“ಪ್ರಕೃತಿ ಕವಿ ಪ್ರಜ್ಞೆಯನ್ನು ಮೊದಲು ಆಕರ್ಷಿಸುವುದು ತನ್ನ ವೈಭವಯುಕ್ತವೂ ವೈವಿಧ್ಯಪೂರ್ಣವೂ ಆಗಿರುವ ಸೌಂದರ್ಯದಿಂದ. ಆಕೆಯ ನಾನಾ ಭಂಗಿಯ ವರ್ಣಮಯ ನರ್ತನ ಅವನ ಚೇತನವನ್ನು ಸೆಳೆಯುತ್ತದೆ…. ಕ್ರಮೇಣ ಬಹಿರ್ಮುಖವಾದ ಬಹಿರಂಗದ ಸೌಂದರ್ಯದ ಕಡೆಗೂ ತಿರುಗಿ ಉಪಾಸನಾರೂಪವನ್ನು ತಾಳುತ್ತದೆ. ಪ್ರಕೃತಿಯ ಅದ್ಭುತ ಶಕ್ತಿ, ಅದ್ಭುತ ರಚನಾಕೌಶಲ, ಅನಿರ್ವಚನೀಯವಾದ ಮಹೋದ್ದೇಶ, ಅಚಿಂತ್ಯವಾದ ಪರಮ ಪುರುಷಾರ್ಥ ಇತ್ಯಾದಿಗಳ ಮನನದಿಂದ ಧ್ಯಾನಗೋಚರವಾಗುವ ಆಕೆಯ ರೂಪ ಆಕೆಯ ಸ್ವರೂಪ ಸತ್ಯವನ್ನೇ ಪರಿವರ್ತನಗೊಳಿಸುತ್ತದೆ. ಹೊರ ಹೊರಗೆ ಮೃಣ್ಮಯಿಯಾಗಿ ತೋರುವವಳು, ವೈಜ್ಞಾನಿಕವಾದ ನೋಟಕ್ಕೆ ನಿಯಮಮಯಿಯಾಗಿ ತೋರುವವಳು, ವೇದಾಂತಿಯ ದೃಷ್ಟಿಗೆ ಚಿನ್ಮಯೀ ಶಕ್ತಿಯಾಗಿ ತೋರುವವಳು, ಕವಿ ಪ್ರಜ್ಞೆಗೆ ಆ ಸತ್ಯ ಮುಖಗಳ ಯಾವುದನ್ನೂ ಅಲ್ಲಗಳೆಯದ ಮತ್ತು ಆ ಎಲ್ಲ ಸತ್ಯ ಮುಖಗಳನ್ನು ಒಳಗೊಳ್ಳುವ ಬ್ರಹ್ಮಮಯಿಯಾಗಿ ಆನಂದಮಯಿಯಾಗಿ ಗೋಚರಿಸುತ್ತಾಳೆ.”[1]

ಕವಿ ಚೇತನ ಪ್ರಕೃತಿ ಸೌಂದರ‍್ಯಾನುಭವದಲ್ಲಿ ಗ್ರಹಿಸುವ ವಿವಿಧ ಸ್ವರೂಪಗಳನ್ನು ವರ್ಣಿಸುವ ಕುವೆಂಪು ಅವರ ಈ ಹೇಳಿಕೆ ಅವರ ಸೌಂದರ‍್ಯ ದರ್ಶನವನ್ನು ಕನ್ನಡಿಸುವುದರ ಜೊತೆಗೆ ನವೋದಯ ಸಾಹಿತ್ಯದಲ್ಲಿ ಪ್ರಕೃತಿ ಚಿತ್ರಿತವಾಗಿರುವ ಹಲವು ಪರಿಗಳನ್ನೂ ಸೂಚಿಸುತ್ತದೆ. ಏಕೆಂದರೆ ನವೋದಯ ಸಾಹಿತ್ಯದಲ್ಲಿ ಬೇರೆಲ್ಲ ಪ್ರಕಾರಗಳಿಗಿಂತ ಪ್ರಕೃತಿ ಸೌಂದರ್ಯವನ್ನು ಕುರಿತ ಭಾವಗೀತ ಪ್ರಕಾರವೇ ಕಾವ್ಯ ಸೃಷ್ಟಿಯ ಬಹುಭಾಗವನ್ನು ಆಕ್ರಮಿಸಿದೆ. ಸೌಂದರ್ಯ ಎಂದರೆ ಪ್ರಕೃತಿ ಸೌಂದರ‍್ಯ, ಸೌಂದರ‍್ಯಾರಾಧನೆ ಎಂದರೆ ಪ್ರಕೃತಿ ಸೌಂದರ‍್ಯಾಧನೆ ಎನ್ನುವಷ್ಟರಮಟ್ಟಿಗೆ ಪ್ರಕೃತಿಯನ್ನೇ ಕುರಿತ ಗೀತೆಗಳು ವಿಶೇಷವಾಗಿ ರಚಿತವಾಗಿವೆ. ಅದರ ಹೊರಮೈ ಚೆಲುವಿನಿಂದ ಹಿಡಿದು, ಅಂತರಂಗದ ಚೆಲುವನ್ನೂ, ಅದರಲ್ಲಿನ ದೈವೀಕತೆಯನ್ನೂ ತಾನು ದರ್ಶಿಸಿದ್ದೆನೆಂದು ಬರೆಯದ ಕವಿಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ಈ ಪ್ರಕೃತಿ ಗೀತೆಗಳು ತುಂಬಿವೆ! ವಿಪುಲವಾದ ಈ ಗೀತೆಗಳಲ್ಲಿ ನಿಜವಾದ ಸೌಂದರ‍್ಯಾನುಭವದಿಂದ ಮೂಡಿದುವೆಷ್ಟು, ಅನುಭವವಾಗದಿದ್ದಾಗಲೂ ಬರೆದುವೆಷ್ಟು ಎನ್ನುವುದು ವಿಮರ್ಶಕರ ಜರಡಿಯ ವಸ್ತುವಾದರೂ, ಹಿಂದಿನ ಕವಿಗಳಿಗಿಂತ ನವೋದಯ ಕವಿಗಳಿಗೆ ಪ್ರಕೃತಿ ಸೌಂದರ್ಯವನ್ನು ಕುರಿತು ಒಂದು ಬಗೆಯ ತೀವ್ರವಾದ ಹಂಬಲ, ಕಾತರ, ತೃಷ್ಣೆ, ಉನ್ಮಾದ ಇವು ವಿಶೇಷವಾಗಿವೆ ಎನ್ನುವುದಂತೂ ಗಮನಾರ್ಹವಾದ ಸಂಗತಿಯಾಗಿದೆ. ಅಷ್ಟೇ ಅಲ್ಲ,  ಹಳೆಯ ಕಾವ್ಯಗಳಲ್ಲಿ ಒಂದು ವಸ್ತುವನ್ನು ಕುರಿತು ಒಬ್ಬ ಕವಿ ಮಾಡಿದ ವರ್ಣನೆಯನ್ನು ಮತ್ತೊಬ್ಬ ಕವಿಯೂ ಮಾದರಿಯಾಗಿರಿಸಿಕೊಂಡು ಸಂಪ್ರದಾಯವನ್ನು ಪಾಲಿಸಲು ಇಚ್ಛಿಸಿದಂತೆ, ಇಂದಿನ ಕವಿ ಅಷ್ಟಾಗಿ ಇಚ್ಛಿಸುವುದಿಲ್ಲ. ಈ ಕಾರಣದಿಂದಲೇ ಇಂದು ಪ್ರಕೃತಿಯ ಚೆಲುವೊಂದನ್ನು ಕುರಿತು ಹತ್ತು ಕವಿಗಳು ಬರೆದ ಕವಿತೆ ಹತ್ತು ತೆರನಾಗಿರುತ್ತದೆ. ಈ ಕವಿಗಳು ಪ್ರಕೃತಿಯಲ್ಲಿ ಯಾವ ಯಾವ ವಸ್ತುಗಳನ್ನು ಕುರಿತು ಯಾವ ಯಾವ ರೀತಿಯಲ್ಲಿ ವರ್ಣಿಸಿದ್ದಾರೆ ಎನ್ನುವ ವಿವರವಾದ ವ್ಯಾಖ್ಯಾನಕ್ಕೆ ಇಲ್ಲಿ ಅವಕಾಶವಿಲ್ಲವಾದುದರಿಂದ, ಕವಿ ಪ್ರಕೃತಿಯ ಚೆಲುವನ್ನು ಆಸ್ವಾದಿಸುವಲ್ಲಿ ಯಾವ ಯಾವ ದೃಷ್ಟಿಯಿಂದ ಅದನ್ನು ಸವಿದಿದ್ದಾನೆ ಎನ್ನುವುದರ ಹಲವು ರೂಪ – ರೇಷೆಗಳನ್ನು ಇಲ್ಲಿ ಗಮನಿಸಬಹುದು.

ನವೋದಯ ಕಾವ್ಯ ಪ್ರಧಾನವಾಗಿ ಭಾವಗೀತಾತ್ಮಕವಾದುದು. ಯಾವ ಯಾವ ಭಾವವೇ ಆಗಲಿ ಸ್ಥಾಯಿತ್ವವನ್ನು ಪಡೆದು ರಸಾನುಭವಕಾರಿಯಾಗಬಹುದು, ಸೌಂದರ‍್ಯಾನುಭವ ಸಮಯದಲ್ಲಿನ ಕವಿಯ ಭಾವ ಭಂಗಿಯೇ ಇಲ್ಲಿ ಪ್ರಧಾನ. ಅಶೃಂಖಲವಾದ ಕವಿಯ ಮನಸ್ಸು ತನ್ನನ್ನು ಯಾವ ಯಾವ ಭಾವದ ಪಾತ್ರಗಳಲ್ಲಿರಿಸಿಕೊಂಡು ಪ್ರಕೃತಿಯ ಚೆಲುವನ್ನು ಆಸ್ವಾದಿಸಲು ಪ್ರಯತ್ನಪಟ್ಟಿದೆಯೋ ಅಷ್ಟಷ್ಟೂ ವೈವಿಧ್ಯಗಳುಂಟು.

ಇದುವರೆಗೆ ಪ್ರಕಟಿತವಾಗಿರುವ ಪ್ರಕೃತಿ ಗೀತೆಗಳ ಅಧ್ಯಯನದಿಂದ ನಾವು ಕವಿಯ ಪ್ರಕೃತಿ ಸೌಂದರ‍್ಯಾನುಭವದಲ್ಲಿ ಮೂರು ಪ್ರಧಾನ ಘಟ್ಟಗಳನ್ನು ಗುರುತಿಸಬಹುದು:

೧.    ಕವಿ ತಾನು ಸೌಂದರ‍್ಯೋಪಾಸಕನಾಗಿ ನೇರವಾಗಿ ಪ್ರಕೃತಿಯ ಸೌಂದರ‍್ಯವನ್ನು ಅನುಭವಿಸಿರುವ ಪರಿ.

೨.    ಕವಿ ತನ್ನ ಅಂದಂದಿನ ಮನಃಸ್ಥಿತಿಗೆ ಅನುಸಾರವಾದ ಯಾವುದೋ ಒಂದು ಭಾವದಲ್ಲಿ ನಿಂತು ಅದರ ಮೂಲಕ ಪ್ರಕೃತಿಯ ಚೆಲುವನ್ನು ಸವಿದಿರುವ ಪರಿ.

೩.    ಕವಿ ಬೇರೊಂದು ಭಾವದ ಪಾತ್ರಗಳನ್ನು ಸೃಷ್ಟಿಸಿಕೊಂಡು ಅದರ ಮೂಲಕ ಪ್ರಕೃತಿ ಸೌಂದರ್ಯವನ್ನು ಅನುಭವಿಸಿರುವ ಪರಿ.

ಕವಿ ತಾನು ನೇರವಾಗಿ, ಸೌಂದರ‍್ಯೋಪಾಸಕನಾಗಿ ಪ್ರಕೃತಿಯ ಚೆಲುವನ್ನು ಕಂಡು ಮೈಮರೆತು ಅದರ ಬಹಿರಂಗದ ಚೆಲುವನ್ನು ಚಿತ್ರಿಸುವುದು ಒಂದು ರೀತಿಯದಾದರೆ, ಪ್ರಕೃತಿಯ ಚೆಲುವಿನ ವಸ್ತುಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮವನ್ನೇ ಚಿಂತನೆಗೆ ಒಳಪಡಿಸಿ ಆ ಚಿಂತನೆಯನ್ನು ಚಿತ್ರಿಸುವುದು ಇನ್ನೊಂದು ರಿತಿಯದು. ಇಂತಹ ಚಿಂತನಾ ಪ್ರಸೂತವಾದ ಸೌಂದರ‍್ಯಾನುಭವವನ್ನು ಚಿತ್ರಿಸುವ ರೀತಿಗೆ ಪು.ತಿ.ನ. ಅವರ ‘ಜಗಚೆಲುವೆನ್ನುವ ಬಗೆಯನುರಣನೆ’ ಎಂಬ ಕವಿತೆ ಒಂದು ನಿದರ್ಶನ. ಕವಿ ತನ್ನ ಸುತ್ತಲೂ ಹರಡಿದ ಪ್ರಕೃತಿಯ ಬಗೆ ಬಗೆಯಾದ ವಸ್ತುಗಳು ತನ್ನ ಅಂತಂರಗವನ್ನು ಏಕೆ ಹೀಗೆ ರಮಿಸುತ್ತವೆ ಎಂಬ ಜಿಜ್ಞಾಸೆಗೆ ತೊಡಗಿ –

ಜಗದೀ ದೈನಂದಿನ ಜಂಗಮತೆ
ನನ್ನೊಳು ಜನಿಯಿಸಿತೇತಕೆ ಮಮತೆ?

ಎಂದು ಚಿಂತಿಸುತ್ತಾ, ಕಡೆಗೆ

ಜಗ ಚೆಲುವೆನ್ನುವ ಬಗೆಯನುರಣನೆ
ವಿಶ್ವಾತ್ಮನ ನಿರ್ಹೇತುಕ ಕರುಣೆ
[2]

ಎಂಬ ತತ್ವವೊಂದನ್ನು ನೀಡುತ್ತಾರೆ. ಹೀಗೆ ಇಲ್ಲಿ ಕವಿ ತಾನು ವಸ್ತುವಿನ ಸೌಂದರ‍್ಯಾನುಭವದಲ್ಲಿ ತೊಡಗಿದ ಕಾಲದಲ್ಲೇ ಅದು ತನ್ನ ಅಂತರಂಗದಲ್ಲಿ ಮಾಡುವ ಪರಿಣಾಮವನ್ನೂ ತನ್ನ ರಸಜಿಜ್ಞಾಸೆಗೆ ಒಳಪಡಿಸಿ – ಆ ಎರಡನ್ನೂ ನೀಡಿರುವ ಒಂದು ವಿಶ್ಟಿವಾದ ರೀತಿಯನ್ನು ನಾವು ಕಾಣಬಹುದು. ಒಂದು ವಸ್ತುವಿನ ಸೌಂದರ‍್ಯಾನುಭವ ಸಮಯದಲ್ಲಿ, ಹಿಂದೊಮ್ಮೆ ಅದೇ ವಸ್ತು ಪ್ರಚೋದಿಸಿದ ಅನುಭವದೊಂದಿಗೆ ಹೋಲಿಸಿ ಅದರ ತಾರತಮ್ಯದ ಚಿಂತನೆಯಲ್ಲಿ ಚೆಲುವನ್ನು ಕಾಣುವುದು ಇದರಲ್ಲಿ ಇನ್ನೊಂದು ಪರಿ. ಒಮ್ಮೆ ‘ನೆರಳ’ನ್ನು ಕಂಡ ಕವಿ –

ಅದೊ ಮತ್ತೆ! ಆ ಮರದ ಛಾಯೆ!
ಎಂದಿನಂತೆಯೇ ಬಿದ್ದು ಸಾಯುತಿಹುದಲ್ಲಿ –
……. ಆ ಮರದ ಛಾಯೆ.
ಮಸಿಯ ಚೆಲ್ಲಿದ ತೆರದಿ ಹಸುರು ಬಯಲಿನ ಮೇಲೆ
ನೀಳವಾಗೊರಗಿಹುದು ಅಪಶಕುನ ರೂಪದಲಿ.
………… ಬಿದ್ದಿಹುದು
ಬಯಲಿನಲಿ ವಿಕ್ರೀತ ದಾಸನೊಲು ಬಿಡುಗಡೆಯ
ಬಯಸಲಾರದೆ ಬಯಸಿ. ದಿನದಿನವು ನೋಡುತಿಹೆ
ದಿನದಿನವು ಬೆಳಗು ಹಗಲೆನ್ನದೆಯೆ, ಬಾನಿನಲಿ
ರವಿ ಹೊಳೆಯುವಾಗೆಲ್ಲ ಮರದ ಕಾಲ್ದೆಸೆಯಲ್ಲಿ
ಬಿದ್ದು ಬೇಸರದೆ ಸಾಯುತ್ತಿಹುದು ಶಿವ ಶಿವಾ
ಒಂದು ಕ್ಷಣವಾದರೂ ತಪ್ಪಲೊಲ್ಲದು ದಾಸ್ಯ!
[3]

ಹೀಗೆ ಅದರಲ್ಲಿ ದಾಸ್ಯದ ಸಂಕೇತವನ್ನು ಕಾಣುತ್ತಾರೆ. ಸ್ವಾತಂತ್ರ್ಯಪ್ರಿಯವಾದ ಕವಿ ಚೇತನಕ್ಕೆ ಆ ಸ್ಥಿತಿಯಲ್ಲಿ ನೆಳಲು, ದಾಸ್ಯದ ಸಂಕೇತದಂತೆ ಕಂಡದ್ದು ಸಹಜ. ಆದರೆ ಅದೇ ನೆರಳು ಮತ್ತೆ ಒಮ್ಮೆ –

ಆ ಮರದ ತಣ್ಣೆಳಲು!
ಹುಲ್ಲು ಮೈದಾನದಲಿ ನೋಡೆನಿತು ಇಂಪಾಗಿ,
ಕಂಗಳಿಗೆ ತಂಪಾಗಿ, ಸೊಂಪುದಳಿರಿನ ಪ್ರೀತಿ
ಇಂದ್ರಿಯಂಗಳ ಕಾಣ್ಕೆಗೊಳಗಾದ ರೀತಿಯಲಿ
ಹಸರಿಸಿದೆ ಮರುಭೂಮಿಯಲ್ಲಿ ನೆಳಲ ಮರುವನದಂತೆ!
ಈ ಮರವೆ ಆ ನೆಳಲು ನಿನತೊಂದು ಕರ್ತವ್ಯ;
ನಿನ್ನ ಕೃಪೆ; ನಿನ್ನ ಆತ್ಮದ ಒಂದು ಔದಾರ‍್ಯ!
[4]

ಎಂಬಂತೆ ತೋರುತ್ತದೆ. ಒಮ್ಮೆ ಹಸುರು ಬಯಲಿನಲ್ಲಿ ಮಸಿ ಚೆಲ್ಲಿದಂತೆ, ಅಪಶಕುನದಂತೆ ದಾಸ್ಯದ ಸಂಕೇತದಂತೆ ಕಂಡ ನೆರಳು ಬೇರೊಂದು ಸಂದರ್ಭದಲ್ಲಿ ಕಂಗಳಿಗೆ ತಂಪಾಗಿ, ಮರದ ಕೃಪಾರೂಪಿಯಾದ ಆತ್ಮದ ಔದಾರ‍್ಯದಂತೆ ಕಾಣುತ್ತದೆ – ಕವಿಯ ಅಂದಂದಿನ ದೃಷ್ಟಿಯಂತೆ. ಇವರೆಡು ವರ್ಣನೆಗಳೂ, ಬೇರೆ ಬೇರೆ ಸಂದರ್ಭಗಳಲ್ಲಿ ಒಂದೇ ವಸ್ತುವಿನಿಂದ ಒಬ್ಬನೇ ಕವಿಗಾದ ಅನುಭವದ ಬೇರೆ ಬೇರೆ ರೂಪಗಳು. ಆದರೆ ಕವಿಯೇ, ಈ ಎರಡನೆಯ ಸಲದ ಅನುಭವದಲ್ಲಿ, ಹಿಂದೆ ಇದೇ ನೆಳಲು ಮಾಡಿದ ಅನುಭವವನ್ನು ನೆನಸಿಕೊಂಡು ಈ ಎರಡರ ಚಿಂತನೆಯನ್ನು ತಾನೇ ಮಾಡಿರುವುದು ಸ್ವಾರಸ್ಯವಾಗಿದೆ:

“….. ಒಮ್ಮೆ ನಿನ್ನನು ದಾಸನೆಂದಾಡಿ
ನಿಂದಿಸಿಹೆ, ನಿನ್ನ ಕರ್ತವ್ಯವನ್ನು ಹಳಿದಿರುವೆ,
ಚಿತ್ತ – ದಾಸ್ಯಕೆ ಚಿಹ್ನೆಯದು ಎಂದು; ಕರ್ತವ್ಯ
ದಾಸ್ಯಗಳಿಗಿನಿತೇನು ಬಾಹ್ಯ ಭೇದಗಳಿಲ್ಲ.
ಅಂದು ಬಾಹ್ಯವ ನೋಡಿ ಅಣಕಿಸಿದೆ; ನಿಂದಿಸಿದೆ.
ಇಂದು ಅಂತರಂಗವ ಹೊಕ್ಕು ಸುಖಿಸುವೆನು.
………………………………………………….
ಸವಿ ನೆಳಲೆ, ನನ್ನ ಆ ದರ್ಶನವ ಮರೆತು ಬಿಡು
ನನ್ನ ಇಂದಿನ ದರ್ಶನಕೆ ಮನ್ನಣೆಯ ಮಾಡು.
[5]

ಎಂದು ಈ ಎರಡು ಅನುಭವಗಳ ತಾರತಮ್ಯದ ಚಿಂತನೆಯನ್ನು ಪದ್ಯರೂಪದಲ್ಲಿರಿಸಿದ್ದಾರೆ. ವಸ್ತುವೊಂದು ತನ್ನ ಮೇಲೆ ಮಾಡುತ್ತಿರುವ ಅನುಭವವನ್ನೂ ಆ ಅನುಭವದ ಚಿಂತನೆಯನ್ನೂ ಏಕಕಾಲದಲ್ಲಿ ಸೌಂದರ‍್ಯಾನುಭವದ ವಸ್ತುವನ್ನಾಗಿ ಮಾಡುವಂತೆ, ಒಂದು ವಸ್ತು ಬೇರೆಯ ಕಾಲದಲ್ಲಿ ಮಾಡಿದ ಅನುಭವನ್ನು ಸದ್ಯಾನುಭವದೊಂದಿಗೆ ಹೋಲಿಸಿ ನಡೆಸುವ ಚಿಂತನೆಗಳೂ ಸೌಂದರ‍್ಯಾನುಭವದ ವಸ್ತುವಾಗಿರುವ ಈ ಪರಿಯೂ ಗಮನಾರ್ಹವಾದುದು. ಇದರ ಜೊತೆಗೆ ಇನ್ನೂ ಒಂದು ಪರಿಯನ್ನು ಸೇರಿಸಬಹುದು. ಪ್ರಕೃತಿಯ ಸೌಂದರ‍್ಯವನ್ನು ಸವಿಯುತ್ತಿರುವಂತೆಯೇ, ಇಲ್ಲಿ ರೂಪಸಿಯಾಗಿ ತನ್ನನ್ನು ಉಲ್ಲಾಸಗೊಳಿಸುವ ಈ ಪ್ರಕೃತಿ, ಬೇರೊಂದೆಡೆ ರಾಕ್ಷಸಿಯಾಗಿ ನಿಂತ ಕ್ರೌರ‍್ಯವನ್ನು ನೆನೆದು ಈ ಎರಡು ಮುಖಗಳ ಹಿಂದಿನ ನಿತ್ಯನಿಯಮವನ್ನು ಕುರಿತು ಚಿಂತನೆಯೂ ಇದರದೊಂದು ಪರಿ. ಕುವೆಂಪು ಅವರ “ಮೈಸೂರು-ಬಿಹಾರ” ಎಂಬ ಕವಿತೆ ಈ ರೀತಿಗೆ ಒಂದು ನಿದರ್ಶನ. ಬಿಹಾರದಲ್ಲಿ ಭೂಕಂಪವಾದ ಸಂದರ್ಭ; ಅದರ ವಿವರಗಳನ್ನು ವೃತ್ತಪತ್ರಿಕೆಯ ಮೂಲಕ ತಿಳಿದ ಕವಿಯ ಅಂತರಂಗದಲ್ಲಿ ಪ್ರಕೃತಿಯ ಆ ಕ್ರೌರ‍್ಯದ ಚಿಂತನೆ ಮಡುವಾಗಿತ್ತು. ಆಗೊಮ್ಮೆ ಪ್ರಭಾತದಲ್ಲಿ ವಿಹಾರ ಹೊರಟ ಕವಿ ಸುಂದರವಾದ ಉದಯದ ರಮಣೀಯತೆಯನ್ನು ಸವಿಯುತ್ತಿರುವಾಗಲೇ, ಇಲ್ಲಿ ಇಷ್ಟೊಂದು ರಮ್ಯವೂ, ಶಾಂತವೂ, ಆಗಿತೋರುವ ಇದೇ ಪ್ರಕೃತಿ, ಅಲ್ಲಿ ಬಿಹಾರದಲ್ಲಿ ಸಹಸ್ರಾರು ಜನರನ್ನು ಕಾಳಿಯಾಗಿ ಬಲಿ ತೆಗೆದುಕೊಂಡಿತೇ ಎಂಬ ಚಿಂತನೆ ಮೊದಲಾಗುತ್ತದೆ. ಆಗ ಎನ್ನಿಸುತ್ತದೆ –

ಇಂದುವದನೆ ಕುಂದರದನೆ
ಇಲ್ಲಿ ಪ್ರಕೃತಿ ರೂಪಸಿ!
ಅಲ್ಲಿ ಭೂಮಿ ನಡುಗಿತಂತೆ
ಲಕ್ಷ ಲಕ್ಷ ಮಡಿದರಂತೆ
ರಕ್ತನಖಿ ರಕ್ತಮುಖಿ
ಅಲ್ಲಿ ಪ್ರಕೃತಿ ರಾಕ್ಷಸಿ
[6]

ಎಂದು. ಈ ಎರಡು ಮುಖಗಳೂ ಒಂದೇ ಚೆಲುವಿನ ಬೇರೆ ಬೇರೆ ವಿನ್ಯಾಸಗಳು. ಪ್ರಕೃತಿ ಶಂಕರಿಯೂ ಹೌದು ಭಯಂಕರಿಯೂ ಹೌದು. ಈ ಎರಡು ಮುಖದ ಹಿಂದಿರುವ ನಿಯಮದ ಚಿಂತನೆಯಲ್ಲಿ ಆಶಾವಾದಿಯಾದ ಮತ್ತು ಶ್ರದ್ಧಾಳುವಾದ ಕವಿ –

ಲೇಸು ಕೇಡುಗಳನ್ನು ಮೀರಿ
ಮಹಾನಂದವಿರುವುದು

ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಇಂಥಲ್ಲೆಲ್ಲಾ ಪ್ರಕೃತಿಯ ಬಹು ಮುಖತ್ವವನ್ನು ಚಿಂತನೆಯ ಮೂಲಕ ಚಿತ್ರಿಸಲಾಗಿದೆ.

ಕವಿ ಸೌಂದರ‍್ಯೋಪಾಸಕನಾಗಿ, ನೇರವಾಗಿ ಪ್ರಕೃತಿಯ ಚೆಲುವನ್ನು ಸವಿಯುವಲ್ಲಿ, ಕವಿ ಸೌಂದರ‍್ಯದ ವಸ್ತುವಿನೊಂದಿಗೆ ಪಡೆಯುವ ತಾದಾತ್ಮ್ಯಾನುಭವದ ಚಿತ್ರಣವೂ ಒಂದು. ಈ ಅನುಭವದಲ್ಲಿ ಕವಿ ತಾನು ಪ್ರಕೃತಿಯಲ್ಲಿ ಒಂದಾಗಿ ಸವಿದ ಭಾವವನ್ನು ಚಿತ್ರಿಸುವಲ್ಲಿ, ತನ್ನನ್ನು ಒಳಗೊಂಡ ದೃಶ್ಯದ ಚಿತ್ರವನ್ನೂ ಮತ್ತು ತನ್ನ ಮೇಲಾದ ಪರಿಣಾಮದಿಂದ ತಾನು ದರ್ಶಿಸಿದ ಪರಮ ತತ್ವವನ್ನು – ಕಾವ್ಯವನ್ನಾಗಿ ನೀಡಿರುವ ರೀತಿಗಳುಂಟು. ಅಂತೆಯೇ ಕವಿ ಪ್ರಕೃತಿಯ ಚೆಲುವಿನಲ್ಲಿ ಪಡೆದ ಆನಂದಾನುಭವವಷ್ಟನ್ನೇ ಕಾವ್ಯವನ್ನಾಗಿ ನೀಡಿರುವ ರೀತಿಯೂ ಉಂಟು. “ಶರತ್ಕಾಲದ ಸೂರ‍್ಯೋದಯದಲಿ” ಎಂಬ ಕುವೆಂಪು ಅವರ ಕವಿತೆ ಇಂತಹ ರೀತಿಗೊಂದು ನಿದರ್ಶನ. ಒಂದು ಸುಂದರವಾದ ಶರತ್ಕಾಲದಲ್ಲಿ ಕವಿ ತನಗಾದ ಅನುಭವನ್ನು, ಕೃತಿಯನ್ನಾಗಿ ರೂಪಿಸುವಾಗ, ಅದರ ಪುನರನುಭವದಲ್ಲಿ, ಶರತ್ಕಾಲದ ಸೂರ‍್ಯೋದಯದ ಸಂದರ್ಭದಲ್ಲಿ ಸಂಚಾರ ಹೊರಟ ಕವಿಯೂ ಮತ್ತು ಆತ ಪಡೆದ ಅನುಭವವೂ ಕೃತಿಯ ವಸ್ತುವಾಗಿದೆ! ಆದುದರಿಂದಲೆ –

ಶರತ್ಕಾಲದ ಸೂರ‍್ಯೋದಯದಲಿ
ಸ್ವರ್ಗವು ಹೊಮ್ಮಿರೆ ಮರ್ತ್ಯಹೃದಯದಲಿ
ಹೊರ ಹೊರಟೆನು ನಾ ಸಂಚರಿಸೆ
[7]

ಎಂದು ಮೊದಲಾಗುತ್ತದೆ ಈ ಕವಿತೆ. ಅಂದರೆ ಕವಿ ತಾನು ಸೌಂದರ‍್ಯಾನುಭವಕ್ಕೆ ಹೊರಟ ಸಂಗತಿಯೂ ಈಗ ಕೃತಿ ರಚನಾ ಕಾಲದ ಪುನರನುಭವದಲ್ಲಿ ಸೌಂದರ್ಯಾಂಶವೇ! ಆ ಶರತ್ಕಾಲದ ಸೂರ‍್ಯೋದಯದಲ್ಲಿ ಮರ್ತ್ಯ ಹೃದಯದಲ್ಲಿ ಸ್ವರ್ಗವು ಹೊಮ್ಮಿರುವಾಗ, ಕವಿ ಕಂಡ ಸ್ವರ್ಗೀಯ ದೃಶ್ಯ ಇದು –

ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ
ರನ್ನದ ಕಿರು ಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ
ಕಾಮನ ಬಿಲ್ಲಿನ ಬೆಂಕಿಯ ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ!
[8]

ಕಣ್ಣು ಕಂಡದ್ದು ಇದು : ಬರಿಯ ಕಣ್ಣಿಗಲ್ಲ ಕವಿಯ ಕಲ್ಪನೆಯ ಕಣ್ಣಿಗೆ. ಸಚಿತ್ರವಾದ ಸವರ್ಣವಾದ-ಸಜೀವವಾದ ಈ ಕಲ್ಪನಾ ಸೌಂದರ‍್ಯದ ಮೋಡಿ ನಮ್ಮನ್ನು ಬೆರಗಾಗಿಸುತ್ತದೆ ತನ್ನ ಅಪೂರ್ವ ವಿಶಿಷ್ಟತೆಯಿಂದ. ಹಿಮಮಣಿಗಳ ಸ್ವರ್ಗೀಯ ಸೌಂದರ‍್ಯದಿಂದ ಆಕರ್ಷಿತವಾದ ಕವಿಯ ಚೇತನಕ್ಕಾದ ಅನುಭವವೆ ಬೇರೆ –

ಭಾವಾವೇಶದಿ ನೋಡುತ ನಿಂತೆ
ಹೃದಯದೊಳುರಿಯಿತು ರಸಮಯ ಚಿಂತೆ
‘ಉರಿ-ಕಿಡಿ’ದೆನು ಹಿಮಮಣಿಯಂತೆ!
[9]

ಆ ಅನುಭವವನ್ನು ಮಾತಿಗಿಳಿಸುವ ರೀತಿಯಿದು. ಸೊಡರುರಿವ ಇಬ್ಬನಿಯೊಡನೆ, ತಾನೂ ‘ಉರಿ-ಕಿಡಿ’ದೆ ನೆನ್ನುವ ಮಾತು, ಕವಿಗಾದ ಸೌಂದರ‍್ಯಾನುಭವದ ರೀತಿಯ ವರ್ಣನೆಯಾಗಿದೆ. ಇಲ್ಲಿನ ಭಾವ, ಕೇವಲ ಒಲುಮೆಯ ಭಾವ, ರಸ ಪ್ರೇಮರಸ. ಈ ಪ್ರೀತಿಯ ಕಣ್ಣಿನಲ್ಲಿ ಕವಿ ವಸ್ತುವಿನ ಅಂತರಂಗದ ಚೆಲುವಿನ ನೆಲೆಯನ್ನು ಸೇರಿದ್ದಾರೆ ‘ಉರಿ-ಕಿಡಿ’ಯುವ ಅನುಭವದಲ್ಲಿ. ಈ ಅನುಭವದ ಮೊದಲ ಸ್ಥಿತಿಯಲ್ಲಿ ಅನ್ನಿಸಿತು –

ಕಲ್ಲಿನ ಯುಗ ಯುಗದಿರವೂ ಶೂನ್ಯ
ಹುಲ್ಲಿನ ಅರೆ ನಿಮಿಷದ ಹನಿ ಧನ್ಯ
ತಳ ತಳಿಪುದೆ ಸಾರ್ಥಕ ಪುಣ್ಯ
[10]

ಎಂದು. ಆದರೆ ಆ ಅನುಭವ ಇನ್ನೂ ಆಳವಾದಂತೆ, ರಸಾನುಭವದ ಪರಮಸ್ಥಿತಿಯಲ್ಲಿ ಮರಳಿ ಅನಿಸುತ್ತಿದೆ.-

ಕಲ್ಲಲಿ ಮಣ್ಣಲಿ ಹುಲ್ಲಲಿ ಹುಡಿಯಲಿ
ನೀರಿನ ಹನಿಯಲಿ ಬೆಂಕಿಯ ಕಿಡಿಯಲಿ
ನನ್ನಲಿ ಎಲ್ಲಿಯು ಚೈತನ್ಯ!
[11]

ಎಂದು. ಈ ಚೈತನ್ಯ ಸ್ಪಂದನವನ್ನು ಪ್ರತಿಯೊಂದು ಅಣುಕಣದಲ್ಲೂ ಅನುಭವಿಸಿದ ಕವಿ –

“ತೆಗೆ! ಜಡವೆಂಬುದೆ ಬರಿ ಸುಳ್ಳು”[12]

ಎನ್ನುವ ರಹಸ್ಯವನ್ನು ಅರಿತಂತೆಯೇ, ಸೌಂದರ್ಯದ ಮೂಲತತ್ವ ಒಂದು ಚೇತನವನ್ನೂ ಮತ್ತೊಂದು ಚೇತನವನ್ನು ಬೆಸೆಯುವ ಪ್ರೀತಿ’ ಎನ್ನುವುದನ್ನೂ ಅರಿಯುತ್ತಾರೆ. ಕವಿ ಹಿಮಮಣಿಗಳ ಸೊಬಗನ್ನು ಸವಿದಾಗ –

‘ಹನಿಯನು ನಾನನುಭವಿಸುವ ಪ್ರೀತಿ
ಆ ಹನಿ ನನ್ನನು ರಮಿಸುವ ರೀತಿ’
[13]

ಎನ್ನುತ್ತಾರೆ. ಎಂದರೆ ವಸ್ತು ಕವಿಯ ಮನಸ್ಸನ್ನು ಆಕರ್ಷಿಸಿ ರಮಿಸುವ ರೀತಿಯೇ ಕವಿ ವಸ್ತುವನ್ನು ಪ್ರೀತಿಸುವ ರೀತಿಯೂ! ಸೌಂದರ‍್ಯದ ವಸ್ತು ಅಂತರಂಗವನ್ನು ರಮಿಸುವಲ್ಲಿ ಅದನ್ನು ಪ್ರೀತಿಸುವ ರೀತಿಯೂ ಒಳಗಿನಿಂದ ಕೂಡಿಕೊಂಡು ಕವಿಗೆ ವಸ್ತು ಸುಂದರವೆಂಬ ಒಂದು ಅನುಭವವಾಗುತ್ತದೆ. ಇಂತಹ ಕವನಗಳಲ್ಲಿ ಚಿತ್ರಿತವಾಗಿರುವುದು ಕವಿಗಾದ ಸೌಂದರ‍್ಯಾನುಭವದ ಆನಂದ ಮಾತ್ರವಲ್ಲ; ಕವಿಯ ಅಂತರಂಗದ ಸೌಂದರ‍್ಯಾನುಭವದ ಎಚ್ಚರವೂ! ಕವಿಗೆ ಕೇವಲ ಪ್ರಕೃತಿಯ ಚೆಲುವು ಮಾತ್ರವಲ್ಲ ಅದನ್ನು ಸವಿದ ಕವಿಯೂ, ಕವಿಗಾದ ಸೌಂದರ‍್ಯಾನುಭವದ ಪರಿಯೂ ವಸ್ತು. ಇಲ್ಲಿ ಕಣ್ಣಿಗಾದ ಅನುಭವ, ಮನಸ್ಸಿಗಾದ ಅನುಭವ, ಅದನ್ನು ಬುದ್ಧಿ ವಿಭಜಿಸಿ ನೋಡಿದ ಅನುಭವ, ಕಡೆಗೆ ಆತ್ಮಕ್ಕಾದ ಚೈತನ್ಯಾನುಭವ ಇವಿಷ್ಟೂ ಚಿತ್ರಿತವಾಗಿವೆ. ಇಲ್ಲಿಯೂ ಕವಿ ಪ್ರಕೃತಿಯ ಚೆಲುವಿನಲ್ಲಿ ಪಡೆದ ತಾದಾತ್ಮ್ಯಾನುಭವವನ್ನು ಹೇಳಿದಂತೆ, ಅದನ್ನೇ ಯಾವ ವಿಶ್ಲೇಷಣೆಗೂ ಒಳಪಡಿಸದೆ ನೇರವಾಗಿ ತನಗಾದ ಅನುಭವವನ್ನೇ ಚಿತ್ರಿಸುವ ಪರಿಯೂ ಒಂದುಂಟು. ಅನುಭವದ ವರ್ಣನೆಯನ್ನಲ್ಲ, ಅನುಭವವನ್ನೇ ನೇರವಾಗಿ ನೀಡುವ ರೀತಿ ಇದು. ಹಸುರು ಎಂಬ ಕವಿತೆ ಇದಕ್ಕೊಂದು ನಿದರ್ಶನ. ಕವಿ ಹಸುರನ್ನು ಕಾಣುತ್ತಾ ತಾವೂ ಹಸುರೇ ಆದರಂತೆ! ಆ ಅನುಭವದಲ್ಲಿ –

ಹೊಸ ಹೂವಿನ ಕಂಪೂ ಹಸುರು;
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪೂ ಹಸುರು
ಹಸುರು ಹಸುರಿಳೆಯುಸಿರೂ
[14]

ಎಂದಾಗ ಹಸುರಿನ ಅನುಭವ ದೃಗಿಂದ್ರಿಯದ ಮೂಲಕವೆ ಆದರೂ, ಶಬ್ದ ಸ್ಪರ್ಶ ಗಂಧಾದಿಗಳಿಗೂ ಹಸುರೇರಿರುವುದು ಈ ತಾದಾತ್ಮ್ಯಾನುಭೂತಿಯ ಶಿಖರ. ಇಲ್ಲಿ ‘ತೆಗೆ ಜಡವೆಂಬುದೆ ಬರಿ ಸುಳ್ಳು’ ಇತ್ಯಾದಿ ಯಾವ ಮಾತೂ ಇಣುಕದೆ, ಕವಿ ಹಸುರಿನಲ್ಲಿ ಹಸುರಾದ ಅನುಭವವನ್ನು ಈ ಕವಿತೆ ನೇರವಾಗಿ ಹೇಳುತ್ತದೆ. ಹಿಂದಿನ ಪದ್ಯದಲ್ಲಿಯಂತೆ ಮೊದಲು ಹೀಗೆ ಕಂಡಿತು, ಆಮೇಲೆ ಹೀಗಾಯಿತು – ಎಂಬ ಯಾವ ಬುದ್ಧಿ ತರ್ಕದ ಪ್ರವೇಶವೂ ಇಲ್ಲದೆ ಕವಿತೆಯಲ್ಲಿ ನೇರವಾಗಿ ಕವಿ-

ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ
[15]

ಎಂದು ಒಮ್ಮೆಲೇ ಆ ನೇರವಾದ ಸೌಂದರ‍್ಯಾನುಭೂತಿಯನ್ನೇ ಚಿತ್ರಿಸಿರುವುದು ಗಮನಾರ್ಹವಾಗಿದೆ. ‘ಶರತ್ಕಾಲದ ಸೂರ‍್ಯೋದಯದಲಿ’ ಎಂಬ ಕವಿತೆಯಲ್ಲಿ, ಕವಿ ಪ್ರಕೃತಿಯ ದೃಶ್ಯ-ಅದರ ಅನುಭವದ ಮಜಲುಗಳು-ಕವಿ ಕಂಡು ಹೇಳುವ ತತ್ವ ಈ ನಾಲ್ಕು ಹಂತಗಳಿದ್ದರೆ, ‘ಹಸುರು’ ಎಂಬ ಕವಿತೆಯಲ್ಲಿ ಕವಿ ಮತ್ತು ಕವಿ ಕಂಡ ದೃಶ್ಯ ಮತ್ತು ಪಡೆದ ತಾದಾತ್ಮ್ಯಾನುಭವ – ಈ ಅಂಶಗಳು ಗೋಚರಿಸುತ್ತವೆ. ಕವಿಯ ವ್ಯಕ್ತಿತ್ವ ಪ್ರತ್ಯೇಕವಾಗಿ ನಮಗೆ ಅರಿವೇ ಆಗದ, ಕೇವಲ ಕವಿಯ ಆನಂದಾನುಭವ ಕಾವ್ಯವಾಗಿ ಪ್ರವಹಿಸಿ ನಮ್ಮನ್ನು ಸೆಳೆಯುವ ಇನ್ನೊಂದು ರೀತಿಯೂ ಈ ಅಭಿವ್ಯಕ್ತಿಯಲ್ಲಿ ಉಂಟು. ಕವಿ ಬೇಂದ್ರೆಯವರ ‘ಶ್ರಾವಣ’ ಇದಕ್ಕೊಂದು ನಿದರ್ಶನ. ಅಲ್ಲಿ ನಾವು ಕಾವ್ಯದಲ್ಲಿ ಕವಿಯನ್ನು ನೇರವಾಗಿ ಕಾಣುವುದಿಲ್ಲ; ಶ್ರಾವಣದ ವೈಭವವನ್ನು ಕಾಣುತ್ತೇವೆ. ಆ ಶ್ರಾವಣದ ಸೌಂದರ‍್ಯದಲ್ಲಿ ಕವಿ ಕರಗಿ ಹೋಗಿ ನಾವು ಕಾಣುವುದು ಕೇವಲ ಶ್ರಾವಣದ ಸೂರೆಯನ್ನು –

ಶ್ರಾವಣ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣ ಬಂತು||

ಎಂಬ ಕವಿಯ ನಲವಿನ ಹಾಡು ತೆಕ್ಕನೆಯೆ ಓದುಗನನ್ನು ಸೌಂದರ‍್ಯಾನುಭವದ ಮಡುವಿನೊಳಕ್ಕೆ ಮೊಸಳೆಯಂತೆ ಎಳೆದುಕೊಳ್ಳುತ್ತದೆ. ಕವಿ ಕಂಡ ಶ್ರಾವಣದ ಚೆಲುವಿನ ಚಿತ್ರಗಳಿವು :

ಶ್ರಾವಣ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
ಹೊಳಿಗೆ ಮತ್ತ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ
ಹಸುರುಟ್ಟ ಬಸುರಿಯಾ ಹಾಂಗ |
ನೆಲ ಹೊಲ ಹ್ಯಾಂಗ |
ಅರಿಸಿಣಾ ಒಡೆಧಾಂಗ
ಹೊಮ್ಮುತಾವ | ಬಂಗಾರ ಚಿಮ್ಮುತಾವ |
ಗುಡ್ಡ ಗುಡ್ಡ ಸ್ಥಾವರಾಲಿಂಗ
ಅವಕ ಅಭ್ಯಂಗ
ಎರಿತವನ್ನೋ ಹಾಂಗ
ಕೂಡ್ಯಾವ ಮೋಡ! ಸುತ್ತೆಲ್ಲ ನೋಡ ನೋಡ
[16]

ಈ ಚಿತ್ರಗಳಲ್ಲೆಲ್ಲಾ ಕವಿ ಶ್ರಾವಣದ ವೈಭವವನ್ನು ತಾವೇ ತೆರೆದಿದ್ದಾರೆ, ನಮ್ಮ ಮುಂದೆ. ಶ್ರಾವಣದ ಸೌಂದರ‍್ಯಾನುಭವದಲ್ಲಿ ಕವಿ ಒಂದಾಗಿದ್ದಾರೆ ಎನ್ನುವುದನ್ನು, ಪದ್ಯದಲ್ಲಿನ ಕವಿ ಕಂಡು ಹೇಳುವ ಬದಲು, ಪದ್ಯವೇ ಹೇಳುತ್ತದೆ. ಇಂಥ ಕಡೆ ಕವಿ ಪ್ರಕೃತಿಯಲ್ಲಿ ಕಂಡ ತತ್ವವೊಂದನ್ನು, ತತ್ವವನ್ನಾಗಿ ಹೇಳದೆ, ಕವಿಯ ಅನುಭವವೇ ಆ ತತ್ವವನ್ನು ಧ್ವನಿಸುವ ರೀತಿ ತುಂಬ ಹಿತವಾಗಿರುತ್ತದೆ. ಉದಯ ಸಮಯದಲ್ಲಿ ಕವಿ ಚೈತನ್ಯ ದರ್ಶನದಿಂದ ‘ತೆಗೆ ಜಡವೆಂಬುದೆ ಬರಿಸುಳ್ಳು’ ಎಂದು ಹೇಳಿದ ಒಂದು ಪದ್ಯವನ್ನು ನೋಡಿದೆವು. ಅಂಥದೇ ಒಂದು ಬೆಳಗು, ಅದೇ ಅನುಭವವನ್ನು ಧ್ವನಿಸುವ ರೀತಿ ಇದು:

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು ಹಕ್ಕೀಗಳ ಹಾಡು
ಗಂಧರ್ವರ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು!
[17]

ಉದಯದಲ್ಲಿ ಹಕ್ಕಿಗಳ ಹಾಡನ್ನು ಕೇಳಿದ ಕವಿಗಾದ ಅನುಭವ ಇದು. “ಹಾಡುವ ಹಕ್ಕಿ ಗಿಡಗಂಟೆಯ ಕೊರಳು. ಉದಯದಲ್ಲಿ ಗಿಡ ಪಡುವ ಆನಂದವನ್ನು ಹಕ್ಕಿಯ ಹಾಡು ಹೊರಸೂಸುತ್ತದೆ. ಇಂಥ ಮಾತಿನಲ್ಲಿ ಮಿಗಿಲಾದ ಚಾತುರ‍್ಯ ಮಾತ್ರ ಇಲ್ಲ, ಪ್ರಕೃತಿಯನ್ನು ಕುರಿತ ವಿಲಕ್ಷಣವಾದ ಭಾವನೆಯಿದೆ. ಗಿಡದ ಆನಂದ, ಗಿಡದಲ್ಲಿ ಕುಳಿತ ಹಕ್ಕಿಯ ಆನಂದ, ಬೀಸುವ ಗಾಳಿಯ ಆನಂದ ಇವು ಬೇರೆ ಬೇರೆ ಎಂದು ತಿಳಿದವನು ಅವನ್ನು ಬಿಡಿಸಿ ಬಿಡಿಸಿ ಹೇಳುತ್ತಾನೆ. ಇವುಗಳೆಲ್ಲ ಒಂದು ಆನಂದ, ನಾಲ್ಕು ಕಡೆ ಕಂಡಿರತಕ್ಕದ್ದು ಎಂದು ಬುದ್ಧಿಯಿಂದ ತಿಳಿಯುವವನು ಇದೊಂದು ವಿಚಾರ ಎಂಬಂತೆ ಹೇಳುತ್ತಾನೆ. ಇದಕ್ಕೂ ಮುಂದಿನ ಒಮ್ಮೈಯನ್ನು ಅರಿತವನು ಬೇಂದ್ರೆಯವರು ಹೇಳಿದಂತೆ ‘ಗಿಡಗಂಟೆಯ ಕೊರಳು’ ಆನಂದದಿಂದ ಹಾಡಿತು ಎನ್ನುತ್ತಾನೆ. ಬಾಳೆಲ್ಲ ಒಂದು ಎನ್ನುವುದು ತಿಳಿವಿಗೆ ಮಾತ್ರ ಕಂಡಾಗ ಅಲ್ಲ, ಅನುಭವದಿಂದ ಕಂಡಾಗ ಮಾತ್ರ ಈ ಮಾತು ಪ್ರಯತ್ನವಿಲ್ಲದೆ ಬರುತ್ತದೆ.”[18] ಹಕ್ಕಿಯ ಕೊರಳು ಗಿಡಗಂಟೆಯ ಕೊರಳು ಆಗಿರುವುದೇ ಕವಿಯ ಅನುಭವದಲ್ಲಿ ಎಲ್ಲವೂ ಚೈತನ್ಯಮಯವಾಗಿ ಗೋಚರಿಸಿದ್ದನ್ನು ಹೇಳುತ್ತದೆ. ಈ ಅನುಭವಕ್ಕೆ ಬೆಳಗು, ನಾವು ನೀವು ಕಾಣುವ ಬರಿಯ ಬೆಳಗಲ್ಲ –

ಶಾಂತಿ ರಸವೆ ಪ್ರೀತಿಯಿಂದ ಮೈದೋರಿತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ.
[19]

ಎನ್ನುವಲ್ಲಿ ಕವಿ ಬೆಳಗಿನಲ್ಲಿ ಮೈದೋರಿರುವ ಶಾಂತಿರಸವನ್ನೇ, ಆ ಪರಮ ಕಾರುಣ್ಯವನ್ನೇ ಕಂಡಿದ್ದಾರೆ. ಮೊದಲು ಚೆಲುವಾಗಿ ಇಂದ್ರಿಯಗಳನ್ನು ಮೋಹಿಸುವ, ಒಂದು ರೀತಿಯ ನಲವಾಗಿ, ಅಂತರಂಗವನ್ನು ತಣಿಸುವ ಚೈತನ್ಯವಾಗಿ ಅನುಭವಕ್ಕೆ ಬರುವ ಈ ಸೌಂದರ್ಯ ಆ ದೈವೀಕೃಪೆಯಲ್ಲದೆ ಬೇರೆಯಲ್ಲ ಎಂಬ ಅನುಭವವಾಗುತ್ತದೆ. ಕವಿಗೆ ಈ ಭಾವದಲ್ಲಿ –

ಬಿಸಿಲಿದು ಬರಿ ಬಿಸಿಲಲ್ಲವೊ
ಸೂರ‍್ಯನ ಕೃಪೆ ಕಾಣೊ
[20]

ಎನಿಸುತ್ತದೆ. ಅಷ್ಟೆ ಅಲ್ಲ ಈ ಲೋಕದ ಸೌಂದರ್ಯವೇನಿದ್ದರೂ ಪರಮಾತ್ಮನ ಇರವಿನ ಛಾಯೆಯಾಗಿ, ಸಂಕೇತವಾಗಿ ತೋರುತ್ತದೆ. ಮಾಲೆ ಮಾಲೆಯಾಗಿ ಹಾರುವ ಬೆಳ್ಳಕ್ಕಿಯನ್ನು ಕಂಡು –

ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು!
[21]

ಎನ್ನುತ್ತಾರೆ. ಈ ರುಜು ಯಾವುದಕ್ಕೆ? ಸೃಷ್ಟಿಯ ಸೌಂದರ‍್ಯದಲ್ಲೆಲ್ಲಾ ಚಿರಚೇತನ ರೂಪವಾಗಿ ನಾನಿದ್ದೇನೆ ಎನ್ನುವ ಒಪ್ಪಂದಕ್ಕೆ!

ಸೃಷ್ಟಿಯ ರಚನೆಯ ಕುಶಲಕೆ ಚೆಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರ ಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು!
[22]

ಕವಿ ಕಂಡದ್ದು ಬರಿಯ ಬೆಳ್ಳಕ್ಕಿಯ ಪಂಕ್ತಿಯನ್ನಲ್ಲ, ನೀಲಾಕಾಶಪಟದಲ್ಲಿ ದೇವರ ರುಜುವನ್ನು! ಬೆಳ್ಳಕ್ಕಿಯ ಪಂಕ್ತಿ ಅವನ ಇರವಿಗೆ ನೆಪವಾದ ಒಂದು ರುಜು. ಲೋಕದ ಚೆಲುವಿನಲ್ಲಿ ಆತ್ಮ ಸೌಂದರ್ಯವನ್ನು ಕಂಡ ಪರಿ ಇದು. ಈ ಬಗೆಯ ಭಾವುಕ ದೃಷ್ಟಿಗೆ ಸೌಂದರ್ಯ ದೈವೀವಾಣಿಯಾಗಿ ಆಹ್ವಾನಿಸುವಂತೆ ತೋರುತ್ತದೆ –

ಇನಿದೆಲ್ಲಾ ಸ್ವರ; ಎಲ್ಲವು ದೇವರು
ನಮ್ಮ ಕರೆವ ರೀತಿ;
ಒಮ್ಮೆ ಒಂದು ತೆರ, ಮತ್ತೆ ಬೇರೆ ತೆರ
ಹರಿವುದವನ ಪ್ರೀತಿ
[23]

ಈ ಸೃಷ್ಟಿ ಸೌಂದರ್ಯವಾಗಿ ನೂರು ಸ್ವರದಿಂದ ಕರೆಯುತ್ತಿದೆ. ಹಾಗೆ ಸೌಂದರ‍್ಯವಾಗಿ ನೂರು ಬಗೆಯಿಂದ ಕರೆಯುವುದು ಆ ಭಗವತ್ ಪ್ರೀತಿ. ಕವಿ ಕಾಣುವುದು ಬರಿಯ

ಚೆಲುವನ್ನಲ್ಲ; ಆ ಚೆಲುವಿನಾಳದಲ್ಲಿರುವ ಚೈತನ್ಯದ ಸೆಲೆಯಾದ ಶಿವವನ್ನು. ಶಿವವನ್ನು ಕಾಣದ ಕವಿ ಕುರುಡನೇ ಸರಿ-

ಶಿವಕಾಣದ ಕವಿ ಕುರುಡನೊ
ಶಿವ  ಕಾವ್ಯದ ಕಣ್ಣೋ!
[24]

ಸೌಂದರ‍್ಯೋಪಾಸಕ ಏರುವ ಗುರಿ – ಈ ಶಿವದ ನೆಲೆ. ಸೌಂದರ‍್ಯದಲ್ಲಿ ಪರಮ ಸತ್ಯರೂಪಿಯಾದ ಶಿವನನ್ನು ಕಾಣುವುದೇ ಈ ಸೌಂದರ‍್ಯೋಪಾಸನೆಯ ಗುರಿ. ಇಲ್ಲಿ ಕವಿ ಬರಿಯ ಕವಿಯಾಗದೆ ಅನುಭಾವಿಯಾಗುತ್ತಾನೆ.

ಕವಿ ತನ್ನ ಅಂದಂದಿನ ಮನಃಸ್ಥಿತಿಗೆ ಅನುಸಾರವಾದ ಭಾವವೊಂದರ ಮೂಲಕ ಪ್ರಕೃತಿಯ ಚೆಲುವನ್ನು ಕಾಣುವುದು ಸೌಂದರ‍್ಯಾನುಭವದ ಪ್ರಧಾನವಾದ ರೀತಿಯಲ್ಲಿ ಎರಡನೆಯದು. ಕವಿ ತನ್ನ ಅಂದಂದಿನ ಭಾವಗಳ ಮೂಲಕ ಎಂದರೆ, ಅಂದು ಅವನನ್ನು ಆವರಿಸಿದ ವಿರಹವೋ, ಶೋಕವೋ, ರಾಜಕೀಯ ಸಾಮಾಜಿಕ ಅವ್ಯವಸ್ಥೆಗಳ ತುಡಿತಕ್ಕೆ ಸಿಕ್ಕ ಮನಸ್ಥಿತಿಯಲ್ಲೋ ಇರುವಾಗ ಆ ಕಣ್ಣಿಗೆ ಪ್ರಕೃತಿ ಕಂಡ ಪರಿ, ಕವಿ ಕೇವಲ ಸೌಂದರ‍್ಯೋಪಾಸಕನಾಗಿ ಪ್ರಕೃತಿಯನ್ನು ಕಂಡ ಪರಿಯಿಂದ ಬೇರೆಯಾದುದು.

ಕವಿ ಅಧ್ಯಾತ್ಮ ಸಾಧಕನಾಗಿರುವಾಗ, ಆ ಅಧ್ಯಾತ್ಮದ ಹಂಬಲದ ತುಡಿತ ಅವನ ಅಂತರಂಗವನ್ನು ತುಂಬಿದಾಗ, ಪೂಜ್ಯವಾದ ಪವಿತ್ರವಾದ ಭಾವಗಳು ಮನಸ್ಸನ್ನು ಮಿಡಿಯುವಾಗ ಒಂದು ಸಂಜೆ ಹೀಗೆ ಕಾಣುತ್ತದೆ-

‘ಸಾಯಂಕಾಲವು ಮೌನವನಾಂತಿರೆ
ಧ್ಯಾನದೊಳಿರ್ಪ ತಪಸ್ವಿನಿಯಂದದಿ!
ಗುರುವಿನ ಮುಂಗಡೆ ಸುಳಿಯುವ ಶಿಷ್ಯನ
ಚಲನೆಯ ತೆರದಲಿ ತಣ್ಣನೆ ಗಾಳಿಯು
ಬೀಸುತಲಿದೆ……. ಮುಳುಗಿದ
ಸೂರ‍್ಯನ ಕೆಂಪನು ತಳೆದಿರುವಂಚಿನ
ಕಿರಿಯ ಮುಗಿಲ್ಗಳ ಮೊತ್ತವು ಚಲಿಸದೆ
ಜಪ ಮಾಡುತಲಿದೆ. ನಿಂತಿಹ ಮರಗಳೊ
ಮನವನು ಭಾವ ಸಮಾಧಿಯೊಳದ್ದಿಹ
ರಸಯೋಗಿಗಳಂದದಿ ತೋರುತಲಿವೆ.
ಅವರೆಯ ತೊಗರಿಯ ಹೊಲಗಳು ಕೂಡ
ಯಾವುದೊ ಮಂತ್ರವನುಸುರುತಲಿರುವುವು
…………………………………
ಎಲ್ಲವು ಸಂಧ್ಯಾಯೋಗಿನಿಯೆಡೆಯಲಿ
ದೀಕ್ಷೆಯಕೈಗೊಳ್ಳುತಲಿವೆ………….
[25]

ಧ್ಯಾನದಲ್ಲಿರುವ ತಪಸ್ವಿ ಗುರು-ಶಿಷ್ಯ, ಜಪಮಾಡುವ ಸಾಧಕರು; ರಸಯೋಗಿ, ಭಾವಸಮಾಧಿ, ಮಂತ್ರದೀಕ್ಷೆ; ಶಾಂತಿ-ಈ ಭಾವನೆಗಳ ಸಂಯೋಗದಿಂದಾಗುವ ಸೌಂದರ‍್ಯಾನುಭವದ ಚಿತ್ರ ಇದು. ಇಂಥ ಚಿತ್ರಗಳು, ಕವಿಯ ವೈಯಕ್ತಿಕಾನುಭವದ ಚಿತ್ರವೆಂಬಂತೆ ಮಾತ್ರವಲ್ಲ ಋಷ್ಯಾಶ್ರಮದ ವರ್ಣನೆಗೆ ಬೇಕಾದರೂ ಇದೇ ವರ್ಣನೆಯನ್ನು ಸಲೀಸಾಗಿ ವರ್ಗಾಯಿಸಿ ಋಷ್ಯಾಶ್ರಮದ ಶಾಂತಿಯ ಆವರಣವನ್ನು ಸೃಜಿಸಲೂ ಬಹುದು –

ಗಾಳಿಯ ವಾನಪ್ರಸ್ಥಕೆ ತೆರಳಿತು ಕಾವಣ ಕಟ್ಟಿತು ಪರ್ಣಕುಟಿ
ಜಡೆಗಟ್ಟಿದ ಹೆಮ್ಮರಗಳು ಕುಳಿತವು ಕೊನರಿದ ಬಳ್ಳಿಯ ಬದ್ಧಕಟಿ!
[26]

ಎಂಬಂತಹ ವರ್ಣನೆಯೂ ಇದೇ ಭಾವದ ಕಣ್ಣಿಗೆ ಕಂಡ ಪ್ರಕೃತಿಯ ಚಿತ್ರವೇ. ಕವಿ ವಾತ್ಸಲ್ಯ ಭಾವದಿಂದಿರುವಾಗ ಒಮ್ಮೆ ಶ್ರಾವಣ ಒಂದು ತುಂಟ ಮಗುವಿನಂತೆ ತೋರುತ್ತದೆ. ಆಗ

ಕವಿ –

ಗುಳ್ಳಗಂಜಿ ತೊಡವ ತೊಟ್ಟು
ಹಾವಸೆಯಾ ಉಡುಪನುಟ್ಟು
ನಗುವ ತುಟಿಯ ನೆನೆದ ಎವೆಯ
ತರಳ ನೀನು ಶ್ರಾವಣಾ,
ಅಳಲು ನಗಲು ತಡವೆ ಇಲ್ಲ
ಇದುವು ನಿನಗೆ ಆಟವೆಲ್ಲ
ಬಾರೋ ದಿವ್ಯ ಚಾರಣಾ
ತುಂಟ ಹುಡುಗ ಶ್ರಾವಣಾ
[27]

ಎಂದು ವರ್ಣಿಸುತ್ತಾರೆ. ಶ್ರಾವಣದ ಹಸಿರು, ಮರಗಿಡಗಳನ್ನು ಹಿಡಿದಲ್ಲಾಡಿಸುವ ಗಾಳಿ, ಗಳಿಗೆಗೊಮ್ಮೆ ಮಳೆ – ಬಿಸಿಲು ಇವುಗಳಿಂದ ಶ್ರಾವಣ ತುಂಟ ಹುಡುಗನಂತೆ, ‘ನಗುವ ತುಟಿಯ ನೆನೆದ ಎವೆಯ” ತರಳನಂತೆ ತೋರುತ್ತದೆ. ಇದೇ ಶ್ರಾವಣದ ಗಾಳಿಯನ್ನು ದೇಶಭಕ್ತ ಕ್ರಾಂತಿಕಾರಿಯಾಗಿ ನಿಂತ ಕವಿ-

ಶ್ರಾವಣ ಸಂಧ್ಯಾ ಸಮಯ ಸಮೀರ
ಸ್ವಾಗತ ನಿನಗೆ ಪಯೋಧಿಯ ವೀರ
ಸ್ವಾತಂತ್ರ್ಯದ ರುಚಿಯರಿತಿಹ ಧೀರ
[28]

ಎನ್ನುವಲ್ಲಿ ಕವಿಗೆ ಅದು ಹೊಸ ಚೇತನದ ಸಂದೇಶವಾಹಕನಂತೆ ತೋರುತ್ತದೆ. ಹೀಗೆ ಕವಿಯ ಮನಸ್ಸಿನಲ್ಲಿ ಅಂದಂದು ಮೂಡುವ ಭಾವಗಳೂ ಆ ಭಾವದಲ್ಲಿ ಕವಿ ನಿಂತು ಪ್ರಕೃತಿಯನ್ನು ಕಂಡ ಕೃತಿಗಳೂ ವಿಶೇಷವಾಗಿವೆ.

ಕವಿ ನೇರವಾಗಿ ಸೌಂದರ‍್ಯಾನುಭವನ್ನು ಪಡೆಯುವ ಪರಿ ಒಂದು; ಅಂದಂದಿನ ಮನೋಭಾವದ ಬಣ್ಣದಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಾಣುವುದು ಇನ್ನೊಂದು, ಇವೆರಡು ಪರಿಗಳಲ್ಲಿಯೂ ನಾವು ನೇರವಾಗಿ ಕವಿಯನ್ನು ಕಾಣುತ್ತೇವೆ. ಪ್ರಕೃತಿ ಸೌಂದರ‍್ಯಾನುಭವದಲ್ಲಿ ಇವೆರಡರಿಂದ ಭಿನ್ನವಾದ, ಮೂರನೆಯ ಪ್ರಧಾನವಾದ ಪರಿಯೊಂದುಂಟು. ಕವಿ ತಾನು ‘ವಸ್ತುನಿಷ್ಠ’ವೆಂದು ತೋರುವಂತಹ ಹಲವು ಪಾತ್ರಗಳನ್ನು, ವ್ಯಕ್ತಿನಿಷ್ಠಾನುಭವದ ಮಾಧ್ಯಮವಾಗಿ ಮಾಡಿಕೊಳ್ಳುವುದು ಇದರ ವಿಶೇಷತೆ. ಅಲ್ಲಿ ನಮಗೆ ಬೇರೊಂದು ವ್ಯಕ್ತಿ ತನ್ನ ಭಾವದಲ್ಲಿ ಪ್ರಕೃತಿಯನ್ನು ಕಂಡದ್ದು ಹೀಗೆ ಎನ್ನಿಸಿದರೂ, ವಾಸ್ತವವಾಗಿ ಕವಿಯೇ ಹಲವು ಪಾತ್ರಗಳ ಮೂಲಕ ತನ್ನ ಅನುಭವವನ್ನು ಹೇಳುತ್ತಿದ್ದಾನೆ – ಎಂದು ತಿಳಿಯುತ್ತದೆ, ಅದನ್ನು ಪರಿಶೀಲಿಸಿದರೆ, ಕವಿ ವಿರಹಿಯಾಗಿ, ಪ್ರಣಯಿಯಾಗಿ, ಸಾಧಕನಾಗಿ ಆಯಾ ಭಾವವನ್ನು ತಾನು ತಾಳಿಕೊಂಡು ನೋಡುವುದಲ್ಲ, ವಿರಹಿಯ, ಪ್ರಣಯಿಯ, ಸಾಧಕನ ಪಾತ್ರಗಳನ್ನು ಸ್ಪಷ್ಟವಾಗಿ ನಾವು ಗುರುತಿಸುವಂತಹ ರೀತಿಯಲ್ಲಿ ಸೃಜಿಸಿ ಆಯಾ ಪಾತ್ರಗಳ ಅಂದಂದಿನ ಭಾವಕ್ಕೆ ಪ್ರಕೃತಿ ಹೇಗೆ ಕಂಡಿತು ಎನ್ನುವುದನ್ನು ವರ್ಣಿಸುವುದು ಇದರ ರೀತಿ. ಕವಿಯಿಂದ ಸೃಜಿತವಾದ ಮಗುವಿನ ಪಾತ್ರದ ಕಣ್ಣಿಗೆ ಚಂದ್ರ ಕಂಡದ್ದು ಹೀಗೆ –

ದೇವರು ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
[29]

ಎಂದು ಮಗು ತಾಯಿಯನ್ನು ಕೇಳುತ್ತದೆ. ಮಗುವಿನ ತಂದೆ ಉದಯದ ಪ್ರಕೃತಿ ಸೌಂದರ‍್ಯವನ್ನು ಕುರಿತು –

ಓಕುಳಿಯನಾಡುತಿದೆ ಕೆನೆ ಮುಗಿಲ ಲೋಕದಲಿ
ನಿನ್ನ ಕೆನ್ನೆಯ ಕೆಂಪು; ಕಾಣು ಕಂದಾ |
[30]
ಜೋಗುಳವನುಲಿಯುತಿದೆ ಹಕ್ಕಿಗಳ ಹಾಡಿನಲಿ
ನಿನ್ನ ಸವಿಗೊರಲಿಂಪು; ಕೇಳು ಕಂದಾ !
[31]

ಎಂದು ಹೇಳುವಲ್ಲಿ, ಉದಯದ ಸೌಂದರ್ಯದಲ್ಲೂ ತನ್ನ ಮಗುವಿನ ಚೆಲುವನ್ನೇ ಕಂಡ ಕಾಣ್ಕೆಯಿದೆ. ನಲ್ಲನ ಆಗಮನದಲ್ಲಿ ಕಾತರಳಾದ ನಲ್ಲೆಗೆ, ತನ್ನ ಪ್ರಿಯತಮನು ಬರುವನೋ ಬಾರನೋ ಎಂಬ ಭಯ-ತಲ್ಲಣ-ಶಂಕೆಗಳ ತುಯ್ತದಲ್ಲಿ ಇರುಳು ಕಂಡದ್ದು ಹೀಗೆ-

ಕತ್ತಲಿದು ಮುನ್ನೀರಿನಂದದಿ
ತಿರೆಯ ಮುಳುಗಿಸಿ ಹಬ್ಬಿದೆ;
ಒಡೆದ ಹಡಗುಗಳಂತೆ ಮನೆ ಮಠ
ಅದರ ತಲದೊಳು ಬಿದ್ದಿವೆ – ಮನ
ಬೆದರಿ ಬಯಕೆಯ ತಬ್ಬಿದೆ.
[32]

ಕವಿಯ ಚಿತ್ತ ಇಂತಹ ಒಂದೊಂದು ಪಾತ್ರಗಳನ್ನು ಸೃಜಿಸಿ ಅದರ ಭಾವಕ್ಕೆ ಪ್ರಕೃತಿಯ ಚೆಲುವು ಕಂಡ ಪರಿಯನ್ನು ಚಿತ್ರಿಸಿರುವ ರೀತಿ ಇದು. ಹಾಗೆಯೆ ಅಂತಹ ಒಂದೊಂದು ಪಾತ್ರವನ್ನೇ ಸ್ಥಾಯಿಯಾಗಿಸಿಕೊಂಡು ವಿವಿಧ ಭಾವಗಳಲ್ಲಿ ಸಂಚರಿಸಲೂ ಬಹುದು. ಜಿ.ಪಿ. ರಾಜರತ್ನಂ ಅವರ “ಯೆಂಡಗುಡುಕ ರತ್ನ” ಇಂತಹ ಒಂದು ಸ್ಥಾಯೀಪಾತ್ರ. “ಯೆಂಡ ಗುಡುಕ”ನ ಪಾತ್ರದ ಮೂಲಕ ಕವಿ, ಜೀವನದ ಅನೇಕ ಮುಖದ ಚೆಲುವನ್ನು ಚಿತ್ರಿಸಿರುವಂತೆಯೇ ಪ್ರಕೃತಿಯ ಚೆಲುವನ್ನೂ ಚಿತ್ರಿಸಿದ್ದಾರೆ. ಒಂದು ಸಂಜೆ ‘ಯೆಂಡಗುಡುಕ’ನ ಕಣ್ಣಿಗೆ ಹೀಗೆ ಕಾಣಿಸುತ್ತದೆ-

‘ಸಂಜೆ ಆಯ್ತ್ ಅಂದರ್ ಸಾಕ್ ಪಚ್ಚಿಮದೂರಾಚೇಲಿ
ಮಡಗಿರೋ ಪಡಕಾನೇಗ್ ಓಡೋಯ್ತಾನೆ|
ಪಟ್ಟಾಗಿ ಒಡದ್ಬುಟ್ಟು ತೂರಾಡ್ತಾ ತೂಗ್ತಾನೆ
ಕಣ್ಗಳ್ನ ಕೆಂಪಿಗ್ ಮಾಡ್ತ ತೇಲಿಸ್ತಾನೆ
ತೂರಾಡ್ತಾ ಮೋರಿಗೆ ಮೋಚ್ತಾನೆ ಸೂರ‍್ಯಪ್ಪ-
ಕೆಸರೆಲ್ಲ ಚಿಲ್ಲಂತ ಮೇಲ್ ಆರ‍್ತದೆ!
ಅದಕಂಡು ‘ಕತ್ಲಾತು, ಕತ್ಲಾತು’ ಅನಕೊಂಡಿ
ಬೆಪ್ತಕಡಿ ಲೋಕೆಲ್ಲ ಕೂಗ್ ಆಕ್ತದೆ!
[33]

ಬೆಳುದಿಂಗಳ ರಾತ್ರಿಯೊಂದು –

ಬೆಳದಿಂಗಳ್ ರಾತ್ರೇಲಿ ಈ ಚೋರಿ ಬತ್ತದಂದ್ರೆ
ಈಚ್ಲೆಂಡ ಚೆಲ್ದಂಗೆ ನೆಪ್ಪಾಯ್ತದೆ
ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ
ವೋಲಿಸ್ದೆ ವೋಯ್ತಂದ್ರೆ ತಪ್ಪಾಯ್ತದೆ.
ಕುಡದೋರು ಮತ್ಬಂದು ಬೀಳೋಹಂಗ್ ಬಿದ್ದೋವೆ
ಮನೆಗೋಳು ಮಠಗೋಳು ಬೀದಿಲೆಲ್ಲಾ
ಪಡಕಾನೆ ಜನದಂಗೆ ಬಡದಾಡ್ತಾ ಕಾಯ್ತಾವೆ
ಕಾಗೇಗಳ್ಗ್ ಒಸ್ಸೀನ ಬುದ್ದೀನಿಲ್ಲ
[34]

ರತ್ನನ ಕಣ್ಣಿಗೆ ಕಂಡದ್ದು ಹೀಗೆ. ಕವಿ ತನ್ನನ್ನು ಇರಿಸಿಕೊಳ್ಳುವ ಪಾತ್ರ ಮಾನವ ಪಾತ್ರವಾಗುವಂತೆಯೇ, ಕವಿ ತನ್ನನ್ನು ಪ್ರಕೃತಿಯ ಒಂದು ಪಾತ್ರವಾಗಿಯೂ ಇರಿಸಿಕೊಂಡು ವಸ್ತುವಿನ ಚೆಲುವನ್ನು ಚಿತ್ರಿಸುವುದುಂಟು. ಪು.ತಿ.ನ. ಅವರ ‘ಹೊನಲ ಹಾಡು’ ಈ ಜಾತಿಗೆ ಒಂದು ನಿದರ್ಶನ. ಕವಿ ಹೊಳೆಯೊಂದನ್ನು ಕಂಡು ಅದರ ವರ್ಣನೆ ಮಾಡುವುದು ಒಂದು ರೀತಿಯಾದಾದರೆ, ಹೊಳೆಯನ್ನು ಒಂದು ಸ್ವತಂತ್ರವ್ಯಕ್ತಿ ಎಂಬಂತೆ ಮೂರ್ತೀಕರಿಸಿ, ಹೊಳೆಯೇ ತನ್ನನ್ನು ವರ್ಣಿಸಿಕೊಂಡಂತೆ ಚಿತ್ರಿಸುವುದು ಮತ್ತೊಂದು ರೀತಿಯದು. ಹೊಳೆ ತನ್ನನ್ನು ತಾನೇ ಹೀಗೆ ಬಣ್ಣಿಸಿಕೊಳ್ಳುತ್ತದೆ.

ಸ್ಥವಿರ ಗಿರಿಯ ಚಲನದಾಸೆ
ಮೂಕ ಬನದ ಗೀತದಾಸೆ
ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ
ಕಿರಣ ನೆಯ್ದ ಸರಿಗೆಯುಡಿಗೆ
ಇರುಳು ಕೊಟ್ಟ ತಾರೆ ತುಡಿಗೆ
ಇಂದು ಕಳೆಯ ಹೂವೆ ಮುಡಿಗೆ ದೇವಕುವರಿ ನಾ;
ಬೆಳ್ಳಿ ನೊರೆಯ ನಗುನಗುತ್ತ
ತೆರೆಯ ನಿರಿಯ ಚುಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ….
[35]

ಎಂದು ಹೊನಲು ಹಾಡುವ ಗೀತದಲ್ಲಿ, ಹೊನಲು ದಿವದ ಬೆಳಕನ್ನು ಮುಡಿಯುವ ದೇವಕುಮಾರಿಯಾಗಿ, ಕಡಲನ್ನು ವರಿಸಲು ತವಕಿಸುವ ವಧುವಾಗಿ ನಮ್ಮ ಎದುರು ನಿಲ್ಲುತ್ತದೆ. ಈ ಹೊನಲಿನ ಸ್ವಗತದ ಒಳಗೆ ಕವಿಯೇ ನಿಂತು ಹಾಡುತ್ತಿರುವುದು – ಎಂದು ನಮಗೆ ಅನ್ನಿಸುವ ಈ ರೀತಿಯಿಂದ, ಕವಿ ಪ್ರಕೃತಿಯ ದೃಶ್ಯಾನುಭವವನ್ನು ಮೂರ್ತೀಕರಿಸಿ, ತಾನು ಹೊರಗೆ ನಿಂತು ಬಣ್ಣಿಸುವ ಬೇರೆಯ ಬಗೆಯೊಂದುಂಟು. ಒಂದು ಇರುಳನ್ನು –

ಕಿರಿ ಬೆರಳಲಿ ಬೆಳ್ಳಿ ಹರಳು
ಕರಿ ಕುರುಳೊಳು ಚಿಕ್ಕೆ ಅರಳು
ತೆರಳಿದಳಿದೊ ತರಳೆ ಇರುಳು
ತನ್ನರಸನನರಸಲು
[36]

ಎನ್ನುವುದಾಗಲೀ, ಚಳಿಗಾಲದ ಒಂದು ನೋಟವನ್ನು, ‘ಚಳಿಯಾಕೆ’ ಎಂದು ಮೂರ್ತೀಕರಿಸಿ-

ಹೊಳೆ ಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈ ತುಂಬ
…………………….
ಕಣ್ಣಿಗೆ ಕಾಣದೆ
ಮೈ ಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ
[37]

ಎಂದು ವರ್ಣಿಸುವುದಾಗಲೀ ಕವಿ ತಾನು ಹೊರಗೆ ನಿಂತು, ತನ್ನ ಅನುಭವಕ್ಕೆ ಬಂದ ಪ್ರಕೃತಿಯ ಚೆಲುವನ್ನು, ಒಂದು ಮೂರ್ತಿಯನ್ನಾಗಿ ಕಡೆದು ನಿಲ್ಲಿಸುವ ರೀತಿ. ಒಂದೊಂದು ಋತುವನ್ನೋ, ಉಷಾ-ಸಂಧ್ಯೆಯರ ಸೊಬಗನ್ನೋ ಈ ರೀತಿಯಲ್ಲಿ ಚಿತ್ರಿಸುವಾಗ ಕವಿಗಳು ಬಹುಮಟ್ಟಿಗೆ ಸ್ತ್ರೀ ಮೂರ್ತಿಯನ್ನಾಗಿ ಮಾಡಿ ಚಿತ್ರಿಸಿದ್ದಾರೆ. ಈ ಮೂರ್ತೀಕರಣದಲ್ಲಿ ನಮ್ಮ ಕವಿಗಳು ಅದಕ್ಕೆ ಮಾನವತ್ವದಿಂದ ಮಿಗಿಲಾದ ಒಂದು ದೈವೀಕತೆಯ ಸ್ಪರ್ಶವನ್ನು ನೀಡಿ ‘ದೇವಿ’ಯನ್ನಾಗಿಸಿದ್ದಾರೆ. ಆದರೆ ಋತುಗಳ ಚೆಲುವನ್ನು ಮಾನವ ವ್ಯಕ್ತಿಯನ್ನಾಗಿ ಮೂರ್ತೀಕರಿಸಿ, ಮಾನವ ಸಂಸಾರಕ್ಕೂ, ‘ಋತು ಸಂಸಾರ’ಕ್ಕೂ ಒಂದು ಸಹಜ ಸಂಬಂಧ ಉಂಟೆಂದು ಚಿತ್ರಿಸಿರುವ ಒಂದು ವಿನೂತನವಾದ ಪರಿಯೂ ಗಮನಾರ್ಹವಾದುದು. ಚಳಿಗಾಲದ ಚಿತ್ರವೊಂದು, ಈ ನವೀನ ದೃಷ್ಟಿಯ ಕವಿಗೆ ಹೀಗೆ ತೋರುತ್ತದೆ –

ಮೂರು ತಿಂಗಳು
ಬೇಸರವ ನೀಗಿಕೊಳ್ಳಲು ಬಂದು ತಂಗಿದಳು
ಮಗಳ ಮನೆಯೊಳು ಮುದುಕಿ ಮೋಜುಗಾರ್ತಿ
ಮೊದಲೆರಡು ದಿನ ಕ್ಷೇಮ ಸಮಾಚಾರದ ಸುದ್ದಿ,
ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈ
ಹಾಗೆಯೇ ನಾಲ್ಕುದಿನ ಸೈ:
ಸುರುವಾಯ್ತು ರಗಳೆ
ಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ……
ಲಟಿಕೆ ಮುರಿದು ಚಿಟುಕು ಮುಳ್ಳಾಡಿಸುವ
ಸುಮ್ಮ ಸುಮ್ಮನೆ ಕೆಮ್ಮಿಕ್ಯಾಕರಿಪ ತಾಪ
ಗಿಡ ಬಳ್ಳಿಯನು ಹಿಡಿದು ಅಲ್ಲಾಡಿಸಿತು ಅವಳ ನಿಟ್ಟುಸಿರ ಶಾಪ|
ಅಣಕಿಸುತ ಗಾಳಿಯಲಿ ಹಾರಿಹೋದುವು ಬತ್ತಿದೆಲೆಯ ಬಳಗ.
ಗದಗುಟ್ಟಿ ನಡುಗಿ ಕಟಕಟ ಹಲ್ಲುಕಡಿದರು ಮಂದಿ
ಮಾತು ಮಾತಿಗೆ ಅವಳು ಮಾತ್ರ ‘ಏನಂದೀ?’
ಸುಕ್ಕುಗಟ್ಟಿದ ಮುಖಕೆ ಸೆರಗೆಳೆದು ಕೋಲೂರಿ
ಹೊರಟು ಬಿಟ್ಟಳು ಒಮ್ಮೆಲೇ ಗಂಟು ತಲೆಗಿಟ್ಟು
ಏನವಳ ಸೆಡವು ಸಿಟ್ಟು!”
[38]

ಈ ಚಿತ್ರದಲ್ಲಿ, ಚಳಿಗಾಲವನ್ನು ‘ಮುದುಕಿ’ಯ ಪ್ರತಿಮೆಯಲ್ಲಿ ಚಿತ್ರಿಸಿರುವುದು ತುಂಬಾ ವಿನೂತನವಾಗಿದೆ.

ಕವಿಯ ಪ್ರಕೃತಿಸೌಂದರ‍್ಯಾನುಭವವನ್ನು ಕುರಿತ ಈ ಹಲವು ನಿದರ್ಶನಗಳಿಂದ ನಮಗೆ ಇಂದಿನ ಕವಿ ಪ್ರಕೃತಿಯ ಚೆಲುವಿನೊಂದಿಗೆ ಎಷ್ಟೆಷ್ಟು ರೀತಿಯಲ್ಲಿ ಬೆರೆತು ಅದರ ಚೆಲುವನ್ನರಿಯಲು ಹವಣಿಸಿದ್ದಾನೆ. ಹಾಗೆ ಬೆರೆತು ಅದನ್ನು ಎಷ್ಟು ರೀತಿಯಲ್ಲಿ ಅಭಿವ್ಯಕ್ತಗೊಳಿಸಿದ್ದಾನೆ – ಎನ್ನುವುದು ಗೊತ್ತಾಗುತ್ತದೆ. ಒಮ್ಮೆ ಪ್ರೇಕ್ಷಕನಾಗಿ, ಒಮ್ಮೆ ಜಿಜ್ಞಾಸುವಾಗಿ, ಒಮ್ಮೆ ಉಪಾಸಕನಾಗಿ, ಒಮ್ಮೆ ತಾನೇ ಅದೆಂಬಂತೆ, ಒಮ್ಮೆ ತಾನು ಅದಲ್ಲವೆಂಬಂತೆ, ಹತ್ತಿರದಿಂದ, ದೂರದಿಂದ, ಬಹಿರಂಗದಿಂದ, ಅಂತರಂಗದಿಂದ ನಾನಾ ಬಗೆಯ ಭಾವಗಳಿಂದ ನಾನಾ ಬಗೆಯ ಪಾತ್ರಗಳಿಂದ – ಈ ಪ್ರಕೃತಿಯ ಚೆಲುವನ್ನು ಬಹುಮುಖಿಯಾಗಿ ಸವಿದು ಬಣ್ಣಿಸಿರುವ ಈ ವೈವಿಧ್ಯ ನವೋದಯದ ಕವಿಗಳ ಒಂದು ವಿಶೇಷತೆಯಾಗಿದೆ.

* * *


[1] ಕುವೆಂಪು – ವಿಭೂತಿ ಪೂಜೆ, ಪು. ೨೭-೨೮

[2] ಪು.ತಿ.ನ : ರಸಸರಸ್ವತಿ ಪು.೩೭

[3] ಕುವೆಂಪು : ನವಿಲು (ಮರದ ನೆರಳು) ಪು. ೧೪

[4] ಕುವೆಂಪು : ಕೋಗಿಲೆ ಮತ್ತು ಸೋವಿಯಟ್ ರಷ್ಯಾ (ತಣ್ಣೆಳಲು) ಪು-೪

[5] ಕುವೆಂಪು : ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪು.೯

[6] ಅಲ್ಲೆ: ಪು. ೧೦,೧೧,೧೨

[7] ಕುವೆಂಪು : ಪಕ್ಷಿಕಾಶಿ, ಪು. ೧೪-೧೫

[8] ಕುವೆಂಪು : ಪಕ್ಷಿಕಾಶಿ, ಪು. ೧೪-೧೫

[9] ಕುವೆಂಪು : ಪಕ್ಷಿಕಾಶಿ. ಪು. ೧೪-೧೫

[10] ಕುವೆಂಪು : ಪಕ್ಷಿಕಾಶಿ. ಪು. ೧೪-೧೫

[11] ಕುವೆಂಪು : ಪಕ್ಷಿಕಾಶಿ. ಪು. ೧೪-೧೫

[12] ಕುವೆಂಪು : ಪಕ್ಷಿಕಾಶಿ. ಪು. ೧೪-೧೫

[13] ಕುವೆಂಪು : ಪಕ್ಷಿಕಾಶಿ. ಪು. ೧೪-೧೫

[14] ಕುವೆಂಪು : ಪಕ್ಷಿಕಾಶಿ, ಪು. ೧೫-೩೯

[15] ಕುವೆಂಪು : ಪಕ್ಷಿಕಾಶಿ, ಪು. ೧೫-೩೯

[16] ಬೇಂದ್ರೆ : ಹಾಡು – ಪಾಡು. ಪು. ೨೧,೨೨

[17] ಬೇಂದ್ರೆ. ಗರಿ,  ಪು. ೧-೨.

[18] ಬೇಂದ್ರೆ ಯವರ ‘ನಾದಲೀಲೆ’ಗೆ ಮಾಸ್ತಿಯವರು ಬರೆದ ಮುನ್ನುಡಿಯಲ್ಲಿ (ಪು. ೮-೧೦)

[19] ಬೇಂದ್ರೆ ಗರಿ, ೧  ಪು. ೧-೨

[20] ಕುವೆಂಪು : ಪಕ್ಷಿಕಾಶಿ, ಪು. ೧೦

[21] ಕುವೆಂಪು : ಪಕ್ಷಿಕಾಶಿ, ಪು. ೩೩.

[22] ಕುವೆಂಪು : ಪಕ್ಷಿಕಾಶಿ, ಪು. ೩೩.

[23] ಶ್ರೀನಿವಾಸ : ರಾಮನವಮಿ ಪು. ೧೯.

[24] ಕುವೆಂಪು : ಪಕ್ಷಿಕಾಶಿ ಪು. ೧೦

[25] ಕುವೆಂಪು : ನವಿಲು ಪು. ೨೯

[26] ಸು.ರಂ. ಎಕ್ಕುಂಡಿ : ಸಂತಾನ ಪು. ೪೮.

[27] ಬೇಂದ್ರೆ : ನಾದಲೀಲೆ. (ಶ್ರಾವಣಾ) ಪು. ೨೪.

[28] ಕುವೆಂಪು : ಪಾಂಚಜನ್ಯ, ಪು. ೨೫.

[29] ಕುವೆಂಪು : ಪಾಂಚಜನ್ಯ, ಪು. ೨೫

[30] ಕೆ.ವಿ. ಪುಟ್ಟಪ್ಪ : ಕಿರಿಯ ಕಾಣಿಕೆ (ಕರ್ನಾಟಕ ಸಂಘ ಮೈಸೂರು) ‘ಅರ್ಧ ಚಂದ್ರ’ ಪು. ೨೨

[31] ಕುವೆಂಪು : ಜೇನಾಗುವಾ ಪು. ೩೨

[32] ಪು.ತಿ.ನ : ಗಣೇಶ ದರ್ಶನ ಪು ೪೨

[33] ಜಿ.ಪಿ. ರಾಜರತ್ನಂ : ರತ್ನನ ಪದಗಳು, ಪು. ೨೬

[34] ಜಿ.ಪಿ. ರಾಜರತ್ನಂ : ರತ್ನದ ಪದಗಳು, ಪು ೨೨

[35] ಪು.ತಿ.ನ: ಮಾಂದಳಿರು ಪು. ೩,೬

[36] ಬೇಂದ್ರೆ : ನಾದಲೀಲೆ. ಪು. ೬೨

[37] ಬೇಂದ್ರೆ : ಗರಿ, ಪು. ೧೦೬

[38] ಚನ್ನವೀರ ಕಣವಿ : ದೀಪಧಾರಿ. ಪು. ೧೭.