ಕನ್ನಡ ಕಾದಂಬರಿಯ ಸಾಧಿಸಬೇಕಾದ್ದು ಬಹಳ ಉಳಿದಿದೆ. ಹೀಗೆ ನಮಗೆ ಅನ್ನಿಸುವ ತನಕವೂ ನಾವು ಜೀವಂತವಾಗಿ ಉಳಿದಿದ್ದೇವೆ; ಅಂದರೆ ಕಾದಂಬರಿ ಸಾಹಿತ್ಯಪ್ರಕಾರ ನಮ್ಮ ಜೀವನವನ್ನು ಹುಡುಕಿ ತಿಳಿಸಬೇಕಾದ್ದು ಬಹಳ ಉಳಿದಿದೆ ಎಂದು ಅರ್ಥ. ಹೀಗೆ ಅನೇಕ ಪಾಶ್ಚಿಮಾತ್ಯ ಕಾದಂಬರಿಕಾರರಿಗೆ ಏಕೆ ಅನ್ನಿಸುತ್ತಿಲ್ಲ ಎಂಬುದನ್ನು ನೋಡಿದಾಗ ಕನ್ನಡ ಕಾದಂಬರಿ ಕಾರನಿಗಿರುವ ವಿಶೇಷ ಸೌಲಭ್ಯಗಳು ನಮಗೆ ಮನದಟ್ಟಾಗುವುವು.

ಇಂಗ್ಲೆಂಡಿನಲ್ಲಿ ಕಾದಂಬರಿ ಒಂದು ಪರ್ವಕಾಲದಲ್ಲಿ ಹುಟ್ಟಿತು. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಜನರ ಜೀವನಕ್ರಮವನ್ನು ಮೂಲಭೂತವಾಗಿ ಮಾರ್ಪಡಿಸುತ್ತಿದ್ದ ಕಾಲ ಅದು. ಆಜನ್ಮ ಸಿದ್ಧ ಹಕ್ಕುಗಳ ಮೇಲೆ ನಿಂತ ಯಾವ ವ್ಯವಸ್ಥೆಯನ್ನಾಗಲಿ ಕರಗಿಸಿಬಿಡುವ ಸಾಧನವೆಂದರೆ ಹಣ. ಬಂಡವಾಳಶಾಹಿಯ ಆರ್ಥಿಕ ವ್ಯವಸ್ಥೆ ಹಣದ ಮೂಲಕ, ಕುಲ, ವಂಶ, ಆಗರ್ಭ ಶ್ರೀಮಂತಿಕೆ ಇತ್ಯಾದಿ ಭಾವನೆಗಳನ್ನೆಲ್ಲಾ ಕರಗಿಸಿಬಿಟ್ಟಿತು. ಹಣದ ಗಳಿಕೆಯ ಮೂಲಕ ಯಾವ ವರ್ಗದಲ್ಲಿ ಹುಟ್ಟಿದ ವ್ಯಕ್ತಿಯಾಗಲಿ ಇನ್ನೊಂದು ವರ್ಗಕ್ಕೆ ಏರುವುದು ಸಾಧ್ಯವೆಂದು ತೋರಿಸಿತು. ಈ ಸಂದರ್ಭದಲ್ಲೇ ಕಾದಂಬರಿ ಪ್ರಕಾರ ಹುಟ್ಟಿತೆಂಬುದು ಬಹಳ ಗಮನಾರ್ಹ ವಿಷಯ. ಈ ‘ಪಿಕರಸ್ಕ್’ ಕಾದಂಬರಿಯ ಸಾಹಸೀ ನಾಯಕರು – ಟಾಮ್ ಜೋನ್ಸ್‌ನಂತೆ – ಸ್ವಚ್ಛಂದವಾಗಿ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಏರುತ್ತಾ ಹೋಗುತ್ತಾರೆ : ಕುಲ, ವಂಶ, ಇತ್ಯಾದಿ ಎಲ್ಲ ಅಡೆತಡೆಗಳನ್ನು ಧಿಕ್ಕರಿಸಿ ನಡೆಯುತ್ತಾರೆ. ಹುಟ್ಟಿನಿಂದ ಪಡೆದಿದ್ದಕ್ಕಿಂತ ಸ್ವಂತ ಯೋಗ್ಯತೆಯಿಂದ ಗಳಿಸಿಕೊಂಡಿದ್ದು ಇವರಿಗೆ ಮುಖ್ಯವಾಗುತ್ತದೆ. ತಮ್ಮ ಇಷ್ಟಾರ್ಥಕ್ಕೆ ಸರಿಯಾಗಿ ತಾವು ರೂಪಿಸಿಕೊಳ್ಳಬಲ್ಲ ಸಮಾಜ ಮತ್ತು ಪ್ರಪಂಚ ‘ನಿಜ’ವೆಂದು ಇವರಿಗೆ ಕಾಣಿಸುತ್ತದೆ. ಆದ್ದರಿಂದ ಕಥೆಗಳಲ್ಲೂ ಸಹ ಅತಿ ರಮ್ಯತೆ ಕಡಿಮೆಯಾಗಿ ವಾಸ್ತವತೆ ತಲೆ ಹಾಕುತ್ತದೆ. ಹೀಗೆ ನಾವು ಏನನ್ನು ಈಗ ಕಾದಂಬರಿಯೆಂದು ಗುರುತಿಸುತ್ತೇವೆಯೋ ಅದು ಹುಟ್ಟುತ್ತದೆ. ಎಲ್ಲ ಸಾಹಿತ್ಯ ಪ್ರಕಾರಗಳೂ ನಾವು ಪ್ರಪಂಚವನ್ನು ತಿಳಿಯುವ ರೀತಿಯನ್ನು ಸೂಚಿಸುತ್ತವೆ. ಬದಲಾಗುತ್ತಿದ್ದ ಪ್ರಪಂಚವನ್ನು ಪಾಶ್ಚಿಮಾತ್ಯ ಲೇಖಕ ಅರಿತುಕೊಂಡ ರೀತಿಯನ್ನು ನಾವು ಅವರ ಕಾದಂಬರಿಗಳಲ್ಲಿ ಕಾಣುತ್ತೇವೆ. ಯಾಕೆಂದರೆ ಈ ಲೇಖಕರು ಕಾದಂಬರಿ ಪ್ರಕಾರವನ್ನು ತಮ್ಮ ಎಲ್ಲ ತಿಳಿವಳಿಕೆಗಳಿಗೂ, ಅನ್ನಿಸಿಕೆಗಳಿಗೂ ಮಾಧ್ಯಮವಾಗಿ ಉಪಯೋಗಿಸಲು ಪ್ರಾರಂಭಿಸಿದರು. ಮನಃಶಾಸ್ತ್ರ, ಸಮಾಜಶಾಸ್ತ್ರ ಪ್ರತ್ಯೇಕವಾದ ಶಿಸ್ತುಗಳಾಗಿ ಇನ್ನೂ ಬೆಳೆಯದ ಕಾಲದಲ್ಲಿ ಕಾದಂಬರಿ ಈ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿತ್ತು. ಉದಾಹರಣೆಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಇದ್ದ ಸಾಮಾಜಿಕ ವ್ಯವಸ್ಥೆ ಯಾವ ರೀತಿ ಇತ್ತು ಎಂಬುದು ತಿಳಿಯಲು ಆಗಿನ ಕಾಲದ ಕಾದಂಬರಿಗಳು ಸಹಾಯಮಾಡುತ್ತವೆ. ಏಕೆಂದರೆ ಆಗಿನ ಕಾಲದ ಕಾದಂಬರಿಕಾರ ಸಮಾಜ ಶಾಸ್ತ್ರಜ್ಞ, ಬೋಧಕ, ರಾಜಕೀಯ ಪ್ರಚಾರಕ ಎಲ್ಲವೂ ಆಗಿ ಬರುತ್ತಾನೆ. ಕಾದಂಬರಿಯ ಮಾಧ್ಯಮ ಎಷ್ಟು ಜಗ್ಗಿದರೂ ಹಿಗ್ಗಬಲ್ಲ, ಎಷ್ಟನ್ನು ತುಂಬಿದರೂ ತುಂಬಿಸಿಕೊಳ್ಳಬಲ್ಲ, ಎಲ್ಲ ಅಪೇಕ್ಷೆಗಳನ್ನೂ ಪೂರೈಸಬಲ್ಲ ಮಾಧ್ಯಮವಾಗಿ ಪರಿಣಮಿಸುತ್ತದೆ.

ಆದರೆ ಪಾಶ್ಚಿಮಾತ್ಯ ಲೇಖಕನಿಗೆ ಈಗ ಕಾಲ ಬದಲಾಗಿದೆ. ಸಮಾಜಶಾಸ್ತ್ರಜ್ಞ, ಮನಃಶಾಸ್ತ್ರಜ್ಞ, ರಾಜಕೀಯ ಪ್ರಚಾರಕ, ಬೋಧಕ, ತಮ್ಮ ತಮ್ಮ ಪ್ರತ್ಯೇಕ ಶಾಸ್ತ್ರಗಳ ಶಿಸ್ತಿನ ಚೌಕಟ್ಟಿನಲ್ಲಿ ತಮ್ಮ ವಿಚಾರಗಳನ್ನು ಸಮರ್ಥವಾಗಿ ಬಿಂಬಿಸುವುದರಿಂದ ಕಾದಂಬರಿಕಾರ ಈ ಎಲ್ಲ ಕೆಲಸಗಳನ್ನೂ ಅವರಿಗಿಂತ ಪ್ರತ್ಯೇಕವಾದ ರೀತಿಯಲ್ಲಿ ಮಾಡಬೇಕಾಗಿದೆ. ಪರಿಣಾಮವಾಗಿ ಕಾದಂಬರಿ ನಿರ್ವಹಿಸಬೇಕಾದ ಅಗತ್ಯಗಳು ಒಂದು ದೃಷ್ಟಿಯಲ್ಲಿ ಕಡಿಮೆಯಾಗುತ್ತಾ ಇನ್ನೊಂದು ದೃಷ್ಟಿಯಲ್ಲಿ ಗಹನವಾಗುತ್ತಾ ಹೋಗಿವೆ.

ಆದ್ದರಿಂದಲೇ ಲೋಕದ ವಾಸ್ತವ ಚಿತ್ರದ ಬದಲಾಗಿ ಒಂದು ಮನಸ್ಸು ಲೋಕವನ್ನು ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುವುದು ಪಾಶ್ಚಾತ್ಯರಿಗೆ ಅವಶ್ಯವಾಗುತ್ತಾ ಹೋಗಿದೆ. ಸರ್ವಸಾಕ್ಷಿತ್ವದ – ಅಂದರೆ ಡಿಕನ್ಸ್, ಜಾರ್ಜ್ ಎಲಿಯಟ್ ರೀತಿಯ – ಬರವಣಿಗೆ ಕೊನೆಯಾಗಿ ಯಾವುದಾದರೊಂದು ಪಾತ್ರದ ಪ್ರಜ್ಞೆಯ ಮೂಲಕ ಜಗತ್ತನ್ನು ನೋಡುವುದು ಮುಖ್ಯವಾಗಿದೆ. ಅಂದರೆ – ಪ್ರಪಂಚ, ಸಮಾಜ ಇತ್ಯಾದಿ ಹೇಗಿವೆ ಎನ್ನುವುದರ ಬದಲಾಗಿ ಇವು ಮುಖ್ಯವಾಗಿ ಹೇಗೆ ಒಂದು ಪ್ರಜ್ಞೆಗೆ ಕಾಣುತ್ತವೆ? ಯಾಕೆ ಹಾಗೆ ಕಾಣುತ್ತವೆ? ಎನ್ನುವ ಪ್ರಶ್ನೆಗಳಿಗೆ ಹುಡುಕುವ ಉತ್ತರವೇ ಕಾದಂಬರಿಯಾಗುತ್ತಿದೆ. ಡಿಕನ್ಸ್ ಲಂಡನ್ನಿನ ಒಂದು ಬೀದಿಯನ್ನು ವರ್ಣಿಸಿದರೆ, ಇಡೀ ಬೀದಿಯೇ ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡುತ್ತಾನೆ. ಅದೇ ವರ್ಜಿನಿಯಾ ವೂಲ್ಫ್ ಈ ಬೀದಿಯನ್ನು ವರ್ಣಿಸುವಾಗ ನಮಗೆ ಕೇಂದ್ರಪಾತ್ರದ ಪ್ರಜ್ಞೆಯ ಗಮನಕ್ಕೆ ಬರುವಷ್ಟು ಲಂಡನ್ ಮಾತ್ರ ನಮ್ಮ ಅನುಭವಕ್ಕೆ ಸಿಗುತ್ತದೆ.

ಇದರಿಂದ ಲಾಭವೂ ಆಯಿತು; ನಷ್ಟವೂ ಆಯಿತು. ಕಾದಂಬರಿಯ ಆಳ ಹೆಚ್ಚಾಯಿತು; ಹರಹು ಕಡಿಮೆಯಾಯಿತು. ಕಾದಂಬರಿಕಾರ ನಿಶ್ಚಯಿಸುವ ದೃಷ್ಟಿಕೋನವೇ ಮುಖ್ಯವಾಗಿ, ಲೇಖಕ ಸೃಷ್ಟಿಸುವ ಪ್ರಪಂಚ ಈ ದೃಷ್ಟಿಕೋನಕ್ಕೆ ಬದ್ಧವಾಯಿತು. ಆಯಾಯ ಲೇಖಕ ಆರಿಸಿಕೊಳ್ಳುವ ದೃಷ್ಟಿಕೋನದ ಮೇಲೆಯೇ ಎಲ್ಲವೂ ನಿಂತಾಗ ಈ ದೃಷ್ಟಿಕೋನದ ಹಿಂದಿರುವ ಪ್ರಪಂಚದ ಬಗೆಗಿನ ತಾತ್ವಿಕ ನಿಲುವು ಪ್ರಮುಖವಾಯಿತು. ಈ ತಾತ್ವಿಕ ನಿಲುವಿನಲ್ಲಿ ವೈವಿಧ್ಯ ಕಡಿಮೆಯಾಗುತ್ತಾ ಹೋದಂತೆ ಒಂದೇ ಬಗೆಯ ಪ್ರಪಂಚ ಎಲ್ಲ ಕಾದಂಬರಿಗಳಲ್ಲೂ ಸೃಷ್ಟಿಯಾಗುವುದು ಸಾಧ್ಯ. ಹೀಗೆ ಬಾಹ್ಯ ಪ್ರಪಂಚದ ಆಗುಹೋಗುಗಳು ಒಂದೋ ಗೌಣವಾಗಿ ಅಥವಾ ಅಂತರಂಗ ಪ್ರಪಂಚದ ಆಗುಹೋಗುಗಳ ಬರಿಯ ಸಂಕೇತಗಳಾಗಿ, ವ್ಯಕ್ತಿಯ ಒಳಗೂ ಹೊರಗೂ ಇರುವ ನಿಜಗಳಿಗೆ ನಡುವೆ ಇರಬಹುದಾದ ಅನೇಕ ಕೊಂಡಿಗಳು ಕಳಚಿಕೊಂಡವು.

ಗಂಭೀರವಾದ ಕೃತಿಗಳಲ್ಲಿ ಬಾಹ್ಯಪ್ರಪಂಚದ ನೇರ ಚಿತ್ರಣ ಮಾಯವಾದರೂ ಸಹ ಜನಪ್ರಿಯ ಲೇಖಕರಲ್ಲಿ ಮಾತ್ರ ಇವುಗಳ ಉತ್ತೇಜನಕಾರಿ ಚಿತ್ರಣಗಳು ಸಿಗುತ್ತಾ ಹೋದವು. ಆದರೆ ಈ ಜನಪ್ರಿಯ ಲೇಖಕರು ಸೃಷ್ಟಿಸಿರುವ ಪ್ರಪಂಚಕ್ಕೆ ಒಂದು ಕೇಂದ್ರ ಬಿಂದುವಿಲ್ಲ. ಹೆನ್ರಿಜೇಮ್ಸ್, ಲಾರೆನ್ಸ್, ವರ್ಜಿನಿಯಾ ವೂಲ್ಫ್ ಕವಿಗಳು: ಆದರೆ ಬೆನೆಟ್, ವೇಲ್ಸ್, ಗಾಲ್ಸ್‌ವರ್ದಿ ಉತ್ತಮ ವರದಿಗಾರರು. ಹೀಗೆ ಬಾಹ್ಯ – ಅಂತರಂಗ ಪ್ರಪಂಚಗಳ ನಡುವೆ ಕಂದಕ ಬಿದ್ದು, ಕಾದಂಬರಿಕಾರರ ನಡುವೆಯೂ ದೊಡ್ಡ ಅಂತರ ಏರ್ಪಟ್ಟಿತು. ತತ್ಪರಿಣಾಮವಾಗಿ ಎರಡು ವರ್ಗಗಳಲ್ಲೂ ಅತಿ ಸಾಮಾನ್ಯರು ಹುಟ್ಟಿಕೊಂಡರು.

ಕನ್ನಡ ಕಾದಂಬರಿಕಾರ ತನ್ನ ಬೌದ್ಧಿಕ ಪ್ರಪಂಚದಲ್ಲಿ ಇಪ್ಪತ್ತನೇ ಶತಮಾನದಲ್ಲಿದ್ದರೂ, ಅವನ ಆರ್ಥಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಮಾತ್ರ ಇನ್ನೂ ಒಂದೆರಡು ಶತಮಾನ ಹಿಂದೆ ಇದ್ದಾನೆ. ಅಂದರೆ ಇವನು ಡಿಕನ್ಸ್, ಟಾಲ್‌ಸ್ಟಾಯ್, ಬೆಕಟ್, ಕಾಮೂ ಎಲ್ಲರಿಗೂ ಒಂದೇ ಕಾಲದಲ್ಲಿ ಸಮಕಾಲೀನನಾಗಿದ್ದಾನೆ. ಆದ್ದರಿಂದ ನಮ್ಮಲ್ಲಿ ‘ಗ್ರಾಮಾಯಣ’, ‘ಬಿರುಕು’, ‘ಹಳದಿ ಮೀನು’ ಒಂದೇ ಕಾಲದಲ್ಲಿ ಬರುತ್ತಿರುವುದು ಅತ್ಯಂತ ಸಹಜವಾದದ್ದು. ವಾಸ್ತವ ಮಾರ್ಗದಲ್ಲಿ ಬರೆಯುವುದು ಸರಿಯೋ, ನವ್ಯಮಾರ್ಗ ಸರಿಯೋ ಎಂದು ನಾವು ಮಾಡುವ ಚರ್ಚೆಗಳೆಲ್ಲ ಒಣ ಹರಟೆಗಳೆಂದು ಈ ಕಾರಣದಿಂದ ನನಗೆ ಅನ್ನಿಸುತ್ತದೆ.

ನಮ್ಮ ಜಾತಿಪದ್ಧತಿಗಳಲ್ಲಿ ಆಗುತ್ತಿರುವ ಮಾರ್ಪಾಟುಗಳು ಇಂಗ್ಲೆಂಡಿನಲ್ಲಿ ೧೮ – ೧೯ನೇ ಶತಮಾನದಲ್ಲಿ ನಡೆದ ಬದಲಾವಣೆಗಳನ್ನು ನೆನಪಿಗೆ ತರುವಂತಿವೆ. ನಮ್ಮ ಆಚಾರ ವಿಚಾರಗಳು, ನಮ್ಮ ಧಾರ್ಮಿಕ ಕಲ್ಪನೆಗಳು ಇತ್ಯಾದಿಗಳಲ್ಲಿ ಈಚೆಗೂ ಸೂಕ್ಷ್ಮ ಬದಲಾವಣೆಗಳು ಆಗುತ್ತಿವೆ. ತಂದೆ ಇದ್ದ ವರ್ಗಕ್ಕೂ, ಮಗ ಇರುವ ವರ್ಗಕ್ಕೂ ನಡುವೆ – ಆದ್ದರಿಂದ ಇಬ್ಬರ ಜೀವನ ದೃಷ್ಟಿಗೂ ನಡುವೆ – ದೊಡ್ಡ ಅಂತರಗು ಕಾಣಿಸಿಕೊಳ್ಳುತ್ತಿವೆ. ಪೂರ್ವನಿಶ್ಚಿತ ನಂಬಿಕೆಗಳು, ಜಾತಿಯ ಕಟ್ಟುಪಾಡುಗಳು, ನಿರ್ಬಂಧವಾಗಿ, ವಿಶಾಲವಾಗಿ ಕಾಣಿಸುತ್ತಿದೆ. ಹಾಗೆಯೇ ಕೆಲವರಿಗೆ ಇವೆಲ್ಲವೂ ಅರ್ಥಹೀನವಾಗಿಯೂ ಕಾಣುತ್ತಿರಬಹುದು. ಒಟ್ಟಿನಲ್ಲಿ ಇದು ಮಹತ್ತರ ಬದಲಾವಣೆಗಳಾಗುತ್ತಿರುವ ಸಂಕ್ರಮಣ ಕಾಲ. ಬರೀ ಸಂದರ್ಭದ ದೃಷ್ಟಿಯಿಂದ ನೋಡಿದಾಗ ಇದು ಅತ್ಯಂತ ದೊಡ್ಡ ಕಾದಂಬರಿಗಳು ಹುಟ್ಟಬಲ್ಲಕಾಲ. ವ್ಯಕ್ತಿ – ಸಮಾಜದ ಸಂಬಂಧದ ಬಗ್ಗೆ ಎಲ್ಲವನ್ನೂ ಹೇಳಿ ಮುಗಿಸಿಯಾಗಿದೆ. ಇನೂ ಏನೂ ಉಳಿದಿಲ್ಲ – ಎಂದು ನಮ್ಮವರಿಗೆ ಪಾಶ್ಚಾತ್ಯರಿಗೆ ಅನ್ನಿಸುವಂತೆ ಖಂಡಿತ ಅನ್ನಿಸಬೇಕಾಗಿಲ್ಲ. ಯಾಕೆಂದರೆ ಸಮಾಜಶಾಸ್ತ್ರ, ಮನಃಶಾಸ್ತ್ರ ಸಾಕಷ್ಟು ಬೆಳೆದಿರುವ ಈ ದೇಶದಲ್ಲಿ ಕಾದಂಬರಿಕಾರ ತಾನೇ ಪ್ರಥಮತಃ ಗುರುತಿಸಬೇಕಾದ ಎಷ್ಟೋ ಸಂಗತಿಗಳು ನಮ್ಮ ಸಮಾಜದಲ್ಲಿ ಉಳಿದಿವೆ.

ಸಮಾಜಶಾಸ್ತ್ರ ಎಷ್ಟು ಬೆಳೆದರೂ ಸಹ ಶಾಸ್ತ್ರ ಹೇಳಲಾರದ ವಿಶಿಷ್ಟ ಸತ್ಯವನ್ನು ಕಾದಂಬರಿಕಾರ ಹೇಳಬಲ್ಲವನಾದ್ದರಿಂದಲೇ ಸಾಹಿತ್ಯಕ್ಕೆ ಮಹತ್ವ ಬರುವುದು. ಶಾಸ್ತ್ರ ಸಾಮಾನ್ಯ ತತ್ವಗಳನ್ನು ಹೇಳಿದರೆ, ಸಾಹಿತ್ಯ ಮಹತ್ವಪೂರ್ಣವಾದ ವಿಶಿಷ್ಟ ವಿವರಗಳ ಮೂಲಕ ಸತ್ಯವನ್ನು ಸಂಕೀರ್ಣವಾಗಿ ನಮ್ಮೆದುರು ಇಡುತ್ತದೆ. ಆದ್ದರಿಂದ ಒಂದು ವಿಧದಲ್ಲಿ ನೋಡಿದರೆ ಪಾಶ್ಚಾತ್ಯರಲ್ಲಿ ಸಮಾಜಶಾಸ್ತ್ರ, ಕಾದಂಬರಿಯು ನಿರ್ವಹಿಸಬೇಕಾದ ಅಗತ್ಯಗಳನ್ನು ಸಂಕುಚಿತಗೊಳಿಸಿತು ಎನ್ನುವುದು ತಪ್ಪು. ಅಂದರೆ : “ಇದು ಈ ವೃತ್ತಿಯವನ ಬಗ್ಗೆ ಬರೆದ ಕಾದಂಬರಿ, ಅಥವಾ ಈ ಪ್ರದೇಶದ ಬಗ್ಗೆ ಬರೆದ ಕಾದಂಬರಿ” ಎಂದು ಕರೆಸಿಕೊಳ್ಳಬಹುದಾದ ಕಾದಂಬರಿಗಳಿಗೆ ಸ್ಥಾನವಿಲ್ಲದೆ ಹೋಯಿತು – ಸಮಾಜಶಾಸ್ತ್ರ ಬೆಳೆಯುತ್ತಾ ಹೋದಂತೆ – ಎಂಬುದು ಮಾತ್ರ ನಿಜ. ಆದ್ದರಿಂದಲೇ ‘ಕಾನೂರು ಹೆಗ್ಗಡತಿ’ ಮಲೆನಾಡಿನ ಬಗ್ಗೆ ಬರೆದ ಕಾದಂಬರಿ, ‘ಕುಡಿಯರ ಕೂಸು’ ಒಂದು ಜನಾಂಗದ ಜೀವನವನ್ನು ಚಿತ್ರಿಸುವ ಕತೆ ಎಂದು ನಾವು ಆ ಕೃತಿಗಳನ್ನು ಹೊಗಳುವಾಗ ಸಮಾಜಶಾಸ್ತ್ರ ಮಾಡಬಹುದಾದ ಕೆಲಸವನ್ನು ಈ ಕೃತಿಗಳು ಮಾಡಿವೆ ಎಂದಷ್ಟೆ ಹೇಳಿದ ಹಾಗಾಗುತ್ತದೆ. ಅಂದರೆ ಈ ಕತೆಗಳಿಗೆ ಕಾದಂಬರಿಯ ಪ್ರಕಾರದ ಅನಿವಾರ್ಯತೆಯನ್ನು ನಮ್ಮ ವಿಮರ್ಶಾಕ್ರಮ ಸೂಚಿಸಿದ ಹಾಗೆ ಆಗುವುದಿಲ್ಲ. ಮನಸ್ಸಿನ ಕೆಲವು ‘ಕಾಂಪ್ಲೆಕ್ಸ್’ಗಳ ಬಗ್ಗೆ ಬರೆಯಲ್ಪಡುವ ಮನಃಶಾಸ್ತ್ರ ಪ್ರೇರಿತ ಕಾದಂಬರಿಗಳ ಬಗ್ಗೆಯೂ ಈ ಮಾತುಗಳು ನಿಜ. ಮನಃಶಾಸ್ತ್ರ ಚೆನ್ನಾಗಿ ನಿರ್ವಹಿಸಬಲ್ಲದ್ದನ್ನು ಕಾದಂಬರಿಕಾರ ಯಾಕೆ ಮಾಡಬೇಕು?

ಕನ್ನಡ ಕಾದಂಬರಿಕಾರ ಇನ್ನೂ ಸಾಧಿಸಬೇಕಾದ್ದು ಇದೆ ಅನ್ನುವಾಗ ನಮ್ಮ ಸಮಾಜದ ಬಗ್ಗೆ ಆಗಲಿ, ನಮ್ಮ ಮನಸ್ಸಿನ ಬಗ್ಗೆ ಆಗಲಿ ಶಾಸ್ತ್ರಗಳ ಹೇಳಲಾರದ್ದನ್ನು ಸಾಹಿತಿ ಹೇಳಬಲ್ಲ ಎಂದು ನಾವು ನಂಬಿದಾಗ ಮಾತ್ರ ಸಾಧ್ಯ. ಆದ್ದರಿಂದಲೇ ಪ್ರಾದೇಶಿಕ ಕಾದಂಬರಿ, ಮನೋವಿಶ್ಲೇಷಣಾತ್ಮಕ ಕಾದಂಬರಿ ಎಂಬ ಚೌಕಟ್ಟುಗಳಿಗೆ ಸಿಕ್ಕಿ ಹಾಕಿಕೊಳ್ಳದೆ ಸೃಷ್ಟಿಶೀಲ ಲೇಖಕ ಬರೆಯಬೇಕಾಗುತ್ತದೆ. ಕಾದಂಬರಿ ಎಂದರೆ ವರದಿಯೂ ಅಲ್ಲ; ಗೈಡೂ ಅಲ್ಲ; ಕಾದಂಬರಿಕಾರ ತಾನು ಆರಿಸಿಕೊಂಡು ಪ್ರಪಂಚದಿಂದ ಹುಡುಕಿ ಮೂಡಿಸುವ ಜೀವನದೃಷ್ಟಿ. ಹೀಗೆ ತಿಳಿದಾಗ ಮಾತ್ರ ನಮ್ಮ ಕಾದಂಬರಿಗೆ ಆಶಾದಾಯಕ ಭವಿಷ್ಯ ಸಾಧ್ಯ.

ಬಾಹ್ಯ ಜಗತ್ತನ್ನು ವಿವರಿಸುವ, ಬದಲಾಯಿಸುವ ಜವಾಬ್ದಾರಿಯನ್ನು ಸಮಾಜ ಶಾಸ್ತ್ರಜ್ಞರಿಗೋ, ರಾಜಕಾರಣಿಗಳಿಗೋ ಬಿಟ್ಟು ಕೊಟ್ಟು ಲೇಖಕ ತೀರ ಅಂತರ್ಮುಖಿಯಾಗಿ, ಪಾಶ್ಚಿಮಾತ್ಯ ದೇಶಗಳ ಕೆಲವು ಲೇಖಕರಂತೆ ಕಾದಂಬರಿಯನ್ನು ಕ್ಷೀಣಗೊಳಿಸಿ ಬಿಡಬಹುದು. ಅಥವಾ ಬಾಹ್ಯಪ್ರಪಂಚವನ್ನು ಮನೋರಂಜಕವಾಗುವಂತೆ, ಅಥವಾ ಇದ್ದುದನ್ನು ಇದ್ದಂತೆಯೇ ಚಿತ್ರಿಸುವನೆಂದು ಹೊರಟ ಲೇಖಕ ಬರಿಯ ವರದಿಗಳನ್ನು ಸೃಷ್ಟಿಸಿಬಿಡಬಹುದು. ಆದರೆ ನಾವು ಬದುಕುತ್ತಿರುವ ಈ ಪರ್ವಕಾಲದಲ್ಲಿ ಬದಲಾಗುತ್ತಿರುವ ಬಾಹ್ಯಪ್ರಪಂಚ ಮತ್ತು ತತ್ಪರಿಣಾಮವಾಗಿ ಸಂಘರ್ಷಕ್ಕೆ ಸಿಕ್ಕ ಮನುಷ್ಯನ ಮನಸ್ಸು ಎರಡನ್ನೂ ಒಟ್ಟಿಗೆ ಸೃಷ್ಟಿಸಬಲ್ಲ ಲೇಖಕ ಮಾತ್ರ ನಮ್ಮ ಕಾದಂಬರಿ ಲೋಕದಲ್ಲಿ ಹೊಸತನ್ನು ಸಾಧಿಸಬಲ್ಲ.

—-
ಪ್ರಬುದ್ಧ ಕರ್ನಾಟಕಚಿನ್ನದ ಹಬ್ಬದ ನಿಮಿತ್ತ ನಡೆದ ಸೆಮಿನಾರಿನಲ್ಲಿ ಓದಿದ ಪ್ರಬಂಧ, ೧೯೬೮.

* * *