ನೋಡೀ ನುಗ್ಗೆ : ನಿಲ್ಲಲೊಂದಿಷ್ಟು ಲಂಗೋಟಿಯಗಲದ ಜಾಗ. ಆಕಾರ ತಳೆದ ಆಭೋಗ. ಉಳಿದದ್ದೆಲ್ಲ ಪರದೇಶ, ಗೊಡ್ಡುಗಾಳಿಯ ಕಾಮಕೇಳಿ ಫಲ. – ಗೋಪಾಲಕೃಷ್ಣ ಅಡಿಗನಮ್ಮ ಬೌದ್ಧಿಕ ವ್ಯಾಪರಗಳೆಲ್ಲ ನಿಘಂಟಿನಿಂದ ಕಲಿತ ಕೃತಕ ಇಂಗ್ಲಿಷಿನ ಮುಖಾಂತರ; ಗೃಹಕೃತ್ಯದ ನಿತ್ಯವಿಧಿ, ಚಾಡಿ, ತರಳೆ, ಆಪ್ತ ಮಾತುಕತೆ, ಹರಟೆ ಸೊರಗಿದ ಕನ್ನಡದ ಮೂಲಕ – ನಮ್ಮ ಪರಿಸ್ಥಿತಿ ಇದು. ಇದರ ಪರಿಣಾಮ ದ್ವಿಭಾಷಾ ಸಂಪತ್ತಲ್ಲ. ಭಾಷಾದಾರಿದ್ರ್ಯ ; ಬುದ್ಧಿಲೋಕ ಮತ್ತು ಭಾವಲೋಕಗಳ ನಡುವೆ ಗೋಡೆಯೊಂದನ್ನು ಕಟ್ಟಿಕೊಂಡು ಒಂದರಿಂದ ಇನ್ನೊಂದನ್ನು ಪುಷ್ಟಿಪಡಿಸಿಕೊಳ್ಳದೆ ಬದುಕುವ ಛಿದ್ರ ವ್ಯಕ್ತಿತ್ವ. ಇಂಗ್ಲಿಷ್ ಗೊತ್ತಿರದ ಹಳೆಯಕಾಲದ ವಿದ್ವಾಂಸರನ್ನೊ, ಬೇಡ, ಹಳ್ಳಿಯ ಸಾಮಾನ್ಯ ಜನರನ್ನೊ ಮಾತನಾಡಿಸಿ ನೋಡಿ: ನಮ್ಮ ಮೂಳೆಯಿಲ್ಲದ ಕನ್ನಡ, ರಕ್ತವಿಲ್ಲದ ಇಂಗ್ಲಿಷಿನ ಬಗ್ಗೆ ನಾಚಿಕೆಯಾಗುತ್ತದೆ. ಈ ದೃಷ್ಟಿಯಿಂದ ನೋಡಿದಲ್ಲಿ ಇದು ನಮ್ಮದು ಎನ್ನಿಸುವ ಸಂಸ್ಕೃತಿಯನ್ನು ಈತನಕ ಉಳಿಸಿಕೊಂಡು ಬಂದವರು ಹೆಬ್ಬೆಟ್ಟಿನ ಸಹಿ ಹಾಕುವ ನಮ್ಮ ಹಳ್ಳಿಯ ಜನ. ಕನ್ನಡನಾಡಿನಲ್ಲಿ ಈವರೆಗೆ ಉಳಿಸಿಕೊಂಡು ಬಂದವರು ಹೆಬ್ಬೆಟ್ಟಿನ ಸಹಿ ಹಾಕುವ ನಮ್ಮ ಹಳ್ಳಿಯ ಜನ. ಕನ್ನಡನಾಡಿನಲ್ಲಿ ಈವರೆಗೆ ಅರ್ಥಪೂರ್ಣವಾದ ಕೆಲಸವನ್ನು ಮಾಡಿದವರೆಂದರೆ – ಭಾವನಾತ್ಮಕವಾದದ್ದಾಗಲಿ ವೈಚಾರಿಕವಾದದ್ದಾಗಲಿ – ಕನ್ನಡದಲ್ಲಿ ಬರೆದವರು. ನಮ್ಮ ಶ್ರೇಷ್ಠ ಕೃತಿಗಳ ಹಿಂದಂತೂ – ಉದಾಹರಣೆಗೆ ಬೇಂದ್ರೆ, ಅಡಿಗರ ಕಾವ್ಯ, ಕುವೆಂಪುರವರ ಕಾನೂರು ಹೆಗ್ಗಡತಿ, ಕಾರಂತರ ಕಾದಂಬರಿಗಳು – ಈ ಹೆಬ್ಬೆಟ್ಟಿನಲ್ಲಿ ಸಹಿಹಾಕುವ ಜನರ ಮಾತಿನ ಕಸುವು, ಮಿಂಚು ಹೊಳೆಯುತ್ತದೆ. ಬಿ.ಬಿ.ಸಿಯಲ್ಲಿ ಚಾರ್ಲ್ಸ್ ಪಾರ್ಕರ್ ಎಂಬುವವರೊಬ್ಬರಿದ್ದಾರೆ. ಇಂಗ್ಲೆಂಡಿನ ಜಾನಪದ ಗೀತೆಗಳ ಬಗ್ಗೆ ಹೊಸದೊಂದು ಆಸಕ್ತಿಯನ್ನು ಜನರಲ್ಲಿ ಎಬ್ಬಿಸಿದವರು ಇವರು. ಈ ಜಾನಪದ ಸಂಪತ್ತಿನ ಸಂಪರ್ಕದಿಂದ ಉಚ್ಚ ನಾಗರಿಕತೆಗೆ ರಕ್ತದಾನವಾಗುತ್ತದೆ. ಶೇಕ್ಸ್‌ಪಿಯರ್ ಬರ್ನ್ಸ್‌ರಂತೆ ಮತ್ತೊಮ್ಮೆ ಬರೆಯುವುದು ಸಾಧ್ಯವಾಗುತ್ತದೆ ಎಂದು ನಂಬಿ ಕೆಲಸಮಾಡುತ್ತಿರುವವರು ಇವರು. ಕಾರ್ಮಿಕರು ಸಂಘವೊಂದು ಶೇಕ್ಸ್‌ಪಿಯರನ ದಿನವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಇವರನ್ನು ನೋಡಿದೆ; ಬೇಂದ್ರೆಯವರು ಹೇಗೆ ಜಾನಪದ ಸಾಹಿತ್ಯದಿಂದ ಪ್ರಭಾವಿತರಾಗಿ ಸಾಮಾನ್ಯ ಸುಖದುಃಖದಿಂದ ಹಿಡಿದು ವಿಶೇಷವಾದ ವೈಯಕ್ತಿಕ ಅನುಭವದ ತನಕ ವಿವಿಧ ಹಂತದ ವಿಷಯಗಳಿಗೆ ಜಾನಪದ ರೀತಿಯನ್ನೇ ಉಪಯೋಗಿಸಿದ್ದಾರೆಂಬುದನ್ನು ಹೇಳಿದೆ. ಇದೊಂದು ಅದ್ಭುತವಾದ ಸಂಗತಿಯೆಂದರು ಚಾರ್ಲ್ಸ್ ಪಾರ್ಕರ್. ಇಂಗ್ಲಿಷ್ ಸಾಹಿತ್ಯಕ್ಕೂ ಈ ರೀತಿಯ ರಕ್ತದಾನ ಜಾನಪದ ಸಾಹಿತ್ಯದಿಂದ ಆಗಬೇಕು ಎಂದರು. ಇದು ಇನ್ನೂ ಸಾಧ್ಯವಾದ ಭಾರತದ ಬಗ್ಗೆ ಆಶ್ಚರ್ಯಪಟ್ಟರು. ಅವರೊಡನೆ ಮಾತನಾಡುತ್ತಿದ್ದಂತೆ ನನಗೆ ಮನದಟ್ಟಾದ ವಿಷಯ: ಇಷ್ಟೊಂದು ಬೆಳೆದ ನಾಗರಿಕ ಇಂಗ್ಲಿಷ್ ಭಾಷೆಗೇನೇ ತನ್ನ ಜಾನಪದ ಸತ್ವದ ರಕ್ತದಾನ ಪದೇಪದೇ ಅವಶ್ಯವಾದರೆ ಇಂಡಿಯಾದ ನೆಲದಲ್ಲಿ ಇಂಗ್ಲಿಷ್ ಸಾಹಿತ್ಯ ಬೆಳೆಯುವುದು ಸಾಧ್ಯವೆ? ನಿಘಂಟಿನಿಂದ ಕಲಿತ ಇಂಗ್ಲಿಷ್‌ನಲ್ಲಿ ನಾವು ಸಾಹಿತ್ಯ ಸೃಷ್ಟಿ ಮಾಡುವುದು ಸಾಧ್ಯವೆ? ಸಾಹಿತ್ಯದ ದೃಷ್ಟಿಯಿಂದ ಅವರಿಗೆ ಅನ್ನಿಸಿದ್ದು ಸರಿ. ಆದರೆ ನಮ್ಮ ಮುಂದಿರುವ ಪ್ರಶ್ನೆ: ಜಾನಪದ ಸಂಪತ್ತಿನಿಂದ ಭಾಷೆಯ ಕಸುವನ್ನು ಪಡೆದೆವು: ಸಾಹಿತ್ಯಕ್ಕೊಂದು ಭಾಷೆಯನ್ನು ಸೃಷ್ಟಿಸಿಕೊಂಡೆವು. ಆದರೆ ಜಾನಪದದಿಂದ ನಾವು ಪಡೆದುದಷ್ಟು? ಕೊಟ್ಟದ್ದೆಷ್ಟು? ಇಂಗ್ಲಿಷ್ ಭಾಷೆಯ ಮೂಲಕ ಹಿಗ್ಗಿದ ನಮ್ಮ ವಿಚಾರಗಳನ್ನು ಜಾನಪದ ಜೀವನಕ್ಕೆ ನಾವು ಒಯ್ಯುತ್ತಿಲ್ಲ; ಅದಕ್ಕೆ ತಕ್ಕ ಭಾಷೆ ನಮ್ಮಲಿಲ್ಲ. ಅಂದರೆ ನಮ್ಮ ಬುದ್ಧಿಜೀವಿಗಳು ಬಂಜೆಯರು. ನಾವು ಪರಭಾಷೆಗಳಿಂದ ಪಡೆದದ್ದನ್ನು ನಮ್ಮ ಜನಕ್ಕೆ ಒಯ್ದದ್ದೇ ಆದರೆ ಜಾನಪದ ಜೀವನದಲ್ಲಿ ಅದು ಅನುಭವವಾಗಿ ಹೊಸ ರೂಪ ತಾಳಿ ತಿರುಗಿ ನಮಗೆ ಸಿಗುವುದು ಸಾಧ್ಯ. ಆದರೆ ನಮ್ಮ ಜೀವನ, ನಮ್ಮ ವಿಚಾರ, ನಮ್ಮ ಭಾಷೆಗಳ ನಡುವೆ ಯಾವ ಅನ್ಯೋನ್ಯತೆಯೂ ಇಲ್ಲ. ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ಸಂಪರ್ಕದಿಂದ ಪಡೆದದ್ದೆಷ್ಟನ್ನು ನಮ್ಮ ಜನರ ಜೀವನದ ವಸ್ತುಗಳನ್ನಾಗಿ ಮಾಡಿದ್ದೇವೆ ಎನ್ನುವುದರ ಜೊತೆಗೆ ಕುಮಾರವ್ಯಾಸ, ಪಂಪ, ಬಸವಣ್ಣ ಇತ್ಯಾದಿ ಜನರು ಸಂಸ್ಕೃತದಲ್ಲಿದ್ದ ವಿಚಾರಗಳನ್ನು, ಕಾವ್ಯವನ್ನು ತಮ್ಮ ಜನರ ನಿತ್ಯ ಜೀವನದ ಸೊತ್ತಾಗಿ ಹೇಗೆ ಮಾಡಿದರು ಎಂಬುದನ್ನು ಹೋಲಿಸಿ ನೋಡಿದರೆ ನಾವು ತಲೆ ತಗ್ಗಿಸಬೇಕಾಗುತ್ತದೆ. ವೇದಾಧಿಕಾರವೆಲ್ಲ ಬರಿ ಬ್ರಾಹ್ಮಣನದ್ದಾದರೂ ನಮ್ಮ ಭಾಷೆಗಳು ಈ ಜಾತಿಭೇದದ ವಿನಾಶಕಾರಿ ಪ್ರವೃತ್ತಿಗಳ ವಿರುದ್ಧ ಕೆಲಸಮಾಡಿ ಒಂದು ಸಮಗ್ರ ಸಂಸ್ಕೃತಿಯನ್ನು ಸೃಷ್ಟಿಸಲು ಕಾರಣವಾದವು. ಯಾವುದೋ ಒಂದು ಗಾದೆಮಾತಿನಲ್ಲಿ ಉಪನಿಷತ್ತಿನ ತತ್ವ, ಪುರಾಣ ಕತೆಯೊಂದರಲ್ಲಿ ಗಾಢವಾದ ತತ್ವವಿಚಾರ – ಹೀಗೆ ಜನಪದದ ಸೊತ್ತಾದುವು. ನಾವು ಇಂಗ್ಲಿಷ್‌ನಲ್ಲಿ ಓದಿದ ರಾಜಕೀಯ ಶಾಸ್ತ್ರ, ಸಮಾಜ ಶಾಸ್ತ್ರ, ಮನಃಶಾಸ್ತ್ರ ಎಂದೆಂದಿಗೂ ಹೀಗೆ ಜನರ ಸ್ವತ್ತಾಗಿ, ಭಾಷೆಯ ಸಂಪತ್ತಾಗಿ ಬುದ್ಧಿಜೀವಿಗೆ ಹಿಂದಕ್ಕೆ ಸಿಗುವುದು ಅಸಾಧ್ಯವಾದಂತಹ ಸ್ಥಿತಿಯಲ್ಲಿ ನಾವಿದ್ದೇವೆ. ನನ್ನ ಭಾಷೆಯ ಮಿತಿ ನನ್ನ ಜ್ಞಾನದ ಮಿತಿ ಎಂದು ವಿಟ್‌ಗನ್‌ಸ್ಪೇನ್ ಅನ್ನುತ್ತಾನೆ. ಕನ್ನಡಿನ್ನೂ ಪುಷ್ಟವಾಗಿ ಉಳಿದಿರುವ ಹಳ್ಳಿ ಜನರ ದೃಷ್ಟಿಯಿಂದ ಇದು ಅಕ್ಷರಶಃ ನಿಜ. ಆದರೆ ವಿದ್ಯಾವಂತರಾದ ನಮ್ಮ ಜ್ಞಾನದ ಮಿತಿ ಬೇರೊಂದು ಭಾಷೆಯ ಮೂಲಕ ಹಿಗ್ಗುತ್ತದೆ. ಇದರ ಪರಿಣಾಮಃ ನಾನು ಹಿಂದೆ ಹೇಳಿದಂತೆ ನಮ್ಮ ಅನುಭವದ ಲೋಕದಲ್ಲಿ ಎರಡು ಕೋಣೆಗಳಾಗಿವೆ. ಈ ಎರಡು ಕೋಣೆಗಳ ನಡುವೆ ದೊಡ್ಡದೊಂದು ಕಂದಕವೇ ಇದೆ. ನಾವು ಇಂಗ್ಲಿಷಿನಲ್ಲಿ ಓದಿದ ಸಮಾಜಶಾಸ್ತ್ರ, ಸಾಹಿತ್ಯ, ವಿಜ್ಞಾನ, ಜೀವಶಾಸ್ತ್ರ ನಮ್ಮ ನಿತ್ಯ ಜೀವನದ ನಾಣ್ಯಗಳಾಗದೆ, ಬುದ್ಧಿಯ ಲೋಕದಲ್ಲಿ ನೀರು ನೆಲೆಯಿಲ್ಲದೆ ಅಲೆಯುವ ಭೂತಗಳಾಗಿದ್ದಾವೆ. ಭಾರತವನ್ನು ಬಿಟ್ಟರೆ ಬೇರೆ ದೇಶಗಳಲ್ಲಿ ಅವರ ಸಮಸ್ತ ವ್ಯಾಪಾರಗಳೂ – ಪ್ರಣಯ, ಊಟ, ಜಗಳ, ಚಾಡಿ ಛಿದ್ರದಿಂದ ಹಿಡಿದು ವಿಜ್ಞಾನ ಸಾಹಿತ್ಯದವರೆಗೆ – ಒಂದೇ ಭಾಷೆಯ ಮೂಲಕ ನಡೆಯುವುದರಿಂದ ಇಡಿಯ ಜನಾಂಗದ ಒಟ್ಟು ಸೃಷ್ಟಿ ಒಂದು ಜೀವಂತ ಭಾಷೆಯಾಗಿ ಬೆಳೆಯುತ್ತ ಹೋಗುತ್ತದೆ. ಇಡಿಯ ಜನಾಂಗದ ಒಟ್ಟು ಸೃಷ್ಟಿ ಒಂದು ಜೀವಂತ ಭಾಷೆಯಾಗಿ ಬೆಳೆಯುತ್ತ ಹೋಗುತ್ತದೆ. ಇಡಿಯ ಜನಾಂಗದ ಒಟ್ಟು ಪ್ರಜ್ಞೆಗೆ ಆಕಾರಕೊಡುವ ಕವಿಗೆ ಬುದ್ಧಿ ಮೂಲ ಮತ್ತು ಭಾವಮೂಲವಾದ ಪರಸ್ಪರ ವಿರೋಧವೆನ್ನಿಸುವ ವ್ಯಾಪಾರಗಳೂ ಒಂದೇ ಭಾಷೆಯ ಮೂಲಕ ದೊರೆಯುತ್ತವೆ. ಪಬ್‌ನಲ್ಲಿ ಕೇಳಿಸುವ ಮಾತು, ಸೂಪರ್ ಮಾರ್ಕೆಟ್ಟಿನಲ್ಲಿ ಆಡುವ ಮಾತು, ಸಮಾಜಶಾಸ್ತ್ರವನ್ನು ಪಾಠ ಹೇಳುವಾಗ ಉಪಯೋಗಿಸುವ ಭಾಷೆ ತೀವ್ರತೆಯಲ್ಲಿ, ಪದವಿನ್ಯಾಸದಲ್ಲಿ, ಅರ್ಥವಂತಿಕೆಯಲ್ಲಿ ವ್ಯತ್ಯಾಸವಾದರೂ ಬೇರೆ ಬೇರೆ ಲೋಕಗಳಿಗೆ ಸಂಬಂಧಿಸಿದವು ಎನ್ನಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಅಪಾಯವಿಲ್ಲದಿಲ್ಲ; ಸಾಮಾನ್ಯ ಜೀವನ ಮತ್ತು ವಿಜ್ಞಾನೇತ್ಯಾದಿ ವಿಚಾರದ ಲೋಕಗಳು ಒಂದೇ ಭಾಷೆಯಲ್ಲಿ ನಡೆದರೂ ಬೇರೆ ಬೇರೆ ಭಾಷೆಗಳಂತೆ ಕೇಳಿಸುವ ಸಾಧ್ಯತೆ ಈ ನಾಗರಿಕತೆಯಲ್ಲೂ ಇದೆ. ಆದರೆ ಏನೇ ಅಪಾಯವಿರಲಿ – ಎಲಿಯಟ್, ಯೇಟ್ಸ್, ಲಾರೆನ್ಸ್‌ನಂತಹ ಜನರು ಇದರ ವಿರುದ್ಧ ಹೋರಾಡುವುದು ಶಕ್ಯವಾಗಿರುವುದು ಮನುಷ್ಯನ ವಿವಿಧ ವ್ಯಾಪಾರಗಳ ವಾಹಕವಾಗಿ ಮತ್ತು ಕೇಂದ್ರವಾಗಿ ಒಂದು ಭಾಷೆಯಿರುವುದರಿಂದ, ಸಮಾಜಶಾಸ್ತ್ರದ ಜೊತೆ, ರಾಜಕೀಯ ಶಾಸ್ತ್ರದ ಜೊತೆ, ಮನಃಶಾಸ್ತ್ರದ ಜೊತೆ ಇಂಗ್ಲಿಷ್ ಸಾಹಿತ್ಯ ಇವತ್ತಿಗೂ ಕೊಡುಕೊಳ್ಳುವ ಜೀವಂತ ಸಂಬಂಧವನ್ನಿಟ್ಟುಕೊಂಡು ಬಂದಿದೆ. ಸಾಹಿತಿ ಬರಿಯ ಭಾವೋದ್ರೇಕದ ಗೀತಗಳನ್ನು ಹಾಡುವ ಕನಸಿಗನಾಗದೆ, ಶಾಸ್ತ್ರಿ ಶುಷ್ಕಪಂಡಿತನಾಗದೆ ಎಲ್ಲರೂ ಕೂಡಿ ಒಂದು ಸಂಸ್ಕೃತಿಯನ್ನು, ಒಂದು ಚಿತ್ರವನ್ನು ಬರೆಯುತ್ತಿದ್ದಾರೆ ಎನಿಸುತ್ತದೆ. ವಾಗತೀತವಾದ ಬರಿಯ ಚಿನ್ಹೆ ಫಾರ‍್ಮುಲಾಗಳಲ್ಲಿ ಬೆಳೆಯುವ ವಿಜ್ಞಾನ ಜಗತ್ತಿನ ಮೇಲೆ ತನ್ನ ವಜ್ರಮುಷ್ಟಿಯನ್ನು ಬಿಗಿಮಾಡುತ್ತಿದ್ದಂತೆ ನಮ್ಮ ಮಾನವ್ಯಕ್ಕೆ ದ್ಯೋತಕವಾದ ಭಾಷೆಯನ್ನು, ಅಂದರೆ ಈ ಭಾಷೆಯ ಮೂಲಕ ಇಡೀ ಸಂಸ್ಕೃತಿಯನ್ನು ನಾವು ಇನ್ನಷ್ಟು ಎಚ್ಚರದಿಂದ ಕಣ್ಣಿನಲ್ಲಿ ಎಣ್ಣೆಯಿಟ್ಟು ರಕ್ಷಿಸಬೇಕಾಗುತ್ತದೆ. ಆ ರಕ್ಷಣೆ ಪಾಶ್ಚಿಮಾತ್ಯರಲ್ಲಿ ಸತತ ನಡೆದಿದೆ. ಈ ದೃಷ್ಟಿಯಿಂದ ಇವರು ನಮಗಿಂತ ಹೆಚ್ಚು ಪಾರಮಾರ್ಥಿಗಳು; ಇಂಗ್ಲಿಷನ್ನು ಬಿಟ್ಟರೆ ಯಂತ್ರನಾಗರಿಕತೆ ಬೆಳೆಯದೆ ಹೋಗಿ ಕಾಡು ಸೇರಿಬಿಡುವೆವೆಂದು ಹೆದರುವ ನಾವು ನಿಜವಾಗಿ ಚಾರ್ವಕ ನಾಚುವಂತಹ ಪದಾರ್ಥವಾದಿಗಳು. ನಾವು ಮುಖ್ಯವಾಗಿ ಅರಿಯಬೇಕಾದ ಮಾತು ಇದು: ಬೇಂದ್ರೆಯವರಂತೆ ಎಲ್ಲರೂ ಎಲ್ಲಕಾಲಕ್ಕೂ ಜಾನಪದ ನಿಧಿಗೆ ಕೈ ಚಾಚುವುದು ಅಸಾಧ್ಯವಾಗುತ್ತಾ ಹೋಗುತ್ತದೆ; ಯಂತ್ರ ನಾಗರಿಕತೆ ಹಳ್ಳಿಗಳನ್ನೂ ಪ್ರವೇಶಿಸಿದಂತೆ ಈ ನಿಧಿ ಬರಿದಾಗುತ್ತದೆ; ಇಂಗ್ಲಿಷಿನಲ್ಲಿ ಕಲಿತ ಅತ್ಯಾಧುನಿಕ ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಜಾನಪದ ಮಾತಿನಲ್ಲಿ ಬರೆಯುತ್ತಾ ಹೋಗುವುದು ಕೃತಕವಾಗುತ್ತಾ ಹೋಗುತ್ತದೆ. ಇಂಗ್ಲಿಷ್ ಕನ್ನಡ ಬೆರಸಿ ಮಾತಾಡುವ ಪಟ್ಟಣದ ಜೀವನದ ಬಗ್ಗೆ ಎಷ್ಟು ಉತ್ತಮ ಕಾದಂಬರಿಗಳು ಕನ್ನಡದಲಿ ಬಂದಿವೆ ನೋಡಿ. ಹಾಗೆಯೇ ಹಳ್ಳಿಯ ಜೀವನದ ಬಗ್ಗೆ ಇಂಗ್ಲಿಷಿನಲ್ಲಿ ಕಾದಂಬರಿ ಬರೆಯುವ ಯಾವ ಭಾರತೀಐ ಉತ್ತಮ ಕಾದಂಬರಿ ಬರೆದಿದ್ದಾನೆ ನೋಡಿ. ನಮ್ಮ ಸಮಸ್ಯೆ ಏನೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಾಹಿತ್ಯದ ದೃಷ್ಟಿಯಿಂದ ನೋಡಿದಲ್ಲಿ ಭಾರತೀಯನಿಗೆ ಗೊತ್ತಿರುವ ಮಾತೃಭಾಷೆಯಾಗಲಿ ಅಥವಾ ಇಂಗ್ಲಿಷಾಗಲಿ ಇಡೀ ಜನಾಂಗದ ಒಟ್ಟು ಅನುಭವವನ್ನು – ಹಳ್ಳಿ ಹಳ್ಳಿಯವರ ಸಂಭಾಷಣೆಯನ್ನು ಇಂಗ್ಲಿಷಿನಲ್ಲಿ ಬರೆಯುವುದು ಎಷ್ಟು ಅಶಕ್ಯವೊ ಹಾಗೆಯೇ ಇಬ್ಬರು ವಿದ್ಯಾವಂತ ಪಟ್ಟಣಿಗರ ಸಂಭಾಷಣೆಯನ್ನು ಶಕ್ತಿಪೂರ್ಣವಾದ ಕನ್ನಡದಲ್ಲಿ ಬರೆಯುವುದು ಅಸಾಧ್ಯವಾಗುತ್ತಾ ಹೋಗಿದೆ. ಆದ್ದರಿಂದ ಇಂಗ್ಲೆಂಡಿನ ನಾಗರಿಕವರ್ಗಕ್ಕೂ ಜಾನಪದ ಸಾಹಿತ್ಯಕ್ಕೂ ಇರುವ ಸಾವಯವ ಸಂಬಂಧಕ್ಕಿಂತ ವಿಭಿನ್ನವಾದೊಂದು ಸಮಸ್ಯೆ ನಮ್ಮದಾಗಿದೆ. ಚಾರ‍್ಲ್ಸ್ ಪಾರ್ಕರ್ ತಿಳಿದಂತೆ ಬೇಂದ್ರೆಯವರ ಸಿದ್ದಿ ಅದ್ಭುತವೆಂಬುದು ನಿಜವಾದರೂ ಎರಡು ಪರಸ್ಪರ ಅಸಂಗತ ಸಂಸ್ಕೃತಿಗಳು ನಮ್ಮಲ್ಲಿ ಸೃಷ್ಟಿಯಾಗುತ್ತಿರುವುದರಿಂದ ಬರುಬರುತ್ತ ಬೇಂದ್ರೆಯಂತಹವರು ಸಾಧಿಸಿದ ಕೆಲಸ ಕಷ್ಟತರವಾಗುತ್ತಾ ಹೋಗುತ್ತದೆ. ಮನುಷ್ಯ ಮಾನವೀಯನಾಗಿ ಉಳಿಯಲು ಅವನಿಗೆ ತನ್ನ ಗತಕಾಲದಿಂದ ರಕ್ಷಿತವಾಗಿ ಬಂದ ಮೌಲ್ಯಗಳ, ಪೂರ್ವಿಕರಲ್ಲಿ ಶ್ರೇಷ್ಠರಾದವರ ತಪಸ್ಸು ಮತ್ತು ಸಾಧನೆಯ ಸ್ಮೃತಿಯಿರಬೇಕು. ಭಾಷೆ ಇಂತಹ ಸ್ಮೃತಿಯ ನಿಧಿ, ಇಂಗ್ಲಿಷ್ ಜನಾಂಗದ ಸ್ಮೃತಿ ಹೀಗೆ ಚಾಸರನ ಕಾಲದಿಂದ ಅಭಿನ್ನವಾಗಿ ಹರಿದುಬಂದಿದೆ. ಆದರೆ ಇಂಗ್ಲಿಷ್ ಭಾಷೆ ಕೂಡ ನಾವು ಇವತ್ತು ಕನ್ನಡದ ಭವಿಷ್ಯದ ಬಗ್ಗೆ ಪಡುವ ಅನುಮಾನ, ಅಸಡ್ಡೆಗಳನ್ನೆಲ್ಲ ಹಿಂದೊಂದು ಕಾಲದಲ್ಲಿ ಎದುರಿಸಬೇಕಾಗಿ ಬಂದಿತ್ತು. ಇಂಗ್ಲಿಷಿನ ಅಸ್ತಿತ್ವಕ್ಕೆ ಮಧ್ಯಯುಗದಲ್ಲಿಗಿಂತ ಹೆಚ್ಚಾಗಿ ರೆಸೇಸನ್ಸ್ (ನವೋದಯ) ಕಾಲದಲ್ಲಿ ಲ್ಯಾಟಿನ್ ಭಾಷೆ ಅಡ್ಡಿಯಾಗುವ ಅಪಾಯವಿತ್ತು. ಮಧ್ಯಯುಗದಲ್ಲಿ ಲ್ಯಾಟಿನ್ ಕೂಡ ಇಂಗ್ಲಿಷಿನ ಜೊತೆ ಬಾಳಿದ ಭಾಷೆಯಾಗಿತ್ತು. ಆದರೆ ರೆನೇಸನ್ಸ್‌ನಲ್ಲಿ ಲ್ಯಾಟಿನನ್ನು ವ್ಯಾಕರಣಶುದ್ಧವಾಗಿ ಬರೆಯಬೇಕೆಂಬ ನೊಣಚಿ ಪಂಡಿತರಿಗೆ ಹೊಕ್ಕುಬಿಟ್ಟಿತು. ಹಗಲೊಂದು ಬಾಯಿತಪ್ಪಿ ಮಾಡಿದ ವ್ಯಾಕರಚನೆಯ ತಪ್ಪಿಗೆ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಪೇಚಾಡುವ ಪಂಡಿತರು ಇಟಲಿಯಲ್ಲಿ ಇದ್ದರು. ಸುಮಾರು ಕ್ರಿ.ಶ.೧೫೯೪ರಲ್ಲಿ ಬರೆದ Love’s Labour’s Lost ಎನ್ನುವ ನಾಟಕದಲ್ಲಿ ಬರುವ ಹೋಲೋಪರ್ನೆಸ್ ಎಂಬ ಪಾತ್ರದ ಮುಖಾಂತರ ಇಂತಹವರನ್ನು ಶೇಕ್ಸ್‌ಪಿಯರ್ ಹಾಸ್ಯ ಮಾಡಿದ್ದಾನೆ. ಹ್ಯೂಮನಿಸಮ್ಮಿನ ಪ್ರಭಾವ, ಸಮಾಜದಲ್ಲಿ ಎದ್ದ ಹೊಸ ಶಕ್ತಿಗಳು – ಎಲ್ಲ ಕೂಡಿ ಎಲಿಜಬೆತ್ ಕಾಲದ ಇಂಗ್ಲಿಸಿನವನನ್ನು ತನ್ನ ಜನಾಂಗದ ಗತಕಾಲದ ಸ್ಮೃತಿಯಿಂದ ದೂರ ಮಾಡಿದವು. ವಿದ್ಯಾರ್ಥಿಗಳು ಇಂಗ್ಲಿಷನ್ನು ಕಲಿಯುವುದರ ಬದಲು ಲ್ಯಾಟಿನ್ ಗ್ರೀಕ್‌ಗಳನ್ನೇ ಕಲಿಯಲು ಪ್ರಾರಂಭಿಸಿದರು. ಕ್ರಿ.ಶ.೧೫೪೫ರಲ್ಲಿ Toxophilus ಎಂಬ ಗ್ರಂಥವನ್ನು ಬರೆದ ಆಸ್ಕಾಮ್ ಎಂಬುವನು ಲ್ಯಾಟಿನ್‌ನಲ್ಲಾದರೂ ತಾನು ಈ ಗ್ರಂಥವನ್ನು ಬರೆದಿದ್ದಿದ್ದರೆ, ಬರೆಯುವ ಕೆಲಸ ಸುಲಭತರವಾಗುತ್ತಿತ್ತೆಂದೂ, ತನಿಗಿನ್ನಷ್ಟು ಕೀರ್ತಿ ಬರುತ್ತಿತ್ತೆಂದೂ ಅಂದಿದ್ದಾನೆ. ಇದಕ್ಕೆ ಕಾರಣ, ಲ್ಯಾಟಿನ್ನಿನಲ್ಲಿ ಬರೆಯುವುದಾದರೆ ಮಾದರಿ ಗ್ರಂಥಗಳೂ ಇರುತ್ತಿತ್ತೆಂದು ಅಂದಿದ್ದಾನೆ. (ನಮ್ಮಲ್ಲಿ ಕನ್ನಡದ ಬಗ್ಗೆ ಎಷ್ಟೊ ಜನರ ಅನಿಸಿಕೆಗೂ, ವಾದಕ್ಕೂ, ಅಸ್ಕಾಮ್ ಇಂಗ್ಲಿಷ್ ಬಗ್ಗೆ ಅನ್ನುವುದಕ್ಕೂ ಇರುವ ಸಾಮ್ಯವನ್ನು ಗ್ರಹಿಸಬೇಕು) ಸಿಡ್ನಿ ತನ್ನ Apologic ನಲ್ಲಿ ಇಂಗ್ಲಿಷನ್ನು ಎರಡು ಆರೋಪಗಳಿಂದ ಸಮರ್ಥಿಸಿ ಕೊಂಡಿದ್ದಾನೆ. ಒಂದು ಇಂಗ್ಲಿಷ್ ಬೆರಕೆಯ ಭಾಷೆಯೆನ್ನುವುದು; ಇನ್ನೊಂದು, ಇದಕ್ಕೊಂದು ವ್ಯಾಕರಣವಿಲ್ಲ ಎನ್ನುವುದು. ಮುಲ್‌ಕಾಸ್ಟರ್ ಎಂಬಾತ ಕ್ರಿ.ಶ. ೧೫೮೦ರಲ್ಲಿ ಬರೆದ Elementarie ಯಲ್ಲಿ ಸಮಕಾಲೀನ ಬರಹಗಾರರನೇಕರು ಇಂಗ್ಲಿಷ್ ಭಾಷೆಯ ಬಗ್ಗೆ ಮಾಡುವ ಆರೋಪಗಳನ್ನು ವಿವರಿಸಿದ್ದಾನೆ. ಈ ಆರೋಪಗಳ ಪ್ರಕಾರ ಇಂಗ್ಲಿಷ್ ಖಚಿತವಾದ ಭಾಷೆಯಲ್ಲ; ಆದ್ದರಿಂದ ಯಾವ ವಿಚಾರ ಗ್ರಂಥವನ್ನೂ ಬರೆಯಲು ಇದರ ಬುಡ ಭದ್ರವಿಲ್ಲ; ಇದರ ಕಾಗುಣಿತ ನಿಶ್ಚಿತವಿಲ್ಲ; ಇದಕ್ಕೆ ವಿದ್ಯಾವಂತ ವರ್ಗದ ಬೆಲೆಯಿಲ್ಲ; ಮುಖ್ಯವಾಗಿ : “It is a waste of time to write any philosophical argument in it because the unlearned understand it not, the learned esteem. it not” (“ಯಾವ ತಾತ್ವಿಕ ಚರ್ಚೆಯನ್ನೂ ಇದರಲ್ಲಿ ಬರೆದು ಏನು ಪ್ರಯೋಜನ? ಅವಿದ್ಯಾವಂತರಿಗೆ ಅದು ತಿಳಿಯುವುದು ಸಾಧ್ಯವಿಲ್ಲ; ವಿದ್ಯಾವಂತರಿಗೆ ಅದರ ಬಗ್ಗೆ ವಿಶ್ವಾಸವಿಲ್ಲ.” ಶ್ರೀ ಬಾಲಸುಬ್ರಹ್ಮಣ್ಯಂರವರ ‘ಅರಿಸ್ಟಾಟಲಿನ ಕಾವ್ಯಮೀಮಾಂಸೆ’ ಪ್ರಕಟವಾದಾಗ ಒಬ್ಬರು ಇದೇ ಮಾತು ಹೇಳಿದರು: ಇಂಗ್ಲಿಷ್ ಬಲ್ಲವರು ಇಂಗ್ಲಿಷಲ್ಲೇ ಅದನ್ನು ಓದುತ್ತಾರೆ. ಬರೀ ಕನ್ನಡ ಬರುವ ಅವಿದ್ಯಾವಂತರಿಗೆ ಈ ಗ್ರಂಥದ ಅವಶ್ಯಕತೆಯಿಲ್ಲ.)

ನಮ್ಮ ಪದಪುಷ್ಕಳ ಇಂಗ್ಲಿಷ್ ನಮ್ಮ ನೀರು ನೆಲದಲ್ಲಿ ಊರದೆ ಆಕ್ಸ್‌ಫರ್ಡ್ ಡಿಕ್ಷ್‌ನರಿಯಿಂದ ಅಗೆದು ಅಗೆದು ತೆಗೆದ ವಾತಗ್ರಸ್ತ, ಕರ್ಣಕಠೋರ, ಆಯಾಸಜನ್ಯ ಭಾಷೆಯಾಗುತ್ತದೆ. ಬುದ್ಧಿಯ ಅಲಗಿನ ಸ್ಪರ್ಶವಿಲ್ಲದೆ ಭಾವ ಕೀವಾಗುತ್ತದೆ; ಭಾವದ ಸಂಪರ್ಕವಿಲ್ಲದೆ ಬುದ್ಧಿ ರಾಕ್ಷಸವಾಗುತ್ತದೆ. ಜಾನಪದ ಸಂಸ್ಕೃತಿಯ ಅರಿವಿಲ್ಲದೆ ಬುದ್ಧಿಜೀವಿ ಸೂರಿಗೆ ನೇತುಬಿದ್ದ ಬ್ರಹ್ಮರಾಕ್ಷನಾಗುತ್ತಾನೆ. ಬೌದ್ಧಿಕ ವಿಕಾಸದ ವಲಯದೊಳಕ್ಕೆ ಜಾನಪದ ಸಂಸ್ಕೃತಿ ಬರೆದ ಅದು ಕ್ರಮೇಣ ಅರಣ್ಯ ಹೊಕ್ಕು ಶೂದ್ರಾವಸ್ಥೆಗೇ ಪರಿಮಿತವಾಗುತ್ತದೆ. ಹಳ್ಳಿ ಮತ್ತು ಪಟ್ಟಣ ದೂರವಾಗಿ, ಇಂಗ್ಲಿಷ್ – ಬ್ರಾಹ್ಮಣ ಮತ್ತು ಕನ್ನಡ – ಶೂದ್ರವೆನ್ನುವ ಇನ್ನೆರಡು ಅಮಾನುಷ ಜಾತಿಗಳೂ ಹುಟ್ಟಿ ಯಂತ್ರನಾಗರಿಕತೆ ಇನ್ನೆಲ್ಲೂ ಮಾಡದಂತಹ ಘೋರ ಪರಿಣಾಮವನ್ನು ನಮ್ಮ ನಾಡಿನಲ್ಲಿ ಮಾಡುತ್ತದೆ. ಯಾಕೆಂದರೆ ಯಂತ್ರನಾಗರಿಕತೆಯ ಒತ್ತಡದಲ್ಲಿ ನಮ್ಮ ಮಾನವತ್ವವನ್ನು ರಕ್ಷಿಸುವಂತಹ ಯಾವ ನಮ್ಮ ಗತಕಾಲದ ಸ್ಮೃತಿಯೂ ನಮಗೆ ಉಳಿದಿರುವುದಿಲ್ಲ. ಇದಕ್ಕೊಂದೇ, ಒಂದೇ ಉತ್ತರ : ಅನಿವಾರ್ಯವಾದ ಯಂತ್ರ ನಾಗರಿಕತೆ ಮತ್ತು ಹೊಸ ವಿಚಾರ ನಮ್ಮ ಭಾಷೆಯ ಮೂಲಕವೇ ನಮಗೆ ಬರಬೇಕು. ಆಗ ನಮ್ಮ ಜೀವನಾನುಭವಕ್ಕೂ ಹೊಸ ವಿಚಾರಗಳಿಗೂ ನಡುವೆ ಮಥನ ನಡೆದು ಹೊಸದೊಂದು ಸೃಷ್ಟಿ ಸಾಧ್ಯ. ನಮ್ಮ ಭಾಷೆ ಸದ್ಯದ ಪರಿಸ್ಥಿತಿಯಲ್ಲಿ ವಿಜ್ಞಾನೇತ್ಯಾದಿ ವಿಚಾರಗಳಿಗೆ ಅಸಮರ್ಥವಾಹಕವೆಂದಾಗಲಿ, ಇಂಗ್ಲಿಷಿನ ಮಾಧ್ಯಮವನ್ನು ಬಿಟ್ಟರೆ ಜಗತ್ತಿನ ಸಂಪರ್ಕ ತಪ್ಪುತ್ತದೆಂಬ ವಾದವಾಗಲಿ – ನಿಜವಿದ್ದರೂ – ಈ ಜವಾಬ್ದಾರಿಯನ್ನು ಹೊರಲಾರದ ಹೇಡಿತನವಾಗಕೂಡದು, ಸಾಹಸವಿಲ್ಲದೆ, ಶ್ರಮವಿಲ್ಲದೆ ಯಾವ ಹೊಸ ಸೃಷ್ಟಿಯೂ ಸಾಧ್ಯವಿಲ್ಲ. ಇದು ಬರೀ ಕನ್ನಡದ ಮಮತೆಯ ಪ್ರಶ್ನೆಯಲ್ಲ. ನಮ್ಮ ಭಾಷೆಗಳು ಎಷ್ಟೊಂದು ಹೀನ ಅವಸ್ಥೆಯಲ್ಲಿರಲಿ – ನಮ್ಮ ಪರಿಸ್ಥಿತಿಯನ್ನು ಸಂಪೂರ್ಣ ಅರಿತುಕೊಂಡು, ಸದಾ ವಿಮರ್ಶಾತ್ಮಕ ದೃಷ್ಟಿ ತಾಳಿದವರಾಗಿ ನಾವು ಈ ಸಾಹಸಕ್ಕೆ ಕೈ ಹಾಕಬೇಕು. ಅಂದರೆ ಮೊದಲು ಇಂಗ್ಲಿಷಿಗೆ ಆತುಕೊಂಡಿರುವುದನ್ನು ಬಿಟ್ಟು ಬಿಡಬೇಕು. ಹೀಗೆ ಇಂಗ್ಲಿಷನ್ನು ಬಿಟ್ಟ ಮೇಲೂ, ಯಾವ ರೀತಿಯ ಸಂಬಂಧವನ್ನು ಈ ಭಾಷೆಯ ಜೊತೆಗೆ ಇಟ್ಟುಕೊಳ್ಳುವುದು ಉಚಿತವೆಂಬುದನ್ನು ಮುಂದೆ ಚರ್ಚಿಸುತ್ತೇನೆ. ಅದಕ್ಕಿಂತ ಮುಂಚೆ ಒಂದು ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಳ್ಳಬೇಕು. ಜನ ಜೀವನಕ್ಕೆ ನೇರವಾಗಿ ಸಂಬಂಧಪಟ್ಟಂತಹ ಸಮಾಜಶಾಸ್ತ್ರ, ತತ್ವಶಾಸ್ತ್ರ, ರಾಜಕೀಯ ಶಾಸ್ತ್ರ, ಮನಃಶಾಸ್ತ್ರ ಇತ್ಯಾದಿ ಶಾಸ್ತ್ರಗಳನ್ನು ನಾವು ಈವರೆಗೂ ಇಂಗ್ಲಿಷಿನಲ್ಲಿ ಕಲಿಸುತ್ತ ಬಂದಿದ್ದೇವೆ. ಆದರೆ ಯಾವ ಭಾರತೀಯನಿಂದಲೂ ಈ ಶಾಸ್ತ್ರಗಳಲ್ಲಿ ಹೇಳಿಕೊಳ್ಳುವಂತಹ, ಜಗದ್ವಂದ್ವವಾಗುವಂತಹ ಕೃತಿ ಬಂದಿಲ್ಲ. ಇದಕ್ಕೇನು ಕಾರಣವಿರಬಹುದು? ಒಂದು ಅಂತಹ ಕೃತಿಯನ್ನು ಸೃಷ್ಟಿಸಲು ಅವಶ್ಯವಾದ ಪ್ರತಿಭೆಯುಳ್ಳವರು ನಮ್ಮಲ್ಲಿ ಹುಟ್ಟಲಿಲ್ಲ ಎನ್ನುವುದು. ಈ ಸಲೀಸಾದ ಉತ್ತರವನ್ನು ಒಪ್ಪಿಕೊಳ್ಳುವುದು ಕಠಿಣವಾಗುತ್ತದೆ. ಸಾಹಿತ್ಯದ ರಂಗದಲ್ಲಿಯಾದರೂ ಅಲ್ಲೊಬ್ಬ ಇಲ್ಲೊಬ್ಬನಂತೆ ಭಾರತದಲ್ಲಿ ದೊಡ್ಡ ವ್ಯಕ್ತಿ ಹುಟ್ಟಿದ್ದಾನೆ. ಹಾಗೆಯೇ ಭಾಷೆ ಮತ್ತು ಜನಜೀವನದ ಸಂಪರ್ಕ ತೀರಾ ಅಮುಖ್ಯವಾದ ಭೌತಶಾಸ್ತ್ರ, ಗಣಿತಶಾಸ್ತ್ರಗಳಲ್ಲೂ ಶ್ರೀ ರಾಮನ್, ರಾಮಾನುಜಂ ಅಂತಹವರು ಹುಟ್ಟಿದ್ದಾರೆ. ಆದರೆ ಜನ ಜೀವನಕ್ಕೆ ಸಂಬಂಧಪಟ್ಟಂತಹ ಉಳಿದ ಶಾಸ್ತ್ರಗಳಲ್ಲಿ ಈ ಬಗೆಯ ಅನನ್ಯವೆನಿಸುವಂತಹ ಕೃತಿಗಳನ್ನು ರಚಿಸಿದವರು ಯಾಕೆ ಹುಟ್ಟಲಿಲ್ಲ? ಇದಕ್ಕಿನ್ನೊಂದು ಯಾವುದೋ ಪ್ರಬಲವಾದ ಕಾರಣವಿರಲಿಕ್ಕೇ ಬೇಕು. ಉದಾಹರಣೆಗೆ ರಾಜಕೀಯ ತತ್ವವನ್ನು ತೆಗೆದುಕೊಳ್ಳೋಣ. ಇವತ್ತು ಜಗತ್ತಿಗೆ ರಾಜಕೀಯ ತತ್ವದಲ್ಲಿ ಭಾರತದ ವಿಶಿಷ್ಟ ಕಾಣಿಕೆ ಗಾಂಧೀಜಿಯೊಬ್ಬರದು ಮಾತ್ರ. ಅತ್ತ ಟಾಲ್‌ಸ್ಟಾಯಿಂದ, ಇತ್ತ ಥೋರೋನಿಂದ ಮತ್ತು ರಸ್ಕಿನ್‌ನಿಂದ ಪಡೆದ ವಿಚಾರಗಳನ್ನು ಭಾರತೀಯ ನೆಲದಲ್ಲಿ ಬೆಳೆಸಿ, ಜನಜೀವನದಲ್ಲಿ ಪ್ರಯೋಗಿಸಿ ತನ್ನದೊಂದು ಪಾಕವನ್ನೆ ಅವರು ಸೃಷ್ಟಿಸಿದರು. ಇದು ವಿಚಿತ್ರವಾಗಿ ಕಾಣಿಸುವ ಮಾತೆನ್ನಿಸಬಹುದು; ರಾಜಕೀಯ ಕ್ಷೇತ್ರದಲ್ಲಿರಲಿ; ವಿಚಾರದ ಲೋಕದಲ್ಲೂ ಹೀಗೆ ಗಾಂಧೀಜಿ ಭಾರತದ ಏಕಮಾತ್ರ ಪ್ರತಿಭಾಶಾಲಿಗಳಾಗಿ ಎದ್ದುಕಾಣುತ್ತಾರೆ. ಆದ್ದರಿಂದ ನನ್ನ ಊಹೆಯಿದು; ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ ಇತ್ಯಾದಿ ಜೀವನಕ್ಕೆ ನೇರಸಂಬಂಧಿಸಿದ ಶಾಸ್ತ್ರಗಳಲ್ಲಿ ಅನನ್ಯವಾದ ಕೆಲಸ ನಡೆಯುವುದು ಅಂತಹ ಸಂಶೋಧನೆ ಮಾಡುವವನಿಗೆ ತನ್ನ ಸುತ್ತಲಿನ ಜೀವನದ ಜೊತೆ – ಅಂದರೆ ತನ್ನ ಜನರ ಕನಸು, ಕಾಣ್ಕೆ ಹಂಬಲ ವಿಚಾರಗಳ ಜೊತೆ – ತೀವ್ರವಾದ ಆಸಕ್ತಿ ಆತಂಕ ಇರುವುದರ ಮುಖಾಂತರ ಮಾತ್ರ ಸಾಧ್ಯ. ನಮ್ಮ ಸಾಹಿತಿ ಅಂತಹ ಆತಂಕ ತಾಳಿದವನಾದ್ದರಿಂದ ಅಮೂಲ್ಯವಾದ ಕೆಲಸವನ್ನು ಮಾಡಿದ್ದಾನೆ. ಈ ಆತಂಕವನ್ನು ನಮ್ಮ ಬುದ್ಧಿಜೀವಿಗಳು ತಾಳಿದ್ದೇ ಆದರೆ, ಜನರಿಗೆ ತಿಳಿಯದ ಬೇರೊದು ಭಾಷೆಯಲ್ಲಿ ತಮ್ಮ ಕೆಲಸವನ್ನು ಮಾಡಲಾರರು. ಈ ಆತಂಕ ಪ್ರಥಮತಃ ಭಾಷೆಯ ಮೂಲಕ ವ್ಯಕ್ತವಾಗಬೇಕು. ಬುದ್ಧಿಜೀವಿ ಮತ್ತು ನಮ್ಮ ಸಾಮಾನ್ಯ ಮನುಷ್ಯರ ನಡುವೆ ಅನ್ಯೋನ್ಯತೆ ವಿಚಾರದ ಕೊಡುಕೊಳ್ಳುವಿಕೆ ಸಾಧ್ಯವಾಗುವುದು ನಮ್ಮ ಭಾಷೆಗಳ ಮುಖಾಂತರ, ಅಂದರೆ ಜನರು ಆಡುವ ಮಾತಿನ ಸಂಪತ್ತಿನ ಮತ್ತು ಆ ಭಾಷೆಯ ಸಾಹಿತ್ಯದ ಪರಂಪರೆಯ ಪರಿಚಯ ಮನಃಶಾಸ್ತ್ರಜ್ಞ, ರಾಜಕೀಯಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞನಿಗೆ ಅತ್ಯವಶ್ಯಕವಾಗಿರಬೇಕು. ಆ ಪರಿಚಯವಿದ್ದಲ್ಲಿ ಮಾತ್ರ ಅವನಿಗೆ ತನ್ನ ಜನರಲ್ಲಿ ಸುಪ್ತವಾಗಿರುವ ಕನಸು, ಕಾಣ್ಕೆ, ಹಂಬಲ, ಅತೃಪ್ತಿಗಳಲ್ಲದೆ ತನ್ನ ಜನದ ವಿಕಾರಗಳು, ದುರ್ಬಲ ಪ್ರವೃತ್ತಿಗಳು ಅನುಭವಕ್ಕೆ ಬಂದು, ಹೊಸ ವಿಚಾರದ ಸೃಷ್ಟಿ ಸಾಧ್ಯವಾಗುತ್ತದೆ. ಬಾಲ್ಸಾಕ್‌ನಿಂದ ತಾನು ಅರ್ಥಶಾಸ್ತ್ರವನ್ನು ಕಲಿತೆನೆಂದು ಮಾರ್ಕ್ಸ್ ಹೇಳುತ್ತಾನೆ. ಫ್ರಾಯ್ಡ್‌ನ ವಿಚಾರದ ಹಿಂದೆ ಇಡೀ ಯೂರೋಪಿಯನ್ ಸಾಹಿತ್ಯವಿದೆ. ಇಂಗ್ಲೆಂಡಿನ ಒಬ್ಬ ರಾಜಕೀಯ ಶಾಸ್ತ್ರಜ್ಞನಾಗಲಿ, ತತ್ವಶಾಸ್ತ್ರಜ್ಞನಾಗಲಿ, ಬ್ಲೇಕ್ ಲಾರೆನ್ಸ್, ವರ್ಡ್ಸ್‌ವರ್ತನಲ್ಲಿ ಅಭಿವ್ಯಕ್ತವಾದ ಜನಾಂಗದ ವಿಶೇಷ ಪ್ರಜ್ಞೆಯನ್ನು ಗಣನೆಗೆ ತೆಗೆದುಕೊಳ್ಳದೆ ಹೊಸ ವಿಚಾರ ಮಾಡಲಾರ. ನಾವು ಮಾತ್ರ ನಮ್ಮ ಬಸವಣ್ಣ, ನಮ್ಮ ಅಲ್ಲಮ, ನಮ್ಮ ಕುಮಾರವ್ಯಾಸ, ನಮ್ಮ ಆಧುನಿಕ ಸಾಹಿತ್ಯದ ಗುಪ್ತ, ಗೋಚರ ಪ್ರವೃತ್ತಿಗಳ, ಕಾಣ್ಕೆಯ ದರ್ಶನವಿಲ್ಲದೇನೇ ಜೀವನಕ್ಕೆ ಸಂಬಂಧಪಟ್ಟ ಶಾಸ್ತ್ರಗಳನ್ನೆಲ್ಲ ಇಂಗ್ಲಿಷ್ ಪಠ್ಯಪುಸ್ತಕಗಳ ಮೂಲಕ ವಿಚಾರಮಾಡಿ ಹೊಸದೊಂದನ್ನು ಸೃಷ್ಟಿಸುತ್ತೇವೆಂದು ಭ್ರಮಿಸಿದ್ದೇವೆ. ಹೀಗೆ ಭ್ರಮಿಸಿದ ತ್ರಿಶಂಕುಗಳಂತಿರುವ ನಮ್ಮ ಬುದ್ಧಿಜೀವಿಗಳಿಂದ ಪ್ರತಿಭಾಪೂರ್ಣವಾದ ಕೃತಿ ಜೀವನಕ್ಕೆ ಸಂಬಂಧಿಸಿದ ಶಾಸ್ತ್ರಗಳಲ್ಲಿ ಬರುವುದು ಅತ್ಯಂತ ಅನುಮಾನದ ವಿಷಯ. ಏನೇ ಇರಲಿ – ನಮ್ಮ ಭಾಷೆಯ ಸದ್ಯದ ಸ್ಥಿತಿಯಲ್ಲಿ ಪರಿಮಿತವಾದದ್ದು ಎಂಬುದು ನಿಜ. ಆದರೆ ಈ ಮಿತಿಯನ್ನು ನಾವು ಇನ್ನೊಂದು ದತ್ತುಪಡೆದ ಭಾಷೆಯ ಮೂಲಕ ಮಾನವ ಮೂಲವಾದ ವಿಚಾರಗಳಲ್ಲಿ ದಾಟಿ ಹೋಗುತ್ತೇವೆನ್ನುವುದು ಕಷ್ಟಸಾಧ್ಯವಾದ, ಸಾಧ್ಯವಾದರೂ ಜನಾಂಗದ ದೃಷ್ಟಿಯಿಂದ ಅಹಿತವಾದ ಮಾರ್ಗ, ನಮ್ಮ ಬುದ್ಧಿ ಮತ್ತು ಭಾವ, ಹಳ್ಳಿ ಮತ್ತು ಪಟ್ಟಣ, ಶೂದ್ರ ಮತ್ತು ಬ್ರಾಹ್ಮಣ, ಕನ್ನಡದ ಜಾನಪದಸಂಪತ್ತು ಮತ್ತು ಇಂಗ್ಲಿಷಿನಿಂದ ಪಡೆದ ಜ್ಞಾನಸಂಪತ್ತು ಒಟ್ಟಿಗೆ ತಿಕ್ಕಿ, ತೀಡಿ, ಮಥಿಸಿ ಒಂದಕ್ಕೊಂದು ಹೆಣೆದುಕೊಂಡು ಹೊಸ ಸೃಷ್ಟಿಯಾಗಬೇಕು. ವೆಸ್ಟ್ ಇಂಡಿಯನ್ ಸಮಾಜವಾದಿ ನಾಯಕ ಮತ್ತು ಸಾಹಿತಿ ಸಿ.ಎಲ್.ಆರ್. ಜೇಮ್ಸ್ ಒಮ್ಮೆ ಅಂದರು: “ಭಾರತೀಯರ ಜೊತೆ ಹೋಲಿಸಿಕೊಂಡರೆ ನಾವು ಅದೃಷ್ಟಶಾಲಿಗಳು. ನಮ್ಮ ತಾಯ್ನುಡಿ ಇಂಗ್ಲಿಷ್. ನಮಗೆ ಭಾಷಾಸಮಸ್ಯೆಯಿಲ್ಲ. ನೇರವಾಗಿ ನಾವು ಪ್ರಗತಿಯ ಹಾದಿಯಲ್ಲಿ ನಡೆದುಬಿಡಬಹುದು.” ಮತ್ತೆ ಸ್ವಲ್ಪ ತಡೆದು ಅಂದರು: “ಆದರೆ ನಿಮಗೆ ಈ ಅನಾನುಕೂಲತೆಯ ಜೊತೆಗೇ ನಿಮ್ಮ ಭಾಷೆಗಳಿಂದಾಗಿ ನಿಮ್ಮದೇ ಆದ ಒಂದು ಸಂಸ್ಕೃತಿಯಿದೆ. ಆದರೆ ನಮ್ಮದೇ ಆದೊಂದು ಭಾಷೆಯಿಲ್ಲದಿರುವುದರಿಂದ ನಮಗೊಂದು ಪ್ರತ್ಯೇಕ ವ್ಯಕ್ತಿತ್ವವೇ ಇಲ್ಲ.” ನಮ್ಮ ಜನಾಂಗ ಈ ದೃಷ್ಟಿಯಿಂದ ಎದುರಿಸಬೇಕಾದ ಸವಾಲು; ನಮ್ಮ ತನವನ್ನು ಉಳಿಸಿಕೊಂಡೇ ನಾವು ವೈಜ್ಞಾನಿಕ ಯುಗದಲ್ಲಿ ಪ್ರಗತಿಪರರಾಗುವುದು ಸಾಧ್ಯವೆ? ಹೇಗೆ? ಇದಕ್ಕೆ ಎರಡರಲ್ಲೊಂದು ಉತ್ತರ ಕೊಡಬೇಕಾಗುತ್ತದೆ. ಜೂನ್ ತಿಂಗಳಿನ ಇಟಿಛಿouಟಿಣeಡಿನಲ್ಲಿ ಶ್ರೀ ನೀರದ್ ಚೌಧರಿ ಒಂದು ಉತ್ತರವನ್ನು ಸೂಚಿಸಿದ್ದಾರೆ. ಅವರ ವಾದ ಇದು: “ನಾವು ಭಾರತದ ಪಿಶಾಚ ಹವಾಮಾನಕ್ಕೆ ಸಿಕ್ಕಿಬಿದ್ದು ವಿಕೃತರಾಗಿ ಹೋದ ಯುರೋಪಿಯನ್ನರು.” ಇದರಿಂದ ಉದ್ಧಾರ ಸಾಧ್ಯವಾಗುವುದು – ಅವರ ಪ್ರಕಾರ – ಒಂದೋ ನಾವು ಯೂರೋಪಿಯನ್ನರಿಂದ ಆಳಲ್ಪಡುವುದರಿಂದ, ಅಥವಾ ನಾವೇ ಮನಃಪೂರ್ವಕವಾಗಿ ಪಾಶ್ಚಾತ್ಯರಂತೆ ಆಗುವುದರಿಂದ, ಎರಡನೆಯದು ದುಸ್ಸಾಧ್ಯವಾದ ಮಾರ್ಗವಾದರೂ ನಾವು ಭಾರತೀಯರು ಶ್ರಮಿಸಿ ಮತ್ತೆ ಯೂರೋಪಿಯನ್ನರಾಗಿ ಭಾರತದ ಪಿಶಾಚಮುಷ್ಟಿಯಿಂದ ಪಾರಾಗಬೇಕೆಂದು ಅವರು ಹಂಬಲಿಸಿ ಬರೆದಿದ್ದಾರೆ. ಇಂಗ್ಲಿಷನ್ನು ಬಿಟ್ಟರೆ ನಾವು ಮುಳುಗಿಬಿಡಬಹುದೆನ್ನುವವರು ಶ್ರೀ ನೀರದ್ ಚೌಧರಿಯವರು ಧೈರ್ಯವಾಗಿ, ಪ್ರಾಮಾಣಿಕವಾಗಿ ಹೇಳಿದ ಮಾತನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ನಮ್ಮತವನ್ನು ಕಳೆದುಕೊಳ್ಳಲು ಇಚ್ಛಿಸದವರಿಗೆ ಇನ್ನೊಂದು ಮಾರ್ಗವಿದೆ. ಅದು ನಮ್ಮ ವಿವಿಧ ಭಾಷೆಗಳ ಮೂಲಕ ಕ್ರಮೇಣ ನಾವು ನಮ್ಮ ವ್ಯಕ್ತಿತ್ವದ ಸಮಗ್ರ ಸೃಷ್ಟಿಯನ್ನು ಮಾಡಿಕೊಳ್ಳುವ ಮಾರ್ಗ. ಅಂದರೆ, ನಮ್ಮ ನಿರಕ್ಷರ ದರಿದ್ರ ಜನಕೋಟಿಯನ್ನೂ ಜೊತೆಗೆ ಕರೆದುಕೊಂಡು, ಗತಕಾಲದ ಸ್ಮೃತಿಯಲ್ಲಿ ಅಮೂಲ್ಯವಾದದ್ದನ್ನು ಕಾದಿಟ್ಟುಕೊಂಡು, ಜಾನಪದ ಸಂಸ್ಕೃತಿಯಲ್ಲಿ ಬೇರೂರಿ ನಮ್ಮ ವೈವಿಧ್ಯಕ್ಕೆ ತಕ್ಕುದಾದ ನಮ್ಮ ವಿಚಾರವನ್ನು ಬೆಳೆಸಿಕೊಳ್ಳುವ ಮಾರ್ಗ. ಇದು ಕಠಿಣವಾದ ಮಾರ್ಗ: ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು; ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು, ಹೊರತೆಗೆದು ಸುಟ್ಟು ಸೋಸುಪರಂಜಿ ವಿದ್ಯೆಗಳ ಇನ್ನಾದೂ ಕೊಂಚ ಕಲಿಯಬೇಕು; ಹೊನ್ನ ಕಾಯಿಸಿ, ಹಿಡಿದು ಬಡಿದಷ್ಟ ದೇವತಾ ವಿಗ್ರಹಕ್ಕೊಗ್ಗಿಸುವ ಅಸಲುಕಸುಬು – ಅಡಿಗ ಈ ಎರಡನೆಯ ಹಾದಿ ಹಿಡಿಯುವುದು ಅನಿವಾರ್ಯವಾದದ್ದು. ಯಾಕೆಂದರೆ ಶ್ರೀ ನೀರದ್ ಚೌಧರಿಯಂಥವರಿಗೆ ತಾನು ಮತ್ತು ತನ್ನಂತಹವರು ಯೂರೋಪಿಯನ್ನರಂತಾಗುವುದು ಸಾಧ್ಯವಿದ್ದಷ್ಟು – ಅವರಿಗೂ ಅದು ಸಾಧ್ಯವೇ? – ಭಾರತದ ಉಳಿದ ಜನಕೋಟಿಗೆ ಸಾಧ್ಯವಲ್ಲ. ಶ್ರೀ ನೀರದ್ ಚೌಧರಿಯವರ ಕಲ್ಪನೆಯ ಹಾಗೆ ಒಂದು ಗುಂಪು ಯೂರೋಪಿಯನ್ನರಂತಾಗಿಬಿಟ್ಟರೆನ್ನಿ. ಅವರೇ ಭಾರತವನ್ನು ಆಳುವವರೂ ಆದರೆನ್ನಿ – ಇಂಗ್ಲಿಷ್ ಬಾರದವರು ಭಾರತವನ್ನು ಆಳುವುದು ಎಲ್ಲಾದರೂ ಶಕ್ಯವೇ? – ಆಗ ಭಾರತದಲ್ಲೇನಾದೀತೆಂದು ಫ್ರಾನ್ಸ್, ರಷ್ಯನ್, ಚೀನೀ ಕ್ರಾಂತಿಗಳನ್ನು ಓದಿದವರಿಗೆ ತಿಳಿಸಬೇಕಾಗಿಲ್ಲ. ಯಾವ ವಿತಂಡವಾದವನ್ನಾದರೂ ಹೂಡಿ ಭಾರತೀಯ ಜನಸಾಮಾನ್ಯರ ಮೌಢ್ಯ, ನಮ್ಮ ಭಾಷೆಗಳ ಹೇಯತೆ ಇತ್ಯಾದಿಗಳನ್ನು ಶ್ರೀ ನೀರದ್ ಚೌಧರಿಯಂತಹವರು ಜಗತ್ತಿಗೆ ಸಾರಿ ತೋರಿಸಲಿ – ಇಷ್ಟು ಮಾತ್ರ ಸತ್ಯ : ನಮ್ಮ ಜನ ಮೂಢರಿರಲಿ, ನಮ್ಮ ಭಾಷೆ ನಿರುಪಯೋಗವಿರಲಿ – ಯಾವುದು ವಾಸ್ತವವೊ, ನಿಜವೊ ಅದರಿಂದ ಬುದ್ಧಿಜೀವಿಗೆ ಸರ್ವಥಾ ಬಿಡುಗಡೆಯಿಲ್ಲ. ಎಂತಹ ಭಾಷೆಯಿರಲಿ, ಎಂತಹ ಜನರಿರಲಿ – ಅವರ ಜೊತೆ ಸಂಪರ್ಕ ಸಂಘರ್ಷಗಳಿಲ್ಲದೆ ಬೆಳೆದ ಬುದ್ಧಿಜೀವಿ ಕತ್ತಲಿನಲ್ಲಿ ಕುಂಡವೊಂದರಲ್ಲಿ ಬೆಳೆದ ಸಸಿಯಂತಾಗುತ್ತಾನೆ. ಇದು ಕೊಚ್ಚೆಯಿರಬಹುದು, ಕೆಸರಿರಬಹುದು, ಇವರು ಮೂಢರಿರಬಹುದು, ಮುಟ್ಟಾಳರಿರಬಹುದು – ಆದರೆ ಇದು ಜೀವನ. ಇದರ ಜೊತೆ ಬುದ್ಧಿಜೀವಿಗೆ ಸಂಪರ್ಕ ಅನಿವಾರ್ಯ ; ಭಾರತದ ಈ ಹಾದಿಯನ್ನು ಇಂಗ್ಲಿಷಿನ ಮೂಲಕ ಕಾಲು ಕೆಸರಾಗದಂತೆ ದಾಟಿ ಯೂರೋಪಿಯನ್ ಸ್ವರ್ಗ ಸೇರುತ್ತೇವೆಂದು ಭ್ರಮಿಸುವವರು ಹುಚ್ಚರು. ಸಂಪರ್ಕ, ಸಂಘರ್ಷ, ಪ್ರೇಮ, ಅಥವಾ ದ್ವೇಷ – ಇದೊಂದೇ ಬುದ್ಧಿಜೀವಿಗೆ ತೆರೆದಿರುವ ಮಾರ್ಗ. ಇದು ಸಾಧ್ಯವಾಗುವುದು ನಮ್ಮ ಭಾಷೆಗಳ ಮುಖಾಂತರ ಮಾತ್ರ. ಇಂಗ್ಲಿಷ್ ನಮ್ಮ ಮಾಧ್ಯಮವಾಗಿರುವವರೆಗೆ ನಮ್ಮ ಸಮಾಜದಿಂದ ನಾವು ಜಿಗಿದುಬಿಡಬಲ್ಲೆವೆಂಬ ಭ್ರಮೆ ಉಳಿದೇ ಇರುತ್ತದೆ. ಹಾಗಾದರೆ ನಾವು ಇಂಗ್ಲಿಷನ್ನು ಸಂಪೂರ್ಣ ತೊರೆದುಬಿಡಬೇಕೆ? ಯಾವ ರೀತಿಯ ಸಂಬಂಧ ಇಂಗ್ಲಿಷಿನೊಡನೆ ಸೃಜನಾತ್ಮಕವಾದೀತು? ಇದು ನಾವು ಈಗ ಕೇಳಬೇಕಾದ ಪ್ರಶ್ನೆ.

ಗ್ರಹಿಸಲು ನಾವು ಮೂಲದ ಕೃತಿಗೆ, ಅಂದರೆ ಇಂಗ್ಲಿಷಿನಲ್ಲಿರುವ ಕೃತಿಗೆ, ಹೋಗಬೇಕು. ಆದರೆ ಅಭಿವ್ಯಕ್ತಿಗೆ ನಮ್ಮ ಭಾಷೆಯನ್ನೇ ಉಪಯೋಗಿಸಬೇಕು. ಇದು ಸರಿಯಾದ ಮಾರ್ಗ. ಅಲ್ಲದೆ ಇಂಗ್ಲಿಷ್ ಮಾತ್ರವಲ್ಲದೆ ಉಳಿದ ಯುರೋಪಿಯನ್ ಭಾಷೆಗಳನ್ನೂ ಇಚ್ಛೆಪಟ್ಟವರು ಕಲಿಯುವುದು ಸಾಧ್ಯವಿರಬೇಕು. ವೈಯುಕ್ತಿಕವಾದ ಕೆಲವು ಅನುಭವಗಳಿಂದ ಮಾತ್ರ ಇದನ್ನು ನಾನು ಸಮರ್ಥಿಸಿಕೊಳ್ಳಬಲ್ಲೆ. ನನಗೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿದ ಅನುಭವವಿದೆ. ಪರೀಕ್ಷೆಯಲ್ಲಿ ಅವರು ಬರೆದ ಉತ್ತರಗಳನ್ನು ಓದಿದಿ ಅನುಭವವಿದೆ. ಸತ್ಯದ ಬಗ್ಗೆ ಸ್ವಲ್ಪವಾದರೂ ಕಳಕಳಿಯಿರುವವನು, ಈ ಅಗಾಧವಾದ ಮೋಸವನ್ನು ಕಣ್ಣಾರೆ ಕಂಡು ಆತ್ಮವಂಚನೆ ಮಾಡಿಕೊಳ್ಳುವುದು ಅಸಾಧ್ಯ. ನಾವು ಏನನ್ನು ವಿದ್ಯಾರ್ಥಿಗಳಿಗೆ ನಿಜವಾಗಿ ಕಲಿಸುತ್ತಿದ್ದೇವೆ? ಇಂಗ್ಲಿಷ್ ಭಾಷೆಯನ್ನೊ? ಇಂಗ್ಲಿಷ್‌ನಲ್ಲಿ ಒಂದು ಸಾಮಾನ್ಯ ಸರಳ ವಾಕ್ಯವನ್ನೂ ತಪ್ಪಿಲ್ಲದೆ ಅವರಿಗೆ ಬರೆಯಲು ಬರುವುದಿಲ್ಲ. ಅಥವಾ ಇಂಗ್ಲಿಷ್ ಸಾಹಿತ್ಯವನ್ನೊ? ಅವರು ಬರೆಯುವ ಇಂಗ್ಲಿಷಿನಲ್ಲಿ ವರ್ಡ್ಸ್‌ವರ್ತ್‌ನಲ್ಲಿ ಪ್ರಕೃತಿ, ಹ್ಯಾಮ್ಲೆಟ್‌ನ ಒಳತೋಟಿ ಇತ್ಯಾದಿಗಳ ಬಗ್ಗೆ ಅವರು ಏನನ್ನು ತಾನೆ ಬರೆದಾರು? ಆದರೆ ಇಂಗ್ಲಿಷ್ ಉಪಾಧ್ಯಾಯರಲ್ಲಿ ಕೆಲವರಿಗಾದರೂ ಒಂದು ಅನುಭವವಾಗಿಬೇಕು. ಮಿಕ ಮಿಕ ಕಣ್ಣು ಬಿಡುವ ವಿದ್ಯಾರ್ಥಿಗಳಿಗೆ ಒಂದರ್ಧಗಂಟೆ ಹ್ಯಾಮ್ಲೆಟ್‌ನ ಸಮಸ್ಯೆ ಏನೆಂಬುದನ್ನು ಬ್ರ್ಯಾಡ್ಲೆ ಇತ್ಯಾದಿ ವಿಮರ್ಶಕರನ್ನೆಲ್ಲಾ ಉದ್ಧರಿಸಿ ವಿವರಿಸಿದ ಮೇಲೆ, “ಪಾಪ ಹೋಗಲಿ” ಎಂದು ಪಶ್ಚಾತ್ತಾಪದಿಂದ ಕನ್ನಡದಲ್ಲಿ ನಾಟಕದ ಬಗ್ಗೆ ಹೇಳಲು ಪ್ರಾರಂಭಿಸಿದೊಡನೆ ಅವರ ಕಣ್ಣಲ್ಲೊಂದು ಹೊಸ ಹೊಳಪು ಕಾಣುತ್ತದೆ. ಆದ್ದರಿಂದ ಅಧ್ಯಾಪಕನಾದ ನನ್ನ ನಮ್ರ ಸೂಚನೆಯಿದು: ಮೂಲಗ್ರಂಥವನ್ನು ಓದುವಷ್ಟು ಇಂಗ್ಲಿಷ್ ಭಾಷೆಯ ವ್ಯಾಕರಣ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಕಲಿಸೋಣ, ಆದರೆ ಅವರು ಇಂಗ್ಲಿಷ್ ಸಾಹಿತ್ಯವನ್ನು ಓದಿ ಪಡೆದ ಅನುಭವವನ್ನು ತಮ್ಮ ಭಾಷೆಯಲ್ಲಿಯೇ ವ್ಯಕ್ತಪಡಿಸಲು ಅವಕಾಶ ಕಲ್ಪಿಸೋಣ, ಪರೀಕ್ಷೆಯಲ್ಲಿ ಅವರ ಇಂಗ್ಲಿಷ್ ಭಾಷೆಯನ್ನು ಅಳೆಯುವುದು ನಮ್ಮ ಗುರಿಯಾದರೆ ವ್ಯಾಕರಣ, ವಾಕ್ಯರಚನೆಯ ಪ್ರಶ್ನೆಗಳನ್ನು ಕೇಳೋಣ. ಅಥವಾ ಅವರ ಸಾಹಿತ್ಯಾನುಭವವನ್ನು, ಸಂವೇದನಾ ಶಕ್ತಿಯನ್ನು, ಅಭಿರುಚಿಯನ್ನು ಪರೀಕ್ಷಿಸುವುದು ನಮ್ಮ ಗುರಿಯಾದರೆ ತಮ್ಮ ಅನುಭವವನ್ನು ಸಹಜವಾಗಿ ವ್ಯಕ್ತಪಡಿಸಲು ಸಾಧ್ಯವಾದ ಭಾಷೆಯಲ್ಲಿಯೇ ಅವರಿಗೆ ಬರೆಯಲು ಬಿಡೋಣ. ಆದರೆ ನಾವು ಈಗ ಪರೀಕ್ಷೆಯಲ್ಲಿ ಅವರ ಇಂಗ್ಲಿಷ್ ಭಾಷಾಜ್ಞಾನವನ್ನೂ ಪರೀಕ್ಷಿಸದೆ, ಅವರ ಸಾಹಿತ್ಯಾನುಭವವನ್ನೂ ತೂಗದೆ ನೂರರಲ್ಲಿ ಎಂಭತ್ತು ಜನರನ್ನು ಇಂಗ್ಲಿಷಿನಲ್ಲಿ ಫೇಲು ಮಾಡುತ್ತಿದ್ದೇವೆ. ಇದರ ಪರಿಣಾಮ: ನಮ್ಮ ವಿದ್ಯಾರ್ಥಿಗಳು ಶೇಕ್ಸ್‌ಪಿಯರ್‌ನ ಪರಮ ಶತ್ರುಗಳೊ, ಅಥವಾ ಶೇಕ್ಸ್‌ಪಿಯರ್‌ನ ಬಗ್ಗೆ ನೋಟ್ಸ್ ಬರೆದೊಬ್ಬನ ಪರಮ ಮಿತ್ರರೊ, ಅಥವಾ ಪಾಸಾಗಲಾರದ ತಾವು ಅಪ್ರಯೋಜಕರೆನ್ನುವ ಹತಮತಿಗಳೋ ಆಗುತ್ತಿದ್ದಾರೆ. ಆದ್ದರಿಂದಲೇ ಗ್ರಹಿಕೆಗೆ ಮೂಲಭಾಷೆ, ಅಭಿವ್ಯಕ್ತಿಗೆ ನಮ್ಮ ಭಾಷೆ ಎನ್ನುವುದು ಸರಿಯಾದ ಹಾದಿ, ಮ್ಯಾಕ್ಸ್‌ಮುಲ್ಲರ್ ಸಂಸ್ಕೃತದಲ್ಲಿ ವೇದಗಳನ್ನು ಓದಿದದರೂ ಸಂಸ್ಕೃತ ಭಾಷೆಯಲ್ಲಿಯೇ ತನ್ನ ಗ್ರಂಥಗಳನ್ನು ರಚಿಸುವ ಮೌಢ್ಯ ತೋರಿಸಲಿಲ್ಲ; ಜರ್ಮನ್ ಭಾಷೆಯಲ್ಲಿ ಬರೆದ ಪೋರ್ಚುಗೀಸರು, ಜರ್ಮನರು, ರಷ್ಯನರು ಶೇಕ್ಸ್‌ಪಿಯರನನ್ನು ಓದಿ ತಮ್ಮ ಭಾಷೆಗಳಲ್ಲಿಯೇ ವಿಮರ್ಶಾಗ್ರಂಥವನ್ನು ಬರೆದಿದ್ದಾರೆ. ಅವು ಮತ್ತೆ ಇಂಗ್ಲಿಷ್ ಭಾಷೆಗೆ ಅನುವಾದಿತವಾಗಿ ಇಂಗ್ಲಿಷ್ ವಿದ್ಯಾರ್ಥಿಗಳಿಗೇ ಉಪಯುಕತವಾದ ವಿಮರ್ಶಾಗ್ರಂಥಗಳಾಗಿವೆ. ಆದರೆ ಭಾರತೀಯನೊಬ್ಬ ಇಂಗ್ಲಿಷಿನಲ್ಲೆ ಶೇಕ್ಸ್‌ಪಿಯರ್ ಬಗ್ಗೆ ಬರೆದ ಯಾವ ಗ್ರಂಥವನ್ನಾಗಲಿ ಇಲ್ಲಿ ವಿದ್ಯಾರ್ಥಿಗಳು ಉಪಯುಕ್ತವೆಂದು ಕಂಡುದನ್ನು ನಾನು ನೋಡಿಲ್ಲ. ಶೇಕ್ಸ್‌ಪಿಯರ್ ನಮ್ಮ ಜನಪದದ ಸೊತ್ತಾದ ಹೊರತು ನಾವು ಅವನ ಬಗ್ಗೆ ಅನನ್ಯವಾದ ಗ್ರಂಥವನ್ನಾದರೂ ಹೇಗೆ ಬರೆದೇವು? ರಷ್ಯನ್ನರಿಗೆ, ಜರ್ಮನ್ನರಿಗೆ, ಫ್ರೆಂಚರಿಗೆ ಶೇಕ್ಸ್‌ಪಿಯರ್ ತಮ್ಮ ಭಾಷೆಗಳ ಮೂಲಕ ತಮ್ಮವನಾದ್ದರಿಂದಲೇ ಅವನ ಬಗ್ಗೆ ಅವರಿಗೆ ಉದ್ಗಂಥಗಳನ್ನು ಬರೆಯುವುದು ಸಾಧ್ಯವಾಯಿತು. ಹೀಗೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬರೆಯುವುದಕ್ಕೆ ಬಿಟ್ಟರೆ ನಮ್ಮ ಜ್ಞಾನದ ಮಟ್ಟ ಇಳಿದುಬಿಡುತ್ತದೆನ್ನುವುದು ನಗೆಗೇಡಿನ ವಿಷಯ. ಸಾಹಿತ್ಯದ ವಿಷಯ ಬೇಡ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರಗಳನ್ನು ಉದಾಹರಣೆಗೆ ತೆಗೆದುಕೊಳ್ಳಿ. ಇಂಗ್ಲಿಷ್‌ನಲ್ಲಿ ಈ ಶಾಸ್ತ್ರಗಳನ್ನು ಕಲಿಯುವ ನಮ್ಮ ವಿದ್ಯಾರ್ಥಿಗಳು ಈ ಶಾಸ್ತ್ರಗಳ ಬಗ್ಗೆ ಇರುವ ಉದ್ಗ್ರಂಥಗಳನ್ನು ಓದುತ್ತಾರೆಯೆ? ಅಥವಾ ಪಠ್ಯಪುಸ್ತಕವನ್ನಾದರೂ ಓದುತ್ತಾರೆಯೇ? ಈಗ ವಿದ್ಯಾರ್ಥಿಗಳು ಓದುವುದು – ಅಂದರೆ ಉರು ಹಚ್ಚುವುದು – ಅವರ ಉಪಾಧ್ಯಾಯರು ಬರೆಸಿದ ನೋಟ್ಸು. ಅದನ್ನು ಉರುಹಚ್ಚಿ ಅವರು ಪರೀಕ್ಷೆಯಲ್ಲಿ ಬರೆಯವುದು – ಪರೀಕ್ಷಕನಿಗೆ ಗೊತ್ತು! ಕನ್ನಡದಲ್ಲಿ ಪಠ್ಯಪುಸ್ತಕಗಳಿಲ್ಲ ಎನ್ನುವವರು ಇದನ್ನು ಗಮನಿಸಬೇಕು. ಈಗ ಇಂಗ್ಲಿಷಿನಲ್ಲಿ ಎಲ್ಲ ಗ್ರಂಥಗಳಿದ್ದೂ ವಿದ್ಯಾರ್ಥಿಗಳ ತಲೆಗೆ ಹೋಗುವ ಜ್ಞಾನಕ್ಕಿಂತ ಒಂದಿಷ್ಟು ಹೆಚ್ಚನ್ನಾದರೂ – ಪಠ್ಯ ಪುಸ್ತಕಗಳು ಕನ್ನಡದಲ್ಲಿ ಇಲ್ಲದಿದ್ದರೂ ಸಹ – ಕನ್ನಡದಲ್ಲಿ ಈ ಗಳಿಗೆಯಿಂದಲೇ ಪಾಠ ಹೇಳುವ ಮೂಲಕ ಅವರಿಗೆ ತಿಳಿಸುವುದು ಶಕ್ಯ. ಇಂಗ್ಲೆಂಡಿನ ನನ್ನ ಅನುಭವಕ್ಕೆ ಬಂದ ವಿಷಯವಿದು. ನಾನು ಓದುತ್ತಿರುವ ವಿಶ್ವವಿದ್ಯಾನಿಲಯದಲ್ಲಿ ಸ್ಪ್ಯಾನಿಷ್, ಫ್ರೆಂಚ್, ರಷ್ಯನ್ ಜರ್ಮನ್ ಇತ್ಯಾದಿ ಯುರೋಪಿನ ಭಾಷೆಗಳ ವಿಭಾಗಗಳಿವೆ. ಇವುಗಳಲ್ಲಿ ನನ್ನ ಗೆಳೆಯರು ಕೆಲವರು ಸಂಶೋಧನೆ ನಡೆಸುತ್ತಿದ್ದಾರೆ – ಎಂ.ಎ., ಪಿಎಚ್.ಡಿ., ಪದವಿಗಳಿಗೆ ಸ್ಪೆಂಡಲ್ ಬಗ್ಗೆ ಸಂಶೋಧನೆ ಮಾಡುತ್ತಿರುವ ಒಬ್ಬ ವಿದ್ಯಾರ್ಥಿ ಪ್ಯಾರಿಸ್‌ಗೆ ಆಗಾಗ್ಗೆ ಹೋಗಿ ಬರುತ್ತಾರೆ : ಫ್ರೆಂಚ್ ವಿಮರ್ಶಕರ ಜೊತೆ ಕಾಲಕಳೆದು ಅಭ್ಯಾಸ ಮಾಡಿದ್ದಾರೆ. ಆದರೆ ಆತ ಸ್ಪೆಂಡಲ್ ಬಗ್ಗೆ ಬರೆಯುತ್ತಿರುವುದು ಇಂಗ್ಲಿಷ್ ಭಾಷೆಯಲ್ಲಿ. ಫ್ರೆಂಚ್‌ನಲ್ಲಿ ಕೊಡುವ ಪಿಎಚ್.ಡಿ., ಇಂಗ್ಲಿಷಿನಲ್ಲಿ ಬರೆದ ಗ್ರಂಥಕ್ಕೆ. ಇದು ಎಲ್ಲ ವಿಭಾಗಗಳಿಗೂ ಸಾಧಾರಣವಾದ ಪದ್ಧತಿ. ಹಾಗೆಯೇ ಜಪಾನಿನಿಂದ ಬಂದವರೊಬ್ಬರು ಇಂಗ್ಲಿಷ್ ಶಾಖೆಯಲ್ಲಿ ಸಂಶೋಧನೆ ಮಾಡುತ್ತಿದ್ದಾರೆ: ಆದರೆ ಜಪಾನ್ ಭಾಷೆಯಲ್ಲಿಯೇ ತಮ್ಮ ವಿಮರ್ಶೆಯನ್ನು ಬರೆಯುತ್ತಿದ್ದಾರೆ; ಜಪಾನಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದ ಅವರು ತಮ್ಮ ಭಾಷೆಯಲ್ಲಿಯೇ ಇಂಗ್ಲಿಷ್ ಸಾಹಿತ್ಯವನ್ನು ಕಲಿಸಿಕೊಡುತ್ತಾರೆ. ಆದರೂ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಪ್ರಭಾವ ಜಪಾನಿನ ಮೇಲೆ ಅಗಾಧವಾಗಿ ಆಗಿದೆ. ಜೊತೆಗೆ ಇಂಗ್ಲಿಷ್ ಸಾಹಿತ್ಯದ ಮೇಲೆಯೇ ಪರಿಣಾಮ ಮಾಡಬಲ್ಲಂತಹ ನಾಟಕಗಳು, ಕಾದಂಬರಿಗಳು ಜಪಾನಿ ಭಾಷೆಯಲ್ಲಿ ಬಂದಿವೆ. ಇದನ್ನೆಲ್ಲ ನೋಡಿದ ಮೇಲೆ ನನಗೆ ಹೀಗೆನ್ನಿಸುತ್ತದೆ. ಕೊನೆಯ ಪಕ್ಷ ಇಷ್ಟನ್ನಾದರೂ ಮಾಡುವುದು ನಮಗೆ ಸಾಧ್ಯ; ಕನ್ನಡನಾಡಿನಲ್ಲಿ ಮೂರು ವಿಶ್ವವಿದ್ಯಾಲಯಗಳಿವೆ. ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಗಳನ್ನೂ ತೆಗೆದುಕೊಂಡು ಓದುವ ವಿದ್ಯಾರ್ಥಿಗಳಿದ್ದಾರೆ. ಇಂಗ್ಲಿಷ್ ಸಾಹಿತ್ಯ ವಿಭಾಗಗಳಲ್ಲಿ ಇಂಗ್ಲಿಷ್ ಕವಿ, ನಾಟಕಕಾರ, ವಿಮರ್ಶಕರ ಬಗ್ಗೆ ನಾವು ಸಂಶೋಧನೆ ಮಾಡುತ್ತೇವೆ. ಮಾಡಿದ ಸಂಶೋಧನೆಯನ್ನು ಇಂಗ್ಲಿಷಿನಲ್ಲಿ ಬರೆಯುತ್ತೇವೆ. ಈ ಸಂಶೋಧನೆಗೆ ಅನೇಕ ವೇಳೆ ಅವಶ್ಯವಾದ ಗ್ರಂಥಗಳೆಲ್ಲ ಭಾರತದಲ್ಲಿ ದೊರೆಯುವುದು ದುರ್ಲಭ. ಈ ಕಾರಣದಿಂದಾಗಿ ಮತ್ತು ನಾನು ಈ ಹಿಂದೆ ವಿವರಿಸಿದ ಉಳಿದ ಕಾರಣಗಳಿಂದಾಗಿ ನಮ್ಮ ವಿದ್ಯಾರ್ಥಿಗಳು ಎಷ್ಟೆ ಬುದ್ಧಿವಂತರಿರಲಿ, ಅವರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಸಂಶೋಧನೆ, ಇಂಗ್ಲಿಷ್ ವಿಮರ್ಶಕರ ಇತರ ಕೃತಿಗಳ ಸಾಲಿನಲ್ಲಿ ನಿಲ್ಲುವುದು ಕಷ್ಟದ ವಿಷಯ; ಒಮ್ಮೆ ಸಾಧ್ಯವಿದ್ದರೂ ಸಂಶೋಧನಾ ಗ್ರಂಥಗಳು ಹೆಚ್ಚಾಗಿ ಅಜೀರ್ಣ ಹಿಡಿದಿರುವ ಇಂಗ್ಲಿಷ್ ಸಾಹಿತ್ಯಲೋಕಕ್ಕೆ ಭಾರತೀಯನೊಬ್ಬ ಬರೆದ ಇನ್ನೊಂದು ಗ್ರಂಥ ಅತ್ಯಗತ್ಯವೆನ್ನಿಸುವುದು ಅನುಮಾನದ ವಿಷಯ. ನಮ್ಮ ಜನಜೀವನಕ್ಕಿಂತಲೂ ಈ ಗ್ರಂಥಗಳಿಂದ ಪ್ರಯೋಜನವಿಲ್ಲ. ನಮ್ಮ ವಿದ್ಯಾರ್ಥಿಗಳೇ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಇಂಗ್ಲಿಷ್ ವಿಮರ್ಶಕರು ಬರೆದಿದ್ದನ್ನು ಓದಲು ಇಚ್ಛಿಸುತ್ತಾರೆ. ಆದ್ದರಿಂದ ಈ ಸಂಶೋಧನೆಗಳನ್ನು ನಮ್ಮ ಭಾಷೆಯಲ್ಲಿಯೇ ನಾವು ಬರೆದರೆ, ಕೃತಿ ದ್ವಿತೀಯ ವರ್ಗದ್ದಾದರೂ ಕನ್ನಡದ ಸದ್ಯದ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಇಂತಹ ಸಂಶೋಧನೆಗಳನ್ನು ನಾವು ಪ್ರಕಟಿಸಬಹುದು. ಕನ್ನಡಕ್ಕೆ ಉಪಯೋಗ ಮಾಡಿಕೊಳ್ಳಬಹುದು. ಹೊಸದೊಂದು ವಿಮರ್ಶೆಯ ಭಾಷೆಯ ಸೃಷ್ಟಿಗೆ ಇವು ಸಹಾಯಕವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ಇಂಗ್ಲಿಷ್ ಸಾಹಿತ್ಯದ ಸಂಶೋಧನೆಯನ್ನೂ ಕನ್ನಡದಲ್ಲಿ ಮಾಡಿದ ಅನುಭವ ನಮ್ಮ ಭಾಷೆಯ ಅಭಿವೃದ್ಧಿಯ ಯತ್ನದಲ್ಲಿ ಬಹಳ ಪ್ರಯೋಜನಕಾರಿಯಾಗಬಹುದು. ವಿಫಲವಾದ ಸಂಶೋಧನೆಗಳಲ್ಲಿ ಕಾಲ ಮತ್ತು ಹಣವನ್ನು ನಮ್ಮ ಬಡತನದ ದೇಶದಲ್ಲಿ ಹಾಳುಮಾಡುವುದರ ಬದಲು ಈ ಕೂಡಲೆ ನಾವು ಕೈಗೊಳ್ಳಬಲ್ಲಂತಹ ಒಂದು ಮುಖ್ಯ ಕೆಲಸ ಇಲ್ಲಿ ಕಾದಿದೆ. ನನಗೆ ತಿಳಿದಂತೆ ಇಂಗ್ಲೆಂಡಿನ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ನಡೆಯುತ್ತಿರುವ ಕೆಲಸವೆಲ್ಲ ಈ ಬಗೆಯದೇ; ಎರಡು ಭಾಷೆಗಳ ನಡುವೆ ಕೊಡು – ಕೊಳ್ಳುವಿಕೆ ನಡೆಯಬೇಕಾದ್ದೇ ಹೀಗೆ. ಇಲ್ಲಿಯವರೆಗೆ ಇಂತಹ ಕೆಲಸ ಸಾಹಿತ್ಯದ ಸೇವೆಯಾಗಿ ಅಲ್ಲೊಬ್ಬ ಇಲ್ಲೊಬ್ಬ ಸಾಹಸಿಯಿಂದ ನಡೆದಿದೆ. ನಮ್ಮ ಜನಾಂಗದ ವೈಶಿಷ್ಟ್ಯವನ್ನು ಕಾಯಲೆಂದು ಇರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರ ತಾವೇ ಈ ಜವಾಬ್ದಾರಿಯನ್ನು ಹೊರದಿದ್ದಲ್ಲಿ ಮುಂದೆ ಬರುವ ಭಾಷಾದರಿದ್ರರಾದ ಅಸಂಸ್ಕೃತ, ವೈಜ್ಞಾನಿಕ, ರಾಕ್ಷಸ ಪೀಳಿಗೆಗೆ ನಾವೆಲ್ಲ ಜವಾಬ್ದಾರರಾಗಬೇಕಾಗುತ್ತದೆ. ಆದ್ದರಿಂದ ನಾವು ಕೂಡಲೆ ಮಾಡಬೇಕಾದ್ದು ಮತ್ತು ಮಾಡಬಹುದಾದದ್ದು ಇದು; ಈಗ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಸಮಾಜಶಾಸ್ತ್ರ, ಮನಃಶಾಸ್ತ್ರ, ರಾಜಕೀಯಶಾಸ್ತ್ರ, ಇಂಗ್ಲಿಷ್ ಸಾಹಿತ್ಯ, ತತ್ವಶಾಸ್ತ್ರ ಇತ್ಯಾದಿಗಳ ಬಗೆಗೆ ನಡೆಯುತ್ತಿರುವ ಪಿ.ಎಚ್.ಡಿ., ಸಂಶೋಧನೆಯೆಲ್ಲ – ಕೊನೆಯ ಪಕ್ಷ ಸಾಧ್ಯವಿರುವಷ್ಟಾದರೂ ಕೂಡ – ಕನ್ನಡದಲ್ಲಿ ಬರಲಿ. —- ಪ್ರಜಾವಾಣಿ ೧೯೬೫.

* * *