ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ನಡುವೆ ಸಮಸ್ಯೆಯಲ್ಲಿ ಹೊಸದೇನೂ ಇಲ್ಲ. ಉದಾಹರಣೆಗೆ ಹಂಗೆರಿಯನ್ನು ತೆಗೆದುಕೊಳ್ಳಿ : ಕ್ರಿ.ಶ. ೧೮೪೮ರವರೆಗೆ ಹಂಗೆರಿಯಲ್ಲಿ ಸಾಮಾನ್ಯ ಜನರು, ರೈತರು ಬಳಸುತ್ತಿದ್ದ ಭಾಷೆ ಹಂಗೆರಿಯನ್, ಪಾರ್ಲಿಮೆಂಟಿನಲ್ಲಿ, ಶ್ರೀಮಂತರ ನಡುವೆ, ಜಮೀನ್ದಾರರ ಮನೆಗಳಲ್ಲಿ ಮಾತ್ರ ಲ್ಯಾಟಿನ್, ೧೮೪೮ರ ಕ್ರಾಂತಿಯಿಂದ ಇದು ಕೊನೆಗೊಂಡಿತು. ಪಟ್ಟಭದ್ರಹಿತದ ರಕ್ಷಣೆ ಮಾಡುತ್ತಿದ್ದ ಲ್ಯಾಟಿನ್ ಭಾಷೆಯನ್ನು ತೊರೆದು ಹಂಗೆರಿಯನ್ ಭಾಷೆಯನ್ನು ರೈತನ ನಿತ್ಯ ಜೀವನದಿಂದ ಹಿಡಿದು ಪಾರ್ಲಿಮೆಂಟಿನ ತನಕ ಉಪಯೋಗಿಸಬೇಕೆಂಬ ನಿರ್ಧಾರ ಈ ರಾಜಕೀಯ ಕ್ರಾಂತಿಯ ಮೂಲಕ ಆಯಿತು. ಪರಿಣಾಮ : ಅಂದಿನಿಂದ ಇವತ್ತಿನ ತನಕವೂ ಹಂಗೆರಿಯನ್ ಬರೆಯುವ ಸಾಹಿತಿಗಳು ರಾಜಕೀಯ ವಿಚಾರದಲ್ಲಿ ತೊಡಗಿದ್ದಾರೆ; ಹಂಗೆರಿಯನ್ ಭಾಷೆಯಲ್ಲಿ ಬರೆಯುವುದೆಂದರೇನೇ ಒಂದು ಕ್ರಾಂತಿಮುಖದಲ್ಲಿಟ್ಟ ಹೆಜ್ಜೆಯೆಂದು ಪರಿಗಣಿಸಲ್ಪಟ್ಟಿದೆ.

ಕನ್ನಡ, ತೆಲುಗು, ಮರಾಠಿ, ಬಂಗಾಲಿ, ತಮಿಳು ಇತ್ಯಾದಿ ಭಾರತೀಯ ಭಾಷೆಗಳು ಫ್ರೆಂಚ್, ಇಂಗ್ಲಿಷ್, ಇಟಾಲಿಯನ್, ಜರ್ಮನ್ ಇತ್ಯಾದಿ ಭಾಷೆಗಳಂತೆ ಪರಸ್ಪರ ಸಂಬಂಧವಿರುವ ಆದರೆ ಪ್ರತ್ಯೇಕವಾದ ರಾಷ್ಟ್ರೀಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಅಭಿವ್ಯಕ್ತಿಸುವ ಭಾಷೆಗಳು. ಯೂರೋಪಿಯನ್ ವಿವಿಧರಾಷ್ಟ್ರಗಳಲ್ಲಿ ಎಲ್ಲರಿಗೂ ಸಾಮಾನ್ಯವಾದ ಕ್ರಿಶ್ಚಿಯನ್ ಧರ್ಮವಿದೆ: ಪ್ಲೇಟೋ, ಅರಿಸ್ಟಾಟಲ್ ಇತ್ಯಾದಿ ವ್ಯಕ್ತಿಗಳು ಇಡಿ ಯುರೋಪಿನ ಸಾಂಸ್ಕೃತಿಕ ನಾಯಕರು : ಅವರು ಮೆಚ್ಚುವ ಸಂಗೀತ, ವೇಷ – ಭೂಷಣಗಳಲ್ಲಿ ಸಾಮ್ಯವಿದೆ. ಯುರೋಪಿನ ಎಲ್ಲ ಜೂಕ್‌ಬಾಕ್ಸ್‌ಗಳಲ್ಲಿ ಬೀಟಲ್ಸ್ ಬಾಲಕರು ರಿಕಾರ್ಡ್‌ಗಳಿವೆ; ಯುರೋಪಿನ ಮೂಲೆಮೂಲೆಯಲ್ಲಿರುವ ಗರಾಜುಗಳಲ್ಲಿ ‘ನಿನ್ನ ಟ್ಯಾಂಕಿನಲ್ಲೊಂದು ಟೈಗರನ್ನು ತುಂಬಿಸು’ ಎಂಬ ಅದೇ ಹುಲಿಯ ಆದರೆ ಬೇರೆ ಬೇರೆ ಭಾಷೆಯಲ್ಲಿ ಬರೆದ ಪೆಟ್ರೋಲಿನ ಜಾಹಿರಾತು ಇದೆ. ಇಷ್ಟಾದರೂ ಯುರೋಪ್ ಇನ್ನೂ ಒಂದು ರಾಷ್ಟ್ರವಲ್ಲ; ಯಾದವೀ ಕಲಹದ ರಕ್ತದ ಗುರುತು ಇನ್ನೂ ಮಾಸಿಲ್ಲ.

ಭಾರತದ ಪ್ರಾಂತಗಳೂ ಯುರೋಪಿನ ರಾಷ್ಟ್ರಗಳಂತೆ ವೈಶಿಷ್ಟ್ಯ, ಮತ್ತು ಸಾಮಾನ್ಯ ಲಕ್ಷಣಗಳನ್ನು ಒಟ್ಟಿಗೇ ಪಡೆದಿರುವ ವಿಶಿಷ್ಟ ರಾಷ್ಟ್ರೀಯ ಗುಂಪುಗಳು. ನಮ್ಮ ವೈಶಿಷ್ಟ್ಯ ಯುರೋಪಿನ ರಾಷ್ಟ್ರಗಳ ವೈಶಿಷ್ಟ್ಯದಂತೆ ಕಣ್ಣಿಗೆ ಹೊಡೆಯುವಷ್ಟು ಸ್ಪಷ್ಟವಿದ್ದರೂ ಆ ಬಗ್ಗೆ ನಾವು ಸಂಪೂರ್ಣ ಎಚ್ಚರವಾಗದಿರಲು ಮುಖ್ಯ ಕಾರಣ – ನಮ್ಮ ಆರ್ಥಿಕ ಬಡತನ. ಸದ್ಯದ ಭಾರತೀಯ ಸ್ಥಿತಿಯಲ್ಲಿ ನಾವು ಯುರೋಪಿನ ರಾಷ್ಟ್ರಗಳಂತೆ ಪ್ರತ್ಯೇಕವಾಗಿ ಬದುಕಲಾರೆವು. ನಮ್ಮ ವೈಶಿಷ್ಟ್ಯ ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ: ಅವರಿಗೆ ಕಾಣುವುದು ಒಟ್ಟಾಗಿ ನಾವು ಭಾರತೀಯರೆಂದು. ಅಷ್ಟೇ ಅಲ್ಲ: ನಾವು ಮತ್ತು ಪಾಕಿಸ್ತಾನದವರು ಇಷ್ಟು ಕಾದಾಡಿದರೂ ಇಂಗ್ಲೆಂಡಿನಲ್ಲಿ ಬಿಳಿಯರ ದೃಷ್ಟಿಗೆ ಇಬ್ಬರೂ ಕರಿಯರು. ಆದರೆ ಬ್ರಿಟನ್ನಿನಲ್ಲಿ ವೆಲ್ಸ್ ಜನ ತಮ್ಮ ಭಾಷೆ, ತಮ್ಮ ಸಂಸ್ಕೃತಿಯ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಹೆಣಗುತ್ತಾರೆ.

ನಾವು ಬಡವರಲ್ಲದಿದ್ದರೆ, ನಮ್ಮ ಅಳಿವು ಉಳಿವಿನ ಪ್ರಶ್ನೆ ಪ್ರಾಂತಗಳ ಪರಸ್ಪರತೆಯ ಮೇಲೆ ನಿಂತಿಲ್ಲದಿದ್ದರೆ ನಾವು ಕೂಡ ನಮ್ಮ ವೈಶಿಷ್ಟ್ಯದ ಬಗ್ಗೆ ಇನ್ನಷ್ಟು ಜಾಗೃತರಾಗುತ್ತಿದ್ದೆವು. ಹದಿನಾಲ್ಕು ಭಾಷೆಗಳೂ ರಾಷ್ಟ್ರಭಾಷೆಗಳು ಎನ್ನಲು ಈಗ ನಮಗೆ ಧೈರ್ಯವಿಲ್ಲ; ಅಂದರೂ ನಮ್ಮ ಮಾತಿನಲ್ಲೆ ನಮಗೆ ನಂಬಿಕೆಯಿಲ್ಲ. ನಮ್ಮ ವಿಜ್ಞಾನಿಗಳು, ಎಂಜಿನಿಯರುಗಳು, ವೈದ್ಯರು ತಾವು ಹುಟ್ಟಿದ ಭಾಷೆಯಲ್ಲೆ ಉಳಿಯುವುದು ಅಸಾಧ್ಯ: ಉದ್ಯೋಗಾರ್ಥಿಗಳಾಗಿ ಭಾರತದ ಮೂಲೆಮೂಲೆಗೂ ಇವರು ಹೋಗಬೇಕಾಗುತ್ತದೆ. ಭಾರತವನ್ನು ಕಟ್ಟುವ ಸಮಯ ಇದಾದ್ದರಿಂದ ನಮ್ಮ ಸಾಂಸ್ಕೃತಿಕ ವೈಶಿಷ್ಟ್ಯಗಳು ಅಮುಖ್ಯವೆನ್ನಿಸುವುದು ಸಹಜ : ಪ್ರತ್ಯೇಕತೆಯ ಮಾತನ್ನೆತ್ತುವುದು ದೇಶದ್ರೋಹವೆನ್ನಿಸುವುದು ಸಹಜ.

ಇನ್ನೂ ವಿಶಾಲವಾದ ದೃಷ್ಟಿಯಿಂದ ನೋಡಿದರೆ ಭಾರತವೂ ಒಂದು ಪ್ರತ್ಯೇಕವಾದ ರಾಷ್ಟ್ರವಲ್ಲ: ಭಾರತೀಯರಾದ ನಮಗೂ, ಏಷ್ಯಾ ಮತ್ತು ಆಫ್ರಿಕದ ಜನರಿಗೂ ಸಮಾನವಾದ ಹಿತಗಳಿವೆ, ಸಮಸ್ಯೆಗಳಿವೆ. ಶ್ರೀಮಂತ ಯುರೋಪ್ ಮತ್ತು ಅಮೇರಿಕದ ಹಿತವೇ ಬೇರೆ: ಏಷ್ಯಾ ಮತ್ತು ಆಫ್ರಿಕಾದ ಹಿತವೇ ಬೇರೆ.

ನಾನು ಕನ್ನಡಿಗ : ಆದರೆ ನಾನು ಪ್ರತ್ಯೇಕವಾಗಿ ನಿಲ್ಲಲಾರೆ; ಉದ್ಯೋಗಕ್ಕಾಗಿ ನಾನು ಕನ್ನಡನಾಡನ್ನು ಬಿಟ್ಟು ಹೋಗಬೇಕಾಗಬಹುದು ; ನನ್ನ ನಾಡಿನ ರಕ್ಷಣೆಗೆ, ಆರ್ಥಿಕ ಉದ್ಧಾರಕ್ಕೆ ಭಾರತ ನನಗೆ ಬೇಕು. ಇನ್ನೂ ಮುಂದೆ ಹೋಗಿ ನೋಡುತ್ತೇನೆ ; ಇಂದಿನ ಜಗತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಭಾರತೀಯನೆಂಬ ಪ್ರತ್ಯೇಕತೆಯೂ ನನಗಿಲ್ಲ. ಯುರೋಪಿನ ಸಾಮ್ರಾಜ್ಯಶಾಹಿ ತುಳಿತಕ್ಕೆ ಸಿಕ್ಕ ಆಫ್ರಿಕಾ, ಏಷ್ಯಾ ಜನರ ನಡುವೆ ನಾನೊಬ್ಬ ಸಮಾನದುಃಖಿ. ಈ ರಾಜಕೀಯ ವ್ಯವಸ್ಥೆಯಲ್ಲಿ ನಾನು, ಆಫ್ರಿಕನ್ ಮತ್ತು ಏಷ್ಯಾದ ಜನ ಒಟ್ಟಾಗಬೇಕಾದ ಅನೇಕ ಸಂದರ್ಭಗಳಿವೆ. ಯುರೋಪ್ ಮತ್ತು ಅಮೆರಿಕವೇ ಬೇರೆ. ನಾವೇ ಬೇರೆ ಎಂಬ ಭಾವನೆಯಿಂದ ಹೋರಾಡಬೇಕಾದ ಅನಿವಾರ್ಯ ಘಟನೆಗಳು ಇಲ್ಲಿ ವಿಯಟ್‌ನಾಂನಲ್ಲಿ, ಅಲ್ಲಿ ರೊಡೇಶಿಯಾದಲ್ಲಿ ಏಳುತ್ತಿವೆ.

ಯುರೋಪ್ ಮತ್ತು ಅಮೇರಿಕಾದ ವಿರುದ್ಧ ನಿಲ್ಲಬೇಕಾದ ಪ್ರಮೇಯಗಳು ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಏಳುತ್ತವಾದರೂ ನಾವು ಯುರೋಪ್ ಮತ್ತು ಅಮೇರಿಕಾದಿಂದ ಮುಖ ತಿರುಗಿಸಿ ನಿಲ್ಲಲಾರೆವು. ಇದಕ್ಕೆ ಕಾರಣ: ನಮ್ಮ ಸಾಂಸ್ಕೃತಿಕ ಕೊರತೆಯಲ್ಲ; ನಮ್ಮ ವೈಜ್ಞಾನಿಕ ಕೊರತೆ. ನಮ್ಮ ಬಡತನ ಮತ್ತು ದೈನ್ಯದಿಂದ ನಾವು ವಿಮುಕ್ತರಾಗಲು ಅತ್ಯವಶ್ಯವಾದ ಜ್ಞಾನ ನಮಗೆ ಯುರೋಪ್, ಅಮೇರಿಕಾದಿಂದಲೆ ಸದ್ಯ ದೊರೆಯಬೇಕು. ಆದ್ದರಿಂದ ನಾನು ಕನ್ನಡಿಗ ಎಂಬ ವೈಶಿಷ್ಟ್ಯವನ್ನು ತಲೆಯೆತ್ತಿ ನಾನು ಈಗ ಸಾರಲಾರದೆ ಹೋಗಿದ್ದರೆ ಅದಕ್ಕೆ ಕಾರಣ ಈ ಕೊರತೆಗಳು. ಜಗತ್ತಿನ ಎಲ್ಲ ರಾಷ್ಟ್ರಗಳವರೂ, ಅಪೂರ್ಣರು, ಆದರೆ ಎಲ್ಲರಿಗಿಂತ ನಾವು ಭಾರತೀಯರು, ಆಫ್ರಿಕನರು, ಏಷ್ಯನರು, ಹೆಚ್ಚು ಅಪೂರ್ಣರು.

ನಮ್ಮ ರಾಜಕೀಯ, ಆರ್ಥಿಕ, ವೈಜ್ಞಾನಿಕ ಸಮಸ್ಯೆಗಳೆಲ್ಲ ಬಗೆಹರಿಯುತ್ತಿದ್ದಂತೆ ಊಟ, ವಸ್ತಿ, ಉದ್ಯೋಗದ ಮಟ್ಟದಲ್ಲಿರುವ ಈ ಅಪೂರ್ಣತೆ, ಈ ಕೊರತೆ ಕಮ್ಮಿಯಾಗುತ್ತ ಹೋಗುತ್ತದೆ. ಆಗ ಫ್ರಾನ್ಸಿನವನು ನಾನು ಫ್ರೆಂಚ ಎಂದಂತೆ ನಾನೂ ಕೂಡ ನಾನು ಕನ್ನಡಿಗ ಎಂದು ಜಗತ್ತಿನ ಜೊತೆ ವ್ಯವಹರಿಸುವ ಧೈರ್ಯ ಮಾಡುತ್ತೇನೆ. ಈಗ ಸದ್ಯಕ್ಕೆ ನಾನು ಯುರೋಪ್ ಮತ್ತು ಅಮೆರಿಕಾದ ಕಣ್ಣಿದಿರು ಒಬ್ಬ ಅಪ್ರೋಏಷ್ಯನ್. ಅಪ್ರೋ ಏಷ್ಯನ್ ಜನರ ನಡುವೆ ಒಬ್ಬ ಭಾರತೀಯ ಸಂಗಾತಿ, ಭಾರತೀಯರ ನಡುವೆ – ಕೆಲವೊಮ್ಮೆ ಅಂಜಿ, ಕೆಲವೊಮ್ಮೆ ರೇಗಿ – ಕನ್ನಡಿಗ.

ಇಂಗ್ಲಿಷ್ ಇವತ್ತು ಜಗತ್ತಿನ ಅತಿ ಮುಖ್ಯ ಭಾಷೆಗಳಲ್ಲಿ ಅಗ್ರಸ್ಥಾನವನ್ನು ಪಡೆದಿದ್ದರೆ ಅದರ ಹಿಂದಿರುವ ಕಾರಣಗಳು ಆರ್ಥಿಕ, ರಾಜಕೀಯ, ವೈಜ್ಞಾನಿಕವೆನ್ನುವುದನ್ನು ನಾವು ಮರೆಯಕೂಡದು. ಯೂರೋಪಿನಲ್ಲಿ, ರಷ್ಯಾದಲ್ಲಿ ಇವತ್ತು ಬಾಲಕರು ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಕಲಿಯುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಅಮೆರಿಕನ್ನರು ಇಂಗ್ಲಿಷ್ ಭಾಷೆಯನ್ನು ಮಾತಾಡುವುದು ಎನ್ನುವುದನ್ನು ನಾವು ಮರೆಯಕೂಡದು, ಸಾಂಸ್ಕೃತಿಕ ಕಾರಣಗಳು (ಇಂಗ್ಲಿಷ್ ಶೇಕ್ಸ್‌ಪಿಯರಿನ ಭಾಷೆ – ಇತ್ಯಾದಿ) ಅಮುಖ್ಯವೆಂದು ನಾನು ಹೇಳುತ್ತಿಲ್ಲ. ಆದರೆ ಸಾಂಸ್ಕೃತಿಕ ಕಾರಣಕ್ಕಾಗಿ ಮಾತ್ರ ಇಂಗ್ಲಿಷ್ ಜಗತ್ತಿನಲ್ಲೆಲ್ಲ ಹರಡಿದೆ ಎಂದು ತಿಳಿಯುವುದು ಸತ್ಯದೂರವಾದ, ನಮ್ಮ ದೈನ್ಯಸ್ಥಿತಿಯನ್ನು ಸಾಂಸ್ಕೃತಿಕ ಕಾರಣ ಕೊಟ್ಟು ಮುಚ್ಚಿಟ್ಟುಕೊಳ್ಳುವ, ಆತ್ಮವಂಚನೆ, ಇಂಗ್ಲಿಷ್ ಭಾಷೆ ಕೂಡ ಶೇಕ್ಸ್‌ಪಿಯರನ ಕಾಲದಿಂದ ಈ ತನಕ ಶ್ರೀಮಂತ ಭಾಷೆಯಾಗಿ ಬೆಳೆಯುತ್ತ ಬಂದಿರಲು ಕಾರಣ – ಮುಖ್ಯವಾದ ಒಂದು ಕಾರಣ – ಈ ಭಾಷೆಯನ್ನಾಡುವ ಜನ ವಿಜ್ಞಾನ, ಕೈಗಾರಿಕೆ ಇತ್ಯಾದಿ ಆರ್ಥಿಕ ಕ್ಷೇತ್ರಗಳಲ್ಲಿ ಮುನ್ನುಗ್ಗಿ ನಡೆದದ್ದು, ಆರ್ಥಿಕ ರಾಜಕೀಯ ವ್ಯವಸ್ಥೆಗಳಲ್ಲಿ ಸ್ವಲ್ಪವಾದರೂ ಸ್ವಸಂಪೂರ್ಣತೆಯಿಲ್ಲದಿದಲ್ಲಿ ಯಾವ ಭಾಷೆಯೂ ಬೆಳೆದು ಇಂಗ್ಲಿಷಿನ ಹಾಗೆ ನಿಲ್ಲಲಾರದು. ಆದ್ದರಿಂದ ಬರಿಯ ಸಾಹಿತ್ಯಾಭಿಮಾನದಿಂದ, ಸಾಂಸ್ಕೃತಿಕ ವೈಶಿಷ್ಟ್ಯದ ರಚ್ಚಿನಿಂದ ನಾವು ಕನ್ನಡವನ್ನು ದೊಡ್ಡ ಭಾಷೆಯಾಗಿ ಮಾಡಲಾರೆವು.

ಎಂದಿನತನಕ ನಾವು ನಮ್ಮ ಒಟ್ಟು ಜೀವನದಲ್ಲಿ ಸ್ವಸಂಪೂರ್ಣತೆಯನ್ನು ಪಡೆಯಲಾರೆವೊ, ಅಂದಿನತನಕ ನಮ್ಮ ಭಾಷೆಗಳು ಹೀಗೆಯೇ ಸಾಹಿತಿಗಳ ಕೃತಿಗಳಲ್ಲಿ ಕುಗ್ಗುತ್ತಿರುತ್ತವೆ. ರಾಜಕೀಯ ಕ್ರಾಂತಿಯ ಮೂಲಕ ನಮ್ಮತನದ ಅರಿವು ಮೂಡಿದ ಮೇಲೆ, ವೈಜ್ಞಾನಿಕ ಆರ್ಥಿಕ ಬೆಳವಣಿಗೆಯ ಮೂಲಕ ನಮ್ಮ ಸ್ವಸಂಪೂರ್ಣತೆಯ ಹಂಬಲ ಮೈತುಂಬಿದ ಮೇಲೆ ಮಾತ್ರ ಜಗತ್ತಿನ ಜನರಲ್ಲಿ ನಾವೂ ವಿಶಿಷ್ಟ ಸದಸ್ಯರಾಗುತ್ತೇವೆ.

ಅಂದಿನತನಕ ನಾವು ನಮ್ಮ ಕೊರತೆಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು, ಬರಿಯ ಸಾಂಸ್ಕೃತಿಕ ಕಾರಣಕ್ಕಾಗಿ ಮಾತ್ರ ಇಂಗ್ಲಿಷ್ ದೊಡ್ಡಭಾಷೆಯಾಯಿತೆನ್ನುವ ನಮ್ಮ ಪರಾವಲಂಬಿ ಬುದ್ಧಿಜೀವಿಗಳ ಮೋಸವನ್ನು ನಂಬದೆ, ಜೊತೆಗೆ ಕುರುಡು ಕನ್ನಡಾಭಿಮಾನದ ಸಂಕುಚಿತ ದೃಷ್ಟಿಯಲ್ಲಿ ನೆಮ್ಮದಿಪಟ್ಟುಕೊಳ್ಳದೆ ಕೆಲಸ ಮಾಡಬೇಕು. ನಮ್ಮ ಅನುಭವದ ಸತ್ಯಕ್ಕೆ ನಾವು ಗಂಟುಬಿದ್ದವರು; ನಮ್ಮ ಭಾಷೆ ಬೆಳೆದು ನಿಲ್ಲಬೇಕೆಂಬ ಹಂಬಲದ ಕನಸಿಗೆ ನಾವು ಕಟ್ಟುಬಿದ್ದವರು; ಪರಭಾಷೆಯ ಮೂಲಕ ಅಲ್ಲೊಬ್ಬ ಇಲ್ಲೊಬ್ಬ ಬುದ್ಧಿಜೀವಿ ವಿಶ್ವರಂಗಕ್ಕೆ ಜಿಗಿದುಬಿಟ್ಟರೆ ಸಾಲದೆಂಬ ಕಾರಣದಿಂದಾಗಿ ನಮ್ಮ ಜನಸಾಮಾನ್ಯರ ಒಟ್ಟು ಆಶಯದ ಅಭಿವ್ಯಕ್ತಿಯ ಕೇಂದ್ರ ನಮ್ಮ ಬುದ್ಧಿಯ ಬದುಕಾಗಬೇಕೆಂಬ ವಿಚಾರವನ್ನು ನಾವು ನಂಬಿದವರು. ಈ ನನ್ನ ಜನರ ನಡೆ, ನುಡಿ, ವಿಚಾರ ಬೇರೆ ಯಾವ ಭಾಷೆಯ ಮೂಲಕವೂ ಈ ಬಗೆಯಲ್ಲಿ ವ್ಯಕ್ತವಾಗಲಾರದೆಂಬ ಕಾರಣದಿಂದ ನಾವು ನಮ್ಮ ಭಾಷೆಗೆ ಆತುಕೊಂಡವರು. ನಾವು ಇಂಗ್ಲಿಷಿನಲ್ಲಿ ಓದುವ ಸಾಹಿತ್ಯ, ಕಲಿಯುವ ವಿಚಾರ, ಪಡೆಯುವ ಸೂಕ್ಷ್ಮತೆ – ಪ್ರತಿಯೊಂದೂ ನಮ್ಮನ್ನು ನಮ್ಮ ಜನರಿಂದ ದೂರಮಾಡುತ್ತದೆ; ನಮ್ಮ ದೃಷ್ಟಿಗೆಡುವಂತೆ ಮಾಡುತ್ತಿದೆ. ಇಲ್ಲಿ ನಮ್ಮ ಜನ ಕ್ಷಾಮದಲ್ಲಿ ಸಾಯುತ್ತಿರುವಾಗ, ನಮ್ಮ ರಾಜಕೀಯ ವ್ಯವಸ್ಥೆ ಮುಗ್ಗರಿಸುತ್ತಿರುವಾಗ, ನಮ್ಮ ಪುರಾತನ ಸಾಂಸ್ಕೃತಿಕ ನಿಧಿ ಸದ್ಯದ ಬಡತನದಲ್ಲಿ ಮುಗ್ಗಲು ಹತ್ತುತ್ತಿರುವಾಗ – ಇಂಗ್ಲಿಷಿನಲ್ಲೊಂದು ವಿಮರ್ಶೆಯನ್ನು ಬರೆದ ನಾವು ಅರ‍್ನಾಲ್ಡ್ ಲೀವಿಸರ ಜೊತೆ ಆ ಮಟ್ಟದಲ್ಲೆ ವ್ಯವಹರಿಸುತ್ತಿದ್ದೇವೆಂಬ ಭ್ರಮೆಯನ್ನು ತರಿಸುತ್ತದೆ. ಡಿಕನ್ಸ್ ಲಂಡನ್ನಿನ ಬಹುಮುಖ ಬದುಕಿನಲ್ಲಿ ಮಗ್ನನಾದಂತೆ, ಜಾರ್ಜ್ ಎಲಿಯಟ್ ತನ್ನ ಸಮಾಜದ ಗೊತ್ತುಗುರಿಗಳಲ್ಲಿ ಒಳಗಾದಂತೆ, ಲೀವಿಸ್ ತನ್ನ ಭಾಷೆಯ ಮತ್ತು ಸಾಹಿತ್ಯದ ಪರಿಸ್ಥಿತಿಯ ಬಗ್ಗೆ ರಚ್ಚಿನಿಂದ ಹೋರಾಡಿದಂತೆ ನಾವು ನಮ್ಮ ಸಮಾಜ, ನಮ್ಮ ಭಾಷೆಯಲ್ಲಿ ಇನ್ನೂ ಆಸಕ್ತರಾಗಿಲ್ಲ.

* * *

ಯಾವುದಾದರೂ ಒಂದು ಭಾಷೆಯ ಬಗ್ಗೆ ಹೋರಾಡುವಾಗ ಎರಡು ದೃಷ್ಟಿಗಳು ಇರುವುದು ಸಾಧ್ಯ. ವೇಲ್ಸ್‌ನಲ್ಲಿ ಬದುಕುತ್ತಿರುವ ವೆಲ್ಸ್ ಜನಾಂಗ, ತಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಬರೀ ಅಭಿಮಾನದ ದೃಷ್ಟಿಯಿಂದ ಹೋರಾಡುತ್ತಾರೆ. ಪ್ರತಿಯೊಬ್ಬ ವೆಲ್ಸ್ ಪ್ರಜೆಗೂ ಇಂಗ್ಲಿಷ್ ಬರುವುದರಿಂದ ಆತನಿಗೆ ವೆಲ್ಸ್ ಭಾಷೆ ಬಿಟ್ಟರೆ ಬೇರೆ ಗತಿಯಿಲ್ಲವೆಂಬ ಪರಿಸ್ಥಿತಿ ತಲೆದೋರುವುದಿಲ್ಲ. ಆದರೆ ಇಂಗ್ಲಿಷ್ ಭಾಷೆಯ ಮೂಲಕ ಚಿತ್ರನಟನಾಗಿ ಪ್ರಖ್ಯಾತನಾಗಿರುವ ರಿಚರ್ಡ್ ಬರ್ಟನ್ ಕೂಡ ತನ್ನ ತಾಯ್ನುಡಿಯಾದ ವೆಲ್ಸ್ ಭಾಷೆಯನ್ನು ಉಳಿಸಿಕೊಳ್ಳಲು ತನ್ನ ಪ್ರಾಣವನ್ನು ಕೊಡಲು ಸಿದ್ಧ ಎಂದು ಒಮ್ಮೆ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಭಿಮಾನದ ದೃಷ್ಟಿಯಿಂದಲೇ ಒಂದು ಭಾಷೆಯನ್ನು ಉಳಿಸಿಕೊಳ್ಳಲು ಹೀಗೆ ಹೋರಾಡುವುದರ ಅವಶ್ಯಕತೆ ಮುಖ್ಯವಾಗಿ ಸಾಂಸ್ಕೃತಿವಾದದ್ದು. ಯಾಕೆಂದರೆ ಯಾವುದಾದರೂ ಒಂದು ಭಾಷೆ ನಶಿಸಿಹೋದರೆ ಅದರ ಜೊತೆಗೆ ಒಂದು ಸಂಸ್ಕೃತಿಯೂ ಅಳಿದುಹೋಗುತ್ತದೆ. ಪ್ರತಿಯೊಂದು ಭಾಷೆಯೂ ಆಯಾಯ ಜನಾಂಗದ ಚರಿತ್ರೆಯಲ್ಲಿ ರೂಪಗೊಂಡ ಮಾನವ್ಯದ ಸ್ಮೃತಿಯನ್ನು, ಕನಸನ್ನು, ಜೀವನಕ್ರಮವನ್ನು ಒಳಗೊಂಡಿರುತ್ತದೆ. ಈ ಜೀವನಕ್ರಮ, ಸ್ಮೃತಿ ಮತ್ತು ಕನಸು ಇನ್ನೊಂದು ಜನಾಂಗದ ಭಾಷೆ ವ್ಯಕ್ತಪಡಿಸಬಹುದಾದ ಸ್ಮೃತಿ ಮತ್ತು ಕನಸಿನಿಂದ ಮೇಲಿರಲಿ, ಕೀಳಿರಲಿ, ಪ್ರತಿಯೊಂದು ಜನಾಂಗಕ್ಕೂ ಭೂತಕಾಲದಿಂದ ಬೆಳದು ಬಂದು ವರ್ತಮಾನ, ಭವಿಷ್ಯಗಳಲ್ಲಿ ತನ್ನ ಜೀವನವನ್ನು ರೂಪಿಸುವ ಮತ್ತು ತಮ್ಮ ಮಾನವೀಯತೆಯ ಸ್ಮೃತಿಪರಂಪರೆಗೆ ಪ್ರಾತಿನಿಧಿಕವಾಗುವ ಭಾಷೆಯನ್ನು ಕಳೆದುಕೊಳ್ಳಲು ಇಷ್ಟವಿರುವುದಿಲ್ಲ. ಅಲ್ಲದೆ ಯಾವ ಬೆಳವಣಿಗೆಯಾಗಲಿ ಅದು ಜೀವನದಂತೆ ಅವಯವ ತುಂಬಿದ ಸಾಮರಸ್ಯದಲ್ಲಿ ರೂಪಿತವಾಗಬೇಕಾದ್ದಾದ್ದರಿಂದ, ಭಾಷೆಯ ಹಿರಿಮೆಯಾಗಲಿ, ಕಿರಿಮೆಯಾಗಲಿ ಭಾಷೆಯನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದಲ್ಲಿ ಮುಖ್ಯವಾದದ್ದಲ್ಲ.

ಕೆಲವು ವೇಳೆ ಅಭಿಮಾನದ ದೃಷ್ಟಿಯಲ್ಲದೆ, ಅಗತ್ಯದ ದೃಷ್ಟಿಯೂ ಇರುತ್ತದೆ – ಭಾಷೆಯನ್ನು ಉಳಿಸಿಕೊಳ್ಳಲು ಹೋರಾಡುವಾಗ, ನಮ್ಮ ಜನಜೀವನದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡದ ಬಳಕೆಯಾಗಬೇಕು ಎಂದು ನಾವು ಹೋರಾಡುವಾಗ ನಮ್ಮ ಪ್ರಜಾತಂತ್ರ ವ್ಯವಸ್ಥೆ ಸಫಲವಾಗಲು ಮತ್ತು ನಮ್ಮ ಜನ ಹೆಚ್ಚು ಹೆಚ್ಚಾಗಿ ಜ್ಞಾನಸಂಚಯ ಮತ್ತು ಸೃಷ್ಟಿಯಲ್ಲಿ ಭಾಗಿಯಾಗಲು ಕನ್ನಡ ನಮಗೆ ಅವಶ್ಯ ಎನ್ನುವ ಭಾವನೆ ಅಡಗಿರುತ್ತದೆ. ಒಂದು ವೇಳೆ ಎಲ್ಲ ಕನ್ನಡಿಗರಿಗೂ ಈಗಾಗಲೇ ಇಂಗ್ಲಿಷ್ ಬರುತ್ತಿದ್ದರೆ, ಅಥವಾ ಇನ್ನೊಂದು ಐವತ್ತು ವರ್ಷಗಳೊಳಗಾಗಿ ಎಲ್ಲರ ನಡುವೆಯೂ ಇಂಗ್ಲಿಷ್ ಹರಡುವುದು ಸಾಧ್ಯವಿದ್ದಿದ್ದರೆ ಕನ್ನಡದ ಬಗೆಗಿನ ಹೋರಾಟ ಸಾಂಸ್ಕೃತಿಕ ಅಭಿಮಾನದ ದೃಷ್ಟಿಯಿಂದ ಅವಶ್ಯವಾದ, ಆದರೆ ವ್ಯಾವಹಾರಿಕ ದೃಷ್ಟಿಯಿಂದ ಅಗತ್ಯವಲ್ಲದ ಹೋರಾಟವಾಗುತ್ತಿತ್ತು. ಈಗಾಗಲೇ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಗೆ ಬರುತ್ತಿರುವವರ ಸಂಖ್ಯೆ ಮತ್ತು ವರ್ಗಗಳಲ್ಲಿ ಬದಲಾವಣೆಯಾಗಿದ್ದರಿಂದ ಇಂಗ್ಲಿಷ್ ಭಾಷೆ ಅಭಿವ್ಯಕ್ತಿಯ ಮಾಧ್ಯಮವಾಗುವ ಸಾಧ್ಯತೆ ಮುರಿದುಬೀಳುತ್ತದೆ. ನಾವು ಇಂಗ್ಲಿಷ್ ಆಗಲಿ, ಕನ್ನಡವಾಗಲಿ ಚೆನ್ನಾಗಿ ಬಾರದಂತಹ ಬಾಷಾದರಿದ್ರರಾಗುತ್ತಿದ್ದೇವೆ. ಎಷ್ಟು ಕಲಿತರೂ ಪರಿಪೂರ್ಣತೆಯನ್ನು ಮುಟ್ಟಲಾರದ ಇಂಗ್ಲಿಷ್‌ಗೆ ಜೋತುಬಿದ್ದು ನಮ್ಮ ವಿದ್ಯಾವಂತರು ತಮ್ಮ ತಮ್ಮ ವಿಷಯಗಳಲ್ಲಿ ಗಾಢವಾದ ಜ್ಞಾನವನ್ನು ಪಡೆದುಕೊಳ್ಳಲು ಸಾಕಷ್ಟು ಗಮನವನ್ನು ಕೊಡಲಾರದವರಾಗಿದ್ದಾರೆ. ಇಂಗ್ಲಿಷ್ ತಿಳಿಯದ ಹೆಂಡತಿ, ನೆಂಟರು, ಇಷ್ಟರು ಇರುವ ಪ್ರತಿಯೊಬ್ಬ ವಿದ್ಯಾವಂತನೂ ಬುದ್ಧಿಯ ಕೆಲಸಕ್ಕೆ ಇಂಗ್ಲಿಷನ್ನೂ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಿಕ್ಕೆ ಕನ್ನಡವನ್ನೂ ಉಪಯೋಗಿಸುವುದರಿಂದ, ಭಾಷೆಗಳ ಸಂಪರ್ಕವಿಲ್ಲದ ಬುದ್ಧಿಯ ಭಾಷೆ ಕೃತಕವಾಗಿ, ಬುದ್ಧಿಯ ಸಂಪರ್ಕವಿಲ್ಲದ ಭಾವನೆಯ ಭಾಷೆ ಚಿಲ್ಲರೆಯಾಗಿ ಎರಡು ಭಾಷೆಗಳ ದ್ವಂದ್ವ ಲೋಕದಲ್ಲಿ ಬದುಕುತ್ತಿದ್ದಾನೆ.

ಕನ್ನಡ ಅಗತ್ಯ ಎಂಬುದು ನಮಗೆ ಮನವರಿಕೆಯಾಗುವುದು : ಒಂದು, ನಾವು ಪ್ರಜಾ ತಂತ್ರವನ್ನು ಸಂಪೂರ್ಣ ಒಪ್ಪಿ ಅದರ ಸಫಲತೆಯನ್ನು ಜೀವನದಲ್ಲಿ ಕಾಣಲು ಬಯಸಿದಾಗ; ಅಥವಾ ನಮ್ಮ ಆರ್ಥಿಕ ಪ್ರಗತಿಯ ತೀವ್ರ ಮುನ್ನಡೆಗಾಗಿ ನಮ್ಮ ವಿದ್ಯಾರ್ಥಿಗಳಿಗೆ ಆದಷ್ಟು ಬೇಗೆ ಆಳವಾಗಿ ಜ್ಞಾನವನ್ನು ಹಂಚುವುದು ಸ್ವಭಾಷೆಯ ಮೂಲಕ ಮಾತ್ರ ಸಾಧ್ಯ ಎಂಬುದನ್ನು ಅರಿತಾಗ. ಹೆಚ್ಚು ಹೆಚ್ಚು ಜನರು ವ್ಯಾಪಕವಾದ ಆರ್ಥಿಕ ಬದಲಾವಣೆಯಲ್ಲಿ ಪಾಲುಗೊಳ್ಳಲು ಸಾಧ್ಯವಾಗಬೇಕೆಂದು ನಮಗೆ ಜರೂರಿದ್ದರೆ ಆಗ ಅತ್ಯಂತ ಕಷ್ಟಸಾಧ್ಯವಾದ ಇಂಗ್ಲಿಷ್‌ನ ಮೂಲಕವೇ ಜ್ಞಾನಾರ್ಜನೆಯಾಗಬೇಕೆಂಬ ಹಟವನ್ನು ಬಿಟ್ಟು ನಾವು ಈ ಕೂಡಲೆ ಕನ್ನಡದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸುತ್ತಿದ್ದೆವು. ಲಿಪಿ ಸಹ ಇಲ್ಲದ ಅನೇಕ ರಷ್ಯನ್ ಭಾಷೆಗಳು ಶಿಕ್ಷಣ ಮಾಧ್ಯಮವಾಗಲು ಕಾರಣ ರಷ್ಯದಲ್ಲಿ ನಡೆದ ಆರ್ಥಿಕ ಕ್ರಾಂತಿಯ ಒತ್ತಾಯ. ಭಾರತದಲ್ಲಾದರೋ ಪ್ರತಿಯೊಂದು ಭಾಷಾಪ್ರಾಂತವೂ ಸಾಕಷ್ಟು ವೇಗವಾಗಿ ಬದಲಾಗುತ್ತಿಲ್ಲವಾದ್ದರಿಂದ, ಇರುವ ವಿದ್ಯಾವಂತರಲ್ಲೂ ಕೆಲವರು ಬೇರೆ ಬೇರೆ ನಾಡುಗಳಿಗೆ ಉದ್ಯೋಗಾಪೇಕ್ಷಿಗಳಾಗಿ ಹೋಗಬೇಕಾದ್ದರಿಂದ ಕನ್ನಡದ ಮೂಲಕ ಕಲಿತವರಲ್ಲಿ ಕೆಲವರು ಎಲ್ಲಿ ನಿರುದ್ಯೋಗಿಗಳಾಗಿಬಿಡುತ್ತಾರೋ ಎಂಬ ಭಯ ಬಹಳ ಜನರನ್ನು ಬಾಧಿಸುವುದು ಸಹಜ. ಆದ್ದರಿಂದಲೇ ಸ್ವಭಾಷೆಗಳನ್ನು ಈಗಿನಿಂದಲೇ ಬಳಸಲು ಮೊದಲುಮಾಡಬೇಕೆಂದು ಹೇಳುವವನು ಹೆಚ್ಚು ಜನ ವಿದ್ಯಾವಂತರಿಗೆ ಉದ್ಯೋಗಗಳನ್ನು ಕಲ್ಪಿಸಬಲ್ಲಂತಹ ವೈಜ್ಞಾನಿಕ ಕೈಗಾರಿಕಾ ಕ್ರಾಂತಿಯನ್ನು ತನ್ನ ನಾಡಿನಲ್ಲಿ ಅಪೇಕ್ಷಿಸಬೇಕಾಗುತ್ತದೆ.

* * *

ಮೈಸೂರಿನ ಸಾರ್ವಜನಿಕ ಸಭೆಯೊಂದರಲ್ಲಿ ನಾನು ಆಡಿದ ಒಂದು ಮಾತು ‘ಪ್ರಜಾವಾಣಿ’ ಮತ್ತು ‘ಕನ್ನಡಪ್ರಭ’ ಪತ್ರಿಕೆಗಳ ವಾಚಕರ ವಾಣಿಯಲ್ಲಿ ಟೀಕೆಗೆ ಒಳಗಾದವು. ಪತ್ರಿಕೆಗಳಲ್ಲಿ ವರದಿಯಾಗಿದ್ದ ನನ್ನ ಮಾತು ಇದು: “ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ವಚನಗಳನ್ನು ಬರೆದಾಗ ಇಂಗ್ಲಿಷ್ ಕಾಡುಭಾಷೆಯಾಗಿತ್ತು” ಎಂದು. ಇದು ಇಂಗ್ಲಿಷನ್ನು ಜರೆಯಲಾಗಲಿ, ಕನ್ನಡವನ್ನು ಎತ್ತಿಹಿಡಿಯಲಾಗಲಿ ಆಡಿದ ಮಾತಾಗಿರಲಿಲ್ಲ. ನಮ್ಮ ವಿಚಾರವಂತರಿಗೆ ಸ್ವಲ್ಪವೂ ಐತಿಹಾಸಿಕ ಪ್ರಜ್ಞೆ ಇಲ್ಲವಾದ್ದರಿಂದ ನಾನು ಪ್ರಾಚೀನ್ಯದ ಮೋಹದಿಂದ ಈ ಮಾತನ್ನು ಹೇಳಿದೆ ಎಂದು ನಿರ್ಣಯಕ್ಕೆ ಬರುವುದು ಸುಲಭವಾಯಿತು. ಹಿಂದಿನ ಟಿಪ್ಪಣಿಗಳಲ್ಲಿ ಕನ್ನಡಿಗ ವಿಶ್ವ ಪ್ರಜೆಯಾಗಿ ಎಲ್ಲಿ ನಿಲ್ಲುತ್ತಾನೆ ಮತ್ತು ಅಭಿಮಾನದ ದೃಷ್ಟಿಗಿಂತ ಹೆಚ್ಚಾಗಿ ಅಗತ್ಯದ ವಿವರಣೆಗಳನ್ನು ನಾನು ಇನ್ನು ಮುಂದೆ ಹೇಳುವ ಮಾತುಗಳು ಇನ್ನಷ್ಟು ಸ್ಪಷ್ಟಪಡಿಸುತ್ತವೆಂದು ಭಾವಿಸಿದ್ದೇನೆ.

೧೨ನೇ ಶತಮಾನದಲ್ಲಿ ಕಾಡುಭಾಷೆಯಾಗಿದ್ದ – ಅಂದರೆ ಬೆಳೆಯದೆ ಮುಗ್ಧಸ್ಥಿತಿಯಲ್ಲಿದ್ದ – ಇಂಗ್ಲಿಷ್ ಇವತ್ತು ಇಷ್ಟು ಶ್ರೀಮಂತವಾಗಿರಲು ಕಾರಣ ಬ್ರಿಟಿಷರು ಇತಿಹಾಸದಲ್ಲಿ ಬೆಳೆಯುತ್ತ ಬಂದವರು; ಬಳಸುವುದರ ಮುಖಾಂತರ ತಮ್ಮ ಭಾಷೆಯನ್ನು ನಿಷ್ಪಷ್ಟವೂ ಸಮೃದ್ಧವೂ ಆಗುವಂತೆ ಮಾಡಿದವರು ಎಂಬುದು. ಹೀಗಲ್ಲದೆ ಬ್ರಿಟಿಷರು ತಮ್ಮ ಭಾಷೆಗಿಂತ ಹೆಚ್ಚು ಖಚಿತವಾಗಿದ್ದ, ಯುರೋಪಿನ ಅಂದಿನ ಬುದ್ಧಿಜೀವಿಗಳ ಸಂಪರ್ಕ ಭಾಷೆಯಾಗಿದ್ದ ಲ್ಯಾಟಿನನ್ನೆ ಅಭಿವ್ಯಕ್ತಿ ಮಾಧ್ಯಮವಾಗಿ ಉಪಯೋಗಿಸುತ್ತ ಮುಂದುವರಿದಿದ್ದರೆ ಈಗ ಇಂಗ್ಲಿಷ್ ನಶಿಸಿಹೋಗಿರುತ್ತಿತ್ತು; ಅಥವಾ ತುಳುವಿನಂತಹ ಒಂದು ಭಾಷೆಯಾಗಿ ಉಳಿದಿರುತ್ತಿತ್ತು. ವಸ್ತುಸ್ಥಿತಿಯ ಆಧಾರದ ಮೇಲೆ ಹೂಡುವ ವಾದಕ್ಕೆ ಇಂಗ್ಲಿಷ್ ಅಸಮರ್ಥ, ಅಪಕ್ವಭಾಷೆಯೆಂದು ೧೨ನೇ ಶತಮಾನದಲ್ಲಿ ಕಂಡಿರಬಹುದಾದ ರೀತಿಯಲ್ಲೆ, ನಮ್ಮಲ್ಲಿ ಕೆಲವರಿಗೆ ಈಗ ಕನ್ನಡ ಕಾಣುತ್ತಿರಬಹುದು. ಆದರೆ ಇದು ಕನ್ನಡದ ಬಗ್ಗೆ ಸಂಪೂರ್ಣ ನಿಜವಲ್ಲದಿದ್ದರೂ ಪ್ರತಿಕೂಲ ವಾತಾವರಣದಲ್ಲೂ ಕನ್ನಡ ಬೆಳೆದುಬಂದು ಇನ್ನೂ ವ್ಯಾಪಕವಾದ ಬಳಕೆಯ ಮೂಲಕ ಇನ್ನಷ್ಟು ಬೆಳೆಯಬಲ್ಲ ಸಾಧ್ಯತೆಯನ್ನು ಈಗಾಗಲೇ ತೋರಿಸಿದ್ದರೂ ವಾದಕ್ಕಾಗಿ ಕನ್ನಡದಲ್ಲಿ ಏನೂ ಇಲ್ಲ ಎನ್ನುವವರ ಮಾತನ್ನು ಒಪ್ಪೋಣ. ಹೀಗೆ ಒಪ್ಪಿದಾಗಲೂ, ಈ ವಸ್ತು ಸ್ಥಿತಿವಾದಿಗಳು ಐತಿಹಾಸಿಕ ಪ್ರಜ್ಞೆಯಿಲ್ಲದವರು. ನಾಲ್ಕೈದು ಶತಮಾನಗಳ ಭಾರತದ ಜಡತ್ವದಿಂದಾಗಿ ಕಾಲದ ಪರಿವರ್ತನಾ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳಲಾರದ ನಿಶ್ಚೇಷ್ಟಿತ ಬುದ್ಧಿಯುಳ್ಳವರು ಎಂದು ಹೇಳಬೇಕಾಗುತ್ತದೆ. ನಮ್ಮ ಕಾಲದಲ್ಲಿ ಕನ್ನಡ ಅಪಕ್ವಸ್ಥಿತಿಯಲ್ಲಿದೆ. ಆದ್ದರಿಂದ ಈ ಬಗ್ಗೆ ನಾವು ವಿದ್ಯಾಭ್ಯಾಸ ಇತ್ಯಾದಿ ವಿಷಯಗಳಲ್ಲಿ ಕೂಡಲೆ ಯಾವ ತೀರ್ಮಾನಕ್ಕೆ ಬರದೆ ಪರಿಹಾರವನ್ನು ಭವಿಷ್ಯಕ್ಕೆ ಬಿಡೋಣ ಎಂದು ವಾದ ಹೂಡುವವರಂತೂ ಬಳಕೆಯ ಮುಖಾಂತರವೇ ಭಾಷೆ ಬೆಳೆಯುತ್ತ ಹೋಗಬೇಕು, ಯೋಜಿಸುವುದರ ಮೂಲಕವಲ್ಲ ಎನ್ನುವ ಭಾಷಾಶಾಸ್ತ್ರದ ಪ್ರಥಮ ಪಾಠವನ್ನು ಮರೆಯುತ್ತಾರೆ. ಹೀಗೆ ಆಲೋಚಿಸುವ ಜನರು ೧೨ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಹೋಲಿಸುವುದರ ಮೂಲಕ, ತದನಂತರ ಈ ಭಾಷೆಗಳ ಚರಿತ್ರೆಯನ್ನು ಅಭ್ಯಸಿಸುವುದರ ಮೂಲಕ ಸದಾ ಪರಿವರ್ತನಶೀಲವಾದ ಇತಿಹಾಸದ ಪಾಠವನ್ನು ಕಲಿತುಕೊಳ್ಳಬಹುದು. ಜೀವನದಲ್ಲಿ ಬದಲಾವಣೆಯ ಸಾಧ್ಯತೆ ಮತ್ತು ಅವಶ್ಯಕತೆಗಳನ್ನು ಮನಗಂಡವನು, ಹಾಗೂ ಎಲ್ಲ ಐತಿಹಾಸಿಕ ಬದಲಾವಣೆಗಳಲ್ಲೂ ಸಾಧಕ – ಬಾಧಕ ಅಂಶಗಳು ಅಂತರ್ಗತವಾಗಿವೆ ಎಂಬುದನ್ನು ಅರಿತವನು ವಸ್ತುಸ್ಥಿತಿವಾದಿಯಾಗುವುದಿಲ್ಲ; ಅಂತೆಯೇ ಎಲ್ಲವೂ ಈಗಾಗಲೇ ಕನ್ನಡದಲ್ಲಿ ಸಾಧಿಸಿಬಿಟ್ಟಿದೆ ಎನ್ನುವ ಭ್ರಮೆಯಿಂದ ಆವೇಶಿತನಾದ ಕನ್ನಡ ಮಂತ್ರಮುಗ್ಧ ಆದರ್ಶವಾದಿಯೂ ಆಗುವುದಿಲ್ಲ. ಈ ಎರಡು ವೈಪರೀತ್ಯಗಳಿಗೂ ಹೊರಗಿನವನಾದ ವಾಸ್ತವವಾದಿಗೆ ವಸ್ತುಸ್ಥಿತಿಯ ಜಟಿಲತೆಯ ಅರಿವು ಇರಬೇಕು; ಇನ್ನೂ ಮುಖ್ಯವಾಗಿ ಈ ಅವಶ್ಯ ಪರಿವರ್ತನೆಯ ಸಾಧ್ಯತೆಗಳಲ್ಲಿ ಸಾಧಕವಾದದ್ದು ಯಾವುದು, ಬಾಧಕವಾದದ್ದು ಏನು ಎನ್ನುವ ಜ್ಞಾನದಿಂದ ಬಂದ ವಿಮರ್ಶಾತ್ಮಕ ದೃಷ್ಟಿ ಇರಬೇಕು. ಅಂದರೆ ಕನ್ನಡ ಇಲ್ಲಿ ಬೇರುಬಿಡುವಂತೆ ಪ್ರಯತ್ನಿಸಬೇಕು; ಇದಕ್ಕೆ ತಡೆಯಾಗಿ ಬರುವ ಇಂಗ್ಲಿಷನ್ನು ಅಟ್ಟಬೇಕು; ಆದರೆ ಜೊತೆಯಲ್ಲಿ ಈ ಬದಲಾವಣೆಗಳ ಮೂಲಕ ಕನ್ನಡ ಕೂಪಮಂಡೂಕವಾಗುವ ಸಾಧ್ಯತೆಯಿದೆ ಎಂಬುದನ್ನು ಅರಿತು ಅದರ ವಿರುದ್ಧ ಹೋರಾಡಬೇಕು. ಅಂದರೆ ಕನ್ನಡ ಬೆಳೆಯಗೊಡದಂತೆ ಅಡ್ಡ ನಿಲ್ಲುವ ಇಂಗ್ಲಿಷಿನ ಸಾರ್ವಜನಿಕ ಬಳಕೆಯ ವಿರುದ್ಧ, ಜೊತೆಗೇ ಕೆಟ್ಟದಾಗಿ ಬೆಳೆಯಬಹುದಾದ ಸಂಕುಚಿತ ಪ್ರಜ್ಞೆಯ ಕನ್ನಡದ ವಿರುದ್ಧ ಒಟ್ಟಿಗೇ ಹೋರಾಡಬೇಕು. ಇದೇ ವಿಮರ್ಶಕನು ಹೊರಬೇಕಾದ ಮುಖ್ಯ ಜವಾಬ್ದಾರಿ.

ಹಿಂದೆ ಬುದ್ಧಿಯ ಮಾಧ್ಯಮವಾಗಿ ಸಂಸ್ಕೃತ, ಈಗ ವಿದ್ಯಾವಂತರ ಅಭಿವ್ಯಕ್ತಿಗಾಗಿ ಇಂಗ್ಲಿಷ್ ಇರುವುದರಿಂದ ಕನ್ನಡದ ಯೋಗ್ಯತೆಯ ನಿರ್ಧಾರಕ್ಕೆ ತಕ್ಕ ಸವಾಲು ಪ್ರಜ್ಞೆಯ ಅತ್ಯಂತ ಉನ್ನತ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಸಿಕ್ಕಿಲ್ಲ. ಈ ಮಾತಿಗೆ ವಿನಾಯಿತಿ ಎಂದರೆ ೧೨ನೇಯ ಶತಮಾನ. ವಚನಕಾರರು ಬರಿ ಬುದ್ಧಿಜೀವಿಗಳಲ್ಲದೆ ಸಮಾಜ ಕ್ರಾಂತಿಯನ್ನೂ ಬಯಸಿದವರಾದ್ದರಿಂದ. ಬುದ್ಧಿ ಹಾಗೂ ಭಾವನೆಗಳ ಒಟ್ಟು ಮಾಧ್ಯಮವಾಲೇಬೇಕಾದ ಒತ್ತಾಯ ಈ ಶತಮಾನದಲ್ಲಿ ಕನ್ನಡಕ್ಕೆ ಪ್ರಾಪ್ತವಾಯಿತು. ಒಂದೋ ಶೋಷಣೆಗೆ ಒಳಗಾದ ಜನ ತಮ್ಮ ಹಕ್ಕುಗಳಿಗಾಗಿ ಹೋರಾಡಲು ತೊಡಗಬೇಕು; ಅಥವಾ ಧರ್ಮವನ್ನಾಗಲಿ, ವಿದ್ಯೆಯನ್ನಾಗಲಿ ಸಾಮಾನ್ಯರಿಗೂ ತಲುಪಿಸಬೇಕೆನ್ನುವ ಪ್ರವರ್ತಕರು ಹುಟ್ಟಬೇಕು – ಆಗ ಮಾತ್ರ ಜನತೆಯ ಭಾಷೆ ಪ್ರಯತ್ನದ ಒತ್ತಡಕ್ಕೆ ಸಿಕ್ಕು ಪುಟಗೊಂಡು ಬೆಳೆಯುತ್ತದೆ ಎಂಬುದಕ್ಕೆ ಕನ್ನಡ ಬಳಸಿದ ವಚನಕಾರರು, ಪ್ರಾಕೃತ ಬಳಸಿದ ಬುದ್ಧ, ಯುರೋಪಿನ ಅನೇಕ ಭಾಷೆಗಳ ಚರಿತ್ರೆ ಉದಾಹರಣೆಗಳು. ಮೊದಲನೆಯ ಪ್ರಾಟಸ್ಟೆಂಟ್ ಎಂದು ಕರೆಯಲ್ಪಟ್ಟ ಜಾನ್ ವಿಕ್ಲಿಫ್ ಇಂಗ್ಲಿಷಿನಲ್ಲಿ ಯಾಕೆ ಅನಿವಾರ್ಯವಾಗಿ ಬರೆಯಬೇಕಾಗಿ ಬಂದಿತೆನ್ನುವುದನ್ನು ನಾವು ಇಲ್ಲಿ ನೆನೆಯಬಹುದು. ಈತ ಪ್ರಾರಂಭದಲ್ಲಿ ಬರೆಯುತ್ತಿದ್ದುದು ಲ್ಯಾಟಿನ್‌ನಲ್ಲಿ. ಜನಸಾಮಾನ್ಯರ ಭಾಷೆಯಾಗಿದ್ದ ಇಂಗ್ಲಿಷ್ ಯಾವ ವಿದ್ಯಾವಂತನಿಗೂ ಬೇಡವಾದ ಭಾಷೆಯಾಗಿತ್ತು. ಆದರೆ ೧೩೮೦ರ ಹೊತ್ತಿಗೆ ವಿಕ್ಲಿಫ್ ಸುಧಾರಣೆಗಳಿಗಾಗಿ ನಡೆಸುತ್ತಿದ್ದ ಹೋರಾಟದಲ್ಲಿ ಪೋಪ್‌ನನ್ನು ವಿರೋಧಿಸಬೇಕಾಗಿ ಬಂದಿತು. ಆಗ ಅವನಿಗೆ ಜನಸಾಮಾನ್ಯರ ಬೆಂಬಲ ಅವಶ್ಯವಾಗಿ ಇಂಗ್ಲಿಷಿನಲ್ಲಿ ಬರೆಯಲು ಪ್ರಾರಂಭಿಸಿದ. ಅಷ್ಟೇ ಅಲ್ಲ; ಬೈಬಲ್ಲನ್ನು ಇಂಗ್ಲೀಷಿಗೆ ಭಾಷಾಂತರಿಸಿ ಭಾಷೆಯ ಬೆಳವಣಿಗೆಗೆ ಅವಶ್ಯವಾದ ಅಡಿಗಲ್ಲನ್ನು ಹಾಕಿದ. ನಾವು ಬರೆಯುವ ಇಂಗ್ಲಿಷ್ ಪ್ರಚೋದಿತ ಕನ್ನಡದಂತೆಯೇ ಅವನು ಬರೆದ ಭಾಷೆಯೂ ಲ್ಯಾಟಿನ್ – ವಾಕ್ಯರಚನೆಯಿಂದ ಪ್ರಭಾವಿತವಾಗಿತ್ತು. ಆದರೆ ಕಾಲಾನುಕ್ರಮದಲ್ಲಿ ಇಂಗ್ಲಿಷ್ ತನ್ನತನವನ್ನು ಗಿಟ್ಟಿಸಿಕೊಳ್ಳಲು ಅವನ ಪ್ರಯೋಗಗಳು ಸಹಾಯಮಾಡಿದುವು. ಇದರ ಜೊತೆಗೆ, ಬೃಹತ್‌ಪ್ರಮಾಣದ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಬದಲಾವಣೆಗಳೂ ಆಗುತ್ತದೆ. ಆಳುವ ವರ್ಗ ಬದಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಹನ್ನೆರಡನೇ ಶತಮಾನದಲ್ಲಿ ಕನ್ನಡ ಯಾವ ಒತ್ತಡಕ್ಕೆ ಸಿಕ್ಕಿ ಬೆಳೆಯಿತೋ, ಪುಟಗೊಂಡಿತೋ, ಅಂತಹ ಸನ್ನಿವೇಶವನ್ನು ಕನ್ನಡಭಾಷೆ ಬೆಳೆಯಬೇಕೆಂದು ಬಯಸುವವನು ಮತ್ತೆ ಅಪೇಕ್ಷಿಸಲೇಬೇಕು. ಈಗಿನಂತೆ ಜೀವನದ ಅತ್ಯುನ್ನತ ಮಟ್ಟಗಳಲ್ಲಿ ಇಂಗ್ಲಿಷ್ ಅಭಿವ್ಯಕ್ತಿ ಮಾಧ್ಯಮವಾಗಿ ಮುಂದುವರಿದದ್ದೇ ಆದರೆ ಅಭಿಮಾನಕ್ಕೆಂದೊ ಅಥವಾ ಜನಸಾಮಾನ್ಯರಿಗೆ ತಿಳಿಯಲಿ ಎಂದೊ ನಾವು ಉಪಯೋಗಿಸುತ್ತಿರುವ ಕನ್ನಡ ಕೃತಕವಾಗಿಯೇ ಉಳಿಯುತ್ತದೆ. ಕಾರಣ ನಿತ್ಯಜೀವನದ ಸನ್ನಿವೇಶದ ಸಹಜತೆ ಇಂತಹ ಬರಹಗಳಿಗೆ ದೊರೆಯದೆ ಹೋಗುವುದರಿಂದ, ಅಂದರೆ ಒಂದು ಭಾಷೆ ಗಂಭೀರವಾದ ವಿಚಾರಗಳ ಮಂಡನೆಗೆ ಅರ್ಹವಾಗುವುದು ಅದು ಬಳಕೆಯಲ್ಲಿ ಉಜ್ಜುತ್ತ, ಬದಲಾಗುತ್ತ ಬೆಳಗುತ್ತ, ಅರ್ಥಗಳನ್ನು ತುಂಬಿಕೊಳ್ಳುತ್ತ, ಬೆಳೆಯುವುದರ ಮುಖಾಂತರ, ಹಾಗೆಯೇ ಭಾಷೆಯಲ್ಲಿ ಮಂಡಿಸಲು ಬೇಕಾದ ವಿಚಾರಗಳು ದಕ್ಕುವುದು: (ಒಂದು) ನಮ್ಮ ಪರಿಸರದಲ್ಲಿ ನಾವು ತೊಡಗುವುದರ ಮೂಲಕ, ಅಂದರೆ ಜೀವನದ ಸನ್ನಿವೇಶಗಳ ಮುಖಾಂತರ; (ಎರಡು) ಬೇರೆ ಜನಾಂಗಗಳು ಬೇರೆ ಬೇರೆ ಭಾಷೆಗಳಲ್ಲಿ ವ್ಯಕ್ತಗೊಳಿಸಿರುವ ವಿಷಯಗಳನ್ನು ನಾವು ಗಳಿಸಿಕೊಳ್ಳುವುದರ ಮೂಲಕ. ಮೊದಲನೆಯದನ್ನು ನಾವು – ಮುಖ್ಯವಾಗಿ ಸಮಾಜಶಾಸ್ತ್ರಗಳು, ಸಾಹಿತ್ಯ ಇತ್ಯಾದಿ ವಿಷಯಗಳಲ್ಲಿ – ಪರಭಾಷೆಯಾದ ಇಂಗ್ಲಿಷ್ ಮೂಲಕ ಸಾಧಿಸಲಾರೆವು; ಇದಕ್ಕೆ ಕನ್ನಡ ಬೇಕೇ ಬೇಕು. ಯಾಕೆಂದರೆ, ಈ ಕ್ಷೇತ್ರಗಳಲ್ಲಿ ನಮ್ಮ ಭಾಷೆಗಳ ಮೂಲಕ ನಾವು ಸಮಾಜದಲ್ಲಿ ತೊಡಗುವಷ್ಟು ಆಪ್ತವಾಗಿ ಪರಭಾಷೆಗಳ ಮೂಲಕ ತೊಡಗಲಾರೆವು. ಅನುಭವದ ವಿಶ್ಲೇಷಣೆಯಿಂದ ಬೆಳೆಯುವ ಜ್ಞಾನಕ್ಕೆ – ಸಾಹಿತ್ಯ, ಸಮಾಜಶಾಸ್ತ್ರ, ತತ್ವಶಾಸ್ತ್ರ ಇತ್ಯಾದಿಗಳಿಗೆ – ಈ ಅನುಭವದ ಸೂಕ್ಷ್ಮ ಯಾವ ಭಾಷೆಯಲ್ಲಿ ಮೈತಾಳುತ್ತದೆಯೋ ಅದರ ಆಪ್ತ ಪರಿಚಯವಿರಬೇಕು. ಪರಿಸರದಲ್ಲಿ ಈ ರೀತಿಯ ಆಪ್ತ ತೊಡಗುವಿಕೆಯ ಜೊತೆಗೇ ಬುದ್ಧಿಜೀವಿಗೆ ತನ್ನ ಪ್ರಜ್ಞೆಯ ವ್ಯಾಪಕತೆಯ ದೃಷ್ಟಿಯಿಂದ ಎರಡನೆಯ ಅವಶ್ಯಕತೆಯಾದ ಪರಭಾಷೆಗಳ ಜ್ಞಾನವಿರಬೇಕು. ಈ ಎರಡೂ ಮುಖ್ಯವಾದ ವಿಷಯಗಳು. ವಿಜ್ಞಾನದ ಬೆಳವಣಿಗೆಗೆ ಇಂಗ್ಲಿಷ್, ರಷ್ಯನ್ ಭಾಷೆಗಳಲ್ಲಿರುವ ಪುಸ್ತಕಗಳನ್ನು ಓದಿದರೆ ಸಾಲದು: ನಮ್ಮ ದೇಶದಲ್ಲಿ ಕೈಗಾರಿಕಾ ಕ್ರಾಂತಿಯಾಗಬೇಕಾದದ್ದೂ ಅವಶ್ಯ. ಸಾಹಿತ್ಯದಲ್ಲಿ ವರ್ಡ್ಸ್‌ವರ್ತ್ ಎಲಿಯಟ್ಟರನ್ನು ಓದಿದ ಮಾತ್ರಕ್ಕೆ ನಮ್ಮ ಸಾಹಿತ್ಯದಲ್ಲಿ ಹೊಸದು ಬರಲಾರದು. ಬಂದರೂ ಅದು ಕೃತಕವಾಗಿರುತ್ತದೆ. ಜನರ ಭಾಷೆಯಲ್ಲಿ ವಚನಕಾರರು ಬರೆದಿದ್ದಾರೆ; ಆದರೆ ಅವರು ವರ್ಡ್ಸ್‌ವರ್ತ್‌ನ ಸಮಕಾಲೀನರಲ್ಲ; ಜನರ ನುಡಿಯಲ್ಲೆ ಸಾಹಿತ್ಯ ರಚಿಸಬೇಕೆಂಬ ವಿಮರ್ಶಾತತ್ವವನ್ನು ಓದಿದವರೂ ಅಲ್ಲ. ಜೀವನದಲ್ಲಿ ತೊಡಗಿದ್ದರಿಂದ ಅವರಿಗೆ ಬಂದ ಒತ್ತಾಯ ಅದು. ಆದರೆ ಅದು ಅನೇಕ ಸಾರಿ ಬೇರೆ ಸಾಹಿತ್ಯದ ಪ್ರೇರಣೆಯೂ ಸಾಹಿತ್ಯ ಕ್ರಾಂತಿಗೆ ಬೇಕೆಂಬುದಕ್ಕೆ ಎಲಿಯಟ್ ಫ್ರೆಂಚ್‌ನಿಂದ ಕಲಿತದ್ದು. ನಾವು ಇಂಗ್ಲಿಷಿನಿಂದ ಪಡೆದದ್ದು ಉದಾಹರಣೆ. ನಮ್ಮ ಪ್ರಜ್ಞೆಯನ್ನು ಹೊರಗಿನಿಂದ ಪಡೆದ ಪ್ರೇರಣೆ ಮತ್ತು ಒಳಗಿನಿಂದ ಪಡೆದ ಅನುಭವಗಳ ನಡುವೆ ಒಂದನ್ನೊಂದು ತೀವ್ರಗೊಳಿಸುವ ಸಂಬಂಧ ಏರ್ಪಟ್ಟಾಗ ಹೊಸ ಸಾಹಿತ್ಯ ಹುಟ್ಟುತ್ತದೆ. ಆದರೆ ನಮ್ಮಲ್ಲಿ ಹೊಸದೇನು ಹುಟ್ಟಬೇಕಾದರೂ ನಾವು ಸದಾ ಯುರೋಪಿಗೆ ಆತುಕೊಂಡೇ ಇರಬೇಕು. ಅಲ್ಲಿ ನಡೆಯುವುದೆಲ್ಲ ಅನುಕರಣೀಯ ಎಂದು ಭಾವಿಸುವುದು ನಮ್ಮ ದೌರ್ಬಲ್ಯವನ್ನು ಸೂಚಿಸುತ್ತವೆ. ನಮಗೂ ಯುರೋಪಿಗೂ ಇರುವ ಸಂಬಂಧ ಸಮಾನಸ್ಕಂಧರ ಸ್ನೇಹವಾಗಬೇಕೇ ವಿನಾ, ಕೈಂಕರ್ಯ ವೃತ್ತಿಯಾಗಕೂಡದು. ಬೇರೆ ಭಾಷೆಗಳ ಪ್ರಭಾವದ ಪ್ರಾಮುಖ್ಯತೆಯನ್ನು ಅತಿಯಾಗಿ ಮಾಡಿ, ನಮ್ಮ ಜೀವನದಲ್ಲಿ ನಾವು ತೊಡಗುವುದರ ಮುಖಾಂತರ ಪಡೆಯಬೇಕಾದ್ದನ್ನು ಕ್ಷುಲ್ಲಕವೆಂದು ಕಂಡು ಸಾಹಿತ್ಯದಲ್ಲಿ ಹೂಡುವವಾದ ನಮ್ಮ ಸಾಹಿತ್ಯ ಪಡೆಯಲು ಯತ್ನಿಸುತ್ತಿರುವ ಅನನ್ಯತೆಯ ದೃಷ್ಟಿಯಿಂದ ಮಾರಕವಾದದ್ದು.

ಇದರ ಸಾರಾಂಶ: ಸಾಹಿತ್ಯದಲ್ಲೆ ಆಗಲಿ, ವಿಜ್ಞಾನದಲ್ಲೆ ಆಗಲಿ ನಾವು ಅನನ್ಯ ರೀತಿಯಲ್ಲಿ ಬೆಳೆಯಲು ನಮ್ಮ ಜೀವನದಲ್ಲಿ ನಾವು ತೊಡಗಿದವರಾಗಿರಬೇಕು; ಮತ್ತು ನಮ್ಮ ಪ್ರಜ್ಞೆಯನ್ನು ಬೇರೆ ಭಾಷೆಗಳಿಗೆ ತೆರೆದುಕೊಂಡವರಾಗಿರಬೇಕು. ಅಂದರೆ; ನಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ನಾವು ಕನ್ನಡವನ್ನು ಬಳಸಬೇಕು. ಆದರೆ ವಿಷಯ ಗ್ರಹಣಕ್ಕಾಗಿ ಅವಶ್ಯವಾದ ಭಾಷೆಗಳನ್ನೆಲ್ಲ ಕಲಿಯಬೇಕು.

ನಮ್ಮ ನಡುವೆ ಈಗ ಇಂಗ್ಲಿಷ್ ಬಲ್ಲವರು ಇರುವಂತೆ ಫ್ರೆಂಚ್, ರಷ್ಯನ್, ಜಪಾನಿ, ಜರ್ಮನ್ ಇತ್ಯಾದಿ ಭಾಷೆಗಳೆಲ್ಲ ಬರುವ ಕೆಲವು ಮಂದಿ ಇದ್ದಲ್ಲಿ ಇವರೆಲ್ಲರೂ ತಾವು ತಿಳಿದದ್ದನ್ನು ಕನ್ನಡದಲ್ಲಿ ಕೊಟ್ಟಲ್ಲಿ ನಾವು ಇನ್ನಷ್ಟು ಶ್ರೀಮಂತವಾಗಿ ಬೆಳೆಯಬಹುದೆಂಬುದು ನಮಗೆ ಅರಿವಾಗಬೇಕು. ಫ್ರೆಂಚ್ ಭಾಷೆಯಲ್ಲಿರುವ ಒಂದು ಕೃತಿ ಇಂಗ್ಲಿಷ್‌ಗೆ ಭಾಷಾಂತರವಾಗುತ್ತಿದ್ದಂತೆಯೇ ಕನ್ನಡಕ್ಕೂ ಏಕಕಾಲದಲ್ಲಿ ನಮ್ಮವರಿಂದ ಭಾಷಾಂತರವಾಗುವುದು ಸಾಧ್ಯವಾದಾಗ ಮಾತ್ರ ನಾವು ಸಾರ್ಥಕ ರೀತಿಯಲ್ಲಿ ಬೇರೆ ಭಾಷೆಗಳನ್ನು ಕಲಿತು ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂದು ಅರ್ಥ. ಆದರೆ ಸಾರ್ವಜನಿಕ ಉಪಯೋಗದಿಂದ ಇಂಗ್ಲಿಷ್ ಹೋದ ಹೊರತು – ಕನ್ನಡದಲ್ಲಿ ಈ ರೀತಿಯ ಕೆಲಸವನ್ನು ಮಾಡಲೇಬೇಕಾದ ಜರೂರು ನಮಗೆ ಇರುವುದಿಲ್ಲ. ಇದರ ಜೊತೆಗೆ ಇನ್ನೊಂದು ಮಾತನ್ನೂ ಸೇರಿಸುವುದು ಅವಶ್ಯಕ : ಇಂಗ್ಲಿಷನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಕೈಬಿಡುವ ಅವಶ್ಯಕತೆ ಬರುವುದೂ ಕೂಡ ಒಂದೋ ನಮ್ಮ ಜನತೆ ಸಾಮಾಜಿಕ ಕ್ರಾಂತಿಯಲ್ಲಿ ತೊಡಗಿದಾಗ – ಅಂದರೆ ಜನತೆ ಪರಭಾಷೆಯ ಮೂಲಕ ತಮ್ಮನ್ನು ಸರ್ಕಾರ ಪರಕೀಯಗೊಳಿಸುವುದರ ವಿರುದ್ಧ ಸಿಡಿದೆದ್ದಾಗ – ಅಥವಾ ವ್ಯಾಪಕವಾದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಆದಷ್ಟು ಹೆಚ್ಚು ಜನರನ್ನು ನಾವು ವಿದ್ಯಾವಂತರನ್ನಾಗಿ ಮಾಡಲೇಬೇಕಾದ ಅಗತ್ಯಬಿದ್ದಾಗ.

ಹೀಗೆ ಕನ್ನಡದಲ್ಲಿ ಊರಿದ ಬದುಕು, ಆದರೆ ಹತ್ತು ದಿಕ್ಕಿಗೆ ಚಾಚಿಕೊಂಡಿರುವ ಪ್ರಜ್ಞೆಯಿಂದ ನಾವೂ ಬೆಳೆದು ನಮ್ಮ ಭಾಷೆಯನ್ನೂ ಬೆಳೆಸುತ್ತೇವೆ. ನಮಗೆ ಇಂಗ್ಲಿಷ್ ಸಾಹಿತ್ಯದ ಪ್ರೇರಣೆ ಬೇಡವೇ ಎಂದು ಇಂಗ್ಲಿಷನ್ನು ಸಂಜೀವಿನೀ ಔಷಧವೆಂದು ಬಗೆದು ಕೇಳುವವರು – ಇಂಗ್ಲಿಷಿಗೂ ಫ್ರೆಂಚ್, ಜರ್ಮನ್, ಇಟಾಲಿಯನ್ ಇತ್ಯಾದಿ ಸಾಹಿತ್ಯಗಳ ಪ್ರಭಾವ ಅವಶ್ಯಕ; ಆದರೆ ಇಂಗ್ಲಿಷರು ಈ ಭಾಷೆಗಳನ್ನು ಹೇಗೆ ಕಲಿಯುತ್ತಾರೆ, ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಇಂಗ್ಲಿಷ್ ವಿದ್ಯಾರ್ಥಿಗಳು ಬೇರೆ ಭಾಷೆಗಳ ಸಾಹಿತ್ಯವನ್ನು ಅಭ್ಯಾಸ ಮಾಡಿ ತಮ್ಮ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಸಂಶೋಧನೆಗಳನ್ನು ಮಾತ್ರ ಇಂಗ್ಲಿಷಿನಲ್ಲೆ ಬರೆಯುತ್ತಾರೆ ಎಂಬುದು ನಮ್ಮವವರಿಗೆ ತಿಳಿದಿರಲಿಕ್ಕಿಲ್ಲ. ತನ್ನ ಜರ್ಮನ್ ಟೈಪಿಸ್ಟ್ ಹುಡುಗಿಗೆ ಗೊತ್ತಿದ್ದಷ್ಟು ಸರಾಗವಾಗಿ ಜರ್ಮನ್ ಭಾಷೆಯನ್ನು ಮಾತನಾಡಲಾಗಲಿ, ಬರೆಯಲಾಗಲಿ, ಬರದಿದ್ದ ಇಂಗ್ಲೆಂಡಿನ ಜರ್ಮನ್ ಸಾಹಿತ್ಯದ ಪ್ರೊಫೆಸರರು ಒಬ್ಬರು ತಮ್ಮ ತಾಯ್ನುಡಿಯಾದ ಇಂಗ್ಲಿಷಿನಲ್ಲಿ ಜರ್ಮನ್ ಸಾಹಿತ್ಯದ ಬಗ್ಗೆ ಬರೆದ ಒಂದು ಪುಸ್ತಕ ಮತ್ತೆ ಜರ್ಮನ್‌ಗೆ ಭಾಷಾಂತರಿಸಲ್ಪಟ್ಟು ಆ ದೇಶದಲ್ಲಿ ಉದ್ಗ್ರಂಥವೆಂದು ಪರಿಗಣಿತವಾಯಿತೆಂಬುದನ್ನು ನಾನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಾವು ಕೂಡ ಸ್ವತಂತ್ರ ವಿಚಾರಮಾಡಲು ಶಕ್ತರಾದವರಾಗಿದ್ದಲ್ಲಿ, ಆತ್ಮನಂಬಿಕೆ ಉಳ್ಳವರಾಗಿದ್ದಲ್ಲಿ ಕನ್ನಡದಲ್ಲಿ ಇಂಗ್ಲಿಷ್ ಸಾಹಿತ್ಯದ ಬಗ್ಗೆಯೂ, ಫ್ರೆಂಚಿನ ಬಗ್ಗೆ ಪ್ರಥಮತಃ ಬಂದ ಪುಸ್ತಕ ನಂತರ ಆಯಾಯ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟು ಉದ್ಗ್ರಂಥಗಳೆಂದು ಪರಿಗಣಿತವಾದ ಸಾಧ್ಯತೆಯನ್ನು ಕಲ್ಪಿಸಿಕೊಳ್ಳಬಹುದು. ಹಾಗೆಯೇ ಮನಃಶಾಸ್ತ್ರ, ಸಮಾಜಶಾಸ್ತ್ರಗಳಲ್ಲಿ ಕೂಡ ಭಾಷಾಂತರಿಸಲು ಅರ್ಹವಾದ ಸ್ವತಂತ್ರ ಕೃತಿಗಳು ನಮ್ಮಲ್ಲಿ ಹುಟ್ಟಬಹುದು. ಆದರೆ ದುರ್ದೈವವಶಾತ್ ನಾವು ಅಭಿಮಾನ ಕೃಪಣರು; ಸ್ವತಂತ್ರ ವಿಚಾರಶಕ್ತಿಯನ್ನು ಕಳೆದುಕೊಂಡುವರು; ಎಷ್ಟು ಕಲಿತರೂ ಮೈಗೂಡದ ಇಂಗ್ಲಿಷ್ ಭಾಷೆಯನ್ನು ಪರಿಶುದ್ಧಗೊಳಿಸಿ ಕೊಳ್ಳುತ್ತಲೇ ಇರಬೇಕಾದ ಅನಿವಾರ್ಯತೆಯಲ್ಲೆ ನಮ್ಮೆಲ್ಲ ಶಕ್ತಿಗಳನ್ನೂ ವಿನಿಯೋಗಿಸುತ್ತ, ವಿಷಯದಲ್ಲಿ ಆಳವಾದ ಜ್ಞಾನವನ್ನು ಪಡೆದುಕೊಳ್ಳಲಾರದವರು; ಇಂಗ್ಲಿಷಾಗಲಿ ಕನ್ನಡವಾಗಲಿ ಖಚಿತವಾಗಿಗೊತ್ತಿಲ್ಲದ ಮೂಕರಾಗುತ್ತಿರುವ ಭಾಷಾದರಿದ್ರರು.

ಇಂಗ್ಲಿಷನ್ನು ಕಲಿಯುವುದನ್ನು ಬಿಡುವುದರ ಮುಖಾಂತರ ನಮ್ಮ ವಿದ್ಯಾಭ್ಯಾಸ ಸುಲಭವಾಗಲಿ, ಅಥವಾ ಭಾಷೆಯ ಹೊರೆ ಕಡಿಮೆಯಾಗಲಿ ಎಂದು ಮಾತ್ರ ನನ್ನವಾದವಲ್ಲ. ಬಲತ್ಕಾರವಾಗಿ ಇಂಗ್ಲಿಷ್ ಕಲಿಸದಿದ್ದರೆ ಎಲ್ಲಿ ನಾವು ಕನ್ನಡದ ಕೂಪಮಂಡೂಕಗಳಾಗುತ್ತೇವೋ ಎನ್ನುವ ದಿಗಿಲೂ ನನ್ನನ್ನು ಅಷ್ಟು ಬಾಧಿಸುವುದಿಲ್ಲ. ನಾನು ಕಾಣುವ ಕನ್ನಡದ ಭವಿಷ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಷಯಗ್ರಹಣದ ದೃಷ್ಟಿಯಿಂದ ಕಲಿತ ಬೇರೆ ಬೇರೆ ಭಾಷೆಗಳ ಮೂಲಕ ತನ್ನ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳುತ್ತ, ಆದರೆ ನಮ್ಮ ಜನಜೀವನದಲ್ಲಿ ಸಂಪೂರ್ಣ ತೊಡಗಲು ಅವಶ್ಯವಾದ ಕನ್ನಡ ಬಳಸುತ್ತ, ಹೀಗೆ ತೊಡಗಿದವನಿಗೆ ಮಾತ್ರ ಸಾಧ್ಯವಾದ ಸ್ವತಂತ್ರ ವಿಚಾರ ಶಕ್ತಿಯನ್ನು ಸದಾ ಚುರುಕುಗೊಳಿಸುತ್ತ ಕಷ್ಟದ ದಾರಿಯಲ್ಲಿ ನಡೆಯುವ ಕಠಿಣವ್ರತಿಯಾಗುತ್ತಾನೆ. ಹೀಗೆ ಮಾತ್ರ ನಮ್ಮ ಬಾಳಿನಲ್ಲಿ ಮತ್ತೆ ಹೊಸ ಸೃಷ್ಟಿ ಸಾಧಿತವಾದೀತು – ಇಂಗ್ಲಿಷ್ ಕಾಡು ಭಾಷೆಯಾಗಿದ್ದಾಗಲೂ ವಚನಕಾರರಿಗೆ ಕನ್ನಡದಲ್ಲಿ ಸಾಧ್ಯವಾಗಿದ್ದಂತೆ; ಹನ್ನೆರಡನೆ ಶತಮಾನದಲ್ಲಿ ಕಾಡುಭಾಷೆಯಾಗಿದ್ದ ಇಂಗ್ಲಿಷು ನಂತರದ ಇತಿಹಾಸದಲ್ಲಿ ಮಗತ್ತನ್ನು ಸಾಧಿಸಿದಂತೆ.

ಒಟ್ಟಿನಲ್ಲಿ ನಮ್ಮ ಭಾಷೆ ನಮ್ಮ ಪ್ರಜ್ಞೆಯ ಅತ್ಯುನ್ನತ ಮಟ್ಟದಲ್ಲಿ ಕೆಲಸಮಾಡುವ ಮಾಧ್ಯಮವಾಗಬೇಕು. ಅಂದರೆ ವಿದ್ಯಾಭ್ಯಾಸದ, ಆಡಳಿತ, ನ್ಯಾಯಾಂಗದ ಭಾಷೆ ಕನ್ನಡ ನಾಡಿನಲ್ಲಿ ಕನ್ನಡವಾಗಬೇಕು. ಮತ್ತು ಈಗ ಇಂಗ್ಲಿಷ್ ಆಕ್ರಮಿಸಿರುವ ಸ್ಥಾನವನ್ನು ಹಿಂದಿ ಎಂದೂ ನಮ್ಮ ಬದುಕಿನಲ್ಲಿ ಆಕ್ರಮಿಸದಂತೆ ಎಚ್ಚರವಹಿಸಬೇಕು. ಬೇಕಾದರೆ ಪರಸ್ಪರ ಸಂಪರ್ಕಕ್ಕೆಂದು ಸರ್ವಭಾಷಾ ಸೂತ್ರವನ್ನು ನಾವು ಒಪ್ಪಿಕೊಳ್ಳಲು ತಯಾರಿರಬೇಕು. ಸಂಪರ್ಕಭಾಷೆಯೆಂದು ಬಂದು ನಿಲ್ಲುವ ಇಂಗ್ಲಿಷಾಗಲಿ ಹಿಂದಿಯಾಗಲಿ ಆಕ್ರಮಣಶೀಲವಾಗಿ ಬಿಡಬಹುದೆಂದು ಅಪಾಯವನ್ನು ನಾವು ಮರೆಯಕೂಡದು.

ದೊಡ್ಡ ಸವಾಲನ್ನು ಎದುರಿಸಿದಾಗಲೂ ನಾವು ತೃತೀಯ ದರ್ಜೆಯ ಜನಾಂಗವಾಗಿದ್ದಲ್ಲಿ ಬೆಳೆಯಲಾರದೆ ಸೃಷ್ಟಿಸಲಾರದೆ ಹೋಗಬಹುದು: ಅಥವಾ ೧೨ನೇ ಶತಮಾನದಲ್ಲಿ ಸಾಧಿಸಿದಂತೆ ಎತ್ತರದ ಪ್ರಜ್ಞೆಯನ್ನು ಆಧುನಿಕ ಜಗತ್ತಿನ ಹೊಸ ರಂಗಗಳಲ್ಲೂ ಮುಟ್ಟಬಹುದು. ನಿಶ್ಚಯಿಸಿ, ಕ್ರಿಯೆಯ ಮೂಲಕ ನಾವು ಎಷ್ಟು ಯೋಗ್ಯತೆಯ ಜನ ಎನ್ನುವ ಪರೀಕ್ಷೆಗೆ ಒಳಗಾಗಬೇಕಾದ ಕಾಲ ಈಗ ಸನ್ನಿಹಿತವಾಗಿದೆ. ಆತಂಕದ ವರ್ತಮಾನದಲ್ಲಿ ಅದೃಷ್ಟ ಭವಿಷ್ಯದಲ್ಲಿ ನಮ್ಮ ಸ್ವರೂಪದ ಸೃಷ್ಟಿಯಾಗಬೇಕಾಗಿದೆ. ಅಳೆದು ಹೊಯ್ಯುವವನ ವ್ಯಕ್ತಿತ್ವ ಯಾವತ್ತೂ ಒಂದು ಸ್ಪಷ್ಟರೂಪ ಪಡೆಯಲಾರದ ಪ್ರೇತಸ್ವರೂಪಿಯಾಗಿ ಇದ್ದುಬಿಡುತ್ತದೆ. ಹೀಗೆ ನಿಶ್ಚಯಿಸಿ ನಮ್ಮ ಸಾಧ್ಯತೆಗಳನ್ನು ಹುಡುಕಬೇಕಾದ, ರೂಪಿಸಿಕೊಳ್ಳಬೇಕಾದ ಮುಖ್ಯ ಸಮಸ್ಯೆಗಳಲ್ಲಿ ಭಾಷೆಯೂ ಒಂದು. ಇಂಗ್ಲಿಷ್‌ವಾದಿಗಳಿಗೆ ನಮ್ಮ ಜೀವನ ಸರ್ವಸ್ವದ ಮಾಧ್ಯಮವೂ ಇಂಗ್ಲಿಷೇ ಆಗಲಿ, ಕನ್ನಡವನ್ನು ನಾವು ಕೈ ಬಿಡೋಣ ಎಂದು ನಿಶ್ಚಯಿಸುವ ಧೈರ್ಯವಿಲ್ಲ. “ಒಂದಷ್ಟು ಇಂಗ್ಲಿಷಿನಲ್ಲಿ ನಡೆಯಲಿ, ಇನ್ನಷ್ಟು ಕನ್ನಡದಲ್ಲಿ ನಡೆಯಲಿ, ಮುಂದೆ ಏನಾಗುತ್ತದೊ ಕಾದು ನೋಡೋಣ” ಎಂದು ಇವರು ಎಡಬಿಡಂಗಿ ವಾದ ಮಾಡುತ್ತಾರೆ.

ಆದರೆ ನಾವು ಮಾಡಬೇಕಾದ ನಿಶ್ಚಯವೆಂದರೆ ; ವಿಷಯಗ್ರಹಣಕ್ಕಾಗಿ ಬೇರೆ ಭಾಷೆಗಳನ್ನು ಕಲಿಯುವುದರ ಮೂಲಕ, ಮತ್ತು ಅಭಿವ್ಯಕ್ತಿ ಮಾಧ್ಯಮವಾಗಿ ಕನ್ನಡವನ್ನು ಬಳಸುವುದರ ಮೂಲಕ ಕನ್ನಡ ಭಾಷೆ ತನ್ನ ಯೋಗ್ಯತೆಗೆ ತಕ್ಕ ಮಟ್ಟವನ್ನು ಮುಟ್ಟುವುದು ಸಾಧ್ಯವಾಗುವಂತಹ ಸನ್ನಿವೇಶ ಕನ್ನಡ ನಾಡಿನಲ್ಲಿ ಈ ಕೂಡಲೇ ಏರ್ಪಡಬೇಕು – ಎಂಬುದು.

—-
ಮಾನವ’ (ಮಾಸಪತ್ರಿಕೆ), ೧೯೬೮.

* * *