‘ವರ್ಲ್ಡ್ ಲಿಟರೇಚರ್ ಲೈಬ್ರರಿ’ಯನ್ನು ನೋಡುವ ಕಾರ್ಯಕ್ರಮ ಈ ದಿನ. ಇಲ್ಲಿ ಯಾರನ್ನು ಭೇಟಿ ಮಾಡಬೇಕಾದರೂ, ಏನನ್ನು ನೋಡಬೇಕಾದರೂ ಸಂಬಂಧಪಟ್ಟವರೊಡನೆ ಮೊದಲೇ ಮಾತನಾಡಿ, ಗೊತ್ತು ಮಾಡಬೇಕು. ನನ್ನ ಎಲ್ಲ ದಿನದ ಕಾರ್ಯಕ್ರಮಗಳನ್ನು ನನ್ನ ದ್ವಿಭಾಷಿ ಮೊದಲೇ ಖಚಿತಮಾಡಿಕೊಂಡು ಅನಂತರ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಈ ಪುಸ್ತಕ ಭಂಡಾರ ಬೃಹದಾಕಾರದ ಕಟ್ಟಡದಲ್ಲಿ ನಾಲ್ಕು ಹಂತಗಳಲ್ಲಿ ಹರಹಿಕೊಂಡಿದೆ. ನಾವು ಹೋದೊಡನೆ ಇಂಗ್ಲಿಷ್ ಬಲ್ಲ ಮಹಿಳೆಯೊಬ್ಬಳು ಸ್ವಾಗತಿಸಿ, ಕೈ ಕುಲುಕಿ ಕರೆದುಕೊಂಡು ಹೋಗಿ ಎಲ್ಲ ವಿಭಾಗಗಳನ್ನೂ ತೋರಿಸಿದಳು. ರಷ್ಯನ್ ಭಾಷೆಗೆ ಅನುವಾದಿತವಾದ ಇಡೀ ಜಗತ್ತಿನ ಪುಸ್ತಕಗಳ ಭಂಡಾರ ಇದು. ‘ಕನ್ನಡ ಸಾಹಿತ್ಯದಿಂದ ಯಾವ ಯಾವ ಪುಸ್ತಕಗಳನ್ನು ಅನುವಾದ ಮಾಡಿಸಿ ಇಲ್ಲಿರಿಸಿದ್ದೀರಿ’ ಎಂದೆ. ‘ಇಲ್ಲ, ಆ ಕೆಲಸ ಇನ್ನೂ ಆಗಬೇಕಾಗಿದೆ’ ಎಂದಳಾಕೆ. ಆದರೆ ಭಾರತೀಯ ಪುಸ್ತಕ ಭಂಡಾರ ವಿಭಾಗದಲ್ಲಿ, ನಾಲ್ಕಾರು ಓಬೀರಾಯನ ಕಾಲದ, ಅಪ್ರಮುಖವಾದ ಪುಸ್ತಕಗಳನ್ನೇನೋ ಇರಿಸಿದ್ದರು. ಈ ಲೈಬ್ರರಿಯ ಮೂರನೆಯ ಹಂತದಲ್ಲಿ ಪಶ್ಚಿಮ ಜರ್ಮನಿಯ ಪುಸ್ತಕಗಳ ಪ್ರದರ್ಶನವೊಂದು ಏರ್ಪಟ್ಟಿತ್ತು. ಇಲ್ಲಿ ರಷ್ಯನ್ ಭಾಷೆಗೆ ಜಗತ್ತಿನ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡಿಸಿ ಪ್ರಕಟಿಸುವ ಕಾರ‍್ಯದೊಂದಿಗೆ, ಬೇರೆ ಬೇರೆ ಕೆಲವು ಭಾಷೆಗಳನ್ನು ಕಲಿಸುವ ತರಗತಿಗಳನ್ನೂ ನಡೆಯಿಸುತ್ತಾರೆ. ಅಲ್ಲದೆ ಬೇರೆ ಬೇರೆ ಭಾಷೆಯ ಪುಸ್ತಕಗಳೂ ಅಧಿಕ ಸಂಖ್ಯೆಯಲ್ಲಿವೆ. ಕೆಳಗಿನ ನೆಲೆಯಲ್ಲಿ ಒಂದು ಟೇಪ್ ಲೈಬ್ರರಿಯೂ ಇದೆ. ಅನೇಕ ವಿದ್ಯಾರ್ಥಿಗಳು ಕಿವಿಗೆ ರಿಸೀವರ್ ತಗುಲಿಸಿಕೊಂಡು, ರೆಕಾರ್ಡ್ ಆದ ಟೇಪುಗಳಿಂದ ವಿಷಯಗಳನ್ನು ಸಂಗ್ರಹಿಸಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು.

ಮುಂದಿನ ಕಾರ್ಯಕ್ರಮ ಒಂದು ಪ್ರಕಾಶನ ಸಂಸ್ಥೆಯನ್ನು ನೋಡುವುದು. ನಾನು ಯಾವ ಪ್ರಕಾಶನ ಸಂಸ್ಥೆಯನ್ನು ನೋಡಬೇಕೆಂಬುದನ್ನು ನನ್ನನ್ನು ಬರಮಾಡಿಕೊಂಡ ‘ಸಂಸ್ಥೆ’ಯವರೆ ಗೊತ್ತು ಮಾಡಿದ್ದರು. ಅದರ ಪ್ರಕಾರ ‘ಪ್ರೋಗ್ರೆಸ್ ಪಬ್ಲಿಷಿಂಗ್ ಹೌಸ್’ಗೆ ಹೋದೆವು. ಇದರ ಭಾರತೀಯ ವಿಭಾಗದ ಮುಖ್ಯಸ್ಥ ಅನುಪ್ರೇವ್ ನಮಗಾಗಿ ಅಂಗಳದಲ್ಲಿ ಕಾದಿದ್ದ. ಕಂದು ಬಣ್ಣದ ಗಡ್ಡದ ಆಜಾನುಬಾಹು ವ್ಯಕ್ತಿ. ಆತ ಇಡೀ ಭಾರತವನ್ನು ಸುತ್ತಿದ್ದನಂತೆ. ಸೊಗಸಾದ ಇಂಗ್ಲಿಷ್ ಮಾತನಾಡುತ್ತಾನೆ. ಹಿಂದಿ, ಪಂಜಾಬಿ ಭಾಷೆಗಳೂ ಗೊತ್ತಿವೆ. ಬೆಂಗಳೂರಿಗೂ ಬಂದಿದ್ದನಂತೆ. ಮಾತಿನ ನಡುವೆ ಕಡೇ ಪಕ್ಷ ಹತ್ತು ಸಲವಾದರೂ ಬೆಂಗಳೂರಿನ ಸೊಗಸನ್ನು, ಹವಾಮಾನವನ್ನು ಹೊಗಳಿದ.

ಇಲ್ಲಿ ಅನೇಕ ಭಾಷಾಂತರ ವಿಭಾಗಗಳಿವೆ. ರಷ್ಯನ್ ಭಾಷೆಯಿಂದ, ಜಗತ್ತಿನ ಸುಮಾರು ನಾಲ್ವತ್ತು ಭಾಷೆಗಳಿಗೆ ಪುಸ್ತಕಗಳನ್ನು ಅನುವಾದ ಮಾಡಿಸಿ ಪ್ರಕಟಿಸಲಾಗುತ್ತಿದೆ. ಹಾಗೆಯೆ ಇತರ ಭಾಷೆಗಳಿಂದ ರಷ್ಯನ್‌ಗೂ ಅನುವಾದ ಮಾಡಿಸಲಾಗುತ್ತಿದೆ.

ಭಾರತೀಯ ವಿಭಾಗದಲ್ಲಿ ಹಿಂದಿ, ಬಂಗಾಳಿ, ಪಂಜಾಬಿ, ಉರ್ದು, ಗುಜರಾತಿ, ತಮಿಳು, ತೆಲುಗು ಭಾಷೆಗಳ ಪುಸ್ತಕಗಳನ್ನು ಪ್ರಕಟಿಸಿದೆ. ಯಥಾ ಪ್ರಕಾರ ಕನ್ನಡಕ್ಕೆ ಇಲ್ಲಿಯೂ ಸ್ಥಾನವಿಲ್ಲ. ಯಾಕೆ ಎಂದು ಕೇಳಿದರೆ,  ‘ಈ ಬಗ್ಗೆ ಪರಿಣತರಿಲ್ಲ’ – ಎಂಬ ಸಿದ್ಧವಾದ ಉತ್ತರ. ಆದರೆ ಈ ಭಾರತೀಯ ಭಾಷೆಗಳ ಕೃತಿಗಳ ಪ್ರಕಟಣೆಯ ಅಚ್ಚಿನ ಕಾರ‍್ಯ ನೋಡಿಕೊಳ್ಳುವವರು, ಆಯಾ ಭಾಷೆಗಳನ್ನು ಕಲಿತ ರಷ್ಯನ್ನರೆ.

ಇಲ್ಲಿ ಎಲ್ಲವೂ ಸರ್ಕಾರದ್ದೆ ಆಗಿರುವಾಗ, ಅದು ರೂಪಿಸಿದ ನೀತಿ – ನಿಯಮಗಳ ಪ್ರಕಾರ ಎಲ್ಲವೂ. ಪುಸ್ತಕ ಪ್ರಕಾಶನವೋ, ಪುಸ್ತಕ ಮಾರುವ ಅಂಗಡಿಯೋ ಎಲ್ಲವೂ ಸರ್ಕಾರದ್ದೆ. ಪ್ರಕಾಶನದ ವಿವರ, ಸಂಭಾವನೆಯ ನೀತಿಯ ಬಗ್ಗೆ ಮೀರಾ ಸೊಲ್ಗಾನಿಕ್ ನೀಡಿದ ವಿವರಗಳಿಗಿಂತ  ಈ ಸಂಸ್ಥೆಯಲ್ಲಿ ನನಗೆ ದೊರೆತ ವಿವರ ಬೇರೆ ಹೆಚ್ಚಿನದೇನಾಗಿರಲಿಲ್ಲ. ಆದರೆ ಸ್ನಾನ್ನಿಯಾ ಎಂಬ ಪ್ರಕಾಶನ ಸಂಸ್ಥೆಯೊಂದು ಬೇರೆ ಬೇರೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಶೋಧಕರಿಗೆ ವಿದ್ಯಾರ್ಥಿ ವೇತನಗಳನ್ನು ಕೊಟ್ಟು, ಅವರ ಸಂಶೋಧನೆಗಳನ್ನು ಪ್ರಕಟಿಸುತ್ತದೆ ಎಂಬ ವಿಷಯ ಇಲ್ಲಿ ತಿಳಿಯಿತು.

ಇಂದು ಸಂe Museum of Eastern Culturesಗೆ ಹೋಗಿದ್ದೆವು. ಪ್ರಾಚ್ಯ ಸಂಸ್ಕೃತಿಗಳ ವಸ್ತು ಸಂಗ್ರಹಾಲಯದಲ್ಲಿ, ಇಂಡಿಯಾ, ಚೀನಾ, ಕೊರಿಯಾ, ಟಿಬೆಟ್ ದೇಶಗಳ ಕೆಲವು ಚಿತ್ರ, ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಇರುವ ಸಾಮಗ್ರಿ ಪ್ರಾತಿನಿಧಿಕ ಎನ್ನಲು ಬಾರದು.

‘ಮಾಸ್ಕ್ವಾ’ – ಎಂಬ ಸರ್ವಸಾಮಗ್ರಿ ಮಳಿಗೆಯೊಂದನ್ನು ನೋಡಿದೆ. ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯ ವಸ್ತುಗಳು. ಈ ಊರಿನ ಒಂದೊಂದು ಬಡಾವಣೆಯಲ್ಲೂ ಇಂಥ ಮಳಿಗೆಗಳಿವೆ. ದೈನಂದಿನ ಆಹಾರ ಪದಾರ್ಥಗಳಿಂದ ಹಿಡಿದು, ಒಂದು ಗುಂಡುಸೂಜಿಯ ತನಕ ಎಲ್ಲವನ್ನೂ ಇಲ್ಲಿ ಮಾರಲಾಗುತ್ತದೆ. ಗ್ರಾಹಕರು ಕ್ಯೂ ನಿಂತು ವಸ್ತುಗಳನ್ನು ಕೊಳ್ಳಬೇಕು. ಉಪಯೋಗದ ಪದಾರ್ಥಗಳನ್ನು ಬಿಟ್ಟರೆ, ಬೇರೆಯ ಕುಶಲ ಕೈಗಾರಿಕೆಯ ವಿಶೇಷದ ವಸ್ತುಗಳು ಅಷ್ಟಾಗಿಲ್ಲ. ವಿದೇಶಗಳಿಂದ ಅಪರೂಪದ ವಸ್ತುಗಳೇನಾದರೂ ಬಂದರೆ ಅದನ್ನು ಕೊಳ್ಳಲು ನೂಕು ನುಗ್ಗಲು.

ರಸ್ತೆಯನ್ನು ದಾಟುವ ನೆಲದೊಳಗಿನ ಸುರಂಗ ಮಾರ್ಗದಲ್ಲಿ ಪುಸ್ತಕದ ಅಂಗಡಿಗಳು ; ವರ್ತಮಾನ ಪತ್ರಿಕೆಯನ್ನು ಕೊಡುವ ಯಂತ್ರಗಳೂ ಇವೆ. ಅಲ್ಲೊಂದೆಡೆ ಲಾಟರಿ ಟಿಕೇಟುಗಳನ್ನು ಮಾರುತ್ತಿದ್ದರು. ನನಗೆ ಆಶ್ಚರ‍್ಯವಾಯಿತು. ಈ ಜನಕ್ಕೂ ಅದೃಷ್ಟದಲ್ಲಿ ನಂಬಿಕೆ ಇದೆ ; ಇರುವುದಕ್ಕಿಂತ ಹೆಚ್ಚಾದ ಹಣವನ್ನು ಲಾಟರಿಯ ಮೂಲಕ ಪಡೆಯುವ ಅವಕಾಶವನ್ನು ಸರ್ಕಾರ ನಿರಾಕರಿಸಿಲ್ಲ. ನನ್ನ ದ್ವಿಭಾಷಿ ಹೇಳಿದ : ‘ಇಲ್ಲೂ ಸರ್ಕಾರವೆ ಲಾಟರಿ ಏರ್ಪಡಿಸಿದೆ. ಆದರೆ ಅದರಿಂದ ಅದೃಷ್ಟವಿದ್ದವನಿಗೆ ಬರುವ  ಹಣದ  ಪರಮಾವಧಿ ಐದು ಸಾವಿರ ರೂಬಲ್ಲುಗಳು. ಒಂದು ರೇಡಿಯೋ, ರೆಫ್ರಿಜರೇಟರು, ಕಾರು ಇಂಥ ಉಪಯೋಗದ ವಸ್ತುಗಳನ್ನೇ ಹಣದ ಬದಲು ಲಾಟರಿಯಲ್ಲಿ ಗೆದ್ದವರಿಗೆ ಕೊಡಲಾಗುತ್ತದೆ. ಒಂದು ವೇಳೆ, ಅವರ ಬಳಿ ಈಗಾಗಲೇ ಅವುಗಳಲ್ಲಿ ಯಾವುದಾದರೂ ವಸ್ತು ಇದ್ದ ಪಕ್ಷದಲ್ಲಿ, ಆತನ ಕೋರಿಕೆಯ ಮೇಲೆ, ಅವನಲ್ಲಿ ಇಲ್ಲದ ಬೇರೆ ವಸ್ತುಗಳನ್ನು ಕೊಡಲಾಗುತ್ತದೆ.’ ರಷ್ಯದ ಜೀವನದಲ್ಲಿ ಆಗುತ್ತಿರುವ ಬದಲಾವಣೆಯ ಒಂದಂಶ ಇದು ಎಂದು ನನಗೆ ತೋರಿತು.