮಗ್ರ ಗದ್ಯದ ಐದನೇ ಸಂಪುಟ ನನಗೆ ದೊರೆತದ್ದು ಈ ಸಲುಗೆಯ ಫಲವಾಗಿ.  ನನಗೆ ಪ್ರೊ. ಜಿ.ಎಸ್. ಆಮೂರರ ಪರಿಚಯವಾದದ್ದೂ ಪ್ರೊ. ಜಿ.ಎಸ್.ಎಸ್. ಅವರ ಮೂಲಕವೇ.  ಇಂದು ನಾನು ಅವರ ಬಹುತೇಕ ಕೃತಿಗಳನ್ನು ಪ್ರಕಟಿಸಿದ್ದರೆ ಅದರ ಕೀರ್ತಿ ಪ್ರೊ. ಜಿ.ಎಸ್.ಎಸ್. ಅವರಿಗೆ ಸೇರಬೇಕು.

ಒಟ್ಟಿನಲ್ಲಿ ನನ್ನ ಪ್ರಕಾಶನ ಸಂಸ್ಥೆಯ ಇಂದಿನ ಪ್ರಸಿದ್ಧಿಗೆ ಜಿ.ಎಸ್. ಶಿವರುದ್ರಪ್ಪನವರು ಎಷ್ಟು ಕಾರಣರೊ ಅಷ್ಟೇ ಕಾರಣ ಅವರ ಕೃತಿಗಳು.  ಆ ವಿಶ್ವಾಸ ಕೊನೆಯವರೆವಿಗೂ ಇರಲಿ ಎಂದು ಪ್ರಾರ್ಥಿಸುವೆ.  ಐದನೆಯ ಸಂಪುಟಕ್ಕೆ ಆತ್ಮೀಯ ಮಿತ್ರರಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ಮೌಲಿಕವಾದ ‘ಬೆನ್ನುಡಿ’ ಬರೆದುಕೊಟ್ಟು ಉಪಕರಿಸಿರುವರು.  ಅವರ ಸಕಾಲಿಕ ನೆರವಿಗೆ ಪ್ರೀತಿಯ ನೆನಕೆಗಳು.  ಈ ಸಂಪುಟ ಸಿದ್ಧಪಡಿಸುವಲ್ಲಿ ವರ್ಷಿಣಿ ಗ್ರಾಫಿಕ್ಸ್‌ನ ಶ್ರೀಮತಿ ವಿ. ಪ್ರಿಯದರ್ಶಿನಿಯ ಶ್ರಮವನ್ನು ನೆನೆಯಲೇಬೇಕು.  ತಪ್ಪಿಲ್ಲದೆ ಅಂದವಾಗಿ ಛಾಯಾಕ್ಷರ ಜೋಡಣೆ ಮಾಡಿದ ಶ್ರೀ ಜಿ.ಎಲ್. ರಂಗನಾಥ್‌ರವರಿಗೆ ಕೃತಜ್ಞತೆಗಳು.  ನನ್ನ ಇಬ್ಬರು ಮಕ್ಕಳು ವಿ. ಮಹೇಶ್ ಹಾಗೂ ವಿ. ಕಾರ್ತಿಕ್ ಮುದ್ರಣದ ಸಮಸ್ತ ಜವಾಬ್ದಾರಿ ಹೊತ್ತರು.  ಅವರಿಗೆ ನನ್ನ ಆಶೀರ್ವಾದಗಳು.

‘ಸುವರ್ಣ ಕರ್ನಾಟಕ’ ವರ್ಷದಲ್ಲಿ ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ಪ್ರೊ. ಜಿ.ಎಸ್. ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರ ಕೊಟ್ಟ ಮಹತ್ವದ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಅವರ ಸಮಗ್ರ ಕೃತಿಗಳ ೨,೫೦೦ ಪ್ರತಿಗಳನ್ನು ಪ್ರಕಾಶಕರಿಂದ ಖರೀದಿಸುವ ಮಹತ್ವದ ಯೋಜನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿ ಅದನ್ನು ಮಂಜೂರು ಮಾಡಿಸುವ ಒಂದು ಸಾರ್ಥಕ ಕಾರ್ಯಮಾಡಿತು.  ಅದರ ಮುಖ್ಯ ರೂವಾರಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಶ್ರೀ ಪಿ.ವೈ. ರಾಜೇಂದ್ರಕುಮಾರ್‌ರವರು.  ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಮೇಲೆ ಕನ್ನಡ ಲೇಖಕರ ಸುಮಾರು ಒಂದು ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟೈಸ್‌ಮಾಡಿ ವೆಬ್‌ಗೆ ಅಳವಡಿಸುವ ಒಂದು ಮಹತ್ವದ ಯೋಜನೆಯನ್ನು ಹಮ್ಮಿಕೊಂಡು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿರುವರು.  ಗ್ರಂಥ ಸಗಟು ಖರೀದಿಯೋಜನೆಯ ಅಡಿಯಲ್ಲಿ ಗ್ರಂಥಗಳ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಮೂಲಕ ಲೇಖಕ/ಪ್ರಕಾಶಕರಿಗೆ ವಿಶೇಷವಾಗಿ ನ್ಯಾಯ ಒದಗಿಸಿರುವರು.

‘ರಾಷ್ಟ್ರಕವಿ’ ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಕೃತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಖರೀದಿಸುವ ಸಂದರ್ಭದಲ್ಲಿ ನಮ್ಮ ಪ್ರಕಾಶನದಿಂದ ಪ್ರಕಟವಾಗಿರುವ ಸಮಗ್ರ ಗದ್ಯ ಸಂಪುಟ – ೧, ೨, ೫ ಮತ್ತು ‘ಕಾವ್ಯಾರ್ಥ ಚಿಂತನ’ – ಈ ನಾಲ್ಕು ಕೃತಿಗಳ ತಲಾ ೨,೫೦೦ ಪ್ರತಿಗಳನ್ನು ನಮ್ಮಿಂದ ಖರೀದಿಸಿ ವಿಶೇಷವಾಗಿ ಉಪಕರಿಸಿರುವರು. ಇದಕ್ಕಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನೂ ಹಾಗೂ ಈ ಯೋಜನೆಯ ರೂವಾರಿಗಳಾದ ಇಲಾಖೆಯ ನಿರ್ದೇಶಕ ಶ್ರೀ ಪಿ.ವೈ. ರಾಜೇಂದ್ರಕುಮಾರ್ ಅವರನ್ನೂ ನಾವು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ.

ಎಸ್. ವಿದ್ಯಾಶಂಕರ
೨೦೦೭