ಸುಖದುಃಖದಲ್ಲಿ ಬದುಕು ಹದವಾಗುವ ಬಗೆಯನ್ನು ಕಾರಂತರು ತಮ್ಮ ಕಾದಂಬರಿಗಳ ಮೂಲಕ ಗುರುತಿಸಿದ್ದಾರೆ; ಹೀಗೆ ಗುರುತಿಸುವುದರ ಮೂಲಕ ನಮ್ಮ ಅರಿವನ್ನು ಹಿಗ್ಗಿಸಿದ್ದಾರೆ. ಅಂದರೆ ನಮ್ಮ ಮೌಲ್ಯಜ್ಞಾನವನ್ನು ಬದುಕಿನ ವಿವರಗಳ ಪರೀಕ್ಷೆಗೆ ಒಳಪಡಿಸಿ ಸೂಕ್ಷ್ಮವಾಗಿಸಿದ್ದಾರೆ. ನಮಗೆ ಕಾರಂತರು ಎಷ್ಟು ಪರಿಚಿತ ವ್ಯಕ್ತಿಯೆಂದರೆ ಅವರು ಜೀವನದಿಂದ ಏನನ್ನು ಅಪೇಕ್ಷಿಸುತ್ತಾರೆ. ಯಾವುದನ್ನು ಮೆಚ್ಚುತ್ತಾರೆ. ಯಾವ ಗುಣಗಳಿಂದಾಗಿ ಬದುಕು ಸಫಲವಾಗುತ್ತದೆ ಎಂದು ತಿಳಿಯುತ್ತಾರೆ ಎಂಬುದು ನಮ್ಮ ಸಂವೇದನೆಯ ಒಂದಂಶವಾಗಿ ಪರಿಣಮಿಸಿದೆ. ಕಷ್ಟಸಹಿಷ್ಣುತೆಯಲ್ಲಿ ಹದವಾದ ಅವರ ಮುದುಕಿಯರು, ಜೀವನದ ದೃಷ್ಟಿಯಿಂದ ಯಾವುದು ಠಕ್ಕು, ಯಾವುದು ಸಾಚ ಎಂಬುದನ್ನು ಹುಡುಕುತ್ತ, ತಮ್ಮ ಆದರ್ಶವಾದವನ್ನು ವಾಸ್ತವ ಲೋಕದ ನಿಜಗಳಿಂದ ತಿದ್ದಿಸಿಕೊಳ್ಳುತ್ತ ನಿಧಾನವಾಗಿ ಮಾಗುವ ಅವರ ಯುವಕರು ಕಾರಂತ ಮೌಲ್ಯ ಪ್ರಪಂಚದ ಜೀವನಾಡಿಗಳಾದ ಪಾತ್ರಗಳು. ಇವರ ಮುಖಾಂತರ, ಅಲ್ಲದೆ ಬದುಕಿನಿಂದ ಪಲಾಯನ ಮಾಡುವ ಹೇಡಿಗಳ ಮುಖಾಂತರ ಕಾರಂತರು ಜೀವನ ಹೇಗೆ ಸಫಲವಾಗುತ್ತದೆ ಎಂಬುದನ್ನು ನಿಷ್ಠುರವಾಗಿ – ನಿಷ್ಠುರ ಧೋರಣೆ, ನಿಷ್ಠುರ ಶೈಲಿಯಲ್ಲಿ – ಹುಡುಕುತ್ತ ಬಂದಿದ್ದಾರೆ. ನಮ್ಮ ಪರಂಪರಾನುಗತ ಜೀವನದಲ್ಲಿರುವ ಸಾಚ ಮತ್ತು ಮೋಸದ ಚಿತ್ರ ಹಾಗೆಯೇ ಗಾಂಧಿಯುಗದ ಆದರ್ಶವಾದದ ಹಿನ್ನೆಲೆಯಿಂದ ಹುಟ್ಟಿಬಂದ ದೃಷ್ಟಿಯಲ್ಲಿರುವ ಸಾಚ ಮತ್ತು ಮೋಸದ ಚಿತ್ರ ಬೇರೆ ಬೇರೆ ರೀತಿಯ ಪಾತ್ರ ಮತ್ತು ಘಟನೆಗಳ ಸಂಯೋಜನೆಯಲ್ಲಿ ಕಾರಂತರ ಕಾದಂಬರಿ ಪ್ರಪಂಚದ ಡಯಲೆಕ್ಟಿಕ್ ಆಗಿ ಕೆಲಸ ಮಾಡುತ್ತವೆ.

ಸಹಾನುಭೂತಿ, ಔದಾರ್ಯ, ಸ್ನೇಹ, ಜೀವನಶ್ರದ್ಧೆ, ಕಷ್ಟಸಹಿಷ್ಣುತೆ – ಇಂತಹ ಸಾರ್ವತ್ರಿಕ ಮೌಲ್ಯಗಳನ್ನೆ (ನಿಜವಾಗಿಸಲು ಅತ್ಯಂತ ಕಷ್ಟಸಾಧ್ಯವಾದ ಸಾಮಾನ್ಯ ಮೌಲ್ಯಗಳನ್ನೆ) ತಮ್ಮ ಕಾದಂಬರಿ ಪ್ರಪಂಚದ ಜಿವಾಳಗಳಾಗಿ ಕಾರಂತರು ಆಯ್ದುಕೊಳ್ಳುತ್ತಾರೆ. ಸುಂದರವಾಗಿ ಬರೆಯಬೇಕು, ಅಕರ್ಷಕವಾಗಿ ಕಾಣಬೇಕು ಎನ್ನುವ ಚಪಲವಿಲ್ಲದೆ, ಆಯ್ದುಕೊಂಡ ವಿಷಯದಲ್ಲಿ ಏಕಾಗ್ರ ಮನಸ್ಕರಾಗಿ ಇವರು ಸೃಷ್ಟಿಸುತ್ತಾರೆ. ಎದ್ದು ಕಾಣುವ ಶೈಲಿಯ ಚೆಲುವಿಗಾಗಿ, ಪಾತ್ರಗಳ ಮನೋಹರತೆಗಾಗಿ, ಸುಲಭವಾಗಿ ಓದಿಸಿಕೊಳ್ಳಬೇಕೆಂಬ ಆಶೆಗಾಗಿ ಇವರು ಪ್ರಯತ್ನಿಸದೆ ಇರುವುದರಿಂದ, ತಮ್ಮ ಸಮಕಾಲೀನರ ಹಾಗೆ ಸಾಹಿತ್ಯಸೃಷ್ಟಿಗೆಂದೇ ಇನ್ನೊಂದು ವ್ಯಕ್ತಿತ್ವನ್ನು ಮಾಡಿಕೊಳ್ಳದಿರುವುದರಿಂದ (ಅಂದರೆ ‘ಎಸ್ತೀಟ’ನ ಸೋಗು ಎಲ್ಲೂ ಇವರ ಬಹರದಲ್ಲಿ ಸುಳಿಯದಿರುವುದರಿಂದ) ಕಾರಂತರು ನಮ್ಮ ಅತ್ಯಂತ ‘ಅಥೆಂಟಿಕ್’ ಲೇಖಕರು ಎಂದು ನಮಗೆ ಅನ್ನಿಸಬಹುದು.

ಹೀಗೆ ‘ಅಥೆಂಟಿಕ್’ ಆಗುವುದಕ್ಕೋಸ್ಕರ ಕಾದಂಬರಿಯ ಸೃಷ್ಟಿಯಲ್ಲಿ ತೊಡಗುವ ಕಾರಂತರ ಕಾಲ್ಪನಿಕ ಶಕ್ತಿ ಯಾವ ಶಿಸ್ತಿಗೆ, ಕಟ್ಟುಪಾಡಿಗೆ ತನ್ನನ್ನು ತಾನು ಒಳಪಡಿಸಿಕೊಳ್ಳಬೇಕಾಯಿತು, ಇದರಿಂದ ಉಂಟಾದ ಲಾಭನಷ್ಟಗಳೇನು ಎಂಬುದೇ ನನ್ನ ಪ್ರಸ್ತುತ ಲೇಖನದ ಉದ್ದೇಶ. ಕಾರಂತರ ಎಲ್ಲ ಕೃತಿಗಳನ್ನೂ ಒಟ್ಟಿಗೇ ಒಂದೇ ದೃಷ್ಟಿಗೆ ಗುರಿಪಡಿಸಿ, ನೋಡಿದ ಹೊರತು – ಅಂದರೆ ಕೆಲವೊಂದು ಸ್ಥೂಲ ವಿಚಾರಗಳ ದೃಷ್ಟಿಕೋನದಿಂದ ನೋಡಿದ ಹೊರತು – ಅಂದರೆ ವಿಶಿಷ್ಟಕೃತಿಗಳ ವಿಶ್ಲೇಷಣೆಯಿಂದ ಹುಟ್ಟುವ ಸೂಕ್ಷ್ಮ ಪ್ರಭೇದಗಳನ್ನೂ ಮಹತ್ವಪೂರ್ಣ ವಿನಾಯಿತಿಗಳನ್ನೂ ಕಡೆಗಾಣಿಸಿದ ಹೊರತು – ನನ್ನ ಲೇಖನದ ಉದ್ದೇಶ ಸಫಲವಾಗಲಾರದು. ವಿಶಿಷ್ಟ ಕೃತಿಗಳ ವಿಶ್ಲೇಷಣೆಯಿಂದ ಪ್ರಮಾಣಗಳನ್ನು ಪಡೆದು ಆ ಮೂಲಕ ಒಂದು ವಿಚಾರಕ್ಕೆ ಬರುವುದು ಶ್ರೇಷ್ಠವಾದ ಸಾಹಿತ್ಯ ವಿಮರ್ಶೆಯ ಕ್ರಮ. ನಾನು ಹಾಗೆ ಮಾಡದಿದ್ದರೂ ಈ ಲೇಖನ ಬರೆಯುವಾಗ ಕಾರಂತರ ಕೃತಿಗಳ ವಿವರಗಳು ನನ್ನ ಮನಸ್ಸಿನಲ್ಲಿ ಇವೆ – ಎಂಬುದನ್ನು ಹೇಳಬಯಸುತ್ತೇನೆ. ಅಲ್ಲದೆ ನಾನು ಈ ಲೇಖನದಲ್ಲಿ ಎತ್ತುವ ತಾತ್ವಿಕ ವಿಚಾರಗಳು ಕಾರಂತರ ಕಾದಂಬರಿಗಳ ಸಾಹಿತ್ಯ ವಿಮರ್ಶೆಯ ವಿಶ್ಲೇಷಣಕ್ಕೆ ಓದುಗರನ್ನು ಹಚ್ಚುವ ಟಿಪ್ಪಣಿಗಳಾಗಲಿ ಎಂಬುದು ನನ್ನ ಮುಖ್ಯ ಉದ್ದೇಶ.

* * *

ಕಾರಂತರ ಕೃತಿಗಳು ನಮಗೆ ನಿಜವಾಗಲೂ – ಅಥೆಂಟಿಕ್ ಆಗಲು – ಕಲಾಕೃತಿಯಿಂದ ನಾವು ಅಪೇಕ್ಷಿಸುವ ಅನೇಕ ಆಕರ್ಷಕ ಗುಣಗಳನ್ನು ಯಾಕೆ ಬಿಟ್ಟು ಕೊಡಬೇಕಾಗುತ್ತದೆ ಎಂಬುದನ್ನು ನಾನು ಈಗ ಪರೀಕ್ಷಿಸಲು ಪ್ರಯತ್ನಿಸುತ್ತೇನೆ. ಇದಕ್ಕೆ ಕಾರಂತರ ಶೈಲಿ, ವಸ್ತುವಿನ್ಯಾಸ, ದೃಷ್ಟಿ, ಪಾತ್ರಗಳ ಆಯ್ಕೆ ಮತ್ತು ರಚನೆ ಇತ್ಯಾದಿಗಳಲ್ಲಿ ಎಷ್ಟು ಅನ್ಯೋನ್ಯತೆ, ಸಾಕಲ್ಯ ಕಾಣಿಸುತ್ತದೆ ಎಂಬುದನ್ನು ಚರ್ಚಿಸುವುದು ನನಗೆ ಅವಶ್ಯ.

ಕಾಫ್ಕ, ಡಾಸ್ಟೊವಸ್ಕಿ, ಲಾರೆನ್ಸ್‌ರಂತಹ ಕಾದಂಬರಿಕಾರರು ರಿಸ್ಕ್ ತೆಗೆದುಕೊಂಡು ಬರೆಯುತ್ತಾರೆ. ಸಾಮಾಜಿಕ ಜೀವನದ ವಾಸ್ತವ್ಯದ ವಾಸ್ತವ ಚಿತ್ರಣಕ್ಕೆ ಇವರು ಗಂಟುಬೀಳುವುದಿಲ್ಲ; ಅಂದರೆ, ಅವರ ಕಾಣ್ಕೆಯನ್ನು ಸೃಷ್ಟಿಸುವ ಅವರ ಕಾದಂಬರಿ ಪ್ರಪಂಚಕ್ಕೂ, ನಾವು ಕಾಣುವ ಸಾಮಾಜಿಕ ಜೀವನಕ್ಕೂ ನಡುವೆ ಸ್ಪಷ್ಟವಾಗಿ ಗುರುತಿಸಬಲ್ಲ ಪ್ರತಿಬಿಂಬ ಸಂಬಂಧವಿರಬೇಕೆಂದು ಅವರು ಅಪೇಕ್ಷಿಸುವುದಿಲ್ಲ. ಕಾಫ್ಕ ತನ್ನ ಮೆಟಮಾರ್ಫಸಿಸ್ ಎನ್ನುವ ಕಥೆಯಲ್ಲಿ ಕಥೆಯ ನಾಯಕ ಒಂದು ಪ್ರಾತಃಕಾಲ ಎದ್ದಗ ಅಸಹಾಯಕ ಹುಳುವಾಗಿಬಿಟ್ಟಿದ್ದ ಎಂದು ಮೊದಲನೆ ವಾಕ್ಯದಿಂದಲೇ ಕಥೆಯನ್ನು ಪ್ರಾರಂಭಿಸಿ, ಹುಳುವಾದವನ ದೃಷ್ಟಿಕೋನದಿಂದ ಮನುಷ್ಯ ಸಂಬಂಧಗಳನ್ನು ಪರೀಕ್ಷಿಸಿ ದಿನನಿತ್ಯದ ನಮ್ಮ ವಾಸ್ತವದ ದೃಷ್ಟಿಗೆ ಕಾಣದೆ ಅಡಗಿಕೊಂಡಿರುವ ಆದರೂ ಕಥೆ ಕೊಡುವ ಹೊಸ ಕಣ್ಣಿನಿಂದ ನೋಡಿದಾಗ ನಿಜವೆನ್ನಿಸುವ ನಮ್ಮನ್ನು ಸಂಕಟಕ್ಕೊಳಗು ಮಾಡುವ ಇನ್ನೊಂದು ವಾಸ್ತವ್ಯವನ್ನು ಸೃಷ್ಟಿಸುತ್ತಾನೆ. ತನಗೆ ತೀರಾ ವೈಯುಕ್ತಿಕವಾದ ಪ್ರಜ್ಞೆಯ ಮೇಲೆಯೇ ಎಲ್ಲ ಜವಾಬ್ದಾರಿಯನ್ನೂ ವಹಿಸಿಕೊಂಡು ಹೀಗೆ ಬರೆಯುವುದು, ಹೊಸ ದಿಕ್ಕುಗಳಲ್ಲಿ ನಮ್ಮ ಅರಿವನ್ನು ಬೆಳೆಸುವುದಕ್ಕೋಸ್ಕರ ಚಿರಪರಿಚಿತವಾದ ನೋಡುವ ಕ್ರಮಗಳನ್ನು ಚೂಪು ಮಾಡುವ ಪ್ರಯತ್ನಿಸುವ ಎಲ್ಲ ಲೇಖಕರಿಗೂ ಅವಶ್ಯವಾಗುತ್ತದೆ. ಆದರೆ ಇದರಲ್ಲಿನ ಅಪಾಯವೆಂದರೆ ಈ ಬಗೆಯ ತಂತ್ರವನ್ನು ಸ್ವಾನುಭವದ ದೃಷ್ಟಿಯಿಂದ ಅವಶ್ಯವಲ್ಲದಿದ್ದರೂ ಆಕರ್ಷಕವೆಂಬ ಚಪಲದಿಂದ ಕೆಲವು ಲೇಖಕರು ಅನುಕರಿಸುವುದು ಸಾಧ್ಯವೆಂಬುದು, ಕಾಫ್ಕನನ್ನು ಅನುಕರಿಸಿ ಬರೆದ ರೆಕ್ಸ್‌ವಾರ್ನರ್‌ನ ಕೃತಿಗಳು ಹೀಗಾಗುತ್ತವೆ. ಕಾಫ್ಕನಿಗೆ ಜೀವನವೇ ದುಃಸ್ವಪ್ನ; ಆದ್ದರಿಂದ ದುಃಸ್ವಪ್ನದ ತಂತ್ರವನ್ನು ಅವನು ಬಳಸಿ ನಮ್ಮ ಕಲ್ಪನೆಯ ವಾಸ್ತವ್ಯವನ್ನೆಲ್ಲ ತಿರುಗುಮುರುಗು ಮಾಡಿಬಿಡುತ್ತಾನೆ. ತಂತ್ರಕ್ಕೂ, ಅನುಭವಕ್ಕೂ, ದೃಷ್ಟಿಕೋನಕ್ಕೂ ಪರಸ್ಪರ ಸಂಬಂಧವಿದೆ ಎಂದು ತಿಳಿದು ಬರೆಯುವಾಗ, ಕಥೆಗಾರ ಶಕ್ತ ಲೇಖಕನಾಗಿದ್ದಲ್ಲಿ ಕೃತಿ ನಮಗೆ ನಿಜವಾಗುತ್ತದೆ. ಇಲ್ಲದಿದ್ದಲ್ಲಿ ನಮಗೆ ಗೊತ್ತಿರುವ ಪ್ರಪಂಚವನ್ನು ಸೌಂದರ್ಯದ ದೃಷ್ಟಿಯಿಂದ ಮಾತ್ರ ಬುಡಮೇಲು ಮಾಡುವ ಲೇಖಕನ ಬರವಣಿಗೆ ಕೃತಕವಾಗುತ್ತದೆ. ಆದ್ದರಿಂದ ಇಂತಹ ಕೃತಿಗಳ ಪರೀಕ್ಷೆಯಲ್ಲಿ – ಹೊರಗಿನಿಂದ ತಂದು ಊರಿದ್ದು ಯಾವುದು, ಒಳಗಿನಿಂದ ಬೆಳೆದದ್ದು ಯಾವುದು ಎಂಬುದನ್ನು ವಿವೇಚಿಸುವ ಪರೀಕ್ಷೆಯಲ್ಲಿ – ವಿಮರ್ಶಕನ ಜವಾಬ್ದಾರಿ ದೊಡ್ಡದಾಗುತ್ತದೆ. ಯಾಕೆಂದರೆ ಯಾವುದು ಸುಳ್ಳು ನಿಜ ಎನ್ನುವ ವಿವೇಚನೆಗೆ ಕಥೆಗಾರನ ಪ್ರಜ್ಞೆಯ ಗಾಢತೆಯೊಂದೇ (ಕೃತಿಯಲ್ಲಿ ಪ್ರತ್ಯಕ್ಷವಾಗುವ ಗಾಢತೆಯೊಂದೇ) ಇಲ್ಲಿ ಪ್ರಮಾಣ. ಈ ಗಾಢತೆ ವ್ಯಕ್ತವಾಗುವುದು ಕಾದಂಬರಿ ಪಡೆಯುವ ಕಾವ್ಯಶಕ್ತಿಯ ಹೊಸ ಪರಿಮಾಣದಲ್ಲಿ. ಮುಖ್ಯವಾದ ಪ್ರಶ್ನೆ ಒಬ್ಬ ಲೇಖಕನ ಬರಹ ಯಾವ ಮೂಲಕ ಅವನಿಗೇ ಕೃತಿನಿರ್ಮಾದ ಶೋಧನೆಯ ಹೊತ್ತಿನಲ್ಲಿ ‘ಅಥೆಂಟಿಕ್’ – ನಿಜ – ಆಗುತ್ತದೆ. ಯಾವ ಶಿಲ್ಪ ಶೈಲಿಯ ಅನನ್ಯತೆಯ ಮೂಲಕ ನಮಗೂ ನಿಜವಾಗುತ್ತದೆ ಎಂಬುದು. ಲೇಖಕನ ದೃಷ್ಟಿ – ಅಂದರೆ ಧೋರಣೆ ಮಾತ್ರವಲ್ಲದೆ ಅನುಭವಿಸುವ ಕ್ರಮ – ಎಷ್ಟೊಂದು ಹೆಚ್ಚು ತೀವ್ರವಾಗಿ, ಸಮಾಜಕ್ಕೆ ಪರಕೀಯವಾಗಿ ವೈಯುಕ್ತಿಕವಾಗುತ್ತದೊ ಅಷ್ಟೊಂದು ಹೆಚ್ಚು ಈ ಸಮಸ್ಯೆ – ತನಗೆ, ಪರರಿಗೆ ನಿಜವಾಗುವಂತೆ ಬರೆಯುವ ಸಮಸ್ಯೆ – ಲೇಖಕನನ್ನು ಕಾಡುತ್ತದೆ.

ಇನ್ನೊಂದು ರಾಜಮಾರ್ಗದ ಬರವಣಿಗೆ. ಹೀಗೆ ಬರೆಯುವ ಲೇಖಕರು ಮನುಷ್ಯನ ಬಹಿರಂಗ ಅವನ ಅಂತರಂಗವನ್ನು ಸೂಕ್ಷ್ಮವಾಗಿ ಪ್ರತಿನಿಧಿಸಬಲ್ಲದು ಎಂದು ತಿಳಿಯುತ್ತಾರೆ. ಅಂದರೆ ಜೇನ್ ಆಸ್ಟಿನ್, ಮಾಸ್ತಿ, ಕಾರಂತರಂತೆ ಮನುಷ್ಯನ ಸಾಮಾಜಿಕ ವರ್ತನೆ, ಅವರ ಬದುಕಿನ ಕ್ರಿಯೆಗಳು ಅವನ ಅಂತರಂಗದ ಚರಿತ್ರೆಯನ್ನು ತಿಳಿಯ ಹೇಳಬಲ್ಲುವು ಎಂದು ನಂಬಿ ಬರೆಯುತ್ತಾರೆ. ಈ ರೀತಿಯ ಬರವಣಿಗೆಯ ಹಿಂದೆ – ಮೊದಲನೆಯದಕ್ಕಿಂತ ತೀರ ಭಿನ್ನವಾದ – ಒಂದು ವಿಶಿಷ್ಟ ಲೋಕದೃಷ್ಟಿಯಿದೆ. ಇವರು ಮನುಷ್ಯನ ಪ್ರಜ್ಞೆಯನ್ನು ಸಾಮಾಜಿಕ ಸಂಬಂಧಗಳಲ್ಲಿ ಬೇರು ಬಿಟ್ಟು ಬೆಳೆದದ್ದಾಗಿ ಕಾಣುತ್ತಾರೆ. ಆದ್ದರಿಂದ ಮನುಷ್ಯನನ್ನು ಸಂಪೂರ್ಣ ಏಕಾಂಗಿಯಾಗಿ ಮಾಡುವ ಭಾವನೆಗಳಲ್ಲಿ, ಪರಕೀಯ ಪ್ರಜ್ಞೆಯ ತಪ್ತಕಣ್ಣಿಗೆ ಈ ಲೋಕ ಹೇಗೆ ಕಾಣುತ್ತದೆ ಎಂಬುದರಲ್ಲಿ ಈ ಲೇಖಕರು ಮುಖ್ಯವಾಗಿ ನಿರಾಸಕ್ತರು. ಯಾಕೆಂದರೆ ಇವರ ಮೌಲ್ಯ ಜ್ಞಾನ – ವ್ಯಕ್ತಿಯ ಸಫಲತೆಯನ್ನೂ ಸತ್ವವನ್ನೂ ಇವರು ಬಗೆಯುವ ರೀತಿ – ವ್ಯಕ್ತಿಯನ್ನು ಮುಖ್ಯವಾಗಿ ಸಮಾಜಜೀವಿ ಎಂದು ಕಾಣುವುದರಿಂದ ಹುಟ್ಟಿದುದು, ಹೀಗೆಂದ ಮಾತ್ರಕ್ಕೆ ಕಾರಂತರಂತಹ ಲೇಖಕರ ಮೌಲ್ಯಗಳು ಪ್ರಸ್ತುತ ಸಮಾಜ ಒಪ್ಪುವ ಮೌಲ್ಯಗಳಾಗಿರಬೇಕೆಂದು ಅರ್ಥವಲ್ಲ. ಸಮಾಜದ ಹಿತಕ್ಕೆ ಯಾವುದು ಅವಶ್ಯ ಎಂಬುದರಲ್ಲಿ ಕಾರಂತರಂತಹ ಲೇಖಕರು ಅತ್ಯಂತ ವೈಯುಕ್ತಿಕವಾದ ನಿಲುವನ್ನೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ನಮಗೆ ಮುಖ್ಯರಾಗುತ್ತಾರೆ ಎಂಬುದು ನೆನಪಿಡಬೇಕಾದ ಸಂಗತಿ. ಕಾರಂತರಲ್ಲಿ ಕಾಮೂ, ಜಾಯ್ಸ್, ಕಾಫ್ಕರಂತಹ ಕಾದಂಬರಿಕಾರರು ನಡೆಸುವ ಸ್ವಗತದ ಶೋಧನೆ ಬದಲಾಗಿ ವ್ಯಕ್ತಿ – ಸಮಾಜದ ಸಂವಾದವೇ ಮುಖ್ಯ ವಸ್ತುವಾಗುತ್ತದೆ ಎಂಬುದು ನಾನು ಮೇಲೆ ಹೇಳಿದ ಮಾತುಗಳ ಅರ್ಥ.

ಈ ಕಾರಣಕ್ಕಾಗಿಯೇ ಕಾರಂತರು ಸಾಹಿತ್ಯದಲ್ಲಿ ಮೂಡಬೇಕಾದ ‘ವಾಸ್ತವ್ಯ’ದ ಬಗ್ಗೆ ಸಂಕುಚಿತವಾದ ಧೋರಣೆಯನ್ನು ಇಟ್ಟುಕೊಂಡಿದ್ದಾರೆ ಎಂದು ನಮಗನ್ನಿಸುತ್ತದೆ. ಭಾರತೀಯ ಲೇಖಕರ ಸಮಿನಾರ್‌ಒಂದರಲ್ಲಿ ಇವರು ಒಂದು ಲೇಖನವನ್ನು ಓದಿದರು. ಇಂಗ್ಲಿಷಿನಲ್ಲಿ ಅವರು ಬರೆದಿದ್ದ ಈ ಲೇಖನದಲ್ಲಿ ಭಾರತೀಯರು ತಮ್ಮ ಅನುಭವದ ಬಗ್ಗೆ ಜಡರು ಎಂದು ವಾದಿಸುತ್ತ ನಮ್ಮ ದೇಶದಲ್ಲಿ ಸಹಸ್ರಾರು ಜನರನ್ನು ಕೊಂದ ಇನ್‌ಫ್ಲುಯೆಂಜಾದ ಘಟನೆಯ ಬಗ್ಗೆ ಈ ಶತಮಾನದ ಪ್ರಾರಂಭದಲ್ಲಿ ಒಂದು ಸಾಹಿತ್ಯ ಕೃತಿಯೂ ಯಾಕೆ ಹುಟ್ಟಲಿಲ್ಲ ಎಂದು ಕೇಳಿದರು. ನಾವು ನಮ್ಮ ಬದುಕನ್ನು ಕುತೂಹಲದಿಂದ ನೋಡುವುದಿಲ್ಲ ಎನ್ನುವುದಕ್ಕೆ ಇವರು ಕೊಟ್ಟ ಉದಾಹರಣೆ ಚೆನ್ನಾಗಿದ್ದರೂ ಕಾರಂತರು ಯಾವೊಂದು ಸಂಗತಿಯಾಗಲಿ ಸಾಹಿತ್ಯದಲ್ಲಿ ಪ್ರಕೃತಿಯಾಗಿ ಬಂದಾಗ ಮಾತ್ರ ಸ್ವೀಕರಿಸುತ್ತಾರೊ ಎನ್ನುವ ಅನುಮಾನ ನನಗೆ ಇದೆ. ಎರಡನೇ ಯುದ್ಧದ – ಎಲ್ಲ ಯುದ್ಧಗಳ – ಅನುಭವ ಸಾಂಕೇತಿಕವಾಗಿ ಕಾಮೂನ ಪ್ಲೇಗ್ ಕಾದಂಬರಿಯಲ್ಲಿ ಸತ್ವಪೂರ್ಣವಾಗಿ ಮೂಡಿದೆ. ಕಾರಂತರು ತಮ್ಮ ಅನುಭವವನ್ನು ಹೀಗೆ ಮೂಡಿಸುವ ಲೇಖಕರಲ್ಲವಾದ್ದರಿಂದ ಅವರಿಗೆ ಎಲ್ಲ ಅನುಭವವೂ ವಾಸ್ತವವಾಗಿ, ನಿಜ ವಿವರಗಳಲ್ಲಿ, ಜೀವನದಲ್ಲಿ ನಡೆದಂತೆ ಕಾದಂಬರಿಯಲ್ಲಿ ಬರಬೇಕು. ಈ ನಿಲುವು ಕಾರಂತರ ಕಲ್ಪನೆಗೆ ಕೋಳಗಳನ್ನು ತೊಡಿಸಿದರೂ ಸಹ ಅವರು ಪ್ರಯತ್ನಿಸುವ ನೈಜತೆಗೆ, ಆ ನೈಜತೆಯ ಹಿಂದಿರುವ ಮೌಲ್ಯ ಕಲ್ಪನೆಗೆ, ದೃಷ್ಟಿಗೆ ಅವಶ್ಯವೆಂಬುದು ನನ್ನ ವಾದ.

ಸಾಮಾಜಿಕ ಪ್ರಪಂಚ ಮತ್ತು ಕೃತಿ – ಇವುಗಳ ನಡುವಿನ ಸಂಬಂಧ ಎಷ್ಟು ಸ್ಪಷ್ಟವೊ ಅಷ್ಟು ತನ್ನ ಕೃತಿ ತನ್ನ ದೃಷ್ಟಿಗೆ ಪ್ರಮಾಣವಾಗಿ ನಿಲ್ಲುತ್ತದೆ ಎಂಬ ವಾಸ್ತವವಾದದ ನಿಷ್ಠುರ ವ್ರತದಿಂದ ಹುಟ್ಟಿದ ಧೋರಣೆಯಿದು. ಆದ್ದರಿಂದ ತನ್ನ ದೃಷ್ಟಿಯನ್ನು ನಿಜವಾಗಿಸಲು ಇವರು ಕಾವ್ಯಶಕ್ತಿ ಪಡೆದ ಕೃತಿಸಂಯೋಜನೆಗೆ ಪ್ರಯತ್ನಿಸದೆ, ಶ್ರಮ ಸಾಧ್ಯವಾದ ಗದ್ಯದ ಶಿಸ್ತಿಗೆ ತಮ್ಮ ದೃಷ್ಟಿಯನ್ನು ಒಳಪಡಿಸಿಕೊಂಡು ಬರೆಯುತ್ತಾರೆ. ಅಂದರೆ ಕೃತಿಯ ದೃಷ್ಟಿ ಅಥೆಂಟಿಕ್ ಆಗಲು ಓದುಗ ಮತ್ತು ಲೇಖಕ ಇಬ್ಬರೂ ಗುರುತಿಸಬಲ್ಲ, ಪ್ರಮಾಣಗಳಾಗಿ ನಿಲ್ಲಬಲ್ಲ ವಿವರಗಳನ್ನು ಅತ್ಯಂತ ನಿಧಾನವಾಗಿ, ಒತ್ತಾಗಿ, ಕೂಡಿಸಿ, ಪೇರಿಸಿ ಇವರು ಕೃತಿಯನ್ನು ರಚಿಸುತ್ತಾರೆ. ಅಂದರೆ ಕಾರಂತರಿಗೆ ಕಾದಂಬರಿ ಪ್ರತಿಸೃಷ್ಟಿಯಲ್ಲ; ಜೀವನದಿಂದ ಹೊರಗೆ ಬಂದ ಜೀವಂತ ದಾಖಲೆ. ಈ ಪ್ರಪಂಚವನ್ನು ಈಗ ಕಾಣಿಸುವಂತೆಯೇ ಅರ್ಥಪೂರ್ಣ ಮಾಡುವುದು, ಸೂಕ್ಷ್ಮ ಮನಸ್ಸಿನಿಂದ ನೋಡುವುದು ಅವರ ಉದ್ದೇಶ.

ಇದು ವಾಸ್ತವ್ಯಕ್ಕೆ ಬದ್ಧವಾದ ಕಾದಂಬರಿತಂತ್ರ ಮಾತ್ರವಲ್ಲ; ಕಾರಂತರ ಜೀವನ ದೃಷ್ಟಿ ಕೂಡ. ಸಾಮಾಜಿಕ ವರ್ತನೆಯಾಗಿ ಹೊರಗೆ ಕಾಣಿಸಿಕೊಳ್ಳಲಾರದ ಅನುಭವ ವಿಶೇಷಗಳನ್ನು – ಸಾಮಾಜಿಕ ಉಪಯೋಗಗಳನ್ನು ಪಡೆಯದ ತೀರಾ ವೈಯುಕ್ತಿಕವಾದ ಅನ್ನಿಸಿಕೆಗಳನ್ನು – ಇವರು ಮಹತ್ವಪೂರ್ಣವೆಂದು ಕಾಣುವುದಿಲ್ಲ. ಆದ್ದರಿಂದ ಕಾರಂತ ಪ್ರಪಂಚದ ಆಸಕ್ತಿಗಳಿಂದ ವ್ಯಕ್ತಜೀವನದ ಅನೇಕ ತೀವ್ರತೆಗಳು ಅನಿವಾರ್ಯವಾಗಿ ಹೊರಗುಳಿಯುತ್ತವೆ ಎಂದು ನಮಗೆ ಅನ್ನಿಸುತ್ತದೆ. ಮುಖ್ಯವಾಗಿ ಪರಕೀಯ ಪ್ರಜ್ಞೆಯಲ್ಲಿ ಸಮಾಜಕ್ಕೆ ಬಾಹಿರನಾದ ವ್ಯಕ್ತಿ ಅನುಭವಿಸುವ ನೋವು, ಸುಖ, ಸಂಕಟ, ದಿಗಿಲು ಇತ್ಯಾದಿ ಭಾವನೆಗಳಿಗೆ ಕಾರಂತರ ಮೌಲ್ಯ ಪ್ರಪಂಚದಲ್ಲಿ ಜಾಗವಿಲ್ಲ. ಅಂದರೆ, ಯಾವ ಭಾವನೆಗಳು ವ್ಯಕ್ತಿಯನ್ನು ಪರವಶಗೊಳಿಸಿಬಿಡುತ್ತವೊ, ಸಮಾಜ ಪ್ರಜ್ಞೆಯಿಂದ ಅವನನ್ನು ವಿಮುಖಗೊಳಿಸಿ ಪರಕೀಯನನ್ನಾಗಿ ಮಾಡುತ್ತವೊ – ಅಂತಹ ಉತ್ಕಟ ಅನ್ನಿಸಿಕೆಗಳಿಗೆ ಕಾರಂತರ ಪಾತ್ರಗಳು ಗುರಿಯಾಗುವುದಿಲ್ಲ. ಉದಾಹರಣೆಗೆ; ನಮ್ಮ ಅಸ್ತಿತ್ವದ ಪ್ರತ್ಯೇಕತೆಯ ರುಚಿಯನ್ನು ನಮಗೆ ತೀವ್ರವಾಗಿ ಅನುಭವಕ್ಕೆ ತರುವ ಲೈಂಗಿಕ ಪ್ರೇಮದ ಆಕರ್ಷಣೆ – ದುಃಖ, ದೈವಿಕ ಅನುಭಾವದ ಆಸೆ – ನಿರಾಸೆ, ಅತೃಪ್ತಿ, ಅಸೂಯೆ ಇತ್ಯಾದಿ ಭಾವನೆಗಳು – ನಮ್ಮನ್ನು ಅನಾಥಪ್ರಜ್ಞೆಯ ಏಕಾಕಿತನದಲ್ಲಿ ಬಾಧಿಸುವ ಅನ್ನಿಸಿಕೆಗಲು ಕಾರಂತರ ಪಾತ್ರಗಳನ್ನು ವ್ಯಗ್ರಗೊಳಿಸಿದರೂ ಕಾರಂತರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕಾಲದಲ್ಲಿ ಯಾವುದು ಮಾಗುತ್ತದೆ, ಯಾವುದು ಕೊಳೆಯುತ್ತದೆ, ಯಾವುದು ಒಣಗುತ್ತದೆ ಎಂದಷ್ಟೇ ನೋಡುತ್ತ ಇವರು ಬರೆಯುತ್ತಾರೆ. ಅಂದರೆ ಇವರಿಗೆ ಎಲ್ಲವೂ ಸಮಾಜದ ಒಳಗೆ ಸಫಲವಾಗಬೇಕು – ಹೊರಗಲ್ಲ. ಇವರ ಕಲಾವಿದ ನಾಯಕರು ಸ್ವಪ್ರಜ್ಞೆಯ ಶ್ರೀಮಂತತನದಲ್ಲಿ ಬದುಕಿನ ಸಫಲತೆ ಕಂಡರೂ ವ್ಯಕ್ತಿಗಳಾಗಿ ಸಮಾಜಕ್ಕೆ ಪರಕೀಯರಾಗುವುದಿಲ್ಲ – ಕಾಫ್ಕ ಮತ್ತು ಕಾಮೂರ ನಾಯಕರಂತೆ.

ಆದ್ದರಿಂದ ಪ್ರೇಮ ಕಾರಂತರ ವಸ್ತುವಲ್ಲ; ದಾಂಪತ್ಯ ಅವರ ವಸ್ತು. ಏಕೆಂದರೆ ಪ್ರೇಮ ಅದರ ತೀವ್ರತೆಯಲ್ಲಿ ತೀರ ವೈಯಕ್ತಿಕ; ಆದರೆ ದಾಂಪತ್ಯ ಸಾಮಾಜಿಕ. ಹಾಗೆಯೇ ಹೆಣ್ಣಿನಂತೆಯೆ ಬದುಕಿನ ಇನ್ನೊಂದು ದೊಡ್ಡ ಹಂಬಲವಾದ ದೇವರು ಕಾರಂತರನ್ನು ಕಾಡಿಲ್ಲ; ಬದುಕುವ ಕ್ರಮದಲ್ಲಿ ಪ್ರಕಟವಾಗುವ, ಉಪಯುಕ್ತವಾಗುವ ಧಾರ್ಮಿಕ ಶ್ರದ್ಧೆ ಅವರನ್ನು ಸೆಳೆಯುತ್ತದೆಯೇ ವಿನಾ ಅನುಭಾವದ ಉತ್ಕಟ ಕ್ಷಣಗಳಲ್ಲ.

ಕಾಲದಲ್ಲಿ ಜೀವನ ನಿಧಾನವಾಗಿ ಮಾಗುವ ಬಗ್ಗೆ ಪಡೆಯುವ ಸ್ವರೂಪ ಕಾರಂತರ ಕಾದಂಬರಿಗಳ ಮುಖ್ಯ ಕಾಳಜಿ ಎಂದು ಹೇಳಿದೆ. ಅಸ್ತಿತ್ವವಾದಿಗಳು ಮನುಷ್ಯನ ಅಸ್ತಿತ್ವಕ್ಕೆ ಪೂರ್ವದಲ್ಲಿ ಯಾವ ನಿಶ್ಚಿತ ಮೌಲ್ಯಗಳೂ ಇಲ್ಲವೆನ್ನುತ್ತಾರೆ. ಮನುಷ್ಯ ತನ್ನ ವರ್ತನೆಯಲ್ಲಿ ಕರ್ಮದಲ್ಲಿ ನಿಜಮಾಡಿಕೊಂಡಷ್ಟೆ ಅವನ ಮೌಲ್ಯಗಳು ಸತ್ಯವಾಗುತ್ತವೆ ಎಂದು ನಂಬುವುದರಲ್ಲಿ ಕಾರಂತರು ಅಸ್ತಿತ್ವವಾದಿಗಳಂತೆ ಕಂಡರೂ, ಕೆಲವೊಂದು ಮೌಲ್ಯಗಳು ನಮ್ಮ ಹೊರತಾಗಿಯೂ ಇವೆ, ಅವಕ್ಕನುಗುಣವಾಗಿ ನಾವು ಬದುಕಿ, ಮಾಗಿ, ಆ ಮೌಲ್ಯಗಳನ್ನು ನಮ್ಮ ಪಾಲಿಗೆ ನಿಜ ಮಾಡಿಸಿಕೊಳ್ಳಬೇಕೆಂದು ತಿಳಿಯುವುದರಲ್ಲಿ ಕಾರಂತರು ಮಾನವತಾವಾದಿಗಳು.

ಹೀಗೆ ಕಾಲದಲ್ಲಿ, ಬದುಕಿನ ಅನುಭವಗಳಿಗೆ ಹೆದರದೆ ಮೈಯೊಡ್ಡಿ ಮಾಗುವುದೇ ಕಾರಂತ ಪ್ರಪಂಚದ ಪರಮ ಮೌಲ್ಯವೆನ್ನಬಹುದು. ದೈವದಲ್ಲಿ ನಂಬಿಕೆಯಿಟ್ಟು ನಡೆದ ಬದುಕು ಈ ಗುಣಗಳನ್ನು ಸಾಧಿಸಿಕೊಂಡರೂ ಅಂಥ ಬದುಕನ್ನು ಕಾರಂತರು ಮೆಚ್ಚಿಕೊಳ್ಳುತ್ತಾರೆ. ಇವರು ಸೃಷ್ಟಿಸಿದ ಇಂತಹ ಕೆಲವು ಮುದುಕಿಯರು ಕಾರಂತರ ಸ್ವಂತ ದೃಷ್ಟಿಗೆ ಹತ್ತಿರರಾದ ಪಾತ್ರಗಳಿಗಿಂತ ಹೆಚ್ಚು ಗಟ್ಟಿಯಾಗಿ ಕಾದಂಬರಿಯಲ್ಲಿ ಬರುತ್ತಾರೆ ಎಂಬುದು ಗಮನಾರ್ಹ ಸಂಗತಿ. ನನ್ನ ಪ್ರಸ್ತುತ ಲೇಖನದ ದೃಷ್ಟಿಯಿಂದ ಕಾರಂತರು ಮಾಗುವುದನ್ನೆ ಪರಮ ಮೌಲ್ಯವೆಂದು ಸ್ವೀಕರಿಸುವುದಾಗಿ ಅವರ ಬರವಣಿಗೆಯ ಕ್ರಮದ ಮೇಲಾಗಿರುವ ಪರಿಣಾಮದ ಬಗ್ಗೆ ಕೆಲವು ಮಾತುಗಳನ್ನು ಆಡುವುದು ಅವಶ್ಯ.

ಮಾಗುವುದು ಹೇಗೆ ನಿಧಾನವಾದ ಕ್ರಿಯೆಯೋ ಹಾಗೆಯೇ ಕಾರಂತರ ಗದ್ಯವೂ ಕೂಡ ನಿಧಾನವಾಗಿ ವಿವರಗಳನ್ನು ಕೂಡಿಸಿಕೊಳ್ಳುತ್ತ, ವಾಸ್ತವ್ಯವನ್ನು ದಟ್ಟವಾಗಿ ಸೃಷ್ಟಿಸುತ್ತ ಈ ಮಾಗುವ ಕ್ರಿಯೆಯನ್ನು ನಮಗೆ ನಿಜವಾಗಿಸಲು ಪ್ರಯತ್ನಿಸುತ್ತದೆ. ಯಾವುದೋ ಒಂದು ದಿವ್ಯ ಮುಹೂರ್ತದಲ್ಲಿ ಜೀವನದ ಸತ್ಯ ಮಾರ್ಪಡುತ್ತದೆ ಎಂದು ತಿಳಿಯುವ ಲೇಖಕ ಭಾವನೆಗಳನ್ನು ನಾಟಕ ಕ್ರಿಯೆಗಳಲ್ಲಿ ಸಂಯೋಜಿಸಿ ಒಂದು ಶೃಂಗಸ್ಥಿತಿಗೆ ತನ್ನ ಕೃತಿಯನ್ನು ತರಲು ಪ್ರಯತ್ನಿಸುತ್ತಾನೆ. ಆದರೆ ಕಾರಂತರಿಗೆ ಈ ಘಳಿಗೆಯಲ್ಲಿ ಆಸಕ್ತಿಯಿಲ್ಲ, ನಂಬಿಕೆಯೂ ಇಲ್ಲ. ಕಾಲದಲ್ಲಿ ಮಾಗುವ ಕ್ರಿಯೆಯನ್ನು ವಿವರಿಸಲು ವಿವರಣಾತ್ಮಕವಾದ ಕಥನಶೈಲಿ ಬೇಕು; ವಾಸ್ತವ್ಯವನ್ನು ಥಟ್ಟನೆ ಹೊರಳಿಸಿಬಿಡುವ ನಾಟಕ ಬೇಡ. ಆದ್ದರಿಂದ ಕಾರಂತರ ಕಾದಂಬರಿಗಳಲ್ಲಿ ನಮ್ಮನ್ನು ಅವಾಕ್ಕಾಗಿಸುವ ನಾಟಕ ಇಲ್ಲ. ನಾಟಕೀಯ ಕ್ರಿಯೆಯ ಮಾಂತ್ರಿಕ ಕಾವ್ಯಶಕ್ತಿ ಇವರ ಬರವಣಿಗೆಯಲ್ಲಿ ಇಲ್ಲದಿರುವುದಕ್ಕೆ ಕಾರಣ, ಇವರ ಜೀವನದೃಷ್ಟಿಯಲ್ಲೂ ಅದಕ್ಕೆ ಸ್ಥಾನವಿಲ್ಲದಿರುವುದು ಎಂಬುದು ನಾನು ಹೇಳಲಿಕ್ಕೆ ಪ್ರಯತ್ನಿಸುತ್ತಿರುವ ವಿಷಯ.

ಮಾಗುವುದೇ ಕಾರಂತರ ವಸ್ತುವಾದ್ದರಿಂದ, ಪ್ರೇಮ ಅನುಭಾವಗಳಂತಹ ಆಕರ್ಷಕ ಉತ್ಕಟ ಭಾವನೆಗಳನ್ನು ತಮ್ಮ ಕೃತಿಗಳ ಮೂಲಭೂತ ಕಾಳಜಿಗಳಾಗಿ ಕಾರಂತರು ಆರಿಸಿಕೊಳ್ಳದಿರುವುದರಿಂದ ಅವರ ಬರವಣಿಗೆ ಧಾಟಿ ಕೂಡ ತೀವ್ರತೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಮಾಗುವ ನಿಧಾನವಾದ ಕ್ರಿಯೆಯನ್ನು ಸೃಷ್ಟಿಸಲು ಭಾವಪರವಶವಾದ ಬರವಣಿಗೆಗೆ ಸಾಧ್ಯವಿಲ್ಲ. ವಿವೇಕ, ತಾರತಮ್ಯ ವಿವೇಚನೆಯ ಎಚ್ಚರ – ಅಂದರೆ ಎಲ್ಲೂ ತನ್ಮಯವಾಗಿ ನಿಲ್ಲದ ಜಾಗೃತ ಬುದ್ಧಿ – ಈ ಗುಣಗಳೇ ಬರವಣಿಗೆಯಲ್ಲಿ ಅವಶ್ಯವಾಗುತ್ತದೆ. ಕಾರಂತರ ಶೈಲಿ ಆಕರ್ಷಕವಾಗಿಲ್ಲ ಎನ್ನುವ ಮಾತನ್ನು ನಾವು ಆಗೀತ ಕೇಳುತ್ತಿರುತ್ತೇವೆ. ಅಂದರೆ ಇದರ ಅರ್ಥ, ತಿಳಿದೋ ತಿಳಿಯದೆಯೋ ನಾವು ಕಾರಂತರ ಭಾಷೆ ಭಾವಗೀತದ ಉತ್ಕರ್ಷದಲ್ಲಿ ಹೊಳೆಯುವ ಗುಣವನ್ನು ಪಡೆಯುವುದಿಲ್ಲವೆಂದು ಹೇಳುತ್ತಿದ್ದೇವೆ – ಅಷ್ಟೆ. ಆದರೆ ಕಾರಂತರು ಬರೆಯುವ ಭಾಷೆ ಅವರ ಜೀವನದೃಷ್ಟಿಯನ್ನು ಅಥೆಂಟಿಕ್‌ಗೊಳಿಸಲು ಯಾಕೆ ಅವಶ್ಯವಾದುದೆಂಬುದನ್ನು; ಧೋರಣೆ, ತಂತ್ರ, ವಸ್ತುವಿನ ಜೊತೆ ಹೊಂದಿಕೊಳ್ಳಲು ಯಾಕೆ ಈ ರೀತಿಯ ಖಚಿತವಾದ ನಿಧಾನವಾಗಿ ನಡೆಯುವ ಗದ್ಯ ಅನಿವಾರ್ಯವಾಗುತ್ತದೆ ಎಂಬುದನ್ನು ನಾವು ಮರೆಯಕೂಡದು.

ಅಂದರೆ ಕಾರಂತರಿಗೆ ಭಾಷೆ ಬರೀ ಸಾಧನ, ವಾಹಕ ಎಂದ ಹಾಗಾಯಿತು. ಕಾನ್ರಾಡ್, ಲಾರೆನ್ಸ್‌ರಂತಹ ಕಾದಂಬರಿಕಾರರಲ್ಲಿ ಭಾವಗೀತಾತ್ಮಕ ಉತ್ಕರ್ಷ ಗುಪ್ತಸುಳಿಗಳಂತೆ ಕಾದಂಬರಿಗಳಲ್ಲಿ ಅಡಗಿಕೊಂಡಿದ್ದು ಓದುಗರನ್ನು ಪರಿಚಿತ ಲೋಕದ ನೆಲೆ ತಪ್ಪಿಸಿ ಅರಿಯದ ಆಳಕ್ಕೆ ಸೆಳೆದುಕೊಳ್ಳುತ್ತದೆ. ಇಂತಹ ಕಡೆ ಬರವಣಿಗೆಯಲ್ಲಿ ಕಥನ ಕ್ರಿಯೆಯ ಮುಂದೋಟ ಕಡಿಮೆಯಾಗಿ, ತನ್ನೊಳಗೆ ಸುತ್ತಿ ಸೆಳೆದುಕೊಳ್ಳುವ ಗಾಢತೆ ಹುಟ್ಟುತ್ತದೆ. ಕಾರಂತರದಲ್ಲಿ ಇಂತಹ ಸುಳಿಗಳಿಲ್ಲ ಎನ್ನುವುದಕ್ಕಿಂತ ಇವುಗಳ ಅವಶ್ಯಕತೆಯಿಲ್ಲ ಎನ್ನುವುದು ಹೆಚ್ಚು ಅರ್ಥಪೂರ್ಣವಾದ ಮಾತು. (ಜೋಮನ ದುಡಿ, ಬೆಟ್ಟದ ಜೀವ ಕಾದಂಬರಿಗಳ ಕೆಲವು ಭಾಗಗಳು ಇದಕ್ಕೆ ವಿನಾಯಿತಿಗಳಾಗಬಹುದು.)

ಇದರಿಂದ ಕಾರಂತರಲ್ಲಿ ತೀವ್ರತೆಯ ನಷ್ಟವಾದರು ಗಟ್ಟಿತನದ ಲಾಭವಾಗಿದೆ. ಎಲ್ಲೂ ಕಾರಂತರು ರಾಜಾರಾಯರಂತೆ ಭಾವಗೀತಾತ್ಮತೆಗೋಸ್ಕರ, ಭಾವಕ್ಕಾಗಿ ಭಾವವನ್ನು ಹುಡುಕಿಕೊಂಡು ಹೋಗುವ, ಸೂಕ್ಷ್ಮ ವೇದಿತ್ವವನ್ನು ಬೇಕೆಂದೇ ಅತಿಗೆ ತೆಗೆದುಕೊಂಡು ಹೋಗುವ ಲೋಲುಪರಾಗುವುದಿಲ್ಲ. ಈ ನಿಷ್ಠುರತೆ ಅವರ ದೃಷ್ಟಿಯ ಅತೆಂಟಿಸಿಟಿಯನ್ನು ಯಾಕೆ ಹೀಗೆ ಕಾಯುತ್ತದೆಂದು ನಾನು ಪುನಃ ಹೇಳಬೇಕಾಗಿಲ್ಲ.

* * *

ಈತನಕ ನಾನು ಆಡಿದ ಮಾತುಗಳನ್ನು ನಮ್ಮ ಭಾರತೀಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ನೋಡುವುದು ಅವಶ್ಯ. ತಮ್ಮ ಸಮಕಾಲೀನ ಸಾಹಿತಿಗಳ ನಡುವೆ ಕಾರಂತರು ತುಂಬ ವಿಶಿಷ್ಟ ವ್ಯಕ್ತಿ. ಸಾಹಿತ್ಯೇತರ ವಿಷಯಗಳಲ್ಲಿ ಉಳಿದ ಎಲ್ಲರಿಗಿಂತಲೂ ಇವರು ಹೆಚ್ಚು ಆಸಕ್ತರು. ತಾವು ಆಸಕ್ತರಾದ ಎಲ್ಲ ವಿಷಯಗಳನ್ನೂ ಭಾವನಾತ್ಮಕವಾಗಿ ಮಾತ್ರವಲ್ಲದೆ, ಬುದ್ಧಿಯನ್ನೂ ಹಚ್ಚಿ ಪರೀಕ್ಷಿಸುವುದು ಇವರ ವಿಶಿಷ್ಟತೆ. ನಮ್ಮ ಸಂಸ್ಕೃತಿ ಎಲ್ಲದಕ್ಕೂ ಸೈ ಎನ್ನುವ ಧೋರಣೆಯನ್ನು ಸುಲಭ ಸಮರ್ಪಣ ಭಾವವನ್ನು ಬೆಳೆಸುವಂಥದ್ದಾದ್ದರಿಂದ, ಈ ಸಂಸ್ಕೃತಿಯ ಪರಿಸರದಲ್ಲಿ ತಾರತಮ್ಯ ವಿವೇಚನೆಯ ವಿಮರ್ಶಾತ್ಮಕ ದೃಷ್ಟಿಯನ್ನು, ವೈಯುಕ್ತಿಕ ದೃಷ್ಟಿಕೋನದ ಚುರುಕನ್ನು ಯಾವತ್ತೂ ಕಳೆದುಕೊಳ್ಳದಂತೆ ಎಚ್ಚರವಹಿಸಿ ಬರೆಯುವ ಲೇಖಕರೆಂದರೆ ಅವರ ಸಮಕಾಲೀನರಲ್ಲಿ ಪ್ರಾಯಶಃ ಕಾರಂತರೊಬ್ಬರೆ, ಅಂದರೆ ಕಾರಂತರಿಗಿಂತ ಹೆಚ್ಚು ಶಕ್ತರಾದ ಅವರ ಸಮಕಾಲೀನ ಬರಹಗಾರರು ಕನ್ನಡದಲ್ಲಿ ಇಲ್ಲವೆಂದಲ್ಲ; ಆದರೆ ಈ ಲೇಖಕರು ಜೀವನದ ವಾಸ್ತವ್ಯದ ನಿಕಷದಲ್ಲಿ ತಮ್ಮ ದೃಷ್ಟಿಯನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಕಾರಂತರಂಥ ನಿಷ್ಠುರ ವ್ರತ ತಾಳಿದವರಲ್ಲ. ಸೌಂದರ್ಯವನ್ನೆ ಒಂದು ಪರಮ ಮೌಲ್ಯವೆಂದು ತಿಳಿಯುವ ರಸದೃಷ್ಟಿ ನಮ್ಮ ಕೆಲವರು ಲೇಖಕರಿಗೆ ಕುತ್ತಾಗಿ ಪರಿಣಮಿಸಿದರೆ, ಸುಲಭ ಅನುಭಾವದಲ್ಲಿ ತಮ್ಮ ಸಮಸ್ಯೆಗಳನ್ನು ಸಡಿಲಗೊಳಿಸಿಕೊಳ್ಳುವುದು ಇನ್ನುಳಿದ ಲೇಖಕರ ದೃಷ್ಟಿಯನ್ನು ಸುಖ ದುಃಖದ ಜೀವನದ ದಿವ್ಯದಿಂದ ಪಲಾಯನ ಮಾಡುವಂತೆ ಪ್ರೇರೇಪಿಸಿದೆ. ಇವರ ಮಧ್ಯೆ ಕಾರಂತರು ತನ್ನತನವನ್ನು ಉಳಿಸಿಕೊಳ್ಳಲೆಂದು ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ವಾಸ್ತವತೆಗೂ ಯಾವತ್ತೂ ಕಾವ್ಯಮಯವಾಗಲೊಲ್ಲದ (ಕಾವ್ಯಮಯ ಶೈಲಿಯೆಂದರೆ ಕಾವ್ಯಶಕ್ತಿಯುಳ್ಳ ಶೈಲಿಯೆಂದಲ್ಲ) ಗದ್ಯ ಶೈಲಿಯ ಖಾಚಿತ್ಯಕ್ಕೂ, ತನ್ಮಯತೆಯಲ್ಲಿ ಪವಶವಾಗದ ಭಾವಗೀತೆಯ ಸೋಂಕಿಲ್ಲದ ದೃಷ್ಟಿಕೋನಕ್ಕೂ ಆತುಕೊಂಡಿದ್ದಾರೆ ಎನ್ನಿಸುತ್ತದೆ. ಈ ಕಾರಣಕ್ಕಾಗಿಯೇ – ಅಂದರೆ ಅನುಭಾವ ಪರವಾದ ನಮ್ಮ ಸಂಸ್ಕೃತಿಯ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲೆಂದು, ಸುಲಭವಾಗಿ ತನ್ಮಯವಾಗಬಲ್ಲ ಭೋಳೆತನದಿಂದ ದೂರವಿರಲೆಂದು – ಕಾರಂತರು ವೈಜ್ಞಾನಿಕ ದೃಷ್ಟಿಗೂ ಆತುಕೊಂಡಿದ್ದಾರೆ ಎನ್ನಿಸುತ್ತದೆ. (ಹೀಗೆ ವೈಜ್ಞಾನಿಕ ದೃಷ್ಟಿಗೆ ಆತುಕೊಳ್ಳುವುದು ಸಹ ಜೀವನದ ಪ್ರಶ್ನೆಗಳಿಗೆ ಸುಲಭ ಉತ್ತರ ದೊರಕಿಸಿ ಲೇಖಕನ ದೃಷ್ಟಿಕೋನವನ್ನು ಸಡಿಲಗೊಳಿಸುವುದು ಸಾಧ್ಯ)

ಈ ವೈಜ್ಞಾನಿಕ ದೃಷ್ಟಿಯಿಂದಾಗಿ ಕಾರಂತರು ಮನುಷ್ಯನ ಎಲ್ಲ ಭಾವನೆಗಳನ್ನೂ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾರೆಯೆ ವಿನಾ, ಈ ಭಾವನೆಗಳ ಸುಳಿಗೆ ಸಿಕ್ಕವರು ಎಷ್ಟೊಂದು ತೀವ್ರವಾಗಿ ನೈಜವಾಗಿ ಸುಖದುಃಖದ ಒತ್ತಡಕ್ಕೆ ಗುರಿಯಾಗುತ್ತಾರೆಂದು ಅವರ ದೃಷ್ಟಿಯಿಂದಲೇ ನೋಡಿ ಬರೆಯುವುದಿಲ್ಲ. ಅಲ್ಲದೆ ಇವರು ವೈಯುಕ್ತಿಕ ಅವಸರದಿಂದ ಬರೆಯುತ್ತಾರೆ ಎಂದಾಗಲಿ, ಸ್ವಂತದ ಸಮಸ್ಯೆಗಳ ಪರಿಹಾರಕ್ಕೆಂದು ಬರೆಯುತ್ತಾರೆ ಎಂದಾಗಲಿ ಅನ್ನಿಸುವುದಿಲ್ಲ. ಉದಾರನೂ, ಸಂವೇದನಾಶೀಲನೂ ಆದ ಗೆಳೆಯನೊಬ ಅವಸರವಿಲ್ಲದೆ ಕಾತರಗೊಳ್ಳದೆ ಹೇಳಿದ ಕತೆಯಂತಿರುತ್ತದೆ ಕಾರಂತರ ಬೆಳವಣಿಗೆ. ಇದರಿಂದಾಗಿ ನಾನು ಈ ಮೊದಲು ವಿವರಿಸಿದಂತೆ ಅಗಾಧವಾದ ಲಾಭವಾಗಿದೆ; ಹಾಗೆಯೇ ಕೆಲವು ಅತ್ಯುತ್ತಮ ಸಾಹಿತ್ಯದಿಂದ ನಮಗೆ ಸಿಕ್ಕುವ ಮೈಮರೆಯಿಸುವ ಅನುಭವದ ನಷ್ಟವೂ ಆಗಿದೆ. ಆದರೆ ಸುಲಭ ತನ್ಮಯತೆಯ ಭಾರತೀಯ ಸಾಹಿತ್ಯ ಪರಿಸರದಲ್ಲಿ ತಮ್ಮ ವಿಶಿಷ್ಟ ದೃಷ್ಟಿಯ ಚೂಪನ್ನು ಕಾಪಾಡಿಕೊಳ್ಳುವುದೂ ಕಾರಂತರಿಗೆ ಈ ಮೂಲಕ ಸಾಧ್ಯವಾಗಿದೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ್ದು.

ಭಾರತ ನಮ್ಮನ್ನು ಮೈಮರೆಯಲು ಕರೆಯುತ್ತದೆ. ಭಾರತೀಯ ಕಲೆಯಲ್ಲಿ, ಧರ್ಮದಲ್ಲಿ, ಅನುಭಾವದಲ್ಲಿ, ತನ್ಮಯತೆಗೇ ಹೆಚ್ಚು ಬೆಲೆ. ನಮ್ಮ ಸಂಗೀತ – ತಲೆ ತೂಗಿಸಿ ಮೈಮರೆಸುವ ಸಂಗೀತ – ಇದಕ್ಕೆ ಉದಾಹರಣೆ. ತನ್ಮಯತೆಯೇ ಗುರಿಯಾದ ಕಲೆಯ ಆಸ್ವಾದನೆಗೆ ವಿಮರ್ಶಾತ್ಮಕ ಬುದ್ಧಿಯ ಸದಾ ಜಾಗೃತವಾದ ತಾರತಮ್ಯ ವಿವೇಚನೆಯ ನಿಷ್ಠುರ ದೃಷ್ಟಿ ಅಷ್ಟು ಅವಶ್ಯವಲ್ಲ.ನಮ್ಮ ಸಂಗೀತ ಈ ದೃಷ್ಟಿಯಿಂದ ಅಪ್ಪಟ ಭಾರತೀಯ ಕಲೆ.

ಆದರೆ ಕಾದಂಬರಿ ಹುಟ್ಟುವುದು ಸೈ ಎನ್ನುವುದರಿಂದಲ್ಲ; ತನ್ಮಯತೆಯಿಂದ ಭಾವಗೀತೆ ಹುಟ್ಟಿದರೆ ಪರಕೀಯ ಪ್ರಜ್ಞೆಯಿಂದಾಗಿ ಕಾದಂಬರಿ ಹುಟ್ಟುತ್ತದೆ. ಆದ್ದರಿಂದ ಕಾದಂಬರಿ ಜೀವನದ ವಿವರಗಳನ್ನು ಬರಿ ಮಾಯೆಯೆದು ಬಗೆಯದೆ ನಮ್ಮ ನೈಜತೆಯನ್ನು ಜೀವಂತವಾಗಿ ಪ್ರಕಟಿಸುವ ಸಂಗತಿಗಳೆಂದು ತಿಳಿಯುತ್ತದೆ. ಪ್ರಾಯಶಃ ಈ ಕಾರಣಕ್ಕಾಗಿಯೆ ಕಾರಂತರು ತಮ್ಮ ರಸಾಸ್ವಾದನೆಗೆ ಸಂಗೀತ, ನೃತ್ಯ, ಯಕ್ಷಗಾನಗಳನ್ನು ಸ್ವೀಕರಿಸಿ ತಮ್ಮ ವೈಚಾರಿಕತೆಗಾಗಿ – ಅಂದರೆ ತಿಳಿಯುವ ಅರಿಯುವ ಸಾಧನವಾಗಿ – ಕಾದಂಬರಿಯನ್ನು ಆರಿಸಿಕೊಳ್ಳುತ್ತಾರೆ. (ಆದರೆ ಇದು ಬರಿ ನನ್ನ ಊಹೆ ಇರಬಹುದು.)

ನಮ್ಮ ಸಂಸ್ಕೃತಿಯ ದೃಷ್ಟಿಯಿಂದ ಕಾರಂತರು ತಮ್ಮನ್ನು ತಾವು ಬರಿಯ ಸಾಹಿತಿಗಳೆಂದು ತಿಳಿದಿಲ್ಲ ಎಂಬುದು, ಈ ಧೋರಣೆಯಿಂದಾಗಿ ಅವರ ಬರವಣಿಗೆಯ ಮೇಲಾಗಿರುವ ಪರಿಣಾಮ ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ್ದು. ಕನ್ನಡ ನಾಡಿನಲ್ಲಿ ಬರೀ ಸಾಹಿತ್ಯದ ಬಗ್ಗೆ ಆಸಕ್ತರಾದ ಜನ – ನಮ್ಮ ಅನೇಕ ಸಾಹಿತಿಗಳು ಈ ಬಗೆಯವರು – ಬರವಣಿಗೆಯ ನಯ ನಾಜೂಕಿನ ಬಗ್ಗೆಯೇ ಸದಾ ಚಿಂತಿಸುವ ನಾವು ಸಾಹಿತಿಗಳೆಂದ ಮಾತ್ರಕ್ಕೆ ಬೇರೆ ವರ್ಗದ ಜನರೆಂದು ತಿಳಿಯುವ ಸಂತೃಪ್ತರು. ಈ ಸಾಹಿತ್ಯೋಪಜೀವಿಗಳ ಬರವಣಿಗೆ ಜೀವನದ ಬಿಸಿತಟ್ಟದೆ, ವಿವಿಧ ಆಸಕ್ತಿಗಳ ರಕ್ತದಾನವಾಗದೆ ಬಡವಾಗುತ್ತದೆ. ಸಾಹಿತ್ಯದಲ್ಲಿ ಆಸಕ್ತಿಯೆಂದರೆ ಸುಂದರವಾಗಿ ಬರೆಯುವುದರಲ್ಲಿ ಆಸಕ್ತಿಯಾಗಿಬಿಟ್ಟರೆ ಆಗ ಸುಂದರವಾಗಿ ಬರೆದದ್ದು ಚಿಲ್ಲರೆ ವಿಷಯವಾಗುತ್ತದೆ. ಆದ್ದರಿಂದ ನಮ್ಮ ಸಾಹಿತ್ಯಪರಂಪರೆ ನಮ್ಮ ಅರಿವಿಗೆ ಯಾವ ಸೂಕ್ಷ್ಮವನ್ನೂ ಸೇರಿಸಲಾರದೆ ಹೋಗುತ್ತದೆ. ನಮ್ಮ ಸಾಹಿತ್ಯಪರಂಪರೆ ಬಹುತೇಕ ಈ ರೀತಿಯದಾದ್ದರಿಂದಲೇ ನಮ್ಮಲ್ಲಿ ಜೀವಂತ ಸಾಹಿತ್ಯವನ್ನು ಸೃಷ್ಟಿಸಿದವರೆಲ್ಲ ಸಾಹಿತ್ಯವನ್ನು ಮುಖ್ಯ ಕಸುಬಾಗಿ ಮಾಡಿಕೊಳ್ಳದೆ ಇದ್ದವರು ಎಂಬುದು ಗಮನಾರ್ಹ. ಸಾಹಿತ್ಯ ಎಲ್ಲೆಲ್ಲಿ ‘ಬೈಪ್ರಾಡಕ್ಟ್’ ಆಗಿ ಹುಟ್ಟಿದೆಯೊ ಅಲ್ಲೆಲ್ಲ ಗಂಭೀರವಾಗಿದೆ, ಅರ್ಥಪೂರ್ಣವಾಗಿದೆ ಎನ್ನುವುದು ವೀರಶೈವ ವಚನಕಾರರನ್ನು ಓದುವಾಗ, ಕಾರಂತರ ಕಾದಂಬರಿಗಳನ್ನು ಓದುವಾಗ ಮನದಟ್ಟಾಗುತ್ತದೆ.

ಆದರೆ ಹೀಗಾಗಿರುವುದನ್ನು ವಿಷಾದನೀಯ. ಸಾಹಿತ್ಯದಲ್ಲಿ ಪ್ರಯೋಗಶೀಲತೆಯೆಂದರೆ ನಾರ್ಸಿಸಸ್ ಬಗೆಯ ಸೌಂದರ್ಯದ ಹುಡುಕಾಟವಾಗುವುದಾಗಲಿ, ಅಥವಾ ಅದೃಷ್ಟವಶಾತ್ ಬದುಕಿನ ಫಲವಾಗಿ ಅಪ್ರಯತ್ನದಿಂದ ಆಗೊಂದು ಈಗೊಂದು ಕಲಾಕೃತಿಗಳು ‘ಬೈಪ್ರಾಡಕ್ಟ್’ ಗಳಂತೆ ಹುಟ್ಟಿಕೊಳ್ಳುವುದಾಗಲಿ (ಗ್ರಾಮಾಯಣ ಕೂಡ ಈ ಬಗೆಯ ಕೃತಿಯಿರಬೇಕು) ಜೀವಂತ ಸಾಹಿತ್ಯ ಪರಂಪರೆಯ ದೃಷ್ಟಿಯಿಂದ ಆರೋಗ್ಯವಲ್ಲ.

ಯಾಕೆಂದರೆ ಕಾದಂಬರಿಯ ಮೂಲಕ ಜೀವನದ ಗಂಭೀರ ಪರಿಶೀಲನೆ ಸಾಧ್ಯವಾಗಲು ಕೃತಿಕಾರನಿಗೆ ಜೀವನದ ಬಗ್ಗೆ ಎಷ್ಟು ಆಸಕ್ತಿಯಿರಬೇಕೋ ಅಷ್ಟೇ ಕುತೂಹಲ ತನ್ನ ಕಲಾಮಾಧ್ಯಮದ ಬಗ್ಗೆಯೂ ಇರಬೇಕು. ತಾನು ಉಪಯೋಗಿಸುವ ಮಾಧ್ಯಮದ ಸಾಧ್ಯತೆಗಳನ್ನು ಹಿಗ್ಗಿಸಲು ಲೇಖಕ ಪ್ರಯತ್ನಿಸದೆ ಇದ್ದಲ್ಲಿ ಅವನ ಅತ್ಯಂತ ಸೂಕ್ಷ್ಮ ಇಂಗಿತಗಳಿಗೆ ರೂಪಕೊಡುವುದು ಸಾಧ್ಯವಾಗದೆ ಹೋಗುತ್ತದೆ. ಕಾರಂತರು ತಮ್ಮ ಪ್ರಪಂಚವನ್ನು ಅಥೆಂಟಿಕ್ ಆಗಿ ಚಿತ್ರಿಸಿದ್ದಾರೆ. ಆ ಕಾರಣಕ್ಕಾಗಿ ಇವರು ಒಬ್ಬ ಉತ್ತಮ ಕಾದಂಬರಿಕಾರರು ಎಂಬುದು ನಿಸ್ಸಂದೇಹ. ನಾನು ಈತನಕ ವಾದಿಸಿದಂತೆ ಕಾರಂತರ ದೃಷ್ಟಿಗೆ ಕಾರಂತರ ಕಾದಂಬರಿಯ ತಂತ್ರ, ಶೈಲಿ, ವಸ್ತುವಿನ್ಯಾಸ ಅನಿವಾರ್ಯವಾಗಿ ಹೊಂದಿಕೊಳ್ಳುತ್ತದೆ ಎಂಬುದೂ ನಿಜ. ಬರೆದದ್ದಷ್ಟರ ಬೆಲೆಯೇನು ಎಂದು ಹುಡುಕುವುದು ಸಾಹಿತ್ಯ ವಿಮಶೆಯ ಕೆಲಸವಾಗಬೇಕೇ ವಿನಾ, ಒಬ್ಬ ಲೇಖಕ ಇನ್ನೇನು ಬರೆಯಬಹುದಿತ್ತು ಎಂದು ಊಹಿಸುವುದು ಸಾಹಿತ್ಯ ವಿಮರ್ಶೆಯ ಎಲ್ಲೆ ಮೀರಿದ ಒಣಚರ್ಚೆಯಾಗುತ್ತದೆ ಎಂದು ನಾನು ಒಪ್ಪಿದರೂ ಕಾರಂತರ ಬಗ್ಗೆ ಒಂದು ಮಾತನ್ನು ಹೇಳಬೇಕೆನ್ನಿಸುತ್ತದೆ. ಕಾರಂತರ ಪ್ರಪಂಚ ಹೇಗೆ ಅಥೆಂಟಿಕ್ ಆಗುತ್ತದೆ ಎಂಬುದಕ್ಕೆ ನಾನು ಕೊಟ್ಟ ವಿವರಣೆಗಳನ್ನೆಲ್ಲ ಈ ಮಾತು ವಿರೋಧಿಸಿದಂತೆ ಕಾಣಬಹುದು. ಆದರೂ ಕಾರಂತರ ಕಾದಂಬರಿಗಳನ್ನು ಓದುವಾಗ ಇವರಿಗೆ ಮಾಧ್ಯಮದ ಬಗ್ಗೆ ಕುತೂಹಲವಿದ್ದಿದ್ದರೆ ಇವರ ಲೋಕ ಇನ್ನಷ್ಟು ಹಿಗ್ಗಬಹುದಿತ್ತು. ದೃಷ್ಟಿ ಇನ್ನಷ್ಟು ಚೂಪಾಗಬಹುದಿತ್ತು ಎಂದು ನನ್ನಂತೆ ಅನೇಕರಿಗೆ – ಕಾರಂತರನ್ನು ತುಂಬ ಮೆಚ್ಚಿಕೊಂಡವರಿಗೆ – ಅನ್ನಿಸಿರಬೇಕು.

* * *