೧೯೬೦ರ ದಶಕ ಮುಗಿಯುವಷ್ಟರ ಹೊತ್ತಿಗೆ ನನ್ನ ‘ಸಂಸ್ಕಾರ’, ‘ಪ್ರಶ್ನೆ’ಯ ಹಲವು ಕತೆಗಳು, ಗೋಪಾಲಕೃಷ್ಣ ಅಡಿಗರ ಕಾವ್ಯಕ್ಕೆ ಬರೆದ ಮುನ್ನುಡಿ ಪ್ರಕಟವಾಗಿದ್ದವು. ನನ್ನ ಕಣ್ಣೆದುರಿಗೆ ವಿಮರ್ಶೆಯ ಹೊಸ ಪಂಥವನ್ನು ಹಿಡಿದ ಎಂ.ಜಿ. ಕೃಷ್ಣಮೂರ್ತಿಯಂತವರಿದ್ದರು. ‘ಸಂಸ್ಕಾರ’, ‘ಪ್ರಶ್ನೆ’, ‘ಮೌನಿ’ ಈ ಕೃತಿಗಳ ನಂತರ ಕೆಲವು ಕಾಲ ನನಗೆ ಯಾವ ಕೃತಿಯನ್ನೂ ಬರೆಯಲು ಸಾಧ್ಯವಾಗಲಿಲ್ಲ. ಹೊಸ ವಿಚಾರಗಳ ಅಲೆಯೊಂದು ಕನ್ನಡದಲ್ಲಿ ಸೃಷ್ಟಿಯಾಗದಿದ್ದಲ್ಲಿ ನವೋದಯ ಕಾಲದಲ್ಲಿ ಹುಟ್ಟಿದ ಹಲವು ವಿಚಾರಗಳು ಹೊಸ ದಿಕ್ಕಿನಲ್ಲಿ ಬೆಳೆಯಲಾರವು ಎಂದು ನನಗನ್ನಿಸಿತು. ನನ್ನ ಪುಣ್ಯವೆಂದರೆ ಸತತವಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ವಿಚಾರಗಳನ್ನಲ್ಲದೆ ರಾಜಕೀಯ ವಿಚಾರಗಳನ್ನು ಚರ್ಚಿಸುವ ಸ್ನೇಹಿತರಿದ್ದರು. ರಾಜಕೀಯದಿಂದ ಶುರುವಾದ ಚರ್ಚೆ ಸಾಹಿತ್ಯದಲ್ಲಿ ಕೊನೆಗಾಣುತ್ತಿತ್ತು. ಸಾಹಿತ್ಯದಿಂದ ಶುರುವಾದ ಚರ್ಚೆ ರಾಜಕೀಯದಲ್ಲಿ ಕೊನೆಗಾಣುತ್ತಿತ್ತು. ಇಂತಹ ಒಂದು ಸನ್ನಿವೇಶ ನನ್ನ ಸುತ್ತ ಇತ್ತು. ರಾಜೀವ ತಾರಾನಾಥ, ವಿಶ್ವನಾಥ ಮಿರ್ಲೆ, ಶ್ರೀನಿವಾಸರಾವ್, ಶಾಂತವೇರಿ ಗೋಪಾಲಗೌಡ ಇವರೆಲ್ಲ ನನ್ನ ಆತ್ಮೀಯರಾಗಿದ್ದರು. ಮಾರ್ಕ್ಸ್‌ವಾದದಿಂದಲೂ, ಲೋಹಿಯಾವಾದದಿಂದಲೂ ಪ್ರಭಾವಿತನಾದ ನಾನು ಮಾರ್ಕ್ಸ್‌ವಾದದ ಬಗ್ಗೆ ಅಭಿಮಾನವನ್ನೂ, ಅನುಮಾನವನ್ನೂ ಒಟ್ಟಾಗಿ ಅನುಭವಿಸತೊಡಗಿದ್ದೆ. ಈ ಸಂದರ್ಭದಲ್ಲಿ ಹುಟ್ಟಿಕೊಂಡ ಆಲೋಚನೆಗಳು ‘ಪ್ರಜ್ಞೆ ಮತ್ತು ಪರಿಸರ’ದ ಹಲವು ಲೇಖನಗಳಲ್ಲಿವೆ. ೭೦ರ ದಶಕದ ಪ್ರಾರಂಭದ ಮುಖ್ಯ ಪ್ರಯತ್ನಗಳಲ್ಲಿ ಇದೂ ಒಂದು. ನನ್ನ ಜೊತೆ ಆಗ ನನಗಿಂತ ಭಿನ್ನವಾಗಿ ಯೋಚಿಸುವ ಆದರೆ ನಾನು ಗೌರವಿಸುವ ಶ್ರೀ ಜಿ.ಎಚ್.ನಾಯಕ, ಕೀರ್ತಿನಾಥ ಕುರ್ತಕೋಟಿ, ಕೆ.ವಿ.ಸುಬ್ಬಣ್ಣ ಇಂಥವರು ಇದ್ದರು. ಇಂಥ ಒಂದು ಲೋಕದಿಂದ ಹುಟ್ಟಿ ಬಂದ ‘ಪ್ರಜ್ಞೆ ಮತ್ತು ಪರಿಸರ’ ಆಗಿನ ಹಲವು ಯುವಕರನ್ನು ಪ್ರಭಾವಿಸಿತು ಎಂದು ನಾನು ತಿಳಿದಿದ್ದೇನೆ. ಅಕ್ಷರ ಪ್ರಕಾಶನದಿಂದ ಹಲವು ಮುದ್ರಣಗಳನ್ನು ಕಂಡ ‘ಪ್ರಜ್ಞೆ ಮತ್ತು ಪರಿಸರ’ ಮತ್ತೆ ಪ್ರಕಟವಾಗಬೇಕೆಂಬುದು ಗೆಳೆಯ ಇಸ್ಮಾಯಿಲ್‌ನ ಒತ್ತಾಯ. ನನ್ನ ಮೇಲಿನ ವಿಶ್ವಾಸದಿಂದ ಅಂಕಿತ ಪುಸ್ತಕದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರು ಇದು ಮತ್ತೆ ಪ್ರಕಟವಾಗುವಂತೆ ಸಹಕರಿಸಿದ್ದಾರೆ.

ಯು.ಆರ್.ಅನಂತಮೂರ್ತಿ
೧೧ – ೧೧ – ೨೦೧೧