ಈ ಸಂಸ್ಕೃತಿಯಲ್ಲಿ ಬದುಕುತ್ತಿರುವವರು ನಾವು; ಹೊರಗೆ ನಾವು ಕಾಣುತ್ತಿರುವ ವಿಷಯಗಳನ್ನು ನಮ್ಮ ಒಳಗೂ ಗುರುತಿಸಿಕೊಂಡಾಗ ನಮ್ಮ ವಿಚಾರಗಳು ಅರ್ಥಪೂರ್ಣವಾಗುತ್ತವೆ. ಈ ಸಂಸ್ಕೃತಿಯ ಬಗ್ಗೆ ಪರ – ವಿರೋಧ ಭಾವನೆಗಳು ಒಂದಕ್ಕೊಂದು ಹೆಣೆದುಕೊಂಡು ಈಚಿನ ಅನೇಕ ಬರಹಗಾರರಲ್ಲಿ ಇಬ್ಬಂದಿತನವನ್ನು ಉಂಟಮಾಡಿದೆ. ಆದ್ದರಿಂದ ಪ್ರಾಯಶಃ ನಮ್ಮಲ್ಲಿ ಅನೇಕರು ನನ್ನ ಹಾಗೆಯೇ ಯೋಚಿಸುತ್ತಿರಬಹುದೆಂಬ ಧೈರ್ಯದಿಂದ ತೀರಾ ವೈಯಕ್ತಿಕವಾಗಬಹುದಾದ ನನ್ನ ಪ್ರತಿಕ್ರಿಯೆಗಳಿಗೆ ನಾಚದೆ ಮಾತನ್ನಾಡಲು ನಿಮ್ಮ ಅನುಮತಿ ಬೇಡುತ್ತೇನೆ. ಅಲ್ಲದೆ ಸಂಸ್ಕೃತಿಯೆಂದರೆ ಪುಸ್ತಕಗಳಲ್ಲಿ ಅಡಗಿರುವ ಪರಮೋಚ್ಚ ಆದರ್ಶಗಳಲ್ಲದೆ, ನಿತ್ಯದ ಆಚರಣೆಯಲ್ಲಿರುವ ನಡೆನುಡಿಗಳೂ ಎಂದು ನಾನು ಮೊದಲೇ ಹೇಳಿಕೊಂಡಿರುವುದರಿಂದ ಈ ಲೇಖನದೊಳಕ್ಕೆ ನಾನು ಸ್ವಂತ ಹೊಕ್ಕು ಹೊರಡಲು, ವಿಷಯದಿಂದ ವಿಷಯಕ್ಕೆ ಹಾರಲು ಹೆಚ್ಚು ಅವಕಾಶೌನ್ನು ನಿಮ್ಮಿಂದ ಬೇಡುತ್ತೇನೆ.

ನನ್ನ ಇಬ್ಬಂದಿತನ ನನಗೇ ಅನೇಕ ಸಲ ವ್ಯಕ್ತವಾಗಿದೆ. ನಮ್ಮ ಜೀವನ ಸಂಪೂರ್ಣ ನಮ್ಮ ಭಾಷೆಗಳ ಮುಖಾಂತರವೇ ನಡೆಯಬೇಕು, ಸಾರ್ವಜನಿಕ ವ್ಯವಹಾರದಿಂದ ಇಂಗ್ಲಿಷನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಬೇರುಗಳನ್ನು ಕಳೆದುಕೊಂಡ ಛಿದ್ರ ವ್ಯಕ್ತಿತ್ವ ನಮ್ಮದಾಗುತ್ತದೆ ಎಂದು ನನ್ನ ನಂಬಿಕೆ; ಇದರ ಜೊತೆಗೇ ಯೂರೋಪಿನಿಂದ ಬರುವ ಸಂವೇದನೆಗಳಿಗೆ, ವಿಚಾರಗಳಿಗೆ ನಮ್ಮ ಮನಸ್ಸನ್ನು ತೆರೆಯದಿದ್ದರೆ ನಾವು ಮುರುಟಿಹೋಗುತ್ತೇವೆ, ಬರಿಯ ಕನ್ನಡ ಪರಂಪರೆಯಿಂದ ಹೊಸದೇನೂ ಹುಟ್ಟಿ ಬರಲಾರದು ಎಂದೂ ನಾನು ನಂಬಿದ್ದೇನೆ. ನಮ್ಮ ಸಂಸ್ಕೃತಿ ಸಂವಾದದಲ್ಲಿ ಮುಖ್ಯವಾದ ಈ ಒಂದು ಪ್ರಶ್ನೆಯ ಬಗ್ಗೆ ನನ್ನ ನಿಲುವು ವಿರೋಧಾತ್ಮಕವಾದುದಲ್ಲವೆಂದು ನಾನು ತಿಳಿದಿದ್ದೇನೆ. ಹೀಗೆಯೇ ಯೂರೋಪ್ ಭಾರತ ಸಾಹಿತ್ಯಗಳ ಸಂಬಂಧದ ಬಗ್ಗೆ ಯೋಚಿಸುವಾಗ – ನಮ್ಮ ಸಂಸ್ಕೃತಿ ಸಂವಾದದಲ್ಲಿ ಇದು ಇನ್ನೊಂದು ಮುಖ್ಯ ಪ್ರಶ್ನೆ – ನಮ್ಮಲ್ಲಿ ಅನೇಕರ ಭಾವನೆಗಳು ವಿರುದ್ಧ ಪ್ರತಿಕ್ರಿಯೆಗಳಿಂದ ಹೊಸೆದುಕೊಂಡಿರುತ್ತವೆ ಎಂಬುದು ನಿಮ್ಮಲ್ಲಿ ಅನೇಕರ ಅನುಭವಕ್ಕೆ ಬಂದಿರಬಹುದಾದ ವಿಷಯ. ಯೂರೋಪಿನ ಸಾಹಿತ್ಯದಿಂದ ನಮ್ಮ ಮುಖ್ಯ ಪ್ರೇರಣೆಗಳನ್ನು ಪಡೆಯುವುದಾಗಲೀ, ಪ್ರಯೋಗಶೀಲತೆಯ ಹುಮ್ಮಸ್ಸಿನಲ್ಲಿ ಅಲ್ಲಿ ನಡೆಯುವ ಪ್ರತಿಯೊಂದು ಸಾಹಿತ್ಯಿಕ ಬದಲಾವಣೆಗಳನ್ನೂ ಇಲ್ಲಿಯೂ ಕಾಣಲು ಇಚ್ಛಿಸುವುದಾಗಲಿ ಭಾರತೀಯ ಸಾಹಿತ್ಯ ಸಾಧಿಸಬೇಕಾದ ಅನನ್ಯತೆಯ ದೃಷ್ಟಿಯಿಂದ ಅಪಾಯಕರ ಎಂದು ವಾದಿಸುವಾಗ, ಪ್ರಚಾರದಲ್ಲಿರುವ ಗೊಡ್ಡು ಭಾರತೀಯತೆ ನಮ್ಮ ಮಾತುಗಳನ್ನು ಎಲ್ಲಿ ಕಬಳಿಸಿ ಬಿಡುತ್ತದೊ ಎಂಬ ದಿಗಿಲು ನಮ್ಮನ್ನು ಕಾಡುತ್ತದೆ. ಆದ್ದರಿಂದ ನಿಮ್ಮಲ್ಲಿ ಅನೇಕರಿಗೆ, ನನ್ನ ಹಾಗೆ, ಭಾರತೀಯವಾದಿಗಳು ಎದುರಿದ್ದಾಗ ಯೂರೋಪಿನ ಪರ ಮಾತನಾಡಬೇಕೆಂದೂ, ಯೂರೋಪ್ವಾದಿಗಳು ಎದುರಿದ್ದಾಗ ಭಾರತೀಯತೆಯನ್ನು ಎತ್ತಿ ಹಿಡಿಯಬೇಕೆಂದೂ ತುಂಟತನದ ಪ್ರಲೋಭನೆ ಹುಟ್ಟಿರಲಿಕ್ಕೆ ಸಾಕು.

ಇದು ತುಂಟು ಪ್ರಲೋಭನೆ ಮಾತ್ರವಲ್ಲ. ವಿಚಿತ್ರವೆಂದರೆ ಭಾರತದ ಸಂಸ್ಕೃತಿಯ ಜೊತೆ ಇಷ್ಟು ಜಗಳವಾಡುವ ನಮ್ಮಂಥವರು ಪಾಶ್ಚಾತ್ಯರ ಜೊತೆ ಮಾತಾಡುವಾಗ ನಮಗೆ ಅರಿವಿಲ್ಲದಂತೆಯೇ ನಮ್ಮ ಸಂಸ್ಕೃತಿಗೆ ವಕೀಲಿ ವಹಿಸುತ್ತೇವೆ. ಪರದೇಶದಲ್ಲಿದ್ದಾಗ ನಾಯ್ಪಾಲರ ಪುಸ್ತಕ An Area of Darkness ಬಗ್ಗೆ ನನಗೆ ಸಿಟ್ಟು ಬಂದಂತೆ, ಸ್ವದೇಶಕ್ಕೆ ಮರಳಿದ ಮೇಲೆ ಬರಲಿಲ್ಲ; ಈತ ಬರೆಯುವುದರಲ್ಲಿ ಬಹಳಷ್ಟು ಸರಿ ಎನ್ನಿಸಿತು. ನಮ್ಮ ದಾರಿರ್ದ್ರ್ಯಕ್ಕೆ, ನಮ್ಮ ಇಂದಿನ ಹೀನ ಅವಸ್ಥೆಗೆ, ನಮ್ಮ ವೈಯಕ್ತಿಕ ಕೊರತೆಗಳಿಗೆ ಪೂರಕವಾಗಲೆಂದು ನಾವು ಪ್ರಾಯಶಃ ಹೀಗೆ ಸಂಸ್ಕೃತಿಗೆ ವಕೀಲಿ ವಹಿಸುತ್ತೇವೆ.

ನನ್ನ ಅನುಮಾನ, ಇಂಗ್ಲಿಷ್ ಪ್ರೊಫೆಸರರೆಲ್ಲರಿಗೂ ರಾಜಾರಾಯರು ಇಷ್ಟು ಪ್ರಿಯವಾಗಿರಲು ಕಾರಣ : ರಾಜಾರಾಯರ ಕಾದಂಬರಿಗಳಲ್ಲಿ ಎದ್ದುಕಾಣುವ ಸ್ವದೇಶ ಹಂಬಲ. ಈ ಕೀರ್ತನೆಯ ಧಾಟಿಯ ಬರವಣಿಗೆ, ಹಂಬಲ ಎಲ್ಲವೂ ರಾಜಾರಾಯರು ಸಮರ್ಥವಾಗಿ ನಿರ್ವಹಿಸುವ, ಪರೀಕ್ಷಿಸುವ ಕಾದಂಬರಿ ವಸ್ತುಗಳಾಗುತ್ತವೆಯಾದರೂ ರಾಜಾರಾಯರು ವಿಮರ್ಶಕರು ಮಾತ್ರ (ಮುಖ್ಯವಾಗಿ ಪ್ರೊ. ಸಿ.ಡಿ. ನರಸಿಂಹಯ್ಯನವರು) ಕಾದಂಬರಿಕಾರ ವಸ್ತುನಿಷ್ಠ ಪರೀಕ್ಷೆಗೆ ಒಳಪಡಿಸುವ ಭಾವನೆಗಳನ್ನು ಮೆರೆಸಲೆಂದು ಎತ್ತಿಹಿಡಿದ ಭಾರತಕೀರ್ತನೆಯೆಂದು ಸ್ವೀಕರಿಸಿ, ರಾಜಾರಾಯರನ್ನು ಭಾರತೀಯ ಸಂಸ್ಕೃತಿಯ ರಾಯಭಾರಿಗಳೆಂದು ಕಾಣುತ್ತಾರೆ. ಸಂಸ್ಕೃತಿಯನ್ನು ಸಾಹಿತ್ಯ ವಿಮರ್ಶೆಯಲ್ಲಿ ಹೀಗೆ ಎತ್ತಿಹಿಡಿಯುವುದು ಒಂದು ರೀತಿಯ ಸೋಪ್ ಮಾರಾಟವೂ ಹೌದು. ಇಂದಿನ ಅಂತರ್ರಾಷ್ಟ್ರೀಯ ರಾಜಕಾರಣದ ಪರಿಸರದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಹೊರಗೆ ಹೋಗುವವರಿಗೆಲ್ಲ ಒಂದು ವಿಷಯ ಬೇಕೇಬೇಕಲ್ಲವೆ? ಅಲ್ಲದೆ ಇಂಗ್ಲಿಷ್ ಪ್ರಾಧ್ಯಾಪಕರಿಗೆಲ್ಲ ತಾವು ಇಂಗ್ಲಿಷಿಗೆ ಆತುಕೊಂಡು ಸ್ವಭಾಷೆಗಳನ್ನು ಕೈಬಿಟ್ಟಿದ್ದೇವೆಂಬ ಅಳಕು ಇರುತ್ತದಲ್ಲವೆ? – ಅದಕ್ಕಾಗಿಯೇ ಪ್ರಾಯಶಃ ನಮ್ಮಲ್ಲಿ ಅನೇಕರು (ರಾಜಾರಾಯರೂ ಸಹ) ವಾಸ್ತವ್ಯದಲ್ಲಿ ಐರೋಪ್ಯವಾಗಿ ಹೋಗುತ್ತಿರುವ ನಮ್ಮ ಜೀವನಕ್ರಮಕ್ಕೆ, ನಮ್ಮ ಇಂಗ್ಲಿಷ್ ವ್ಯಾಮೋಹಕ್ಕೆ ಪೂರಕವಾಗಿ ಭಾರತೀಯ ಸಂಸ್ಕೃತಿಯ ಮತ್ತು ಸಂಸ್ಕೃತ ಭಾಷೆಯ ಆರಾಧಕರಾಗಿಬಿಡುತ್ತೇವೆ.

ಇಂಗ್ಲಿಷಿನಲ್ಲಿ ಬರೆಯುವವರಿಗಂತೂ ಭಾರತೀಯತೆ – ಸಾಮಾನ್ಯರಿಗೆ ಮಾರಾಟದ ದೃಷ್ಟಿಯಿಂದ, ಸೀರಿಯಸ್ಸಾದ ಲೇಖಕರಿಗೆ ಪರಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ವಿಶಿಷ್ಟತೆಯನ್ನು ಸ್ಥಾಪಿಸಿಕೊಳ್ಳುವ ದೃಷ್ಟಿಯಿಂದ – ಅವಶ್ಯವಾಗುತ್ತದೆ. ಇಂಗ್ಲಿಷಿನಲ್ಲಿ ಆಕರ್ಷಕವಾಗಿ ಕಾಣುವ ರಾಜಾರಾಯರ ಕನ್ನಡತನ, ಕನ್ನಡ ಭಾಷಾಂತರದಲ್ಲಿ ಸಪ್ಪೆಯಾಗುತ್ತದೆ; ಅವರ ಸ್ವಸಂಸ್ಕೃತಿಯ ಅಭಿಮಾನವನ್ನಂತೂ ಕಾದಂಬರಿಯ ಒಟ್ಟು ಶಿಲ್ಪದಿಂದ ಹೊರಗಿಟ್ಟು ಕನ್ನಡಕ್ಕೆ ಭಾಷಾಂತರಿಸಿಕೊಂಡು ಓದಿದಾಗ ಮುಜುಗರ ಹುಟ್ಟುತ್ತದೆ. ಇಂಗ್ಲೆಂಡಿನ ಸಂಸ್ಕೃತಿಯ ಸಂದರ್ಭದಲ್ಲಿ ರಾಮ ಎತ್ತಿಸಿಕೊಳ್ಳುವ ಆರತಿಯನ್ನು ನಂಜನಗೂಡಿನಲ್ಲಿ, ಅದೇ ಅಭಿಮಾನದಿಂದ, ಕನ್ನಡ ಭಾಷೆಯಲ್ಲಿ, ಎತ್ತಿಸಿಕೊಂಡಿದ್ದಿದ್ದರೆ ನಮಗೆ ಅವನು ಹಾಸ್ಯಾಸ್ಪದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ; ಅಥವಾ ಅ.ನ.ಕೃ. ಕಾದಂಬರಿಯ ಭಾವಾತೀರೇಕದ ನಾಯಕನಂತೆ ಕಾಣುತ್ತಿದ್ದ. ನಮ್ಮ ಸಂಸ್ಕೃತಿಯ ಬಗ್ಗೆ ಸಂಪೂರ್ಣ ಆರಾಧಕಭಾವವನ್ನು ಕಾಣಲು ಬಯಸುವವರು ಈಗ ಇಂಡೋ ಆಂಗ್ಲಿಯನ್ ಲೇಖಕರು – ಮುಖ್ಯವಾಗಿ ಪರದೇಶದಲ್ಲಿ ಬದುಕುತ್ತಿರುವುದರಿಂದಾಗಿ ಈ ದೇಶದ ಬಗ್ಗೆ ಹಲುಬಿನಿಂದ ಬರೆಯುವ ರಾಜಾರಾಯರು ಮತ್ತು ಪರದೇಶಗಳಲ್ಲಿ ಭಾಷಣ ಮಾಡಲು ಆಮಂತ್ರಿತರಾಗುವ ನಮ್ಮ ಪ್ರಾಧ್ಯಾಪಕರುಗಳು – ಬರೆಯುತ್ತಿರುವ ಇಂಗ್ಲಿಷ್ ಪುಸ್ತಕಗಳನ್ನು ಓದಬೇಕು.

ನಮ್ಮ ಸಂಸ್ಕೃತಿ – ಲೇಖಕ ಸಂಬಂಧವನ್ನು ಅರ್ಥಮಾಡಿಕೊಳ್ಳಲೆಂದು ನಾನು ಇದನ್ನು ಬರೆಯುತ್ತಿದ್ದೇನೆಯೆ ವಿನಾ ಬರಿ ಜರೆಯಲೆಂದು ಅಲ್ಲ. ಯಾಕೆಂದರೆ ಯಾವೊಂದು ಪ್ರವೃತ್ತಿಯೇ ಆಗಲಿ ರಾಜಾರಾಯರಂಥ ಗಂಭೀರ ಲೇಖಕರಲ್ಲಿ ಇಬ್ಬಂದಿತನದ ಅರ್ಥಪೂರ್ಣತೆಯಲ್ಲಿ ವ್ಯಕ್ತವಾಗಿ, ಓದುಗನಲ್ಲಿ ಹಾಗೂ ಎನ್ನಿಸುವ, ಹೀಗೂ ಎನ್ನಿಸುವ ಉತ್ಕಟವೂ ನಿಕಟವೂ ಆದ ಪ್ರತಿಕ್ರಿಯೆಯನ್ನು ಅಪೇಕ್ಷಿಸುತ್ತದೆ; ಜೊತೆಗೇ ಡಂಗುರ ಸಾರುವ ಬಾಯ್ಡಡಕರ ಸ್ಲೋಗನುಗಳಾಗಿಯೂ ವ್ಯಕ್ತವಾಗುತ್ತವೆ. ಸಂಸ್ಕೃತಿ ಮೋಹ, ಸಂಸ್ಕೃತಿವಿರೋಧ ಎರಡಕ್ಕೂ ಈ ಗತಿ ಪ್ರಾಪ್ತವಾಗಬಹುದು. ಬಾಯಲ್ಲಿ ಸಿಗಾರನ್ನೊ, ಪೈಪನ್ನೊ ಕಚ್ಚಿ “ದೀಸ್ ಇಂಡಿಯನ್ಸ್ ಹ್ಯಾವ್ ನೋ ಮ್ಯಾನರ್ಸ್” ಎಂದು ತಿರಸ್ಕಾರದಿಂದ ಮುಖಹಿಂಡಿ, ಮಾತಿಗೊಮ್ಮೆ ‘ನಾನು ಅಮೇರಿಕಾದಲ್ಲಿದ್ದಾಗ’ ಎನ್ನುವ ‘ಫಾರಿನ್ ರಿಟರ್ನ್ಡ್’ಗಳಷ್ಟೇ, ಭಾರತ ಕೀರ್ತನಕೇಸರಿಗಳೂ ಸಹ ಹಾಸ್ಯಾಸ್ಪದ ವ್ಯಕ್ತಿಗಳು. ಆದರೂ ಇಬ್ಬಂದಿಗಳ ರಹಸ್ಯಪೂರ್ಣ ಗೂಢತೆ*, ಮುಗ್ಧರ ಆರಾಧನೆ, ಮುಟ್ಠಾಳರ ವಿರೋಧ, ಬಾಯ್ಡಡಕರ ಡಂಗುರ ಎಲ್ಲವೂ ಕೂಡಿ ಒಂದು ಸಂಸ್ಕೃತಿಯ ಒಟ್ಟು ಚಿತ್ರ ಹುಟ್ಟುತ್ತದೆ ಎಂಬುದನ್ನು ಮರೆಯಕೂಡದು. ಯೂರೋಪಿನಿಂದ ಆಕರ್ಷಿತರಾದ ಹತ್ತೊಂಬತ್ತನೆ ಶತಮಾನದ ರಷ್ಯನ್ ಲೇಖಕರೂ ಸಹ ತಮ್ಮ ಸಂಸ್ಕೃತಿಯ ಬಗ್ಗೆ ನಮ್ಮಂತೆಯೇ ಸಂಕೀರ್ಣವಾದ ದ್ವಂದ್ವ, ಪರ, ವಿರೋಧ ಭಾವಗಳನ್ನು ತಳೆದವರಾಗಿದ್ದರು. ಪ್ರಾಯಶಃ ಭಾರತೀಯ ಲೇಖಕರು ಇಂಗ್ಲಿಷ್ ಸಾಹಿತ್ಯದಿಂದ ಕಲಿತಿದ್ದಕ್ಕಿಂತ ಹೆಚ್ಚಿನದನ್ನು ಈ ರಷ್ಯನ್ ಲೇಖಕರಿಂದ ಕಲಿಯುವುದಿದೆ ಎನ್ನಿಸುತ್ತದೆ – ನಮ್ಮ ಅವರ ಪರಿಸ್ಥಿತಿಯ ಸಾದೃಶ್ಯವನ್ನು ವಿಚಾರ ಮಾಡಿದಾಗ, ಡಾಸ್ಟವಸ್ಕಿಯ ಕಾದಂಬರಿಗಳಲ್ಲಿ ಸ್ವಸಂಸ್ಕೃತಿಯ ಆರಾಧಕರು, ಯೂರೋಪಿಗೆ ವಾಲಿ ಸ್ವಸಂಸ್ಕೃತಿಯನ್ನು ದ್ವೇಷಿಸಿದವರು, ಇಬ್ಬಂದಿಗಳು, ಅನುಭಾವಿ ಭೋಳೆಗಳು, ಡಂಗುರದವರು, ಎಲ್ಲರೂ – ನಮ್ಮಲ್ಲೂ ಕಾಣಸಿಗುವ ಎಲ್ಲ ವಿಧದ ಜನರೂ – ಡಾಸ್ಟವಸ್ಕಿಯ ಸ್ವಂತ ತೊಳಲಾಟದ ಶೋಧನೆಯ ಸಾಮಗ್ರಿಗಳಾಗಿ ಬರುತ್ತಾರೆ.

ಹೇಗೆ ಇಂಗ್ಲಿಷಿನಲ್ಲಿ ಬರೆಯುವ ಲೇಖಕರು ಭಾರತೀಯ ಸಂಸ್ಕೃತಿಯ ಆರಾಧಕರಾಗುತ್ತಾರೊ, ಹಾಗೆಯೇ ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಈಚಿನ ಅನೇಕ ಲೇಖಕರು ಯೂರೋಪಿನ ಕಡೆ ಸೃಷ್ಟ್ಯಾತ್ಮಕ ಪ್ರೇರಣೆಗಳಿಗಾಗಿ ವಾಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಸ್ವಂತದವರಿಗೆ ಬರೆಯುವ ಇವರು ತಮ್ಮ ಸಂಸ್ಕೃತಿಯ ಬರಿ ಆರಾಧಕರೂ ಆಗಬೇಕಿಲ್ಲ. ಅಥವಾ ಬರಿ ವಿರೋಧಿಗಳಾಗುವುದು ಸಾಧ್ಯವಿಲ್ಲ ಎಂಬ ಕಾರಣದಿಂದ ಇವರಲ್ಲಿ ತಾವು ಸಹಿಸಲೇಬೇಕಾದ ಪರಿಸರದ ಬಗ್ಗೆ ಹುಟ್ಟಬಹುದಾದ ಇಬ್ಬಂದಿತನ ಎಲ್ಲಹೆಚ್ಚು ಅರ್ಥ ಪೂರ್ಣವಾಗುತ್ತೆ. ಆದರೆ ಯೂರೋಪಿಗೆ ಕೈಯೊಡ್ಡಿದ ಇವರ ಧೋರಣೆ ಎಲ್ಲದಕ್ಕೂ ‘ಸೈ’ ಎಂದು ಬರಿ ನಿರ್ಜೀವ ವಾಹಕವಾಗಿಬಿಡುವ ಭಾರತೀಯ ಅನುಕರಣಶೀಲತೆಯಾಗದಂತೆ ಎಚ್ಚರವಹಿಸುವುದು ಅವಶ್ಯ. (ನಾವು ಎಷ್ಟು ಅನುಕರಣಶೀಲರು ಎಂದರೆ : ನಮ್ಮ ಯುವಕರಿಗೆ ಸಿತಾರ್‌ಮೇಲೆ ಅಭಿಮಾನ ಹುಟ್ಟಿದ್ದು ಬೀಟಲ್ಸ್‌ಗಳು ಸಿತಾರ್‌ಕಲಿಯತೊಡಗಿದ ಮೇಲೆ; ಭಾರತೀಯ ಉಡಿಗೆ ತೊಡಿಗೆ ಆಕರ್ಷಕವಾದದ್ದು ಹಿಪ್ಪಿಗಳು ಜುಬ್ಬ ಸರ ಹಾಕಿಕೊಳ್ಳಲು ಪ್ರಾರಂಭಿಸಿದ ಮೇಲೆ; ನಮ್ಮ ಪ್ರಾಧ್ಯಾಪಕರು ರಾಜಾರಾಯರನ್ನು ಕೊಂಡಾಡಲು ಪ್ರಾರಂಭಿಸಿದ್ದು ಲಾರೆನ್ಸ್ ಡರ್ರೆಲ್ ಹೊಗಳಿದ ಮೇಲೆ; ಉಪನಿಷತ್ತು, ಗೀತೆಗಳ ಮಹತ್ವ ಬೋಧೆಯಾದದ್ದು ಎಲಿಯಟ್ ತನ್ನ ಕವನಗಳಲ್ಲಿ ಇವನ್ನು ಉಪಯೋಗಿಸಿಕೊಂಡ ಮೇಲೆ.)

ಆದರೂ ತಮ್ಮ ತಮ್ಮ ಸಂಸ್ಕೃತಿಗಳಿಗೆ ಬೆಲೆಯುಳ್ಳದ್ದನ್ನು ಸೇರಿಸಿದ ಲೇಖಕರಲ್ಲಿ ಪರ ಸಂಸ್ಕೃತಿಗಳಿಗೆ ದತ್ತು ಹೋದವರು ಬಹಳ ಮಂದಿಯಿದ್ದಾರೆ ಎಂಬುದು ಗಮನಿಸಬೇಕಾದ್ದು. ಅಮೇರಿಕಾಕ್ಕೆ ಭಾರತ ಮತ್ತು ಚೀನ ಆದರ್ಶವಾಗಿದ್ದ, ಇಂಗ್ಲೆಂಡಿಗೆ ಫ್ರಾನ್ಸ್ ಮತ್ತು ಇಟಲಿ ಆದರ್ಶವಾಗಿದ್ದ ನಿದರ್ಶನಗಳು ಆ ದೇಶಗಳ ಸಾಹಿತ್ಯದ ಇತಿಹಾಸದ ತುಂಬ ಕಾಣುತ್ತವೆ. ನಾವು ಇವತ್ತು ಎಲಿಯಟ್‌ನನ್ನೊ ಲೀವಿಸ್‌ನನ್ನೊ ಮಾದರಿಯಾಗಿಟ್ಟುಕೊಂಡು ನಮ್ಮ ಲೇಖಕರ ಬಗ್ಗೆ ಬರೆಯುವ ವಿಮರ್ಶೆಯಂತೆಯೆ ರೆನೆಸನ್ಸ್ ಕಾಲದಲ್ಲಿ ಬೆನ್ ಜಾನ್‌ಸನ್, ಸೆನೆಕಾನ ವಿಮರ್ಶೆಯನ್ನು ಮಾದರಿಯಾಗಿಟ್ಟುಕೊಂಡು ತನ್ನ ಸಮಕಾಲೀನನಾದ ಶೇಕ್ಸ್‌ಪಿಯರಿನ ಬಗ್ಗೆ ಬರೆದ. ಹದಿನೆಂಟನೆ ಶತಮಾನದ ಇಂಗ್ಲಿಷ್ ಲೇಖಕರ ಕೃತಿಗಳು, ವಿಚಾರಗಳು ಫ್ರೆಂಚ್ ಲೇಖಕರನ್ನು ಅನುಕರಿಸಿ ಬಂದವು. ಎಲಿಯಟ್ ಫ್ರೆಂಚ್ ಲೇಖಕನಾದ ಬಾದಲೇರ್‌ನಿಂದ, ಮತ್ತು ನಮ್ಮ ಉಪನಿಷತ್ತುಗಳಿಂದ ಪ್ರೇರಣೆಪಡೆದ. ಎಮರ್‌ಸನ್, ವಿಟ್‌ಮನ್ನರು ಭಾರತೀಯ ವೇದಾಂತದಿಂದ ಪ್ರೇರಣೆ ಪಡೆದರು. ಇದರಿಂದ ನಾವು ಉಬ್ಬುತ್ತೇವೆ; ನಮ್ಮ ವೇದಾಂತ ಪರಕೀಯರ ಮೇಲೆ ಪ್ರಭಾವ ಬೀರಿತೆಂದು ಹಿಗ್ಗುತ್ತೇವೆ. ಆದರೆ ಅಡಿಗರು ಎಲಿಯಟ್‌ನಿಂದ ಪ್ರಭಾವಿತರಾದರು ಎಂದು ಟೀಕಿಸುತ್ತೇವೆ. ಇದಕ್ಕೆ ಕಾರಣ ನಮ್ಮ ಸಂಸ್ಕೃತಿ ಸ್ವಸಂಪೂರ್ಣವಾದದ್ದು ಎಂಬ ನಿಮ್ಮ ದುರಹಂಕಾರ – ಅಥವಾ ತೋರಿಕೆಯ ನಂಬಿಕೆ.

ಇದು ತೋರಿಕೆಯ ನಂಬಿಕೆಯಿರಬಹುದೆಂದು ನಾನು ಅನುಮಾನಿಸಲು ಕಾರಣವಿದೆ. ಸ್ವತಃ ವರ್ಡ್ಸ್‌‌ವರ್ಥ್ ಇತ್ಯಾದಿ ರೊಮ್ಯಾಂಟಿಕ್ ಕವಿಗಳಿಂದ ಪ್ರೇರಿತರಾದವರಿಗೆ ಎಲಿಯಟ್‌ನಿಂದ ಪ್ರಭಾವಿತವಾಗುವುದು ಅಪಾಯಕಾರಿ ಪಾಶ್ಚಾತ್ಯೀಕರಣವಾಗಿ ಕಾಣುತ್ತದೆ; ಹಾಗೇ ಎಲಿಯಟ್, ಲಾರೆನ್ಸರಿಂದ ಪ್ರೇರಣೆ ಪಡೆಯುವುದು ಅಪಾಯಕಾರಿ ಅನುಕರಣವಾಗಿ ಕಾಣುವುದು ಸಾಧ್ಯ ಎಂಬುದಕ್ಕೆ ನಾವೇ ಕೆಲವರು, ಕೆಲವೊಮ್ಮೆಯಾದರೂ, ಹೊಸದನ್ನು ಕಂಡಾಗ ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ಸಾಕ್ಷಿ. ಇದಕ್ಕೆ ಕಾರಣ ಎಲ್ಲ ಸಾಹಿತ್ಯಪರಂಪರೆಗಳಲ್ಲೂ ಇರುವ, ಇರಲೇಬೇಕಾದ, ಸ್ವ – ಸಂಪ್ರದಾಯ ಶ್ರದ್ಧೆ ಮಾತ್ರವಲ್ಲ; ನಮಗೆ ನಮ್ಮ ಸಂಸ್ಕೃತಿಯ ವಿಷಯದಲ್ಲಿ ನರ್ವಸ್ಸಾದ ಭಾವನೆಗಳಿವೆ ಎಂಬುದು ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಸಂಗತಿ. ತನ್ನ ಸ್ವಂತಿಕೆಯಲ್ಲಿ ಗಟ್ಟಿಯಾದ ನಂಬಿಕೆಯಿರುವ ಪಾಶ್ಚಾತ್ಯ ಲೇಖಕ ಹೀಗೆ ಪರರಿಗೆ ಕೈ ಚಾಚುವಾಗ ದಿಗಿಲುಪಡುವುದಿಲ್ಲ. ಆದರೆ ಪರಕೀಯರಿಂದ ಆಳಿಸಿಕೊಂಡ ಅನುಭವವಿರುವ ನಾವು ಮಾತ್ರ ಸದಾ ದಿಗಿಲಿನಿಂದಲೇ, ನರ್ವಸ್ಸಾಗಿಯೇ ಪರಕೀಯ ಜೊತೆ ವ್ಯವಹರಿಸುತ್ತೇವೆ. ಪರಂಗಿ ತರಕಾರಿಗಳಾದ ಈರುಳ್ಳಿ ಟೊಮ್ಯಾಟೋಗಳನ್ನು ತಿನ್ನಕೂಡದೆಂದು ಮಡಿವಂತಿಕೆಯ ಸಂಕೋಚದ ಮಟ್ಟದಲ್ಲಿಯೂ ಈ ದಿಗಿಲು ಕೆಲಸ ಮಾಡುತ್ತದೆಂಬುದನ್ನು ಮರೆಯಕೂಡದು. ನಾನು ಈ ಮೊದಲು ವಿವರಿಸಿದ ಸಂಸ್ಕೃತಿಯ ವಿಷಯದಲ್ಲಿ ನಮಗಿರುವ ಇಬ್ಬಂದಿ ಭಾವನೆಗಳಲ್ಲಿ ಈ ಕಾರಣವೂ ಸೇರಿಕೊಂಡಿದೆ ಎನ್ನಬಹುದು.

ನಮ್ಮ ಭಾಷೆಯಲ್ಲಿ ಬರೆಯುವ ಲೇಖಕರು ಹೇಗೂ ನಮ್ಮ ಸಂಸ್ಕೃತಿಯ ವಾಸ್ತವ್ಯದಲ್ಲಿ ತೊಡಗಲೇಬೇಕಾಗಿ ಬರುವುದರಿಂದ ಪರಕೀಯ ಸಂಸ್ಕೃತಿಯೊಂದರ ದೃಷ್ಟಿಕೋನಕ್ಕೆ ಕೈಚಾಚುವುದು ಅವಶ್ಯವಾಗುತ್ತದೆಂಬುದನ್ನು – ನಾನು ಹೀಗೆ ಮಾತಾಡುವಾಗ ಸ್ವಲ್ಪ ನರ್ವಸ್ಸಾಗುತ್ತೇನೆಂಬುದು ನಿಜವಾದರೂ – ಒಪ್ಪಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಪ್ರತ್ಯೇಕತೆ ಸುಲಭವಾಗಿ ಕರಗಿಹೋಗುವ ಈ ಸಂಸ್ಕೃತಿಯ ಭೋಳೆ ಪ್ರವೃತ್ತಿಗಳ ನಡುವೆ, ಪರಿಸರದಲ್ಲಿ ದ್ರವಿಸಿಹೋಗದಂತೆ ಒಡೆದು ನಿಲ್ಲುವ ದೃಷ್ಟಿಕೋನವೊಂದು ಅನಿವಾರ್ಯವಾಗುತ್ತದೆ. ಐರೋಪ್ಯ ಸಾಹಿತ್ಯದಿಂದ ಪ್ರೇರಿತರಾಗಿ ಬರೆಯುತ್ತಿರುವ ನಮ್ಮ ಲೇಖಕರು ಎಷ್ಟು ಕುರುಡಾಗಿ ಪರ ಸಂಸ್ಕರತಿಯನ್ನು ಅನುಕರಿಸಿದರೂ ಸಹ, ಪಂಪ, ಕುಮಾರವ್ಯಾಸ, ಉಪನಿಷತ್ತುಗಳ ಪರಂಪರೆಯಷ್ಟನ್ನೇ ತಿಳಿದು, ಜಡತ್ವದಲ್ಲಿ ಇವನ್ನು ಸ್ವೀಕರಿಸಿ ಬರೆಯುತ್ತಿರುವ ಲೇಖಕರಷ್ಟು ಸತ್ವಹೀನರಾಗದಿರುವುದಕ್ಕೆ ಕಾರಣ : ಸ್ವಂತಿಕೆಯ ಪ್ರತ್ಯೇಕತೆ ಅವಶ್ಯವೆಂದೆನಿಸುವಷ್ಟಾದರೂ ಯೂರೋಪ್ ಸಾಹಿತ್ಯದ ಪ್ರಭಾವ ನಮ್ಮ ಲೇಖಕರನ್ನು ಪ್ರಚೋದಿಸುವುದು ಸಾಧ್ಯ, ಆದರೆ ನಮ್ಮ ಸಂಪ್ರದಾಯ ಮಾತ್ರದಿಂದ ಪ್ರಭಾವಿತರಾದವರು ಸ್ವಸಂಸ್ಕೃತಿಯನ್ನು ಬಿಂಬಿಸುವಷ್ಟಕ್ಕೆ ಸಂತೃಪ್ತರಾಗಿ ಉಳಿಯುತ್ತಾರೆ ಎಂಬುದು.

ವೈಯಕ್ತಿಕವಾಗಿ ನಾನು ಈ ವಿಷಯದಲ್ಲಿ ಎಷ್ಟು ಮುಂದುವರಿದು ಮಾತಾಡಲು ತಯರಿದ್ದೇನೆಂದರೆ : ಕನ್ನಡದಲ್ಲಿ ಬರೆಯುವ ಲೇಖಕನಿಗೆ ವ್ಯಾಸ ವಾಲ್ಮೀಕಿಗಳ ಕಾವ್ಯಾನುಭವ, ವಚನಕಾರರ ಕೃತಿಗಳ ಅಭ್ಯಾಸ, ಮತ್ತು ಐರೋಪ್ಯ ಸಾಹಿತ್ಯದ ಪ್ರೇರಣೆಯಿದ್ದರೆ ಸಾಕು, ಉಳಿದ ಕನ್ನಡ ಸಾಹಿತ್ಯದ ಪರಿಚಯವಿಲ್ಲದಿದ್ದರೂ ಅವನಿಗೆ ಅಪಾರವಾದ ನಷ್ಟವಾಗಲಿಕ್ಕಿಲ್ಲ ಎನ್ನುವಷ್ಟು. ನಮ್ಮ ಅನುಭವದ ಬಗ್ಗೆ ಬರೆದುಕೊಳ್ಳುವಾಗ ನಮ್ಮ ಸಂಸ್ಕೃತಿಯ ದೃಷ್ಟಿಕೋನವನ್ನು ತಳೆದಲ್ಲಿ ಎಲ್ಲಿ ಮತ್ತೆ ಚರ್ವಿತ ಚರ್ವಣವಾದ್ದು ಹುಟ್ಟಿಕೊಳ್ಳುತ್ತದೊ ಎಂಬ ದಿಗಿಲಿನಿಂದ ಉದ್ಭವವಾದ ಧೋರಣೆಯಿದು. ಆದರೆ ಇದು ಸರಿಯಾದ ಅಭಿಪ್ರಾಯವೆಂದಾಗಲಿ, ನನಗೆ ಯಾವಾಗಲೂ ಹೀಗೇ ಅನ್ನಿಸುತ್ತದೆ ಎಂದಾಗಲಿ ನಾನು ಹೇಳುತ್ತಿಲ್ಲ. ನಮ್ಮ ಸಂಸ್ಕೃತಿ ಸಂದರ್ಭದಲ್ಲಿ ಕೆಲವು ಲೇಖಕರಲ್ಲಾದರೂ ಇಂತಹ ಅನ್ನಿಸಿಕೆಗಳು ಕೆಲಸ ಮಾಡುತ್ತವೆ ಎಂಬುದು ಮುಖ್ಯವಾದ್ದರಿಂದ ನನ್ನನ್ನೆ ದೃಷ್ಟಾಂತವಾಗಿ ತೆಗೆದುಕೊಂಡಿದ್ದೇನೆ. ಅದೇ ಬೇರೊಂದು ಸಂದರ್ಭದಲ್ಲಿ – ನಾನು ಈ ಮೊದಲೇ ಒಪ್ಪಿಕೊಂಡಿರುವಂತೆ – ಯೂರೋಪಿನ ಪ್ರಭಾವಕ್ಕೆ ಆತುಕೊಂಡಿರುವುದರ ವಿರುದ್ಧ ನಾನು ವಾದ ಹೂಡಬಹುದು. ಇದರ ಅರ್ಥವಿಷ್ಟು : ಇಲ್ಲಿ ಸಂಪೂರ್ಣ ತೊಡಗಿದವನು ನಮ್ಮ ಸಂಸ್ಕೃತಿಯನ್ನು ಸಂಪೂರ್ಣ ಸ್ವೀಕರಿಸುವುದೂ ಅಸಾಧ್ಯ, ನಿರಾಕರಿಸುವುದೂ ಅಸಾಧ್ಯ.

ಲೇಖಕನ ಸ್ವಂತಿಕೆ, ಸಂಸ್ಕೃತಿಯ ಕೊಡುಗೆ ಪರಸ್ಪರ ಹೆಣೆದು ಹುರಿಯಾಗಿ ಜೀವಂತ ಕೃತಿಗಳು ಬರುತ್ತವೆ. ಹೀಗೆ ಹೆಣೆದುಕೊಳ್ಳುವ ಕ್ರಿಯೆಯಲ್ಲಿ – ನಮ್ಮ ಸಂಸ್ಕೃತಿ ಸಂದರ್ಭದಿಂದ ನೋಡುವಾಗ – ಟೆನ್ಶನ್ ಕಳೆದುಕೊಳ್ಳದಂತೆ ಸಂಸ್ಕೃತಿಯ ಜೊತೆ ಹೆಣೆದುಕೊಳ್ಳುವ ಲೇಖಕನ ವೈಯಕ್ತಿಕತೆಗೆ ಹೆಚ್ಚು ಬೆಲೆ ಎಂಬುದು ನನ್ನ ವಾದದ ತಿರುಳು. ಹೆಣೆದುಬಂದ ಕೃತಿಯಲ್ಲಿ ಕೆಲವರು ಸಂಸ್ಕೃತಿಯ ಕಡೆ ಬೆರಳು ಮಾಡಿ ತೋರಿಸಿದರೆ, ನಾನು ಲೇಖಕನ ವ್ಯಕ್ತಿತ್ವಕ್ಕೆ – ಸೂಕ್ಷ್ಮವೇದಿಯಾಗಿದ್ದರೂ ಸುಲಭವಾಗಿ ದ್ರವಿಸದ ವ್ಯಕ್ತಿತ್ವಕ್ಕೆ – ಹೆಚ್ಚು ಪ್ರಾಧಾನ್ಯ ಕೊಡುತ್ತಿದ್ದೇನೆ, ಅಷ್ಟೆ.

ಅನುಭವದ ಸಜೀವ ವಿವರಗಳ ಲೋಕವನ್ನು ಕ್ಷುದ್ರವೆಂದು ಕಂಡು, ಉದಾತ್ತ ಭಾವನೆಗಳ ರೆಟರಿಕ್ಕಿನ ಉಬ್ಬರದಲ್ಲಿ ಸುಲಭವಾದ ಪರಿಹಾರವನ್ನು ಕಾಣುವ ಕುವೆಂಪುರವರ ತನ್ಮಯ ಶೀಲ ದೃಷ್ಟಿಯಿಂದಾಗಿ ಅವರ ಕೃತಿಗಳಿಗಾಗುವ ನಷ್ಟವನ್ನು ಈ ಮೊದಲೇ ನಾನು ವಿವರಿಸಿದ್ದೇನೆ. ಬೇಂದ್ರೆಯವರು ಕೂಡ ನಮ್ಮ ಎಲ್ಲ ತೊಡಕುಗಳನ್ನೂ ಪರಿಹರಿಸಬಲ್ಲ ಮಂತ್ರಶಕ್ತಿಯನ್ನು ಪಡೆದದ್ದಾಗಿ ಭಾರತ ಸಂಸ್ಕೃತಿಯನ್ನು ಕಾಣುತ್ತಾರೆ. ನಮ್ಮ ಅಸ್ತಿತ್ವವು ಎಲ್ಲ ವಿಚಾರಗಳನ್ನೂ ಒಳಗುದಿಯಲ್ಲಿ ಪಡೆದು, ತನ್ನದೇ ಆದ ಒಳಮಾರ್ಗದಲ್ಲಿ ಬೆಳೆದು ಫಲತ್ವದ ಸ್ಥಿತಿ ಮುಟ್ಟಬೇಕು ಎಂಬ ಸತ್ಯ, ಭಾರತ ಸಂಸ್ಕರತಿಯ ಬಗ್ಗೆ ಮಾತಾಡಲು ತೊಡಗಿದೊಡನೆಯೇ ನಮ್ಮ ಹಿರಿಯರೆಲ್ಲರಿಗೂ ಮರೆತುಹೋಗಿ ಬಿಡುವಂತೆ ತೋರುತ್ತದೆ.

ಭಾರತೀಯ ಸಂಸ್ಕೃತಿಯದು ಅಗಸ್ತ್ಯ ಹೊಟ್ಟೆಯಾದ್ದರಿಂದ, ಸೃಷ್ಟಿಯ ವೈವಿಧ್ಯ ವೈಷಮ್ಯಗಳಿಗೆಲ್ಲ ಸುಲಭವಾಗಿ ‘ಸೈ’ ಎನ್ನುವ ಧೋರಣೆಯನ್ನು ಪ್ರತಿವ್ಯಕ್ತಿಯಲ್ಲೂ ಇದು ಪ್ರಚೋದಿಸುವುದರಿಂದ, ಲೇಖಕನ ವೈಯಕ್ತಿಕತೆಯ ವಿಶಿಷ್ಟ ಮುದ್ರೆಯಿಲ್ಲದ ಕೃತಿಗಳು ಈ ಸಂಸ್ಕೃತಿಯಿಂದ ಸುಲಭವಾಗಿ ಹುಟ್ಟಿಬರುವುದಷ್ಟೇ ಅಲ್ಲದೆ, ಬಹಳ ಬೇಗ ಮಹತ್ಕೃತಿಗಳೆಂದೂ ಮೆರೆದುಬಿಡುತ್ತವೆ. ಆದ್ದರಿಂದಲೇ ನಮ್ಮ ಲೇಖಕರಿಗೆ ತಮ್ಮ ಸಂಸ್ಕೃತಿ ಜಗ್ಗುವ ದಿಕ್ಕಿಗಿಂತ ವಿರುದ್ಧ ದಿಕ್ಕಿನಲ್ಲಿ ನಡೆಯುವುದು – ಅಂದರೆ ಸುಲಭವಾಗಿ ಲಯವಾಗಬಹುದಾದ ವೈಯಕ್ತಿಕತೆಯ ಖಾರವನ್ನು ಹಠದಲ್ಲಿಯಾದರೂ ಉಳಿಸಿಕೊಳ್ಳುವುದು – ಬೇರೆ ಸಂಸ್ಕೃತಿಗಳ ಲೇಖಕರಿಗಿಂತ ಹೆಚ್ಚು ಅವಶ್ಯವಾಗುತ್ತದೆ.

ನನ್ನ ಈವರೆಗಿನ ಮಾತುಗಳಿಗೆ ವಿವರಣೆಯಾಗಿ ನಾನು ಒಂದು ಪ್ರಸಂಗವನ್ನು ಇಲ್ಲಿ ನೆನೆಯಬಹುದು. ಸೆಮಿನಾರ್‌ಒಂದರಲ್ಲಿ ವರ್ಡ್ಸ್‌ವರ್ಥನ ‘ಟೆಂಟರ್ನ್ ಅಬ್ಬೆ’ ಪದ್ಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಸೆಮಿನಾರ್‌ನಡೆಸುತ್ತಿದ್ದವರು ಆಂಗ್ಲ ಪ್ರಾಧ್ಯಾಪಕರೊಬ್ಬರು. ಆ ಸಂದರ್ಭದಲ್ಲಿ ರಾಮಕೃಷ್ಣ ಪರಮಹಂಸರ ಭಾವಸಮಾಧಿಗೂ ವರ್ಡ್ಸ್‌ವರ್ಥ್ ವಿವರಿಸುವ ಪ್ರಕೃತಿ ಸೌಂದರ್ಯದಿಂದ ಪ್ರೇರಿತವಾದ ಮನಃಸ್ಥಿತಿಗೂ ಸಾಮ್ಯವಿದೆ ಎಂಬ ಒಂದು ಮಾತು ಬಂದಿತು. ವರ್ಡ್ಸ್‌ವರ್ಥನ ಸಾಲುಗಳು ನಿಮಗೆ ನೆನಪಿರಬಹುದು :

”While with an eye made quiet by the power
Of harmony, and the deep power of joy,
We see into the life of things”

ಎಂದು ಅವು ಕೊನೆಯಾಗುತ್ತವೆ. ಅದಕ್ಕೆ ಪ್ರಾಧ್ಯಾಪಕರು, ಕಪ್ಪು ಮೋಡಗಳ ಹಿನ್ನೆಲೆಯಲ್ಲಿ ಬೆಳ್ಳಕ್ಕಿಗಳ ಸೌಂದರ್ಯಕಂಡು ಪರವಶರಾಗಿ ಸಮಾಧಿ ಅವಸ್ಥೆಯನ್ನು ಪಡೆದ ಪರಮಹಂಸರಿಗೆ ಸಮಾಧಿಯ ಸ್ಥಿತಿಯಲ್ಲಿ ಹಕ್ಕಿಗಳು ಕಾಣಿಸುವುದಿಲ್ಲ, ಆದರೆ ನಿಸರ್ಗ ಸೌಂದರ್ಯದಿಂದ ಪರವಶನಾದ ವರ್ಡ್ಸ್‌ವರ್ಥ್‌‌ಗೆ ಪರವಶ ಸ್ಥಿತಿಯಲ್ಲೂ ಸೌಂದರ್ಯದ ಬೋಧೆಮಾತ್ರ ಪ್ರಾಯಶಃ ಉಳಿದೇ ಇರುತ್ತದೆ ಎಂದು ಉತ್ತರಕೊಟ್ಟರು. ಇದು ಅರ್ಥಪೂರ್ಣವಾದ ಮಾತು. ಪಾಶ್ಚಾತ್ಯ ಲೇಖಕರು ಬಹಳ ಪಾಲು ತಮ್ಮ Self – consciousness ಅನ್ನು – ಸ್ವಮನಸ್ಕತೆಯನ್ನು ಕಳೆದುಕೊಳ್ಳುವುದೇ ಇಲ್ಲ. ಪಾಶ್ಚಾತ್ಯ ಮನೋಧರ್ಮಕ್ಕೂ ಭಾರತೀಯ ಮನೋಧರ್ಮಕ್ಕೂ ನಡುವೆ ಈ ಮುಖ್ಯ ವ್ಯತ್ಯಾಸವಿದೆ. ಪರಮಹಂಸ ಸ್ಥಿತಿಗೆ ಏರಿ ಹಕ್ಕಿಗಳನ್ನು ಮರೆತರೆ ನಷ್ಟವಿಲ್ಲ; ಆದರೆ ಆ ಸ್ಥಿತಿಗೇರದೆಯೆ, ಅಭ್ಯಾಸಬಲದಿಂದ, ಅಥವಾ ನಮ್ಮ ಸಂಸ್ಕೃತಿಯಿಂದ ಬ್ರೈನ್‌ವಾಶ್ ಮಾಡಿಕೊಂಡು ನಾವೂ ಸಮಾಧಿಯಲ್ಲಿದ್ದವರಂತೆ, ಹಕ್ಕಿಗಳು ಕಾಣಿಸದವರಂತೆ ಭ್ರಮಿಸುತ್ತೇವಲ್ಲ – ಅದು ಅಪಾಯ.

ಅಂದರೆ ಬೆಲೆಯುಳ್ಳದ್ದನ್ನು ಸಂಸ್ಕೃತಿಯಿಂದ ಪಡೆಯಲು, ಅಲ್ಲದೆ ಬೆಲೆಯುಳ್ಳದ್ದನ್ನು ಸಂಸ್ಕೃತಿಗೆ ಸೇರಿಸಲು ನಮ್ಮ ಲೇಖಕರು ಯಾವತ್ತೂ ತಮ್ಮತನವನ್ನು ಕಳೆದುಕೊಳ್ಳದಂತೆ ಬರೆಯಬೇಕಾಗುತ್ತದೆ. ವೈಯಕ್ತಿಕತೆಯ ಮಿಣುಕುದೀಪದಲ್ಲಿ ಎಲ್ಲ ಪ್ರಸಿದ್ಧ ಸರ್ವಕಾಲಿಕ ಸತ್ಯಗಳನ್ನೂ ಸ್ವಂತಕ್ಕೆ ಅನ್ವಯಿಸಿ ಪರೀಕ್ಷಿಸಿ ನೋಡುವಂಥದಾಗಿರಬೇಕು ಈ ‘ತನ್ನತನ’. ಬಾಯ್ಬಡಕರು ವೇದೋಪನಿಷತ್ತುಗಳಿಂದ, ಅನುಭಾವಿಗಳ ವಚನಗಳಿಂದ ಕೇಳಿಸಿಕೊಂಡದ್ದನ್ನು ಡಂಗುರಸಾರುವ ಸಾರ್ವಜನಿಕ ವ್ಯಕ್ತಿಗಳಾದರೆ, ಸಾಹಿತಿ ಮತ್ತು ಎಲ್ಲ ಸತ್ಯಗಳನ್ನೂ ಒಳಾನುಭವದ ಗೌಪ್ಯದಲ್ಲಿ ಪಡೆದು, ಸುಖ ಸಂಕಟಗಳಲ್ಲಿ ಅವುಗಳ ರಹಸ್ಯವನ್ನು ತಿಳಿದು ತಾನು ಅವುಗಳನ್ನು ಹೊಂದಿದ್ದಾಗಿನ ಪಾಡನ್ನೆ ಹೊರಪಡಿಸಲು ಶ್ರಮಿಸುತ್ತಾನೆ. ಇದು ಸಂಸ್ಕೃತಿ ರಾಯಭಾರವಲ್ಲ; ಡಂಗುರ ಸಾರುವುದಿಲ್ಲ; ವ್ಯಂಜಿಸುವ ಕಲೆ. ಯಾವ ಧಾಟಿಯ ಸೂಕ್ಷ್ಮದ ಮೂಲಕ, ಯಾವ ರಚನಾ ತಂತ್ರ ಸಾಧ್ಯವಾಗಿಸುವ ಕೃತಿಯೊಳಕ್ಕೆ ಬರುವ ಅನುಭವ ದ್ರವ್ಯಗಳ ಪರಸ್ಪರ ಪರೀಕ್ಷೆಯ ಮೂಲಕ ತಾನು ಪಡೆದಿದ್ದ ಈ ಅನುಭವ ಸತ್ಯದ ಪೂರ್ಣ ವ್ಯಂಜನೆಯಾಗುತ್ತದೆಂಬುದು ಸಾಹಿತ್ಯಸೃಷ್ಟಿಯ ಮುಖ್ಯ ಸಮಸ್ಯೆಯೆನ್ನಬಹುದು. ಸಾಹಿತಿಯ ಪ್ರಜ್ಞೆ ತನ್ಮಯಗೊಳ್ಳುವ ಭೋಳೆತನದ್ದಾದರೆ, ಅದು ಆ ಬಗೆಯದು ಎನ್ನುವ ಅರಿವು ಅವನಿಗಿದ್ದಾಗ ಮಾತ್ರ ಅವನ ಕೃತಿಯಲ್ಲಿ ಪರೀಕ್ಷಿಸುವ ಕಣ್ಣೊಂದು ತೆರೆದುಕೊಂಡು ಈ ವ್ಯಂಜನೆ ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ನಮಗೆ ಫಲಿಸುವುದು ಡಂಗುರ ಸಾರುವ ಅಬ್ಬರ, ಉನ್ಮತ್ತ ವಾಗ್‌ಲಹರಿ, ಮೋಸದ ಗುಂಗು ಅಥವಾ ಏಕನಾದದ ಕೀರ್ತನೆ.

ವ್ಯಕ್ತಿಗತ ವಿಚಾರಗಳು, ಭಾವನೆಗಳು ಸಫಾಯಗೊಳ್ಳದಂತೆ ಹೇಗೆ ವ್ಯಕ್ತಪಡಿಸಬೇಕೆಂಬುದೇ, ಎಲ್ಲವನ್ನೂ ಒಳಗೊಂಡು ತಲೆದೂಗಿಬಿಡುವ ಈ ಸಂಸ್ಕೃತಿಯಲ್ಲಿ ನಮ್ಮನ್ನು ಕಾಡುವ ಪ್ರಶ್ನೆ. ನಮ್ಮ ರಾಜಕೀಯ ಜೀವನದಲ್ಲಿ ಸಮಾಜವಾದ ತತ್ವದ ಗತಿ ಏನಾಯಿತೆಂಬುದು ಇದಕ್ಕೆ ಉತ್ತಮ ನಿದರ್ಶನ. ಮೊರಾರಜಿಯವರೂ ಸಮಾಜವಾದಿಗಳಾಗುವುದು ಸಾಧ್ಯವಾಗುವಂತೆ ಸಮಾಜವಾದದ ತತ್ವ ಹಿಗ್ಗಿ ಹಿಗ್ಗಿ, ಭಾರತೀಯ ಸಂಸ್ಕೃತಿಯ ಉದಾತ್ತ ಧೋರಣೆಗಳ ತೀರ್ಥ ಪಾನಮಾಡಿ ಮೃದುವಾಗಿ, ಹದವಾಗಿ ಅರ್ಥಹೀನ ಮಾತಾಗಿಬಿಟ್ಟಿತ್ತು. ಈ ಕೆಸರಿನಲ್ಲಿ ಏನನ್ನು ನೆಡುವುದೂ ಕಷ್ಟ. ಚೂಪಾದ ಮೊನೆ ಆಳದಲ್ಲಿರುವ ಗಟ್ಟಿ ಪ್ರದೇಶವನ್ನು ಮುಟ್ಟಿ ಕೊರೆದು ನೆಟ್ಟು ನಿಲ್ಲಲೆಂದು ನಮ್ಮ ಪ್ರತ್ಯೇಕ ಪ್ರಜ್ಞೆಯ ಮುದ್ರೆಯನ್ನೊತ್ತಲು ಯಾವ ಅತಿಗೆ ಹೋದರೂ ಸರಿಯೆ ಎಂದು ನನಗೆ ಅನ್ನಿಸುತ್ತದೆ. ಇದು ಉತ್ಪ್ರೇಕ್ಷೆಯಿರಬಹುದಾದರೂ, ನಮ್ಮ ಪ್ರಜ್ಞೆ ನಮ್ಮ ಸಂಸ್ಕೃತಿಯಿಂದ ಸಂಪೂರ್ಣ ಪ್ರತ್ಯೇಕವಸ್ತುವಾಗಿ ಉಳಿಯಲಾರದೆಂಬುದು ನಿಜವಾದರೂ ಭಾರತೀಯ ಲೇಖಕ ತನ್ನ ಸುತ್ತಲಿನ ಪ್ರಪಂಚವನ್ನರಿಯಲು ತನ್ನ ಸ್ವಂತ ದೃಷ್ಟಿಯ ವಿಶಿಷ್ಟತೆಯನ್ನು ಎಚ್ಚರದಿಂದ ಕಾಯಬೇಕು ಎಂದಷ್ಟು ಮಾತ್ರ ಹೇಳಲೇಬೇಕು. ಯಾಕೆಂದರೆ ನಮ್ಮ ಸಂಸ್ಕೃತಿಯ ತತ್ವಗಳ ಮುಖಾಂತರವೇ ನಮ್ಮ ಪ್ರಪಂಚವನ್ನು ಅರಿಯಲು ಪ್ರಯತ್ನಿಸುವುದು ಸಧ್ಯಕ್ಕೆ ಅಸಾಧ್ಯ – ಅಪಾಯ. ಆದ್ದರಿಂದ ಸ್ಫುಟವಾದ, ಹೊಸದಾದ ಒಳನೋಟಗಳು ನಮ್ಮ ಸಾಹಿತ್ಯದಲ್ಲಿ ಬರಲು ಅಂದರೆ ಈ ನಮ್ಮ ಪರಿಸರವನ್ನು ಒಳಗಿನಿಂದ ಪಡೆದು ಅರಿಯಲು – ಸುಲಭವಾಗಿ ತನ್ಮಯವಾಗದ ದೃಷ್ಟಿಕೋನ ಬೇಕು. ಅಂದರೆ, ಪರಿಸರದ ವಾಸ್ತವತೆಯ ಸಂದರ್ಭದಲ್ಲಿ ನಮ್ಮನ್ನು ನಾವು ಅರಿತುಕೊಳ್ಳಲು, ನಮ್ಮ ವೈಯಕ್ತಿಕ ಇಂಗಿತಗಳ ಸಂದರ್ಭದಲ್ಲಿ ಪರಿಸರವನ್ನು ಅರಿಯಲು ನಮ್ಮ ವೈಯಕ್ತಿಕತೆಯನ್ನು ಕೃತಿಯ ಒಳಗೆ ತಂದು ಬಳಸಿಕೊಳ್ಳಬೇಕು. ಇಷ್ಟೊಂದು ಸಾರ್ವತ್ರಿಕ ಸಾರ್ವಕಾಲಿಕ ಸತ್ಯಗಳು ವಿಜೃಂಭಿಸುತ್ತಿರುವ ಈ ನಮ್ಮ ನಾಡಿನಲ್ಲಿ ವೈಯಕ್ತಿಕ ಪ್ರಜ್ಞೆಗಿರುವ ತಾನು ಪ್ರತ್ಯೇಕ ಎಂಬ ಅರಿವು, ಈ ಅರಿವಿನಿಂದ ಬರಬಹುದಾದ ನೋವು ಭಾರತೀಯ ಲೇಖಕನಿಗೆ ಅತ್ಯಂತ ಅವಶ್ಯವಾದ ಅರಿಯುವ ಸಾಧನ. ಈ ಅರಿವಿನ ಸಾಧನವಾದ ವ್ಯಕ್ತಿ ಪ್ರಜ್ಞೆ ಚೂಪಾಗಿ ಉಳಿಯದಿದ್ದರಂತೂ ಕಾದಂಬರಿಯಂತಹ ಪ್ರಾಕಾರದಲ್ಲಿ ಏನನ್ನು ಸಾಧಿಸುವುದೂ ಸಾಧ್ಯವಿಲ್ಲ.

ಈ ದೃಷ್ಟಿಯಿಂದ ನಮ್ಮ ಸನ್ನಿವೇಶ ಪಾಶ್ಚಾತ್ಯ ಲೇಖಕನ ಸನ್ನಿವೇಶಕ್ಕಿಂತ ಭಿನ್ನವಾದುದು. ಪಾಶ್ಚಾತ್ಯ ಸಂಸ್ಕೃತಿ ಮುಖ್ಯವಾಗಿ ವ್ಯಕ್ತಿಮೂಲವದುದು. ಆದರೆ ವ್ಯಕ್ತಿವಾದ ಅಲ್ಲಿ ಅಪಾಯಕಾರಿಯಾಗಿ ಇರಬೇಕಾಗಿ ಬಂದರೆ ಆಗ ಅವನು ಕೌಟುಂಬಿಕ ಪ್ರಜ್ಞೆಗಾಗಿ ಹಾತೊರೆಯುತ್ತಾನೆ, ತನ್ನನ್ನು ತನ್ನ ಸಂಸ್ಕೃತಿಯ ಜೊತೆ ತೊಡಗಿಸಬಲ್ಲ ಕೊಂಡಿಗಳಿಗಾಗಿ ಹುಡುಕುತ್ತಾನೆ. ಆದ್ದರಿಂದಲೇ ಎಲಿಯಟ್ಟಿಗೆ ಯೂರೋಪಿನ ಸಾಹಿತ್ಯ ಪರಂಪರೆ, ಕ್ರಿಶ್ಚಿಯನ್ ಧರ್ಮ ಮುಖ್ಯವಾಯಿತು; ಲಾರೆನ್ಸ್, ಲೀವಿಸ್‌ರಿಗೆ ‘Organic Community’ ಸೃಜನಶೀಲತೆಗೆ ಅತ್ಯವಶ್ಯವೆನ್ನಿಸಿತು. ಆದರೆ ಗುರು – ಹಿರಿಯ – ಬಂಧು – ಬಳಗದಿಂದ ಆವೃತರಾಗಿ ಉಸಿರುಕಟ್ಟುತ್ತಿರುವ ನಮಗೆ ನಮ್ಮ ಪ್ರತ್ಯೇಕತೆಯನ್ನೂ, ಪ್ರತ್ಯೇಕತೆಯ ಪ್ರಜ್ಞೆಯಿಂದ ಮಾತ್ರ ಬರುವ ತೀಕ್ಷ್ಣ ಒಳನೋಟಗಳನ್ನೂ ಕಬಳಿಸಲು ಪ್ರಯತ್ನಿಸುವ ನಮ್ಮ ಸಂಸ್ಕರತಿಯ ಹೊರಗೆ ನಿಂತು ಬದುಕುವುದು ಅವಶ್ಯವಾಗುತ್ತದೆ. ಅರಿಯುವ ಕಣ್ಣು ಮಂದವಾಗದಿರಲೆಂದು ನಾವು ಹೀಗೆ ಹೊರಗೆ ನಿಲ್ಲಬೇಕಾಗುತ್ತದಲ್ಲದೆ ಚಪಲಕ್ಕಾಗಿಯಲ್ಲ. ಇದು ಸಾಹಿತ್ಯ ಸೃಷ್ಟಿಗಂತೂ ಅವಶ್ಯ. ಹಾಗೆಯೇ ಒಳಗಿನವನಾಗಬೇಕೆಂಬುದೂ ಮನುಷ್ಯನ ಅದಮ್ಯ ಅಪೇಕ್ಷೆ. ಆದ್ದರಿಂದ ಈ ಇಬ್ಬಂದಿ ಸಂಕಟದ ಬಿಗಿತ ಸಡಿಲವಾಗದಂತೆ ಕಾದುಕೊಂಡಾಗ ಮಾತ್ರ ನಮ್ಮ ವ್ಯಕ್ತಿತ್ವ ಬೆಲೆಯುಳ್ಳದ್ದನ್ನು ನಿರ್ವಹಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

ವ್ಯಕ್ತಿವಾದ ವಿಪರೀತಕ್ಕೆ ಹೋದ ಸಂಸ್ಕೃತಿಯಿಂದ ಎಲಿಯಟ್‌ಬರೆಯುತ್ತ, ಕೃತಿಕಾರ ತನ್ನ ವ್ಯಕ್ತಿತ್ವದಿಂದ ಪಾರಾಗಿ ಸೃಷ್ಟಿಸಬೇಕು ಎಂದ; ಸಾಹಿತ್ಯ ಕೃತಿಕಾರನ ವ್ಯಕ್ತಿತ್ವದ ಅಭಿವ್ಯಕ್ತಿಯಾದರೆ ಸಾಲದು, ಸಂಪ್ರದಾಯ ಮತ್ತು ಕೃತಿಕಾರನ ಪ್ರತಿಭೆ ಸಂಗಮಿಸುವ ಕ್ಷೇತ್ರವಾಗಬೇಕು ಎಂದು ವಾದಿಸಿದ. ಆದರೆ ವ್ಯಕ್ತಿತ್ವ ಸುಲಭವಾಗಿ ಜಳ್ಳಾಗಿಬಿಡುವ ಈ ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಸಾಹಿತ್ಯ ವ್ಯಕ್ತಿತ್ವದ ಹುಡುಕಾಟವಾಗಬೇಕಾಗುತ್ತದೆ. ಇದು ಪರಿಸ್ಥಿತಿಯ ದೃಷ್ಟಿಯಿಂದ ಅನಿವಾರ್ಯ ಮಾತ್ರವಲ್ಲ; ಉತ್ತಮ ಸಾಹಿತ್ಯ ಸೃಷ್ಟಿಯ ದೃಷ್ಟಿಯಿಂದ ಅವಶ್ಯವೂ ಹೌದು.


*    ನೆಹರೂ ಕೂಡ ಇಬ್ಬಂದಿಯೆ, ಭಾವನಾತ್ಮಕವಾಗಿ ನೆಹರು ಭಾರತಕ್ಕೆ ಅಂಟಿಕೊಂಡಿದ್ದರೂ ಲೌಕಿಕವಾಗಿ ಅವರಿಗೆ ಪ್ರಿಯವಾದದ್ದು ಪಾಶ್ಚಾತ್ಯ ಸಂಸ್ಕೃತಿ.