ಪ್ರಕೃತಿಪೂಜೆಗೆ ಬನ್ನಿರೆಲ್ಲರು
ಪ್ರಕೃತಿಪೂಜೆಗೆ ಬನ್ನಿರಿ.
ಕಣ್ಣು ಹೃದಯಗಳೆಂಬ ಎರಡನು
ಮಾತ್ರ ಇಲ್ಲಿಗೆ ತನ್ನಿರಿ.
ಸಗ್ಗದೊಲವೀ ಬುವಿಯ ಲೋಕಕೆ
ದಿನವು ದಿನವೂ ಇಳಿದಿದೆ.
ಕಂಡು ಸವಿದರಿಗನಿತೆ ಲಭಿಸಿದೆ ;
ತನಗೆ ತಾನೇ ನಲಿದಿದೆ.

ಇರಲಿ ಬಾ ಆ ಜಗದ ಜಂಜಡ
ಬರಿಯ ಮಣ್ಣಿನ ಗಡಿಬಿಡಿ.
ಇಲ್ಲಿ ಸುಂದರ ಶಿವನ ದರ್ಶನ
ಭವ್ಯವಾಗಿದೆ ಈ ಗುಡಿ !

ದಿನದ ಧೂಳಿಯ ಕೊಳೆಯ ತೊಳೆವುದು
ಇಲ್ಲಿ ಅಮೃತದ ಸೇಚನ.
ಪ್ರಕೃತಿ ಮಾತೆಯ ಸ್ತನ್ಯಪಾನದಿ
ಪುಷ್ಟಿಗೊಳುವುದು ಚೇತನ !