“ವ್ಯಾಕುಲವಾಗಿದ್ದಾಗ ಈತ ಹುಡುಗಾಟಿಕೆಯಲ್ಲಿದ್ದ ಹಾಗೆ ಕಾಣುತ್ತಾರೆ; ಸಂಕಟದಲ್ಲಿದ್ದಾಗ ಉಲ್ಲಾಸ ತುಳುಕುವ ಹಾಗೆ ಕಾಣುತ್ತಾರೆ; ಗಂಭೀರವಾಗಿರುವಾಗ ಚೇಷ್ಟೆ ಮಾಡುವ ಹಾಗೆ ಕಾಣುತ್ತಾರೆ.”

– ಹೀಗೆ ದೆಹಲಿಯ ಒಬ್ಬ ಪತ್ರಿಕೋದ್ಯಮಿ ಲೋಹಿಯಾ ಬಗ್ಗೆ ಹೇಳಿದಾಗ, ಆ ಲೇಖನದ ಸಂದರ್ಭದಲ್ಲಿ ಅದು ಅಪಾರ್ಥಕ್ಕೆ ಹಾದಿಮಾಡಿಕೊಡುತ್ತಿತ್ತು. ಆದರೆ ನಿಜವಾಗಿ ಅದು ಮಾರ್ಮಿಕವಾದ ಪರಾಮರ್ಶೆಯೇ ಆಗಿತ್ತು. ಲೋಹಿಯಾರ ಸಾಂಕೇತಿಕ ಭಾಷೆಯಲ್ಲೇ ಹೇಳುವುದಾದರೆ ರಾಮ ಮತ್ತು ಕೃಷ್ಣ ಈ ಇಬ್ಬರ ಸತ್ವವನ್ನೂ ತನ್ನ ವ್ಯಕ್ತಿತ್ವದಲ್ಲಿ ಒಗ್ಗೂಡಿಸಿಕೊಳ್ಳುವುದಕ್ಕೆ ಲೋಹಿಯಾ ಹೆಣಗಿದರು ಎನ್ನಬಹುದು; ರಾಮನದು – ಪ್ರಜಾಪ್ರಭುತ್ವದ ನಿಶ್ಚಿತ ಸೀಮೆಯಲ್ಲಿ ಅಸಂದಿಗ್ಧ ಕ್ರಿಯೆಗಳ ಮೂಲಕ ತನ್ನನ್ನು ವ್ಯಕ್ತಗೊಳಿಸಿಕೊಳ್ಳುವ ಸೀಮಿತ ವ್ಯಕ್ತಿತ್ವ; ಕೃಷ್ಣನದು – ಸೃಷ್ಟ್ಯಾತ್ಮಕ ಕಲಾವಿದನ ಅಸೀಮಿತ ವ್ಯಕ್ತಿತ್ವ. ಲೋಹಿಯಾರಲ್ಲಿ ಕೆಲವರಿಗೆ ಕಂಡ ಹುಡುಗಾಟಿಕೆ – ಚೇಷ್ಟೆಗಳು ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸಿವೆ ಎಂದು ಭಾವಿಸಬಾರದು. ಬದಲು ಅದು ಕ್ರಿಯಾಶೀಲವೂ, ಹಾಗೇ ಸೃಜನಾತ್ಮಕವಾಗಿ ಯಾವುದಕ್ಕೂ ಮೈಗೊಡಬಲ್ಲುದೂ ಆದ ಅವರ ವ್ಯಕ್ತಿತ್ವದ ಮೂಲದ್ರವ್ಯಗಳಲ್ಲಿ ಒಂದು ಎಂದು ತಿಳಿಯಬೇಕು. ಬದುಕಿನ ಬಹುಮುಖದ ಸವಾಲುಗಳ ದ್ವಂದ್ವ ಸಮೃದ್ದಿಯಲ್ಲಿ ಸಮಸ್ತಕ್ಕೂ ಎಚ್ಚರಾಗಿ ಚುರುಕಾಗಿ ಉಳಿದಿರಲು ಕಲಾವಿದರ ನಂತೆ ಪ್ರಯತ್ನಿಸುತ್ತ ಮತ್ತು ಅದೇ ಸಮಯದಲ್ಲಿ ಇಂಡಿಯಾದ ಬದುಕು ಮೂಲತಃ ಬದಲಾಗ ತಕ್ಕದ್ದೆಂದು ತಿಳಿದು ಅದಕ್ಕಾಗಿ ಕ್ರಾಂತಿಕಾರನ ಏಕೋದೃಢ ಮನಸ್ಸಿನಿಂದ ಹೋರಾಡಿದ ವಿಶಿಷ್ಟ ವ್ಯಕ್ತಿತ್ವ ಅದು.

ಸತ್ಯದ ಅನೇಕಮುಖಗಳಿಗೆ ಕುರುಡಾಗಿಬಿಟ್ಟಿರುವ – ಅರ್ಥಾತ್ ಹಾಸ ಲವಲವಿಕೆ ಗಳಿಲ್ಲದಿರುವ – ಮನಸ್ಸು ಮಾವೋನಂಥ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ. ಅದು ಮನುಷ್ಯ ವ್ಯಕ್ತಿತ್ವವನ್ನು ಏಕೋದ್ದೇಶ ಏಕತತ್ವಕ್ಕೆ ರಾಕ್ಷಸೀ ಸಂಕೋಚವಾಗಿಬಿಡುತ್ತದೆ. ಇದಕ್ಕೆ ವಿರುದ್ಧವಾದ್ದು ಕಲಾವಿದ ಅಥವಾ ರಸಿಕ ಎಂದು ಹೇಳಿಕೊಳ್ಳುವವನ ಗೋಸುಂಬೆಯಂಥ ಚಂಚಲವಾದ ಬೇಜವಾಬ್ದಾರಿ ವ್ಯಕ್ತಿತ್ವ. ಲೋಹಿಯಾ ಸೃಜನಾತ್ಮಕ ಕಲಾವಿದನ ಹಾಗೆ ಕಾಲದ ಒಂದೊಂದು ಕ್ಷಣವನ್ನೂ ಇತಿಹಾಸದ ಹೊರಗೆ ನಿಲ್ಲಬಲ್ಲ ಅನಂತವನ್ನಾಗಿ ಕಂಡವರಾಗಿದ್ದರು; ಹಾಗೇ, ರಾಜಕೀಯ ಕ್ರಾಂತಿಕಾರಕನಾಗಿ, ಇತಿಹಾಸದ ಪ್ರಜ್ಞೆ ಉಳ್ಳವರಾಗಿ, ಕಾಲವೆಂಬುದು ಪ್ರವಾಹ, ಬದಲಾಗಬಹುದಾದದ್ದು, ಬದಲಾಯಿಸಬೇಕಾದ್ದು ಎಂಬುದನ್ನೂ ಕಂಡವರಾಗಿದ್ದರು. ತನ್ನ ಕಾಣ್ಕೆಗೆ, ತನ್ನ ಅನುಭವ ಅನ್ನಿಸಿಕೆಗಳಿಗೆ, ಪ್ರಾಮಾಣಿಕವಾಗಿ ಬದುಕುತ್ತೇನೆ ಎಂದು ಹೊರಟದ್ದರಿಂದ ಅವರು ಪ್ರಜಾಸತ್ತಾವಾದಿ ಮತ್ತು ಕ್ರಾಂತಿಕಾರಿ ಎರಡೂ ಆಗಬೇಕಾಯಿತು; ಒಮ್ಮೆ ತುಂಟನ ಹಾಗೆ, ಮತ್ತೊಮ್ಮೆ ದುಃಖಿಯ ಹಾಗೆ, ಮಗದೊಮ್ಮೆ ಗಂಭೀರವಾಗಿ ಹಲವು ಮುಖಗಳಲ್ಲಿ ಕಾಣಿಸಿಕೊಳ್ಳುವಂತಾಯಿತು. ಬೇರೆ ಮಾತಲ್ಲಿ ಹೇಳುವುದಾದರೆ, ಮೂರ್ತವೂ ಅಸಂದಿಗ್ಧವೂ ಆದ ಕರ್ತವ್ಯಗಳ ಮೂಲಕ ಇಂಡಿಯಾದ ಬದುಕನ್ನು ಬದಲಿಸಲು ಆತ ತನ್ನ ಚೇತನವನ್ನು ಸದಾ ಸಿದ್ಧಗೊಳಿಸಿಕೊಳ್ಳುತ್ತಲೇ ಇರಬೇಕಾಯಿತು. ಆದರೆ ಈ ಮಧ್ಯೆ ಅವರು ಬದುಕಿನ ಹಾಗೂ ಅವರ ವೈವಿಧ್ಯಗಳ ಸಂದಿಗ್ಧವನ್ನು ಮಾತ್ರ ಎಂದೂ ಮರೆಯಲಿಲ್ಲ. ಸತ್ವಹೀನ ಉದಾರವಾದಿಯ ಮೋಸದ ಸಹನೆಯನ್ನು ಹೇಗೋ ಹಾಗೆಯೇ ಒಂದೇ ಉದ್ದೇಶಕ್ಕೆ ಬದ್ಧವಾದ ರಾಕ್ಷಸತನವನ್ನೂ ಒಲ್ಲದ ಲೋಹಿಯಾ ರಾಜಕೀಯ ಜೀವನದ ಹೊಸ ಶೈಲಿಯೊಂದನ್ನು – ಅತ್ಯಂತ ಕ್ರಿಯಾಶೀಲವೂ ಅಪೇಕ್ಷಣೀಯವೂ ಆದ ಹೊಸ ಜೀವನ ಕ್ರಮವನ್ನು – ತೋರಿಸಿಕೊಟ್ಟವರಾಗಿದ್ದಾರೆ. ಆದ್ದರಿಂದಲೇ ಆತ ನೆಹರೂಗೆ ಹೇಗೋ ಹಾಗೆ ಮಾವೋನ ರೆಡ್‌ಗಾರ್ಡ್ ಚಳುವಳಿಗೂ ತೀವ್ರ ವಿರೋಧಿಯಾಗಿದ್ದುದು. ಕಪಟ ಭೋಳೆತನವಾಗದಂತಹ ಉದಾರವಾದಿಯ ಸಹನೆ, ಮತ್ತು ಒಂದೇ ಉದ್ದೇಶಕ್ಕೆ ಎಲ್ಲವನ್ನೂ ಆಹುತಿಕೊಡದಂತಹ ಕ್ರಾಂತಿಕಾರಿಯ ಏಕೋದೃಢ ಕಾರ್ಯವೃತ್ತಿ ಇವುಗಳ ಹೊಸ ಸಾಮರಸ್ಯ ಸಾಧಿಸುವ ಲೋಹಿಯಾರ ಪ್ರಯತ್ನ ನಮ್ಮ ಪ್ರಪಂಚಕ್ಕೆ ಮಹತ್ವಪೂರ್ಣವಾದುದು. ಇದನ್ನು ವೈಯಕ್ತಿಕವಾಗಿಲ್ಲದೆ ಸಾಮೂಹಿಕ ಕಾರ್ಯಕ್ರಮಗಳಲ್ಲೂ ಹೇಗೆ ಸಾಧಿಸಬೇಕೆಂಬುದೇ ಲೋಹಿಯಾರ ಇಡೀ ಜೀವನದ ಹುಡುಕಾಟವಾಗಿತ್ತು. ಒಂದೇ ಗುರಿ ಒಂದೇ ತತ್ವ ಎಂದು ಬದುಕಿನ ಉದ್ದವೂ ಅದಕ್ಕೆ ತನ್ನನ್ನು ತೆತ್ತುಕೊಂಡ ‘ತಾತ್ವಿಕ ಮನುಷ್ಯನ’ನ ಬಗ್ಗೆ ಯೇಟ್ಸ್ ಕವಿಯ Easter 1916 ಕವನದಲ್ಲಿ ಆಳವಾದ ಪರಾಮರ್ಶೆಯಿದೆ :

Hearts with one Purpose alone
Through summer and winter seem
Enchanted to a stone
To trouble the living stream.

ಯಾವೊಂದು ತತ್ವಕ್ಕೇ ತೆತ್ತುಹೋದ ಬದುಕಿನ ‘ಅತಿಧೀರ್ಘ ತ್ಯಾಗ’ ‘ಹೃದಯವನ್ನು ಕಲ್ಲು ಮಾಡಿಬಿಡುತ್ತದೆ.’ ಲೋಹಿಯಾರಿಗೆ ಕೂಡ ಇಂಥದೇ ಭಯವಿದ್ದಿರಬಹುದು. ‘ಮಾರ್ಕ್ಸ್, ಗಾಂಧಿ ಮತ್ತು ಸೋಶಲಿಸಂ’ ಎಂಬ ಪುಸ್ತಕದ ಮುನ್ನಡಿಯಲ್ಲಿ ಅವರು ಹೀಗೆಂದಿದ್ದಾರೆ :

“ಕಾರ್ಯಕ್ರಮಗಳಿಗೆ ಅಂಟಿಕೊಂಡು ‘ಸಮತ್ವ’ ತಪ್ಪಿದ ನನ್ನ ಅತಿರೇಕಗಳು ಎಷ್ಟೋ ಸಲ ನನ್ನನ್ನೇ ಅಸ್ವಸ್ಥಗೊಳಿಸಿರುವುದುಂಟು. ಇದರಿಂದ ನನ್ನ ವಿಚಾರಗಳು ಒಪ್ಪಿತವಾಗದೆ ಹೋದಾವು ಎಂದಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ, ನನ್ನ ವಿಚಾರಗಳು ಸತ್ಯದ ಅನೇಕ ಮುಖಗಳೊಡನೆ ಹೊಂದಾಣಿಕೆಯಿಲ್ಲದೆ ನಿಂತುಬಿಡುತ್ತವೋ ಎಂಬ ಸಂದೇಹ ನನ್ನನ್ನು ಕಾಡಿಸುತ್ತದೆ. ನನಗೆ ಅತ್ಯಂತ ಅಸಹ್ಯವಾದ್ದೆಂದರೆ ಅಸಹನೆಯೇ.”

“ದೇಶದಲ್ಲಿ ಹಬ್ಬಿದ ಸರ್ವತೋಮುಖವಾದ ಅಸತ್ಯವಂತಿಕೆಯ ಸನ್ನಿವೇಶ” ಇಂಥ ಅತಿರೇಕವನ್ನು ತನ್ನ ಮೇಲೆ ಹೇರಿತು ಎಂದು ಅವರು ಒಪ್ಪಿಕೊಳ್ಳುತ್ತಾರೆ.“ಈ ದೇಶದ ರಾಜಕಾರಣದ ಕೆಸರು ಜವುಗಿನಲ್ಲಿ ಯಾವುದಕ್ಕೂ ನೆಲೆಯಿಲ್ಲ, ಯಾವುದೂ ಗಟ್ಟಿ ಹುಗಿದು ತಲೆಯೆತ್ತಿ ನಿಲ್ಲುವ ಹಾಗಿಲ್ಲ.” ಅದಕ್ಕಾಗಿಯೇ “ಮೋಸದ ಈ ಕೆಸರಲ್ಲಿ ಗಟ್ಟಿ ನೆಲವನ್ನು ಹಿಡಿಯುವುದಕ್ಕಾಗಿಯೇ” ನೀತಿ ಮತ್ತು ತತ್ವಗಳ ದೃಢಸ್ತಂಭವನ್ನು ಊರಿ ನಿಲ್ಲಬೇಕಾಯಿತು – ಎನ್ನುತ್ತಾರೆ ಲೋಹಿಯಾ.

ಬುದ್ಧಿಜೀವಿಗಳಿಗೂ ಲೇಖಕರಿಗೂ ಲೋಹಿಯಾರ ವ್ಯಕ್ತಿತ್ವ ಆಕರ್ಷಣೀಯವಾಗಿರುವುದಕ್ಕೆ ಕಾರಣ ಇದು : ಆತ ದೇಶದ ರಾಜಕೀಯ ಕ್ಷೇತ್ರದಲ್ಲಿ ಮುಳುಗಿ ಹೋಗಿದ್ದರೂ, ತನ್ನ ಪಕ್ಷದ ಕೈಯಲ್ಲೇ ಮೇಲೆ ಮೇಲೆ ಆಘಾತಗಳನ್ನು ಎದುರಿಸಬೇಕಾಗಿ ಬಂದಿರಬಹುದಾಗಿದ್ದರೂ ಅದರ ಮಧ್ಯೆ ಕೂಡ ಅವರು ಅವನ್ನೆಲ್ಲ ಮೀರಿ ತನ್ನ ವ್ಯಕ್ತಿತ್ವದ ಕಲಾತ್ಮಕ ಭಾಗಕ್ಕೂ ಎಚ್ಚರಿದ್ದು ಮೈಗೊಡಬಲ್ಲವರಾಗಿದ್ದರು. ಅಂತರರಾಷ್ಟ್ರೀಯ ರಾಜಕಾರಣಕ್ಕೆ ಹೆದರಿ ಸ್ವೆಟ್ಲಾನಾಳಂಥ ವ್ಯಕ್ತಿಯನ್ನು ನಾಚಿಕೆಯಿಲ್ಲದೆ ಭಾರತ ಸರ್ಕಾರ ಬಲಿಗೊಟ್ಟ ವಿಷಯವಾಗಲಿ, ಆಹಾರ, ಭಾಷೆ ಆದಾಯ ಮುಂತಾದ ರಾಷ್ಟ್ರೀಯ ತುರ್ತಿನ ವಿಚಾರಗಳಾಗಿ, ಸಾಹಿತ್ಯ ಅಕಾಡೆಮಿಯಲ್ಲಿ ರಾಜಕಾರಣಿಗಳು ಕಲೆಗಳ ವಿಚಾರವನ್ನು ಹೊಲೆಗೆಡಿಸುವುದಾಗಲಿ – ಎಲ್ಲದರ ಬಗ್ಗೂ ಅದೇ ತೀವ್ರನಿಷ್ಠೆಯಿಂದ, ಅದೇ ತ್ವರಿತದಿಂದ ಮಾತಾಡುತ್ತಿದ್ದದ್ದು ಇಲ್ಲಿನ ರಾಜಕಾರಣಿಗಳಲ್ಲೆಲ್ಲ ಅವರೊಬ್ಬರೇ. ಹೆಣ್ಣೊಬ್ಬಳ ಸಮಸ್ಯೆಗಿಂತ ವಿದೇಶಾಂಗ ನೀತಿಯ ಸಮಸ್ಯೆಗಳು ಹೆಚ್ಚು ಎಂದೆನ್ನಿಸಿದ್ದಿಲ್ಲ ಅವರಿಗೆ.

ಸುಮಾರು ಐದು ವರ್ಷಗಳ ಹಿಂದೆ ನಾನು ಲೋಹಿಯಾರನ್ನು ಮೊದಲ ಸಲ ಭೇಟಿ ಮಾಡಿದಾಗ ಅವರು ನನ್ನ ಜೊತೆ ಹೆಚ್ಚಾಗಿ ಸಾಹಿತ್ಯದ ಬಗ್ಗೇ ಮಾತಾಡಿದರು; ನನ್ನ ವಿಶೇಷ ಆಸಕ್ತಿ ಯಾವುದೋ ಅದನ್ನೇ ಮಾತಾಡುವಂತೆ ತಾಕೀತು ಮಾಡಿದರು. ಡಿ.ಎಚ್. ಲಾರೆನ್ಸ್ ಬಗ್ಗೆ ಅವರು ನನ್ನನ್ನು ಮತ್ತೆ ಮತ್ತೆ ಪ್ರಶ್ನಿಸಿದರು : ಹನ್ನೆರಡನೆ ಶತಮಾನದ ಕನ್ನಡದ ವೀರಶೈವ ಅನುಭಾವಿಗಳ ಬಗ್ಗೆ, ಅವರಲ್ಲಿ ಮುಖ್ಯನಾದ ಬಸವಣ್ಣನ ಬಗ್ಗೆ ತುಂಬ ಪ್ರಶ್ನೆ ಮಾಡಿದರು. ಬತ್ತಲೆ ತಿರುಗುವುದರ ಮೂಲಕ ಗಂಡಸರ ಜೊತೆ ಆಧ್ಯಾತ್ಮಿಕ ಸಮಾನತೆಯನ್ನು ಸ್ಥಾಪಿಸಿಕೊಂಡಿದ್ದ ಅಕ್ಕಮಹಾದೇವಿಯ ಬದುಕಂತೂ ಲೋಹಿಯಾರನ್ನು ತುಂಬ ಆಕರ್ಷಿಸಿತ್ತು. ನಾನು ಅವರ ರಾಜಕೀಯ ಮತ್ತು ತಾತ್ವಿಕ ಚಿಂತನೆಗಳಿಗೆ ಸಮರ್ಥನ ಕೊಡಬಹುದಾಗಿದ್ದ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಅಂಥವನ್ನು ಅವರು ಅತಿ ಸಂದೇಹದಿಂದ ಪರೀಕ್ಷಿಸಿದರು; ಅವರ ಮನಸ್ಸು ಯಾವ ತತ್ವಕ್ಕೂ ಗಂಟುಬಿದ್ದು ಮುಚ್ಚಿಕೊಂಡಿಲ್ಲವೆಂಬುದು ನನಗೆ ಅವತ್ತು ಮತ್ತೆ ಮತ್ತೆ ಅನುಭವಕ್ಕೆ ಬಂದಿತು. ನನಗೆ ತಿಳಿದಂತೆ ರಾಜಕಾರಣಿಗಳ ನಡುವೆ ಅತ್ಯಂತ ನಿರ್ಲಿಪ್ತ ಶೋಧಕರೆಂದರೆ ಅವರೊಬ್ಬರೇ; ಸಾಮಾನ್ಯವಾಗಿ ತುಂಬ ಪಾಶ್ಚಾತ್ಯೀಕೃತರಾದ ಭಾರತೀಯರು ಪರಿಹಾರರೂಪವಾಗಿ ರೂಢಿಸಿಕೊಳ್ಳುವಂಥ ಭಾವುಕ ‘ಭಾರತೀಯತೆ’ಯಾಗಲಿ, ಪಶ್ಚಿಮದ ಬಗ್ಗೆ ಆತ್ಮವಿಶ್ವಾಸವಿಲ್ಲದ ಅದೃಢರು ಬೆಳೆಸಿಕೊಳ್ಳುವಂಥ ಭಾವುಕವೈರವಾಗಲಿ ಅವರಿಗಿರಲಿಲ್ಲ. ತೀರ ವಿರುದ್ಧವೆಂದು ಕಾಣಿಸಬಹುದಾದರೂ, ಅವರು ಇಂಡಿಯಕ್ಕೆ ಹೇಗೋ ಹಾಗೆ ಪ್ರಪಂಚದ ಪ್ರಜೆತನಕ್ಕೂ ಅತಿನಿಷ್ಠೆಯಿಂದ ತಮ್ಮನ್ನು ದತ್ತುಕೊಟ್ಟುಕೊಂಡಿದ್ದರು; ಎರಡನ್ನೂ ಮೂರ್ತ ರೂಪದಲ್ಲಿ ಏಕತ್ರ ಸಾಧಿಸಬಹುದೆಂಬುದನ್ನು ಅವರು ಸ್ವತಃ ಕಂಡುಕೊಂಡಿದ್ದರು. ಆತ ಅಸಾಮಾನ್ಯ ಧೈರ್ಯದಿಂದ ರಿಸ್ಕ್ ತೆಗೆದುಕೊಳ್ಳಲು ಹೆದರದೆ ಯೋಚಿಸಬಲ್ಲ ಸಾಹಸಿಯಾಗಿದ್ದರು; ತಾನೆಲ್ಲಾದರೂ ತಪ್ಪಿಸಿಕೊಂಡುಬಿಟ್ಟೇನು ಎಂಬಂಥ ಅಳುಕು ಅವರ ವಿಚಾರ ಸರಣಿಯಲ್ಲಿ ಇರುತ್ತಿರಲಿಲ್ಲ. ಮನುಷ್ಯನ ಲೈಂಗಿಕತೆಯ ಬಗ್ಗೆ ಲಾರೆನ್ಸ್ ತೋರಿಸುತ್ತಿದ್ದ ಮುಕ್ತ ಭಾವನೆ, ಮಧ್ಯಮವರ್ಗದ ಟೊಳ್ಳು ಗೌರವದ ಬಗ್ಗೆ ಅವನ ತಿರಸ್ಕಾರ ಲೋಹಿಯಾರಿಗೆ ಮೆಚ್ಚುಗೆಯಾದ್ದು ಕಂಡುನನಗೆ ಆಶ್ಚರ್ಯವಾಗಲಿಲ್ಲ. ಆದರೆ ಆ ಕಲ್ಲಿದ್ದಲುಗಣಿ ಕಾರ್ಮಿಕನ ಮಗ ತನ್ನ ರಾಜಕೀಯ ವಿಚಾರಗಳಲ್ಲಿ ಸೋಶಲಿಸ್ಟ್‌ರಿಗೆ ಅನುಕೂಲನಾಗಿಲ್ಲ ಎಂಬ ಸಂಗತಿ ಅವರನ್ನು ದೊಡ್ಡದಾಗಿ ಬಾಧಿಸಲಿಲ್ಲ ಎಂಬುದರಿಂದ ನನಗೆ ಸಂತೋಷವಾಯಿತು. ಕಮ್ಯುನಿಸ್ಟ್ ವಿಮರ್ಶಕರಲ್ಲಿ ಕಾಣದ ಗುಣ ಇದು. ನಾನು ಅಲ್ಲಿಂದ ಹೊರಡುವಾಗ ಲೋಹಿಯಾ ಮತ್ತು ಲಾರೆನ್ಸ್ ಇವರಿಬ್ಬರ ಚೇತನಗಳ ಮಧ್ಯೆ ಏನೋ ಒಂದು ನಂಟು ಇದೆ ಎಂಬ ಭಾವನೆ ತಾಳಿ ಬಂದೆ : ಸಾಮಾಜಿಕ ಮರ್ಯಾದೆಗೆ ಬದ್ಧರಾಗದ ಲಾರೆನ್ಸ್‌ನ ಕೆಲವು ಪಾತ್ರಗಳ ಜೀವೋತ್ಕರ್ಷವನ್ನು ಲೋಹಿಯಾ ನನಗೆ ನೆನಪಿಸುವಂತೆ ಕಂಡರು.

ಆಗ ನಾನು ಲಾರೆನ್ಸ್ ಬಗ್ಗೆ ವಸ್ತುನಿಷ್ಠವಾಗಿ ಚರ್ಚಿಸುವುದು ಸಾಧ್ಯವಿರಲಿಲ್ಲ – ಕಾರಣ ತುಂಬ ಉತ್ತೇಜಿತನಾಗಿದ್ದೆ. ನನ್ನ ಕಲ್ಪನೆಯನ್ನೆಲ್ಲ ಲಾರೆನ್ಸ್ ಮತ್ತು ಲೋಹಿಯಾ ಆಕ್ರಮಿಸಿ ಬಿಟ್ಟಿದ್ದರು. ನನಗಿನ್ನೂ ನೆನಪಿದೆ : ಚಾಟರ್ಲಿಯ ಜೊತೆ ಗೇಮ್‌ಕೀಪರ್‌ನ ಸಂಬಂಧವನ್ನು ಚರ್ಚಿಸುವಾಗ ‘ಅಶ್ಲೀಲ’ ಪದ ಬಳಸುವುದಕ್ಕೆ ನಾನು ಹಿಂಜರಿದದ್ದು ಕಂಡು ಅವರು ನನ್ನ ಸಭ್ಯತೆಯನ್ನು ನಯವಾಗಿ ಛೇಡಿಸಿದ್ದರು. ನಾನು ಅವರ ಜೊತೆ ಸುಮಾರು ಐದು ಗಂಟೆಗಳ ಕಾಲ ಕಳೆದಿದ್ದೆ; ಅಷ್ಟರಲ್ಲಿ ಅವರ ಮನೋವೃತ್ತಿ ಒಂದರಿಂದ ಒಂದಕ್ಕೆ ಬದಲಾಗುತ್ತಿದ್ದದ್ದನ್ನೂ ಕಂಡಿದ್ದೆ – ಹರ್ಷ, ತುಂಟು, ವಿಷಾದ, ಗಂಭೀರ ಮತ್ತು ಕೋಪ ಕೂಡ. ಆ ದಿನ ತನ್ನನ್ನು ವಿಶ್ವವಿದ್ಯಾನಿಲಯಕ್ಕೆ ಕರೆದುಕೊಂಡುಹೋದ ಪಕ್ಷದ ಕಾರ್ಯಕರ್ತರ ಮೇಲೆ ಅವರು ರೋಷಗೊಂಡರು. ಅಲ್ಲಿ ತಾನು ಕಡ್ಡಾಯವಾಗಿ ಇಂಗ್ಲಿಷಲ್ಲೆ ಮಾತಾಡಬೇಕಾಗಿಬಂದದ್ದಕ್ಕೆ. ವಿಶ್ವವಿದ್ಯಾ ನಿಲಯದ ಭಾಷಣದಲ್ಲಿ ಆವೊತ್ತು ಅವರು ಜಾತಿಪದ್ಧತಿ ಪ್ರಮುಖವಾದ ಇಂಡಿಯಾದ ಸಂಸ್ಕೃತಿಯ ಬಗ್ಗೆ ಓಜಸ್ವೀ ವಿಶ್ಲೇಷಣೆ ಮಾಡಿದ್ದರು; ಶಂಕರರ ಅನಂತರ ಇಲ್ಲಿ ಮೂಲಭೂತ ಚಿಂತನೆಯೇ ನಡೆದಿಲ್ಲ, ನಮ್ಮ ಜೀವನ ಅತಿ ಸಾಧಾರಣವಾಗಿಬಿಟ್ಟಿದೆ ಎಂದಿದ್ದರು. ಇದೇ ಮಾತಿಗಾಗಿ ಕೊನೆಯಲ್ಲಿ ಅಲ್ಲಿನ ಒಬ್ಬ ಪ್ರೊಫೆಸರ್‌ಲೋಹಿಯಾರನ್ನು ‘ನಿರಾಶಾವಾದಿ’ ಎಂದು ಕರೆದು ಲೋಹಿಯಾರ ವಿಚಾರದ ಬಗ್ಗೆ ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಹಾಗಿದ್ದರೂ ಲೋಹಿಯಾ ಆ ಪ್ರೊಫೆಸರರ ಬಗ್ಗೆ ನಯವಾಗಿ ನಡೆದುಕೊಂಡರು, ಅವರ ಟೀಕೆಯ ಬಗ್ಗೆ ವಿಷಾದದ ಮೆಲುನಗೆ ನಕ್ಕಿದ್ದರು.

ಲೋಹಿಯಾರ ಚಿಂತನೆ ಮತ್ತು ಸಾಧನೆಗಳು ಇನ್ನೂ ತುಣುಕುಗಳಾಗಿ ಉಳಿದಿವೆ, ಅವನ್ನು ಪೂರ್ಣಗೊಳಿಸಬೇಕಾದ್ದು ಉಳಿದಿದೆ ಎಂಬ ಅರಿವು ನನಗಿದೆ. ಆದರೆ ಆತ ಏನು ಬಿಟ್ಟು ಹೋಗಿದ್ದಾರೋ ಅದು ಇಂಡಿಯಾದ ಬುದ್ಧಿಜೀವಿಗಳಿಗೆ ತುಂಬ ಪ್ರಚೋದಕವಾಗಬಲ್ಲುದು. ನೀರದ್ ಚೌಧರಿಯವರಂಥ ಮೇಧಾವಿಗಳು ಮಾರ್ಮಿಕವಾಗಿ ವಿಚಾರಮಾಡಬಲ್ಲವರಾದರೂ ‘ಉನ್ನತೋತ್ತಮ’ರ ನಿಲುವಿನಿಂದ ಅವರು ವಿಚಾರಮಾಡುವ ಕಾರಣ ಸರಿಯಾದ ಐತಿಹಾಸಿಕ ದೃಷ್ಟಿಯಿಲ್ಲದೆ ಬದಲಾಗಬಲ್ಲ ಭಾರತದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಲಾರದೆ ಕಂಗೆಡುತ್ತಾರೆ. ಅವರು ತಮ್ಮ ಅಘಾತಗೊಂಡ – ಆದ್ದರಿಂದಲೇ ಸೊಗಸೆನ್ನಿಸುವ, ಅಪೂರ್ವವೆನ್ನಿಸುವ – ಸೂಕ್ಷ್ಮ ಸಂವೇದನೆಯ ಕಡೆ ಮತ್ತೆ ಮತ್ತೆ ನಮ್ಮ ಗಮನ ಸೆಳೆಯಬಲ್ಲರು ಅಷ್ಟೆ. ಪಾಶ್ಚಿಮಾತ್ಯ ವಿಚಾರವನ್ನು ಅನುಕರಿಸುವ ನಮ್ಮವರು ಕೂಡ ‘ಸೂಕ್ಷ್ಮ ಸಂವೇದನೆಯ ಭಾರತೀಯ’ ಮನಸ್ಸಿಗಿಂತ ಹೆಚ್ಚಿನದನ್ನು ಬಯಸುವುದಿಲ್ಲ; ಇಂಡಿಯಾದಲ್ಲಿ ತನ್ನನ್ನು ಆವರಿಸಿದ ಕೊಳಕಿನ ಮಧ್ಯೆ ವಿವಿಕ್ತನಾಗಿ ನಿಂತ ಈ ಸೂಕ್ಷ್ಮ ಸಂವೇದನೆಯ ‘ಉನ್ನತ್ತೋತ್ತಮ’ನ ಬೇರೆತನವನ್ನೇ ನಾವು ಚಪ್ಪರಿಸಬಯಸುತ್ತೇವೆ. ಬಹಳ ಕಾಲದಿಂದ ಬೆಳೆದುಬಂದಿದ್ದ ಭಾವಾತಿಸಾರದಿಂದ ಕೂಡಿದ ಭಾರತೀಯತೆಗೆ ಇದು ಪ್ರತಿಕ್ರಿಯೆ ಅಷ್ಟೆ. ಆದರೆ ಇಂಡಿಯಾದ ಹಲವು ಶತಮಾನಗಳ ಕಾಲದ ದೀರ್ಘ ಅವನತಿಯನ್ನು ಅರಿತು ಅಸಹನೆಯಿಂದ ನೀರದ್ ಚೌಧರಿಯಷ್ಟೆ ಚಡಪಡಿಸುವ ಲೋಹಿಯಾ ಪಾಶ್ಚಿಮಾತ್ಯರಿಗೆ ತಲೆ ಬಾಡಿಗೆ ಕೊಟ್ಟ ನಮಗೆ ಸುಲಭವಾಗಿ ಒಪ್ಪಿತವಾಗುವುದಿಲ್ಲ. ಏಕೆಂದರೆ ನಮ್ಮ ಆಯ್ಕೆಯನ್ನು ಕೃತಿಯಲ್ಲೇ ವ್ಯಕ್ತಗೊಳಿಸುವಂತೆ ಅವರು ನಮಗೆ ಸವಾಲು ಹಾಕುತ್ತಾರೆ. ತನ್ನ ಹಾದಿಯ ಅತ್ಯಂತ ಕತ್ತಲಲ್ಲೂ, ಭಾರತದ ಸದ್ಯದ ವಾಸ್ತವತೆಯನ್ನು ಬದಲಿಸಲು ಸಾಧ್ಯವೆಂಬ, ಸಮಗ್ರ ಐತಿಹಾಸಿಕ ಪ್ರಜ್ಞೆಯಿಂದ ಬಂದ ಭರವಸೆ ಲೋಹಿಯಾರಿಗೆ ಸದಾ ಇದ್ದುದರಿಂದ ನೀರದ್ ಚೌಧರಿಯವರಂತೆ ಇವರು ತನ್ನ ಸೂಕ್ಷ್ಮ ಮನಸ್ಸಿನ ಅನನ್ಯತೆಯನ್ನು ಜಾಹೀರಾತಿಗೆಂಬಂತೆ ಸದಾ ಒಡ್ಡಿಕೊಂಡಿರುವ ಲಂಪಟರಾಗಲಿಲ್ಲ – ಆದ್ದರಿಂದಲೇ ಭಾರತೀಯ ಬುದ್ಧಿಜೀವಿಗಳ ಸದ್ಯದ ಫ್ಯಾಶನ್ನಿನ ದೃಷ್ಟಿಯಿಂದ ಆಕರ್ಷಕರೂ ಆಗಲಿಲ್ಲ.

ಭಾರತೀಯ ಭಾಷೆಗಳು, ಇಲ್ಲಿನ ಜಾತಿಪದ್ಧತಿ, ಶಂಕರರ ಅನಂತರ ಭಾರತದ ಪ್ರಜ್ಞೆಯಲ್ಲೆ ಉಂಟಾದ ಬಿರುಕು (ಮೂರ್ತಕ್ಕೂ ಅಮೂರ್ತಕ್ಕೂ ಮಧ್ಯೆ, ಆಧ್ಯಾತ್ಮಿಕವಾಗಿ ಅರ್ಥವೇ ಇಲ್ಲದ ‘ಲೌಕಿಕ ಸತ್ಯ’ಕ್ಕೂ ಅಮೂರ್ತಸ್ಥಿತಿಯಲ್ಲಿ ಒಪ್ಪಿತವಾಗಿ ದಿನನಿತ್ಯದ ಜೀವನ ವಾಸ್ತವದಲ್ಲಿ ಪೂರಾ ತಿರಸ್ಕೃತವಾದ ‘ಪಾರಮಾರ್ಥಿಕ ಸತ್ಯ’ಕ್ಕೂ ಮಧ್ಯೆ – ಉಂಟಾದ ಬಿರುಕು) – ಈ ಮುಂತಾದ್ದರ ಬಗ್ಗೆ ಅವರ ಚಿಂತನೆಗಳು ಅನನ್ಯವಾದವು. ನನ್ನ ಮಟ್ಟಿಗೆ ಹೇಳುವುದಾದರೆ, ನನ್ನ ಸ್ವಂತ ಬರವಣಿಗೆಯ ದೃಷ್ಟಿಯಿಂದಲೂ ನಮ್ಮ ಕನ್ನಡ ಸಾಹಿತ್ಯವನ್ನು ನಾನು ಅರಿತುಕೊಳ್ಳುವುದಕ್ಕೂ ಅವರ ಚಿಂತನೆಗಳು ಅತ್ಯುಪಯುಕ್ತವಾಗಿವೆ, ಸೃಜನಶೀಲವಾದ ಬೀಜವಾಕ್ಯಗಳಾಗಿವೆ.

ಇಂಗ್ಲಿಷಿನಲ್ಲಿ ಬರೆಯುವ ಭಾರತೀಯ ಲೇಖಕ, ತಾನು ಇಂಡಿಯಾದ ಸನ್ನಿವೇಶದಲ್ಲಿ ಹೊರಗಿನವನಾಗಿ ನಿಂತುಬಿಟ್ಟಿರುವುದನ್ನು ತುಂಬಿಸಿಕೊಳ್ಳಲಿಕ್ಕೆ, ಅಥವಾ ಪಾಶ್ಚಾತ್ಯರಲ್ಲಿ ತನ್ನ ಮಾಲನ್ನು ಮಾರಿಕೊಳ್ಳುವುದಕ್ಕೆ ಆಕರ್ಷಣೀಯವಾಗಿ ಕಾಣುವ, ಶಾಬ್ದಿಕ ಮಾತ್ರವಾದ, ಹಳಹಳಿಕೆಯ ಭಾರತೀಯತ್ವವನ್ನು ರೂಢಿಸಿಕೊಳ್ಳಲು ಹೆಣಗುತ್ತಿದ್ದಾರೆ; ಅಥವಾ ಮುಜುಗರ ದಿಂದ ಹುಟ್ಟಿದ ವ್ಯಂಗ್ಯವನ್ನು ರೂಢಿಸಿಕೊಳ್ಳುವುದರ ಮೂಲಕ ಬಿರುಕು ತಿಕ್ಕಾಟದಿಂದ ಕೂಡಿದ ಭಾರತೀಯ ಜೀವನದ ದ್ರವ್ಯವನ್ನು ತನ್ನ ತೆಕ್ಕೆಗೆ ದಕ್ಕಿಸಿಕೊಳ್ಳಲು ಶ್ರಮಿಸುತ್ತಾನೆ. ಭಾರತೀಯ ಭಾಷೆಗಳಲ್ಲಿ ಬರೆವ ನವ್ಯ ಲೇಖಕರಲ್ಲಿ ಕೆಲವರು (ಎಲ್ಲರೂ ಅಲ್ಲ) ಪಶ್ಚಿಮದ ಹೊಸ ಹೊಸ ಸಾಹಿತ್ಯ ಚಳುವಳಿಗಳ ಲಹರಿಗಳನ್ನೆಲ್ಲ ರಕ್ತಹೀನವೂ ಅಲ್ಪವೂ ಆದ ನಕಲುಗಳಲ್ಲಿ ಅನುಕರಿಸಲು ಹೆಣಗುತ್ತಿದ್ದಾರೆ. ಆದರೆ ಲೋಹಿಯಾ ಇಂಡಿಯಕ್ಕೆ ಬದ್ಧರಾದವರಾಗಿದ್ದರು; ಹಾಗಿದ್ದೂ ಶತಮಾನಗಳ ಕಾಲ ನಮ್ಮನ್ನು ಆವರಿಸಿಕೊಂಡ ಅಸಹ್ಯರಾಶಿಗಳನ್ನು ಕಂಡು ಕ್ರೋಧಗೊಂಡಿದ್ದರು. ಪಶ್ಚಿಮದ ತಾತ್ವಿಕ ಚಿಂತನೆಗಳಲ್ಲಿ ಅವರು ತೀವ್ರ ಆಸಕ್ತಿತಾಳಿದ್ದರು; ಹಾಗಿದ್ದೂ ಅಲ್ಲಿನ ದೋಷಗಳ ಬಗ್ಗೆ ಅವರು ನಿಷ್ಠುರ ವಿರೋಧಿಯಾಗಿದ್ದರು. ಆತ ಸತ್ಯದ ಅನೇಕ ಮುಖಗಳಿಗೆ ಎಚ್ಚರವಾಗಿದ್ದರು; ಆ ಮೂಲಕ ಮನುಷ್ಯ ಜೀವನದ ಸಂದಿಗ್ಧಗಳನ್ನು ಸರಿಯಾಗಿ ಅರಿತುಕೊಳ್ಳಲು ಯಾವ ‘ಸಮಸ್ಥಿತಿ’ ಬೇಕೋ, ಜೊತೆಗೇ ಆಕಾರಹೀನವಾಗದ ಯಾವ ನಿಶ್ಚಿತತೆ ಬೇಕೋ ಅದನ್ನು ಸೂಚಿಸಿದವರಾಗಿದ್ದರು. ಮತ್ತು – ಇಂಡಿಯದಲ್ಲಿ ಪುನಃ ಬದುಕನ್ನು ಸಮೃದ್ಧಗೊಳಿಸಲು, ಸುಂದರಗೊಳಿಸಲು ಎಂಥ ನಿಶ್ಚಿತ ಪ್ರಯತ್ನ ಮತ್ತು ತೀವ್ರತೆ ಬೇಕೋ ಅದನ್ನು ತನ್ನ ಬದುಕಿನುದ್ದವೂ ನಡೆಸಿದ ಏಕೋದೃಢ ಹೋರಾಟದಲ್ಲಿ ಪಡೆದುಕೊಂಡವರಾಗಿದ್ದರು.

—-
(ಮೂಲ : Leader as a Creative Artist : Manking – 1968)
ಅನುವಾದ : ಕೆ.ವಿ.ಸು.

* * *