ತನ್ನ ತತ್ವಗಳನ್ನು ಸರಳವಾಗಿ ಅನ್ವಯಿಸಿ ಬರೆದ ಸಾಹಿತ್ಯಕೃತಿಗಳಿಂದ ಪ್ರಾಯಶಃ ಮಾರ್ಕ್ಸ್‌ಗೆ ಕಲಿಯಬೇಕಾದ್ದರು ಏನೂ ಇರುತ್ತಿರಲಿಲ್ಲ; ಹಾಗೆಯೇ ಫ್ರಾಯ್ಡ್‌ಗೆ ಕೂಡ ತನ್ನ ಮನೋವಿಶ್ಲೇಷಣ ತತ್ವಗಳನ್ನು ಚಾಚೂ ತಪ್ಪದೆ ಅನುಸರಿಸಿದ ಕಾದಂಬರಿಗಳಿಂದ ಕೂಡ ತಿಳಿಯಬೇಕಾದ್ದು ಇರುತ್ತಿರಲಿಲ್ಲ. ಸಾಹಿತ್ಯಕೃತಿ ತಾನು ಹುಟ್ಟಿದ ಸಮಾಜದ ಬಗ್ಗೆ ಒಳ್ಳೆ ದಾಖಲೆಯಾಗುವುದು ಸಹ ಕೃತಿಕಾರ ಸಮಾಜಶಾಸ್ತ್ರಜ್ಞನಿಗಿಂತ ಪ್ರತ್ಯೇಕವಾದ ರೀತಿಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಮಹತ್ವಪೂರ್ಣ ವಿವರಗಳಿಂದ, ತನ್ನ ಕಲ್ಪನೆಗೆ ಒಳಪಟ್ಟ ಬೇರೊಂದು ಶಿಸ್ತಿನಿಂದ ಗ್ರಹಿಸಿ ಭಾಷೆಯಲ್ಲಿ ಹಿಡಿದಿಡುತ್ತಾನದ್ದರಿಂದ ಎಂಬುದನ್ನು ಮರೆಯುವಂತಿಲ್ಲ. ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಮನಶ್ಯಾಸ್ತ್ರಗಳಿಗಿರುವ ವಿಚಾರದ ಶಿಸ್ತಿನಂತೆಯೇ ಇನ್ನೊಂದು ಬಗೆಯ ಶಿಸ್ತು ಸಾಹಿತ್ಯಕ್ಕಿದೆ; ಆ ಮೂಲಕ ಸಾಹಿತ್ಯ ಸತ್ಯದ ಅಮೂಲ್ಯ ಶೋಧನೆ ಮತ್ತು ಸಾಕ್ಷಾತ್ಕಾರಗಳನ್ನು ಸಾಧ್ಯಗೊಳಿಸುತ್ತದೆ ಎಂಬುದು ಇಲ್ಲಿ ಒತ್ತಿ ಹೇಳಬೇಕಾದ ವಿಷಯ. ಮಾರ್ಕ್ಸ್‌ವಾದಿಗಳು ಶೇಕ್ಸ್‌ಪಿಯರ್, ಬಾಲ್ಸಾಕ್ ಮತ್ತು ಸ್ಕಾಟ್‌ರಲ್ಲಿ ವಿಶ್ಲೇಷಣೆಗೆ ಅರ್ಹವಾದ ಮಹತ್ವದ ಸಂಗತಿಗಳನ್ನು ಕಂಡಿದ್ದಾರೆ. ಆದರೆ ಸ್ವತಂತ್ರ ಸಾಕ್ಷಿತ್ವವನ್ನು ಕಳೆದುಕೊಂಡು ತಮ್ಮ ತತ್ವಗಳನ್ನು ಸುಲಭವಾಗಿ ಅನ್ವಯಿಸಿದ ಸಾಹಿತ್ಯಕೃತಿಗಳಲ್ಲಿ ಅವರಿಗೆ ಹೊಸದೇನು ತಾನೆ ಕಾಣಿಸುವುದು ಸಾಧ್ಯ? ಎಂತಹ ಸರಳಮನಸ್ಕರಿಗೂ ಇದು ತಿಳಿಯಬೇಕು : ಮಾರ್ಕ್ಸ್‌ವಾದಿಗಳ ಕುತೂಹಲವನ್ನು ಕೆರಳಿಸಬಲ್ಲಂತಹ ಸಾಹಿತ್ಯ ಆ ವಾದದ ಅನ್ವಯವಾಗಿದ್ದರೆ, ಫಾರ್ಮುಲಾಕ್ಕೆ ಸರಿಯಾಗಿ ಹೊಸೆದ ಪೂರ್ವಯೋಜಿತ ಕೃತಿಯಾಗಿದ್ದರೆ ಸಾಲದು. ಆದರೆ ಫಾರ್ಮುಲಾ ಕೃತಿಯೆಂದರೆ ಸಮಾಜಕ್ರಾಂತಿಗೆ ಕರೆ ಕೊಡುವ ಪ್ರಗತಿಶೀಲ ಪ್ರಚಾರ ಮಾತ್ರವಲ್ಲ; ವ್ಯಕ್ತಿಗೂ ಸಮಾಜಕ್ಕೂ ಯಾವ ಸಂಬಂಧವನ್ನೂ ಗುರುತಿಸದ, ನಮ್ಮ ಸಮಾಜದ ಅವನತಿಯನ್ನೆ ವಸ್ತುವಾಗುಳ್ಳ ನಿರಾಶೆಯ ನವ್ಯ ಕೃತಿಗಳೂ ಸಹ ಫಾರ್ಮುಲಾ ಕೃತಿಗಳಾಗುವುದು ಸಾಧ್ಯ.

ಸಾಹಿತ್ಯ ಹೀಗೆ ಮನುಷ್ಯನ ಅನುಭವದ ಬಗ್ಗೆ ತನ್ನದೆ ಆದ ಸ್ವತಂತ್ರ ರೀತಿಯಲ್ಲಿ ಸತ್ಯವನ್ನು ಪ್ರಕಟಿಸುವುದು – ಕ್ರಾಂತಿಕಾರಕ ಬದಲಾವಣೆಯ ಹಂಬಲದ ಸಂದರ್ಭದಲ್ಲೂ ಸದ್ಯದ ಅನುಭವದ ನಿಜಸ್ಥಿತಿ ಏನೆಂಬುದನ್ನು ಹೇಳುವುದು – ಎಲ್ಲ ನಿರ್ಲಪ್ತ ಶೋಧಕರಿಗೂ ಅವಶ್ಯವೆನ್ನಿಸಲೇಬೇಕು. ವಾಸ್ತವತೆಯನ್ನು ಬದಲಾಯಿಸಬೇಕೆಂದು ಹೊರಟ ಕ್ರಾಂತಿಕಾರ ವಾಸ್ತವತೆಯನ್ನು ಕಡೆಗಾಣಿಸಿದರೆ ಅಥವಾ ಕಣ್ಣುಮುಚ್ಚಿ ಕೂತರೆ ತನ್ನ ಪ್ರಯತ್ನದಲ್ಲೆ ವಿಫಲನಾಗುತ್ತಾನೆ ಅಷ್ಟೆ. ಆದರೆ, ಅನಿವಾರ್ಯ ವಾಸ್ತವತೆಯಿಂದ ಅಸ್ವಸ್ಥರಾದ ಕ್ಷುಬ್ಧ ಕ್ರಾಂತಿಕಾರರು (ಕ್ರಾಂತಿಕಾರತೆ ಚಟವಾದವರು) ಮತ್ತು ಪಕ್ಷದ ಅಧಿಕಾರಿಗಳಾಗಿ ಸತ್ಯವನ್ನೆ ಮರೆಯಮಾಚಲು ಯತ್ನಿಸುವ ಜಾಡ ನೋವ್‌ನಂತಹ ಮೂರ್ಖರು ಸಾಹಿತ್ಯದ ಸ್ವತಂತ್ರ ಸಾಕ್ಷಿತ್ವವನ್ನು ದ್ವೇಷಿಸುತ್ತಾರೆಂಬುದು ನಿಜ. ಆದರೆ ಮಾರ್ಕ್ಸ್‌ವಾದ ನಿರ್ಲಿಪ್ತ ವೈಜ್ಞಾನಿಕ ತತ್ವವಿದ್ದಂತೆಯೇ ಪಕ್ಷಕಟ್ಟುವ ರಾಜಕೀಯ ಸಿದ್ಧಾಂತವೂ ಆದ್ದರಿಂದ, ಇತಿಹಾಸದಲ್ಲಿ ವ್ಯಕ್ತವಾಗುವ ಮನುಷ್ಯನ ಸ್ವರೂಪದ ನಿಷ್ಪಕ್ಷಪಾತವಾದ ವಿಶ್ಲೇಷಣ ಕ್ರಮವೂ ಹೌದು; ಹಾಗೆಯೇ ವಾಸ್ತವತೆಯನ್ನು ಕ್ರಾಂತಿಯ ಮೂಲಕ ಬದಲಾಯಿಸಬೇಕೆನ್ನುವ ಕರೆಯೂ ಹೌದು. ಆದ್ದರಿಂದ ಚರಿತ್ರೆಯ ವೈಜ್ಞಾನಿಕ ನಿಷ್ಠುರ ವೀಕ್ಷಣೆಯಾಗಿ ಇದು ಸಾಹಿತಿಗೆ ಒಂದು ಬೆಲೆಯುಳ್ಳ ದೃಷ್ಟಿಕೋನವನ್ನು ಕೊಡಲು ಸಾಧ್ಯವಿರುವಂತೆಯೇ, ಸಮಾಜವನ್ನು ಕ್ರಾಂತಿಯಲ್ಲಿ ಬದಲಿಸುವ ಕ್ರಿಯೆಗೆ ಸಾಹಿತಿಯನ್ನು ಬರಿಯ ಸಾಧನವಾಗಿ ಉಪಯೋಗಿಸಿಕೊಳ್ಳಲು ಬಯಸುವ ತತ್ವವೂ ಆಗಿಬಿಡುತ್ತದೆ. ಎರಡನೆಯ ರೀತಿಯಲ್ಲಿ ಮಾರ್ಕ್ಸ್‌ವಾದ ವ್ಯಕ್ತವಾದಾಗ ಸಾಹಿತ್ಯಕ್ಕಾಗುವ ಅಪಚಾರ ಸ್ಟಾಲಿನ್ ದಬ್ಬಾಳಿಕೆಯ ಸೋವಿಯಟ್ ರಷ್ಯದಲ್ಲಿ ನಡೆದ ಘಟನೆಗಳಿಂದ ಸ್ಪಷ್ಟವಾಗುತ್ತದೆ.

ಸಂಕುಚಿತವಾದ, ಜೊತೆಗೇ ಉಪಯೋಗಕಾರಿಯಾದ ದೃಷ್ಟಿಕೋನಗಳೆರಡೂ ಮಾರ್ಕ್ಸ್‌ವಾದದಿಂದ ಸಾಹಿತಿಗೆ ದೊರೆಯಬಲ್ಲವು ಎಂದೆನಷ್ಟೆ. ಈ ಎರಡಕ್ಕೂ ಮೂಲವಿರುವುದು ಎಂಗೆಲ್ಸ್ ವ್ಯಕ್ತಪಡಿಸಿದ ಎರಡು ಅಭಿಪ್ರಾಯಗಳಲ್ಲಿ, ಮತ್ತು ಲೆನಿನ್ನನ ಒಂದು ಅಭಿಪ್ರಾಯದಲ್ಲಿ, ಈ ಅಭಿಪ್ರಾಯಗಳನ್ನು ಈಗ ನೋಡೋಣ.

ಎಂಗೆಲ್ಸ್ ಮಿನ್ನಾ ಕಾಟ್ಲ್ಕಿಗೆ ಬರೆದ ಒಂದು ಕಾಗದದ ತಾತ್ಪರ್ಯ ಹೀಗಿದೆ:

ನಾನೇನು ಉದ್ದೇಶಪೂರ್ವಕವಾದ ಕಾವ್ಯದ ವಿರೋಧಿಯಲ್ಲ. ಈಸ್ಕೆಲಸ್, ಅರಿಸ್ಟೊಫೆ ನೀಸ್, ಡಾಂಟೆ, ಸರ್ವಾಂಟಿಸ್ ಎಲ್ಲ ಲೇಖಕರೂ ಒಂದು ಉದ್ದೇಶದ ಸಾಧನೆಗಾಗಿ ಕೃತಿನಿರ್ಮಾಣ ಮಾಡುತ್ತಾರೆಂದು ನನ್ನ ಅಭಿಪ್ರಾಯಆದರೆ ಯಾವ ಸಿದ್ಧಾಂತವಾಗಲಿ ಸಾಹಿತ್ಯಕೃತಿಯಲ್ಲಿ ವರ್ಣಿತವಾದ ಸನ್ನಿವೇಶ ಮತ್ತು ಕ್ರಿಯೆಗಳಲ್ಲಿ ಅಂತರ್ಗತವಾಗಿ ಹೊರಹೊಮ್ಮಬೇಕೆ ವಿನಾ ಬಹಿರಂಗವಾಗಿ, ಅತಿಸ್ಪಷ್ಟವಾಗಿ ಕಾಣುವಂತೆ ಇರಕೂಡದು. ಯಾವ ಸಾಹಿತಿಯೆ ಆಗಲಿ ತಾನು ವರ್ಣಿಸುವ ಸದ್ಯದ ಸಾಮಾಜಿಕ ಘರ್ಷಣೆಗಳ ಭವಿಷ್ಯ ಪರಿಹಾರವನ್ನೂ ಕಡ್ಡಾಯವಾಗಿ ಸೂಚಿಸಬೇಕೆಂದು ನಾನೇನು ತಿಳಿದಿಲ್ಲ.

[1]

ಮಾರ್ಗರೇಟ್ ಹಾರ್ಕ್‌ನೆಸ್‌ಗೆ ಬರೆದ ಇನ್ನೊಂದು ಕಾಗದದಲ್ಲಿ ಇದೇ ಅರ್ಥ ಬರುವ ಮಾತುಗಳನ್ನು ಎಂಗೆಲ್ಸ್ ಹೇಳುತ್ತಾನೆ :

ನೀವು ಅತ್ಯಂತ ಸ್ಪಷ್ಟವಾದ ಸಮಾಜವಾದಿ ಕಾದಂಬರಿಯನ್ನು ಬರೆದಿಲ್ಲವೆಂದೇನೂ ನಾನು ನಿಮ್ಮಲ್ಲಿ ತಪ್ಪು ಹುಡುಕುತ್ತಿಲ್ಲ. ಕೃತಿಯಲ್ಲಿ ಲೇಖಕನ ಅಭಿಪ್ರಾಯ ಎಷ್ಟು ಹೆಚ್ಚು ಅಡಗಿರುತ್ತದೊ ಅಷ್ಟು ಹೆಚ್ಚು ಕೃತಿಗೆ ಲಾಭವಾಗುತ್ತದೆ.[2]

ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿರುವ ಅಭಿಪ್ರಾಯ ಲೆನಿನ್ನನದು. ತನ್ನೊಂದು ಲೇಖನದಲ್ಲಿ ಈ ಅರ್ಥ ಬರುವ ಮಾತುಗಳನ್ನು ಲೆನಿನ್ ಆಡಿದ್ದಾನೆ :

ಸಾಹಿತ್ಯ ಪಕ್ಷದ ಸಾಹಿತ್ಯವಾಗಬೇಕು. ಪಕ್ಷಾತೀತ ಸಾಹಿತಿಗಳಿಗೆ ಧಿಕ್ಕಾರ! ಅತಿಮಾನವ ಸಾಹಿತಿಗಳಿಗೆ ಧಿಕ್ಕಾರ! ಕೂಲಿಗಾರರ ಹಿತಸಾಧನೆಯ ಪ್ರಯತ್ನದಲ್ಲಿ ಸಾಹಿತ್ಯವೂ ಒಂದಂಶವಾಗಬೇಕು. ಪ್ರಜ್ಞಾವಂತ ಕೂಲಿಗಾರವರ್ಗದ ನಾಯಕರು ಸೃಷ್ಟಿಸಿರುವ ಸಮಾಜವಾದಿ ಪ್ರಜಾತಂತ್ರದ ಬೃಹತ್ ಯಂತ್ರದ ಒಂದು ಸಣ್ಣ ಚಕ್ರ ಒಂದು ಸಣ್ಣ ಸ್ಕ್ರೂಮೊಳೆಯಾಗಬೇಕು ಸಾಹಿತ್ಯ.[3]

ಸೌಂದರ್ಯೋಪಾಸನೆಯ ಸಾಹಿತ್ಯದ ಗುರಿಯೆಂದು ತಿಳಿದವರ ವಿರುದ್ಧ ಲೆನಿನ್ ಹೇಳಿದ ಮಾತುಗಳಿವು. ಆದರೆ ಆ ಸಂದರ್ಭದಿಂದ ಈ ಮಾತುಗಳನ್ನು ತೆಗೆದು ಹೊರಗಿಟ್ಟು ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಯಾಕೆಂದರೆ ಈ ಮಾತುಗಳಿಗೆ ಸಂಪೂರ್ಣ ವಿರೋಧವಾದ ಅಭಿಪ್ರಾಯಗಳನ್ನು ಲೆನಿನ್ ವ್ಯಕ್ತಪಡಿಸಿದ್ದುಂಟು. ಲುಕಾಚ್ಸ್ ಎಂಬ ದೊಡ್ಡ ಕಮ್ಯುನಿಸ್ಟ್ ವಿಮರ್ಶಕ ಜಾಡನೋವ್ ಪಂಗಡದವರ ವಿರುದ್ಧ ಹೇಗೋ ಹಾಗೆಯೇ ಪಾಶ್ಚಾತ್ಯ ಬೂರ್ಜ್ವಾ ವಿಮರ್ಶಕರ ವಿರುದ್ಧವೂ ವಾದಹೂಡುತ್ತ ಲೆನಿನ್ ಗಾರ್ಕಿಗೆ ಬರೆದ ಇನ್ನೊಂದು ಕಾಗದವನ್ನು ಉದ್ಧರಿಸುತ್ತಾನೆ :

ಒಬ್ಬ ಕಲಾವಿದನ ಉಪಯೋಗಕ್ಕೆ ಬರುವಂತಹ ಗುಣಗಳು ಎಲ್ಲ ತತ್ವಗಳಲ್ಲೂ ಇವೆಯೆಂಬುದು ನನ್ನ ನಂಬಿಕೆ. ಆದರ್ಶವಾದಿ ತತ್ವಗಳು ಸಹ ಲೇಖಕನಿಗೆ ಉಪಯುಕ್ತವಾಗಬಲ್ಲವು.[4]

ಮಾರ್ಕ್ಸ್‌ವಾದಿಗಳಲ್ಲೆ ಇರುವ ಈ ವಿರೋಧ ಅಭಿಪ್ರಾಯಗಳಿಂದಾಗಿ ಅವರ ಕ್ಯಾಂಪಿನಲ್ಲೆ ಎರಡು ಪಂಗಡಗಳೂ ಹುಟ್ಟಿಕೊಂಡಿವೆ : ೧೯೩೪ನೆ ಇಸ್ವಿಯಲ್ಲಿ ನಡೆದ ಮೊದಲ ಸೋವಿಯತ್ ಸಾಹಿತ್ಯ ಕಾಂಗ್ರೆಸ್ಸಿನಲ್ಲಿ ಸಾಹಿತ್ಯ ಪಕ್ಷದ ಪ್ರಚಾರವಾಗಬೇಕೆಂದು ಘೋಷಿಸಿದ ಜಾಡನೋವ್‌ನದು ಒಂದು; ಇನ್ನೊಂದು, ಲುಕಾಚ್ಸ್‌ನಂತಹ ಉದಾರವಾದಿ ಮಾರ್ಕ್ಸ್‌ವಾದಿಗಳದು.

ಜಾಡನೋವ್‌ನ ಪ್ರಕಾರ ಒಬ್ಬ ವಿಮರ್ಶಕ ಮಾಡಬಹುದಾದ ಕೆಲಸವೆಂದರೆ ಎರಡೆ : ಪಕ್ಷದ ತತ್ವವೇನು ಎಂದು ಸಾಹಿತಿಗೆ ತಿಳಿಯ ಹೇಳುವುದು; ಮತ್ತು ಇವುಗಳನ್ನು ಅನುಸರಿಸದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುವುದು.

ತುಂಬ ಬೆಳೆಯುಳ್ಳ ವಿಮರ್ಶೆಯನ್ನು ಬರೆದ ಉದಾರವಾದಿ ಮಾರ್ಕ್ಸ್‌ವಾದಿಗಳೂ ಹಲವರಿದ್ದಾರೆಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ‘ಸಾಹಿತ್ಯ ಇತಿಹಾಸದಿಂದ ಬದ್ಧವಾದುದು’ ಎಂಬ ಟೇನನ ತತ್ವವನ್ನು ಮಾರ್ಕ್ಸ್‌ವಾದದ ಮುಖಾಂತರ ಬೆಳಿಸಿಕೊಂಡ ಎಡ್ಮಂಡ್ ವಿಲ್ಸನ್, ವಾಲ್ಟರ್ ಬೆಂಜಮಿನ್, ಸಿಡ್ನಿ ಫಿಂಕಲ್ ಸ್ಟೇನ್ ಮತ್ತು ಲುಕಾಚ್ಸ್ ಇವರಲ್ಲಿ ಮುಖ್ಯರು. ಈ ಉದಾರವಾದಿ ಮಾರ್ಕ್ಸ್‌ವಾದಿಗಳಿಗೆಲ್ಲ ಸಾಮಾನ್ಯವಾದ ಕೆಲವು ಧೋರಣೆಗಳಿವೆ. ಅವು ಯಾವುವೆಂದರೆ : ಸಾಹಿತ್ಯವು ಐತಿಹಾಸಿಕ, ಸಾಮಾಜಿಕ, ಆರ್ಥಿಕ ಶಕ್ತಿಗಳಿಗೆ ಮೂಲಭೂತವಾಗಿ ಒಳಪಟ್ಟಿರುತ್ತದೆ : ಸಾಹಿತ್ಯಕ್ಕೆ ಬೆಲೆ ಕಟ್ಟುವಾಗ ಲೇಖಕನ ಲೋಕದೃಷ್ಟಿ, ತತ್ವ ಪಕ್ಷಪಾತ ಪ್ರಭಾವ ಮಾಡೇ ಮಾಡುತ್ತವೆ; ಸಾಹಿತ್ಯಸೃಷ್ಟಿಯ ಕ್ರಿಯೆ ತರ್ಕಬಾಹಿರವೆನ್ನುವ, ತಂತ್ರಕ್ಕೇ ಹೆಚ್ಚು ಬೆಲೆಕೊಡುವ ಸೌಂದರ್ಯಸಿದ್ಧಾಂತಗಳನ್ನು ಅನುಮಾನದಿಂದ ನೋಡಬೇಕು.

ಎಂಗಲ್ಸ್ ಮತ್ತು ಈ ಉದಾರವಾದಿಗಳ ಧೋರಣೆಯನ್ನು ಅಪಾಯಕಾರಿಯೆಂದು ಜಾಡನೋವ್‌ವಾದಿಗಳು ಯಾಕೆ ತಿಳಿಯುತ್ತಾರೆಂಬುದು ಸ್ಪಷ್ಟ. ಎಂಗೆಲ್ಸ್ ಮಾರ್ಗರೇಟ್ ಹಾರ್ಕ್‌ನೆಸ್‌ಗೆ ಬರೆದ ಅದೇ ಕಾಗದದಲ್ಲಿ ಪ್ರಗತಿಶೀಲನಾದ ಜೊಲಾನಿಗಿಂತಲೂ, ಸಂಪ್ರದಾಯ ವಾದಿಯಾದ ಶ್ರೀಮಂತವರ್ಗದ ಪರ ವಕೀಲಿ ವಹಿಸುವ ಬಾಲ್ಜಾಕನೆ ಹೆಚ್ಚು ದೊಡ್ಡ ಲೇಖಕನೆಂದು ಹೇಳುತ್ತಾನೆ. ಇದಕ್ಕೆ ಎಂಗೆಲ್ಸ್ ಕೊಡುವ ಕಾರಣ ಕುತೂಹಲಕಾರಿಯಾಗಿದೆ. ಬಾಲ್ಜಾಕನ ವೈಯಕ್ತಿಕ ದೃಷ್ಟಿ ಸಂಪ್ರದಾಯದ ಪರವಾಗಿದ್ದರೂ, ಅವನ ಕೃತಿಗಳು ಮಾತ್ರ ಅವನಿಗೆ ಪ್ರಿಯವಾದ ಶ್ರೀಮಂತವರ್ಗ ಯಾಕೆ ಅವನತಿ ಹೊಂದಲೇಬೇಕೆಂಬುದನ್ನು ನಿಷ್ಠುರವಾಗಿ ಚಿತ್ರಿಸುತ್ತವೆ. ಇದಕ್ಕೆ ಕಾರಣ : ಬಾಲ್ಜಾಕ್ ಕಾದಂಬರಿಗಳಲ್ಲಿ ಬಳಸುವ ವಾಸ್ತವ ಶೈಲಿ ಲೇಖಕನ ಪರಿಮಿತ ದೃಷ್ಟಿಕೋನವನ್ನು ಮೀರಿ, ಗೆದ್ದು ನಿಂತು, ಬೇರೊಂದು ಸತ್ಯವನ್ನು ಸೃಷ್ಟಿಸುವುದೇ ಆಗಿದೆ.

ಎಂಗಲ್ಸನ ಈ ಧೋರಣೆಯಿಂದಾಗಿ ಹೊಸದೊಂದು ಸಾಹಿತ್ಯ ಸಿದ್ಧಾಂತವೇ ಹುಟ್ಟಿತು. ಈ ಸಿದ್ಧಾಂತದ ಪ್ರಕಾರ ಸಾಹಿತಿ ತಾನು ನಂಬಿದ ತತ್ವ ಮತ್ತು ತನ್ನ ಸದ್ಯದ ಅರಿವು – ಈ ಎರಡಕ್ಕೂ ಆಚೆಗಿರುವ ಸತ್ಯಗಳನ್ನು ಸೃಷ್ಟಿಸಬಲ್ಲನು ಎಂದಂತಾಯಿತು. ಆದ್ದರಿಂದ ಮಾರ್ಕ್ಸ್‌ವಾದಿಯಾದ ಗೋಲ್ಡ್‌ಮನ್ನನು ಸಾಹಿತ್ಯದ ಇತಿಹಾಸದ ತುಂಬ ತಮ್ಮ ಸ್ಪಷ್ಟ ಉದ್ದೇಶಕ್ಕೆ ವಿರುದ್ಧವಾದ ಸತ್ಯವನ್ನು ಸೃಷ್ಟಿಸುವ ಸಾಹಿತಿಗಳೇ ಬಹಳ ಮಂದಿ ಎನ್ನುತ್ತಾನೆ.

ಸಾಹಿತಿಯ ವೈಯಕ್ತಿಕ ದೃಷ್ಟಿಕೋನಕ್ಕೂ, ಅವನ ಕೃತಿ ತನ್ನ ಸ್ವಂತ ಶಕ್ತಿಯಿಂದಾಗಿ ಹೊಮ್ಮಿಸುವ ವಿಚಾರಕ್ಕೂ ನಡುವೆ ವ್ಯತ್ಯಾಸಗಳಿರುವುದು ಸಾಧ್ಯವೆಂದು ಹೇಳಿದವನು ಎಂಗೆಲ್ಸ್ ಮಾತ್ರ ಅಲ್ಲ; ಲಾರೆನ್ಸನು ಇದೇ ಅರ್ಥಬರುವ ಮಾತುಗಳನ್ನು ಆಡುತ್ತಾನೆ. ಬರಹಗಾರನಿಗೆ ಒಂದು ಸ್ಪಷ್ಟವಾದ ದೃಷ್ಟಿಕೋನವನ್ನು ತರುವಂತಹ ಒಂದು ತತ್ವ ಪ್ರಣಾಲಿ ಅತ್ಯವಶ್ಯವೆಂದೂ, ಆದರೆ ಶೋಧನಾತ್ಮಕವಾದ ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದಾಗ ಲೇಖಕ ತನ್ನ ತತ್ವದ ಮೇರೆಗಳನ್ನು ದಾಟಿ ಹೋಗಬಲ್ಲನೆಂದೂ ಲಾರೆನ್ಸ್ ಏಕಕಾಲದಲ್ಲಿ ನಂಬುತ್ತಾನೆ. ಈ ದೃಷ್ಟಿಯಿಂದ ನೋಡಿದಾಗ ಕಲೆ ಕೃತಿಕಾರನಿಗೆ ತನ್ನನ್ನು ತಾನು ಮೀರುವ ಸಾಧನವಾಗಿ ಪರಿಣಮಿಸುತ್ತದೆ. ಕಾದಂಬರಿಯು ಲೇಖಕನ ಲೋಕದೃಷ್ಟಿಯನ್ನು ವ್ಯಕ್ತಪಡಿಸುವ ಸಾಧನವಾಗಬೇಕೆಂದು ವಾದಿಸುತ್ತ ಲಾರೆನ್ಸ್ ಈ ತಾತ್ಪರ್ಯ ಬರುವಂತಹ ಮಾತುಗಳನ್ನು ಆಡುತ್ತಾನೆ :

ತತ್ವಶಾಸ್ತ್ರ ಮತ್ತು ಕಾದಂಬರಿ ಒಂದಕ್ಕೊಂದು ಹರೊತಾದದ್ದು ಅತ್ಯಂತ ದುರುದೃಷ್ಟಕರ. ಪುರಾಣಗಳ ಕಾಲದಿಂದಲೂ ಎರಡೂ ಒಂದೇ ಆಗಿದ್ದುವು. ನಂತರ ಅರಿಸ್ಟಾಟಲ್, ಥಾಮಸ್ ಆಕ್ವೈನಸ್ ಮತ್ತು ಕಾಂಟ್ರಿಂದಾಗಿ ಎರಡೂ ಜಗಳಗಂಟಿ ದಂಪತಿಗಳಂತೆ ಬೇರೆಯಾದವು. ಆದ್ದರಿಂದ ಕಾದಂಬರಿ ತಿರುಳು ಕಳೆದುಕೊಂಡು ಜಳ್ಳಾಯಿತು, ಮತ್ತು ತತ್ವಜ್ಞಾನ ತೀರ ಅಮೂರ್ತವಾಗಿ ಒಣಗಿಕೊಂಡಿತುಕಾದಂಬರಿ ಒಂದು ಸಣ್ಣ ಪ್ರಪಂಚ; ವಿಚಾರವೊಂದರ ದೃಷ್ಟಿಕೋನವಿಲ್ಲದೆ ಪ್ರಪಂಚದ ವೀಕ್ಷಣೆ ಸಾಧ್ಯವಿಲ್ಲ; ಆದ್ದರಿಂದ ಎಲ್ಲ ಕಾದಂಬರಿಯ ಹಿನ್ನೆಲೆಯಲ್ಲೂ ಯಾವುದಾದರೊಂದು ತತ್ವದ ರೂಪರೇಷೆಯಾದರೂ ಇರುವುದು ಅವಶ್ಯ. ಆದರೆ ಯಾವ ತತ್ವವೇ ಆಗಲಿ, ಕೃತಿಕಾರನ ಬುದ್ಧಿಪೂರ್ವಕ ಉದ್ದೇಶಗಳನ್ನು ಮೀರಿ ಕಲೆಯ ಉದ್ದೇಶಕ್ಕೆ ಅರಿಯಾಳಾಗಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಕಾದಂಬರಿ ಒಂದು ಥೀಸಿಸ್ ಆಗಿಬಿಡುತ್ತದೆ.[5]

ಈ ಮಾತುಗಳಲ್ಲಿ ‘ಕೃತಿಕಾರನ ಬುದ್ಧಿಪೂರ್ವಕ ಉದ್ದೇಶಗಳನ್ನು ಮೀರಿ’ ಎನ್ನುವ ಮಾತುಗಳು ಮುಖ್ಯವಾದವು : ಸಾಹಿತ್ಯಸೃಷ್ಟಿಯೆಂದರೆ ಲಾರೆನ್ಸನಿಗೆ ಎಷ್ಟು ಗಂಭೀರವಾದ ಕ್ರಿಯೆ, ಜೀವನದ ಸಾಧ್ಯತೆಗಳನ್ನು ಕೃತಿಯಲ್ಲಿ ಶೋಧಿಸಲು ಎಷ್ಟೊಂದು ತೆರೆದ ಮನಸ್ಸಿನ ತೊಡಗುವಿಕೆ ಅವಶ್ಯ ಎಂದು ಅವನು ತಿಳಿದಿದ್ದಾನೆ ಎಂಬುದು ಈ ಮಾತುಗಳಲ್ಲಿ ಸೂಚಿತವಾಗುತ್ತದೆ. ಲುಕಾಚ್ಸ್‌ನು ಇದೇ ಅರ್ಥಬರುವ ಮಾತುಗಳನ್ನಾಡುತ್ತಾನೆ :

ತನ್ನ ದಿನನಿತ್ಯದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಲು ಕಲಾವಿದನಿಗೆ ಸಾಧ್ಯವಾಗುವುದೆಂಬ ಕಾರಣಮಾತ್ರದಿಂದ ಕಲಾವಿದ ನಂಬುವ ತತ್ವಕ್ಕೆ ಬೆಲೆ ಬರುವುದಿಲ್ಲ. ಯಾವು ತತ್ವವೇ ಆಗಲಿ ಪರಿಣಾಮಕಾರಿಯಾಗಲು ಕಲಾವಿದನಿಗೆ ತನ್ನ ಸಮಕಾಲೀನ ಪರಿಸರದ ಪ್ರಜ್ಞೆಗೂ ಆಚೆಗೆ, ಸ್ವತಂತ್ರವಾಗಿಯೇ, ತನ್ನ ಸುಪ್ತ ಪ್ರಜ್ಞೆ ಪಡೆದುಕೊಂಡಿರುವ ದೃಷ್ಟಿಕೋನವೊಂದು ಇರುವುದು ಅವಶ್ಯ[6].

ಸುಪ್ತಪ್ರಜ್ಞೆಯ ಮಾತನ್ನು ವೈಜ್ಞಾನಿಕದೃಷ್ಟಿಯುಳ್ಳ ಮಾರ್ಕ್ಸ್‌ವಾದಿಯೊಬ್ಬ ಎತ್ತಿದಾಗ ಆಶ್ಚರ್ಯವಾಗುತ್ತದೆ. ಕಾರಣ, ಲಾರನ್ಸ್‌ನಂಥವರ ಜೀವನದೃಷ್ಟಿಗೆ ಮಾತ್ರ ಸಹಜವಾಗಿ ಒಪ್ಪುವ ವಿಚಾರವಿದು. ಬೌದ್ಧಿಕ ಪ್ರಜ್ಞೆಗೆ ಮೀರಿದ ಸುಪ್ತಭಾವನೆಗಳು ಇವೆ, ಸೃಷ್ಟಿ ಮೂಲತಃ ರಹಸ್ಯ ಮಯವಾದುದು ಎನ್ನುವುದೇ ಲಾರೆನ್ಸ್ ದೃಷ್ಟಿಗೆ ಮೂಲಭೂತವಾದ ಧೋರಣೆ. ಲುಕಾಚ್ಸ್‌ನನ್ನು ಓದುವಾಗ ಮಾರ್ಕ್ಸ್‌ವಾದದಲ್ಲೂ ಬಿರುಕುಗಳಿವೆಯೆ ಎನ್ನುವ ಅನುಮಾನ ಈ ಕಾರಣದಿಂದ ಹುಟ್ಟುತ್ತದೆ. ಇಲ್ಲದಿದ್ದಲ್ಲಿ ಎಂಗೆಲ್ಸ್ ಸಹ ವಾಸ್ತವ ಶೈಲಿಯ ಕಾದಂಬರಿಯ ಪ್ರಕಾರಕ್ಕೆ ಸ್ವತಂತ್ರವಾದ ಜೀವಂತತನ, ಸ್ವಯಂಚಲನಶಕ್ತಿ ಇದೆ ಎಂದು ನಂಬದಿದ್ದ ಪಕ್ಷದಲ್ಲಿ ಹೇಗೆತಾನೆ ಕೃತಿಕಾರನನ್ನೂ ಮೀರಿ ಕೃತಿ ನಿಲ್ಲಬಲ್ಲದು ಎಂದು ಹೇಳುವುದು ಸಾಧ್ಯವಾಗುತ್ತಿತ್ತು?

ಕೃತಿ ತನ್ನ ತಂತ್ರಶೈಲಿಗಳ ಮೂಲಕ ಜೀವಂತ ಪ್ರತಿವಸ್ತುವಾಗುತ್ತದೆ ಎನ್ನುವ ಧೋರಣೆಯನ್ನು ಲಾರೆನ್ಸ್ ತಾಳಿದಾಗ ಸಾಹಿತ್ಯದ ಬಗ್ಗೆ ಕೆಲವುಸಾರಿ ಲಾರೆನ್ಸ್ ವ್ಯಕ್ತಪಡಿಸುತ್ತಿದ್ದ ವಿಚಾರಗಳನ್ನು ತಿಳಿದವರಿಗೆ, ಆಶ್ಚರ್ಯವಾಗಬಹುದು. ಯಾಕೆಂದರೆ ಲಾರೆನ್ಸ್‌ಗೆ ಜೀವನಕ್ಕೆ ಯಾವುದೂ ಸರಿಸಮವಲ್ಲ; ಈಸ್ತೇಟರು ರಸಾಭಿಜ್ಞರು ಸಾಹಿತ್ಯಕ್ಕೆ ತೋರಿಸುವ ಪೂಜ್ಯತೆಯನ್ನು ಕಂಡರೆ ಅವನು ಹೇಸುತ್ತಿದ್ದ. ಸಾಹಿತ್ಯವೆಂದರೆ ‘ಆಡುಗಳು ಗುಡ್ಡದ ಮೇಲೆ ಹಾಕುವ ಹಿಕ್ಕೆ; ಬಿದ್ದ ನೆಲವನ್ನು ಫಲವತ್ತಾಗಿಸುವ ಗೊಬ್ಬರ ಮಾತ್ರ’ ಎನ್ನುವ ತನ್ನ ಹೆಂಡತಿಯ ಧೋರಣೆ ಸರಿ ಎಂದು ಲಾರೆನ್ಸ್ ಒಂದುಕಡೆ ಬರೆದಿದ್ದಾನೆ. ಅಂದರೆ ಸಮಾಜಕ್ರಾಂತಿಗೆ ಸಾಹಿತ್ಯ ಸಾಧನವಾಗಬೇಕೆಂದು ಲೆನಿನ್ ವಾದಿಸಿದಂತೆಯೇ. ಜೀವನಕ್ಕೆ ಸಾಹಿತ್ಯ ಸಹಾಯವಾಗಬೇಕೆಂದು ಲಾರೆನ್ಸ್ ಹೇಳೀದಂತಾಯಿತು. ಆದರೂ ಸಾಹಿತ್ಯ ಸತ್ಯವನ್ನು ಪ್ರಕಟಿಸುವ ಸೃಷ್ಟಿಕ್ರಮ ಅತ್ಯಂತ ಬೆಲೆಯುಳ್ಳದ್ದೆಂದು ಅವನು ಸ್ವಂತ ಅನುಭವದಿಂದ ತಿಳಿದವನು:

ಕಲಾವಿದ ಒಂದು ನೀತಿಯನ್ನು ಪ್ರತಿಪಾದಿಸಲು ಕಥೆ ಬರೆಯಬಹುದು. ಆದರೆ ಸಾಮಾನ್ಯವಾಗಿ ಕಥೆ ಮಾತ್ರ ಇನ್ನೊಂದು ದಿಕ್ಕಿಗೆ ತಿರುಗಿ ನಿಂತುಬಿಡುತ್ತದೆ. ಕಥೆಗಾರ ಇಚ್ಛಿಸಿದ ನೀತಿ ಒಂದಾದರೆ, ತದ್ವಿರುದ್ಧವಾದ ನೀತಿ ಕಥೆಯಾದಾಗಿ ಬಿಡುತ್ತದೆ. ಆದ್ದರಿಂದ ಕಥೆಗಾರರನ್ನು ನಂಬಬೇಡ; ಕಥೆಯನ್ನು ನಂಬು. ವಿಮರ್ಶಕನ ಮೇಲಿರುವ ಹೊಣೆಯೆಂದರೆ ಕಥೆಗಾರನಿಂದ ಕಥೆಯನ್ನು ಪಾರು ಮಾಡುವುದು.[7]

ಆದ್ದರಿಂದ ಕಲೆಯ ಭಾಷೆಯೊಂದೇ ನಿಜವಾದ ಸತ್ಯ ಎನ್ನುವ ತೀರ್ಮಾನಕ್ಕೆ ಲಾರೆನ್ಸ್ ಬರುತ್ತಾನೆ. ಕಥೆಗಾರನಿಂದ ಕಥೆಯನ್ನು ಪಾರುಮಾಡಬೇಕಾಗುತ್ತದೆ, ಅದು ಸಾಧ್ಯ, ಎನ್ನುವ ಈ ರೀತಿಯ ಚಿಂತನೆಯೇ ಸಾಹಿತ್ಯಕೃತಿಯ ಭಾಷೆಯ ಸೂಕ್ಷ್ಮ ವಿಶ್ಲೇಷಣೆಗೆ, ಈ ವಿಶ್ಲೇಷಣೆಯ ಮೂಲಕ ಕಥೆಗಾರನು ಖುದ್ಧಾಗಿ ಉದ್ದೇಶಿಸದಿದ್ದರೂ ಕೃತಿಯ ಶಬ್ದದೇಹದಲ್ಲಿ ಸ್ವಯಂ ಮೈದಾಳಿರುವ ವಿಚಾರಗಳೂ ಸ್ಪಷ್ಟವಾದೀತೆಂಬ ನಂಬಿಕೆಗೆ ನಮ್ಮ ಈಚಿನ ವಿಮರ್ಶಕರನೇಕರನ್ನು ಹಚ್ಚಿದೆ. ಆದ್ದರಿಂದ ಆಧುನಿಕ ವಿಮರ್ಶಕ ಪುಟಗಳ ಮೇಲಿರುವ ಮಾತುಗಳನ್ನು ಪರೀಕ್ಷಿಸು ಎನ್ನುತ್ತಾನೆ. ಲೀವಿಸ್ ಕೂಡ. ಸಾಹಿತ್ಯ ವಿಮರ್ಶಕನ ಹೊಣೆಯನ್ನು ಹೀಗೆಯೇ ಕಾಣುತ್ತಾನೆ : ಅಂದರೆ, ಕೃತಿಯಲ್ಲಿ ಸಂಭವಿಸದಿರುವ ಕೃತಿಕಾರನ ಉದ್ದೇಶಗಳು ಇದ್ದರೂ ಇಲ್ಲದಂತೆ ಎನ್ನುವ ಲೀವಿಸ್, ಕೃತಿಯ ಒಳಗೆ ಉಸಿರಾಡುತ್ತಿರುವ ಜೀವಂತ ಉದ್ದೇಶ ಕೃತಿಕಾರ ಸ್ಪಷ್ಟವಾಗಿ ಘೋಷಿಸಿದ ಉದ್ದೇಶಕ್ಕಿಂತ ಬೇರೆಯಿರಬಹುದು ಎಂದು ಹೇಳುತ್ತಾನೆ.

ನಾನು ಈ ಲೇಖಕರನ್ನೆಲ್ಲ ಇಲ್ಲಿ ಒಟ್ಟಿಗೆ ಕಲೆಹಾಕಿರಲು ಒಂದು ಸ್ಪಷ್ಟಕಾರಣವಿದೆ. ಎಂಗೆಲ್ಸ್ ಮತ್ತು ಲುಕಾಚ್ಸರು ಸಮಾಜಕ್ರಾಂತಿಗೆ ಬದ್ಧರು; ಲಾರೆನ್ಸ್ ಜೀವನದ ಸಾಧ್ಯತೆಗಳೇನು ಎಂಬುದನ್ನು ಹುಡುಕಲು ಬದ್ಧಕಂಕಣನಾದವನು; ಲೀವಿಸ್‌ನ ನಿಷ್ಠೆ ಸೌಂದರ್ಯೋಪಾಸನೆಯಿಂದ ಹುಟ್ಟಿದ್ದಲ್ಲ, ಸಮಾಜ ಕುಟುಂಬದಂತಹ ಜೀವಂತ ಘಟಕವಾಗಿರಬೇಕು ಎಂಬ ಜೀವನಮೌಲ್ಯಕ್ಕೆ ಗಂಟುಬಿದ್ದದ್ದು, ಆದ್ದರಿಂದ ಇವರಲ್ಲಿ ಯಾರೊಬ್ಬನನ್ನೂ ಈಸ್ತೇಟ್ ಅನ್ನಲು ಸಾಧ್ಯವಿಲ್ಲ; ಬದಲಾಗಿ, ಮನುಷ್ಯ ಸಾಹಿತ್ಯೇತರವಾದ ದೊಡ್ಡದೊಂದು ಉದ್ದೇಶಕ್ಕಾಗಿ ತನ್ನನ್ನು ತಾನು ಮುಡುಪು ಮಾಡಿಕೊಳ್ಳಬೇಕೆಂದು ಇವರು ನಂಬಿದವರು. ಜೊತೆಗೇ ಈ ಎಲ್ಲರೂ ಕೃತಿಕಾರನ ಉದ್ದೇಶಕ್ಕೆ ಮೀರಿ ಕೃತಿ ನಿಲ್ಲಬಲ್ಲದು ಎಂದೂ ನಂಬುವವರು.

ಎಂಗೆಲ್ಸ್, ಲಾರೆನ್ಸ್, ಲೀವಿಸ್ ಮತ್ತು ಲುಕಾಚ್ಸರು ಸಾಹಿತ್ಯಶಕ್ತಿಯ ಸಾಹಿತ್ಯಶಕ್ತಿಯ ಬಗ್ಗೆ ಹೀಗೆ ಯೋಚಿಸುವುದರಿಂದ ಒಂದು ಸಮಸ್ಯೆಯೇಳುತ್ತದೆ. ಸಾಹಿತಿ ಕ್ರಾಂತಿಕಾರಕವಾದ ರಾಜಕೀಯ ತತ್ವಕ್ಕೆ ನಿಷ್ಠನಾಗಿ ಬರೆಯಬೇಕೆ ಬೇಡವೆ? ಕೃತಿಕಾರನ ಉದ್ದೇಶಕ್ಕಿಂತಲೂ ಬೇರೆಯಾದ ಉದ್ದೇಶವನ್ನೇ ಕೃತಿ ಪ್ರಕಟಿಸಲು ಸಾಧ್ಯ ಎಂದು ಈ ಎಲ್ಲ ಲೇಖಕರೂ ಒಂದಲ್ಲ ಒಂದು ಕಾರಣದಿಂದ ನಂಬುವುದರಿಂದ ಕೃತಿಕಾರನ ನಿಷ್ಠೆಗೆ ಏನು ಬೆಲೆಯಿದ್ದ ಹಾಗಾಯಿತು?

ಸಾಹಿತ್ಯೇತರ ಮೌಲ್ಯಗಳಿಗೆ ಈ ಎಲ್ಲರೂ ಬದ್ಧರಾಗಿರುವುದರಿಂದಲೇ, ಜೊತೆಗೇ ಸಾಹಿತ್ಯದ ಅನನ್ಯವಾದ ಸ್ವತಂತ್ರ ಸಾಕ್ಷಿತ್ವವನ್ನು ಈ ಎಲ್ಲರೂ ಬಯಸುವುದರಿಂದಲೇ ಸಾಹಿತ್ಯದಲ್ಲಿ ನಿಷ್ಠೆಯ ಪ್ರಶ್ನೆ ಹೀಗೆ ಜಟಿಲವಾಗುತ್ತದೆ. ಕಾರಣ, ತೋರಿಕೆಗೆ ಇವರ ನಿಲುವು ದ್ವಂದ್ವಾತ್ಮಕವಾದುದು. ಸಾಹಿತ್ಯೇತರ ನಿಷ್ಠೆಗೆ ಇವರು ಹೆಚ್ಚು ಬೆಲೆ ಕೊಟ್ಟಿದ್ದೇ ಆದರೆ ಸಾಹಿತ್ಯವನ್ನು ಬರಿ ಸಾಧನವಾಗಿ ಉಪಯೋಗಿಸುವ ಬಗ್ಗೆ – ಈ ನಿಷ್ಠೆ ಅತ್ಯಂತ ತುರ್ತಿನಿಂದ ಅನುಭವಿಸಿದ್ದಾದರೆ – ಇವರು ಹಿಂಜರಿಯಕೂಡದು. ಹಾಗೆಯೇ ಸಾಹಿತ್ಯಪ್ರಕಾರದಲ್ಲಿ ನಡೆಸುವ ಶೋಧನೆಯೇ ಎಲ್ಲಕ್ಕೂ ಹೆಚ್ಚಿನ ಬೆಲೆಯುಳ್ಳದ್ದಾದರೆ ಸಾಹಿತ್ಯೇತರ ನಿಷ್ಠೆ ಕೃತಿನಿರ್ಮಾಣದ ಸಾಕ್ಷಿಕ್ರಿಯೆಗೆ ಬರಿಯೊಂದು ತೊಡರಾಗುತ್ತದೆ ಅಷ್ಟೆ. ನಿಷ್ಠೆಯೇ ಮುಖ್ಯವೆನ್ನುವ ಸ್ಟಾರ್ಮ್ ಜೇಂಸನ್‌ರಂತಹ ಮೂವತ್ತರ ದಶಕದ ಕಾದಂಬರಿಕಾರರು ಲೆನಿನ್‌ನಂತಾಗಲು ಸಾಧ್ಯವಿದ್ದರೆ ಯಾಕೆ ಕಾದಂಬರಿ ಕಾರನಾಗಬೇಕು ಎಂದು ಕೇಳುತ್ತಾರೆ:

ಕಾದಂಬರಿಕಾರ (ಕಮ್ಯುನಿಸ್ಟ್ ನಾಯಕರಲ್ಲೊಬ್ಬನಾದ) ಡಿಮಿಟ್ರೋಫ್ನಂತಹ ಶೂರನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸಾಧ್ಯವಿದಿದ್ದರೆ, ಅವನೂ ಡಿಮಿಟ್ರೋಫ್ನಷ್ಟೇ ದೊಡ್ಡ ಮನುಷ್ಯನಾಗಿರುತ್ತಿದ್ದ. ಮತ್ತು ಕಾರಣದಿಂದ ಲೇಖನದಲ್ಲಿ ಹೊತ್ತು ಕಳೆಯದೆ ಇನ್ನೂ ಬೆಳೆಯುಳ್ಳ ಕೆಲಸವನ್ನು ಅವನು ಮಾಡಬೇಕಾಗಿ ಬರುತ್ತಿತ್ತು.[8]

ತತ್ವನಿಷ್ಠೆ, ಸಾಹಿತ್ಯದ ಸ್ವತಂತ್ರ ಸಾಕ್ಷಿತ್ವದ ಬಗ್ಗೆ ಗೌರವ – ಈ ಎರಡು ನಿಲುವುಗಳೂ ಒಂದಕ್ಕೊಂದು ಹೊರತಾಗಿ ಅತಿಯಲ್ಲಿ ನಿಂತಾಗ ಅರ್ಥಹೀನವಾಗುತ್ತವೆ. ಒಂದು ನಿಲುವು ಗೊಡ್ಡು ಪ್ರಚಾರದಲ್ಲಿ ಕೊನೆಯಾದರೆ, ಇನ್ನೊಂದು ಸೌಂದರ್ಯವೇ ಪರಮ ಮೌಲ್ಯವೆನ್ನುವ ಬರಡುರೂಪಗಳ ಸೃಷ್ಟಿಯಾಗಿಬಿಡುತ್ತದೆ. ಕೃತಿಕಾರನೂ ಸಮಾಜದಲ್ಲಿ ಬದುಕುವವನಾದ್ದರಿಂದ, ರಾಜಕೀಯದಲ್ಲಿ ಸಮಾಜದ ಅಳಿವು ಉಳಿವಿನ ಪ್ರಶ್ನೆಯೇ ಇತ್ಯರ್ಥವಾಗಬೇಕಾದ ಸನ್ನಿವೇಶ ಒದಗಿದಾಗ – ಉದಾಹರಣೆಗೆ ಮೂವತ್ತರ ದಶಕದ ಯೂರೋಪಿನಲ್ಲಿ ಆದಂತೆ – ಸಾಹಿತಿ ವೈಯಕ್ತಿಕವಾಗಿ ಅಲ್ಲದೆ ತನ್ನ ಬರಹದ ಸಂದರ್ಭದಲ್ಲೂ ನಿಷ್ಠೆಯ ಪ್ರಶ್ನೆಯನ್ನು ಎದುರಿಸಲೇಬೇಕಾಗುತ್ತದೆ. ಹಿಟ್ಲರನ ಜರ್ಮನಿ ಯೂರೋಪ್ ಸಾಹಿತ್ಯದ ಅತ್ಯುತ್ತಮ ಕೃತಿಗಳನ್ನು ಬೆಂಕಿಗೆಸೆಯುತ್ತಿದ್ದಾಗ, ಯಹೂದ್ಯರನ್ನು ಕೊಲ್ಲುತ್ತಿದ್ದಾಗ, ಸ್ಟಾಲಿನ್ನಿನ ರಷ್ಯ ಲೇಖಕರ ಬಾಯಿಗೆ ಬೀಗಹಾಕಿ ಕೂರಿಸಿದಾಗ, ಸಾಹಿತಿಯ ನಿಷ್ಠೆ ಯಾವ ಕಡೆಗೆ ಎನ್ನುವ ಪ್ರಶ್ನೆ ಅವನ ಬರಹದಲ್ಲೂ ಎದ್ದೇ ಏಳುತ್ತದೆ. ಇಂತಹ ಸಂದರ್ಭದಲ್ಲಿ ಸಾಹಿತಿ ಯಾವುದಕ್ಕೆ ತನ್ನ ಮುಖ್ಯ ಗಮನವನ್ನು ಕೊಡುತ್ತಾನೆ, ಕೊಡಬೇಕು ಎನ್ನುವುದೇ ಮುಖ್ಯ ಪ್ರಶ್ನೆಯಾಗುತ್ತದೆ. ವರ್ಜಿನಿಯಾ ಪುಲ್ಫ್‌ಗಾದಂತೆ ಮನುಷ್ಯನ ಅಂತರಂಗದ ಸೂಕ್ಷ್ಮ ವೀಕ್ಷಣೆ ಸಾಹಿತಿಯ ಮುಖ್ಯ ಉದ್ದೇಶವಾಗಬೇಕೋ, ಅಥವಾ ತನ್ನ ಸದ್ಯದ ಪರಿಸರದ ಕ್ಷುಬ್ಧತೆಯನ್ನು ಎದುರಿಸಲು ಅವನ ಎಲ್ಲ ಶಕ್ತಿಗಳೂ ಒದಗಿ ಬರಬೇಕೊ? ಮೂವತ್ತರ ದಶಕದ ಯೂರೋಪಿಯನ್ ಸಾಹಿತಿಗಳಲ್ಲಿ ಅನೇಕರಿಗೆ ಮಾರ್ಕ್ಸ್‌ವಾದ ತಮ್ಮ ಪರಿಸರದ ಕ್ಷೋಭೆ ಹಿಂಸೆಗಳನ್ನು ಅರ್ಥಮಾಡಿಕೊಳ್ಳಲು ಅವಶ್ಯವಾದ ದೃಷ್ಟಿಕೋನವಾಗಿ ಕಂಡಿತು – ಯಾಕೆಂದರೆ ಇಂತಹ ಸಂದರ್ಭಗಳಲ್ಲಿ ಒಂದು ದೃಷ್ಟಿಕೋನದ ಅವಶ್ಯಕತೆ (ಅದು ಕ್ರಿಶ್ಚಿಯಾನಿಟಿಯೋ ರಾಜಕೀಯ ತತ್ವವೋ ಆಗಿರಬಹುದು) ಎದ್ದೇ ಏಳುತ್ತದೆ. ಆದರೆ ನಿಷ್ಠೆಯೆಂದರೆ, ಒಂದು ಸನ್ನಿವೇಶವನ್ನು ಸಾಹಿತ್ಯಕೃತಿಯನ್ನು ಅರ್ಥಮಾಡಿಕೊಳ್ಳುವ ಸಾಹಿತಿಯ ಪ್ರಯತ್ನ ಮಾತ್ರವಲ್ಲ : ಆ ಬಗ್ಗೆ ಓದುಗರ ಪ್ರತಿಕ್ರಿಯೆಗಳನ್ನು ಒಂದು ವಿಶಿಷ್ಟ ದಿಕ್ಕಿನಲ್ಲಿ ಕಟ್ಟಿ ಅವರನ್ನು ಕಾರ್ಯೊನ್ಮುಖರಾಗಿ ಮಾಡುವ ಜವಾಬ್ದಾರಿ ಕೂಡ. ಇದು ಸರಿಯೆ – ಯಾಕೆಂದರೆ, ಮೂವತ್ತರ ದಶಕದಲ್ಲಿ ಸನ್ನಿವೇಶ ಎಷ್ಟು ವಿಷಮವಾಗಿತ್ತೆಂದರೆ, ಆ ಬಗ್ಗೆ ಏನನ್ನಾದರೂ ಮಾಡಲೇಬೇಕು ಎನ್ನುವ ತುರ್ತುನ್ನು ಅನೇಕ ಲೇಖಕರು ಅನುಭವಿಸಿದ್ದು ಇದಕ್ಕೆ ಉದಾಹರಣೆ.

ಆದರೆ ಇಲ್ಲೆ ಸಾಹಿತ್ಯದ ಸಮಸ್ಯೆಯೂ ಏಳುತ್ತದೆ. ಈ ಸಮಸ್ಯೆ ರಾಜಕೀಯ ನಿಷ್ಠೆಗೆ ಮಾತ್ರವಲ್ಲದೆ, ಧಾರ್ಮಿಕ ನಿಷ್ಠೆಗೂ, ಕೊನೆಗೆ ಲಾರೆನ್ಸ್‌ರಂಥವರ ಜೀವನ ನಿಷ್ಠೆಗೂ ಸಂಬಂಧಿಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.

ಲಾರೆನ್ಸಿನ ಪ್ರವಾದಿತನ ಅತಿಗೆ ಹೋಗುವ ‘ಲೇಡಿ ಚಾಟರ್ಲೀಸ್ ಲವರ್’ ಕಾದಂಬರಿ ಪ್ರಚಾರದ ಧಾಟಿಯಲ್ಲಿ ತನ್ನ ಸೂಕ್ಷ್ಮಗಳನ್ನು ಕಳೆದುಕೊಳ್ಳುವುದನ್ನು ಇಲ್ಲಿ ಉದಾಹರಿಸಬಹುದು. ಆದರೆ ಇದೇ ಪ್ರವಾದಿ ಲಾರೆನ್ಸ್ ‘ವಿಮೆನ್ ಇನ್ ಲವ್’ ಕಾದಂಬರಿಯ ನಾಯಕ ಬರ್ಕಿನ್‌ನಲ್ಲೂ ತಲೆಹಾಕುತ್ತಾನೆ. ಆದರೆ ಇಲ್ಲಿ ಲಾರೆನ್ಸ್ ಬರ್ಕಿನ್‌ನ ವಾದವನ್ನು ಜೆರಾಲ್ಡ್ ಎಂಬ ಇನ್ನೊಂದು ಪಾತ್ರದ ಪ್ರತಿವಾದಕ್ಕೆ ಎದುರುಮಾಡಿ, ಎರಡು ದೃಷ್ಟಿಗಳನ್ನೂ ಅನ್ಯೋನ್ಯಶೋಧನೆಗೆ ಒಳಪಡಿಸಿ, ಹೀಗೆ ಹುಡುಕುವ ಕ್ರಿಯೆಯಲ್ಲಿ ತನಗೇ ತಿಳಿಯದ ಆಳಗಳನ್ನು ಓದುಗರಿಗೆ ಸೂಚಿಸಿ, ತನ್ನ ನಿಷ್ಠೆಗೆ ವಿರುದ್ಧವಾದ ಸತ್ಯಗಳನ್ನೂ ಓದುಗರ ಸಂವೇದನೆಗೆ ಒಡ್ಡಿ ಕಥೆಗಾರರನ್ನು ಬಿಟ್ಟು ಸ್ವತಂತ್ರ ನಿಲ್ಲುವ ಕಥೆಯೊಂದನ್ನು ಸೃಷ್ಟಿಸಿಬಿಡುತ್ತಾನೆ. ಇಂಥ ಕಡೆ ಕಥೆಗಾರನನ್ನು ನಂಬಬೇಡ, ಕಥೆಯನ್ನು ನಂಬು ಎನ್ನುವ ಮಾತು ಸರಿಯೆನ್ನಿಸುತ್ತದೆ.

ಉದ್ದೇಶಬದ್ಧರಾದ, ಆದರೆ ಸಾಹಿತ್ಯಕೃತಿಯ ಜೀವಂತತನವನ್ನು ಅರಿತ, ಲೇಖಕರಿಗೆಲ್ಲರಿಗೂ ಈ ನಿಷ್ಠೆಯ ಪ್ರಶ್ನೆ ಗಾಢವಾಗಿಯೇ ಉಳಿಯುತ್ತದೆ. ಕಾರಣ, ನಿಜವಾದ ಕಲಾಕೃತಿಯಲ್ಲಿ – ಸೃಷ್ಟಿಕ್ರಿಯೆಯ ಸನ್ನಿವೇಶವೇ ಅಂಥದಾದ್ದರಿಂದ – ಯಾವ ತತ್ವನಿಷ್ಠೆಯೂ ಬರಿಯ ಪ್ರಚಾರದ ಮಟ್ಟದಲ್ಲಿ ಉಳಿಯುವುದು ಸಾಧ್ಯವಿಲ್ಲ. ಯಾವ ಸಾಹಿತ್ಯಕೃತಿಯಾಗಲಿ ನಮ್ಮನ್ನು ಕ್ರಿಯಾಮುಖರನ್ನಾಗಿ ಮಾಡುವುದಕ್ಕಿಂತ ಹೆಚ್ಚಾಗಿ ಧ್ಯಾನಿಸಲು ಇತ್ತು ಆಹ್ವಾನವಾದ್ದರಿಂದ, ಕೃತಿಕಾರನ ಸ್ವಂತ ನಿಷ್ಠೆಯೂ ಉಳಿದ ಸಂಗತಿಗಳಂತೆಯೇ ಕೃತಿಯೊಳಕ್ಕೆ ಶೋಧಿತವಾಗಲು ಬರುತ್ತದೆ. ಕೃತಿ ನಿರ್ಮಾಣ ಮುಖ್ಯವಾಗಿ ಒಳಗಿರುವುದನ್ನು ಹೊರಪಡಿಸುವ ಕ್ರಿಯೆ: ಹೀಗೆ ತನ್ನಿಂದ ಹೊರ ಬಂದದ್ದು ತನ್ನನ್ನು ಬಿಟ್ಟು ನಿಂತಾಗಲೂ ಓದುಗನಿಗೂ ಜೀವಂತವಾಗಿರುವುದಕ್ಕೆ ಕೃತಿಕಾರ ಒಳ್ಳೆ ಕಸುಬುದಾರನಾಗಿರಬೇಕು. ನಿರ್ಲಿಪ್ತ ಅನ್ವೇಷಕನಾಗಿರಬೇಕು, ಜೊತೆಗೇ ತುರ್ತಿನಿಂದ, ತೀವ್ರವಾಗಿ, ತಾನು ಸೃಷ್ಟಿಸುತ್ತಿರುವುದನ್ನು ಒಳಗಿನಿಂದ ತಿಳಿದವನಾಗಿರಬೇಕು. ಅಂದರೆ ಕೃತಿಯ ಒಳಗೂ ಹೊರಗೂ ಏಕಕಾಲದಲ್ಲಿ ಹೀಗೆ ನಿಂತು ಅನುಭವಿಸಬಲ್ಲ, ರೂಪಿಸಬಲ್ಲ ಶಕ್ತಿ – ಶೋಧನೆ – ಸೃಷ್ಟಿಯ ಈ ಸಂದರ್ಭದಲ್ಲಿ – ಅವನಿಗಿರಬೇಕು. ಆಗ ಕೃತಿಕಾರನ ನಿಷ್ಠೆ ಅವನು ತನ್ನ ಒಳಗಿನಿಂದ ತೀವ್ರ ತುರ್ತಿನಲ್ಲಿ ಅನುಭವಿಸಿದ ವಿಷಯವೂ, ಜೊತೆಗೇ ತಾನು ಹೊರಗೆ ನಿಂತು ಕೃತಿಯ ಒಳಗೆ ಶೋಧಿತವಾಗಲು ಬಿಟ್ಟ ಉತ್ಕಟತೆಯೂ ಆಗಿಬಿಡುತ್ತದೆ. ಓದುಗನಿಗೂ, ಕೃತಿಗೂ, ಬರಹಗಾರನಿಗೂ ನಡುವೆ ಅರ್ಥಪೂರ್ಣ ಸಂಬಂಧ ಏರ್ಪಡಲು ಈ ಮೂರರ ನಡುವೆಯೂ ಅವಶ್ಯಕವಾದ ‘ದೂರ’ಗಳನ್ನು ಕೃತಿನಿರ್ಮಾಣದ ಹೊತ್ತಿನಲ್ಲಿ ಸಾಧಿಸುವುದು ಅವಶ್ಯವೆನ್ನುವುದೂ ಇಲ್ಲಿ ಮುಖ್ಯವಾದ ಮಾತು. ಯಾಕೆಂದರೆ ನಾವು ಬಯಸುವ ಸಾಹಿತ್ಯಾನುಭವದ ‘ಹತ್ತಿರ’ಕ್ಕಾಗಿ ಸೃಷ್ಟಿಕ್ರಿಯೆಯ ಸನ್ನಿವೇಶದಲ್ಲಿ ಈ ‘ದೂರ’ ಅತ್ಯವಶ್ಯ. ಆದ್ದರಿಂದ ಒಬ್ಬ ಸಾಹಿತಿ ಎಷ್ಟು ಹೆಚ್ಚು ಒಂದು ಉದ್ದೇಶಕ್ಕೆ ಬದ್ಧನಾಗಿರುತ್ತಾನೊ, ಅಷ್ಟು ಹೆಚ್ಚು ಅವನಿಗೆ ಈ ‘ದೂರ’ವನ್ನು ಸಾಧಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆಯೇ, ಯಾವ ಸಾಹಿತಿ ಈ ‘ದೂರ’ವನ್ನು ಸಾಧಿಸಿಕೊಳ್ಳುವುದು ಅತ್ಯಂತ ಕಷ್ಟಸಾಧ್ಯವಾದರೂ ಸಾಧಿಸಿಕೊಳ್ಳುತ್ತಾನೊ, ಅಂಥವನು ಮಾತ್ರ ಬಹಳ ದೊಡ್ಡ ಲೇಖಕನಾಗುತ್ತಾನೆ. ಈ ಕಷ್ಟಸಾಧ್ಯವಾದ ‘ದೂರ’ವನ್ನು ಸಾಧ್ಯವಾಗಿಸುವುದು ಲೇಖಕ ಕೃತಿಯಲ್ಲಿ ಬಳಸುವ ತಂತ್ರ. ಆದ್ದರಿಂದ ಒಳ್ಳೆಯ ಕೃತಿಯಲ್ಲಿ ತಂತ್ರ ಕಲೆಯ ಸಫಲತೆಗೆ ಎಷ್ಟೋ ಅಷ್ಟೇ ಕೃತಿಕಾರ ತನ್ನನ್ನು ತಾನು ಗೆದ್ದು, ಮೀರಿ, ವ್ಯಕ್ತಗೊಳಿಸಿಕೊಳ್ಳುವುದಕ್ಕೆ ಸಾಧನವಾಗುತ್ತದೆ.

ಸಾಹಿತ್ಯೇತರ ಮೌಲ್ಯದಲ್ಲಿ ಲೇಖಕನಿಗೆ ನಿಷ್ಠೆಯಿರಬೇಕು. ಆದರೆ ಯಾವ ಉದ್ದೇಶಕ್ಕೂ ಸಾಹಿತ್ಯ ಬರಿಯ ಸಾಧನವಾಗಕೂಡದು ಎಂಬ ಮಾತುಗಳು ತೋರಿಕೆಗೆ ವಿರುದ್ಧವಾಗಿ ಕಾಣಬಹುದು. ಆದರೆ ಈ ವಿರುದ್ಧ ಸೆಳೆತಗಳಿಗೆ ಸಿಕ್ಕ ಲೇಖಕರು ಮಾತ್ರ ಶ್ರೇಷ್ಠ ಕೃತಿಗಳನ್ನು ನಿರ್ಮಿಸಿದ್ದಾರೆಂಬುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ವಿಷಯ. ಟಾಲ್‌ಸ್ಟಾಯ್, ಲಾರೆನ್ಸ್, ಮಾಲ್ರೊ, ಸಾರ್ತ್ರ್ ಅಂಥವರು ಕೃತಿಗಳು ನಮಗೆ ಪ್ರಿಯವಾಗಲು ಕಾರಣ ಇದೇ.

ಬರಿಯ ಕ್ರಿಯೆಯಲ್ಲಿ ಮಾತ್ರ ನಂಬಿದ ಕ್ರಾಂತಿಕಾರನಿಗೆ ಸಾಹಿತ್ಯದ ಅಗತ್ಯವಿಲ್ಲ. ಸಂಗೀತದಿಂದ ಮನಸ್ಸು ಬಹು ಮೃದುವಾಗಿಬಿಟ್ಟೀತೆಂದು ಲೆನಿನ್ ಹೆದರುತ್ತಿದ್ದ ಎನ್ನುತ್ತಾರೆ. ಗಾಂಧೀಜಿ ಮೆಚ್ಚುತ್ತಿದ್ದ ಸಾಹಿತ್ಯವೆಂದರೆ ನೀತಿಪರ ಕಥೆಗಳು, ಭಜನೆ, ಕೀರ್ತನೆ – ಇಷ್ಟೇ. ಕ್ರಿಯೆಯಲ್ಲಿ ಸದಾ ಉದ್ಯುಕ್ತನಾದ ಕ್ರಾಂತಿಕಾರನಿಗೆ ಸಾಹಿತ್ಯಕೃತಿ ತನ್ನ ಕರ್ಷಣೆಯ ಕ್ಷೇತ್ರದಲ್ಲಿ ನಿಂತು ಧ್ಯಾನಿಸಲು, ಶೋಧಿಸಲು ನೀಡುವ ಆಹ್ವಾನ ಅನುಮಾನಾಸ್ಪದವಾಗಿ ಕಂಡರೆ ಆಶ್ಚರ್ಯವಲ್ಲ. ಆದರೆ ಕ್ರಾಂತಿಕಾರನಿಗೆ ಸಾಹಿತ್ಯ ‘ಒಂದು ಸಣ್ಣ ಚಕ್ರ ಒಂದು ಸ್ಕ್ರೂಮೊಳೆ’ಯಾಗಬೇಕೆಂದು ಕೇಳುವ ಅಧಿಕಾರ ಮಾತ್ರ ಇಲ್ಲ. ಯಾಕೆಂದರೆ ಹಾಗಾದದ್ದು ಸಾಹಿತ್ಯವಾಗಿ ಉಳಿಯುವುದಿಲ್ಲ.

ಸೂಚನೆ:

ಉದ್ಧೃತ ವಾಕ್ಯಗಳ ಪದಶಃ ಭಾಷಾಂತರವನ್ನು ನಾನು ಕೊಟ್ಟಿಲ್ಲ; ಕನ್ನಡದಲ್ಲಿ ಸರಳವಾಗಲಿ ಎಂಬ ದೃಷ್ಟಿಯಿಂದ ತಾತ್ಪರ್ಯ ಕೊಟ್ಟಿದ್ದೇನೆ ಅಷ್ಟೆ.

ಜಾರ್ಜ್ ಸ್ಪೈನರ್ (Encounter, Vol XI, No. 5, Nov. 1958) ಬರೆದ ಲೇಖನವೊಂದನ್ನು ನನ್ನ ಲೇಖನದುದ್ದಕ್ಕೂ ಬಳಸಿಕೊಂಡಿದ್ದೇನೆ ಎನ್ನುವುದನ್ನು ಇಲ್ಲಿ ನಾನು ಕೃತಜ್ಞತೆಯಿಂದ ಸ್ಮರಿಸಬೇಕು. ಆದರೆ ಲೇಖನದ ಒಟ್ಟು ನಿಲುವಿಗೆ ನಾನೇ ಜವಾಬ್ದಾರ.

—-
ಹ್ಯುಮನಿಟಿ ರೆವ್ಯು೧೯೬೯ ಜುಲೈಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಅನುವಾದ.

* * *


[1]    Literature and Art – (Selections from the writings of Marx and Engles), p. 38 – 40

[2]    Literature and Art – (Selections from the writings of Marx and Engles), p. 38 – 40

[3]    “Party Organisation and Party Literature”, in Novia Jizn, Nov. 1905

[4]    Lukacs : The Meaning of Contemporary Realism, P. 27 (ಉದ್ಧೃತ)

[5]    “Surgery for the Novel of Bomb” in Selected Literary Criticism (SLC), p. 117 ಮತ್ತು“Study of Thomas Hardy”, SLC. p. 188

[6]    “Franz Kafka of Thomas Mann?”, The Meaning of Contemporary Realism, p. 57

[7]    SLC, p. 297

[8]    “Documents” Fact, July 1937, p. 1 – 2.