ಎಲ್ಲಿಗೆ, ಇನ್ನೆಲ್ಲಿಗೆ
ಇಷ್ಟು ದಿವಸ ನಡೆದು ನಾವು
ಬಂದು ನಿಂದುದೆಲ್ಲಿಗೆ ?

ಗತವೈಭವದಿತಿಹಾಸದ
ನೆನಪ ತಳ್ಳಿ ಮೂಲೆಗೆ
ವಾಸ್ತವದಲಿ ಬೇರೂರುತ
ನಾವು ಬೆಳೆವುದೆಂದಿಗೆ ?

ಸಾಲು ಸಾಲು ಹಸಿದ ಹೊಟ್ಟೆ
ನಿರಕ್ಷರದ ನಾಲಗೆ,
ಸಮೃದ್ಧಿಯ ಹೆಗಲ ಮೇಲೆ
ಭಿಕ್ಷಾನ್ನದ ಜೋಳಿಗೆ,
ಇದೇ ನಮ್ಮ ಪ್ರಗತಿಯೆಂದು
ಭ್ರಮಿಸಬಹುದೆ ತಣ್ಣಗೆ ?

ಮುಗ್ಧರೆದೆಯ ಗದ್ದೆಗಳಲಿ
ಮತ-ಮೌಢ್ಯದ ಬೀಜವ,
ಸದಾ ಬಿತ್ತಿ ಬೆಳೆಯ ತೆಗೆವ
ಚಾಣಾಕ್ಷರ ವೈಭವ,
ಇವರ ನಡುವೆ ಪಠಿಸಬಹುದೆ
ಸರ್ವೋದಯ ಮಂತ್ರವ ?

ಜನಗಣಮನ ದೇಗುಲದಲಿ
ಮಾನವತೆಯ ಮೂರ್ತಿಗೆ
ಅಗ್ರಪೂಜೆ ಸಲ್ಲದಿರಲು
ಅರ್ಥವುಂಟೆ ಪ್ರಗತಿಗೆ ?