ನವ್ಯಸಾಹಿತ್ಯದಲ್ಲಿ ಇಷ್ಟೊಂದು ಕಾಮ ಏಕೆ ಇದೆ ಎಂದು ಬಹಳ ಜನ ಕೇಳುತ್ತಾರೆ. ಇದು ಮರ್ಯಾದೆಯ ಪ್ರಶ್ನೆಯೊ, ನೈತಿಕ ಪ್ರಶ್ನೆಯೊ, ಸಾಹಿತ್ಯವಿಮರ್ಶೆಯ ಔಚಿತ್ಯದ ಪ್ರಶ್ನೆಯೊ ಎಂಬುದು ಸ್ಪಷ್ಟವಾಗದಿರುವುದರಿಂದ, ಸಾಹಿತ್ಯವಿಮರ್ಶೆಯ ಸೋಗಿನಲ್ಲಿ ವ್ಯಕ್ತಿಗತ ಸಂಕೋಚಗಳು ಅಡಗಿರಬಹುದಾದ್ದರಿಂದ, ಸಂಕೋಚ ಕೂಡ ಕಾಮದಷ್ಟೆ ಸಾಮಾಜಿಕ ಮನುಷ್ಯನ ಅಗತ್ಯವಾದ್ದರಿಂದ ಉಡಾಫೆಯ ಉತ್ತರಗಳಿಂದ ಈ ಪ್ರಶ್ನೆಯನ್ನು ಬಗೆಹರಿಸುವುದು ಕಷ್ಟ. ಸಾಹಿತ್ಯ ವಿಮರ್ಶಕ ಇಷ್ಟು ಮಾತ್ರ ಹೇಳಬಹುದು : ಯಾವ ವಿಷಯವೇ ಆಗಲಿ, ತೀವ್ರವಾಗಿ, ಗಂಭೀರವಾಗಿ, ಆಳವಾಗಿ ಕೃತಿಯಲ್ಲಿ ಶೋಧಿತವಾಗಬೇಕಾದರೆ ಕೃತಿಕಾರನಲ್ಲೂ ಓದುಗನಲ್ಲೂ ನಿರ್ಲಿಪ್ತತೆ ಅವಶ್ಯ; ಹೀಗೆ ನಿರ್ಲಿಪ್ತವಾಗಿ ಶೋಧಿತವಾದದ್ದು, ಒಡಮೂಡಿದ್ದು ಅಶ್ಲೀಲವಾಗಲಾರದು. ಕಾಮುಕತೆ ಎಷ್ಟು ಈ ನಿರ್ಲಿಪ್ತತೆಗೆ ಅಡ್ಡವಾದೀತೋ, ಅಷ್ಟೇ ಸಂಕುಚಿತವಾದ ‘ಮರ್ಯಾದೆ’ಯ ಕಲ್ಪನೆ ಕೂಡ ಜೀವನಾನುಭವದ ದಟ್ಟವಾದ ಅಭಿವ್ಯಕ್ತಿಗೆ ಕಂಟಕಪ್ರಾಯವಾದೀತು.

ಕಾಮದ ಬಗೆಗಿನ ನಮ್ಮ ನೈತಿಕ ಧೋರಣೆ ಕೂಡ ಪರೀಕ್ಷೆಗೆ ಒಳಗಾಗಬೇಕಾದ್ದು. ಮನುಷ್ಯ ಸಾಮಾಜಿಕನಾಗಿ ಬದುಕಲು ಸಂಕೋಚಗಳು ಅತ್ಯಗತ್ಯ. ನಮ್ಮ ನೋವಿಗೆ, ಸುಖಕ್ಕೆ ಕಾರಣವಾಗುವ ಕಾಮದ ಸುತ್ತ ಈ ಸಂಕೋಚಗಳು ಬೆಳೆದುಕೊಳ್ಳುವುದು ಅನಿವಾರ್ಯ. ಎಲ್ಲ ಸಮಾಜದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಈ ಸಂಕೋಚಗಳು ಇದ್ದೇ ಇರುತ್ತವೆ. ಅದರಲ್ಲೂ ಕೃತಕವಾದ ಜಾತಿಪದ್ದತಿಗೆ ಅಂಟಿಕೊಂಡ ನಮ್ಮ ಸಮಾಜದಲ್ಲಿ, ಹಿರಿಯರ ನಿಶ್ಚಯದಂತೆ ನಡೆಯುವ ಮದುವೆಯ ಮೂಲಕ ಮಾತ್ರ ಈ ಜಾತಿವ್ಯವಸ್ಥೆಯನ್ನು ಉಳಿಸಿಕೊಂಡು ಬರುವುದು ಸಾಧ್ಯವಾದ್ದರಿಂದ, ಇರಬೇಕಾದ್ದಕ್ಕಿಂತ ಹೆಚ್ಚು ಸಂಕೋಚಗಳು ಕಾಮದ ಬಗ್ಗೆ ನಮ್ಮಲ್ಲಿರಬಹುದೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಅಂದರೆ, ಒಂದು ಸಮಾಜವ್ಯವಸ್ಥೆ ಇರುವ ಸ್ಥಿತಿಯಲ್ಲೆ ಮುಂದುವರಿಯಬೇಕಾದಲ್ಲಿ ಗುರು – ಹಿರಿಯರಿಗೆ ಮಾನ್ಯತೆ ಇರುವುದು, ಹಿರಿಯರು ಹೇಳಿದಂತೆ ಕಿರಿಯರು ನಡೆದುಕೊಳ್ಳುವುದು ಅತ್ಯವಶ್ಯ. ಮೇಲುಕೀಳೆನ್ನದೆ ಎಲ್ಲ ಜಾತಿಯ ಜನರೂ, ಈ ಬದಲಾಗುತ್ತಿರುವ ಕಾಲದಲ್ಲೂ, ತಮ್ಮ ಮಕ್ಕಳನ್ನು ಜಾತಿವ್ಯವಸ್ಥೆಯ ಕಟ್ಟುಪಾಡಿಗೆ ತಕ್ಕಂತೆ ಮದುವೆಯಾಗಬೇಕೆಂದು ಆಶಿಸುವುದರಿಂದ, ಪ್ರೇಮಕಾಮಗಳಂತಹ ಅತ್ಯಂತ ವೈಯಕ್ತಿಕವಾದ ಅಗತ್ಯಗಳೂ ಪರಂಪರಾನುಗತವಾದ ನಿಯಮಗಳಿಗೆ ತಕ್ಕಂತೆಯೇ ನೆರವೇರಬೇಕೆಂದು ಬಯಸುವುದರಿಂದ, ‘ಪ್ರೇಮ’ ಮತ್ತು ‘ಕಾಮ”ಗಳ ಸುತ್ತ ಅತ್ಯಂತ ಜಟಿಲವಾದ ಸಂಕೋಚಗಳು ಅನಿವಾರ್ಯವಾಗಿ ನಮ್ಮ ಸಮಾಜವ್ಯವಸ್ಥೆಯಲ್ಲಿ ಬೆಳೆದುಕೊಳ್ಳುತ್ತವೆ. ಇದು ಸಹಜವೆ, ಯಾಕೆಂದರೆ, ಆದರ್ಶವಾದಿಗಳು ಎಲ್ಲ ಜಾತಿಗಳು ಒಂದೇ ಒಂದು ಬರಿಮಾತಿನಲ್ಲಿ ಸಾರಿದರೂ ಸಹ, ತನ್ನ ‘ಕಾಮ’ ಮತ್ತು ‘ಪ್ರೇಮ’ಗಳ ವಿಷಯದಲ್ಲಿ ಅತ್ಯಂತ ವೈಯಕ್ತಿಕನಾದವನು ಮಾತ್ರ ಈ ಜಾತಿಭೇದಗಳನ್ನು ಧಿಕ್ಕರಿಸಿ ನಡೆದುಕೊಳ್ಳುತ್ತಾನೆ; ತನ್ನ ಹಿರಿಯರಿಗಿಂತ ತಾನು ಪ್ರತ್ಯೇಕ ವ್ಯಕ್ತಿ ಎಂಬುದನ್ನು ಸ್ಥಾಪಿಸಿಕೊಳ್ಳಲು ಯತ್ನಿಸುತ್ತಾನೆ. ಆದ್ದರಿಂದ ‘ಕಾಮದ’ ಬಗ್ಗೆ ಭಾರತೀಯ ಯೋಚಿಸುವ ರೀತಿ ಎಷ್ಟರಮಟ್ಟಿಗೆ ನೈತಿಕವಾದದ್ದು.ಎಷ್ಟರಮಟ್ಟಿಗೆ ಪರಂಪರಾನುಗತವಾಗಿ ಹಿರಿಯರ ಇಚ್ಛೆಯ ಪ್ರಕಾರ ನಡೆಯುತ್ತಿರುವ ಈ ಸಮಾಜದ ವ್ಯವಸ್ಥೆಯನ್ನು ಉಳಿಸಿಕೊಂಡು ಬರಲು ಹೂಡಿದ ಉಪಾಯ ಎನ್ನುವುದನ್ನು ಹೇಳುವುದು ಕಷ್ಟ. ಕಾಮವೂ ಒಂದು ಮೌಲ್ಯ ಎಂದು ತಿಳಿದು ಬರೆಯುವ ಲೇಖಕ, ಈ ಜಾತಿವ್ಯವಸ್ಥೆಯ ಸಮಾಜದ ‘ಸ್ಥಾನ – ಮಾನ’ ಕಲ್ಪನೆ, ‘ಮರ್ಯಾದೆ’ ಕಲ್ಪನೆ, ‘ಸಭ್ಯತೆ’ಯ ಧೋರಣೆ ಇತ್ಯಾದಿಗಳನ್ನು ಧಿಕ್ಕರಿಸಿ ಜೀವನಾನುಭವವನ್ನು ತನಗೆ ಸರಿಕಂಡ ರೀತಿಯಲ್ಲಿ ಅಭಿವ್ಯಕ್ತಿಸಲು ಶ್ರಮಿಸಬೇಕಾಗುತ್ತದೆ; ವರ್ಗ – ವರ್ಣಭೇದಗಳ ಸಾಮಾಜಿಕ ವ್ಯವಸ್ಥೆಗೆ ಅವಶ್ಯವಾದ ‘ನೀತಿ’ ಕಲ್ಪನೆಗಿಂತಲೂ ಆಳವಾದ ನೀತಿಯನ್ನು ದಿಗಿಲುಪಡೆದೆ ಹುಡುಕಿಕೊಳ್ಳಬೇಕಾಗುತ್ತದೆ. ಯಾವ ಸಮಾಜದ ವ್ಯವಸ್ಥೆಯಾಗಲಿ ತನ್ನ ಹಿತರಕ್ಷಣೆಗೋಸ್ಕರ ಮುಚ್ಚಿಡಲು, ಅಮುಕಲು ಪ್ರಯತ್ನಿಸುವ ಆತ್ಮನಿಷ್ಠ ಸತ್ಯಗಳನ್ನು ಬಿಚ್ಚುಮನಸ್ಸಿನಿಂದ ಸಾಹಿತಿ ನೋಡಬೇಕಾಗುತ್ತದೆ. ನಮ್ಮ ಜೀವನಕ್ರಮ ಯಾವುದನ್ನು ಹೊರಗೆ ಬರದಂತೆ ಅದುಮಿಡಲು ಪ್ರಯತ್ನಿಸುತ್ತದೋ ಅದಕ್ಕೆ ಅವಕಾಶ ಸಾಹಿತ್ಯದಲ್ಲಿ ಇರುವುದರಿಂದಲೇ ಸಾಹಿತ್ಯದಲ್ಲಿ ಸತ್ಯದ ಶೋಧನೆ ಸಾಧ್ಯವಾಗುತ್ತದೆ. ಸಂಕೋಚಗಳನ್ನೂ, ಸಂಕೋಚಗಳಾಚೆ ಅಡಗಿರುವ ಸತ್ಯಗಳನ್ನೂ, ಕೆಲವು ಸಂಕೋಚಗಳು ಎಷ್ಟು ಅವಶ್ಯವೆಂಬುದನ್ನೂ ಇವು ಅವಶ್ಯವಿದ್ದರೂ ಆತ್ಮನಿಷ್ಠ ಅನುಭವ ಸಾಮಾಜಿಕತೆಗೆ ಯಾವತ್ತೂ ಬೇರೆಯಾಗಿರುವುದು ಸಾಧ್ಯವೆಂಬುದನ್ನೂ ಒಟ್ಟಿಗೆ ನೋಡುವ ಲೇಖಕ ನಿಷ್ಠುರವಾಗಿ, ನಿರ್ಲಿಪ್ತವಾಗಿ ಮರ್ಯಾದೆ – ಸಭ್ಯತೆ – ದಾಕ್ಷಿಣ್ಯಗಳಿಂದ ವಂಚಿತನಾಗದೆ ಬರೆಯುತ್ತಾಹೋಗಬೇಕಾಗುತ್ತದೆ. ಆತ್ಮನಿಷ್ಠ ಪ್ರಜ್ಞೆಯುಳ್ಳ ಇವನು, ತಮ್ಮ ಸಮಾಜವ್ಯವಸ್ಥೆಯನ್ನೂ, ಅರಾಜಕತೆಯ ಭಯದಿಂದ ಹುಟ್ಟಿದ ನೀತಿ – ನಿಯಮಗಳ ಕಲ್ಪನೆಗಳನ್ನೂ ಕಣ್ಣುಮುಚ್ಚಿ ಅನುಸರಿಸುವ ಮಂದಿಯ ನಡುವೆ ಪರಕೀಯನಾಗಿ ಬದುಕಬೇಕಾಗುತ್ತದೆ. ಕಾಮದ ವಿಷಯದಲ್ಲಿ ಕಾಮುಕನಾಗಿ ಬರೆಯುವಾತನಿಗೂ, ಮರ್ಯಾದೆ – ಸಭ್ಯತೆಗಳಿಂದ ಬಿಗಿದುಕೊಂಡು ಆತ್ಮವಂಚನೆ ಮಾಡಿಕೊಳ್ಳುವವನಿಗೂ, ಈ ಶೋಧನೆಯ ಕಷ್ಟ ಅರ್ಥವಾಗದು; ನಿರ್ಲಿಪ್ತತೆಯ ಅಗತ್ಯ ಬೀಳದು.

ನವ್ಯ ಸಾಹಿತ್ಯ ನಮ್ಮ ಸದ್ಯದ ಸಮಾಜದ ಧೋರಣೆಗಳನ್ನು ಒಪ್ಪಿಕೊಳ್ಳದಿರುವುದರಿಂದಲೇ ಪ್ರತಿಷ್ಠಿತರ ಲಕ್ಷಣಗಳಾದ ಮರ್ಯಾದೆ – ಸಭ್ಯತೆ – ಸಂಕೋಚ, ಸುಸಂಸ್ಕೃತ ಮಾತಿನ ಸಭ್ಯ ಬರಡುತನ ಇತ್ಯಾದಿಗಳನ್ನು ಧಿಕ್ಕರಿಸುತ್ತಿದೆ. ನವ್ಯ ಸಾಹಿತ್ಯದಲ್ಲಿ ಬರುವ ‘ಹೊಲಸು’ ಮಾತುಗಳಿಗೆ ಮೂಗು ಮುರಿಯುವ, ಇದು ಭಾರತೀಯ ಸಂಸ್ಕೃತಿಗೆ ತಕ್ಕುದಲ್ಲವೆನ್ನುವ ನಮ್ಮ ಪ್ರತಿಷ್ಠಿತರು ನಿತ್ಯವೂ ನಮ್ಮ ಕೂಲಿಗಾರರ, ‘ಕೀಳು’ ಜನರ ವಾಗ್ವಾದವನ್ನು ಕೇಳಿಸಿಕೊಳ್ಳುವುದಿಲ್ಲವೆ? ಇವರ ನಿಜವಾದ ಆಕ್ಷೇಪಣೆ ಈ ಮಾತುಗಳಾಗಲಿ ಸತ್ಯಗಳಾಗಲಿ ತಮ್ಮ ಕವಿಗಳ ಮೇಲೆ ಬೀಳುತ್ತವೆಂದಲ್ಲ; ಓದು ಬರಹ ಕಲಿತು ಉಚ್ಚವರ್ಗಕ್ಕೆರಿದ ‘ನಮ್ಮ ಹುಡುಗ’, ಇಂತಹ ಮಾತುಗಳನ್ನು ಬಳಸಿ ಈ ‘ಕೀಳು’ ಜನರಂತೆ ಆಗುತ್ತಿದ್ದಾನಲ್ಲ ಎಂದು. ಉಚ್ಚಾರಣೆಯಲ್ಲಿ, ನಿತ್ಯ ಬಳಸುವ ಮಾತುಗಳಲ್ಲಿ ಕೂಡ ಜಾತಿವ್ಯವಸ್ಥೆಯನ್ನು ಉಳಿಸಿಕೊಳ್ಳಲು ಯತ್ನಿಸುವ ಈ ಸಮಾಜ ನವ್ಯಸಾಹಿತ್ಯದಲ್ಲಿ ಭಾಷೆ ಕಲಸಿಕೊಂಡುಬಿಡುವುದನ್ನೂ, ಉಚ್ಚವರ್ಗದಲ್ಲಿರುವವನಲ್ಲೂ ಕಾಮ ಪ್ರವೃತ್ತಿ ಇದೆ ಎಂಬುದನ್ನು ಗುರುತಿಸುವುದನ್ನೂ ಅಸಹನೆಯಿಂದ ಕಾಣುವುದು ಸಹಜವಾದದ್ದೆ. ಆದ್ದರಿಂದ ಈಗ ತಾನೆ ಉಚ್ಚ ವರ್ಗಕ್ಕೇರಿ ನವೀನ ಬ್ರಾಹ್ಮಣರಾದವರು ಮತ್ತು ಸನಾತನಿಗಳು ನವ್ಯ ಸಾಹಿತ್ಯವನ್ನು ಟೀಕಿಸುವಾಗ ಎಷ್ಟರಮಟ್ಟಿಗೆ ತಮ್ಮ ನೈತಿಕ ಧೋರಣೆಗಳು ಗಣ್ಯತೆಯ ಕಲ್ಪನೆಯಿಂದ ಹುಟ್ಟಿದವು, ಅನಿವಾರ್ಯ ಸಂಕೋಚಗಳಿಂದ ಉದ್ಭವವಾದವು, ಜಾತಿಪದ್ದತಿಯಿಂದ ಬೆಳೆದವು ಇತ್ಯಾದಿ ಪ್ರಶ್ನೆಗಳನ್ನು ತಮಗೇ ಕೇಳಿಕೊಂಡು ಸಾಕಷ್ಟು ನಿರ್ಲಿಪ್ತರಾಗಿ ಬರೆಯುವುದು ಅವಶ್ಯ. ಇಲ್ಲದಿದ್ದಲ್ಲಿ ನಾನು ಮೊದಲು ಹೇಳಿದಂತೆ ಸಾಹಿತ್ಯ ವಿಮರ್ಶೆಯ ಸೋಗಿನಲ್ಲೊ, ತಮ್ಮದು ಸಾರ್ವಕಾಲಿಕವಾದ ನೈತಿಕ ಕಲ್ಪನೆ ಎನ್ನುವ ಭ್ರಾಂತಿಯಲ್ಲೊ ನಾಶವಾಗಿ ಹೋಗಬೇಕಾದ ಈ ಜಾತಿ ವ್ಯವಸ್ಥೆಯ ಸಂಕೋಚಗಳು ಗಣ್ಯಸಮಾಜದ ಮಡಿವಂತ ಧೋರಣೆಗಳು ಅಡಗಿ ಕೊಂಡು ವಿಮರ್ಶೆಯ ನಿರ್ಲಿಪ್ತ ಕೆಲಸಕ್ಕೆ ಅಡ್ಡಿಯಾಗುತ್ತವೆ – ಅಷ್ಟೆ.

ಚನ್ನಯ್ಯನವರ ಕವನಗಳನ್ನು ಓದುವಾಗ ಈ ಮೇಲಿನ ಪ್ರಶ್ನೆಗಳು ಏಳುತ್ತವೆಂಬ ಕಾರಣದಿಂದ ಇಷ್ಟು ದೀರ್ಘವಾಗಿ ಬರೆಯಬೇಕಾಯಿತು. ‘ಕಾಮದ’ ಬಗ್ಗೆ ಚನ್ನಯ್ಯ ಬರೆಯುತ್ತಾರೆಂಬ ಕಾರಣದಿಂದಲೇ ಇವರು ಒಳ್ಳೆಯ ಧೈರ್ಯವಂತ ಕವಿಯೆಂದಾಗಲೀ ಅಥವಾ ಕೆಟ್ಟ ಕವಿಯೆಂದಾಗಲೀ ನಿರ್ಣಯಿಸುವುದು ಅಸಾಧ್ಯ. ತಮ್ಮ ಮೊದಲನೆ ಸಂಕಲನವಾದ ಕಾಮಿಯಲ್ಲಿ ಚನ್ನಯ್ಯನವರು ಬೆಕ್ಕಿನಮತೆ ಕದ್ದು ಬರುವ, ನೀತಿ – ಅನೀತಿಗಳ ಕಲ್ಪನೆಗಳನ್ನು ಬದಿಗೊತ್ತಿಬಿಡುವ ಕಾಮದ ಸ್ವರೂಪವನ್ನು ಗುರುತಿಸಿದ್ದುರ. ಅದೇ ಸಂಕಲನದ ಅತ್ಯುತ್ತಮ ಕವನದ ‘ಲಕ್ಕಜ್ಜಿ’ಯಲ್ಲಿ ಈ ಮೂಲಭೂತ ಕಾಮ ಜೀವನಾನುಭವದ ಉಳಿದ ಸಂಗತಿಗಳ ಜೊತೆಗೂ ಸಂಕೀರ್ಣವಾಗಿ ಹೊಸೆದುಕೊಂಡು ಒಂದು ಬಾಳು ಸಾಂಸಾರಿಕವಾಗಿ, ವ್ಯಕ್ತಿಯಾಗಿ ಪಕ್ವವಾದ ಬಗೆಯನ್ನೂ, ಇವುಗಳನ್ನು ಕುರಿತು ಯೋಚಿಸುವ ಲಕ್ಕಜ್ಜಿಯ ಅನುಭವದಲ್ಲಿರುವ ಅಚಿಂತ್ಯವಾದ ಆಳವನ್ನೂ ಕವಿ ಬಹು ಸೂಚ್ಯವಾಗಿ ಸೂಕ್ಷ್ಮವಾಗಿ ಚಿತ್ರಿಸಿದ್ದರು. ಈ ಆಮೆ ಸಂಕಲನದ ಕವನಗಳು ಸಾಮಾಜಿಕತೆಗೆ ಹೊರಗಿರುವ ಭಾವಗಳನ್ನು ಚನ್ನಯ್ಯನವರು ಗುರುತಿಸುವ, ಅರಿತುಕೊಳ್ಳುವ ಕ್ರಮದಲ್ಲಿ ಆಗಿರುವ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ಅಂದರೆ, ಚನ್ನಯ್ಯನವರು ಕಾಮದ ಬಗ್ಗೆ ಇಲ್ಲಿ ಬರೆಯುವ ರೀತಿ ಹಿಂದಿನ ಸಂಕಲನಕ್ಕಿಂತ ಹೆಚ್ಚು ಜಟಿಲವಾದದ್ದಾಗಿದೆ; ಜೀವನಾನುಭವದ ಅನೇಕ ಉಳಿದ ಅಂಶಗಳನ್ನೂ ಒಳಗೊಂಡು ಹೆಚ್ಚು ನಿರ್ಲಿಪ್ತವಾಗಿ ಮೂಡಿದ್ದಾಗಿದೆ. ‘ಲಕ್ಕಜ್ಜಿ’ಯಲ್ಲಿ ತಮಗೆ ಏನು ಸಾಧ್ಯ ಎಂಬುದನ್ನು ತೋರಿಸಿದ್ದರೊ ಅದನ್ನು ಈ ಸಂಕಲನದ ಕವನಗಳಲ್ಲಿ ಚನ್ನಯ್ಯ ಸಾಧಿಸಿದ್ದಾರೆ.

ಮನುಷ್ಯನ ಸ್ವಭಾವವನ್ನು ನಿರ್ಲಿಪ್ತವಾಗಿ ಅರಿಯುವುದೇ ಚನ್ನಯ್ಯನವರ ಕವನಗಳ ಪ್ರಯತ್ನವೆನ್ನಬಹುದು. ‘ಬೂರ್ಶ್ವಾ’ ಕವನದಲ್ಲಿ ತಾನು ದ್ವೇಷಿಸುವ ಬೂರ್ಶ್ವಾ ತಾನೇ ಅಗಿರಬಹುದೆಂಬುದನ್ನು ಅರಿಯುವ ಕವನದ ಕೊನೆಯಲ್ಲಿ ನೋಡಬೇಕು. ನವೋದಯದ ಕವಿಗಳಿಗಿದ್ದ ತಾನೊಬ್ಬ ಭಾವುಕನೆನ್ನುವ ಠೀವಿ ನವ್ಯಕವಿಯಲ್ಲಿ ಇಲ್ಲದಿರುವುದು ಇವನ ನಿರ್ಲಿಪ್ತತೆಗೆ ಸಹಾಯಕವಾಗುತ್ತದೆ. ‘ಇದು ಕನ್ನಡಿಯಲ್ಲಿ ನನ್ನನಾ ಕಂಡುಕೊಂಡದ್ದು’ ಎನ್ನುವ ಪ್ರಜ್ಞೆ ‘ದುಃಸ್ವಪ್ನ’ದಲ್ಲೂ ಇದೆ. ಸಾಮಾಜಿಕ ಮನುಷ್ಯ ಕಣ್ಣುಬಿಟ್ಟು ನೋಡಲು ಹೆದರುವ, ಆದರೆ ಮನುಷ್ಯನಿಗೆ ತನ್ನ ಅಸ್ತಿತ್ವದ ಅರಿವನ್ನು ಚುರುಕಾಗಿ ಕೊಡುವ ‘ಹಿಂಸೆ’ ಮತ್ತು ‘ಕಾಮ’ಗಳು ಚನ್ನಯ್ಯನವರ ಕವನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ‘ಹಿಂಸೆ’ ಮತ್ತು ‘ಕಾಮ’ಗಳು ಪ್ರತ್ಯೇಕಿಸಲಾರದಂತೆ ಕೆಲವೊಮ್ಮೆ (ಉದಾಹರಣೆಗೆ ‘ನಾನು’) ಬೆಸೆದುಕೊಳ್ಳುತ್ತವೆ :

ಹಾರೈಸಿದ್ದೆ ಅವನ ಬಲಿಷ್ಠ ಚಂಚು ಪಕ್ಷಗಳ
ಮೃತ್ಯು ಬಂಧನಕ್ಕೆ ; ಪಂಜರದ
ಪ್ರಣಯ ಕೇಳಿಯ ಬಲಾತ್ಕಾರಕ್ಕೆ ; ಕನಸಲ್ಲೆಲ್ಲ
ಆಕಳಿಸಿದೀ ಹುಣ್ಣಿನೊಳಕ್ಕೆ ಹೊಕ್ಕು ಕಡೆದಂತೆ
ಮಂದರ – ಬಯಸಿ ಬಾಯ್ಬಿಟ್ಟೆ.. ( ‘ನಾನು’)

ಈ ಮೇಲಿನ ಸಾಲುಗಳಲ್ಲಿರುವಂತೆ ಚನ್ನಯ್ಯನವರ ಭಾವನೆಗಳು, ಮಾತುಗಳು ತೀವ್ರವಾಗಿದ್ದರೂ ಕವನದ ನಡಿಗೆ ನಿಧಾನವಾದ್ದರಿಂದ ಶಕ್ತಿಯಿಂದ ಕೂಡಿದ ಸಂಯಮದ ಅನುಭವ ನಮಗಾಗುತ್ತದೆ. ಹೀಗೆ ಉರಿಯುವ ಮಾತುಗಳು, ಆದರೆ ಮಂದಗತಿಯ ಲಯ ಚನ್ನಯ್ಯನವರ ಕವನಗಳ ವೈಶಿಷ್ಟ್ಯವೆನ್ನಬಹುದು :

…..ಇದರ
ಹೊಟ್ಟೆಗೊಂದು
ದಬ್ಬಳ ಚುಚ್ಚಿ
ಜೀವಂತ ಜ್ವಾಲೆಯಲ್ಲಿ
ಬೇಯಿಸಿ ತಿನ್ನಬೇಕು ಎಂದುಕೊಳ್ಳುತ್ತಿದ್ದಂತೆ
ತನ್ನ ಬಕ ಕತ್ತ
ಕೊಂಡಿಗಳಿಂದ ಹಿಡಿದು
ನಳ್ಳಿ ಹಿಸುಕುತ್ತಿದ್ದಾಗ
ಮೈಗೂದಲು ನಿಮಿರಿ ಎಚ್ಚೆತ್ತ
ಸ್ಥಿತಿಯಲ್ಲೆ ಕಮಟಿ ಬಿದ್ದೆ.  (‘ಏಡಿ’)

ಈ ‘ಕಾಮ’ ಮತ್ತು ‘ಹಿಂಸೆ’ಗಳ ಸೆಳೆತಕ್ಕೆ ಸಿಕ್ಕಿಕೊಂಡ ಮನಸ್ಸಿನಂತೆಯೇ, ಯಾವ ಸ್ಪಷ್ಟ ರೂಪಚರ್ಯೆಯೂ ಇಲ್ಲದೆ ತನ್ನ ಸ್ವರೂಪವನ್ನು ನಿಶ್ಚಯಿಸಿಕೊಳ್ಳಲು ಕತ್ತಲಿನಲ್ಲಿ ಒದ್ದಾಡುವ ಮನಸ್ಸು ಮತ್ತೆಮತ್ತೆ ಇವರ ಕವನಗಳಲ್ಲಿ ಕಾಣಿಸಿಕೊಳ್ಳುತ್ತದೆ. ‘ಬೆಳಗು’ ಕವನ ಮನಸ್ಸಿನ ಈ ಸ್ಥಿತಿಗೆ ಅಭಿವ್ಯಕ್ತಿಯನ್ನು ಕೊಡುತ್ತದೆ. ಈ ಕವನದ ನಾಯಕ ಪದ್ಮಾಸನ ಹಾಕಿ, ಕುಂಭಕಮಾಡಿ, ಹುಬ್ಬಿನ ನಡುವೆ ದೃಷ್ಟಿ ನಿಲ್ಲಿಸಿ ಧ್ಯಾನಿಸಿದಾಗ ಕಾಣುವುದೇನು?

….ಎಲ್ಲೊ ಕಂಡ
ಮುದ್ದುಮುಖ ತೋರ ತಿಕ
…..       ……….  …..       ……
ಬೆಳೆದೆದ್ದು ನಿಂತ ಶಿಶ್ನ ಕಾನನದ ತುದಿಗೆ
ಕುಕ್ಕುವ ರಣಹದ್ದು ನೂರಾರು.

ಇವನ ಮನಸ್ಸನ್ನೂ ಕಾಡುತ್ತದೆ; ‘ಎಲ್ಲ ಕಳೆದ ಬಾಹುಬಲಿ’. ಆದರೆ ವಿರುದ್ಧ ಭಾವಗಳ, ಹಿಂಸೆ ಕಾಮಗಳ ಸೆಳೆತಕ್ಕೆ ಸಿಕ್ಕ ಇವನಿಗೆ ನಿಶ್ಚಿತವಾದ ವ್ಯಕ್ತಿತ್ವವಿಲ್ಲ:

ಹಗಲಿಗೆ ಮತ್ತೆ ತೊಡಬೇಕು ಹಗಲು – ವೇಷ ;
ಅಂಗಿ ಶರಾಯಿ ; ಇಲ್ಲ ಕೋಟು ಪ್ಯಾಂಟು ;
ಇಲ್ಲ ಜುಬ್ಬ ಕಚ್ಚೆ ; ಅಕೇಶನ್ನಿಗನುಗುಣವಾಗಿ.

ತನ್ನ ನಿಜವಾದ ಸ್ವರೂಪವೆಂದರೆ ಯಾವ ನಿಶ್ಚಿತ ಸ್ವರೂಪವೂ ಇಲ್ಲದಿರುವುದೆಂಬುದು ಕವನದ ಕೊನೆಯಲ್ಲಿ ಗೊತ್ತಾಗುತ್ತದೆ :

ಜಿಗಣೆ ಥರ ಬೀಜಾಣು ಥರ
ಚರ್ಯಯಿಲ್ಲದೀ ಸಿಂಬಳದ ಜಾಡಲ್ಲಿ
ಲಕ್ಷದಲ್ಲೊಬ್ಬನಾಗಿ,
ತೆವಳಲು ತೆರಳಬೇಕು.

ಯಾವ ನೈತಿಕ ಠೀವಿಗಳಿಗೂ ಸಿಕ್ಕಿಹಾಕಿಕೊಳ್ಳದೆ, ಪೋಸ್ ಧರಿಸಿ ನಿಲ್ಲದೆ ತನ್ನಷ್ಟಕ್ಕೆ ತಾನೆ ಅಂತರಂಗ – ಬಹಿರಂಗ ಸತ್ಯಗಳನ್ನು ಗುರುತಿಸಿಕೊಳ್ಳುತ್ತ ಹೋಗುವ ಈ ಕವನಗಳು ಕಿಂಚಿತ್ತೂ ಓದುಗರ ಕಡೆ ಮುಖ ಮಾಡಿ ನಿಲ್ಲುವುದಿಲ್ಲವೆನ್ನುವುದು ಗಮನಿಸಬೇಕಾದ್ದು. ‘ಪರಕೀಯ’ ಎನ್ನುವ ಕವನದಲ್ಲಿ ಈ ಸಂಕಲನದ ಕವನಗಳ ಹಿಂದಿರುವ ವಿಚಾರವನ್ನು ಸ್ವಲ್ಪವೂ ಭಾವವಶವಾಗದ ಧಾಟಿಯಲ್ಲಿ ಹೇಳಲಾಗಿದೆ. ಒಂದೊಂದು ಕ್ಷಣವನ್ನೂ ಬದುಕಬೇಕು ಎನ್ನುವ ಇವನು“ಜನಿವಾರ ಕರಡಿಗೆ ಇತ್ಯಾದಿ ಯಾವ ಲಾಂಛನಕ್ಕೂ ಬದ್ಧನಲ್ಲ.” ಆದರೆ,

ಬಿಚ್ಚಿ ಚೆಲ್ಲಿದ ಹೆರಳ ಅವ್ಯಕ್ತದಲ್ಲಿ
ದೀಪ ಹಚ್ಚಲು ಹೋಗಿ, ಆರಿ,
ಅರ್ಥವಾಗದೆ
ಸೂರೆಡೆಗೆ ಮರುಳು ದೃಷ್ಟಿಯಟ್ಟಿದವ

ತನ್ನ ಸದ್ಯದ ಸ್ಥಿತಿ ಏನೆಂಬ ಪರಿಜ್ಞಾನವೇ ಇವನಿಗೆ ಮುಖ್ಯವಾದುದು :

ತಿನ್ನುವಾಗ, ವಿಸರ್ಜಿಸುವಾಗ
ಉಡುವಾಗ ಪಡುವಾಗ ಬರೆವಾಗ
ಕೈತುಂಬ ಅದ ಹಿಡಿದು ಅವಳ
ಧ್ಯಾನಿಸುವಾಗ,
ಮತ್ತೆ
ಜನಪಾತ್ರೆ ಗದ್ದಲದ ನಡುವಿನ
ಮಡುವಲ್ಲಿ ಒಬ್ಬಂಟಿಯಾಗಿ ಪರಕೀಯನಾದವ.

ಈ ಸಂಕಲನದ ಒಂದು ಉತ್ತಮ ಪದ್ಯವಾದ ‘ಆಮೆ’ ಹೀಗೆಯೇ ಮನಸ್ಸಿನ ಒಂದು ಅವಸ್ಥೆಯನ್ನು ಚಿತ್ರಿಸುತ್ತದೆ. ಈ ಪದ್ಯ ಮೃಗಾಲಯದಲ್ಲಿ ಕಂಡ ಒಂದು ಆಮೆಯ ವಾಸ್ತವ ಚಿತ್ರವೂ ಹೌದು; ಜೊತೆಗೇ ಮನಸ್ಸಿನ ಒಂದು ಅವಸ್ಥೆಯನ್ನು ರೂಪಿಸುವ ಪ್ರತೀಕವೂ ಹೌದು. ಕವನದ ಮಂದಗತಿಯ ಲಯ ಆಮೆಯ ನಡಿಗೆಯನ್ನೂ, ಈ ಮೂಲಕ ಕವನ ಚಿತ್ರಿಸುವ ಮನಸ್ಸಿನ ಅವಸ್ಥೆಯನ್ನೂ ಒಟ್ಟಿಗೆ ಅಭಿವ್ಯಕ್ತಿಸಲು ಸಹಾಯಕವಾಗುತ್ತದೆ. ಆಮೆಯ ಸ್ವಗತವಾಗಿ ಪದ್ಯ ಶುರುವಾಗುವುದರಿಂದ ಈ ಧ್ವನಿಶಕ್ತಿಯನ್ನು ಕವನ ಪಡೆದುಕೊಳ್ಳುತ್ತದೆ ಎನ್ನಿಸುತ್ತದೆ. ಉಳಿದ ಕವನಗಳಲ್ಲಂತೆಯೇ ಇಲ್ಲಿಯೂ ಕೂಡ ಕವಿ ದುಃಸ್ವಪ್ನದಂತಹ ಒಂದು ಅನುಭವವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾನೆ :

ಅತ್ತ ತೆವಳಲೆತ್ನಿಸಿದರೆ ಸಾಕು
ಅಳೆಯಲಾರದಾಳದಿಂದ ಹೆಸರರಿಯದದು ಬಂದು
ನಾಲ್ಕೂ ಬದಿಯಿಂದ ತನ್ನ ನಳಿಗೆಗಳ ನಿಧಾನ
ತೂರಿ, ಆಲಂಗಿಸಿ ಹಿಡಿತ ಬಿಗ ಮಾಡಿ
ಬಂಧಿಸುತ್ತದೆ.

ಈ ಮಾನಸಿಕ ಅಸ್ವಸ್ಥ ಸ್ಥಿತಿ – ಅಸ್ತಿತ್ವದಿಂದಲೇ ನಿಷ್ಕಾರಣ ಉತ್ಪನ್ನವಾಗುವ, ಚಡಪಡ ಹುಟ್ಟಿಸುವ, ಉಸಿರು ಕಟ್ಟಿಸುವ ಸ್ಥಿತಿ – ಕವನದಲ್ಲಿ ತೀವ್ರವಾಗಿ ನಮ್ಮ ಅನುಭವಕ್ಕೆ ಬರುತ್ತದೆ.

……..ಬಂಧನದಲ್ಲಿ ಸಿಕ್ಕ ನಾನು
ಒದ್ದಾಡಲೂ ಆರದೆ ನಿಶ್ಶಕ್ತನಾಗಿ ಮೈಮುದುಡಿ
ತರಗು ಕೈಕಾಲು ಮುಖ ಕತ್ತನ್ನೆಲ್ಲಾ
ಚಿಪ್ಪೊಳಕ್ಕೆಳೆದು ಬಿದ್ದುಕೊಳ್ಳುತ್ತೇನೆ ; ಬಿರಿಯಲರದ
ಕವಚ ಸಿಡಿವಂತೆ ಅವಚುತ್ತದೆ. ನಾನು ಚಿಪ್ಪೊಳಗೇ
ಬದುಕು ಸಾವಿನ ಕೂದಲೆಳೆ ಗಡಿಯಲ್ಲಿ
ಕೃತಕ ಕೊಳದ ನೀರಿಗಾಗಿ ಕನಸ ಕಾಣುತ್ತೇನೆ.

ಹೀಗೆಯೇ, ‘ಏಡಿ’ ಪದ್ಯ ‘ಆಮೆ’ಯಷ್ಟು ಯಶಸ್ವಿ ಎನ್ನಿಸದಿದ್ದರೂ ಚನ್ನಯ್ಯನವರಿಗೆ ಕವನದ ಧಾಟಿಯ ಮೇಲಿರುವ ಹಿಡಿತದಿಂದಾಗಿ ಕವನದಲ್ಲಿ ಬರುವ ಹಿಂಸೆಯ ವರ್ಣನೆ, ಸ್ವಪ್ನ ಕ್ರಿಯೆಯಾಗಿ ಬರುವ ಆಸೆ – ವಿಫಲತೆಯ ಭಾವಗಳು ಎಲ್ಲೂ ಹಿಸ್ಟೀರಿಯ ಆಗುವುದಿಲ್ಲ.

ಚನ್ನಯ್ಯನವರು ಗದ್ಯದ ಲಯಗಳನ್ನು ಬಳಸಿಕೊಳ್ಳುವುದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ‘ಮುಂಡಗಳು’ ಪದ್ಯದಲ್ಲಿ ನೇರವಾದ ಗದ್ಯವನ್ನೇ ಉಪಯೋಗಿಸಿಕೊಂಡಿರುವುದು ಕುತೂಹಲ ಹುಟ್ಟಿಸುವಂತಿದೆ. ವಚನದ ಧಾಟಿಯನ್ನು ಇವರು ಸಮರ್ಥವಾಗಿ ಬಳಸಿಕೊಳ್ಳಬಲ್ಲರು ಎಂಬುದಕ್ಕೆ ‘ಲೋಹಿಯಾ’ ಕವನ ಉತ್ತಮ ಉದಾಹರಣೆ.

ಈ ಸಂಕಲನದ ಯಾವ ಕವನವನ್ನೂ ಅತ್ಯುತ್ತಮ ಕವನ ಎನ್ನುವುದು ಅಸಾಧ್ಯವಾದರೂ ಒಂದು ಅರ್ಥಪೂರ್ಣವಾದ ಕಾವ್ಯವ್ಯಕ್ತಿತ್ವವಾಗಿ, ಸಂವೇದನೆಯಾಗಿ ಚನ್ನಯ್ಯನವರು ಬೆಳೆಯಬಹುದು ಎಂಬುದಕ್ಕೆ ಅನೇಕ ಚಿನ್ಹೆಗಳು ಈ ಸಂಕಲನದಲ್ಲಿ ಸಿಗುತ್ತವೆ. ಅಸ್ತಿತ್ವವಾದದಿಂದ ಪ್ರಭಾವಿತರಾದ ಇವರು ತಾವು ವೈಚಾರಿಕವಾಗಿ ಪಡೆದದ್ದನ್ನು ದಕ್ಕಿಸಿಕೊಂಡು, ವೈಯಕ್ತಿಕ ಜರೂರಿನಿಂದ ಅನುಭವಿಸಿ, ಅಚ್ಚಗನ್ನಡವಾಗಿಸಬ್ಲರೆಂಬುದು ಈ ಕವನಗಳ ಉದ್ದಕ್ಕೂ ಕಾಣಿಸುತ್ತದೆ. ‘ಅಣ್ಣ’ ಎನ್ನುವ ಪದ್ಯದಲ್ಲಿ ಬಸವಣ್ಣ, ಅಕ್ಕ ಇವರ ಅನುಭಾವದ ದರ್ಶನಕ್ಕೂ ಸ್ವಂತ ಅಸ್ತಿತ್ವದ ಸ್ಥಿತಿಗೂ ಇರುವ ಭೇದಗಳನ್ನು ಇವರು ಗುರುತಿಸಿಕೊಳ್ಳುವ ಕ್ರಮದಲ್ಲಿ ಕವಿಯ ಆತ್ಮವಿಶ್ವಾಸ ವ್ಯಕ್ತವಾಗುವ ಬಗೆಯನ್ನು ನೋಡಿ. ಕವನದುದ್ದಕ್ಕೂ ಅಯನೆಸ್ಕೊವಿನ ನಾಟಕವಾದ ಅಮೇದಿಯಲ್ಲಿ ಬರುವ ಬೆಳೆಯುತ್ತಹೋದ ಹೆಣದ ಪ್ರತೀಕವನ್ನು ಇವರು ಬಳಸಿಕೊಳ್ಳುವ ವಿಧಾನ ಕವಿಯೊಬ್ಬ ಕಂಡದ್ದು, ಪಡೆದದ್ದು, ಓದಿದ್ದು ಒಂದು ಸಮಗ್ರ ಅನುಭವದ ಅಂಶಗಳಾಗಿ ಹೇಗೆ ಹೊಂದಿಕೊಳ್ಳುತ್ತದೆ, ಮೈಗೂಡಿದ ಕೃತಿಯಾಗುತ್ತದೆ ಎಂಬುದಕ್ಕೆ ಒಳ್ಳೆಯ ಉದಾಹರಣೆ. ವಚನದ ನಿವೇದನೆಯ ಧಾಟಿಯಲ್ಲಿ ಈ ಹೆಣ “ಕೋಣೆಯಿಡೀ ಚಿಗಿತು, ಕೈಕಾಲ್ಗಳಿಗೆ ರೆಂಬೆಯೊಡೆದು” ತುಂಬುವುದರ ವರ್ಣನೆ ಕವಿಯ ಸದ್ಯದ ಅಸ್ವಸ್ಥ ಸ್ಥಿತಿಯನ್ನು ಅತ್ಯಂತ ಜರೂರಿನಿಂದ ಅಭಿವ್ಯಕ್ತಿಸುತ್ತದೆ. ಬಸವಣ್ಣ, ಅಕ್ಕ ಇವರ ಅನುಭಾವವನ್ನು ಇತ್ತ ಅಲ್ಲಗಳೆಯದೆ, ಅತ್ತ ಹೊಗಳದೆ, ಆತ್ಮನಿಷ್ಠ ಅನುಮಾನದಿಂದ, ಆದರೆ ವ್ಯಂಗ್ಯದ ಸೋಂಕಿಲ್ಲದೆ ಕವಿ ಗಮನಿಸುವ ಧಾಟಿ ಅಪೂರ್ವವಾಗಿದೆ :

ನೀನು,
ಕರ್ಮಕಾಂಡ ಬಂಧನದ ಕಿತ್ತೆಸೆದು ಚೆಲ್ಲಿದಾಗ,
ನಿನಗೆ ಬಿಡುಗಡೆಯಾಗಿ
ಅರಿವು ಬೆಳಕು ಮೂಡಿದ್ದಕ್ಕೆ,
ಆಕೆ, ಲೋಕದ ರೀತಿ ರಕ್ಷೆಯ ಅರಿವೆ ಬಿಚ್ಚೆಸೆದು
ಬತ್ತಲೆ ಬಯಲಾದದ್ದಕ್ಕೆ ಕಾರಣವಾದ ಈ ಇದು
ನಾನಾಗಿ ಆರಿಸಿಕೊಂಡದ್ದಲ್ಲ ಖಂಡಿತ;
ಅಣ್ಣ, ನಿಮಗೆ ವಿಮೋಚನೆಯಾದ, ನನಗೆ ಬಿಡದ
ಅಂಟಿದ ನಂಟಾಗಿರುವ ಇದಕ್ಕೆ
ಹುಟ್ಟಿಂದ ಬಂಧಿತ ನಾನು.

ಯಾವ ಹುರುಪೂ ಇಲ್ಲದ ಧಾಟಿಯಲ್ಲಿ, ಸಪ್ಪೆ ಮಾತುಗಳಲ್ಲಿ ಕವಿ ತನ್ನ ಪರಿಸ್ಥಿತಿಯ ಅನ್ಯತೆಯನ್ನು ಕವನದ ಕೊನೆಯಲ್ಲಿ ಮೂಡಿಸುವುದರಿಂದಲೇ ಕವಿಯ ವಿಚಾರ ಆಳವಾಗಿ ಅನುಭವದಲ್ಲಿ ಊರಿದ್ದು ಎನ್ನುವ ಭಾವನೆಯನ್ನು ತರುತ್ತದೆ :

ಈಗ, ಇಲ್ಲಿಯ ತನಕ
ಇದನ್ನ ನನ್ನ ತೊಡೆಮಡಕ್ಕೆ ಪಳಗಿಸಿಕೊಳ್ಳಬೇಕೆಂದು
ಯತ್ನಿಸಿ ಆಗದೆ,
ಅಯ್ಯ, ಅದು ಬೆಳೆದು ನನ್ನನ್ನಾಕ್ರಮಿಸಿ ನಿಷ್ಕ್ರಿಯನನ್ನಾಗಿಸುವುದಕ್ಕಿಂತ
ಮೊದಲೆ ಸಾಗಿಸಿ ಹುಗಿದುಬಿಡಬೇಕೆಂದು
ಹೊತ್ತು ಹೊರಟ ನನ್ನನ್ನೇ
ಬಲೂನಾಗಿ ಸುತ್ತಿ ಎಳೆದೊಯ್ಯುತಿದೆ.
ಇದಕ್ಕೆ ಸೂಜಿಮೊನೆ ನೀನಲ್ಲ, ಎನ್ನಿಸುತ್ತಿದೆ.

ಚನ್ನಯ್ಯನವರ ಪದ್ಯದಲ್ಲಿ ನಿಜವಾದ ಕಾವ್ಯದ – ಮನಸ್ಸನ್ನು ಬಿಚ್ಚಬಲ್ಲ, ಮುಟ್ಟಬಲ್ಲ – ಗುಣಗಳು ಇವೆ; ಇವರ ಧಾಟಿ, ಇಚಾರ, ಭಾಷೆ, ಲಯಗಳು ವೈಶಿಷ್ಟ್ಯಪೂರ್ಣವಾಗಿವೆ. ಅಡಿಗರ ನಂತರ ಬರೆಯುತ್ತಿರುವ ಕವಿಗಳ ನಡುವೆ ಇವರೂ ಒಬ್ಬ ಉತ್ತಮ ಕವಿ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು. ನವ್ಯಕಾವ್ಯ ತನ್ನ ನಾವೀನ್ಯದಿಂದಲೇ ನಮ್ಮ ಮನಸ್ಸನ್ನು ಸೆಳೆಯುತ್ತಿದ್ದ ಕಾಲ ಮುಗಿದಿದೆ; ಇನ್ನು ಅದು ನವೋದಯದ ಕಾವ್ಯಕ್ಕೆ ಬರಿಯ ಪ್ರತಿಕ್ರಿಯೆಯಾಗಿಯಲ್ಲದೆ – ಅಂದರೆ ಒಂದು ಚಳವಳಿ ಮಾತ್ರವಾಗಿಯಲ್ಲದೆ – ಒಬ್ಬೊಬ್ಬ ಕವಿಯೂ ಜೀವನಾನುಭವವನ್ನು ವೈಶಿಷ್ಟ್ಯಪೂರ್ಣವಾಗಿ ಪರಿಭಾವಿಸುವ, ಅಭಿವ್ಯಕ್ತಿಸುವ ಕ್ರಮವಾಗಿಯೂ ಪ್ರಬುದ್ಧವಾಗಬೇಕಾಗಿದೆ ಎಂಬುದಕ್ಕೆ ಅನೇಕ ಚಿನ್ಹೆಗಳು ಇತ್ತೀಚೆಗೆ ಕಂಡುಬರುತ್ತಿರುವುದು ಕನ್ನಡ ಸಹಿತ್ಯ ಪ್ರಪಂಚ ಎಚ್ಚರವಾಗಿದೆ ಎಂಬುದಕ್ಕೆ ನಿದರ್ಶನ. ಅಡಿಗೋತ್ತರ ಕಾವ್ಯದಲ್ಲಿ ಶ್ರೀ ಗಂಗಾಧರ ಚಿತ್ತಾಲರು ಒಂದು ಸ್ಪಷ್ಟ ದೃಷ್ಟಿಕೋನವನ್ನು ಪಡೆದ ಪ್ರಬುದ್ಧ ಕಾವ್ಯವ್ಯಕ್ತಿತ್ವವೆನ್ನಬಹುದು. ಶೈಲಿ, ಧಾಟಿ, ಲಯ ಇತ್ಯಾದಿ ಕಾವ್ಯರಚನಾಕ್ರಮದಲ್ಲಿ ಅತ್ಯಂತ ಕುತೂಹಲಕಾರಿ ಪ್ರಯೋಗಗಳೆಂದರೆ ರಾಮಾನುಜನ್ನರದು. ಅಡಿಗರ ನಂತರ ಬರೆಯುತ್ತಿರುವ ಈ ಎಲ್ಲ ಕವಿಗಳ ನಡುವೆ ಅತ್ಯಂತ ಮಹತ್ವಪೂರ್ಣವಾದ ಕಾವ್ಯಪ್ರತಿಭೆ ಉಳ್ಳವರೆಂದರೆ ಚಂದ್ರಶೇಖರ ಕಂಬಾರರು. ಬೇಂದ್ರೆ ಮತ್ತು ಅಡಿಗರಂತೆ ಭಾಷೆಯ ಜೊತೆ ಆಟವಾಡಬಲ್ಲ ಇವರು, ತಮ್ಮ ಆಟವನ್ನು ನಮಗೆಲ್ಲರಿಗೂ ಅರ್ಥಪೂರ್ಣವಾಗುವಂತೆ ಮಾಡಬಲ್ಲರೊ ಎಂಬುದನ್ನು ಕಾದು ನೋಡಬೇಕು. ಉಳಿದವರಿಗೆಲ್ಲ ಕಾವ್ಯದ ಕಸಬು ಜಾಗೃತ ಕ್ರಿಯೆಯಾಗಿ ಮಾತ್ರ ಫಲಿಸಬೇಕಾದ ಶಿಸ್ತು ಎನ್ನಿಸುತ್ತದೆ. ನಾನು ಇದನ್ನು ಕಡಿಮೆ ದರ್ಜೆಯದೆಂದೇನೂ ತಿಳಿದಿಲ್ಲ. ಕನ್ನಡ ಕಾವ್ಯವನ್ನು ಸಮಕಾಲೀನವಾಗಿಸಲು – ಅಂದರೆ ನಗರ ಪ್ರಜ್ಞೆಗೆ ಒಗ್ಗಿಸಲು – ಲಂಕೇಶ, ರಾಮಚಂದ್ರಶರ್ಮ, ತಿರುಮಲೇಶರು ಅವರವರಿಗೇ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಲಂಕೇಶರ ಪತ್ರಿಕಾ ಶೀರ್ಷಿಕೆಯ ತುರ್ತಿನ ಶೈಲಿ; ಶರ್ಮರ ಪ್ರತೀಕನಿಷ್ಠ ಕಾವ್ಯಶಿಲ್ಪ; ಪ್ರಾಯಶಃ ಉಳಿದೆಲ್ಲರಿಗಿಂತಲೂ ಹೆಚ್ಚು ಸಮಕಾಲೀನವಾಗಬಲ್ಲ ಭಾಷೆ ಲಯಗಳನ್ನು ಉಪಯೋಗಿಸುತ್ತಿರುವ ತಿರುಮಲೇಶರ ಪ್ರಯೋಗಗಳು; ಹಾಡಾಗದಂತೆ, ಹರಟೆಯಾಗದಂತೆ ಸಂಯಮದಿಂದ ನಡೆಯುವ ಚಂದ್ರಶೇಖರ ಪಾಟೀಲರ ಕಾವ್ಯಭಾಷೆ, ಧಾಟಿಗಳ ಚೊಗರು – ಇಂದಿನ ಕನ್ನಡ ವೈವಿಧ್ಯಕ್ಕೆ ಸಾಕ್ಷಿಗಳಾಗಿವೆ. ಇವರ ವಿಚಾರ, ದೃಷ್ಟಿಕೋನ, ಸಂವೇದನೆಯ ಕ್ರಮ ಅನುಭವವನ್ನು ಸಮಗ್ರವಾಗಿ ಆವರಿಸಲು ಎಷ್ಟು ಸಮರ್ಥವಾಗಬಲ್ಲುದು ಎಂಬುದು ಕಾದು ನೊಡಬೇಕಾದ ವಿಷಯ. ನಮ್ಮ ನವೋದಯದ ಕಾವ್ಯದಲ್ಲಿ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಿಂದ ಭಾವನೆಗಳನ್ನೂ ವಿಚಾರಗಳನ್ನೂ ಬರಿ ಎರವಲು ತಂದು ಬರೆದವರು ಗಟ್ಟಿಯಾಗಿ ಉಳಿಯಲಿಲ್ಲ. ಆದರೆ ಉತ್ತರ ಕರ್ನಟಕದ ಜಾನಪದ ನೆಲದಲ್ಲಿ ಬೇಂದ್ರೆ ಬಿತ್ತಿ ಬೆಳೆದ ಕಾವ್ಯವ್ಯಕ್ತಿತ್ವ ಮಾತ್ರ ಅಥೆಂಟಿಕ್ ಆಯಿತು. ಪಾಶ್ಚಾತ್ಯ ಪ್ರಭಾವಕ್ಕೆ ಸಂಪೂರ್ಣ ಮನಸ್ಸನ್ನು ತೆರೆದುಕೊಂಡಿರುವ ನಮ್ಮ ನವ್ಯ ಲೇಖಕರಿಗೆ ಈ ಅರಿವು (ಎರವಲು ತಂದದ್ದು ಕನ್ನಡವಾಗಬೇಕಾದ, ನಮ್ಮ ಸ್ವಂತದ್ದಾಗಬೇಕಾದ ಅರಿವು) ಇದೆಯೆಂದು ನನಗನ್ನಿಸುತ್ತದೆ. ಎಲ್ಲ ಪ್ರಭಾವಗಳಿಗೂ ಮುಕ್ತವಾಗಿ ತೆರೆದುಕೊಂಡ ಮನಸ್ಸು, ಜೊತೆಗೇ ನಿಷ್ಠುರವಾದ ಖಾಸಗಿತನ, ಬರೆದದ್ದು ಜೀವಂತ ಕನ್ನಡವಾಗಬೇಕೆಂಬ ಕಾಳಜಿ ನಮ್ಮ ಅತ್ಯುತ್ತಮ ನವ್ಯಲೇಖಕರ ಲಕ್ಷಣವೆಂದು ನಾನು ತಿಳಿದಿದ್ದೇನೆ.

—-
ಆಮೆಸಂಕಲನದ ಮುನ್ನುಡಿ ೧೯೭೦.

* * *