ಮಹಾಕಾವ್ಯ ರಚನೆಯನ್ನೆ ಅನಿವಾರ‍್ಯವಾಗಿ ಮಾಡಬೇಕಾಗಿದ್ದ ಹಿಂದಿನ ಕವಿಗಳು ತಮ್ಮ ಸುತ್ತಣ ನಿಸರ್ಗದಲ್ಲಿ ಮತ್ತು ಮಾನವ ಲೋಕದಲ್ಲಿ ತಾವು ಕಂಡು ಉಂಡ ವಿವಿಧಾನುಭವಗಳನ್ನು ಶಾಸ್ತ್ರ ಸಮ್ಮತವಾದ ಅಷ್ಟಾದಶ ವರ್ಣನೆಗಳ ಅಚ್ಚಿನಲ್ಲೇ ಎರಕಹೊಯ್ದು ತಮ್ಮ ಪ್ರತಿಭೆಯನ್ನು ಪ್ರಕಾಶಪಡಿಸಬೇಕಾಗಿತ್ತು. ಕಾವ್ಯಕ್ಕೆ ಕಥೆಯೊಂದನ್ನು ನಿಮಿತ್ತಮಾತ್ರವಾಗಿ ಆರಿಸಿಕೊಂಡ ಕವಿ ಅಲ್ಲಲ್ಲಿ ಕತೆಯನ್ನು ಅದರ ಪಾಡಿಗೆ ಬಿಟ್ಟು, ತಾನು ನಾನಾ ಬಗೆಯ ಚಮತ್ಕಾರಕವಾದ ವರ್ಣನೆಗಳಲ್ಲಿ ತೊಡಗಿಬಿಡುವುದು ಸಾಮಾನ್ಯವಾದ ಸಂಗತಿಯಾಗಿದೆ. ಈ ಹಲವು ಬಗೆಯ ವರ್ಣನೆಗಳಲ್ಲಿ ಪ್ರಕೃತಿ ವರ್ಣನೆಗೂ ಅನಿವಾರ‍್ಯವಾದ  ಸಾಂಪ್ರದಾಯಿಕ ಸ್ಥಾನ ಉಂಟು. ಅನೇಕ ವೇಳೆ ಕವಿ ಪ್ರಕೃತಿ ವರ್ಣನೆ ಮಾಡಲು ಅವನಿಗೆ ಪ್ರಕೃತಿಯನ್ನು ಕುರಿತ ತೃಷ್ಣೆಯಾಗಲೀ ಅನುಭವವಾಗಲೀ ಇರಲೇ ಬೇಕಾಗಿರಲಿಲ್ಲ. ಇಂತಹ ವರ್ಣನೆಯನ್ನು ಹೀಗೆ ಮಾಡಿದರೆ ತೀರಿತು – ಎನ್ನುವ ಶಾಸ್ತ್ರ ಮರ್ಯಾದೆಯನ್ನು ಪಾಲಿಸಿದರೆ ಸಾಕು ಎನಿಸುತ್ತದೆ. ಅನೇಕ ವೇಳೆ ಪ್ರಕೃತಿ ಕಾವ್ಯದಲ್ಲಿ ಪ್ರತ್ಯೇಕವೆಂಬಂತೆ ತೋರುವ ಹಿನ್ನೆಲೆಯಾಗಿಯೂ, ಮತ್ತು ಹಲವು ವೇಳೆ ಕಾವ್ಯದ ಘಟನೆಗಳೊಂದಿಗೆ ಪಾತ್ರಗಳೊಂದಿಗೆ ಅಭಿನ್ನವೆಂಬಂತೆಯೂ ಚಿತ್ರಿತವಾಗಿದೆ. ಅದರಲ್ಲಿಯೂ ಕವಿ ಸಮಯದ, ಚಮತ್ಕಾರದ ಅಂಶವು ವಿಶೇಷವಾಗಿ ತೋರಿದರೂ ಕೆಲವು ಕವಿಗಳಾದರೂ ಪ್ರಕೃತಿಯ ವಿವಿಧ ರಸಸ್ಥಾನಗಳ ಸೊಗಸನ್ನು ಆಸ್ವಾದಿಸಿದ್ದಾರೆ, ಪ್ರಕೃತಿಯ ನೂರು ಮುಖಗಳನ್ನು ಬಿಡುಗಣ್ಣರಾಗಿ ಒಲಿದಿದ್ದಾರೆ ಎನ್ನುವ ಸಂಗತಿ ಗಮನಾರ್ಹವಾದುದು.[1]

ಉಷಾ ಉದಯದ ಸೌಂದರ್ಯ ಲಹರಿಯನ್ನು ವೇದಋಷಿಗಳಿಂದ ಹಿಡಿದು ಜನಪದ ಕವಿಯವರೆಗೆ ಅನೇಕರು ವಿಧವಿಧವಾಗಿ ಬಣ್ಣಿಸಿದ್ದಾರೆ. ಇರುಳ ಕತ್ತಲು ಹರಿದು ಅರುಣೋದಯವಾಗುವ ಪ್ರಭಾತ ಕಾಲದ ಸೊಗಸು ದೈವಿಕವಾದುದು, ಭಾವಗೀತಾತ್ಮಕವಾದುದು. ಈ ಮಧುರ ದೃಶ್ಯದ ಸೊಗಸನ್ನು ಎಷ್ಟು ಜನ ಹಿಂದಿನ ಕವಿಗಳು ನೋಡಿ ಅನುಭವಿಸಿದ್ದಾರೆ ಎಂದು ಪರಿಶೀಲಿಸ ಹೊರಟರೆ ನಿಜವಾಗಿಯೂ ನಮಗೆ ನಿರಾಶೆ ಯಾಗುತ್ತದೆ. ಸೂರ್ಯೋದಯವೂ ಕಾವ್ಯದ ಒಂದು ವರ್ಣನಾಂಶ ಎಂದೇನೋ ಶಾಸ್ತ್ರದಲ್ಲಿದೆ. ಆದರೆ ನಮ್ಮ ಬಹುಜನ ಹಿಂದಿನ ಕವಿಗಳಿಗೆ ಸೂರ್ಯೋದಯ ಕೇವಲ ಕಾಲ ಸೂಚಕ; ಇಲ್ಲವೇ ಶೃಂಗಾರಪೂರ್ಣವಾದ ಚಂದ್ರಿಕಾ ವಿಹಾರದ ಇರುಳಿನ ಮುಕ್ತಾಯದ ಸೂಚನೆ. ಸೂರ್ಯೋದಯ ದೃಶ್ಯಕ್ಕಿಂತ ಅದರ ಪರಿಣಾಮವನ್ನು, ಕುಮುದ ಮುಚ್ಚಿತು, ಕಮಲ ಅರಳಿತು, ಚಕ್ರವಾಕಗಳು ಸೇರಿದುವು, ಚಕೋರ ಕೊರಗಿತು, ತಾರೆ ಮಸುಳಿದವು – ಇತ್ಯಾದಿ ಕವಿಸಮಯ ನಿರ್ಮಿತವಾದ ಸಂಕೇತಗಳಿಂದ ಬಣ್ಣಿಸುವುದು ಅವರ ಪದ್ಧತಿ. ಸೂರ್ಯೋದಯ ಎನ್ನುವುದು ಎಂತಹ ಅಪೂರ್ವ ಘಟನೆ. ಸೂರ್ಯೋದಯದ ಸಂದರ್ಭದಲ್ಲಿ ತೋರುವ ಆ ಅನಂತ ವರ್ಣ ತರಂಗಗಳ ಸೊಗಸೇನು ಎಂಬುದನ್ನು ಹಿಂದಿನ ಕವಿಗಳ ಕಣ್ಣು ಅಷ್ಟಾಗಿ ಕಾಣದಿರುವುದು ಸೋಜಿಗದ ಸಂಗತಿ. ಸಂಸ್ಕೃತ ಕಾವ್ಯ ಪರಿಚಯವೂ ಸಾಕಷ್ಟಿದ್ದ ಈ ಕವಿಗಳು ಏಕೆ ವೇದಋಷಿಗಳ ಉಷಾವರ್ಣನೆಯ ದಿವ್ಯ ಮನೋಹರ ಸೌಂದರ‍್ಯಕ್ಕೆ ಮಾರುಹೋಗಲಿಲ್ಲವೋ, ಮಾರುಹೋಗಿ ತಮ್ಮ ಕೃತಿಗಳಲ್ಲಿ ಆ ಸೊಗಸನ್ನು ಕಡೆಗೆ ಅನುಕರಿಸಲಿಲ್ಲವೋ ತಿಳಿಯದ ಸಂಗತಿ. ನಾರಣಪ್ಪನಂಥ ಕವಿಯೂ ತನ್ನ ಕಥಾ ಪ್ರವಾಹದಲ್ಲಿ ಒಮ್ಮೆ ನಿಂತು ‘ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ’ ಎಂದು ಒಂದೇ ಮಾತಿನಲ್ಲಿ ಸೂರ್ಯೋದಯದ ವರ್ಣನೆಯನ್ನು ಮುಗಿಸಿ ಮುಂದೆ ನಡೆಯುತ್ತಾನೆ. ಲಕ್ಷ್ಮೀಶನಾದರೊ

ಮೂಡುದೆಸೆಯೊಳ್ ಕೆಂಪು ದೊರೆಯೆ ತಾರಗೆ ಪರಿಯೆ
ಕೂಡೆ ತಂಗಾಳಿ ಮುಂಬರಿಯೆ ಕಮಲಂ ಬಿರಿಯೆ
ಪಾಡುವೆಳೆದುಂಬಿಗಳ್ಮೊರೆಯೆ ಚಕ್ರಂ ನೆರೆಯೆ ನೈದಿಲೆಯ ಸೊಂಪು ಮುರಿಯೆ
ಬೀಡುಗೊಂಡಿರ್ದ ಕತ್ತಲೆಯ ಪಾಳೆಯಮೆತ್ತ-
ಲೋಡಿದುದೊ ನೋಡಿದಪೆನೆಂದು ಪೂರ್ವಾಚಲದ
ಕೋಡುಗಲ್ಲಂ ಪತ್ತಿದಂತೆ ಮೆರೆದಂ ಪ್ರಭೆಯೊಳೌನ್ನತ್ಯನಾದಿತ್ಯನು.
(ಜೈಮಿನಿ ಭಾರತ ೨-೬೫)

ಎಂಬ ವರ್ಣನೆಯಲ್ಲಿ ಸಂಪ್ರದಾಯದ ಎರಕದಲ್ಲೇ ಸ್ವಾನುಭವದ ಸ್ವಾರಸ್ಯವನ್ನೂ

ತೋರಿದ್ದಾನೆ. ರತ್ನಾಕರವರ್ಣಿ ಭರತೇಶ ವೈಭವದಲ್ಲಿ ಸೂರ್ಯೋದಯ ವ್ಯಾಪಾರವನ್ನು ನಾಲ್ಕೇಮಾತುಗಳಲ್ಲಿ ಬಹು ಸೊಗಸಾಗಿ ಚಿತ್ರಿಸಿದ್ದಾನೆ.

ತಂಗಾಳಿ ತೀಡಿತು ತಾರಗೆ ಮಸುಳ್ದವು
ಹಿಂಗಿತು ಜಗದಂಧಕಾರಾ
ಮುಂಗಾರ ಮೊಳಗಿನಂದದಿ ಮೊಳಗಿದುವು ವಾ-
ದ್ಯಂಗಳು ಜಿನಗೃಹದೊಳಗೆ.
ಎಳವಿಸಿಲಡರ್ದೇರಿ ಜಿನನಿಲಯದ ರತ್ನ
ಕಳಶದೊಳ್ಮಾತಾಡೆ ಕಂಡು
ಬೆಳಗಾಯ್ತು ದೇವ ಕಣ್ತೆರೆ ಎಂದು ವನಿತೆಯ-
ರೆಳಸಿ ಬಿನ್ನವಿಸಿದರಾಗ.
(ಭರತೇಶ ವೈಭವ : ಪರ್ವಯೋಗ ಸಂಧಿ ೭-೮)

ಈ ವರ್ಣನೆಯಲ್ಲಿ ಪ್ರಭಾತಕಾಲದ ಸೌಂದರ‍್ಯಾನುಭವದ ಸೊಗಸು ಎದ್ದು ಕಾಣುತ್ತದೆ. ಅದರಲ್ಲೂ ಎಳೆಯ ಬಿಸಿಲು ಅಡರ್ದು, ಏರಿ, ಜಿನನಿಲಯದ ರತ್ನ ಕಳಶದೊಡನೆ ಮಾತನಾಡಿತು ಎನ್ನುವುದಂತೂ ಬಲ್ಸೊಗಸು. ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವದಲ್ಲಿ ಉಷಾ ಉದಯದ ಸೌಂದರ‍್ಯಾನುಭವವನ್ನು ಬಹು ಸೊಗಸಾಗಿ ನಿರೂಪಿಸುವ ಎರಡು ಪದ್ಯಗಳು ದೊರೆಯುತ್ತವೆ. ಅವುಗಳನ್ನು ಬರೆದ ಕವಿಯ ಹೆಸರು ದೊರೆತಿಲ್ಲ. ಪದ್ಯಗಳು ಮಾತ್ರ ತುಂಬ ಸೊಗಸಾಗಿ ನವುರಾಗಿವೆ-

ಪರೆದುದು ಮರ್ಬು ಪರ್ಬಿದುದು ಕೆಂಬೆಳಗು ಇಂದ್ರದಿಶಾ ವಿಭಾಗಮಂ
ಸುರಭಿಸಮೀರನೂದಿದುದು ಎಸಳ್ ಮಿಸುಕಲ್ ತೊಡಗಿತ್ತು ಪಂಕಜಂ
ಸರಮೞದೊಂದನೊಂದೆಳಸುತಿರ್ದುವು ಕೋಕಮ್ ಊಲೂಕ ಸಂಕುಳಂ
ಚರಿಯಿಸಿ ಬಂದಡಂಗಿದುವು ಪಕ್ಕಿಗಳೆದ್ದುವು ಸುಪ್ರಭಾತದೊಳ್
(ಸೂಕ್ತಿ ಸುಧಾರ್ಣವ ಪು ೨೨೯ – ಪದ್ಯ ೬೩)

ಮುಂದೆ ಮಹಾಸುರ ಮಥನಂ
ಬಂದೇಱದನಮರಗಿರಿ ಶಿಖಾಗ್ರಮನೆಂದೋ
ರಂದದೆ ಮೊರೆವಳಿಯಿಂದರ
ವಿಂದೌಘದ ಮುಂದೆ ನಿದ್ದೆ ತಿಳಿದುವು ಕೊಳಗಳ್.
(ಸೂಕ್ತಿ ಸುಧಾರ್ಣವ ಪು ೨೨೬ – ಪದ್ಯ ೪೧)

ಈ ಎರಡು ಪದ್ಯಗಳಲ್ಲಿ ಮೊದಲಿನ ವೃತ್ತದ ಮೊದಲೆರಡು ಸಾಲುಗಳು ಸೊಗಸಾಗಿವೆ. ಮಬ್ಬು ಹರಿಯಿತು, ಕೆಂಬೆಳಗು ಇಂದ್ರದಿಶಾ ಭಾಗವನ್ನು ಮುಸುಕಿತು, ಸುಗಂಧ ಪೂರ್ಣವಾದ ಗಾಳಿ ತೀಡಿತು, ಕಮಲದ ಎಸಳು ಮಿಸುಗತೊಡಗಿತು – ಎನ್ನುವ ಚಿತ್ರಣದಲ್ಲಿ ಎಂತಹ ನವುರಾದ ಅನುಭವವಿದೆ. ಅದರಲ್ಲೂ ‘ಎಸಳ್ ಮಿಸುಕಲ್ ತೊಡಗಿತ್ತು ಪಂಕಜಂ’ ಎನ್ನುವ ಮಾತಿನಿಂದ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಮನೋಹರವಾದುದು. ಕವಿಯ ಕಣ್ಣು ಎಷ್ಟು ಸೂಕ್ಷ್ಮವಾಗಿ ಬೆಳಗಿನ ಚೆಲುವನ್ನು ಕಂಡಿದೆ ಎನ್ನುವುದಕ್ಕೆ ಆ ಎರಡು ಪಂಕ್ತಿಗಳೇ ಸಾಕು. ಉಳಿದೆರಡು ಸಾಲುಗಳಲ್ಲಿ ಏನೂ ಇಲ್ಲ. ಮುಂದಿನ ಕಂದಪದ್ಯ ಕಾವ್ಯದ ಸಂದರ್ಭವೊಂದನ್ನು ಸೂಚಿಸುತ್ತದೆಯಾದರೂ ಕಡೆಯ ಎರಡು ಸಾಲುಗಳು, ದುಂಬಿಯ ಗುಂಜಾರವದಿಂದ ಕೊಳಗಳು ನಿದ್ದೆ ತಿಳಿದುವು ಎನ್ನುವ ಕಲ್ಪನಾನುಭವ ನಿಜವಾಗಿಯೂ ಸುಂದರವಾಗಿದೆ. ಇಂತೆಯೇ ಮತ್ತೊಂದು ಪರಿಭಾವನಾ ಯೋಗ್ಯವಾದ ಕಲ್ಪನಾ ಸೌಂದರ‍್ಯ ರುದ್ರಭಟ್ಟನ ಈ ಪದ್ಯ-

ತಳರ್ದ ವಿಯೋಗಿನೀ ನಯನವಾಃಕಣ ಸಂಕುಳದಂತೆ ತಾರಕಾ
ವಳೀ ಮಸುಳ್ದತ್ತು, ಯಾಮಿನಿಯ ಬೆನ್ನನೆ ಪೋಪ ದುಕೂಲ ಚೇಲದಂ
ಚಳಮೆನೆ ಪೋಯ್ತು ಚಂದ್ರಿಕೆ ನಭೋವಧು ಸೂಡಿ ಬಿಸುಟ್ಟ ಮಾಲ್ಯಮಂ
ಡಳದವೊಲಿರ್ದುದಸ್ತಗಿರಿ ಮಸ್ತಕದೊಳ್ ತುಹಿನಾಂಶು ಮಂಡಳಂ.
(ಜಗನ್ನಾಥ ವಿಜಯ ೧೭-೧೩೫)

ತೆರಳಿದ ವಿಯೋಗಿಗಳ ಕಂಬನಿಗಳಂತೆ ಚಿಕ್ಕೆ ಮಸುಳಿದುವು. ರಾತ್ರಿಯೆಂಬ ಹೆಣ್ಣಿನ ಬೆನ್ನ ಹಿಂದೆಯೇ ಸರಿದ ದುಕೂಲದ ಅಂಚಿನಂತೆ ಬೆಳ್ದಿಂಗಳೂ ಮಾಯವಾಯಿತು. ನಭೋವಧು ಮುಡಿದೆಸೆದ ಹೂವಿನ ಹಾರದಂತೆ ಅಸ್ತಗಿರಿ ಮಸ್ತಕದಲ್ಲಿ ಚಂದ್ರಮಂಡಲ ಕ್ಷೀಣವಾಯಿತು – ಎಂದು ಕವಿ ಹೇಳುವ ಮಾತು ಸೂರ್ಯೋದಯ ಕಾಲದ ಚಿತ್ರವನ್ನು ಕಲ್ಪನಾಮಯವಾಗಿ ಚಿತ್ರಿಸುವುದರ ಜೊತೆಗೆ ಶೃಂಗಾರಮಯವಾದ ರಾತ್ರಿ ಮುಗಿದ ಸೂಚನೆಯನ್ನೂ ನೀಡುತ್ತದೆ. ಸೂರ್ಯೋದಯಕ್ಕೆ ಮುಂಚೆ, ಪಶ್ಚಿಮ ದಿಕ್ಕಿನಲ್ಲಿ ಕ್ಷೀಣನಾದ ಚಂದ್ರ ‘ನಭೋವಧು ಸೂಡಿ ಬಿಸುಟ ಮಾಲ್ಯಮಂಡಲದಂತೆ ಇತ್ತು’ ಎಂದು ರುದ್ರಭಟ್ಟ ವರ್ಣಿಸಿದರೆ, ನೇಮಿಚಂದ್ರ “ವಾರುಣಿ ಕಳ್ಳನ್ ಈಂಟಿ ಮರೆದಿಕ್ಕಿದ ಬಟ್ಟಲೋ” – ಪಶ್ಚಿಮ ದಿಕ್ಕು ಕಳ್ ಕುಡಿದು ಮರೆತ ಬಟ್ಟಲೋ (ಲೀಲಾವತಿ ೩-೩) ಎಂದೂ, ‘ನೀರೋಡಿದ ಕೆರೆಯ ಕೆಸರಿನಲ್ಲಿ ನಿಂತು ಎಳ ಮೀನ್ಗಳನ್ನು ಕುರುಕುವ ಬಕಪಕ್ಷಿಯಂತೆ’ ಇತ್ತೆಂದು (ಲೀಲಾವತಿ ೭-೯೯) ವಿಶಿಷ್ಟವಾಗಿ ವರ್ಣಿಸಿದ್ದಾನೆ. ಸುಪ್ರಭಾತದ ವರ್ಣನೆಯನ್ನು ಶಾಂತರಸ ಸಂಬಂಧಿಯಾಗಿ ವರ್ಣಿಸಿರುವ ನಾಗಚಂದ್ರನ ಪದ್ಯ ಪ್ರಶಂಸನೀಯವಾಗಿದೆ. ಮಲ್ಲಿನಾಥ ಪುರಾಣದಲ್ಲಿ, ವೈಶ್ರವಣ ಮಹಾರಾಜನು ಸಿಡಿಲು ಹೊಡೆದು ಬಿದ್ದ ಆಲದ ಮರವೊಂದನ್ನು ಕಂಡು ವಿರಾಗಿಯಾಗುತ್ತಾನೆ. ಆ ವೈರಾಗ್ಯಪರವಾದ ಚಿತ್ತಕ್ಕೆ ಸುಪ್ರಭಾತ ಕಂಡ ಪರಿ ಇದು:

ಮೂಡಣ ಸಂಜೆ ಕೆಂದಳಿರ ಕಾವಣದಂತಿರೆ, ಚಂದ್ರ ಮಂಡಲಂ
ಬಾಡಿದ ಮಾಧವೀ ಮಧುರ ಮಂಜರಿಯಂತಿರೆ, ತಾರಕಾಳಿ ನೀ
ರೋಡಿ  ಕೞಲ್ದು ಬಿೞ್ದ ಕೞವೂಗೆಣೆಯಾಗಿರೆ, ತಣ್ಣನಪ್ಪೆಲರ್
ತೀಡೆ ತಪೋವನಂಬೊಲತಿ ಪಾವನವಾಯ್ತು ನಭಂ ಪ್ರಭಾತದೊಳ್
(ಮಲ್ಲಿನಾಥ ಪುರಾಣ ೧೦-೧೫)

ವಿವರಣೆ ಅನಗತ್ಯವೆನಿಸುವ ಈ ಪದ್ಯದಲ್ಲಿ ಕವಿ ಸುಪ್ರಭಾತದ ಶಾಂತ ರಮ್ಯ ಚಿತ್ರವನ್ನು ತೆರೆದಿದ್ದಾನೆ. ಪ್ರಭಾತದ ನಭ ತಪೋವನದಂತೆ ಅತಿ ಪಾವನವಾಯಿತೆಂದು ಕವಿ ಕರೆದಿದ್ದಾನೆ. ಬೆಳಗಿನ ಶುಭ್ರತೆ ದಿವ್ಯತೆಗಳು ಸುಲಲಿತವಾದ ರೀತಿಯಲ್ಲಿ ಸುಂದರವಾಗಿ ಮೈದಾಳಿವೆ. ಹೀಗೆ ಕಂಡದ್ದು ವೈರಾಗ್ಯಪರವಾದ ಚಿತ್ತಕ್ಕೆ, ಪ್ರಕೃತಿಯ ಸೌಂದರ್ಯವೇ ಹಾಗೆ. ಯಾವ ಯಾವ ಮನೋಭಾವವನ್ನು  ನೋಡುವ ವ್ಯಕ್ತಿ ತಾಳುವನೋ ಹಾಗೆ ಕಾಣುತ್ತದೆ. ದೃಷ್ಟಿಯಂತೆ ಸೃಷ್ಟಿ. ಈ ಅಂಶವನ್ನು ಎಲ್ಲ ಕವಿಗಳಂತೆ ಕನ್ನಡ ಕವಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತದಲ್ಲಿ ಸೂರ್ಯೋದಯದ ಚೆಲುವನ್ನು ಕುರಿತ ಈ ಕೆಲವು ಅಭಿವ್ಯಕ್ತಿಗಳಲ್ಲಿ, ಹಿಂದಿನ ಕವಿಗಳು ಇಂದಿನ ಕವಿಗಳಂತೆ ಋತು ಋತುಗಳಲ್ಲೂ ಸೂರ್ಯೋದಯದ ಸೌಂದರ್ಯ ಹೇಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ ಎನ್ನುವುದನ್ನು ಅಷ್ಟಾಗಿ ಗಮನಿಸಿಲ್ಲವೆನ್ನುವುದು ಗುರುತಿಸಿಕೊಳ್ಳಬೇಕಾದ ಅಂಶವಾಗಿದೆ.

ಸೂರ್ಯೋದಯವಾಯಿತು. ಲೋಕ ಕತ್ತಲೆಯ ತೆರೆಯನ್ನು ಸರಿಸಿತು. ಕಣ್ಣಿಗೆ ನಾನಾ ಬಗೆಯಾದ ದೃಶ್ಯಗಳು ಗೋಚರಿಸುತ್ತವೆ. ಪಕ್ಷಿವೃಂದದ ನಾನಾ ಬಗೆಯ ಚಿಲಿ ಪಿಲಿ ಕಿವಿಗೆ ಬೀಳುತ್ತದೆ. ಕೋಳಿ ಎತ್ತರವಾದ ಮನೆಯ ತುದಿಯಲ್ಲಿ ನಿಂತು ಕೂಗುತ್ತಿದೆ. ಹಿಂದಿನ ಕವಿಗಳು ಕಂಡರೇ ಅದನ್ನು? ಅನೇಕ ಕವಿಗಳು ಕಂಡಿದ್ದಾರೆ, ಬಣ್ಣಿಸಿದ್ದಾರೆ, ಕೂಗುವ ಕೋಳಿಯ ಚಿತ್ರ ಕಣ್ಣ ಮುಂದೆ ಕಟ್ಟುವಂತೆ ಕವಿಯೊಬ್ಬ ವರ್ಣಿಸಿದ್ದಾನೆ, ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವದಲ್ಲಿ-

ಪಕ್ಕ ದ್ವಂದ್ವಂಗಳಂ ಝಾಡಿಸಿ ಕೆಲಕೆ ನಿಮಿರ್ದೊತ್ತಿ ಮೂಗಿಂದೆ ಗೋಣಂ
ಹಿಕ್ಕುತ್ತುಂ ಬಂದು ಗೇಹಂಗಳನಡರಿ….
ಕುಕ್ಕುಕೂ ಎಂಬ ನಾದಂ ನೆಗಳೆ ನಗರದೊಳ್ ಕೂಗಿತಾ ತಾಮ್ರಚೂಡಂ
(ಸೂಕ್ತಿ ಸುಧಾರ್ಣವ ಪು ೨೨೪, ಪ. ೩೦)

ಈ ವರ್ಣನೆಯಲ್ಲಿರುವ ವಾಸ್ತವವಾದ ಚಿತ್ರ ಮನಸ್ಸಿನ ಮುಂದೆ ನಿಲ್ಲುತ್ತದೆ. ಹೀಗೆಯೇ ಹರಿಹರನೂ ಒಂದು ಚಿತ್ರವನ್ನು ಕೊಡುತ್ತಾನೆ ಗಿರಿಜಾ ಕಲ್ಯಾಣದಲ್ಲಿ. ಹಣ್ಣನ್ನು ಸವಿಯುವ ಗಿಳಿಯ ಸಜೀವ ಚಿತ್ರವನ್ನು ಇಷ್ಟು ಸಹಜವಾಗಿ, ಸುಂದರವಾಗಿ ಇನ್ನಾರು ಕೊಟ್ಟಿದ್ದಾರೆ?

ಬಿಗಿಯಪ್ಪಿ ಮೊಗಮನಿಟ್ಟಾ
ಲಿಗಳವು ನಸುಮುಚ್ಚಿ ಪಕ್ಷ್ಮಯುಗಳಮೆಳಲೆ ರಸಂ
ದೆಗೆವ ದನಿ ನಿಮಿರೆ ನಾಲಗೆ
ಚಿಗುರುತ್ತಿರೆ ಸವಿದುದೊಂದು ಗಿಳಿ ತನಿವಣ್ಣಂ
(ಗಿರಿಜಾ ಕಲ್ಯಾಣ, ೨-೩೯)

ಗಿಳಿ ತನಿವಣ್ಣನ್ನು ಸವಿಯುವ ಸಂಗತಿ ಕವಿಯ ಕಣ್ಣಿಗೆ ಸಾಮಾನ್ಯ ಸಂಗತಿಯಲ್ಲ. ಆ ಸೊಗಸನ್ನು ಕವಿ ಕಂಡು, ಅನುಭವಿಸಿ ಆ ರಸಾಸ್ವಾದ ವ್ಯಾಪಾರವನ್ನು ಸೌಂದರ್ಯದ ಸಾಮಗ್ರಿಯಾಗಿ ಮಾಡಿ ನೀಡಿದ್ದಾನೆ. ನಮ್ಮ ದೈನಂದಿನ ನಿಸರ್ಗದ ಸಾಮಾನ್ಯ ವ್ಯಾಪಾರದಲ್ಲಿರುವ ಅಸಾಮಾನ್ಯತೆಯೇ ಕವಿ ನಮಗೆ ತೋರುವ ಆನಂದದ ವಸ್ತು. ಇನ್ನು ಕವಿಗಳು ನಮಗೆ ಮುಂಬೆಳಗಿನ ಸೊಗಸನ್ನಾಗಲೀ ನಡು ಹಗಲಿನ ಸೊಗಸನ್ನಾಗಲೀ ಅಷ್ಟಾಗಿ ನೀಡಿಲ್ಲ. ಹಗಲಿನ ಬೆಳಕಿನಲ್ಲಿ ನಮ್ಮ ಸುತ್ತಣ ಪರಿಸರದಲ್ಲಿ ಕಾಣುವ ನಾನಾ ಬಗೆಯಾದ  ನೋಟಗಳ ವರ್ಣನೆಯಲ್ಲೂ ಅಷ್ಟೆ. ಆದರೆ ಪಂಪ ಸಮಗ್ರ ದೃಶ್ಯವೊಂದನ್ನು ಅದರ ವಿವರಗಳ ಸಮೇತ ಚಿತ್ರಿಸಿರುವ ಕ್ರಮ ವಿಶಿಷ್ಟವಾಗಿದೆ :

ಜಲಜಲನೊಳ್ಕುತಿರ್ಪ ಪರಿಕಾಲ್, ಪರಿಕಾಲೊಳಳುರ್ಕೆಗೊಂಡ ನೈ
ದಿಲ ಪೊಸವೂ, ಪೊದಳ್ದ ಪೊಸನೈದಿಲ ಕಂಪನೆ ಬೀರಿ ಕಾಯ್ತ ಕೆಂ-
ಗೊಲೆಯೊಳೆ ಜೋಲ್ವ ಶಾಳಿ, ನವ ಶಾಳಿಗೆ ಪಾಯ್ವ ಶುಕಾಳಿ, ತೋಱಿ ಕೆ –
ಯ್ವೊಲಗಳಿನೊಪ್ಪಿ ತೋಱಿ ಸಿರಿ ನೋಡುಗುಮಾ ವಿಷಯಾಂತರಾಳದೊಳ್
(ಪಂಪ ಭಾರತ, ೧-೫೨)

ಈ ಒಂದು ಪದ್ಯದಲ್ಲಿ ಇಂದ್ರಿಯ ಗೋಚರವಾದ ಸೌಂದರ್ಯಾನುಭವದ ನೈಜ ಚಿತ್ರಣವಿದೆ. ಜೊತೆಗೆ ನಾಲ್ಕೈದು ಚಿತ್ರಗಳ ಪರಸ್ಪರ ಸಂಬಂಧಜನ್ಯವಾದ ಸಮಗ್ರ ನೋಟವೊಂದು ರಸಿಕನಿಗೆ ಕಾಣುತ್ತದೆ. ಕೇವಲ ಅಲಂಕಾರಪ್ರಿಯರಾದ ಪಂಡಿತರಿಗೆ ಮುಕ್ತಪದ ಗ್ರಹಣಾಲಂಕಾರ ಇದರಲ್ಲಿ ತೋರಬಹುದು. ಜೊತೆಗೆ ಕವಿ ಸಮಯವನ್ನು ಕವಿ ಚೆನ್ನಾಗಿ ಪಾಲಿಸಿದ್ದಾನೆ ದೇಶ ವರ್ಣನೆಯಲ್ಲಿ ಎನ್ನಿಸಲೂಬಹುದು. ಆದರೆ ನಮಗೆ ಈ ಎರಡು ದೃಷ್ಟಿಗಳೂ ಅಪ್ರಕೃತ ನಮಗೆ ಕಾಣುವುದು ಕವಿ ಇಂದ್ರಿಯಾನುಭವಕ್ಕೆ ಬಂದ ಚೆಲುವಿನ ಪರಿಯನ್ನು ಇಲ್ಲಿ ಚಿತ್ರಿಸಿದ್ದಾನೆ ಎನ್ನುವುದು. ಆ ಇಂದ್ರಿಯಾನುಭವದ ಚೆಲುವು, ‘ಸಿರಿ ನೋಡುಗುಮಾ ವಿಷಯಾಂತರಾಳದೊಳ್ ಎಂಬ ಒಂದು ಕಲ್ಪನೆಯಿಂದ, ಕಲ್ಪನಾ ಸೌಂದರ‍್ಯದ ಸೀಮೆಗೆ ಕಾಲಿಟ್ಟಿದೆ. ಜುಳುಜುಳನೆ ಹರಿಯುವ ಕಾಲುವೆಯ ಮಂಜುಳ ರವ, ಕಾಲುವೆಯ ತುಂಬ ವ್ಯಾಪಿಸಿ ನಿಂತ ನೈದಿಲ ಹೂ, ನೈದಿಲ ಕಂಪನ್ನೇ ಬೀರುವಂತೆ ತೋರುವ ಹಣ್ಣಾಗಿ ಬಾಗಿ ತೂಗುವ ಗದ್ದೆಯ ಕೆಂಪು ಪಯಿರು, ಅದರ ಮೇಲೆ ಸರ್ರನೆ ಹಾರುವ ಹಸುರು ಗಿಳಿವಿಂಡು- ಇಲ್ಲಿ ಕವಿ ನಾದದ, ಗಂಧದ, ವರ್ಣದ ಸೊಗಸನ್ನು ತುಂಬ ಸುಂದರವಾಗಿ ಹಿಡಿದಿಟ್ಟಿದ್ದಾನೆ. ಆದಿ ಪುರಾಣದಲ್ಲಿ ಒಂದೆಡೆ ಹರಿಯುವ ನದಿಯ ಚಿತ್ರವನ್ನು ಕೊಡುವಲ್ಲಿಯೂ ಪಂಪನ ಸೌಂದರ್ಯಗ್ರಹಣಶಕ್ತಿ ನಮ್ಮನ್ನು ಬೆರಗಾಗಿಸುತ್ತದೆ:

ಕೊಂಕಿದ ಕೊಂಕು ತದ್ವಿಷಯ ಕಾಂತೆಯ ಪುರ್ವಿನ ಕೊಂಕಿನಂತೆ ಚೆ
ಲ್ವಂ ಕುಡೆ, ತೞುರೞ ತಡಿಯ ಪೂಮರದಿಂ ಕೞಿವೂಗಳತ್ತಮಿ
ತ್ತಂ ಕವಿದಲ್ಲಿ ಮೆಲ್ಲನುಗೆ, ತೇಂಕುವ ಪೂವಿನ ಸಂಕರಂಗಳಂ
ನೂಂಕುವುವೂರ್ಮಿಮಾಲಿನಿಯ ತುಂಗ ತರತ್ತರಲೋರ್ಮಿಮಾಲೆಗಳ್
(ಆದಿಪುರಾಣ ೧-೬೧)

ಇದೊಂದು ಅಪೂರ್ವ ಚಿತ್ರ, ಹರಿಯುವ ಹೊಳೆಯನ್ನು ಕವಿ ಅನತಿ ದೂರದ ಗಿರಿಯ ಶಿಖರದ ಮೇಲಿನಿಂದ ಕಂಡಿರಬೇಕು ಎನಿಸುತ್ತದೆ. ಒಂದೆಡೆ ನದಿ ಅರ್ಧಚಂದ್ರಾಕಾರದ ಕೊಂಕಿನಲ್ಲಿ ಹರಿಯುತ್ತದೆ. ನದಿಯ ಎರಡು ದಡಗಳಲ್ಲೂ ಒತ್ತಾಗಿ ಬೆಳೆದು ಹೂ ತುಂಬಿದ ಮರಗಳಿಂದ ರಾಶಿರಾಶಿ ಹೂವು ನೀರಿಗೆ ಉದುರಿ ಬಿದ್ದಿದೆ. ಹರಿಯುವ ಹೊಳೆಯ ತರಳತರಂಗವಾದ ತೆರೆಗಳು ನೀರಿನಲ್ಲಿ ಬಿದ್ದು, ತೇಂಕುವ ಹೂವಿನ ಸಂಕರಗಳನ್ನು ನೂಂಕುತ್ತಾ ಸಾಗಿವೆ. ಇಂತಹ ಒಂದು ಸುಂದರವಾದ, ಇಂದ್ರಿಯಾನುಭವ ಗೋಚರವಾದ ದೃಶ್ಯವೊಂದನ್ನು ಕವಿ, ಆ ನೋಟ ಆ ನಾಡಿನ ಅಧಿದೇವಿಯ ಹುಬ್ಬಿನ ಕೊಂಕಿನಂತೆ ತೋರಿತು ಎಂಬ ಒಂದು ಮಾತಿನಿಂದ ಅದನ್ನು ಯಾವ ಎತ್ತರಕ್ಕೆ ಏರಿಸಿದ್ದಾನೆ! ತಟಕ್ಕನೆ ಆ ಹೊಳೆ, ಆ ತರಂಗ, ಆ ಹೂವು – ಇವೆಲ್ಲ ಸೇರಿ ಕಂಡ ಒಂದು ಚಿತ್ರ ಮಾನವ ಚೆಲುವಿನಲ್ಲಿ ಕಾಣುವ ಬ್ರಹ್ಮ ಸೃಷ್ಟಿಯ ಒಂದು ಅಂಶವಾಗಿ ಪರಿಣಮಿಸಿಬಿಟ್ಟಿವೆ ಕವಿಯ ಕಲ್ಪನೆಯಿಂದ. ಆ ಸಮಸ್ತ ಸೌಂದರ್ಯವೂ ಕಲ್ಪನೆಯಿಂದ ಒಂದು ರೂಪಕವಾಗಿ ನಮ್ಮನ್ನು ಬೆರಗಾಗಿಸುತ್ತದೆ. ಹೀಗೆ ಕವಿ ಸಮಗ್ರ ದೃಶ್ಯವೊಂದರ ವಿವಿಧ ವ್ಯಾಪಾರಗಳನ್ನೆಲ್ಲಾ ತನ್ನ ಪ್ರತಿಭೆಯಿಂದ ಸೆರೆಗೈದು ಅದು ತಟಕ್ಕನೆ ನಮಗೆ ಪ್ರಿಯವೂ ಆನಂದವೂ ಆಗುವಂತಹ ರೂಪದಲ್ಲಿ ನೀಡಿದ್ದಾನೆ. ಹಿಂದಿನ ಈ ಎರಡು ನಿದರ್ಶನಗಳಲ್ಲಿ ಹಲವಾರು ಸ್ವತಂತ್ರವಾದ ಚಿತ್ರಗಳು ಸೇರಿ ಒಂದು ದೃಶ್ಯವಾಗಿ ದೃಗ್ಗೋಚರವಾದಾಗ ಅದನ್ನು ಕವಿ ಕಂಡ ಪರಿಯನ್ನು ನೋಡಿದೆವು. ಆದರೆ ಒಂದೇ ಸಲ ಕವಿಯ ಕಣ್ಣು ಒಂದೇ ಜಾತಿಯ ವಸ್ತುಗಳಲ್ಲಿ ಕಂಡುಬರುವ ವಿವಿಧ ವರ್ಣ ವಿನ್ಯಾಸಗಳ ಸೊಬಗನ್ನೂ ಹೇಗೆ ಗುರುತಿಸಬಲ್ಲದೆಂಬುದಕ್ಕೆ ಪಂಪನ ಈ ಪದ್ಯವನ್ನು ನೋಡಿ;

ಪೊಸ ನನೆಯೊಳ್ ಪಸುರ್ಪು, ಅಲರೊಳಂ ಚಿರಮಲ್ಲದ ಬೆಳ್ಪು, ಪಲ್ಲವ
ಪ್ರಸರದೊಳೆಯ್ದೆ ಕಣ್ಗೆ ಪಸರಂ ಬಡೆದೊಪ್ಪುವ ಕೆಂಪು, ತುಂಬಿಯೊಳ್
ಮಿಸುಗುವ ಕರ್ಪು, ಬರ್ಚಿಸಿದವೊಲ್ ಬಗೆಗೊಳ್ವಿನಂ ಬಸಂತದೊಳ್
ಬಸದಿಯ ಬಾಗಿಲಂ ತೆಱುದ ಮಾಳ್ಕೆಯೊಳಿರ್ದುವು ಬಂದ ಮಾವುಗಳ್                                                                                                            (ಆದಿಪುರಾಣ ೨-೫೬)

ಇದೊಂದು ವರ್ಣಶಿಲ್ಪ. ವಸಂತದಲ್ಲಿ ಬಂದ ಮಾವುಗಳಲ್ಲಿ ಕವಿಯ ಕಣ್ಣು ಏನೆಲ್ಲ ಕಾಣುತ್ತದೆ ! ಆಗತಾನೇ ಹೊರಟ ಮೊಗ್ಗುಗಳಲ್ಲಿ ಹಸಿರು, ಮಾವಿನ ಹೂಗಳಲ್ಲಿ ಈಗಲೋ ಆಗಲೋ ಬೇರೆಯ ಬಣ್ಣಕ್ಕೆ ತಿರುಗಿಬಿಡುವುದೋ ಏನೋ ಎಂಬಂತಹ ಬೆಳ್ಪು, ಎಳೆಯ ತಳಿರಿನ ಹರಹಿನಲ್ಲಿ ಕಣ್ಗೆ ಮನೋಹರವಾದ ಕೆಂಪು, ಮಾವಿನ ಮರಗಳಲ್ಲಿ ರೆsಂಕೃತಿ ಗೈಯುವ ತುಂಬಿಗಳ ಮೈ ಬಣ್ಣದಲ್ಲಿ ಕಪ್ಪು – ಈ ಎಲ್ಲವೂ ಚಿತ್ರಕಾರನೊಬ್ಬ ಬರೆದ ವರ್ಣ ಶಿಲ್ಪದಂತೆ ತೋರುತ್ತದೆ. ಈ ವರ್ಣ ವಿಲಾಸವೇ ಸಾಕು, ಪಂಪನ ಸೌಂದರ್ಯಗ್ರಹಣ ಶಕ್ತಿಯ ಮಹತ್ತಿಗೆ. ಆದರೆ ಈ ಎಲ್ಲ ದೃಗ್ಗೋಚರವಾದ ಚೆಲುವನ್ನು ಕಂಡು ಪುಲಕಿತವಾದ ಪಂಪನ ಅಂತರಂಗ ಅಲ್ಲಿ ಬೇರೊಂದು ಮಹತ್ತನ್ನೂ ದರ್ಶಿಸುತ್ತದೆ. ಮಾವಿನ ಮರ ತನ್ನೆಲ್ಲ ಕಂಪು, ನಾದ, ವರ್ಣಗಳಿಂದ ತಟಕ್ಕನೆ ಅವನ ಕಣ್ಣಿಗೆ ಬಸದಿಯ ಬಾಗಿಲನ್ನು ತೆರೆದಂತೆ ತೋರುತ್ತದೆ. ಇಂದ್ರಿಯವನ್ನು ಮೋಹಿಸುವ ಸೌಂದರ್ಯದ ಅನುಭವ ತಟಕ್ಕನೆ ಜಿನಾಲಯದ ಸೌಂದರ್ಯವಾಗಿ ಪರಿವರ್ತಿತವಾಗಿದೆ.

ಸಮಗ್ರ ದೃಶ್ಯವನ್ನು ಹೇಗೆ ನಮ್ಮ ಕವಿಗಳ ಕಣ್ಣು ಅದರ ವಿವರ ವಿವರ ಸಮೇತವಾಗಿ ಗ್ರಹಿಸಬಲ್ಲುದೋ ಅಂತೆಯೇ ಸಣ್ಣಪುಟ್ಟ ವಸ್ತುಗಳ ಸೌಂದರ್ಯವನ್ನೂ ಬಿಡಿ ಬಿಡಿಯಾಗಿ ಕಂಡು ಬಣ್ಣಿಸಿದೆ. ನಮ್ಮ ಸುತ್ತ ಅರಳಿ ನಗುವ ಸಹಸ್ರಾರು ಹೂಗಳ ಲಾಲಿತ್ಯವನ್ನು ಎಷ್ಟುಜನ ಕಂಡಿದ್ದಾರೆ ಈ ಕವಿಗಳಲ್ಲಿ ? ಸುತ್ತಣ ಆವರಣವನ್ನು ಪ್ರೀತಿಯಿಂದ ನೋಡುವ ಕಣ್ಣಿಗೆ ಸಾಮಾನ್ಯ ವಸ್ತುಗಳಲ್ಲೂ ಚೆಲುವು ತೋರುತ್ತದೆ. ಆದಿ ಪುರಾಣದ ಹನ್ನೊಂದನೆಯ ಆಶ್ವಾಸದಲ್ಲಿ ಪಂಪ ಕವಿ ಕಂಡಿರುವ ಹೂಗಳ ಸಂಖ್ಯೆ ಎಷ್ಟು? ಅವುಗಳ ವಿವರ ವಿವರವನ್ನು ಕಂಡು ಬಣ್ಣಿಸುವ ಪರಿ ಎಂಥದು? ಸುತ್ತಣ ಪರಿಸರದಲ್ಲಿ ಸುಂದರವಾದ ಹೂವುಗಳನ್ನು ತೊಡುವ ಉದ್ಯಾನದ ಮರಗಳ ವಿವರವನ್ನು ಲಕ್ಷ್ಮೀಶ ಚೆನ್ನಾಗಿ ಬಲ್ಲನು –

ಬಕುಳ ಮಂದಾರ ಪಾದರಿ ಕರ್ಣಿಕಾರ ಕುರ
ವಕ ಕೋವಿದಾರ ಪ್ರಿಯಂಗು ಕರವೀರ ಚಂ-
ಪಕ ತಿಲಕ ಸುರಗಿ ನಂದಾವರ್ತ ಮೇರು ಸೇವಂತಿಗೆ ಶಿರೀಷಮೆಂಬ
(ಜೈಮಿನಿ ಭಾರತ ೩-೩೨)

ಈ ಒಂದೊಂದು ಹೂವಿನ ಹೆಸರೂ ಸುಂದರವಾಗಿದೆ. ನಿಸರ್ಗದ ಈ ಸುಂದರ ಬಂಧುಗಳ ಪರಿಚಯವಿದ್ದರೆ ಸಾಲದು, ಅವುಗಳೊಂದೊಂದರ ಸೊಗಸನ್ನೂ ಬಿಡಿಬಿಡಿಯಾಗಿ ಕಂಡಿರಬೇಕು ಕವಿಯ ಕಣ್ಣು. ಸುರಹೊನ್ನೆಯ ಹೂ ಬಲು ಸಣ್ಣದು. ಕಂಡರೂ ಕಾಣದೆ ಹೋಗಬಹುದಾದುದು. ಆದರೆ ಪಂಪನ ಕಣ್ಣು ಅದರ ಸೊಗಸನ್ನು ಹೀಗೆ ಕಂಡಿದೆ :

ಎಸಳ್ಗಳನ್ ಎಯ್ದೆ ಕಂಡರಿಸಿ ಮುತ್ತಿನೊಳ್, ಅಲ್ಲಿ ಸುವರ್ಣ ಚೂರ್ಣಮಂ
ಪಸರಿಸಿ, ಕೇಸರಾಕೃತಿಯೊಳ್ ಅಲ್ಲಿಗೆ ಕರ್ಣಿಕೆಯ ಅಂದಮಾಗೆ ಕೀ-
ಲಿಸಿ, ಪೊಸತಪ್ಪ ಮಾಣಿಕದ ನುಣ್ವರಲಂ, ಮಧು ಮನ್ಮಥಂಗೆ ಬಣ್ಣಿಸಿಝಿ
ಸಮೆದಂತೆ ತೋರುವುದು ಪೂಗಳೊಳ್ ಏಂ ಸುರಹೊನ್ನೆ ಚೆನ್ನನೋ |
(ಆದಿಪುರಾಣ ೧೧-೧೧೬)

ಈ ಶಿಲ್ಪ ಯಾರನ್ನು ತಾನೇ ಬೆರಗಾಗಿಸದಿರುತ್ತದೆ? ಒಂದು ಸೊಗಸಾದ ಮುತ್ತನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಎಸಳುಗಳನ್ನಾಗಿ ಬಿಡಿಸಿ, ಆ ಎಸಳುಗಳಿಗೆ ಬಂಗಾರದ ಹುಡಿಯನ್ನು ಲೇಪಿಸಿ, ಅದರ ನಡುವೆ ಕೆಂಪು ಮಾಣಿಕದ ಹರಳೊಂದನ್ನು ಕೇಸರ ಕರ್ಣಿಕೆಯ ರೀತಿಯಲ್ಲಿ ಕೀಲಿಸಿ ವಸಂತನು ಮನ್ಮಥನಿಗೆ ಕಾಣಿಕೆ ಕೊಡಲು ಮಾಡಿದಂತೆ ತೋರುತ್ತದೆಯಂತೆ ಸುರಹೊನ್ನೆ! ಕವಿಯ ಸೂಕ್ಷ್ಮದೃಷ್ಟಿಗೆ ಮಾತ್ರ ಗೋಚರವಾಗುವ ಲಾಲಿತ್ಯ ಇದು. ಅಷ್ಟೇ ಅಲ್ಲ ಪಂಪಕವಿ ಪ್ರತಿಯೊಂದು ಹೂವಿನ ಚೆಲುವನ್ನು ಮಾತ್ರವಲ್ಲ. ಅದರ ಸ್ವಭಾವವನ್ನೂ ಕಂಡಿದ್ದಾನೆ. ಪ್ರತಿಯೊಂದು ಹೂವಿನ ಗುಣವನ್ನೂ ಹೇಳುತ್ತಾ –

ಸೊಡರ ಬೆಳಗಿನೊಳ್ ಕೊರಗುವ ಜಾಜಿಯ
ತುಂಬಿಯೊಳ್ ಪಗೆಗೊಂಡ ಸಂಪಗೆಯಂ
ಮುಡಿಯೆ ಸೊಗಯಿಸಿದದಿರ್ಮುತ್ತೆಯಲರಂ
ಮಸಿಯೊಳ್ ಸವನಾದ ಗೊಜ್ಜುಗೆಯಂ
ನುಡಿಯಲಕ್ಕುಮೆ ಪೂಗಳ ಲೆಕ್ಕದೊಳ್
ಎಂದೆೞ್ದು ಕಾಮನೊಡ್ಡೋಲಗದೊಳ್
ಮುಡಿಗೆಯಿಕ್ಕಿಯುಂ ಕೈಯನೆತ್ತಿ ಪೊಗಳ್ದುಂ
ತಣಿಯನೆ ಮಧುನೃಪಂ ಮಲ್ಲಿಗೆಯಂ
(ಆದಿಪುರಾಣ ೧೧-೧೦೯)

ಇಲ್ಲಿ ಮಲ್ಲಿಗೆಯ ಪ್ರಶಂಸೆಯಲ್ಲಿ ಕವಿ ಉಳಿದ ಹೂಗಳ ಸ್ವರೂಪ ಕಥನವನ್ನು ಮಾಡಿದ್ದಾನೆ. ದೀಪದ ಬೆಳಕಿಗೇ ಕೊರಗಿಹೋಗುತ್ತದೆಯಂತೆ ಜಾಜಿ! (ಈ ಮಾತಿನ ಸೊಗಸು, ಆ ಹೂವಿನ ಕೋಮಲತೆಗಳಿರಲಿ, ಅದರ ಹಿಂದಿರುವ ಪಂಪನ ಮಾರ್ದವ ಚಿತ್ತವನ್ನೂ ಗಮನಿಸಿ). ಸಂಪಗೆಯೋ ದುಂಬಿಯಲ್ಲಿ ಹಗೆಗೊಂಡಿದೆ. ಅದಿರ್ಮುತ್ತೆ ಮುಡಿದಾಗ ಸೊಗಸು ಹೆಚ್ಚು. ಗೊಜ್ಜುಗೆಯೋ ಮಸಿಗೆ ಸಮನಾಗಿದೆ. ಈ ಎಲ್ಲ ಹೂವುಗಳಿಗಿಂತ ಮಲ್ಲಿಗೆ ಅತ್ಯುತ್ಕೃಷ್ಟವೆಂದು ಮಧುನೃಪನು ಅದನ್ನು ತಲೆಯಲ್ಲಿ ಹೊತ್ತು ಕೈಯೆತ್ತಿ ಹೊಗಳುತ್ತಾನಂತೆ ಕಾಮನ ಒಡ್ಡೋಲಗದಲ್ಲಿ. ನಾಗಚಂದ್ರ ತನ್ನ ಮಲ್ಲಿನಾಥ ಪುರಾಣದಲ್ಲಿ ಕರ್ಣಿಕಾರ ಕುಸುಮದ ಸೊಗಸನ್ನು ಕಲ್ಪನಾಮಯವಾಗಿ ಚಿತ್ರಿಸಿದ್ದಾನೆ.

ಪೂಜಿಸಿ ಮಂತ್ರದೇವತೆಯರಂ ಮಧುವಂ ವನಲಕ್ಷ್ಮಿ ಪೀರ್ವ ಪೊಂ
ಗಾಜಿನ ಬಟ್ಟಲಂತೆ, ರತಿನರ್ತನ ಕಾಂಚನ ತಾಳದಂತೆ, ರಾ
ರಾಜಿಪ ಕರ್ಣಿಕಾಗ್ರ ಕುಸುಮಾಗ್ರದೊಳ್ ಇದ್ದ ಅಳಿಮಾಳೆ ಕಂತುನೀ-
ರಾಜನ ದೀಪಮಾಳಿಕೆಯ ಚೂಳಿಕೆಯಂತೆ ಕರಂ ಮನೋಹರಂ
(ಮಲ್ಲಿನಾಥ ಪುರಾಣ ೫-೨೧)

ಇಲ್ಲಿ ‘ಮಧುವಂ ಪೀರ್ವ ಪೊಂಗಾಜಿನ ಬಟ್ಟಲಂತೆ’ ‘ರತಿ ನರ್ತನ ಕಾಂಚನ ತಾಳದಂತೆ’ ಎಂದು ಕವಿ ಹೇಳುವ ಮಾತಿನ ಸೊಗಸನ್ನು ಪರಿಭಾವಿಸಿ ಅನುಭವಿಸಬೇಕು. ಕವಿ ತಾನು ಕಂಡ ವಸ್ತುಗಳನ್ನೇ ತೆಗೆದುಕೊಂಡು ಇವುಗಳಿಂದ ತಾನು ಪ್ರಕೃತಿಯಲ್ಲಿ ಕಂಡ ಸೌಂದರ್ಯದ ಅನುಭವವನ್ನು ನಿರೂಪಿಸಲು ರೂಪಕಗಳನ್ನು ಮಾಡಿರುವುದು ಅವನ ವಿಶಿಷ್ಟತೆಯನ್ನು ತೋರುತ್ತದೆ. ಅದರಲ್ಲಿಯೂ ಕರ್ಣಿಕಾರ ಹೂವಿನ ತುದಿಯಲ್ಲಿ ಕುಳಿತು ಕಪ್ಪಗೆ ಹೊಳೆವ ದುಂಬಿಯಿಂದ, ಆ ಹೂವು ‘ಕಂತು ನೀರಾಜನ ದೀಪ ಮಾಲೆಯ ಚೂಳಿಕೆಯಂತೆ’ ತೋರಿತು ಎಂದು ವರ್ಣಿಸಿರುವುದಂತೂ ಇನ್ನೂ ಸೊಗಸು. ಮಧುವನ್ನು ಕುಡಿವ ಗಾಜಿನ ಬಟ್ಟಲು, ರತಿಯ ನರ್ತನದ ಬಂಗಾರದ ತಾಳ, ಮನ್ಮಥನ ನೀರಾಜನ ದೀಪ – ಈ ರೂಪಕಗಳು ಭೋಗ ಸಂಬಂಧಿಯಾದ ಇಂದ್ರಿಯ ಸೌಂದರ್ಯಾನುಭವದ ಕಲ್ಪನೆಯಿಂದ ರೂಪಿತವಾಗಿರುವ ಪರಿಯನ್ನು ಬಣ್ಣಿಸುತ್ತವೆ. ಹೂವುಗಳ ಸೌಂದರ್ಯದ ಸ್ಥಾನವನ್ನು ಕುರಿತು ಹಿಂದಿನ ಕವಿಗಳ ದೃಷ್ಟಿಯಿಂದ ಒಂದು ಮಾತನ್ನು ಇಲ್ಲಿ ಸ್ಪಷ್ಟಪಡಿಸಬಹುದು. ಸಾಮಾನ್ಯವಾಗಿ ‘ವನವಿಹಾರ ವರ್ಣನಂ’ ಎಂಬ ಒಂದು ಅಧ್ಯಾಯದಲ್ಲಿ ಪ್ರತಿಯೊಂದು ಕಾವ್ಯದಲ್ಲೂ, ರಾಜನು ತನ್ನ ಅಂತಃಪುರದ ಲಲನಾಮಣಿಯರೊಂದಿಗೆ ವನವಿಹಾರಕ್ಕೆ ಹೋದ ಸಂದರ್ಭದ ಚಿತ್ರಣವಿರುತ್ತದೆ. ಆ ವನದಲ್ಲಿ ರಾಜರಮಣಿಯರು ಪುಷ್ಪಾಪಚಯನಕ್ಕೆಂದು ನಾನಾ ಬಗೆಯಾದ ಹೂವುಗಳನ್ನು ತಿರಿದು ಅದರಿಂದ ಆಭರಣಗಳನ್ನು ಸಮೆದು ಸಿಂಗರಿಸಿಕೊಂಡು ರತಿ ರಾಗರಸ ತರಂಗಿಣಿಯನ್ನು ಹರಿಸುತ್ತಾರೆ. ಹೀಗೆ ಹೂವುಗಳು ಸಾಮಾನ್ಯವಾಗಿ ಮಾನವ ಭೋಗ ವಿಲಾಸದ ಸಾಮಗ್ರಿಯೆಂದೇ ಬಹುಜನ ಕವಿಗಳ ಮತ. ಆದರೆ ಭಕ್ತ ಕವಿಯಾದ ಹರಿಹರನಲ್ಲಿ ಮಾತ್ರ ಈ ದೃಷ್ಟಿ ಬೇರೆಯಾಗಿದೆ – ಅದೂ ಅವನ ರಗಳೆಗಳಲ್ಲಿ. ದೈವಭಕ್ತಿಯಿಂದ ಜೀವಂತಗೊಂಡ ಅವನ ದೃಷ್ಟಿಗೆ ಹೂವು ಪವಿತ್ರವಾದ ಪೂಜ್ಯವಾದ ವಸ್ತು. ಅವನು ಹೂವುಗಳನ್ನು ಒಲಿಯುವುದು ಅವುಗಳ ಬಹಿರಂಗದ ಚೆಲುವಿಗಾಗಿ ಅಲ್ಲ; ಅವುಗಳ ಅಂತರಂಗದ ಪಾವಿತ್ರ್ಯಕ್ಕೆ. ಅವು ಶಿವ ಪೂಜೆಗೆ ತಕ್ಕವೇ ಹೊರತು ಮಾನವ ಭೋಗೋಪಯೋಗಿಯಾದ ವಸ್ತುಗಳಲ್ಲ ಎಂದು ಅವನ ನಂಬಿಕೆ. ಅವನು ಹೂವುಗಳಲ್ಲಿ ಆ ಪರಶಿವ ಚೈತನ್ಯದ ಸ್ಪಂದನವನ್ನು ಗುರುತಿಸಿ ಅವುಗಳನ್ನು ಆತ್ಮೀಯವಾಗಿ ಬೇಡಿಕೊಳ್ಳುತ್ತಾನೆ-

ಏನವ್ವ ಸಂಪಗೆಯೆ ಶಿವನ ಸಿರಿಮುಡಿಗಿಂದು
ನೀನೀವ ಪೊಸ ಕುಸುಮಮಂ ನೀಡು ನೀಡೆಂದು
[2]

ಈ ಲೋಕದ ಎಲ್ಲ ಚೆಲುವೂ ಶಿವಪರವಾದಾಗ ಮಾತ್ರ, ಅದರ ಸೌಂದರ್ಯ ಸಾರ್ಥಕವಾಗುತ್ತದೆ ಎಂಬುದು ಹರಿಹರನ ಭಾವನೆ.

ಪರ‍್ವತಾರಣ್ಯಗಳ ರುದ್ರಸೌಂದರ್ಯ ಯಾರ ಮನಸ್ಸನ್ನಾದರೂ ನಡುಗಿಸುತ್ತದೆ. ಆದರೆ ಪ್ರಾಚೀನ ಕನ್ನಡ ಕವಿಗಳು ತಾವು ಕಂಡ ಪರ್ವತಾರಣ್ಯಗಳನ್ನು ವರ್ಣಿಸದೆ ಕಾಣದ ಪರ್ವತಾರಣ್ಯಗಳನ್ನು ವರ್ಣಿಸಲು ಹೋಗಿದ್ದಾರೆ. ಮರ ಗಿಡ ಬಳ್ಳಿಗಳು ಹುಲ್ಲಿನ ಪೊದರುಗಳು, ಮೃಗಗಳು, ಬೇಟೆಗಾರರ ವರ್ಣನೆ ಮತ್ತು ಬೇಡಿತಿಯರ ಪ್ರಣಯ, ಬೇಟೆಯ ವಿಸ್ತಾರವಾದ ವರ್ಣನೆ, ಕಿನ್ನರಮಿಥುನಾಳಿಗಳು ಇತ್ಯಾದಿ ‘ವಿಷಯಮಾಗಿರೆ ತೀರ್ವುದು ಶೈಲ ವರ್ಣನಂ’ ಎಂದು ಶಾಸ್ತ್ರ ಹೇಳುತ್ತದೆ. ಸರಿ, ಅದನ್ನು ಪಾಲಿಸಿದ ಕವಿ ಕಾಡಿನಲ್ಲಿ ಇರುವ, ಇಲ್ಲದ ಮರಗಳ ಪ್ರಾಣಿಗಳ ಪಟ್ಟಿಯನ್ನು ಕೊಟ್ಟು ಭಯಂಕರ ಶಬ್ದ ಸಮೂಹದಿಂದಲೋ ವಿಚಿತ್ರ ಕಲ್ಪನಾ ಜಾಲದಿಂದಲೋ ತಾನು ವರ್ಣಿಸುತ್ತಿರುವುದು ಪರ್ವತಾರಣ್ಯವನ್ನು ಎಂದು ನಮಗೆ ಮನದಟ್ಟು ಮಾಡಿಕೊಡಲು ತಪಿಸುತ್ತಾನೆ. ಅವರಿಗೆ ಪರ್ವತಾರಣ್ಯಗಳ ಪರಿಚಯವಿರಲಿಲ್ಲವೆಂದು ಹೇಳಲಾಗದಿದ್ದರೂ, ಏಕೆ ತಾವು ಕಂಡ ರುದ್ರಸೌಂದರ‍್ಯವನ್ನು ಕವಿಗಳು ಚಿತ್ರಿಸದೆ ಹೋದರೋ ಎನ್ನುವುದಕ್ಕೆ ಉತ್ತರವಿಲ್ಲದಂತಾಗಿದೆ. ಸಾಮಾನ್ಯವಾಗಿ ದಿಗ್ವಿಜಯದ ಹಾದಿಯಲ್ಲಿ, ಬೇಟೆಯ ವರ್ಣನೆಯಲ್ಲಿ ಹಾಗೂ ವನವಿಹಾರ ವರ್ಣನೆಯಲ್ಲಿ, ನಾವು ಈ ಪರ್ವತಾರಣ್ಯಗಳ ವರ್ಣನೆಯನ್ನೂ ಕಾಣುತ್ತೇವೆ ಕಾವ್ಯಗಳಲ್ಲಿ. ಪಂಪ,ರಾಘವಾಂಕ, ಲಕ್ಷ್ಮೀಶ ಇವರಿಗೆ ಕಾಡಿನ ಮತ್ತು ಬೇಟೆಯ ಪರಿಚಯವಿದೆಯೆಂದು ಹೇಳಬಹುದು. ಕಾಡಿನ ಹೆಮ್ಮರಗಳ ದೈತ್ಯಭೀಷ್ಮತೆಯನ್ನಾಗಲೀ, ಪರ್ವತಾರಣ್ಯಗಳ ವಿಸ್ತಾರವನ್ನಾಗಲೀ ನಾವು ಕಾಣಲಾಗುವುದಿಲ್ಲ ನಮ್ಮ ಕವಿಗಳಲ್ಲಿ. ಬಾಣ ಕವಿಯ ಕಾದಂಬರಿಯನ್ನು ಕನ್ನಡಿಸಿದ ನಾಗವರ್ಮ ವಿಂಧ್ಯಾಟವಿಯಲ್ಲಿ ಬೆಳೆದ ಒಂದು ಮಹಾಶಾಲ್ಮಲೀ ವೃಕ್ಷದ ಚಿತ್ರವನ್ನು ಕೊಟ್ಟಿದ್ದಾನೆ –

ಮರಗಟ್ಟೆಂಬಂತೆ ಸುತ್ತುಂ ಮೊದಲೊಳಜಗರಂ ಸುತ್ತೆ ದಿಕ್ಚಕ್ರವಾಳಾಂ
ತರಮಂ ನೋಡಲ್ಕೆ ನೀಳ್ದಂತಿರೆ ಬೆಳೆದ ಮಹಾಶಾಖೆಗಳ್ ತಾಂಡವಾಡಂ
ಬರದೊಳ್ ನಾನಾವಿಧಂ ನರ್ತಿಪ ನಟನ ಭುಜಾದಂಡಮೊ ಪೇೞಮೆಂಬಂ
ತಿರೆ ಅಮೇಯ ಸ್ಕಂಧಮುಂ ಸಂಧಿಸಿ ಜರಠಮಹಾಶಾಲ್ಮಲೀ ವೃಕ್ಷಮಿರ್ಕುಂ
(ಕಾದಂಬರೀ ಸಂಗ್ರಹ : ೧-೩೭)

ಇಂಥ ಒಂದು ಚಿತ್ರವನ್ನು ಕನ್ನಡದ ಕವಿಗಳಾರೂ ಕೊಟ್ಟಿಲ್ಲ. ಅವರು ಕೊಡುವುದೇನಿದ್ದರೂ – ‘ತಡಸು, ಕೆಂಗರಿ, ತೆಂಗು, ಸಂಗು, ಕೇದಗೆ, ಕದಳಿ, ನಲ್ಲೆ, ಚಿಲ್ವ, ಬಿಲ್ವ, ತಗ್ಗಿಲು, ತುಂಬುರ, ಮಾವು, ಬೇವು’ ಇತ್ಯಾದಿ ಭೂಜಗಳಿಂದ ‘ಮಿಗೆ ಕಾನನಂ ಕಣ್ಗೆಸೆದುದು’ (ರಾಘವಾಂಕ-ಹರಿಶ್ಚಂದ್ರ ಕಾವ್ಯ; ೫-೧೬) ಎಂದು ಮಾತ್ರ. ಆ ಕಾಡಿನ ಭಯಂಕರತೆಯನ್ನು ಕುರಿತು, ‘ಕಾರಿರುಳು ಕೊಂಬುಕೊಂಡುದೆನೆ ಕಱಂಗಿ ಕಳ್ತಲಿಸುತಿರ್ದುದು ಕಾನನಂ ಎತ್ತ ನೋಳ್ಪೊಡಂ’ (ಲೀಲಾವತಿ – ನೇಮಿಚಂದ್ರ ೬-೨೭) ಎಂದು. ಸಂಸ್ಕೃತ ಕವಿಗಳ ಪ್ರಭಾವದಿಂದ ರೂಪುಗೊಂಡ ಒಂದೊಂದು ವರ್ಣನೆ ಸುಮಾರಾಗಿ ಚೆನ್ನಾಗಿದೆ ಎನ್ನಬಹುದು. ಪಂಪ ತನ್ನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಅರಣ್ಯದ ರುದ್ರ ಸೌಂದರ್ಯವನ್ನು ವರ್ಣಿಸುತ್ತಾ-

‘ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ
ಸ್ಪದಮ್, ಸಿಂಹನಾದ ಜನಿತ ಪ್ರತಿ ಶಬ್ದ ಮಹಾ ಭಯಾನಕ
ಪ್ರದಮ್, ಅದು ನಿರ್ಝರೋಚ್ಚಳಿತ ಶೀಕರ ಶೀತಳವಾತ ನರ್ತಿತೋ-
ನ್ಮದ ಶಬರೀ ಜನಾಳಕಮ್, ಅದು ಆಯತ ವೇತ್ರಲತಾ ವಿತಾನಕಂ’
(ಪಂಪಭಾರತ : ೩-೧೦)

ಎಂದು ಹೇಳುತ್ತಾನೆ. ಮದಿಸಿದಾನೆಯ ಮುಸಲ ಸದೃಶವಾದ ದಂತದಿಂದ ಭಗ್ನವಾದ ದೊಡ್ಡ ದೊಡ್ಡ ಮರಗಳು, ಸಿಂಹನಾದದಿಂದ ಉಂಟಾದ ಪ್ರತಿ ಶಬ್ದಗಳಿಂದ ಮಹಾ ಭಯಾನಕವಾದ ಆವರಣ, ನಿರ್ಝರಿಣಿಯ ಶೀಕರದಿಂದ ಶೀತಲವಾದ ತಂಗಾಳಿಯಿಂದ ಕುಣಿವ ಮುಂಗುರುಳುಳ್ಳ ಶಬರೀ ಜನರು, ವಿಶಾಲವಾದ ಬೆತ್ತಬಿದಿರಿನ ಕಾಡು – ಎನ್ನುವ ಹಲವಾರು ಚಿತ್ರಗಳಲ್ಲಿ, ಸಂಸ್ಕೃತ ಕವಿಗಳು ಕಂಡ ಕಾಡು ಕನ್ನಡ ಕವಿಯಲ್ಲೂ ಮೂಡಿ ಬಂದಿದೆ ಎಂಬುದೊಂದೇ ಸಮಾಧಾನ. ಇನ್ನು ಪರ್ವತಗಳ ಅತ್ಯುತ್ತಮ ವರ್ಣನೆ ಹುಡುಕಿದರೂ ಸಿಕ್ಕುವುದಿಲ್ಲ. ಆದರೆ ಪಂಪನ ಆದಿಪುರಾಣದಲ್ಲಿ ದಿಗ್ವಿಜಯಾರ್ಥಿಯಾಗಿ ನಡೆಯುವ ಭರತ ಚಕ್ರಿಯ ಕಣ್ಣಿಗೆ ವಿಜಯಾರ್ಧ ಪರ್ವತದ ಉತ್ತುಂಗಶೃಂಗ ತೆಕ್ಕನೆಯೆ ಅವನ ಅಹಂಕಾರವನ್ನು ಅರೆದಪ್ಪಳಿಸುವಂತೆ ಕಣ್ಣಿಗೆ ಬಿದ್ದ ಪರಿಯನ್ನು ಪಂಪ ಬಣ್ಣಿಸಿದ್ದಾನೆ-

ಗಗನಾಭೋಗಮನ್ ಎಯ್ದೆ ನೀಳ್ದ ಮಣಿ ಕೂಟಾಟೋಪಮೆಂಬಂತು ದಿ
ಟ್ಟಿಗೆ ಮುನ್ನಂ ಬರೆ ಸಾರೆಸಾರೆ ತನುವಂ ತತ್ಕುಂಜ ಸಂಜಾತ ಭೂ-
ಜಗಳತ್ ಪುಷ್ಪಪರಾಗ ಸೌರಭವಹನ್ ಮಂದಾನಿಲಂ ಸೋಂಕೆ ತೊ –
ಟ್ಟಗೆ ಕಣ್ಗೊಂಡುದು ಪೌರವಂಗೆ ವಿಜಯಾರ್ಧಾದ್ರೀಂದ್ರ ಶೋಭೋದಯಂ
(ಆದಿಪುರಾಣ ೧೩-೧೦)

ಕಾಡಿನಲ್ಲಿ ನಡೆಯುವಾಗ ಆಗುವ ಮಧುರ ಅನುಭವವೂ ರೋಮಾಂಚಕವಾದ ಸುಖವೂ ಬಹು ಸೊಗಸಾಗಿ ನಿರೂಪಿಸಲ್ಪಟ್ಟಿವೆ ಇಲ್ಲಿ. ದಿಗ್ವಿಜಯಕ್ಕೆಂದು ನಡೆದಿದ್ದಾನೆ ಚಕ್ರಿ ತನ್ನ ಸೈನ್ಯ ಸಮೇತವಾಗಿ. ವಿಜಯಾರ್ಧ ಪರ್ವತದ ಸಾನುಪ್ರದೇಶದ ದಟ್ಟವಾದ ಕಾನನದಲ್ಲಿ ಬರುವ ದೊರೆಯ ಮೈಗೆ ಆ ಪರ್ವತದ ಮರಗಳಿಂದ ಸುರಿಯುವ ಪುಷ್ಪಪರಾಗದ – ಅದು ಕುಸುಮಿತ ವಸಂತ ವನಸಿರಿ ಬೇರೆ – ಸುಗಂಧ ಭಾರವನ್ನು ಹೊತ್ತು ಮಂದ ಮಂದವಾಗಿ ಬೀಸುವ ಗಾಳಿ ಸೋಂಕುತ್ತಿರುವಂತೆಯೇ, ಒಂದೆಡೆ ವಿಜಯಾರ್ಧ ಪರ್ವತದ ನೀಳವಾದ ಶಿಖರ, ಗಗನಾಭೋಗವನ್ನು ನೀಳ್ದು ನಿಂತ ಮಣಿ ಕೂಟ, ಆ ಪ್ರಕೃತಿಯ ಆಟೋಪದಂತೆ ತೆಕ್ಕನೆಯೆ ಕಂಡಿತಂತೆ. ದಟ್ಟವಾದ ಕಾಡಿನಲ್ಲಿ, ವಸಂತ ಋತುವಿನಲ್ಲಿ ನಡೆದ ರಸಿಕನಾದ ಪಂಪನಿಗೆ, ಎಂದೋ ಆಗಿರಬೇಕು, ಆ ಅಪೂರ್ವವಾದ ದೃಶ್ಯಾನುಭವ. ಮಾನವನ ಸಮಸ್ತ ಅಹಂಕಾರವನ್ನೂ ಪ್ರಕೃತಿಯ ರುದ್ರ ಸೌಂದರ‍್ಯ ಅರೆದು ಅಪ್ಪಳಿಸುತ್ತದೆ ಎಂಬ ಅಂಶವನ್ನು ಪಂಪ ಇಲ್ಲಿ ಸೂಚಿಸಿದ್ದಾನೆ.

ಕಾಡು ಎಂದಮೇಲೆ, ಕವಿಯ ಕಾವ್ಯದಲ್ಲಿ, ರಾಜನಾದವನು ಬೇಟೆಯಾಡದೆ ಹಿಂದಕ್ಕೆ ಹಾಗೇ ಬರುವುದುಂಟೆ? ಬೇಡ ಪಡೆಯನ್ನೂ, ಬೇಟೆ ನಾಯಿಗಳನ್ನೂ ಜೊತೆಗೆ ಕರೆದುಕೊಂಡು ರಾಜನು ವನಾಂತರದ ಮೃಗಗಳನ್ನು ಬೆನ್ನಟ್ಟುತ್ತಾನೆ. ಆಗ ನಮ್ಮ ಕಣ್ಣಿಗೆ ಕವಿ ಒಂದೊಂದು ಕಾಡು ಪ್ರಾಣಿಯ ಅಪೂರ್ವ ಚೆಲುವನ್ನು ವರ್ಣಿಸುತ್ತಾನೆ. ಬೇಟೆ ನಾಯಿಗಳ ಚಿತ್ರವನ್ನು ಲಕ್ಷ್ಮೀಶ ಚಿತ್ರಿಸುವ ಪರಿ ಇದು :

ಉಬ್ಬಿದುರದೇಶದಗೆದೊಡಲ ಬಾಗಿದ ಬೆನ್ನ
ಹಬ್ಬುಗೆಯ ಪಚ್ಚಳದ ಸೆಟೆದ ಬಾಲದ ಕೊನೆಯ
ಕೊಬ್ಬಿದ ಕೊರಳ ಸಣ್ಣ ಜಂಘಗಳ ಕೊಂಕುಗುರ ಮಡಿಗಿವಿಯ ಕಿಡಿಗಣ್ಗಳ
ಹೆಬ್ಬಲ್ಲ, ಬಿಡುವಾಯ, ಜೋಲ್ವ ಕೆನ್ನಾಲಗೆಯ
ಗಬ್ಬಿನಾಯ್ಗಳ್….                       (ಜೈಮಿನಿ ಭಾರತ ೨೮-೪೬)

ಕವಿ ರಾಘವಾಂಕನು ಹುಲ್ಲೆಯ ಮೇಲೆ ನೆಗೆಯಲು ಸಿದ್ಧವಾದ ದೀಹದ ಹುಲಿಯೊಂದರ ಚಿತ್ರವನ್ನು ಯಥಾವತ್ತಾಗಿ ಕೊಡುತ್ತಾನೆ :

ಕುಸಿದ ತಲೆ, ಹಣುಗಿದೊಡಲ್, ಅರಳ್ವಬಾಯ್, ಸುಗಿದ ಕಿವಿ,
ಉಸುರಿಡದ ಮೂಗು ಮಱದೆವೆಯಿಕ್ಕದುರಿಗಣ್ಣು
ಬಸುಱಳಡಗಿದ ಬೆನ್ನು ನಿಮಿರ್ದ ಕೊರಳ್ ಅಡಿಗಡಿಗೆ ಗಜಬಜಿಸುತಿಹ ಮುಂದಡಿ
(ಹರಿಶ್ಚಂದ್ರ ಕಾವ್ಯ ೫-೩೧)

ಲಕ್ಷ್ಮೀಶ ರಾಘವಾಂಕರಿಬ್ಬರ ಚಿತ್ರಣಗಳಲ್ಲಿ ವಾಸ್ತವತೆ ಸೊಗಸಾಗಿ ಚಿತ್ರಿತವಾಗಿದೆ. ಅವರಿಬ್ಬರಿಗೂ ಕಾಡಿನ ಪರಿಚಯ ಮತ್ತು ಬೇಟೆಯ ವಿವರಗಳ ಪರಿಚಯವುಂಟೆಂದು ಧಾರಾಳವಾಗಿ ಹೇಳಬಹುದು. ಕಾಡನ್ನು ವರ್ಣಿಸುವಾಗ ಅಲ್ಲಿ ಋಷ್ಯಾಶ್ರಮಗಳಿದ್ದುವೆಂದು ವರ್ಣಿಸುವುದೂ ಒಂದು ಸಂಪ್ರದಾಯ. ಈ ಸಂಪ್ರದಾಯವನ್ನು ಕವಿಗಳೆಲ್ಲರೂ ತಮ್ಮ ಕಲ್ಪನೆಯಿಂದ ಗೌರವಿಸಿದ್ದಾರೆ. ಅಷ್ಟೇ ಅಲ್ಲದೆ ಋಷ್ಯಾಶ್ರಮದ ವರ್ಣನೆಯ ಮೂಲಕ ಶಮ ಪ್ರಧಾನವಾದ ಶಾಂತರಸವನ್ನೂ ಕಾವ್ಯಗಳಲ್ಲಿ ಕವಿಗಳು ಚಿತ್ರಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಈ ಪರ್ವತಾರಣ್ಯಗಳ ರುದ್ರ ಸೌಂದರ್ಯದ ನಡುವೆ ಆಗಾಗ ಒಂದೊಂದು ಸರೋವರವೂ ನಮ್ಮ ಕಣ್ಣಿಗೆ ಬೀಳುತ್ತದೆ. ಪಾಂಡವರು ದ್ವೈತವನದಲ್ಲಿದ್ದಾಗ ನೀರನ್ನು ಹುಡುಕಲು ಹೋದ ಸಹದೇವನು ಒಂದು ಕೊಳವನ್ನು ಕಾಣುತ್ತಾನೆ.

ಬಕ ಕಲಹಂಸ ಬಲಾಕ
ಪ್ರಕರ ಮೃದುಕ್ವಣಿತ ರಮ್ಯಮಿದಿರೊಳ್ ತೋಱ
ತ್ತು ಕೊಳಂ ಪರಿವಿಕಸಿತ ಕನ
ಕ ಕಿಂಜಲ್ಕ ಪುಂಜ ಪಿಂಜರಿತ ಜಳಂ                   (ಪಂಪ ಭಾರತ ೮-೩೮)

ಕೇವಲ ನಾಲ್ಕೇ ಸಾಲುಗಳಲ್ಲಿ ಕೊಳದ ಬಕ ಕಲಹಂಸಗಳ ಕಲರುತಿಯನ್ನು, ವಿಕಸಿತವಾದ ಹೊಂದಾವರೆಗಳಿಂದ ಮಿರು ಮಿರುಗುವ ಸರೋವರದ ಚಿತ್ರವನ್ನು ಪಂಪನು ಚಿತ್ರಿಸಿದ್ದಾನೆ. ಕನ್ನಡ ಕಾವ್ಯಲೋಕದಲ್ಲಿ ಮಕುಟಪ್ರಾಯವಾದ ಒಂದು ಸರೋವರವೆಂದರೆ ನಾಗವರ್ಮನ ಕಾದಂಬರಿಯಲ್ಲಿ ನಾವು ಕಾಣುವ ಅಚ್ಛೋದ ಸರೋವರ –

ಎಲೆ ತಾರಾಗಂ ಹರಂ ಕಣ್ಣಿಡೆ ಕರಗಿದುದು ಅಂತಲ್ತು ರುದ್ರಾಟ್ಟಹಾಸಂ
ಜಲಮಾದತ್ತು ಅಲ್ತು ಚಂದ್ರಾತಪಮ್ ಅಮೃತ ರಸಾಕಾರಮಾಯ್ತು
ಅಲ್ತು ಹೈಮಾ –
ಚಲಮಂಭೋರೂಪದಿಂದಂ ಪರಿಣಮಿಸಿದುದು ಅಂತಲ್ತು ನೈರ್ಮಲ್ಯ ಶೋಭಾ
ಕಲಿತಂ ತ್ರೆ ಲೋಕ್ಯ ಲಕ್ಷ್ಮೀ ಮಣಿ ಮುಕುರಮೆನಲ್ ಚೆಲ್ವದಾಯ್ತಬ್ಜಷಂಡ
(ಕಾದಂಬರೀ ಸಂಗ್ರಹ ೩-೧೨)

ಕವಿ ಲೋಕದಲ್ಲಿ ಕಂಡ ಸರೋವರವೊಂದು, ಅವನ ಕಾವ್ಯಲೋಕದಲ್ಲಿ ಎಂತಹ ಅಪೂರ್ವ ಸೌಂದರ್ಯದಿಂದ ಶಾಶ್ವತತೆಯನ್ನು ಪಡೆದುಬಿಟ್ಟಿದೆ! ಸರೋವರವೊಂದನ್ನು ಕಂಡಾಗ ಕಣ್ಣಿಗೆ ಆಗುವ, ಕಿವಿಗೆ ಆಗುವ, ತತ್ಪರಿಣಾಮವಾಗಿ ಮಹೋನ್ನತ ವ್ಯಕ್ತಿಯೊಬ್ಬನ ಮನದಲ್ಲಿ ಮೂಡಬಹುದಾದ ಭಾವನೆಗಳನ್ನು ಕವಿ ಚಿತ್ರಿಸಿದ್ದಾನೆ. ಹೈಮಾಚಲದ ಸಾನ್ನಿಧ್ಯದಲ್ಲಿ ಕಂಡ ಈ ಸರೋವರ ದೈವೀ ಭಾವನೆಯಿಂದ ದೀಪ್ತಗೊಂಡು ಕಲ್ಪನೆಯ ಲಹರಿ ಲಹರಿಗಳನ್ನು ಹೊಮ್ಮಿಸಿದೆ ಈ ಪದ್ಯದಲ್ಲಿ. “ಆಶ್ಚರ್ಯ, ಆನಂದ, ಸತ್ವ, ಸಂತೋಷ, ಸೌಂದರ್ಯ, ಬೃಹತ್ತು, ಮಹತ್ತು, ಭವ್ಯತೆ, ಈ ದೈವೀ ಭಾವನೆಗಳ ಉನ್ಮೀಲನ ಮತ್ತು ಉನ್ಮೇಷಣಕ್ಕೆ ಪ್ರೇರಕವಾಗುವ ತಪೋಲೋಕ ಪ್ರಕೃತವಾದ ಪದಶ್ರೀಯಿಂದ ಪ್ರಚುರನಾಗಿ”[3] ಕವಿ ಇಲ್ಲಿ ಈ ಸರೋವರವನ್ನು ವರ್ಣಿಸಿದ್ದಾನೆ.

ನೀರಾಕರಗಳಲ್ಲೆಲ್ಲಾ ಹಿರಿದಾದುದೂ ಭವ್ಯಾನುಭೂತಿ ಪ್ರಚೋದಕವಾದುದೂ ಸಮುದ್ರ. ಪ್ರತಿಯೊಬ್ಬ ಕವಿಯೂ ತನ್ನ ಕಾವ್ಯಾರಂಭದಲ್ಲಿ, ಅವನು ಕಡಲನ್ನು ನೋಡಿರಲಿ ನೋಡದಿರಲಿ, ಸಮುದ್ರದ ವರ್ಣನೆಯನ್ನು ಅಲ್ಲೋಲ ಕಲ್ಲೋಲ ತರಂಗಗಳ, ಕರಿಮಕರ ಕಮಠಗಳ, ಕಪ್ಪೆಚಿಪ್ಪು ಮುತ್ತು ರತ್ನಗಳ, ತಿಮಿ ತಿಮಿಂಗಿಲಾದಿ ಜಲಚರಗಳ, ಶೈವಾದ ಕಮಲಗಳ ಸಹಾಯದಿಂದ ಮಾಡಿ ಮುಂದುವರಿಯಲೇಬೇಕು. ಹೀಗಾಗಿ ಬರಿಯ ಶಬ್ದಾಡಂಬರತೆಯ ಚಾತುರ‍್ಯದಲ್ಲಿಯೇ ಸಮುದ್ರ ವರ್ಣನೆಗಳು ಕವಿ ದೇವರಾಣೆಯಾಗಿಯೂ ಸಮುದ್ರವನ್ನು ನೋಡಿಲ್ಲ ಎನ್ನುವುದನ್ನು ಘೋಷಿಸುತ್ತವೆ. ಕಡಲನ್ನು ಕುರಿತು “ಬೆಟ್ಟುಗಳೆೞ್ದು ಬೆಟ್ಟಗಳನಟ್ಟುವೋಲ್ ಪವಮಾನವೇಗದಿಂದಟ್ಟಿ ತೆರಳ್ದುಗೊಂದಣಿಸಿ” ಬರುವ ತೆರೆಗಳನ್ನು, (ಸೂ. ಸು. ಪು. ೧೯; ಪದ್ಯ ೨೫) “ಮುಗಿಲ್ಗಳರವಟ್ಟಿಗೆ ಎಳನೇಸಱತೊಟ್ಟಿಲು… ಅಸುರಾರಿಯ ಸೆಜ್ಜೆ” (ಅಲ್ಲೆ. ಪು ೨೧; ೩೮) ಎಂದು ಅದರ ಸೊಗಸನ್ನು ಕವಿಗಳು ಕ್ವಚಿತ್ತಾಗಿ ವರ್ಣಿಸಿದ್ದರೂ, ಸಮುದ್ರದ ದಾಮೋದರವನ್ನು ಬಣ್ಣಿಸಿದವರೇ ಎಲ್ಲ. ಆದರೆ ರತ್ನಾಕರವರ್ಣಿಯೊಬ್ಬನೇ ನಿಜವಾಗಿಯೂ ಕಡಲನ್ನು ಕಂಡವನು. ಅವನ ಶೈಲಿಯೇನೋ ಕಡಲಿನ ವರ್ಣನೆಗೆ ಅಷ್ಟಾಗಿ ಒಪ್ಪುವುದಿಲ್ಲವಾದರೂ ಅವನು ಕಡಲನ್ನು ಕಂಡು ಪಡೆದ ಅನುಭವ ಸಾಂಗತ್ಯದ ಧಾಟಿಯಲ್ಲೇ ಭುಸ್ಸೆಂದು ತೆರೆ ತೆರೆಯಾಗಿ ನುಗ್ಗುವುದನ್ನು ನಾವು ಗುರುತಿಸಬಹುದು. ಕಡಲ ತಡಿಯ ಕರುಮಾಡದಿಂದ ಭರತ ಚಕ್ರಿಯ ಅರಮನೆಯ ರಾಣಿಯರು ಸನಿಯದ ಕಡಲನ್ನು ಕಂಡುದು ಹೀಗೆ –

ಅಟ್ಟುವ ತೆರೆಯ ಮುಂದೋಡುವ ತೆರೆಯ ಪೆ
ರ್ಬೆಟ್ಟದಂತೇಳ್ವ ತೆರೆಗಳಾ
ತೊಟ್ಟನೆ ಬಯಲಹ ತೆರೆಗಳನವರು ಕ-
ಣ್ಣಿಟ್ಟು ನೋಡಿದರರ್ತಿವಡುತ.

ಎಡೆಗುತ್ತಿಗಳನಲ್ಲಿಗಲ್ಲಿ ನಿಂದದ್ರಿಯ
ನಿಡುಗಲ್ಲುಗಳನದರೊಳಗೆ
ಎಡೆಯಾಡುತಿಹ ದೋಣಿ ದುಗ್ಗಿ ಕಪ್ಪಲು ದೊಡ್ಡ
ಹಡಗುಗಳಿರವ ನೋಡಿದರು.

ತುಂತುರು ತೆರೆ ನೊರೆ ಸುಳಿ ಘುಳುಘುಳುರವ
ತೂಂತಿಟ್ಟು ಹೊಳೆವ ವಾರಿಧಿಯಾ
(ಭರತೇಶವೈಭವ : ಪೂರ್ವಸಾಗರದರ್ಶನ ಸಂಧಿ : ೯೫; ೯೬; ೯೭)

ಇಲ್ಲಿ ಹಳಗನ್ನಡ ಕವಿಗಳ ಕಡಲಿನ ತಿಮಿ ತಿಮಿಂಗಲವಾಗಲೀ, ಕರಿಮಕರ ಕಮಠಗಳಾಗಲೀ, ‘ನನ್ನಲ್ಲಿ ಹುಟ್ಟಿದ ಚಂದ್ರನಿಂದ ಸಸ್ಯಾಳಿ ಸಂಪತ್ತನ್ನು ಪಡೆಯಿತು, ಲಕ್ಷ್ಮಿಯಿಂದ ಧಾತ್ರಿ ಸೌಭಾಗ್ಯವನ್ನು ಪಡೆಯಿತು, ನನ್ನಿಂದ ಹುಟ್ಟಿದ ಸರ್ವವಸ್ತುವಿನಿಂದಲೇ ವಿಷ್ಣು ಸರ್ವಾರ್ಥವನ್ನು ಪಡೆದನು’ ಎಂದು ಉದ್ಘೋಷಿಸುವ (ರಾಜಶೇಖರ ವಿಲಾಸ : ಷಡಕ್ಷರಿ) ಕಡಲನ್ನು ಕುರಿತ ಪುರಾಣ ಸ್ಮರಣೆಗಳಾಗಲೀ ವಿಲಾಸವಾಗಲೀ, ನುಸುಳಿಬಾರದಿರುವುದು ರತ್ನಾಕರನ ಕಡಲಿನ ವೈಶಿಷ್ಟ್ಯ. ಅಷ್ಟೇ ಅಲ್ಲ; ರತ್ನಾಕರವರ್ಣಿಯಲ್ಲಿ ಕಡಲಿನ ತೀವ್ರಾನುಭವದ ಸಹಜವಾದ ಚಿತ್ರಣವಿದೆ. ಇವನೊಬ್ಬನಾದರೂ ಕಡಲನ್ನು ಕಂಡಿದ್ದಾನಲ್ಲ ಎಂಬ ಹಿಗ್ಗು ಉಂಟಾಗುತ್ತದೆ ನಮ್ಮಲ್ಲಿ.

ಸಂಧ್ಯಾಕಾಲದ ಸೊಗಸನ್ನು ನೋಡಿದರೆ ಕವಿಗಳ ಕಾವ್ಯದಲ್ಲಿ ಹೆಚ್ಚುಕಡಿಮೆ ಅದು ಪ್ರಭಾತಕಾಲದ ವರ್ಣನೆಯಂತೆಯೇ ತೋರುತ್ತದೆ. ಸೂರ್ಯೋದಯದಂತೆ ಸೂರ್ಯಾಸ್ತಮಾನವೂ, ಕಾವ್ಯದಲ್ಲಿ ಕಾಲಸೂಚಕವೂ ಮತ್ತು ಕತೆಯ ಒಂದು ದಿವಸದ ಘಟನೆಯ ಮುಕ್ತಾಯದ ಸೂಚನೆಯೂ ಆಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಕಾವ್ಯಲೋಕದಲ್ಲಿ ಕತ್ತಲಾಗುವುದು ಚಂದ್ರೋದಯಕ್ಕೇ. ಚಂದ್ರೋದಯವಾಗುವುದು ಚಂದ್ರಿಕಾವಿಹಾರದ ಬಣ್ಣನೆಗೆ ಬಾಗಿಲು ತೆರೆದಂತೆ. ಸಂಜೆಯಾಯಿತು ಎಂದರೆ ಜಾರೆಯರು ಸಂಕೇತ ಸ್ಥಾನಕ್ಕೆ ಹೊರಟರು, ದಿನನಾಥನು ತಮ್ಮನ್ನು ತೊರೆದನೆಂದು ಕಮಲಗಳು ಮುಚ್ಚಿದುವು, ಕಣ್ಕಾಣದ ಜಕ್ಕವಕ್ಕಿಗಳು ಇನಿಯರನ್ನು ನೆನೆದು ಅಳಲಿದುವು, ಸೂರ‍್ಯನು ತನ್ನ ಕುದುರೆಗಳ ಮೈತೊಳೆಯಲೆಂದು ಪಡುಗಡಲಿಗೆ ಇಳಿದನು, ‘ಎಡಗೈಯಿಂದ ಸದ್ದಾಗದಂತೆ ನೀವಿಯನ್ನು ಹಿಡಿದು, ಸೋರ್ಮುಡಿಯನ್ನು ಒತ್ತುತ್ತಾ, ನಡೆದರೆ ಸದ್ದಾಗುವುದೆಂದು ಕಾಲಂದುಗೆಗಳನ್ನು ಕಳಚಿ ಕೈಯಲ್ಲಿ ಹಿಡಿದು, ಮುಖಕ್ಕೆ ಸೆರಗನ್ನು ಮರೆಮಾಡಿ ಕಾಲಿನ ಅಲಕ್ತಕದಿಂದ ನೆಲವನ್ನು ಕೆಂಪಾಗಿಸುತ್ತಾ ಅಭಿಸಾರಿಕೆಯರು ಅತ್ತ ಇತ್ತ ಹೊರಟರು’ (ಕುಸುಮಾವಳಿ ೪-೩೪) – ಎಂಬ ವರ್ಣನೆಯನ್ನು ಮಾಡುವುದರಲ್ಲೆ ಕವಿಗಳಿಗೆ ತೃಪ್ತಿ. ಸಂಜೆಯ ನಿಜವಾದ ಸೊಗಸನ್ನು ರುದ್ರಭಟ್ಟನೂ, ಪಂಪನೂ, ಲಕ್ಷ್ಮೀಶನೂ ಕಂಡಿದ್ದಾನೆ. ರುದ್ರಭಟ್ಟನ ಕಣ್ಣಿಗೆ ಒಂದು ಸಂಜೆ ಕಂಡದ್ದು ಹೀಗೆ:

ಇಳೆಯಿಂದಂ ಪೊಂಬಿಸಿಲ್ ಮೈದೆಗೆದು ನಗನಿಕಾಯಾಗ್ರದೊಳ್ ಸಾಂದ್ರಧಾತು
ಸ್ಥಳಹರ್ಮೌಘಾಗ್ರದೊಳ್ ಮಾಣಿಕದ ಶಿಖರಮುದ್ಯಾನಶಾಖಾಗ್ರದೊಳ್ ಕೆಂ
ದಳಿರೆಂಬಾಶಂಕೆಯಂ ಮಾೞ್ಪನಮರುಣತೆಯಂ ಪೆತ್ತು ಚೆಲ್ವಾದುದಸ್ತಾ
ಚಳತುಂಗ ವ್ಯಾಘ್ರಜೃಂಭಾವೃತ ವದನಮೆನಿಪ್ಪಂದದಿಂ ಭಾನುಬಿಂಬಂ
(ಜಗನ್ನಾಥ ವಿಜಯ ೧೬-೯೩)

ಇಳೆಯಿಂದ ಹೊಂಬಿಸಿಲು ಮೈದೆಗೆದಿದೆ. ಆದರೆ ಗಿರಿಪಂಕ್ತಿಗಳ ಧಾತುಶಿಖರಗಳಲ್ಲಿ, ದೊಡ್ಡ ಉಪ್ಪರಿಗೆ ಮನೆಯ ಕಲಶಗಳಲ್ಲಿ ಮಾಣಿಕ್ಯದ ಶಿಖರಗಳಲ್ಲಿ, ಉದ್ಯಾನದ ಎತ್ತರವಾದ ಮರಗಳ ಹರೆಯ ತುದಿಯಲ್ಲಿ ಕೆಂಪು ಚಿಗುರಿನಂತೆಯೂ ಶಂಕೆಯನ್ನುಂಟುಮಾಡುತ್ತಿದೆ. ಮುಳುಗುವ ಸಂಜೆಯ ಸೂರ್ಯ ಅಸ್ತಾಚಲದಲ್ಲಿ ಘರ್ಜಿಸುವ ಹುಲಿಯ ಮುಖಮಂಡಲದಂತೆ ತೋರುತ್ತಿದೆ ಎನ್ನುವಲ್ಲಿ ಕಲ್ಪನೆಯ ನಾವೀನ್ಯತೆ – ಅದು ಸಂಸ್ಕೃತ ಕವಿಯಿಂದ ಕಡ ಪಡೆದುದಲ್ಲದಿದ್ದರೆ – ನಿಜವಾಗಿಯೂ ಮನೋಹರವಾಗಿದೆ. ಸೂಕ್ತಿಸುಧಾರ್ಣವದಲ್ಲಿ ದೊರೆಯುವ ಈ ಒಂದು ಚಿತ್ರವೂ ಗಮನಾರ್ಹವಾಗಿದೆ.

ಕಡುಬಿಸುಪಾಱ ಬೆಳ್ಪಣಮೆಪಾಱ ಕರಂಕರಮೆಲ್ಲಪಕ್ಕದಿಂ
ದುಡುಗೆ ತುಂಗ ನಿಜಾಂಗ ಧವಳಾಕೃತಿ ಕಾಸಿದ ಬಟ್ಟಿನಂತೆ ಕೆಂ
ಪಡರ್ದಿರೆ ತನ್ನ ಮುನ್ನೊಗೆದ ತತ್ತಿಯ ರೂಪನೆ ಪೋಲ್ತು ಜಾಜಿನೊಳ್
ತೊಡರ್ದವೊಲೊಪ್ಪಿದಂ ಗಗನವೃಕ್ಷದ ಪಣ್ಗೆಣೆಯಾಗಿ ಭಾಸ್ಕರಂ
(ಕವಿಯ ಹೆಸರು ಗೊತ್ತಿಲ್ಲ. ಸೂಕ್ತಿಸುಧಾರ್ಣವ, ಪುಟ ೧೩೪ ಪದ್ಯ ೧೦)

ಪಂಪನಂತೂ ತೀರಾ ನವೀನತಮವಾದ ಚಿತ್ರವೊಂದನ್ನು ನೀಡಿದ್ದಾನೆ. ವಿಕ್ರಮಾರ್ಜುನವಿಜಯದಲ್ಲಿ –

…..ಪೊಳೆವ ಸಂಜೆಯ ಕೆಂಪದು ಸಾಣೆಗೊಡ್ಡಿದಿ
ಟ್ಟಿಗೆಯ ರಜಂಬೊಲ್ ಎಂಬಿನೆಗಂ ಅಸ್ತಮಯಕ್ಕಿೞದಂ ದಿವಾಕರಂ
(ಪಂಪಭಾರತ ೧೦-೩೫)

ಎನ್ನುತ್ತಾನೆ, ಹೊಳೆವ ಸಂಜೆಯಕೆಂಪು ಸಾಣೆಗೆ ಒಡ್ಡಿದ ಇಟ್ಟಿಗೆಯ ಧೂಳಿನಂತೆ ಇತ್ತಂತೆ. ಮುಳುಗುವ ಸೂರ‍್ಯ ಸಾಣೆಕಲ್ಲಿನಂತೆ ಗಿರ್ರನೆ ತಿರುಗುತ್ತಿದ್ದಾನೆ. ಸಂಜೆಗೆಂಪು ಸಾಣೆಗೊಡ್ಡಿದ ಇಟ್ಟಿಗೆಯ ರಜದಂತೆ ವ್ಯಾಪ್ತವಾಗಿದೆ. ಇದು ಸಂಪ್ರದಾಯಕ್ಕೆ ಶರಣಾಗದ ಕವಿ ಪ್ರತಿಭೆಯ ಕಿಡಿ. ಆದರೆ ಲಕ್ಷ್ಮೀಶ ಬೈಗುಗೆಂಪನ್ನು

ರಂಜಿಸುವ ಪಶ್ಚಿಮಾಚಲಕಿರಾತಂ ತೊಟ್ಟಗುಂಜಾಭರಣಮೋ,
ಮೇಣ್ ಗಗನಾಂಬುಧಿಯ ತಡಿಯ ಮಂಜುವಿದ್ರುಮಲತೆಯೋ,
ಅಪರ ದಿಗ್ವಧುವಿನಂಗ ಕುಂಕುಮ ಲೇಪನವೋ
ಅಂಜನೇಭದ ಸಿಂಧೂರವೋ, ಶಿವನಮಸ್ತಕದ ಕೆಂಜಡೆಯೋ,
ವಿಷ್ಣು ಪದಪಂಕರುಹದರುಣತೆಯೋ,
ಸಂಜೆವೆಣ್ ಉಟ್ಟ ರಕ್ತಾಂಬರವೊ
ಪೇಳೆನಲ್ಕಾ ಬೈಗು ಕೆಂಪೆಸೆದುದು.       (ಜೈಮಿನಿ ಭಾರತ ೮-೪೬)

ಎಂಬ ವರ್ಣನಾವಿಲಾಸ, ವಾಸ್ತವ ಹಾಗೂ ಪುರಾಣ ಪ್ರತೀಕಗಳ ಮೂಲಕ, ವಿಸ್ಮಯ ಮತ್ತು ಭವ್ಯತೆಯ ಸ್ಪರ್ಶವನ್ನು ತಂದುಕೊಡುತ್ತದೆ. ಲಕ್ಷ್ಮೀಶನು ಕವಿಸಮಯ ನಿರ್ಮಿತವಾದ ಸಾಮಗ್ರಿಗಳನ್ನು ತನ್ನ ಕೃತಿಯಲ್ಲಿ ಬಳಸಿದರೂ ಅವುಗಳಿಗೆ ತನ್ನ ಅನುಭವದ ವಿದ್ಯುತ್ತನ್ನು ಹರಿಸಿ ದೀಪ್ತಗೊಳಿಸುತ್ತಾನೆ. ಸಂಜೆಯ ವರ್ಣನೆಯನ್ನು ಕುರಿತ ಇದೇ ರೀತಿಯ ಮತ್ತೊಂದು ಪದ್ಯದಿಂದ ಈ ಅಂಶ ಇನ್ನೂ ಸ್ಪಷ್ಟವಾಗುತ್ತದೆ:

ಓಡಿದುವು ಪಕ್ಷಿಗಳ್ ಗೂಡಿಂಗೆ, ದೆಸೆದೆಸೆಗಳಂ ನೋಡಿದುವು ಘೂಕಂಗಳ್,
ಅಳಿಗಳಂ ಸೆರೆಗೈದು ಹೂಡಿದವು ಬಾಗಿಲಂ ಕಮಲಂಗಳ್,
ಅರಲ್ದುವಿಂದೀವರಂಗಳ್, ನಭದೊಳು ಮೂಡಿದುವು ತಾರೆಗಳ್,
ಚಕ್ರವಾಕಂಗಳಂ ಕಾಡಿದುವು ವಿರಹ ತಾಪಂಗಳ್,
ಇಳೆಯೆಲ್ಲಮಂ ತೀಡಿದುವು ಕತ್ತಲೆಗಳ್,
ಅಲ್ಲಲ್ಲಿ ಮನೆಮನೆಯ ಸೊಡರ್ ಕಣ್ಗೆಸೆದುವು.       (ಜೈಮಿನಿ ಭಾರತ ೮-೪೮)

“ಪಕ್ಕಿಗಳು ಗೂಡಿಗೆ ಓಡುವುದರಿಂದ ಮೊದಲು ಸಂಜೆ ಮುಗಿದು ರಾತ್ರಿ ಹಬ್ಬುವವರೆಗೆ ಸೃಷ್ಟಿಯ ಮುಖದಲ್ಲಿ ಕಾಣುವ ಭಾವಗಳನ್ನು ಸಮುಚ್ಚಯಮಾಡಿ ಕವಿ ಸುಂದರವಾದ ಚಿತ್ರವನ್ನು ರಚಿಸಿದ್ದಾನೆ. ಕವಿಸಮಯದ ಕಾರ್ಯಗಳಾದರೂ ಕಮಲಗಳು ಬಾಗಿಲನ್ನು ಮುಚ್ಚಿದ್ದೂ, ಇಂದೀವರಗಳು ಅರಳಿದ್ದೂ ಈ ಕಲೆಯಲ್ಲಿ ವಾಸ್ತವ ವಿಷಯಗಳಾಗುತ್ತವೆ. ಪಕ್ಷಿಗಳೊಡನೆ, ನಕ್ಷತ್ರಗಳೊಡನೆ ಈ ಚಿತ್ರದಲ್ಲಿ ವಿರಹತಾಪಗಳಿಗೆ ಕೂಡ ದೇಹಗಳೊದಗಿವೆ. ಕತ್ತಲೆ ಇಲ್ಲಿ ಒಂದಲ್ಲ; ಅನೇಕ ಆಗಿವೆ. ಕೊನೆಗೆ ‘ಮನೆ ಮನೆಯ ಸೊಡರ್ ಕಣ್ಗೆಸೆದುವು.’ ಸೋತಿದ್ದ ಜೀವ ಕೊಂಚ ಕೊಂಚವಾಗಿ ಮರಳಿಬಂದಂತೆ ಕತ್ತಲು ಕವಿದ ಊರು ಒಂದೊಂದಾಗಿ ಹಚ್ಚುವ ಬೆಳಕುಗಳಿಂದ ಸನ್ನಿಯಿಂದ ಎಚ್ಚರಗೊಳ್ಳುವುದನ್ನು ನೋಡುವವರಿಗೆ ಸಂಜೆಯ ವರ್ಣನೆಯಲ್ಲಿ ಇದು ಎಷ್ಟು ಮುಖ್ಯವಾದ ವ್ಯಾಪಾರವೆಂದು ತಿಳಿದಿರುತ್ತದೆ. ಉದಯದ ಸೊಗಸನ್ನೂ ಸಂಜೆಯ ಚಂದವನ್ನೂ ನೋಡಿ ಈ ಕವಿಯ ಕಣ್ಣೂ ಮನಸ್ಸೂ ಅರಳಿದ್ದುವು.”[4] ಹರಿಹರನು ಸಂಜೆ ಮನೆಮನೆಯಲ್ಲಿ ಒಂದೊಂದಾಗಿ ಹತ್ತಿದ ದೀಪಗಳನ್ನು ಕಂಡು –

‘ಪಲವುಂ ದೀವಿಗೆಗಳ್
ಕಳ್ತಲೆ ಪೂತಂತೊಪ್ಪುತಿರ್ದುವಾ ಮನೆಮನೆಯೊಳ್
(ಗಿರಿಜಾ ಕಲ್ಯಾಣ ೪-೭೯)

ಕತ್ತಲೆಯೇ ಹೂಬಿಟ್ಟಂತೆ ತೋರಿತು ಎನ್ನುತ್ತಾನೆ. ಆದರೆ ಅದರ ಮುಂದಿನ ಪದ್ಯದಲ್ಲೇ ಈ ಸುಂದರಕಲ್ಪನೆಯನ್ನು, ನಕ್ಷತ್ರಗಳನ್ನೂ ಬಣ್ಣಿಸಲು ಬಳಸಿ “ಗಗನಂ ಪೂತುದೋ’ ಎನ್ನುತ್ತಾನೆ. ಹೀಗೆ ನಮ್ಮ ಹಿಂದಿನ ಕವಿಗಳು ತಮಗೆ ಏನಾದರೊಂದು ವಿಶಿಷ್ಟ ಭಾವನೆ ಸ್ಫುರಿಸಿದರೆ ಅದು ಆ ಸನ್ನಿವೇಶದ ಅನುಭವದಿಂದ ತಾನಾಗಿಯೇ ಸಹಜವಾಗಿ ಮೂಡಿ ಸುಂದರವಾಗಿ ತೋರಿದರೆ ಅದನ್ನೇ ಮತ್ತೆ ಬೇರೆಬೇರೆಯ ಸಂದರ್ಭಗಳಿಗೆ – ಅದು ಅಲ್ಲಿಗೆ ಒಪ್ಪಲಿ ಬಿಡಲಿ, ಬಳಸಿ ಬಳಸಿ ಆ ಅನುಭವದ ಸೊಗಸನ್ನು ಕಂದಿಸುತ್ತಾರೆ. ಮತ್ತೆ ಇನ್ನೂ ಹಲವಾರು ಕವಿಗಳು ತಮಗೆ ಪೂರ್ವ ಕವಿದತ್ತವಾದ ಇಂತಹ ಭಾವವನ್ನು ಬಳಸಿ ಬಳಸಿ ಅದನ್ನು ಕವಿ ಸಮಯದ ಸಾಮಗ್ರಿಯನ್ನಾಗಿ ಮಾಡಿಬಿಡುತ್ತಾರೆ. ಹೀಗಾಗಿ ಎಷ್ಟೋ ಸುಂದರವಾದ ಅನುಭವದ ಪ್ರತಿಮೆಗಳು ಅತಿ ಬಳಕೆಯಿಂದ ಮತ್ತು ಅನುಚಿತ ಬಳಕೆಯಿಂದ ಬೇಸರದ ವಸ್ತುಗಳಾಗಿವೆ. ಆದರೆ ಅವು ನಿಜವಾದ ಅನುಭವವನ್ನು ಪಡೆದ ಕವಿಪ್ರತಿಭೆಯ ಮೂಸೆಗೆ ಸಿಕ್ಕಿ ಮತ್ತೆ ಮತ್ತೆ ಉಜ್ವಲವಾಗುವುದೂ ಉಂಟು.

ಇರುಳಿನ ಗಾಢಾಂಧಕಾರವೂ ಭವ್ಯವಾದುದು. ಹಗಲಿನ ಚಿರಪರಿಚಿತವಾದ ನೋಟಗಳನ್ನೆಲ್ಲಾ ನುಂಗಿ ನೊಣೆದು ನಿಲ್ಲುವ ಭೀಮತಮದ ಅನುಭವವನ್ನು ಪಂಪನ ಕಣ್ಣು ಕಂಡಿದೆ-

ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮೇಣ್ ಪೂೞ್ದನೋ,
ಕಾಳಮೇಘ ಸಮೂಹಂ ದೆಸೆಯೆಲ್ಲಮಂ ಮುಸುಕಿತೋ,
ಗಂಧೇಭ ಚರ‍್ಮಂಗಳಂ ಪಸರಂಗೆಯ್ದನೋ ಶಂಭು,
ಎಂಬ ಬಗೆಯಿಂ ತಳ್ಪೊಯ್ದು ಕಱುರಿ ಸೂಚಿಸಲ್
ಆರ್ಗಂ ವಶಮಾಗದಂತು ಕವಿದತ್ತು ಉದ್ದಾಮ ಭೀಮಂ ತಮಂ
(ಪಂಪ ಭಾರತ ೪-೪೯)

ನಮ್ಮ ಪುರಾಣ ಪ್ರಪಂಚ ಅದ್ಭುತವಾದ ಪ್ರತಿಮೆಗಳನ್ನು ಸೃಜಿಸಿದೆ. ಸಮರ್ಥನಾದ ಕವಿ ಅವುಗಳನ್ನು ತನ್ನ ಅನುಭವದ ವರ್ಣನೆಗೆ ಬಳಸಿದಾಗ ಎಷ್ಟು ಪರಿಣಾಮಕಾರಿಯಾಗಬಲ್ಲದೆಂಬುದಕ್ಕೆ ಪಂಪನ ಈ ‘ಉದ್ದಾಮಭೀಮತಮ’ದ ವರ್ಣನೆಯೇ ಜೀವಂತ ಸಾಕ್ಷಿ. ಕವಿಯ ಈ ವರ್ಣನೆ ನಮ್ಮಲ್ಲಿ ಅಂತರ್ಗತವಾಗಿ ಬಂದಿರುವ ಪೌರಾಣಿಕ ಕಥಾ ಸಂಸ್ಕಾರವನ್ನು ಪ್ರಚೋದಿಸಿ ನಾವು ಕವಿಯ ಅನುಭವದ ಸೊಗಸನ್ನು ಪಡೆಯಲು ಅನುವು ಮಾಡಿದೆ.


[1] ಕರ್ಣಾಟಕ ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ : ಶ್ರೀ ಡಿ.ಎಲ್. ನರಸಿಂಹಾಚಾರ್. (ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ : ಅಕ್ಟೋಬರ್ ೧೯೨೮) – ಇದೊಂದು ಸವಿಸ್ತಾರವಾದ ಸ್ವಾರಸ್ಯವಾದ ಲೇಖನ. ಈ ವಿಷಯವನ್ನು ಕುರಿತು ಬಹುಶಃ ಇದೇ ಮೊದಲ ಬರಹವಿರಬಹುದು.

[2] ಹರಿಹರನ ರಗಳೆಗಳು : (ಭಾಗ-೧) ಹಳಕಟ್ಟಿ : ಪು. ೩

[3] ‘ತಪೋನಂದನ’. ಕುವೆಂಪು : ಪು. ೭೫ ‘ಸರೋವರದ ಸಿರಿಗನ್ನಡಿಯಲ್ಲಿ’ ಎಂಬ ಲೇಖನವನ್ನು ನೋಡಿ.

[4] ಮಾಸ್ತಿ ವೆಂಕಟೇಶ ಐಯ್ಯಂಗಾರ್, ವಿಮರ್ಶೆ, ಭಾಗ : IV ಪುಟ ೯.