ಮಾರ್ಕ್ಸ್‌ನ ವಾದ ಸ್ಥೂಲವಾಗಿ ಇದು: ವ್ಯಕ್ತಿ ವ್ಯಕ್ತಿಗಳ ನಡುವೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಏರ್ಪಡುವ ಎಲ್ಲ ರೀತಿಯ ಸಂಬಂಧಗಳ ಒಟ್ಟು ಮೊತ್ತ ಒಂದು ಸಮಾಜವ್ಯವಸ್ಥೆ ಎನ್ನಿಸಿಕೊಳ್ಳುತ್ತದೆ. ಯಾವ ರೀತಿಯ ಸಮಾಜವ್ಯವಸ್ಥೆಯೇ ಆಗಲಿ, ಅದರ ಮುಖ್ಯವಾದ ಸ್ವರೂಪ ನಿರ್ಣಯವಾಗುವುದು ಅದರ ತಳಪಾಯದಂತಿರುವ ಅರ್ಥಿಕ ವ್ಯವಸ್ಥೆಯ ಮೇಲೆ. ಆದ್ದರಿಂದಲೇ, ಆರ್ಥಿಕ – ವ್ಯವಸ್ಥೆಯಲ್ಲಿ – ಅಂದರೆ ಉತ್ಪತ್ತಿ ಸಂಪಾದನಾ ಕ್ರಮಗಳಲ್ಲಿ – ಮೂಲಭೂತವಾದ ಬದಲಾವಣೆಗಳು ಆದಾಗಲೆಲ್ಲಾ ವ್ಯಕ್ತಿ – ವ್ಯಕ್ತಿಗಳ ನಡುವಿನ ಎಲ್ಲ ಇತರ ಸಂಬಂಧಗಳಲ್ಲೂ ಸೂಕ್ಷ್ಮ ಮಾರ್ಪಾಡುಗಳು ಆಗುತ್ತವೆಂಬುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ.

ಫ್ರಾಯ್ಡನ ಮೂಲಭೂತ ‘ಕಾಮ’ದಂತೆಯೇ ಮಾರ್ಕ್ಸ್‌ನ ಈ ದೃಷ್ಟಿಯೂ ಮನುಷ್ಯನ ಸೂಕ್ಷ್ಮ ಸಮಸ್ಯೆಗಳನ್ನೆಲ್ಲ ಸರಳಗೊಳಿಸುವ ಸಾಧ್ಯತೆ ಇದೆ. ಆದರೆ ಸುಖ – ಸಂಕಟಗಳಿಗೆ ಕಾರಣವಾಗಿ ಬದಲಾಗುತ್ತಿರುವ ಇಂದಿನ ಸಮಾಜವನ್ನೇ ಆಗಲಿ, ಮನುಷ್ಯನ ಒಟ್ಟು ಇತಿಹಾಸವನ್ನೇ ಆಗಲಿ ಅರಿಯಲು ಪ್ರಯತ್ನ ಮಾಡುವವನಿಗೆ ಆಧ್ಯಾತ್ಮವಾದಿಯ ಸನಾತನ ತತ್ವಗಳಿಗಿಂತ ಮಾರ್ಕ್ಸ್‌ನ ದ್ವಂದ್ವಾತ್ಮಕ ವಸ್ತುವಾದ ಹೆಚ್ಚು ಪ್ರಯೋಜನ ಉಳ್ಳ ದೃಷ್ಟಿಕೋನವನ್ನು ಒದಗಿಸುತ್ತದೆ.

ಉದಾಹರಣೆಗೆ: ಭಾರತೀಯನೊಬ್ಬನ ಒಟ್ಟು ಮನೋಧರ್ಮಕ್ಕೂ. ಯೂರೋಪಿಯನ್ ಒಬ್ಬನ ಮನೋವೃತ್ತಿಗೂ – ಆದ್ದರಿಂದ ಇಬ್ಬರ ಲೋಕದೃಷ್ಟಿಗೂ – ನಡುವೆ ಇರುವ ವ್ಯತ್ಯಾಸಕ್ಕೆ ಕಾರಣ ಇಬ್ಬರ ಸ್ವಭಾವದಲ್ಲಿರುವ ಮೂಲಭೂತವಾದ ಅಂತರ ಎನ್ನುವುದಕ್ಕಿಂತ ಹೆಚ್ಚಾಗಿ, ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿ ಒಂದು ಘಟ್ಟ ಮುಟ್ಟಿದೆ, ಭಾರತದಲ್ಲಿ ಅದು ಇನ್ನೂ ಪ್ರಾರಂಭವಾಗಿದೆ ಎನ್ನುವುದೇ ಹೆಚ್ಚು ಸಮರ್ಪಕವಾದ ಉತ್ತರ.

ಯೂರೋಪ್ ಭಾರತಗಳಷ್ಟು ದೂರದ ದೇಶಗಳ ಅಂತರದ ಮಾತಿರಲಿ, ಭಾರತದಲ್ಲೇ ಮನುಷ್ಯನ ಮನೋಧರ್ಮ ಹಳ್ಳಿ ಮತ್ತು ಪಟ್ಟಣಗಳಲ್ಲಿ ಬೇರೆ ಬೇರೆ ರೀತಿ ವ್ಯಕ್ತವಾಗುವುದನ್ನು ನಾವು ಕಾಣಬಹುದು. ಒಡೆಯ – ಒಕ್ಕಲು ಸಂಬಂಧ ನಡೆಯುವ ಹಳ್ಳಿಯೊಂದರಲ್ಲಿ ಈ ಸಂಬಂಧದ ತಳಪಾಯದ ಮೇಲೆ ನಿಂತಿರುವ ಉಳಿದೆಲ್ಲ ವ್ಯವಹಾರಗಳ ಮೂಲಕ ರೂಪಿತವಾಗುವ ಜೀವನದೃಷ್ಟಿ ಬೇರೆ , ಮಾಲೀಕ – ನೌಕರ ಸಂಬಂಧವೇ ಅಡಿಗಲ್ಲಾದ ಪಟ್ಟಣದಲ್ಲಿ ಮೂಡುವ ಬಾಳಿನ ಸ್ವರೂಪ ಬೇರೆ. ಜಾತಿ ಪದ್ಧತಿಯಾಗಲಿ, ಪರಂಪರಾನುಗತವಾಗಿ ಪೂರ್ವನಿಶ್ಚಿತವಾದ ತಮ್ಮ ತಮ್ಮ ಸ್ಥಾನದ ಕಲ್ಪನೆಯಾಗಲಿ, ಅವಯವಸಾಮರಸ್ಯದ ಗ್ರಾಮಜೀವನದ ಅನ್ಯೋನ್ಯತೆಯಾಗಲಿ ಬೃಹತ್ ನಗರವೊಂದರಲ್ಲಿ ಉದ್ಯೋಗಕ್ಕೆ ನಿಂತ ಜನರ ನಡುವೆ ಬಹಳಕಾಲ ಉಳಿದುಕೊಂಡು ಬರುವುದು ಕಷ್ಟದ ವಿಷಯ. (ಹಳ್ಳಿಗಳೂ ಈಗ ಬದಲಾಗುತ್ತಿವೆ : ಜೀವನವನ್ನು ಕಟ್ಟುವ ಆರ್ಥಿಕ ವ್ಯವಸ್ಥೆಯಲ್ಲಿ, ಆದ್ದರಿಂದ ಜೀವನದೃಷ್ಟಿಯಲ್ಲಿ.) ಯಾವುದಕ್ಕೆ ನಾವು ಭಾವನಾತ್ಮಕವಾಗಿ ಮಾತ್ರ ಗಂಟುಬಿದ್ದು, ಪ್ರಯತ್ನಪೂರ್ವಕವಾಗಿಯೇ ಉಳಿಸಿಕೊಂಡು ಬರಬೇಕಾಗುವುದೋ, ಅದು ಕೊನೆಗೆ ನಿತ್ಯ ಬದುಕಿನ ವಾಸ್ತವದಲ್ಲಿ ನಶಿಸಿ ಸ್ಮೃತಿರೂಪವಾಗಿ ಮಾತ್ರ ಉಳಿಯುತ್ತದೆ.

ಅಂದರೆ : ನಮ್ಮ ಉದ್ಯೋಗ – ಉತ್ಪಾದನಾ ಕ್ರಮಗಳು, ನಮ್ಮ ಒಟ್ಟು ಸಮಾಜ ವ್ಯವಸ್ಥೆ, ನಮ್ಮ ಜೀವನದೃಷ್ಟಿ – ಈ ಮೂರೂ ಸದಾ ಬದಲಾವಣೆಗೆ ಒಳಪಟ್ಟು, ಪರಸ್ಪರ ಸಂಬಂಧವಿರುವ ವಿಷಯಗಳು, ಯಾವೊಂದರಲ್ಲಿ ಆಗುವ ಬದಲಾವಣೆಯೂ (ಎಲ್ಲ ಮಾರ್ಕ್ಸ್ ವಾದಿಗಳು ಇದನ್ನು ಒಪ್ಪುವುದಿಲ್ಲ) ಇನ್ನೊಂದನ್ನು ಹೋಗಿ ಮುಟ್ಟುತ್ತದೆ. ಈ ಮೂರರ ನಡುವೆ ಆರ್ಥಿಕ ವ್ಯವಸ್ಥೆಯಲ್ಲಾಗುವ ಬದಲಾವಣೆ ಅತ್ಯಂತ ವ್ಯಾಪಕವಾದ ಮಾರ್ಪಾಡುಗಳಿಗೆ ಕಾರಣವಾಗುತ್ತದೆ ಎನ್ನುವ ಮಟ್ಟಿಗೆ ಮಾರ್ಕ್ಸ್‌ನನ್ನು ನಾವು ಒಪ್ಪಬಹುದು. ಭಾರತದ ಜೀವನಕ್ರಮದಲ್ಲಿ ಅತ್ಯಂತ ಮಂದಗತಿಯ ಬದಲಾವಣೆಗಳಾಗಿವೆ – ಯೂರೋಪಿಗೆ ಹೋಲಿಸಿದಲ್ಲಿ – ಎನ್ನುವುದಕ್ಕೆ ಕಾರಣ ನಮ್ಮ ಆರ್ಥಿಕ ವ್ಯವಸ್ಥೆ ಹಾಗೂ ಹೀಗೂ ಈತನಕ ಕುಂಟುತ್ತ ನಡೆದು ಬಂದಿದೆ ಎಂಬುದು; ನಮ್ಮ ಮೌಲ್ಯಗಳು ಯೂರೋಪಿನವರದ್ದಕ್ಕಿಂತ ಹೆಚ್ಚು ಗಟ್ಟಿ ಎಂಬುದಲ್ಲ. ಆದ್ದರಿಂದಲೇ ಐತಿಹಾಸಿಕ ದೃಷ್ಟಿಯಿಂದ ಮನುಷ್ಯನ ಬದಲಾಗುತ್ತಿರುವ ಸ್ವರೂಪವನ್ನು ನೋಡುವಾಗ ನಮ್ಮ ಜೀವನದೃಷ್ಟಿ ಮತ್ತು ನಮ್ಮ ಮನೋಧರ್ಮದ ಮೂಲದಲ್ಲಿರುವ ಪ್ರಜ್ಞೆ ತೀರಾ ವ್ಯಕ್ತಿಗತವಾದದ್ದು ಎನ್ನಲು ಸಾಧ್ಯವಿಲ್ಲ. ಮನುಷ್ಯನ ಪ್ರಜ್ಞೆಯ ಸೂಕ್ಷ್ಮಸ್ವರೂಪವಲ್ಲದಿದ್ದರೂ, ಅದರ ಸಾಧಾರಣ ರೂಪುರೇಷೆಗಳು ನಿರ್ಧರಿತವಾಗುವುದು ವ್ಯಕ್ತಿ – ವ್ಯಕ್ತಿಗಳ ನಡುವೆ ಏರ್ಪಡುವ ನಾನಾ ಬಗೆಯ ಸಂಬಂಧಗಳ ಮಥನದಲ್ಲಿ. ಅಂದರೆ ಒಂದು ಸಮಾಜವ್ಯವಸ್ಥೆಯನ್ನು ವ್ಯಕ್ತಿ ಒಪ್ಪಿಯೊ ಅಥವಾ ವಿರೋಧಿಸಿಯೊ ಬಾಳುವುದರಲ್ಲಿ, ಉದ್ಯೋಗದಿಂದ ಮೊದಲಾಗಿ ನಮ್ಮ ಪಾರಮಾರ್ಥದ ತನಕ ನಾವು ತೊಡಗುವ ಕ್ರಿಯೆಗಳಲ್ಲಿ. ವ್ಯಕ್ತಿಪ್ರಜ್ಞೆ ಕಾಲಾತೀತವಾದ ಶೂನ್ಯದಲ್ಲಿಯೊ, ಅಸ್ಪರ್ಶ ಅವಕಾಶದಲ್ಲಿಯೊ, ನಾವು ಸ್ವಯಂಭೂವಿನಂತೆ ಸೃಷ್ಟಿಸಿಕೊಳ್ಳುವ ವಸ್ತುವಲ್ಲ. ಪದಾರ್ಥ ಲೋಕದಲ್ಲಿ, ಮತ್ತು ತನ್ನಂತಹ ಇತರರು ಇರುವ ಲೋಕದಲ್ಲಿ ತೊಡಗುವುದರ ಮೂಲಕ ಮಾತ್ರ ಮನುಷ್ಯನ ಪ್ರಜ್ಞೆ ತನ್ನನ್ನು ತಾನು ಗೊತ್ತುಪಡಿಸಿಕೊಳ್ಳುತ್ತದೆ; ರೂಪಿಸಿಕೊಳ್ಳುತ್ತದೆ.

ಅಂದಮಾತ್ರಕ್ಕೆ ವ್ಯಕ್ತಿಪ್ರಜ್ಞೆಗೂ, ಸಮಾಜವ್ಯವಸ್ಥೆಗೂ ನಡುವೆ ಇರುವ ಸಂಬಂಧವನ್ನು ಸಮೀಕರಣದಷ್ಟು ಸ್ಪಷ್ಟವಾದ ರೀತಿಯಲ್ಲಿ ಲೆಕ್ಕಾಚಾರ ಮಾಡಿ ನಿರ್ಧರಿಸುವುದು ಅಸಾಧ್ಯ. ಸುಲಭ ರೀತಿಯಲ್ಲಿ ಸೂತ್ರಾನ್ವಯ ಮಾಡುವ ಮಾರ್ಕ್ಸ್‌ವಾದಿಗಳು ಹೆಜ್ಜೆ ತಪ್ಪುವುದು ಇಲ್ಲೆ. ಆರ್ಥಿಕ ವ್ಯವಸ್ಥೆಯೇ ತಳಪಾಯ, ನಮ್ಮ ಸಾಂಸ್ಕೃತಿಕ ಭೌತಿಕ ರಾಜಕೀಯ ವ್ಯವಹಾರಗಳೆಲ್ಲ ಈ ತಳಪಾಯಕ್ಕನುಗುಣವಾಗಿ ಬೆಳೆದ ಕಟ್ಟಡ ಎಂದು ಮಾರ್ಕ್ಸ್ ಅಂದಿದ್ದರೂ ಸಹ, ಯುವಕ ಮಾರ್ಕ್ಸ್‌ನಲ್ಲೂ ಮತ್ತು ಅವನ ಸಹೋದ್ಯೋಗಿಯಾಗಿದ್ದ ಎಂಗೆಲ್ಸ್‌ನಲ್ಲೂ ನಮ್ಮ ಬೌದ್ಧಿಕ ಪ್ರೇರಣೆಗಳ ಮೂಲಕವೂ ಸಮಾಜದಲ್ಲಿ ಬದಲಾವಣೆಗಳು ಆಗುವುದು ಶಕ್ಯ ಎಂಬ ಸೂಚನೆಯೂ ಇದೆ.

ಆದರೆ ಈ ಸೂಚನೆ ಮಾತ್ರ ಮಾರ್ಕ್ಸ್‌ನ ಒಟ್ಟು ವಿಚಾರಕ್ಕೆ ಮೂಲಭೂತವಾದದ್ದಲ್ಲ. ಮಾರ್ಕ್ಸ್ ಹೆಚ್ಚು ಮಹತ್ವಕೊಡುವುದು ಆರ್ಥಿಕ ವ್ಯವಸ್ಥೆಗೇ; ಇದರಿಂದಾಗಿ ಮನುಷ್ಯನ ಸಮಾಜವನ್ನು ಐತಿಹಾಸಿಕ ದೃಷ್ಟಿಯಿಂದ ಅಭ್ಯಾಸ ಮಾಡುವವರಿಗೆ ನಿಶಿತವಾಗಿ ನಿರ್ದಿಷ್ಟವಾಗಿ ವಿಶ್ಲೇಷಿಸಲು ಒಂದು ದೃಷ್ಟಿಕೋನ ಸಿಕ್ಕಂತಾಗುತ್ತದೆ. ಆದರೆ ಐತಿಹಾಸಿಕ ದೃಷ್ಟಿಯಿಂದಲ್ಲದೆ, ನಿತ್ಯವಾಗಿ ಘಟಿಸುವ ಅನುಭವವೆಂದು ಜೀವನವನ್ನು ನೋಡುವವರಿಗೆ ಮಾತ್ರ ಆರ್ಥಿಕ ವ್ಯವಸ್ಥಾಂತರದಲ್ಲೆ ಪುರುಷಾರ್ಥಗಳ ಸಂಪೂರ್ಣ ವ್ಯವಸ್ಥಾಂತರಗಳನ್ನೂ ಕಾಣುವ ಮಾರ್ಕ್ಸ್‌ನ ದೃಷ್ಟಿ ಅತೃಪ್ತಿಯನ್ನು ತರುತ್ತದೆ.

ಇತಿಹಾಸದ ಪ್ರವಾಹದೃಷ್ಟಿಗೆ ಪ್ರತಿಗಳಿಗೆಯೂ ನಿಲ್ಲದಂತೆ ಹರಿಯುತ್ತಿರುವ ಬಿಂದುಗಳಲ್ಲಿ ಇನ್ನೊಂದು ಬಿಂದು; ಹುಟ್ಟು – ಸಾವು – ಸಂಭೋಗಗಳ ಪುನರಾವೃತ್ತಿಯೆಂದೊ ಸಫಲತೆಯ ಹೊಯ್ದಾಟವೆಂದೊ ಜೀವನವನ್ನು ನೋಡುವವನಿಗೆ ಮಾತ್ರ ಪ್ರತಿಗಳಿಗೆಯೂ ಚಿರಸತ್ಯವನ್ನು ತನ್ನೊಳಗೆ ಗರ್ಭಿಸಿಕೊಂಡ ಮುಹೂರ್ತ. ಅಜಂತದ ಚಿತ್ರಗಳು ಮೂರ್ತೀಭವಿಸಿದ ಕಾಲ ಇತಿಹಾಸದ ಪ್ರವಾಹಕ್ಕೆ ವಶವಾಗಿ ಕಳೆದುಹೋಗಿದ್ದರೂ, ಇವಕ್ಕೆ ರೂಪವನ್ನು ಕೊಟ್ಟಿದ್ದ ಆರ್ಥಿಕ ವ್ಯವಸ್ಥೆ ಈಗ ನಶಿಸಿದ್ದರೂ, ಚಿತ್ರಗಳು ಮಾತ್ರ ಗತಕಾಲದ ಕುರುಹುಗಳಂತಲ್ಲದೆ ಈ ಕ್ಷಣಕ್ಕೂ ಜೀವಂತವಾಗಿ ಒದಗುವಂತಹ ಅನುಭವಗಳಾಗಿ ಉಳಿದಿವೆ. ಬದಲಾಗುವ ಆರ್ಥಿಕ ವ್ಯವಸ್ಥೆಯಿಂದ ಜೀವನಾನುಭವದ ಸ್ವರೂಪವೆ ಸಂಪೂರ್ಣ ಮಾರ್ಪಡುವಂತಿದ್ದರೆ, ಪುರಾತನನಾದ ಹೋಮರ್ ಇವತ್ತಿಗೂ ತನ್ನ ಮನಸ್ಸನ್ನು ಯಾಕೆ ಕಲಕಬೇಕು ಎಂದು ವಿಚಾರಿಸುವಾಗ ಮಾರ್ಕ್ಸ್ ಗೊಂದಲಕ್ಕೊಳಗಾಗುತ್ತಾನೆ.

ಈ ಕೊನೆಯ ಮಾತಿಗೊಂದು ವಿವರಣೆ ಅವಶ್ಯ, ಪರಿಸರದಲ್ಲಾಗುವ ಬದಲಾವಣೆಗಳೆಲ್ಲ ಮನುಷ್ಯ ಪ್ರಜ್ಞೆಯಲ್ಲಿ ಒಮ್ಮೆಗೆ ಪ್ರತಿಬಿಂಬಿತವಾಗುವುದಿಲ್ಲ. ಹೊಸ ಸಮಾಜ ವ್ಯವಸ್ಥೆಯಿಂದ ಮನುಷ್ಯನ ಅರಿವಿನಲ್ಲಿ ಸೂಕ್ಷ್ಮ ಮಾರ್ಪಾಡುಗಳಾದರೂ ಸಹ, ಅಳಿದು ಹೋದ ವ್ಯವಸ್ಥೆಯ ಕುರುಹುಗಳು ಇನ್ನೂ ಮನುಷ್ಯನ ಪ್ರಜ್ಞೆಯಲ್ಲಿ ತೂಕಡಿಸುತ್ತಿರುತ್ತವೆ. ಮಧ್ಯಯುಗ ಕಳೆದು ರೆನೆಸನ್ಸ್ ಬಂದಿತು. ಪರಿಣಾಮವಾಗಿ ಶೇಕ್ಸ್‌ಪಿಯರನ ನಾಟಕಗಳು ಹುಟ್ಟಿದುವು. ಆದರೆ ಮಧ್ಯಯುಗದ ಮೌಲ್ಯಗಳೆಷ್ಟೋ ಶೇಕ್ಸ್‌ಪಿಯರನ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಾಹಿತ್ಯಪರಂಪರೆ ಬದಲಾವಣೆಗಳನ್ನು ಪ್ರತಿಬಿಂಬಿಸುವುದು ಮಾತ್ರವಲ್ಲ; ಮನುಷ್ಯನನ್ನು ಮಾನವೀಯವಾಗಿ ಉಳಿಸಲು ಅವಶ್ಯವಾದ ನಿರಂತರ ಸ್ಮೃತಿಯನ್ನು ಜೀವಂತವಾಗಿ ಉಳಿಸತಕ್ಕದ್ದು ಎಂದು ಲೀವೀಸ್‌ನಂತಹ ವಿಮರ್ಶಕರು ತಿಳಿಯುತ್ತಾರೆ. ಈ ಸ್ಮೃತಿಯನ್ನು ಕಾಯುವುದು ಭಾಷೆ : ಪರಂಪರೆಯಲ್ಲಿ ಅತ್ಯುತ್ತಮವಾದದ್ದನ್ನು ಸಾಮಾಜಿಕ ಏರುಪೇರುಗಳ ಕೋಲಾಹಲದಲ್ಲೂ ಕಾದಿಟ್ಟು ಮುಂದುವರಿಸುವ ಭಾಷೆ. ಹೀಗೆ ಯಾವೊಂದು ಕಾಲದಲ್ಲೂ ಎಲ್ಲ ಕಾಲಗಳೂ ನಮಗೆ ಸೇರಿದ್ದೆಂಬುದನ್ನು ಜಾಗೃತ ಅನುಭವಕ್ಕೆ ತರುವುದು ಭಾಷೆಯಲ್ಲಿ ಸಂಭವಿಸುವ ಸಾಹಿತ್ಯ ಕೃತಿಗಳು. ಆದ್ದರಿಂದ ಭಾಷೆಯ ಮೂಲಕ ಬದಲಾವಣೆಯನ್ನು ಮಾತ್ರವಲ್ಲದೆ, ತನ್ನ ಮೌಲ್ಯ ಕಲ್ಪನೆಗೆ ಅನುಗುಣವಾಗಿ ಬದಲಾಗದೆ ಉಳಿಯಬೇಕಾದ್ದನ್ನೂ ಸಾಹಿತಿ ಹಿಡಿದಿಟ್ಟು ಮಾನವೀಯತೆಗೆ ಅವಶ್ಯವಾದ ಸ್ಮೃತಿಯನ್ನು ಕಾಯುತ್ತಾನೆ. ಆದರೆ ಕಳೆದುಹೋದದ್ದು ಬರಿಯ ಹಂಬಲವಾಗಿ ಸಾಹಿತ್ಯದಲ್ಲಿ ಕಾಣಿಸಿಕೊಂಡರೆ ಕೃತಿನಿರ್ಮಾಣ ಕನಸುಗಾರಿಕೆಯ ಚಪಲಕ್ರಿಯೆ ಮಾತ್ರವಾಗಿ ಬಿಡುತ್ತದೆ; ವಾಸ್ತವತೆಯನ್ನು ಎದುರಿಸಲಾರದ ದುರ್ಬಲ ಮನಸ್ಸಿನ ಹಳಹಳಿಕೆಯಾಗುತ್ತದೆ. ಸ್ಮೃತಿಯನ್ನು ಜೀವಂತವಾಗಿ ಕಾದಿಡಲು ಕಳೆದುಹೋದದ್ದರ ಬಗ್ಗೆ ನಾವು ಹಳಹಳಿಕೆಯ ಧಾಟಿಯಲ್ಲಿ ವ್ಯಕ್ತಪಡಿಸುವ ಹಂಬಲ ಹೀಗೆ ಅಸಮರ್ಥವಾಗುತ್ತದೆಯಾದ್ದರಿಂದ ಕೃತಿಯಲ್ಲಿ ತನ್ನ ಅನ್ನಿಸಿಕೆಗಳನ್ನು ಲೇಖನ ಹೇಗೆ, ಯಾವ ಧಾಟಿಯಲ್ಲಿ ಮೂರ್ತವಾಗಿಸುತ್ತಾನೆ; ಹೀಗೆ ಮೂರ್ತವಾಗಿಸುವಾಗ ಎಷ್ಟು ವಿರುದ್ಧವಾದ ಸತ್ಯಗಳನ್ನು ಕೃತಿಯೊಳಕ್ಕೆ ತಂದು ದಕ್ಕಿಸಿಕೊಳ್ಳಬಲ್ಲ ತಡತ, ಬೀಸು, ಶಕ್ತಿ ಲೇಖನ ದೃಷ್ಟಿಕೋನಕ್ಕೆ ಇವೆ ಎನ್ನುವ ಪ್ರಶ್ನೆಗಳೆಲ್ಲ ಸಾಹಿತ್ಯ ವಿಮರ್ಶೆಯಲ್ಲಿ ಮುಖ್ಯವಾಗುತ್ತವೆ. ಆದ್ದರಿಂದ ಸಾಹಿತ್ಯವಿಮರ್ಶಕ ಹಂಬಲವಾಗಿ ವ್ಯಕ್ತವಾಗುವ ತೆಳುಭಾವನೆಗಳಿಗೆ ಬದಲಾಗಿ, ವಾಸ್ತವತೆಯ ಸತ್ಯದಲ್ಲಿ ನಿಷ್ಠುರವಾಗಿ ತೊಡಗುವ ಲೇಖಕನ ವಸ್ತು ನಿಷ್ಠೆಯನ್ನು ಅಪೇಕ್ಷಿಸುತ್ತಾನೆ. ಆದರೆ ಹಂಬಲವೂ ಮನುಷ್ಯನ ಬಹಳ ಮುಖ್ಯವಾದೊಂದು ಭಾವನೆಯಾದ್ದರಿಂದ ಅಳುಕಿಲ್ಲದ ಪರೀಕ್ಷೆಗೆ ಹಂಬಲಗಳು ಗುರಿಯಾದಾಗ ಮಾತ್ರ ಹಳಹಳಿಕೆಯ ಧಾಟಿಗೆ ಬದಲಾಗಿ ಕರ್ಷಣಕ್ಕೆ ಸಿಕ್ಕ ಮನಸ್ಸಿನ ಶಕ್ತಿಯುತ ಚಿತ್ರ ಸಾಹಿತ್ಯದಲ್ಲಿ ಹುಟ್ಟುತ್ತದೆ. ಆದ್ದರಿಂದ ಈ ಶಕ್ತಿಯನ್ನು ಸಾಧ್ಯವಾಗಿಸುವ ಗಂಡುಭಾಷೆ, ಸೂಕ್ಷ್ಮ ಶಿಲ್ಪ, ವಿವಿಧ ಭಾವಗಳು ಬೀಸನ್ನು ಸಾಧ್ಯವಾಗಿಸುವ ‘ಧಾಟಿ’ ವಿಮರ್ಶೆಯ ಪರೀಕ್ಷೆಗೆ ಗುರಿಯಾಗುತ್ತವೆ.

ಎಲ್ಲ ಮಾರ್ಕ್ಸ್‌ವಾದಿಗಳೂ ಮನುಷ್ಯ ಪ್ರಜ್ಞೆ ಪರಿಸರದ ಪ್ರತಿಬಿಂಬವೆಂದು ತಿಳಿಯುವುದಿಲ್ಲ; ಪ್ರಜ್ಞೆಯ ಆಳದಲ್ಲಿ ಕಳೆದುಹೋದದ್ದೆಷ್ಟೋ ತೂಕಡಿಸುತ್ತಿರುತ್ತವೆ ಎಂದು ಒಪ್ಪುತ್ತಾರೆ. ಆದರೆ ಇವರಲ್ಲೂ ಮೂರ್ಖರಿದ್ದಾರೆ. ಕ್ರಾಂತಿಯಲ್ಲಿ ಸಮಾಜ ವ್ಯವಸ್ಥೆಯನ್ನು ಬದಲು ಮಾಡಿಬಿಟ್ಟ ಕೂಡಲೆ ಸಾಹಿತಿಗಳೆಲ್ಲರೂ ಹೊಸ ಪ್ರಜ್ಞೆಯನ್ನು ಸೃಷ್ಟಿಸಬೇಕೆಂದು ಕಡ್ಡಾಯಮಾಡಿದ ಸ್ಟಾಲಿನ್ ವಾದಿಗಳು ಈ ಪಂಗಡದವರು. ಹೆಚ್ಚು ಸೂಕ್ಷ್ಮ ಮನಸ್ಸಿನ ಮಾರ್ಕ್ಸ್‌ವಾದಿಗಳು, ಕಳೆದದ್ದರ ಬಗ್ಗೆ ಹಂಬಲ ಮತ್ತು ಇರುವುದರ ನಿಷ್ಠುರ ವಾಸ್ತವತೆ ಕೂಡಿ ಸಾಹಿತ್ಯ ಹುಟ್ಟುತ್ತದೆ ಎಂದು ತಿಳಿಯುತ್ತಾರೆ. ಆದರೆ ಪರಿಸರದಲ್ಲಿ ಆಗುವಷ್ಟು ವೇಗವಾಗಿ ಬದಲಾವಣೆ ಪ್ರಜ್ಞೆಯಲ್ಲಿ ಆಗದಿದ್ದರೂ, ಕ್ರಮೇಣ, ಅದೆಷ್ಟು ನಿಧಾನವಾದ ಬದಲಾವಣೆಯಾಗಿದ್ದರೂ ಸಹ, ಪ್ರಜ್ಞೆಯೂ ಒಂದಲ್ಲ ಒಂದು ಕಾಲದಲಿ ಹಳೆಯದನ್ನು ಕಳೆದುಕೊಳ್ಳುತ್ತ ಹೊಸದಾಗಬೇಕಾಗುತ್ತದೆ – ಮಾರ್ಕ್ಸ್‌ನ ಪ್ರಕಾರ. ಅಂದರೆ ಯಾವತ್ತೋ ಒಂದು ಕಾಲದಲ್ಲಿ ಶೇಕ್ಸ್‌ಪಿಯರ್, ಹೋಮರರು ಜೀವಂತ ಅನುಭವವಾಗಿ ಉಳಿಯದೆ ಪಳೆಯುಳಿಕೆಗಳಾಗಬೇಕಾಗುತ್ತದೆ. ಅಲ್ಲದೆ ಮಾರ್ಕ್ಸ್‌ವಾದಿಯಾದವನು ಈ ರೀತಿಯ ಪ್ರಜ್ಞೆಯ ಬದಲಾವಣೆಯನ್ನು ಗುರುತಿಸುವುದು ಮಾತ್ರವಲ್ಲದೆ ಉಂಟುಮಾಡಲೂ ಶ್ರಮಿಸಬೇಕಾಗುತ್ತದೆ. ಯಾಕೆಂದರೆ ಅವನು ಬದಲಾವಣೆಯಾಗುತ್ತದೆ ಎಂದು ಮಾತ್ರ ಹೇಳುವವನಲ್ಲ : ಈ ಬದಲಾವಣೆ ಅವಶ್ಯ ಎಂದೂ ಹೇಳುವವನು. ಅಥವಾ ಮಾರ್ಕ್ಸ್‌ವಾದಿ ಹೀಗೂ ವಾದಿಸಬಹುದೇನೋ : ಪ್ರಾರಂಭದಲ್ಲಿ ಮನುಷ್ಯಸಮಾಜ ಕಮ್ಯುನಿಸ್ಟ್ ಕುಟುಂಬವಾಗಿತ್ತು; ಬದಲಾವಣೆಗಳ ಮೂಲಕ ಮುಂದೆ ಅದು ಕುಟುಂಬವಾಗುತ್ತದೆ. ಆದ್ದರಿಂದ ಈ ಬದಲಾವಣೆಯ ಹೋರಾಟದ ಪ್ರತಿ ಘಟ್ಟವೂ – ಸಾಹಿತ್ಯಕೃತಿಯಲ್ಲಿ ಮೈದಾಳಿದ ಈ ಘಟನಗಳೆಲ್ಲವೂ – ಮನುಷ್ಯನಿಗೆ ಸದಾ ಉಪಯುಕ್ತ ಅನುಭವಗಳಾಗಿ ಉಳಿದಿರುತ್ತವೆ.

ಅಂದರೆ ಮನುಷ್ಯನ ಪ್ರಜ್ಞೆಯೇ ಎಲ್ಲದಕ್ಕೂ ಕರ್ತ ಮತ್ತು ಕಾರಣ ಎನ್ನುವ ಆದರ್ಶವಾದವಾಗಲಿ, ಅಥವಾ ಮಾರ್ಕ್ಸ್‌ನ ಕೇವಲ ಐತಿಹಾಸಿಕ ದೃಷ್ಟಿಯಾಗಲಿ ಒಂದಕ್ಕೊಂದು ಹೊರತಾಗಿನಿಂತಾಗ ಮನುಷ್ಯನನ್ನು ಒಟ್ಟಾಗಿ ಗ್ರಹಿಸಲು ಸಾಲದಾಗುತ್ತದೆ. ಆರ್ಥಿಕ – ಐತಿಹಾಸಿಕ ಶಕ್ತಿಗಳ ಪರಿಸರದಲ್ಲೆ ಮನುಷ್ಯನ ಪ್ರಜ್ಞೆಯ ವಿಸ್ತಾರವನ್ನು ನಿರ್ಧರಿಸುವ ಮಾರ್ಕ್ಸ್ ಕೂಡ ದಲಿತನಲ್ಲಿ ಕ್ರಾಂತಿಯ ಬೀಜವನ್ನು ಕಾಣುವಾಗ ಮನುಷ್ಯನ ಪ್ರಜ್ಞೆಯ ಸ್ತರದಲ್ಲೆ ಇತಿಹಾಸವನ್ನು ಮೀರುವ ಪ್ರಯತ್ನವನ್ನು ಗುರುತಿಸಬೇಕಾಗುತ್ತದೆ. ನಮ್ಮನ್ನು ರೂಪಿಸುವುದರಲ್ಲಿ ಆರ್ಥಿಕ ಸಾಮಾಜಿಕ ಪರಿಸರಗಳು ಎಷ್ಟು ಪ್ರಭಾವಶಾಲಿಯಾಗಿದ್ದರೂ ಕೂಡ, ಈ ಪ್ರಭಾವಗಳ ತಿಕ್ಕಾಟಕ್ಕೆ ಸಿಕ್ಕೂ ತನ್ನ ಸ್ವಂತ ನಿರ್ಧಾರದ ಮೇಲೆಯೇ ಸದಾ ‘ಆಗು’ತ್ತಿರುವುದು ಎಲ್ಲ ಕಾಲಕ್ಕೂ ಶಾಶ್ವತವಾದ ಮನುಷ್ಯನ ಪ್ರಜ್ಞೆಯೇ ಎಂಬುದನ್ನು ಕಡೆಗಾಣಿಸಿ ಬಿಡುವಂತಿಲ್ಲ. ಮೂಲದಲ್ಲಿರುವುದು ಬರೀ ಪರಿಸರವೆ, ಅಥವಾ ಬರೀ ಪ್ರಜ್ಞೆಯೆ ಎಂಬ ಪ್ರಶ್ನೆಯಿಂದ ಮನುಷ್ಯನ ಅನುಭವವನ್ನು ವರ್ತಮಾನ – ತ್ರಿಕಾಲ ದೃಷ್ಟಿಯಿಂದ ಒಟ್ಟಿಗೇ ಗ್ರಹಿಸುವ ಯತ್ನಕ್ಕೆ ಪ್ರಯೋಜನವಿಲ್ಲ; ಅಥವಾ ಒಂದಿಷ್ಟು ಆದರ್ಶವಾದವನ್ನು ಇನ್ನೊಂದಿಷ್ಟು ಐತಿಹಾಸಿಕ ದೃಷ್ಟಿಯೊಡನೆ ಬೆಸೆಯುವ ಸುವರ್ಣ ಮಾಧ್ಯಮದ ರಾಜಿಯಿಂದಲೂ ಉಪಯೋಗವಿಲ್ಲ. ಪರಿಸರದ ಒತ್ತಡವನ್ನೂ, ತನ್ಮಧ್ಯೆಯಿದ್ದೂ ‘ಮೀರ’ಲೆತ್ನಿಸುವ ಮನುಷ್ಯ ಪ್ರಜ್ಞೆಯ ಶಾಶ್ವತ ಹೋರಾಟವನ್ನೂ ಅಖಂಡವಾಗಿ ಹಿಡಿಯಲು ಪ್ರಯತ್ನಿಸುವ ಸಾಹಿತ್ಯದ ಮಾರ್ಗಕ್ಕೆ – ಇದ ವ್ಯಕ್ತಿಯ ವಿಶಿಷ್ಟ ಅನುಭವದ ಶೋಧನೆಯಲ್ಲಿ ಸಮಷ್ಟಿಯ ಸಾಧಾರಣ ಸ್ವರೂಪವನ್ನು ಕಂಡುಕೊಳ್ಳುವ ಮಾರ್ಗವಾದ್ದರಿಂದ – ಪ್ರಜ್ಞೆ ಪರಿಸರಗಳ ದ್ವಂದ್ವದಲ್ಲಿನ ಸೆಳೆತವನ್ನು ವಿಚಾರ ನಿರ್ದಿಷ್ಟವಾಗಲೆಂಬ ಉದ್ದೇಶದಿಂದ ಸಡಿಲಮಾಡುವುದರಲ್ಲಿ ಲಾಭವಿಲ್ಲ.

ಪ್ರಜ್ಞೆ ಮತ್ತು ಪರಿಸರಗಳಲ್ಲಿ ಯಾವುದು ಸಾರ್ವಭೌಮ ಎನ್ನುವ ಪ್ರಶ್ನೆ ಅಮುಖ್ಯವಾದಾಗ ಸಮಾಜದ ಸಮಷ್ಟಿಯಲ್ಲಿ ವ್ಯಕ್ತಿ ಪಾಲುಗೊಳ್ಳುವುದಾಗಲಿ, ಸ್ವಂತ ನಿಶ್ಚಯದಲ್ಲಿ ಹೊರನಿಲ್ಲುವುದಾಗಲಿ, ಪರಕೀಯ ಭಾವದಲ್ಲಿ ತಪ್ತನಾಗುವುದಾಗಲಿ, ಇರುವುದನ್ನು ಬಿಟ್ಟು ಇಲ್ಲದುದನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗುವುದಾಗಲಿ ಅರ್ಥಪೂರ್ಣವಾದ ಸಂದಿಗ್ಧವೆಂದು ತಿಳಿಯುವುದು ಸಾಧ್ಯವಾಗುತ್ತದೆ. ತಾನಾಗಿಯೇ ಬೆಳೆಯುತ್ತ, ಕೂಡಿಕೊಳ್ಳುತ್ತ, ಏರುತ್ತ ಹೋಗುವ ಸಮನ್ವಯವಾದಿಗಳ ಪ್ರಜ್ಞೆಯ ಚಿತ್ರವಾಗಲಿ, ಅಥವಾ ತನ್ನ ಅತಿಯಿಂದ ತಾನೇ ನಿಷೇಧಿಸಲ್ಪಟ್ಟು ಬದಲಾಗುತ್ತ, ಬೆಳೆಯುತ್ತ ಮನುಷ್ಯನನ್ನು ರೂಪಿಸುವ ಮಾರ್ಕ್ಸಿಸ್ಟರ ಆರ್ಥಿಕ ವ್ಯವಸ್ಥೆಯಾಗಲಿ ಅನುಭವದ ಸತ್ಯಕ್ಕೆ ದೂರವಾದವು. ಯೂರೋಪಿಯನ್ ನವ್ಯ ಸಾಹಿತ್ಯದ ವಿಪರೀತಕ್ಕೆ ಮುಟ್ಟಿದ ಕೃತಿಗಳಲ್ಲಿ ಇತರರೇ ಇಲ್ಲವೆಂಬಂತಿರುವ ಪ್ರಪಂಚದಲ್ಲಿ ತನ್ನನ್ನು ತಾನು ಶೋಧಿಸಿಕೊಳ್ಳುವ ಏಕಾಕಿ ಪ್ರಜ್ಞೆಯ ಚಿತ್ರ ಮತ್ತು ಅರವಿಂದರ ಅನುಯಾಯಿಗಳಾದ ಆಧ್ಯಾತ್ಮವಾದಿ ಲೇಖಕ ಕೆಲವರಲ್ಲಿ ದೇಹವೇ ಇಲ್ಲದ ಆತ್ಮದ ಚಿತ್ರ ಈಚೆಗೆ ಹೆಚ್ಚಾಗಿ ಕಾಣುತ್ತಿದೆ. ಸರಳ ಮನಸ್ಕನಾದ ಮಾರ್ಕ್ಸ್‌ವಾದಿಯ ಆರ್ಥಿಕ ವ್ಯವಸ್ಥೆಯ ಲಕ್ಷ್ಮಣಗೆರೆ ಮೀರಲಾರದ ಪ್ರಜ್ಞೆಯ ಚಿತ್ರದಂತೆಯೇ, ಈ ಸರ್ವತಂತ್ರ ಸ್ವತಂತ್ರ ಪ್ರಜ್ಞೆಯೂ, ಆತ್ಮವೂ ಒಂದು ಕಲ್ಪನಾವಿಲಾಸ. ದೇಹ, ಮಣ್ಣು, ಪ್ರಜ್ಞೆ, ಪರಿಸರ, ಆತ್ಮ – ಈ ಯಾವೊಂದರಿಂದಲೂ ವ್ಯಕ್ತಿಸತ್ಯವನ್ನು ಹೊರಗಿಡುವ ಪ್ರಯತ್ನ ವಿರುದ್ಧ ಶಕ್ತಿಗಳ ಸೆಳೆತಕ್ಕೊಳಗಾದುದನ್ನು ಕೃತ್ರಿಮವಾಗಿ ಸಡಿಲಿಸಿದಂತಾಗುತ್ತದೆ.

ವಿಪರೀತವಾದ ವ್ಯಕ್ತಿವಾದ ಯೂರೋಪಿನಲ್ಲಿ ಬೆಳೆಯುತ್ತಿರುವುದಕ್ಕೂ, ಅಲ್ಲಿ ನಡೆಯುತ್ತಿರುವ ಕೈಗಾರಿಕಾ ಕ್ರಾಂತಿಯಲ್ಲಿ ಕುಟುಂಬದಂತಿದ್ದ ಸಮಾಜ ಒಡೆದ ವ್ಯಕ್ತಿ – ವ್ಯಕ್ತಿಯ ಅನ್ಯೋನ್ಯ ಕಲ್ಪನೆ ಕಳೆಯುತ್ತ ಹೋದುದಕ್ಕೂ ಸಂಬಂಧವಿದೆಯೆಂಬುದನ್ನು ಮರೆಯಬಾರದು. ಹಾಗೆಯೇ ಗುರು – ದೇವ – ಪಿತೃ ಋಣಭಾವಗಳಿಂದ ಭಾರತೀಯನ ಉಳಿದೆಲ್ಲ ಯೋಚನೆಗಳು ಪ್ರಭಾವಿತವಾಗುವುದಕ್ಕೂ, ಅವನು ಹುಟ್ಟಿ ಬೆಳೆದು ಬರುವ ಸಮಷ್ಟಿ ಕುಟುಂಬದ ಲೋಕಕ್ಕೂ ಸಂಬಂಧವಿದೆ. ಆದಕಾರಣವೇ ನಮ್ಮ ಸಮಷ್ಟಿ ಕುಟುಂಬಗಳಲ್ಲಿ ಬಿರುಕು ಬಿಡುತ್ತಿದ್ದಂತೆ, ಕೈಗಾರಿಕಾ ಕ್ರಾಂತಿಯಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ವ್ಯಾಪಕವಾದ ಮಾರ್ಪಾಡಾಗುತ್ತಿದ್ದಂತೆ ನಮ್ಮಲ್ಲಿಯೂ ವ್ಯಕ್ತಿವಾದ ತಲೆಹಾಕುತ್ತಿದೆ. ಆದರೆ ಯೂರೋಪಿನಲ್ಲಾಗಲಿ, ಭಾರತದಲ್ಲಾಗಲಿ ಸಮಷ್ಟಿಗೂ ತನಗೂ ಏನೂ ಸಂಬಂಧವಿಲ್ಲವೆನ್ನುವ ವ್ಯಕ್ತಿವಾದ ನಮ್ಮ ಅನುಭವದ ನಿಜ ಚಿತ್ರಣವಲ್ಲ. ತಾನು ‘ಪರಕೀಯ’ ಎಂಬ ಭಾವನೆ ವ್ಯಕ್ತಿಯಲ್ಲಿ ಅತ್ಯಂತ ತಪ್ತ ಅನುಭವವನ್ನು ಉಂಟು ಮಾಡುತ್ತದೆ ಎಂಬುದೇ ಇದಕ್ಕೆ ನಿದರ್ಶನ. ಪೆಡಂಭೂತದಂತೆ ಬೆಳೆದು ವ್ಯಕ್ತಿಯನ್ನು ತನ್ನ ಆವರಣಕ್ಕೆ ಪರಕೀಯನನ್ನಾಗಿ ಮಾಡುತ್ತಿರುವ ಪರಿಸರಕ್ಕೆ ಇದು ವ್ಯಕ್ತಿಯ ಕ್ಷುಬ್ಧ ಸವಾಲೂ ಹೌದು.

ಟಿಪ್ಪಣಿಯ ಉದ್ದೇಶ: ಮನುಷ್ಯನನ್ನು ಅವನ ಅಂತರಂಗದಿಂದ ಹೇಗೊ ಹಾಗೆ ಅವನ ಪರಿಸರದ ಹೊರಗಿನಿಂದಲೂ ಗ್ರಹಿಸಲು ಯತ್ನಿಸುವ ಸಾಹಿತ್ಯಕ್ಕೆ ಸಂಪೂರ್ಣ ವ್ಯಕ್ತಿಗತವಾದ ದೃಷ್ಟಿಯೂ ಸಾಲದು, ಐತಿಹಾಸಿಕ ದೃಷ್ಟಿಯೂ ಸಲ್ಲದು – ಎಂಬುದು. ಇಂತಹ ಸಾಮಾನ್ಯವಾದ ತತ್ವವನ್ನು ಮತ್ತೆ ಚರ್ಚಿಸಬೇಕಾಗಿ ಬಂದಿರಲು ಕಾರಣವೆಂದರೆ:

(ಒಂದು) ಆಧ್ಯಾತ್ಮವಾದಿಗಳು ಬರಿಯ ತತ್ವಗಳ ಮಟ್ಟದಲ್ಲಿ ಪ್ರಯತ್ನಿಸುವ ಕೃತಕ ಸಮನ್ವಯ;

(ಎರಡು) ಯೂರೋಪಿನ ಕೆಲವು ಸಾಹಿತಿಗಳಲ್ಲಿ ವಿಪರೀತಕ್ಕೆ ಹೋದ ನವ್ಯತೆಯನ್ನು ನಮ್ಮ ಸಾಹಿತಿಗಳೂ ಕಣ್ಣುಮುಚ್ಚಿ ಅನುಕರಿಸಬಹುದಾದ ಅಪಾಯ;

(ಮೂರು) ಮೇಲಿನೆರಡಕ್ಕೂ ವಿರೋಧವಾಗಿ ಹುಟ್ಟಬಹುದಾದ ಸರಳ ಮಾರ್ಕ್ಸ್‌ವಾದ.

—-
ಸಾಕ್ಷಿ (ತ್ರೈಮಾಸಿಕ), ೧೯೬೮ ರಲ್ಲಿ ಅಚ್ಚಾದ ಲೇಖನದ ವಿಸ್ತೃತ ರೂಪ.

* * *