ಕನ್ನಡ ಸಾಹಿತ್ಯದ ಮೇಲೆ ಗಾಂಧಿವಾದದ ಪ್ರಭಾವ, ಸ್ವಾತಂತ್ರ್ಯ ಸಂಗ್ರಾಮ ಕನ್ನಡದ ಮೇಲೆ ಮಾಡಿದ ಪರಿಣಾಮದ ದೃಷ್ಟಿಯಿಂದ (ಅಂದರೆ ಐತಿಹಾಸಿಕ ದೃಷ್ಟಿಯಿಂದ) ಮಹತ್ವವಾದ್ದು. ಈ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮ ಮಹಾರಾಜರ ಆಡಳಿತದಲ್ಲಿದ್ದ ಮೈಸೂರು ಸಂಸ್ಥಾನದ ಮೇಲೆ ಆದದ್ದಕ್ಕಿಂತ ಉಳಿದ ಕನ್ನಡ ಪ್ರದೇಶಗಳ ಮೇಲೆ ಹೆಚ್ಚು ತೀವ್ರವಾದದ್ದು ಎಂಬುದೂ ನೆನಪಿಡಬೇಕಾದ ಐತಿಹಾಸಿಕ ಸತ್ಯ. ಆದ್ದರಿಂದ ಈ ಎರಡು ಪ್ರದೇಶಗಳ ಮೇಲಾದ ಗಾಂಧಿ ಪ್ರಭಾವವನ್ನು ಪ್ರತ್ಯೇಕವಾಗಿ ಅಭ್ಯಾಸಮಾಡಿ ಹೋಲಿಸಿ ನೋಡುವುದರಿಂದ ಸಾಹಿತ್ಯ ವಿದ್ಯಾಥಿಗೆ ಲಾಭವಾದೀತು.

ಉದಾಹರಣೆಗೆ ಉತ್ತರ ಕರ್ನಾಟಕವನ್ನು ತೆಗೆದುಕೊಳ್ಳೋಣ. ಬೇಂದ್ರೆ ಈ ಪ್ರದೇಶದವರು, ಇವರ ಕಾವ್ಯ ಧಾರವಾಡದ ನೆಲಮುಗಿಲಿನ ಎಲ್ಲ ಸ್ವಾರಸ್ಯವನ್ನೂ ಹೀರಿ ಹುಟ್ಟಿದ್ದು, ಉತ್ತರ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ಹೆಚ್ಚು ಬಿಸಿಯಾಗಿತ್ತು; ಅಂದರೆ ಸಾಮಾನ್ಯ ಜನರನ್ನೂ ಒಳಪಡಿಸಿತ್ತು. ಪ್ರಜ್ಞಾವಂತರು ಮತ್ತು ಸಾಮಾನ್ಯರು ಕೂಡಿ ದುಡಿದ ಈ ಚಳವಳಿ ತನ್ನ ಪ್ರದೇಶಕ್ಕೆ ಸೂಕ್ಷ್ಮವಾಗಿ ಸ್ಪಂದಿಸಬಲ್ಲ ಮನಸ್ಸುಳ್ಳ ಒಬ್ಬ ಲೇಖಕನ ಮೇಲೆ ಯಾವ ರೀತಿಯ ಪರಿಣಾಮ ಮಾಡಿದ್ದೀತು ನೋಡಬೇಕು. ಪ್ರಜ್ಞಾವಂತರಾದ ಬೇಂದ್ರೆ ಸಾಮಾನ್ಯರ ಸೃಷ್ಟಿಯಾದ ಜಾನಪದ ಸಾಹಿತ್ಯದ ಲಯ ಭಾಷೆಗಳನ್ನು ತನ್ನ ಕಾವ್ಯದ ಅಭಿವ್ಯಕ್ತಿ ಕ್ರಮವಾಗಿ ಮಾಡಿಕೊಂಡಿದ್ದಕ್ಕೆ ಸ್ವಾತಂತ್ರ್ಯ ಸಂಗ್ರಾಮ ಬಹುಮುಖ್ಯ ಕಾರಣವೆನ್ನಬಹುದೆ? ಮೂಕರಾಗಿದ್ದ ಜನ ಹೋರಾಟದಲ್ಲಿ ಎಚ್ಚರಾದ್ದಕ್ಕೂ, ಆ ಜನರ ಸುಪ್ತಶಕ್ತಿ ಉಸಿರಾಡುತ್ತಿದ್ದ ಭಾಷೆ ಲಯಗಳು ವಿದ್ಯಾವಂತ ಕವಿಯೊಬ್ಬನ ಮಾಧ್ಯಮವಾದ್ದಕ್ಕೂ ನಡುವೆ ಸಂಬಂಧ ಹುಡುಕಬಹುದೆ? ಇಲ್ಲದಿದ್ದಲ್ಲಿ ಶ್ರೀಮಂತ ಸುಸಂಸ್ಕೃತ ವರ್ಗದವರು ನಿರ್ಮಿಸಿಕೊಂಡ ಸಾಂಪ್ರದಾಯಿಕ ಭಾಷೆ, ಲಯ, ಕವಿಸಮಯಗಳನ್ನು ಬೇಂದ್ರೆ ಬಿಟ್ಟು ಬರೆದದ್ದಕ್ಕೆ ಪ್ರೇರಕ ಶಕ್ತಿ ಯಾವುದು? ಬರಿ ಅವರ ರಸಪ್ರಜ್ಞೆಯಲ್ಲಾದ ಬದಲಾವಣೆಯೆ? ಅಥವಾ ಈ ಬದಲಾವಣೆಯನ್ನು ಗುಪ್ತವಾಗಿಯಾದರೂ ಪ್ರೇರೇಪಿಸಿದ ಪರಿಸರದಲ್ಲಾಗುತ್ತಿದ್ದ ಮಾರ್ಪಾಡುಗಳೆ?

ಈ ಪ್ರಶ್ನೆಗಳು ಮುಖ್ಯ; ಆದರೆ ಇದಕ್ಕೆ ಸರಳ ಉತ್ತರಗಳಿಲ್ಲ. ಒಂದು ಸಾಹಿತ್ಯಿಕ ಚಳವಳಿ ರಾಜಕೀಯ ಬದಲಾವಣೆಗಳ ಬರಿ ಪ್ರತಿಬಿಂಬವಲ್ಲ. ಕಾಲದ ಪ್ರಭಾವ ಎಷ್ಟೋ ಅಷ್ಟೇ ಕವಿಯ ಸ್ವಂತದ ವಿಶಿಷ್ಟ ತುರ್ತುಗಳೂ ಪರಸ್ಪರ ಹೊಸೆದು ಒಂದು ಸಾಹಿತ್ಯಕೃತಿ ಮೈದಾಳುತ್ತದೆಂಬುದನ್ನು ನಾವು ಮರೆಯದೆ ಈ ಬಗ್ಗೆ ಮಾತಾಡಬೇಕು.

ಈ ಶತಮಾನದ ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಜಡವಾಗಿತ್ತು. ಕೆಲವು ಪಂಡಿತರು ಇಂಗ್ಲಿಷ್ ಭಾವಗೀತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದರೂ ಹೊಸವಸ್ತು ಹಳೆಯ ಭಾಷೆ ಛಂದಸ್ಸಿನಲ್ಲಿದ್ದುದರಿಂದ ಪರಿಣಾಮಕಾರಿಯಾಗಲಿಲ್ಲ. ಹೊಸವಸ್ತುವಿಗೆ ಅವಶ್ಯವಾದ ಹೊಸರೂಪ ಕೊಡುವುದರ ಮೂಲಕ ಸಾಹಿತ್ಯ ಸನ್ನಿವೇಶವನ್ನು ಬದಲಾಯಿಸಿದವರೆಂದರೆ ಬಿ.ಎಂ.ಶ್ರೀಯವರು. ಬೇಂದ್ರೆ ಉತ್ತರ ಕರ್ನಾಟಕದ ಜನಭಾಷೆಯಲ್ಲಿ ಬರೆದರೆ, ಬಿ.ಎಂ.ಶ್ರೀ ಮಾತ್ರ ಮೈಸೂರಿನ ಸುಸಂಸ್ಕೃತ ವರ್ಗದವರ (ಅಂದರೆ ವಿದ್ಯಾವಂತ ಮಧ್ಯಮ ವರ್ಗದವರ) ಭಾಷೆಯನ್ನು ಉಪಯೋಗಿಸಿದರು. ಬಿ.ಎಂ.ಶ್ರೀ ರಾಜಭಕ್ತರು, ದೊಡ್ಡ ವಿದ್ವಾಂಸರು, ಸೂಕ್ಷ್ಮವಾದ ರಸದೃಷ್ಟಿಯಿದ್ದ ಈಸ್ತೇಟರು. ಬೇಂದ್ರೆಯ ಭಾಷೆಗೂ ಆ ಪ್ರದೇಶದ ಹಿಂದುಳಿದ ಜನರ ಭಾಷೆಗೂ ಇರುವುದಕ್ಕಿಂತ ಹೆಚ್ಚಿನ ಅಂತರ, ಬಿ.ಎಂ.ಶ್ರೀ. ಭಾಷೆಗೂ ಮೈಸೂರಿನ ಶೂದ್ರ ಜನಾಂಗದವರ ಭಾಷೆಗೂ ಇದೆಯೆಂಬುದು ಗಮನಿಸಬೇಕಾದ್ದು. ಜಾತಿಯಲ್ಲಿ, ಭಾಷೆಯ ಬಳಕೆಯಲ್ಲಿ, ಉಡಿಗೆ ತೊಡಿಗೆಯಲ್ಲಿ, ಒಟ್ಟು ವ್ಯವಹಾರ ಸಂಸ್ಕೃತಿಗಳಲ್ಲಿ ಮೈಸೂರು ಸಂಸ್ಥಾನದ ವರ್ಗಗಳಿಗೂ, ಉತ್ತರ ಕರ್ನಾಟಕದ ಜನರಿಗೂ ವ್ಯತ್ಯಾಸವಿದೆಯೆಂದು ನನ್ನ ಭಾವನೆ. ಮೈಸೂರಿನ ಶೂದ್ರ – ಬ್ರಾಹ್ಮಣ ನಡೆನುಡಿಗಳಲ್ಲಿರುವಷ್ಟು ವ್ಯತ್ಯಾಸ ಧಾರವಾಡದ ಕಡೆಯವರಲ್ಲಿಲ್ಲವೆಂದು ನಾನು ತಿಳಿದಿದೇನೆ. ಈ ನನ್ನ ತಿಳಿವಳಿಕೆ ಚರ್ಚಾಸ್ಪದವಿರಬಹುದು. ಆದರೆ ನನ್ನ ಇಲ್ಲಿನ ಮುಖ್ಯ ಗಮನ ಬಿ.ಎಂ.ಶ್ರೀ – ಬೇಂದ್ರೆ ಪ್ರಯೋಗಗಳ ಮೂಲಪ್ರೇರಣೆಗಳ ಹೋಲಿಕೆಯಾದ್ದರಿಂದ, ಎರಡು ಪ್ರದೇಶಗಳಲ್ಲಿನ ಜನರ ನಡುವಿನ ನಡೆನುಡಿ ಅಂತರವನ್ನು ಸಾಹಿತ್ಯ ಸಂದರ್ಭಕ್ಕೆ ಅನ್ವಯಿಸಿ ಗ್ರಹಿಸಬೇಕೆಂದು ಕೇಳುತ್ತೇನೆ. ಜನರ ನಡುವೆ ಹೆಚ್ಚು ಸಾವಯವ ಕುಟುಂಬದಂತಹ ಸಂಬಂಧವಿದ್ದ ಪ್ರದೇಶದಲ್ಲಿ ಗಾಂಧಿ ಚಳವಳಿಯ ಸಂದರ್ಭದಲ್ಲಿ ಬೇಂದ್ರೆ ಬರೆದರು; ಇಂಗ್ಲಿಷ್ ಕಲಿಕೆಯಿಂದ ಪ್ರಗತಿಪರರಾಗುತ್ತಿದ್ದ ರಾಜಾಶ್ರಯದಲ್ಲಿದ್ದ ಮಧ್ಯಮ ವರ್ಗದವರ ಸುಸಂಸ್ಕೃತ ವಾಣಿಯಾಗಿ ಬಿ.ಎಂ.ಶ್ರೀ ಬರೆದರು. (ಬೇಂದ್ರೆ ಮಾರ್ಗ ಪ್ರಾದೇಶಿಕತೆ, ಜಾನಪದ ಸತ್ವಗಳಿಗೆ ಹೆಚ್ಚು ಮಹತ್ವ ಕೊಡುವಂಥದ್ದು; ಬಿ.ಎಂ.ಶ್ರೀ ಮಾರ್ಗ ಹೊರದೇಶಗಳ ಪ್ರಭಾವಕ್ಕೆ ತೆರೆದು ಕೊಂಡಿರುವ ಸಂಸ್ಕೃತ ನಾಗರಿಕ ಮನಸ್ಸಿನದು, ಮಾರ್ಗ – ದೇಸಿಗಳಂತೆಯೇ ಈ ಜಾನಪದ – ನಾಗರಿಕ ಮಾರ್ಗಗಳೂ ಇಂದಿನ ಕನ್ನಡ ಸಾಹಿತ್ಯದ ನೆಲೆ, ಬೆಲೆ, ಭವಿಷ್ಯಗಳನ್ನು ನಿರ್ಧರಿಸುವ ಮುಖ್ಯ ಡಯಲೆಕ್ಟಿಕ್ ಆಗಿವೆ. ಬೇಂದ್ರೆ, ಬಿ.ಎಂ.ಶ್ರೀಯವರ ಪ್ರಯೋಗಗಳು ಹೆಚ್ಚುಕಡಿಮೆ ಒಂದೇ ಕಾಲದಲ್ಲಿ ಬಂದವುಗಳು ಎಂಬುದು; ಮತ್ತು ಯೂರೋಪಿನ ಪ್ರಭಾವಕ್ಕೆ ತೆರೆದುಕೊಂಡ ನಮ್ಮ ಕೆಲವು ನವ್ಯರಲ್ಲಿ ಪ್ರಬಲವಾದ ಪ್ರಾದೇಶಿಕ ಜಾನಪದ ಸೆಳೆತಗಳು ಕಾಣಿಸುತ್ತಿರುವುದು ಆಳವಾಗಿ ಅಭ್ಯಾಸಮಾಡಬೇಕಾದ ಸಂಗತಿಗಳು.)

ಬಿ.ಎಂ.ಶ್ರೀಯವರನ್ನು ಈಸ್ತೇಟರು ಎಂದು ನಾನು ಕರೆದದ್ದಕ್ಕೆ ಕಾರಣವಿದೆ. ಇವರು ಭಾಷಾಂತರಿಸಿದ ಶೆಲ್ಲಿ, ವರ್ಡ್ಸ್‌ವರ್ಥ್, ಕೋಲ್‌ರಿಜ್‌ರ ಕಾವ್ಯದ ಬೇರುಗಳು ಅವರ ಸಾಮಾಜಿಕ, ರಾಜಕೀಯ, ವೈಯಕ್ತಿಕ ತಳಮಳದಲ್ಲಿ ಇವೆ. ಆದರೆ ಬಿ.ಎಂ.ಶ್ರೀ. ರಾಜಪ್ರಭುತ್ವ ವಾದಿಗಳು; ಶೆಲ್ಲಿಯಂಥವರ ಕ್ರಾಂತಿಕಾರಕತೆಯನ್ನು ಪ್ರಾಯಶಃ ಒಪ್ಪುತ್ತಿದ್ದವರಲ್ಲ. ಆದ್ದರಿಂದ ಬಿ.ಎಂ.ಶ್ರೀ. ರೊಮಾಂಟಿಕ್ ಕವಿಗಳ ಪದ್ಯಗಳನ್ನು ಹೊಸ ರೀತಿಯ ಬರವಣಿಗೆಗೆ ನೆವವಾಗಿ, ಹೊಸಬಗೆಯ ರಸಸೃಷ್ಟಿಗೆ ಅವಶ್ಯ ವಸ್ತುವಾಗಿ ಮಾತ್ರ ಕಂಡಿರಬಹುದೆಂದು ಅನುಮಾನವಾಗುತ್ತದೆ. ಜನಸಾಮಾನ್ಯರ ಜೀವನದೊಳಕ್ಕೆ ಗಾಂಧಿವಾದ ಉಂಟುಮಾಡಿದ ಪ್ರಭಾವಕ್ಕೂ, ವಿದ್ಯಾವಂತ ಮಧ್ಯಮ ವರ್ಗ ತಮ್ಮ ಪ್ರಗತಿಪರತೆಯ ಉತ್ಸಾಹದಲ್ಲಿ ಕ್ರಾಂತಿಕಾರಕ ಇಂಗ್ಲಿಷ್ ಸಾಹಿತ್ಯದಿಂದ ಪಡೆದ ಪ್ರಯೋಜನಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಮಧ್ಯಮ ವರ್ಗದ ಈಸ್ತೇಟ್ ನಿಲುವಿನಲ್ಲಿ ಕಾಣಬಹುದು. ಆದರೆ ಬಿ.ಎಂ.ಶ್ರೀಯವರ ಭಾಷಾಂತರಗಳ ಪರಿಣಾಮ ಕನ್ನಡಕ್ಕೆ ಹೊಸದೊಂದು ‘ರುಚಿ’ಯನ್ನು ಸೇರಿಸುವುದಷ್ಟಕ್ಕೆ ಪರಿಮಿತವಾಗಿ ಉಳಿಯಲಿಲ್ಲವೆಂಬುದನ್ನು ನಾವು ಮರೆಯಕೂಡದು. ಬಿ.ಎಂ.ಶ್ರೀ ಮಾರ್ಗ ಆ ಕಾಲದ ಯುವಕ ಲೇಖಕರ ಸುಪ್ತ ಶಕ್ತಿಯನ್ನು ಅರಳಿಸಬಲ್ಲ ಕಾವ್ಯಪಂಥವಾಯಿತು. ಕುವೆಂಪು, ಮಾಸ್ತಿ, ವಿಸೀಯಂತಹ ಲೇಖಕರು ಬಿ.ಎಂ.ಶ್ರೀ ರಚಿಸಿದ ಭಾಷೆ ಲಯಗಳನ್ನು ತಮಗೆ ಆಪ್ತವಾದ ಆಸಕ್ತಿಗಳನ್ನು ವ್ಯಕ್ತಪಡಿಸಲು ಉಪಯೋಗಿಸಿಕೊಂಡರು. ಇದನ್ನು ನಾನು ಹೇಳಲು ಕಾರಣ : ಆಗಿನ ನಮ್ಮ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಾತಾವರಣವನ್ನು ಗಾಂಧಿ ಚಳವಳಿ ಬದಲಾಯಿಸುತ್ತ ಇದ್ದುದರಿಂದಲೇ ಬಿ.ಎಂ.ಶ್ರೀಯವರ ರಸೈಕದೃಷ್ಟಿಯ ಪ್ರಯೋಗಗಳೂ ಸಹ ಅಷ್ಟಕ್ಕೇ ಪರಿಮಿತವಾಗಿ ಉಳಿಯದೆ ನಾವು ಭಾವಿಸುವ ಅರಿಯುವ ಕ್ರಮವನ್ನೂ ಬದಲಾಯಿಸುವಷ್ಟು ಸನ್ನಿವೇಶಕ್ಕೂ, ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಹುಟ್ಟಿಬಂದ ಈ ಸಾಹಿತ್ಯಪಂಥಕ್ಕೂ ನಡುವೆ ಇನ್ನು ಸೂಕ್ಷ್ಮವಾದ ಸಂಬಂಧವಿದೆ. ಅದನ್ನು ಕುರಿತು ಈಗ ಯೋಚಿಸೋಣ.

ಭಾರತವೆಂದರೆ ಏನು? ಭಾರತೀಯನಾಗಿರುವುದರ ಅರ್ಥವೇನು? ಎನ್ನುವ ನಮ್ಮ ನೈಜನೆಲೆಯ ಹುಡುಕಾಟವನ್ನು ನಾವು ಗಾಂಧೀಜಿಯಲ್ಲಿ ಕಾಣುತ್ತೇವೆ. ಭಾರತೀಯನ ಸ್ವಮರ್ಯಾದೆಯನ್ನು ಜಾಗೃತಗೊಳಿಸಲೆಂದು ಇವರ ಈ ನೆಲೆಯನ್ನು ಭಾರತದ ಪ್ರಾಚೀನ ಸಂಸ್ಕೃತಿಯಲ್ಲಿ, ಟಾಲ್‌ಸ್ಟಾಯ್, ಥೋರೋ, ರಸ್ಕಿನರಿಂದ ಅವರು ಪಡೆದ ಪ್ರೇರಣೆಗಳಲ್ಲಿ ಹುಡುಕಿದರು. ಅವರು ಹೀಗೆ ಹುಡುಕಿ ಪಡೆದ ಭಾರತದ ಚಿತ್ರ ಎಷ್ಟು ಕ್ರಿಯಾಶೀಲವಾದ ಮುನ್ನೋಟದ್ದೋ ಅಷ್ಟೇ ಅಳಿದುಹೋದದ್ದಕ್ಕಾಗಿ ಹಲುಬುವ ಹಿನ್ನೋಟದ್ದೂ ಆಗಿದೆ. ಭಾರತೀಯ ಪರಂಪರೆಯಿಂದಲೂ, ಪಾಶ್ಚಾತ್ಯ ವಿದ್ಯೆಯಿಂದಲೂ ಒಟ್ಟಿಗೇ ಪ್ರಭಾವಿತರಾದ ನಮ್ಮ ಲೇಖಕರು ಇದಕ್ಕೆ ಕುತೂಹಲಕಾರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಗಾಂಧೀಜಿ ‘ದರಿದ್ರನಾರಾಯಣ’ ನನ್ನು ಕುರಿತು ನಮಗೆ ಹೇಳಿದರು; ವರ್ಡ್ಸ್‌ವರ್ಥ್ ನಿಸರ್ಗದಿಂದ ಪರಕೀಯನಾಗದ ಮನುಷ್ಯನ ಬಗ್ಗೆ ಮಾತಾಡಿದ. ಇಂಗ್ಲಿಷ್ ರೊಮಾಂಟಿಕ್ ಕಾವ್ಯದಿಂದ ಪ್ರಭಾವಿತರಾಗಿ ಭಾರತದ ಪುನ ರುಜ್ಜೀವನದ ಕಾಲದಲ್ಲಿ ಬದುಕುತ್ತಿದ್ದ ನಮ್ಮ ಲೇಖಕರು ಗಾಂಧಿಯ ಮೂಲಕ ವರ್ಡ್ಸ್‌ವರ್ಥ್‌ನನ್ನೂ, ವರ್ಡ್ಸ್‌ವರ್ಥನ ಮೂಲಕ ಗಾಂಧಿಯನ್ನೂ ಕಂಡುಕೊಂಡರು – ಎಂದು ನನಗೆ ಅನುಮಾನವಾಗುತ್ತದೆ. ಇದು ಪ್ರಜ್ಞಾಪೂರ್ವಕವಾಗಿ ಆಯಿತೆಂದು ನಾನು ಹೇಳುತ್ತಿಲ್ಲ. ಮನುಷ್ಯ ಸ್ವಭಾವತಃ ಒಳ್ಳೆಯವನೆಂದೂ ಪ್ರೇಮದ ಮೂಲಕ ಮಾತ್ರ ಅವನನ್ನು, ಸಾಮಾಜಿಕ ವ್ಯವಸ್ಥೆಗಳಿಂದಾಗಿ ಅವನಲ್ಲಿ ಸೇರಿಕೊಂಡ ಕೆಡುಕಿನಿಂದ ಪಾರುಮಾಡಬಹುದೆಂದೂ ಶೆಲ್ಲಿ ನಂಬಿದ್ದ; ಗಾಂಧೀಜಿಯೂ ಸಹ ಮನುಷ್ಯ ಸ್ವಾಭಾವಿಕವಾಗಿ ಒಳ್ಳೆಯವನೆಂದೂ, ನಿರ್ಲಿಪ್ತವಾದ ದಯೆ ಅವನಿಗೆ ಸಾಧ್ಯವೆಂದೂ ನಂಬಿದ್ದರು. ಆದ್ದರಿಂದ ಬಹಳ ಸಂದಿಗ್ಧವಾದ ರೀತಿಯಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಚಳವಳಿ ನಾವು ಇಂಗ್ಲೆಂಡಿನ ರೊಮಾಂಟಿಕ್ ಕಾವ್ಯಕ್ಕೆ ತೋರಿಸಿದ ಪ್ರತಿಕ್ರಿಯೆಯನ್ನು ಬಲವಾದ ಸಂವೇದನೆಯಾಗಿ ಮಾರ್ಪಡಿಸಿತು.

ಭಾರತದ ನೈಜನೆಲೆ ಯಾವುದೆಂಬ ತಮ್ಮ ಹುಡುಕಾಟದಲ್ಲಿ ಗಾಂಧೀಜಿ ಭಾರತೀಯ ಭಾಷೆಗಳಿಗೆ ಮಹತ್ವದ ಸ್ಥಾನ ಕೊಟ್ಟರು. ಅವರ ಹಿಂದೆ ಯಾರೂ ನಮ್ಮ ಭಾಷೆಗಳ, ಬಗ್ಗೆ ಅಷ್ಟೊಂದು ಮಹತ್ವಕೊಟ್ಟು ಮಾತಾಡಿದ್ದಿಲ್ಲ. ಆದ್ದರಿಂದ ವಿವಿಧ ಮುಖಗಳ ಗಾಂಧೀಜಿಯ ಈ ಹೋರಾಟ – ಸಾಮಾನ್ಯರ ಭಾಷೆಯಲ್ಲಿ ಮಾತಾಡುವುದರ ಮೂಲಕ ಜನತೆಯನ್ನು ಹೋಗಿ ಮುಟ್ಟಿದ ಬುದ್ಧನ ಕ್ರಾಂತಿಕಾರಕ ತತ್ವಗಳಂತೆಯೇ – ಭಾರತೀಯ ಭಾಷೆಗಳಲ್ಲಿ ತೀವ್ರವಾದ ಜಾಗೃತಿಗೂ ಕಾರಣವಾಯಿತು. ಭಾರತದ ಆಧುನೀಕರಣದ ಬಗ್ಗೆ ನೆಹರು ಎಷ್ಟೇ ಉತ್ಸುಕರಾಗಿದ್ದರೂ ಸಹ, ಭಾರತೀಯ ಭಾಷೆಗಳಿಗೆ – ನಮ್ಮ ಜನತೆ ಚರಿತ್ರೆಯಲ್ಲಿ ಆಸಕ್ತ ಪಾಲುಗಾರರಾಗಲು ಅವಶ್ಯವಾದ ಜನರ ಭಾಷೆಗಳಿಗೆ – ಯಾವ ಸ್ಥಾನವಿರಬೇಕೆಂಬ ಬಗ್ಗೆ ಅತ್ಯಂತ ಸ್ಪಷ್ಟವಾದ ಧೋರಣೆಯನ್ನು ತಳೆದಿದ್ದವರೆಂದರೆ ಗಾಂಧೀಜಿಯವರು ಮಾತ್ರ. ಹೀಗೆ ಭಾರತೀಯ ಭಾಷೆಗಳ ಭವಿಷ್ಯದ ಬಗ್ಗೆ ಉತ್ಸಾಹ, ಜೊತೆಗೇ ಕ್ರಾಂತಿಕಾರಕ ಇಂಗ್ಲಿಷ್ ಸಾಹಿತ್ಯದ ಪ್ರಭಾವ – ಎರಡೂ ಕೂಡಿ ನಮ್ಮ ನವೋದಯ ಕಾಲದ ಸಾಹಿತ್ಯ ಗಾಂಧಿಯುಗದ ಆಸಕ್ತಿಗಳನ್ನು ತನ್ನದೇ ಆದ ರೀತಿಯಲ್ಲಿ ಅಳವಡಿಸಿಕೊಂಡಿತು. ಆದರೆ ಗಾಂಧಿಯುಗ ನಮ್ಮ ಸಾಹಿತ್ಯ ಸನ್ನಿವೇಶದ ಬದಲಾವಣೆಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿತು ಎಂದು ನಾವು ಹೇಳುವಾಗ ಈ ಪ್ರೇರಣೆ ಸರಳವೂ ನೇರವೂ ಆದದ್ದಲ್ಲವೆಂಬುದನ್ನೂ ಗಮನಿಸಬೇಕೆಂದು ನನ್ನ ಕೋರಿಕೆ.

ಈಗ ನಾನೊಂದು ಮುಖ್ಯ ಪ್ರಶ್ನೆಯನ್ನು ಎತ್ತಬಯಸುತ್ತೇನೆ. ಮಾರ್ಕ್ಸ್‌ವಾದ ಸಿಲೋನಿಯ ಘಾಂಟಮಾರ ಮತ್ತು ಮಾಲ್ರೋನ ಮ್ಯಾನ್ಸ್‌ಫೇಟ್‌ನಂತಹ ಕಾದಂಬರಿಗಳನ್ನು ಸೃಷ್ಟಿಸಿದೆ. ಮಾರ್ಕ್ಸ್‌ನ ಡಯಲೆಕ್ಟಿಕ್‌ನ ಸಹಾಯದಿಂದ ಕಲಾಕೃತಿ ರಚಿಸುವ ಪ್ರಯತ್ನವನ್ನು ಈ ಎರಡು ಕಾದಂಬರಿಗಳಲ್ಲೂ ನಾವು ಕಾಣುತ್ತೇವೆ. ಗಾಂಧಿವಾದ ಕನ್ನಡದಲ್ಲಿ ಈತನಕ ಇಂತಹ ಕೃತಿಯೊಂದನ್ನು ಕೊಟ್ಟಿದೆಯೆ? ಇದಕ್ಕೆ ನನ್ನ ಉತ್ತರ ‘ಇಲ್ಲ’ ಎಂದು. ಈ ಬಗ್ಗೆ ಕುರಿತು ಯೋಚಿಸಲು ನಾನು ನಿಮ್ಮ ಅನುಮತಿ ಬೇಡುತ್ತೇನೆ.

ಗಾಂಧೀಜಿಯವರ ಜೀವನತತ್ವ ಅನುಭಾವಪರವಾದ ಅಲೌಕಿಕ ದೃಷ್ಟಿಯದಲ್ಲ; ಸದ್ಯದ ಜೀವನಕ್ಕೆ ನೆರವಾಗಬಲ್ಲ ಧಾರ್ಮಿಕ ರೀತಿಯದು. ಗಾಂಧೀಜಿಗೆ ಸೌಂದರ್ಯ ಒಂದು ಮೌಲ್ಯವಲ್ಲ; ಟಾಗೂರರಂತೆ ಗಾಂಧಿ ರೂಪರಾಧಕರಲ್ಲ. ನಮ್ಮ ಅಸ್ತಿತ್ವಕ್ಕೆ ಸಂಬಂಧಪಟ್ಟ ವಾಸ್ತವತೆಗಳನ್ನು ವ್ಯಕ್ತಿ ಸಮಾಜಿಕವಲ್ಲದ ರೀತಿಯಲ್ಲಿ ಏಕಾಂಗಿಯಾಗಿ ಮೀರಿ ನಿಲ್ಲುವ ಅರವಿಂದರ ರೀತಿಯ ತಪಸ್ಸಿಗೂ ಗಾಂಧಿವಾದದಲ್ಲಿ ಎಡೆಯಿಲ್ಲ. ಆದ್ದರಿಂದ ನಮ್ಮ ನವೋದಯಕಾಲದ ಬರಹಗಾರರ ನೇಕರು ಹೃತ್ಪೂರ್ವಕವಾಗಿ ಗಾಂಧಿವಾದದಿಂದ ಆಕರ್ಷಿತರಾಗಲಿಲ್ಲ ಎಂದು ನನ್ನ ಅಭಿಪ್ರಾಯ. ನವೋದಯದ ನಮ್ಮ ಕವಿಗಳು ನಿಜವಾಗಿಯೂ ಪ್ರಭಾವಿತವಾದ್ದು ರಾಮಕೃಷ್ಣ ಮತ್ತು ಅರವಿಂದರ ತತ್ವಗಳಿಂದಲೇ ಎನ್ನಬಹುದು. ಕೀಟ್ಸ್‌ನ ‘Ode on a Grecian Urn’ ಪದ್ಯದ ಕೊನೆಯೆರಡು ಸಾಲುಗಳಲ್ಲಾಗಲೀ, ವರ್ಡ್ಸ್‌ವರ್ಥ್‌ನ ಅನುಭಾವಿಕ ನಿಸರ್ಗಪ್ರೀತಿಯಲ್ಲಾಗಲೀ, ಅಥವಾ ಮುಪ್ಪಿನಲ್ಲಿ ಯಃಕಶ್ಚಿತ್ ಪದಾರ್ಥವಾಗುವ ಈ ಬದುಕಿನಿಂದ ಪಾರಾಗಿ ತಾನೊಂದು ಕಾಲಾತೀತ ಕಲಾಕೃತಿಯಾಗಬೇಕೆಂಬ ಯೇಟ್ಸ್‌ನ ಬಯಕೆಯಲ್ಲಾಗಲೀ ಗಾಂಧೀಜಿಯವರಿಗೆ ಪ್ರಾಯಶಃ ಯಾವ ಬೆಲೆಯೂ ಕಾಣುತ್ತಿರಲಿಲ್ಲ. ಟಾಲ್‌ಸ್ಟಾಯ್‌ ತನ್ನ ಇಳಿವಯಸ್ಸಿನಲ್ಲಿ ತನ್ನ ಮೊದಲಿನ ಸಾಹಿತ್ಯಕೃತಿಗಳನ್ನು ಅರ್ಥಹೀನವೆಂದು ಕಾಣುತ್ತಿದ್ದನೆಂದು ನಾವು ಕೇಳುತ್ತೇವೆ. ಅನ್ನಕರನೀನದಂತಹ ಕಾದಂಬರಿಗಳನ್ನು ಬರೆಯುವುದು ಗಾಂಧೀಜಿಯವರಿಗೆ ಸಹ ಪ್ರಾಯಶಃ ಲೋಲುಪತೆಯಾಗಿ ಕಂಡಿದ್ದೀತು. ಆದ್ದರಿಂದ ರಾಮಕೃಷ್ಣ ಮತ್ತು ಅರವಿಂದರ ತತ್ವಗಳಲ್ಲಿ ತಮ್ಮ ಭಾವುಕತೆಗೆ ಅವಶ್ಯವಾದ ಹೊರದಾರಿಗಳನ್ನು ನಮ್ಮ ಲೇಖಕರು ಕಂಡುಕೊಂಡದ್ದು ಆಶ್ಚರ್ಯವಲ್ಲ; ಸೌಂದರ್ಯ ಮತ್ತು ಅನುಭಾವಗಳಿಗೆ ಅಂಟಿಕೊಂಡ ಮನಸ್ಸು ಮೂಲತಃ ಭಾವುಕತನದ್ದಾದ್ದರಿಂದ, ತನ್ನ ವಿವಿಧ ಭಾಗಳ ಸುಂದರ ಅಭಿವ್ಯಕ್ತಿಗೆಂದು ಮಾತ್ರ ಕಲಾಕೃತಿ ರಚಿಸುವ ಆತ್ಮರತ ಧೋರಣೆ ಯದಾದ್ದರಿಂದ ಗಾಂಧಿವಾದದ ಆತ್ಮಾರ್ಪಣೆಯ ನಿಷ್ಠುರ ವ್ರತದಿಂದ ನವೋದಯಕಾಲದ ಲೇಖಕರು ಪ್ರಭಾವಿತವಾಗದೆ ಇದ್ದುದು ಸಹಜವೇ ಸರಿ.

ಇದಕ್ಕೆ ನಾನೊಂದು ಉದಾಹರಣೆ ಕೊಡಬಯಸುತ್ತೇನೆ. ಮುವ್ವತ್ತರ ದಶಕದ ಪ್ರಾರಂಭದಲ್ಲಿ ಕುವೆಂಪುರವರು ಬರೆದ ಕಾನೂರು ಹೆಗ್ಗಡತಿ ಅನೇಕ ದೃಷ್ಟಿಗಳಿಂದ ಆಧುನಿಕ ಕಾದಂಬರಿಯೆಂದೇ ಅನ್ನಬೇಕು. ತನ್ನ ಗ್ರಾಮದ ಸಾಮಾನ್ಯರ ಜೊತೆಗಾಗಲಿ, ಅಥವಾ ತಾನು ಓದಿದ ನಗರದ ಶಿಷ್ಟ ವರ್ಗದ ಜನರ ಜೊತೆಗಾಗಲಿ ಬೆರೆಯಲಾರದ ಈ ಕಾದಂಬರಿಯ ನಾಯಕ ಹೂವಯ್ಯ ಕನ್ನಡ ಕಾದಂಬರಿ ಲೋಕದ ಮೊದಲನೆಯ ಪರಕೀಯ ವ್ಯಕ್ತಿ, ಹಾರ್ಡಿ ಕಾದಂಬರಿಯ ಕ್ಲಿಮ್‌ನಂತೆ ಇವನು ಕೂಡ ಮೂಢನಂಬಿಕೆಯಿಂದ ತೊಳಲುತ್ತಿರುವ ಹಳ್ಳಿಯವರನ್ನು ಉದ್ಧರಿಸಲು ಸ್ವಗ್ರಾಮಕ್ಕೆ ಹಿಂದಿರುಗುತ್ತಾನೆ. ಈ ಸಮಾಜಸುಧಾರಣೆಯ ಥೀಮು ಗಾಂಧಿಯುಗದ ಕಾದಂಬರಿಗಳಿಗೆ ವಿಶಿಷ್ಟವಾದ್ದು. ಆದರೆ ವರ್ಡ್ಸ್‌ವರ್ಥ್‌ಮತ್ತು ಭಾರತೀಯ ಅನುಭಾವದ ಮಿಶ್ರಣವಾದ ಹೂವಯ್ಯನ ಪ್ರಕೃತಿಪ್ರೇಮದಷ್ಟು ಅವನ ಈ ಸುಧಾರಕತನ ಗಾಢವಾದ ಭಾವನೆಯಲ್ಲ. ಹೂವಯ್ಯನಂಥವರ ಹೃದಯ ನಿಜವಾಗಿ ತೆರೆಯುವುದು ಪರಮಹಂಸರಿಗೇ ಹೊರತು ಗಾಂಧೀಜಿಯವರಿಗಲ್ಲ; ಆದರೂ ಅವನ ಭಾವುಕತೆ ಗಾಂಧೀಜಿ ಮತ್ತು ಪರಮಹಂಸರ ಮಿಶ್ರಣದಿಂದ ಹುಟ್ಟಿದ್ದು ಎನ್ನುವುದನ್ನು ಮರೆಯಕೂಡದು. ಕಾಮದ ಬಗ್ಗೆ ಅವನಿಗಿರುವ ಸಂಕೋಚಗಳು ಗಾಂಧಿವಾದದ ಮಡಿವಂತಿಕೆಯಿಂದ ಬಂದದ್ದಾದರೆ ಅವನ ಭಾವುಕತೆಯ ಅಭಿವ್ಯಕ್ತಿಗೆ ಪರಮಹಂಸ ರೀತಿಯ ಸಮಾಧಿ ಅವಶ್ಯವಾಗುತ್ತದೆ. ಕುವೆಂಪುರವರ ರಾಮಾಯಣ ದರ್ಶನ ಕಾವ್ಯದಲ್ಲೂ ಕೂಡ ಗಾಂಧಿ ಮತ್ತು ವಾಲ್ಮೀಕಿಯ ಧಾರ್ಮಿಕ ವ್ರತಶೀಲನಾದ ರಾಮನಿಗೆ ಬದಲಾಗಿ ಸೌಂದರ್ಯದ ಆರಾಧಕನಾದ ‘ರಸ ಋಷಿ’ ಕವಿ ರಾಮನನ್ನು ನಾವು ಕಾಣುತ್ತೇವೆ. ಬೇಂದ್ರೆ ಕೂಡ ಗಾಂಧೀಜಿಯವರಿಗಿಂತ ಅರವಿಂದರಿಗೇ ಹೆಚ್ಚು ಮಾರುಹೋದದ್ದು – ಇವರೊಂದು ಕವನ ಬರೆದು ಜೈಲಿನಲ್ಲಿರಬೇಕಾಗಿಬಂದಿದ್ದರೂ ಕೂಡ.

ನಮ್ಮ ಈ ಎಲ್ಲ ಲೇಖಕರೂ ಗಾಂಧೀಜಿಯವರ ದೈವಿಕ ವ್ಯಕ್ತಿತ್ವಕ್ಕೆ ತಲೆಬಾಗುತ್ತಾರೆ; ಆದರೆ ತಮ್ಮ ಕಲಾಕೃತಿಗಳಲ್ಲಿ ಗಾಂಧಿತತ್ವಗಳನ್ನು ಶೋಧನೆಗೆ ಹಚ್ಚುವುದಿಲ್ಲ. ಉಕ್ಕಿ ಹರಿಯುವ ಇವರ ಭಾವುಕತೆಗೆ ಸಾಮಾಜಿಕ ಮೌಲ್ಯಗಳಾದ ಆಚಾರ ಮತ್ತು ಶೀಲಗಳ ಮೇಲೇ ಘಾತ ಬೀಳುವ ಗಾಂಧೀಜಿಯವರ ಜೀವನದೃಷ್ಟಿ ಇಕ್ಕಟ್ಟಿನದಾಗಿ ಕಾಣುತ್ತದೆ. ಈ ಲೇಖಕರಿಗೆ ಮನುಷ್ಯ ಮುಖ್ಯವಾಗಿ ತನ್ನ ಭಾವನೆಗಳಲ್ಲಿ ವ್ಯಕ್ತವಾಗುವವನು; ಆತ್ಮರತನಾದವನು; ತನ್ನೊಳಗೆ ತನ್ನಷ್ಟಕ್ಕೇ ತೃಪ್ತವಾಗಬಲ್ಲ ಇವನ ಆತ್ಮಕ್ಕೆ ಸೌಂದರ್ಯ, ತನ್ಮೂಲಕ ದೊರಕುವ ಆನಂದ ಪರಮ ಮೌಲ್ಯಗಳಾದ್ದರಿಂದ, ಮನುಷ್ಯ ತನ್ನ ಹೊರಗಿರುವ ನೈಜ ಪ್ರಪಂಚದಲ್ಲಿ ಆಚಾರದ ಮೂಲಕ ಸಾರ್ಥಕನಾಗುವುದು, ಅಥವಾ ಘರ್ಷಣೆಗೆ ಸಿಕ್ಕಿ ತೊಳಲುವುದು ಗೌಣವಾದ್ದು. ಆದರೆ ಮನುಷ್ಯ ಜೀವನವನ್ನು ಸಾಮಾಜಿಕ ಜೀವನಕ್ಕೆ ಸಾಧನವಾಗಿ ಕಾಣುವ ಗಾಂಧಿಯವರ ಜೀವನದೃಷ್ಟಿ ನಿಷ್ಠುರವಾದುದು; ನಿರುದ್ದಿಶ್ಯವಾದ ಸೊಬಗಿನಲ್ಲಿ ಜೀವನ ಅರಳುವಂಥದ್ದು, ಸವಿಯಬಲ್ಲಂಥದ್ದು ಎನ್ನುವ ಧೋರಣೆಗೆ ಅವಕಾಶವಿಲ್ಲದ ಕಾಠಿಣ್ಯದ್ದು. ಗಾಂಧಿವಾದದ ಮಿತಿ ಶಕ್ತಿಗಳೆರಡೂ ಅದರ ಈ ಉದ್ದೇಶಪರತೆಯ ತೀವ್ರ ಕಾಠಿಣ್ಯದಲ್ಲಿ ಇದೆ. ಸೌಂದರ್ಯ ಮತ್ತು ಅನುಭಾವಗಳನ್ನೆ ಪರಮ ಮೌಲ್ಯಗಳೆಂದು ಕಾಣುವ ಲೇಖಕರ ಭಾವುಕತೆಯ (‘ಮಾರ್ದವ’ದ) ಊನಗಳೇನೆಂಬುದನ್ನು ನಾನು ವಿವರಿಸಬೇಕಾದ್ದಿಲ್ಲ. ನವೋದಯ ಲೇಖಕರ ಭಾವುಕತೆ ಗಾಂಧಿವಾದದ ನಿಷ್ಠುರತೆಯಿಂದ ವಂಚಿತವಾಗದೆ, ಹೊರಗುಳಿಯದೆ ವಿಧಿಯಿರಲಿಲ್ಲವೆನ್ನುವುದು ನನ್ನ ವಾದದ ಸಾರಾಂಶ.

ನಮ್ಮ ಹಿಂದಿನ ತಲೆಮಾರಿನ ಈ ಲೇಖಕರ ನಡುವೆ ಒಬ್ಬರನ್ನು ಮಾತ್ರ ಪ್ರತ್ಯೇಕಿಸಿ ನೋಡುವುದು ಸರಿಯಾದೀತು. ಕಾರಂತರು ಗಾಂಧಿವಾದಿಗಳಲ್ಲ; ಆದರೆ ಇವರೊಬ್ಬರು ಮಾತ್ರ ಗಾಂಧಿವಾದದ ಜೊತೆ ತಮ್ಮ ಕೃತಿಗಳಲ್ಲಿ ನಿಜವಾದ ಸಂವಾದ ನಡೆಸಿಕೊಂಡು ಬಂದಿರುವ ಲೇಖಕರು. ಇದಕ್ಕೆ ಕಾರಣ ಕಾರಂತರ ಜೀವನದೃಷ್ಟಿ ನೈತಿಕವಾದದ್ದು; ಅನುಭಾವಪರವಾದ ಅಲೌಕಿಕಕ್ಕೆ ಅವರ ಕೃತಿಗಳಲ್ಲಿ ಜಾಗವಿಲ್ಲದಿರುವುದು. ಬದುಕುವ ಕ್ರಿಯೆಯಲ್ಲಿ ಸಾರ್ಥಕವಾದದ್ದು – ಸ್ವಂತದ ದೃಷ್ಟಿಯಿಂದ ಹೇಗೋ ಹಾಗೇ ಸಮಾಜದ ದೃಷ್ಟಿಯಿಂದ ನಿಜವಾದದ್ದು – ಇವರಿಗೆ ಬೆಲೆಯುಳ್ಳದ್ದಾಗಿ ಕಾಣುತ್ತದೆ. ಆದಕಾರಣ ಗಾಂಧಿಯವರು ಉಪದೇಶ ಮಾಡಿದ ಆದರ್ಶ ಎಷ್ಟರ ಮಟ್ಟಿಗೆ ಸಾಮಾಜಿಕನಾದ ಮನುಷ್ಯನಿಗೆ ಆಚರಿಸಲು ಸಾಧ್ಯವೆಂಬುದನ್ನು ಮತ್ತೆ ಮತ್ತೆ ಇವರು ತಮ್ಮ ಕೃತಿಗಳಲ್ಲಿ ಶೋಧನೆಗೆ ಹಚ್ಚುತ್ತಾರೆ. ಆದ್ದರಿಂದ ಇವರ ಕೃತಿಗಳಲ್ಲಿ ಮಾತ್ರ ನೈತಿಕ ಮನುಷ್ಯ ಕೇಂದ್ರವಾಗಿ ಬರುತ್ತಾನೆ. ಇವತ್ತು ಕಾರಂತರು ಗಾಂಧಿವಾದವನ್ನು ಅಪಕ್ವ ಆದರ್ಶವೆಂದು, ಅಪಾಯಕಾರಿಯೆಂದು ಕಾಣಬಹುದಾದರೂ ಗಾಂಧಿವಾದವನ್ನು ಸೀರಿಯಸ್ಸಾಗಿ ಪರಿಗಣಿಸಿದ ಲೇಖಕರು ಇವರೊಬ್ಬರೆ. ‘ಪಾವನ’ ದೃಷ್ಟಿಯ ಉಳಿದ ಅನೇಕ ಮುಗ್ಧ ಲೇಖಕರಿಗೆ ಗಾಂಧಿವಾದ ಸ್ವಂತದ ಮತ್ತು ತಮ್ಮ ಹೊರಗಿನ ನಿಜಗಳಿಗೆ ಯಾವ ಸಂಬಂಧವನ್ನೂ ಕಲ್ಪಿಸಿಕೊಳ್ಳದ ಭಾವಾತಿರೇಕದ ಆದರ್ಶವಾದವಾಯಿತು. ಗಾಂಧಿವಾದದ ಹೆಸರಿನಲ್ಲಿ ಮಡಿವಂತಿಕೆ, ಮೂರ್ಖ ಪುರಾತನವಾದ, ಕಾಮಕ್ಕೆ ಸಂಬಂಧಿಸಿದ ಸಂಕೋಚಗಳು ಮತ್ತೆ ತಲೆಯೆತ್ತುವಂತಾಯಿತು. ಈ ಬಗೆಯ ಬರವಣಿಗೆ ಸಾಹಿತ್ಯವಲ್ಲವಾದ್ದರಿಂದ ಅದನ್ನು ಕುರಿತು ನಾನು ಹೆಚ್ಚು ಹೇಳುವುದಿಲ್ಲ. ಗಾಂಧಿಯವರ ವಿಚಾರದ ಜೊತೆ ಒಬ್ಬ ಪ್ರಾಮಾಣಿಕ ಲೇಖಕ ಹೇಗೆ ಸಂವಾದಿಸುತ್ತಾನೆ. ಈ ಸಂವಾದದಿಂದ ಏನು ಹುಟ್ಟುತ್ತದೆ ಎಂಬುದು ಮಾತ್ರ ಇಲ್ಲಿ ನನ್ನ ಆಸಕ್ತಿಯಾಗಿದೆ.

ರಾಜಕಾರಣವನ್ನು ಗಾಂಧೀಜಿ ನೈತಿಕ ಮನುಷ್ಯನ ಅವಶ್ಯಕ್ರಿಯೆಯಾಗಿ ಕಂಡರು; ವೈಯಕ್ತಿಕವಾಗಿ ನೆಚ್ಚಿದ ಮೌಲ್ಯಗಳನ್ನು ಸಾರ್ವಜನಿಕ ವ್ಯವಹಾರದಲ್ಲೂ ಆಚರಿಸಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಸ್ಥಾಪಿಸುವ ಹೋರಾಟವಾಗಿ ಭಾವಿಸಿದರು. ಕಾದಂಬರಿಕಾರನೊಬ್ಬ ತನ್ನ ಕೃತಿಯಲ್ಲಿ ಗಾಂಧಿಯವರ ವಿಚಾರವನ್ನು ಸತ್ಯದ ಶೋಧನೆಗೆ ಒಳಪಡಿಸಿದ್ದೇ ಆದರೆ ಆಗ ಅವನ ಕೃತಿ ನೈತಿಕ ಕರ್ಷಣಗಳನ್ನು ಸೂಚಿಸಬಲ್ಲ ಶಿಲ್ಪವಾಗಬೇಕಾಗುತ್ತದೆ. ಅಂದರೆ ಗಾಂಧಿವಾದವನ್ನು ಅವನು ‘ಪಾವನ’ ದೃಷ್ಟಿಯಿಂದ ಕಾಣದೆ ಗಾಂಧಿಯವರು ಸ್ವತಃ ತಮ್ಮ ವಿಚಾರಗಳನ್ನು ಹೇಗೆ ಸದಾ ಶೋಧಿಸಿಕೊಳ್ಳುತ್ತಿದ್ದರೊ ಹಾಗೆ ತನ್ನ ವಸ್ತುವನ್ನು ಅವನು ಶೋಧನಾತ್ಮಕ ದೃಷ್ಟಿಯಿಂದ ನೋಡಿದಾಗ ಇದು ಸಾಧ್ಯ. ಹರಿಜನರಿಗೆ ಪ್ರತ್ಯೇಕ ಸ್ಥಾನ ಬೇಡಿದ ಅಂಬೇಡ್ಕರ್‌ಜೊತೆ ಗಾಂಧಿಯವರು ನಡೆಸಿದ ಹೋರಾಟದಲ್ಲಿ, ಕೈಗೊಂಡ ಆಮರಣಾಂತ ಉಪವಾಸದಲ್ಲಿ ಇಂತಹ ಒಂದು ನೈತಿಕ ಕರ್ಷಣದ ವಸ್ತುವನ್ನು ನಾವು ಕಾಣಬಹುದು. ಆದರೆ ಇಂತಹ ಒಂದು ಸಮಸ್ಯೆಯನ್ನು ಕಾದಂಬರಿಯ ವಸ್ತುಮಾಡಿಕೊಳ್ಳಲು ಕಾದಂಬರಿಯ ಪ್ರಕಾರ ಭಾವಗೀತೆಯ ಉತ್ಕರ್ಷ ತನದ್ದಾಗದೆ, ನೈತಿಕ ಘರ್ಷಣೆಯ ನಾಟಕವನ್ನು ತೋರಿಸಬಲ್ಲ ಸಂಕೀರ್ಣತೆಯದ್ದಾಗಿರಬೇಕಾಗುತ್ತದೆ. ಗಾಂಧೀಜಿಯವರಿಗೆ ಸಾಮಾಜಿಕ ಲೋಕ ಮನುಷ್ಯನ ಅಂತರಂಗ ಲೋಕದಷ್ಟೆ ನಿಜವಾದದ್ದು. ಆದ್ದರಿಂದ ಇವರಿಗೆ ರಾಜಕಾರಣ ಅಧಿಕಾರದ ಹೋರಾಟವಾಗದೆ ಬೇರೆ ಬೇರೆ ಲೋಕ – ದೃಷ್ಟಿಗಳ ಘರ್ಷಣೆಯಾಗಿ, ನೈತಿಕ ವಿಕಾದ ರಂಗವಾಗಿ ಕಾಣುತ್ತದೆ. ಮನುಷ್ಯನ ಅಂತರಂಗ ಬಹಿರಂಗಗಳನ್ನು ವ್ಯಕ್ತಿ ಮತ್ತು ಸಮಾಜವನ್ನು – ಒಂದೇ ಸೂತ್ರದಲ್ಲಿ ಹಿಡಿಯಲಾರದ ಮನಸ್ಸಿಗೆ (ಮತ್ತು ಸಾಹಿತ್ಯ ಪ್ರಕಾರಕ್ಕೆ) ಗಾಂಧಿಯುಗದ ನಿಜವಾದ ಚಿತ್ರವನ್ನು ಕೊಡುವುದು ಅಸಾಧ್ಯವೆನ್ನಿಸುತ್ತದೆ.

ಗಾಂಧಿವಾದ Man’s Fate, Fountamara ದಂತಹ ಕೃತಿಗಳನ್ನು ತರಲಿಲ್ಲವೆಂದು ನಾನು ಈ ಮೊದಲ ಹೇಳಿದೆ. ನಮ್ಮ ದೇಶದಲ್ಲಿ ಆಗಿರುವ ಸಾಮಾಜಿಕ ಬದಲಾವಣೆಗಳನ್ನು ಇಡಿಯಾಗಿ (ಅಂದರೆ ವ್ಯಕ್ತಿ ಮತ್ತು ಸಮಷ್ಟಿ ಸ್ತರಗಳಲ್ಲೂ ವ್ಯಕ್ತವಾದ್ದಾಗಿ) ನಮ್ಮ ಲೇಖಕರು ಗ್ರಹಿಸಿದ್ದಾರೊ ಎಂದೇ ನನಗೆ ಕೆಲವೊಮ್ಮೆ ಅನುಮಾನವಾಗುತ್ತದೆ. ಗಾಂಧಿಯುಗದ, ವಾದದ ಪರಿಣಾಮ ನಮ್ಮ ದೇಶದ ಮೇಲೆ ಯಾವ ರೀತಿಯದೆಂದು ತಿಳಯಲು ನಮ್ಮ ಲೇಖಕರು ಕಾದಂಬರಿ ಪ್ರಕಾರವನ್ನು ಹೊಸ ಕಣ್ಣಿನಿಂದ ನೋಡಬೇಕಾಗುತ್ತದೆ. ಅಂದರೆ, ರಾಜಕೀಯ ಕಾದಂಬರಿ ನೈತಿಕ ಕರ್ಷಣದ ಶಿಲ್ಪವಾಗಬೇಕಾಗುತ್ತದೆ. ಮನುಷ್ಯನ ಅಂತರಂಗ – ಬಹಿರಂಗಗಳನ್ನು ಒಂದೇ ಸೂತ್ರದಲ್ಲಿ ಹಿಡಿಯಬಲ್ಲ, ಒಂದರಿಂದ ಇನ್ನೊಂದನ್ನು ಬಗೆಯಬಲ್ಲ ಹೆನ್ರಿ ಜೇಮ್ಸ್, ಕಾನ್ರಾಡ್, ಮಾಲ್ರೋರಂತಹ ಪ್ರತಿಭಾಶಾಲಿಗಳಿಗೆ ಮಾತ್ರ ಇದು ಸಾಧ್ಯ. ಸಾಮಾಜಿಕ ಸತ್ಯಗಳನ್ನು ಬರಿ ದಾಖಲೆಗೊಳಿಸಬಲ್ಲ ಪ್ರಗತಿಶೀಲರಿಗಾಗಲಿ, ಮನುಷ್ಯನ ಅಂತರಂಗದ ಬಗ್ಗೆ ಭಾವುಕವಾಗಿ ಮಾತ್ರ ಬರೆಯಬಲ್ಲ ನವೋದಯದವರಿಗಾಗಲಿ ಗಾಂಧಿಯುಗದ ಇಡಿಯ ಸತ್ಯ ಯಾಕೆ ದಕ್ಕದೆ ಹೋಯಿತೆಂಬುದನ್ನು ವಿವರಿಸಬೇಕಾಗಿಲ್ಲ.

ರಾಜಕಾರಣ ಅಧಿಕಾರಕ್ಕಾಗಿ ನಡೆಯುವ ಹೋರಾಟ ಮಾತ್ರವಲ್ಲವೆಂದು ಹೇಳಿದೆ. ವಿರುದ್ಧ ಲೋಕದೃಷ್ಟಿಗಳ ಘರ್ಷಣೆಯೆಂದು ರಾಜಕೀಯವನ್ನು ಕಂಡಾಗ ಕಾದಂಬರಿಕಾರನಿಗೆ ರಾಜಕೀಯ ಹೋರಾಟ ಅರ್ಥಪೂರ್ಣವಾದ ವಸ್ತುವಾಗುತ್ತದೆ. ಮೊದಲೇ ವಿವಿಧ ಧಾರ್ಮಿಕ ಪಂಥಗಳಲ್ಲಿ ಒಡೆದುಕೊಂಡಿರುವ ಲೋಕಕ್ಕೆ ಹೀಗೆ ಈ ಕಾಲದಲ್ಲಿ ರಾಜಕೀಯ ಬಿರುಕೂ ಸೇರಿಕೊಂಡಿದೆ. ಧಾರ್ಮಿಕ ತುಯ್ದಾಟ ಮೇಲ್ನೋಟಕ್ಕೆ ತಾತ್ವಿಕ ಘರ್ಷಣೆಯಾಗಿ ಕಾಣುತ್ತದೆ; ಅದರ ಮೂಲದಲ್ಲಿರುವ ವಾರ್ಗಿಕ ಸಾಮಾಜಿಕ ಬೇರುಗಳು ಸುಲಭವಾಗಿ ಪ್ರತ್ಯಕ್ಷವಾಗುವುದಿಲ್ಲ. ಆದರೆ, ರಾಜಕೀಯ ಘರ್ಷಣೆಯಲ್ಲಿ ಮಾತ್ರ ನಾವು ನಂಬಿರುವ ಅಮೂರ್ತ ತತ್ವಗಳಿಗಿರುವ ಸಾಮಾಜಿಕ ಬೇರುಗಳು ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. ಮನುಷ್ಯ ಯೋಚಿಸುವ, ಭಾವಿಸುವ ರೀತಿಗೂ ಅವನ ಜೀವನಕ್ರಮಕ್ಕೂ ಇರುವ ಅನ್ಯೋನ್ಯತೆಯ ಹುಡುಕಾಟದಲ್ಲಿ ಇದು ಮೊದಲನೆಯ ಹೆಜ್ಜೆ. ರಾಜಕೀಯ ಕಾದಂಬರಿಯ ನಿಜವಾದ ಸೊಗಸಿರುವುದು ಇಲ್ಲಿ : ರಾಜಕೀಯದಲ್ಲಿ ಪ್ರತಿ ವರ್ಗವೂ ತನ್ನ ಚಿಂತನೆ ಸರ್ವಸಮ್ಮತ, ಎಲ್ಲ ಕಾಲಕ್ಕೂ ಅನ್ವಯವಾಗುವ ಸತ್ಯ ಎಂದು ನಂಬಿರುತ್ತದೆ; ಆದರೆ ಪ್ರತಿವರ್ಗವೂ ತನ್ನ ವಿರೋಧಿಗಳ ವಿಚಾರ ಮಾತ್ರ ಸ್ವಹಿತಚಿಂತನೆಯಿಂದ ಹುಟ್ಟಿದ ಸ್ವಾರ್ಥ ಎಂದು ವಾದಿಸುತ್ತದೆ. ಒಬ್ಬನ ಬಣ್ಣವನ್ನು ಇನ್ನೊಬ್ಬ ಬಯಲುಮಾಡುವ ಈ ತಿಕ್ಕಾಟದಲ್ಲಿ ಅಮೂರ್ತ ತತ್ವಕ್ಕೂ, ಸಾಮಾಜಿಕ ಸತ್ಯಗಳಿಗೂ, ಆರ್ಥಿಕ ಸತ್ಯಗಳಿಗೂ, ಅನುಭವಕ್ಕೂ ಇರುವ ಅನೇಕ ಸಂಬಂಧಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಆದ್ದರಿಂದಲೇ ತಾತ್ವಿಕ ಕಾದಂಬರಿಯಲ್ಲಿರುವ ಅಮೂರ್ತತೆಯ ಅಪಾಯ ರಾಜಕೀಯ ಕಾದಂಬರಿಗಿಲ್ಲ; ಯಾಕೆಂದರೆ ಒಬ್ಬನನ್ನೊಬ್ಬ ಬಯಲು ಮಾಡುವ ರಾಜಕೀಯ ಹೋರಾಟ ವಿಚಾರಕ್ಕೂ, ಮನಃ ಸ್ಥಿತಿಗೂ, ಸಾಮಾಜಿಕ ವಾಸ್ತವತೆಗೂ ಇರುವ ಸಂಬಂಧಗಳನ್ನೂ ಗುರುತಿಸುವ – ವಿಚಾರವನ್ನು ಮೂರ್ತಗೊಳಿಸುವ – ಸಾಹಿತ್ಯಕ್ರಿಯೆಯೂ ಆಗಿಬಿಡುತ್ತದೆ.

ಅವಶ್ಯಕತೆ ಮತ್ತು ಸ್ವಾತಂತ್ರ್ಯ; ಸಾಮಾಜಿಕ – ಆರ್ಥಿಕ – ಮಾನಸಿಕ ಪರಿಮಿತಿಗಳು ತಂದೊಡ್ಡುವ ಮಿತಿಗಳು, ಮತ್ತು ಈ ಮಿತಿಗಳನ್ನು ಮೀರಲು ಮನುಷ್ಯ ಮಾಡುವ ಪ್ರಯತ್ನ; ಸಮಾಜ ಜೀವನದ ಸಂದರ್ಭದಲ್ಲಿ ಮನುಷ್ಯ ಸಾರ್ಥಕನಾಗುವ ಬಗೆಗಳು – ಈ ಪ್ರಶ್ನೆಗಳನ್ನು ಶ್ರೇಷ್ಠ ಕಾದಂಬರಿಕಾರರು ತಮ್ಮದೇ ಆದ ರೀತಿಗಳಲ್ಲಿ ಎದುರಿಸಿದ್ದಾರೆ. ಮನುಷ್ಯನನ್ನು ಕಟ್ಟುವ, ಮಿತಗೊಳಿಸುವ ಶಕ್ತಿಗಳ ನಡುವೆ ಮನುಷ್ಯ ಮೀರಿ ನಿಲ್ಲುವ ಈ ಹೋರಾಟ ವಿವಿಧ ಲೇಖಕರಿಗೆ ಬೇರೆ ಬೇರೆ ರೀತಿಯ ಸನ್ನಿವೇಶಗಳನ್ನು ಒದಗಿಸಿಕೊಟ್ಟಿದೆ. ಅಸ್ತಿತ್ವವಾದಿ ಲೇಖಕನಿಗೆ ದೇವರಿಲ್ಲವಾದ್ದರಿಂದ ಬದುಕು ಸಮಷ್ಟಿದೃಷ್ಟಿಯಿಂದ ಅರ್ಥಹೀನವಾಗಿಯೂ ವ್ಯಕ್ತಿಯ ನಿಲುವಿನಿಂದ ಅಸಂಗತವಾಗಿಯೂ ಕಾಣುತ್ತದೆ. ಅವನ ದ್ವಂದ್ವ ಇದು : “ಮನುಷ್ಯನ ಬದುಕಿಗೆ ಬೆಲೆ ಇಲ್ಲ. ಆದರೆ ಬದುಕಿನಷ್ಟು ಬೆಲೆಯುಳ್ಳದ್ದು ಇನ್ನು ಯಾವುದೂ ಇಲ್ಲ.” ಮಾಲ್ರೋನ ಪ್ರಕಾರ ಬದುಕಿನ ಡಯಲೆಕ್ಟಿಕ್ ಅಸಾಂಗತ್ಯ ಮತ್ತು ಅದನ್ನು ಮೀರುವ ಪ್ರಯತ್ನಗಳ ಧ್ರುವಗಳಲ್ಲಿ ಇದೆ. ಮನುಷ್ಯ ನನ್ನ ತನ್ನ ಅದೃಷ್ಟಕ್ಕೆ ತುಂಬ ಶಕ್ತಿಯುತವಾಗಿ ಮುಖಾಮುಖಿಯಾಗಿಸುವ ಸಾಹಿತ್ಯಪ್ರಕಾರ ಕಾದಂಬರಿಯಾದ್ದರಿಂದ ಎಲ್ಲ ಸಾಹಿತ್ಯ ಪ್ರಕಾರಗಳಿಗಿಂತಲೂ ಕಾದಂಬರಿ ಈ ಕಾಲದಲ್ಲಿ ಹೆಚ್ಚು ಬೆಲೆ ಪಡೆದಿದೆ ಎಂದು ಮಾಲ್ರೋ ಹೇಳುತ್ತಾನೆ.

ಗಾಂಧೀಜಿಗೆ ಬದುಕಿನ ಅರ್ಥವಿರುವುದು ನೈತಿಕ ವಿಕಾಸದಲ್ಲಿ. ಆದರೆ ವಿಪರ್ಯಾಸವೆಂದರೆ, ಈ ವಿಕಾಸಕ್ಕೆ ಗಾಂಧೀಜಿ ರಾಜಕಾರಣವನ್ನು ಕ್ಷೇತ್ರವಾಗಿ ಆರಿಸಿಕೊಂಡದ್ದು. ಯಾಕೆಂದರೆ ರಾಜಕಾರಣ ವಿರುದ್ಧ ವರ್ಗಹಿತಗಳೂ, ಲೋಕದೃಷ್ಟಿಗಳೂ ಕಚ್ಚಾಡುವ ವಾದಭೂಮಿಯಾದ್ದರಿಂದ ಮೂಲತಃ ನೀತಿಗೆ ಹೊರತಾದ್ದು, ನಿಷ್ಠುರ ಸ್ವರೂಪದ್ದು. ವೈಯಕ್ತಿಕ ಮೌಲ್ಯವಾದ ನೀತಿಯನ್ನು ಹೀಗೆ ಗೊಂದಲದ ಸಾರ್ವಜನಿಕ ಜೀವನದಲ್ಲಿ ಅನ್ವಯಿಸುವ ತಮ್ಮ ಶೋಧನೆಯಲ್ಲಿ ಗಾಂಧೀಜಿ ಗೆದ್ದರು; ಸೋತರು; ಬಹಳ ದೊಡ್ಡ ರೀತಿಯಲ್ಲಿ ಸೋತರೂ ಕೂಡ ಇವರು ತನ್ನನ್ನೇ ಒಂದು ಅನನ್ಯವಾದ ಪ್ರಯೋಗಕ್ಕೆ ಒಡ್ಡಿಕೊಂಡ ಸಾಹಸಿಗಳೆಂಬುದನ್ನು ಮರೆಯುವಂತಿಲ್ಲ.

ಪ್ರಾಯಶಃ ಇಪ್ಪತ್ತನೆಯ ಶತಮಾನದಲ್ಲಿ ಇವರಷ್ಟು ತೀವ್ರವಾಗಿ, ಸಂಪೂರ್ಣವಾಗಿ ಜೀವಿಸುವ ಕ್ರಮಗಳಲ್ಲಿ ಪ್ರಯೋಗ ಮಾಡಿಕೊಂಡವರು ಇನ್ನಾರೂ ಇಲ್ಲ.

ಆದ್ದರಿಂದ ಒಬ್ಬ ಕಾದಂಬರಿಕಾರ ಗಾಂಧಿವಾದವನ್ನು ಗಂಭೀರವಾಗಿ ಶೋಧಿಸಿದ್ದೇ ಆದಲ್ಲಿ ಈ ವಾದದ ಸೋಲು ಮತ್ತು ಗೆಲವು, ಗಾಂಧಿಯವರ ಜೀವನದಲ್ಲೇ ಕಾಣುವ ವಿರೋಧಗಳು ಮತ್ತು ಅವರ ಸಾರ್ವಜನಿಕ ಜೀವನದಲ್ಲಿ ಕಾಣುವ ವಿಪರ್ಯಾಸಗಳು – ಎಲ್ಲವೂ ಕೂಡಿ ಒಂದು ಅತ್ಯುತ್ತಮ ಆಧುನಿಕ ರಾಜಕೀಯ ಕಾದಂಬರಿಯ ವಸ್ತುವಾಗಬಲ್ಲದು. ಯಾಕೆ ಯಾವ ಕನ್ನಡದ ಲೇಖಕನೂ ಈ ತನಕ ಗಾಂಧಿಯುಗವನ್ನು ಇಷ್ಟೊಂದು ದೊಡ್ಡ ರೀತಿಯಲ್ಲಿ ಶೋಧಿಸಲು ಬೇಕಾದ ಸೂಕ್ಷ್ಮತೆಯನ್ನು ತೋರಿಸಿಲ್ಲವೆಂಬುದು ಬಹುಮುಖ್ಯ ಪ್ರಶ್ನೆ. ಪ್ರಾಯಶಃ ನಮ್ಮ ಸಾಹಿತಿಗಳ ಜೀವನದೃಷ್ಟಿ – ಅಲಂಕಾರ ಮತ್ತು ಅನುಭಾವದ ಮಿಶ್ರಣದಿಂದ ಹುಟ್ಟಿದ ದೃಷ್ಟಿ – ಅವರನ್ನು ಅತಿ ಮೃದುವಾಗಿ ಮಾಡುತ್ತದೆ; ನೈತಿಕ ಸಮಸ್ಯೆಯೊಂದನ್ನು ತುದಿಮುಟ್ಟಿ ನೋಡದಂತೆ ಅವರ ದಾರ್ಶನಿಕತೆಯನ್ನು ಮಂಕಾಗಿಸುತ್ತದೆ. ಅಥವಾ ನಾವೆಲ್ಲರೂ ಭಾರತೀಯರಿಗೆ ಸಹಜವಾದ ಆತ್ಮವಂಚನೆಯಲ್ಲಿ ಗಾಂಧಿವಾದವನ್ನು ‘ಪೂಜ್ಯ’ವೆಂದು ಕಾಣುವುದರ ಮೂಲಕ ಈ ವಾದದ ಶೋಧನೆಯಿಂದ ಜಾರಿಕೊಳ್ಳುತ್ತಿದ್ದೇವೆ.

ಸಮಕಾಲೀನ ಭಾರತದ ಸಾಮಾಜಿಕ ರಾಜಕೀಯ ವಸ್ತುವನ್ನು ಗಾಂಧಿವಾದದ ದೃಷ್ಟಿ ಕೋನದಿಂದ ನೋಡಬಲ್ಲ ಲೇಖಕನಿಗೆ ಈ ಶಕ್ತಿಗಳು ಇರಬೇಕಾಗುತ್ತದೆಂದು ಹೇಳಬಹುದು; ಮನುಷ್ಯ ಅಂತರಂಗದ ನೈತಿಕ ಲೋಕದಲ್ಲಿ ಹೇಗೋ, ಹಾಗೆ ಮನುಷ್ಯನ ಹೊರಗಿರುವ ಕಠೋರ ವಾಸ್ತವತೆಯ ಲೋಕದಲ್ಲೂ ತನ್ನ ವಸ್ತುವನ್ನು ಅವನು ಬೆನ್ನಟ್ಟಿ ಹುಡುಕಬೇಕು; ಹೀಗೆ ಹುಡುಕುವಾಗ ಪಾವನದೃಷ್ಟಿಯ ಮೃದುತ್ವವಾಗಲಿ, ನಮ್ಮ ಸಾಹಿತ್ಯಕೃತಿಗಳ ಶಿಲ್ಪವನ್ನು ಮಸುಕು ಮಾಡುವ ಆಲಂಕಾರಿಕ ದೃಷ್ಟಿಯಾಗಲೀ, ಭಾವುಕ ಲಂಪಟತನವಾಗಲಿ, ಅವನಲ್ಲಿರಕೂಡದು. ಇಂತಹ ಒಂದು ದೃಷ್ಟಿಯಿದ್ದಲ್ಲಿ ಗಾಂಧಿವಾದ ಕೂಡ ಮಾರ್ಕ್ಸ್‌ವಾದ ಅಸ್ತಿತ್ವವಾದಗಳಂತೆಯೇ ಅರ್ಥಪೂರ್ಣವಾದ ದೃಷ್ಟಿಕೋನವನ್ನು ಲೇಖಕನಿಗೆ ಒದಗಿಸಿಕೊಟ್ಟೀತು. ಏಕೆಂದರೆ ಗಾಂಧೀಜಿ ಇಪ್ಪತ್ತನೆಯ ಶತಮಾನದ ನೈತಿಕ ಪ್ರೊಮಿಥಿಯಸ್; ಪ್ರೊಮಿಥಿಯಸ್ ಬಗ್ಗೆ ಮತ್ತೊಮ್ಮೆ ದುರಂತ ಕಥೆಯನ್ನು ಬರೆಯಬೇಕಾಗಿಬಂದರೂ ಈ ಪ್ರಯತ್ನ ಸಾರ್ಥಕವಾದದ್ದು.

—-
ಕನ್ನಡ ಅಧ್ಯಯನ ಸಂಸ್ಥೆ, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಸೆಮಿನಾರೊಂದರಲ್ಲಿ ಓದಿದ ಇಂಗ್ಲಿಷ್ ಭಾಷಣದ ಕನ್ನಡ ರೂಪಾಂತರ.

* * *