ವ್ಯೋಮಕೇಶನಿಂದ ಗಂಗೆ
ಭಗೀರಥನ ಹತ್ತಿರ
ಇಳಿದು ಬಂದಹಾಗೆ ಪ್ರಕೃತಿ
ಬಂತು ಕವಿಯ ಹತ್ತಿರ

ಅದುವರೆಗೂ ಪಡೆಯದಿದ್ದ
ತೃಪ್ತಿಯನ್ನು ಪಡೆಯಿತು
ಕವಿಯ ಕೊರಳಿನಲ್ಲಿ ತಾನೆ
ಲಹರಿ ಲಹರಿ ಹೊಮ್ಮಿತು.
*     *     *
ನೂರು ರೀತಿಯಲ್ಲಿ ಪ್ರಕೃತಿ
ವ್ಯಕ್ತಗೊಳ್ಳಲೆಳಸಿತು
ತನ್ನ ಎದೆಯ ಭಾವಗಳನು
ನುಡಿದು ತೋರಬಯಸಿತು.
ಮಿಂಚಿನಲ್ಲಿ ನಗೆಯ ಬೀರಿ
ಗುಡುಗಿನಲ್ಲಿ ದನಿಯ ತೋರಿ
ಮಳೆಯ ನೂಲಿನೇಣಿಯಿಂದ
ತಿರೆಯ ಎದೆಗೆ ಇಳಿಯಿತು.
ನೆಲದೊಳಿಳಿದ ಮುಗಿಲ ಮನಸು
ಹಸುರಿನಲ್ಲಿ ಹೊಮ್ಮಿತು.
ಅದರ ಎದೆಯ ಹೊನ್ನ ಕನಸು
ಚಿಗುರು ಹೂಗಳಾಯಿತು.
ಹಣ್ಣು ಹಂಪಲಾಯಿತು
ಜಗಕೆ ಅನ್ನವಾಯಿತು
ಋತುಗಾನದ ಛಂದದಲ್ಲಿ
ಕುಣಿ ಕುಣಿಯುತ ಬಂದಿತು
ನೂರು ಬಗೆಯ ಅಚ್ಚರಿಗಳ
ರಸದ ಕೋಶವಾಯಿತು !
*     *     *
ಹಕ್ಕಿಗೊರಲಿನಲ್ಲಿ ಪ್ರಕೃತಿ
ವಿವಿಧ ಮಧುರ ರಾಗವಾಗಿ
ಹೊಮ್ಮಲೆಳಸಿ ಸೋತಿತು.
ಗಾಳಿಯೊಡನೆ ವಿಶ್ವವನ್ನೆ
ಸುತ್ತಿ ಸುಳಿದುದಾಯಿತು.
ಆದರೇನು, ತೃಪ್ತಿಯಿನಿತು
ದೊರೆಯದಾಯ್ತು ಪ್ರಕೃತಿಗೆ
ಮೂಕಮೌನ ಶೋಕವೊಂದೆ
ತುಂಬಿಬಂತು ಮನಸಿಗೆ.
ನನ್ನ ಎದೆಯನರಿತು ಮಿಡಿದು
ನುಡಿಸಬಲ್ಲನಿರುವನೆ ?
ನನ್ನ ನಾನು ವ್ಯಕ್ತಗೊಳಿಸ-
ದಿರಲು ಬದುಕಬಲ್ಲೆನೆ ?
ಎಂಬ ಚಿಂತೆಯಲ್ಲಿ  ಪ್ರಕೃತಿ
ಹಾರೈಸಿತು ದಿನದಿನ
ತಪಗೈಯಿತು ದಿನದಿನ !
*     *     *
ಪ್ರಕೃತಿಯಿಂತು ತಪವನೆಸಗಿ
ದಿನದಿನವೂ ಕಾದಿರೆ
ಕಡೆಗೆ ಸಫಲವಾಯ್ತು ತಪಸು
ಎದೆಯ ಕನಸದಾಯ್ತು ನನಸು
ಬೆರಗಾಗಿರೆ ಈ ಧರೆ.

ಜಗದ ಜಟಿಲಜಾಲದಲ್ಲಿ
ಸಾಮಾನ್ಯರ ಕೂಟದಲ್ಲಿ
ಕಂಡಿತೊಬ್ಬ ವ್ಯಕ್ತಿಯ !
ದಾರಿದ್ರ್ಯದಿ ನೊಂದರೂ
ಕಣ್ಣೀರೊಳು ಮಿಂದರೂ
ಸೌಂದರ್ಯದ ಆರಾಧನೆ-
ಯಲ್ಲಿ ತೊಡಗಿ ತಪಗೈಯುವ
ಮನುಜನೆದೆಯ ಶಕ್ತಿಯ.
ಇಳಿದುಬಂತು ಪ್ರಕೃತಿಯ ಕೃಪೆ
ಮನುಜನೆದೆಯ ಗುಡಿಯೆಡೆ !
‘ನನ್ನ ನೀನು ವ್ಯಕ್ತಗೊಳಿಸಿ
ನೀಡು ನನಗೆ ಬಿಡುಗಡೆ.
ನನಗೆ ಮಾತ್ರವಲ್ಲ ಕಾಣೊ
ನಿನಗೂ ಅದು ಬಿಡುಗಡೆ’
ಎಂದು ಬೇಡಿತವನನು
ಆಶ್ರಯಿಸಿತು ಕವಿಯನು.
*     *     *
ಸಫಲವಾಯ್ತು ಪ್ರಕೃತಿಯೆದೆಯ
ಬಹುಕಾಲದ ಸಾಧನೆ.
ಸಫಲವಾಯ್ತು ಕವಿದೃಷ್ಟಿಯ
ಸೌಂದರ್ಯಾರಾಧನೆ,
ತನ್ನ ಬಳಿಗೆ ಹರಿದು ಬಂದ
ಕೃಪೆಗೆ ಮುಡಿಯ ಬಾಗಿಸಿ
ತನ್ನ ತನವನದರ ಎದೆಯ
ವಾಣಿಯಲ್ಲಿ ಕರಗಿಸಿ
ಜಗಕೆ ಹಾಡುತಿರುವನಿಲ್ಲಿ
ನೂರು ಮಧುರ ಸ್ವರದಲಿ
ಕವಿಯ ಹಾಡ ಕೇಳಿ ಲೋಕ
ಬೆರಗಾಗಿದೆ ಮನದಲಿ !
*     *     *
ವ್ಯೋಮಕೇಶನಿಂದ ಗಂಗೆ
ಭಗೀರಥನ ಹತ್ತಿರ
ಇಳಿದು ಬಂದ ಹಾಗೆ ಪ್ರಕೃತಿ
ಬಂತು ಕವಿಯ ಹತ್ತಿರ.