ಅಸ್ತಿತ್ವವಾದಿಗಳ ಬಗ್ಗೆ ಕಮ್ಯುನಿಸ್ಟರ ದೂರು :

“ನಿಮಗೆ ಕ್ರಾಂತಿಯಲ್ಲಿ, ಕ್ರಿಯೆಯಲ್ಲಿ ನಂಬಿಕೆಯಲ್ಲ. ಕ್ರಿಯೆಯನ್ನು ಅಲ್ಲಗಳೆದು ಬರಿಯ ಚಿಂತನೆಯಲ್ಲಿ ತೊಡಗುವುದು ಲೋಲುಪತೆ. ಆದ್ದರಿಂದ ನಿಮ್ಮದು ಇನ್ನೊಂದು ಬೂರ್ಜ್ವಾ ತತ್ವ. ಏನು ಮಾಡಿ ಏನು ಕಡಿದ ಹಾಗಾಯಿತು ಎನ್ನುವ ವೈರಾಗ್ಯಕ್ಕೆ ನೀವು ಜನತೆಯನ್ನು ದೂಡುತ್ತೀರಿ.”

ಕೆಲವು ಕ್ಯಾಥಲಿಕರ ದೂರು:

“ಮನುಷ್ಯನ ಕೊಳಕನ್ನು ಮಾತ್ರ ನೀವು ಎತ್ತಿ ತೋರಿಸುತ್ತೀರಿ. ತೊಟ್ಟಿಲಿನ ಕೂಸು ಹೇಗೆ ಮುಗುಳ್ನಗುವುದೆಂದು ನೀವು ಕಂಡಿದ್ದೀರ? ಸುಂದರವಾದದ್ದು ಯಾಕೆ ನಿಮ್ಮ ಕಣ್ಣಿಗೆ ಬೀಳುವುದಿಲ್ಲ?”

ಕಮ್ಯುನಿಸ್ಟ್ ಮತ್ತು ಕ್ಯಾಥಲಿಕರ ವಿರೋಧ ಮೂಲಭೂತವಾಗಿ ಇದು : “ನೀವು ಮಾನವಜನಾಂಗದ ಅನ್ಯೋನ್ಯತೆಯನ್ನು ಮರೆಯುತ್ತೀರಿ; ನನ್ನ ಅರಿವಿನಲ್ಲಿ ನನ್ನ ಲೋಕದ ಇತಿ ಮಿತಿ ಇದೆ ಎಂದು ವಾದಿಸಿ ವ್ಯಕ್ತಿಯನ್ನು ಮಾನವ ಸಮಷ್ಟಿಯ ಹೊರಗಿಟ್ಟು ಅನಾಥ ಏಕಾಂಗಿಯನ್ನಾಗಿ ಮಾಡಿ ನೋಡುತ್ತೀರಿ. ನಾನು ಅರಿಯುವುದರಿಂದ ನಾನು ಇದ್ದೇನೆ ಎಂಬ ಕಾರ್ಟೀಸಿಯನ್ ವಾದ ಹೂಡಿ, ಎಲ್ಲ ತಿಳಿವಳಿಕೆ, ಭಾವನೆ, ಅನುಭವ ಆತ್ಮನಿಷ್ಠವೆಂದು ಹಠ ತೊಟ್ಟರೆ ಮಾನವಕುಟುಂಬದ ಜೊತೆ ಯಾವ ಸಂಪರ್ಕ ಸಾಧ್ಯ? ನಾನು ನನ್ನಲ್ಲಿ ನನಗೋಸ್ಕರ, ನೀನು ನಿನ್ನಲ್ಲಿ ನಿನಗೋಸ್ಕರ – ಎಂದು ಹೇಳಿದ ಹಾಗೆ ನಿಮ್ಮ ವಾದ. ವ್ಯಕ್ತಿಪ್ರಜ್ಞೆಗೆ ಹೊರತಾದ, ಅದನ್ನು ಮೀರಿದ, ಸಾರ್ವತ್ರಿಕ ಸತ್ಯಗಳು ಇಲ್ಲವೆಂದು ಭಾವಿಸಿದರೆ ನಿರಾಸೆ, ಕಿಂಕರ್ತವ್ಯ ಮೌಢ್ಯ ಮಾತ್ರ ಸಾಧ್ಯ.”

ಈ ದೂರುಗಳು ತಪ್ಪು ತಿಳಿವಳಿಕೆಯಿಂದ ಹುಟ್ಟಿದವು ಎಂದು ಸಾರ್ತ್ರ್ ವಾದಿಸುತ್ತಾನೆ. ಮೊದಲು ಗಮನಿಸಬೇಕಾದ್ದು ಅಸ್ತಿತ್ವವಾದಿಗಳಲ್ಲಿ ಎರಡು ಪಂಗಡಗಳಿವೆ ಎಂದು. ಒಂದು ಗುಂಪು ಕ್ರಿಶ್ಚಿಯನ್ನರದು : ಜಾಸ್ಟರ್ಸ್‌ ಮತ್ತು ಗೇಬ್ರಿಯಲ್ ಮಾರ್ಸಲ್ ಅವರಲ್ಲಿ ಮುಖ್ಯರು. ಆದರೆ ಸಾರ್ತ್ರ್ ತನ್ನನ್ನು ಮತ್ತು ಹೈಡೆಗರ್‌ನನ್ನು ನಿರೀಶ್ವರವಾದಿ ಅಸ್ತಿತ್ವವಾದಿಗಳೆಂದು ಕರೆದು ಕೊಳ್ಳುತ್ತಾನೆ. ಎರಡು ಪಂಗಡಕ್ಕೂ ಒಂದು ನಂಬಿಕೆ ಸಾಮಾನ್ಯ : ‘ಸ್ಥಿತಿ’ ಮೊದಲು, ‘ತತ್ವ’ ಆಮೇಲೆ; ನೀನು ಮೊದಲು ‘ಇರುತ್ತಿ’, ಆಮೇಲೆ ‘ಆಗುತ್ತಿ’.

ಒಂದು ಉದಾಹರಣೆಯ ಮೂಲಕ ಸಾರ್ತ್ರ್ ಇದನ್ನು ವಿವರಿಸುತ್ತಾನೆ. ಕಾಗದ ಕತ್ತರಿಸಲೆಂದು ಈ ಚಾಕು ಇದೆ ಎನ್ನಿ. ಈ ಚಾಕನ್ನು ಈ ರೂಪದಲ್ಲಿ ತಯಾರು ಮಾಡುವ ಮುಂಚೆ ತಯಾರುಮಾಡಿದವನ ಮನಸ್ಸಿನಲ್ಲಿ ಅದರ ಉಪಯೋಗ ಆಕಾರಗಳ ಸ್ಪಷ್ಟ ಕಲ್ಪನೆಯಿದ್ದಿರಬೇಕು. ಈ ಸ್ಪಷ್ಟ ಕಲ್ಪನೆಗೆ ಬರುವ ಮುಂಚೆ ಬೇರೆ ಬೇರೆ ಉಪಯೋಗಗಳಿಗೆಂದು ಮಾಡಿದ ಚಾಕುಗಳನ್ನು ಅವನು ಗಮನಿಸಿರಬೇಕು. ಆದ್ದರಿಂದ ಕಾಗದ ಕತ್ತರಿಸಲೆಂದು ಈ ಚಾಕನ್ನು ಸೃಷ್ಟಿಸುವ ಮೊದಲು ಅವನ ಮನಸ್ಸಿನಲ್ಲಿ ಚಾಕಿನ ಈ ‘ಸ್ಥಿತಿ’ಗೆ ಕಾರಣವಾದ ಚಾಕಿನ ‘ತತ್ವ’ ‘ಫಾರ್ಮುಲಾ’ ಇತ್ತು ಎನ್ನಬಹುದು. ಹೀಗೆಯೇ ಚಾಕುವನ್ನು ತಯಾರಿಸಿದ ಕ್ರಮದಲ್ಲಿ ಮಾನವ ನನ್ನು ದೇವರು ಸೃಷ್ಟಿಸಿದ್ದರೆ ದೇವರಿಗೆ ಮೊದಲು ಮಾನವತ್ವದ ‘ತತ್ವ’ ‘ಫಾರ್ಮುಲಾ’ದ ಕಲ್ಪನೆ ಇರುತ್ತಿತ್ತು. ಆ ಸಾರ್ವತ್ರಿಕ ತತ್ವಗಳನ್ನು ತುಂಬಿ ಒಂದು ನಿಯಮಿತ ಉದ್ದೇಶಕ್ಕೆಂದು ಮನುಷ್ಯರನ್ನು ಉಂಟುಮಾಡಿದ ಎನ್ನಬಹುದಿತ್ತು. ಹಾಗೆ ವಾದಿಸಿದರೆ ‘ತತ್ವ’ ಮೊದಲು; ‘ಸ್ಥಿತಿ’ ಆಮೇಲೆ. ಆದರೆ ಸಾರ್ತ್ರ್‌ನ ಪ್ರಕಾರ ದೇವರು ಇಲ್ಲ. ಆದ್ದರಿಂದ ಮನುಷ್ಯ ತನ್ನನ್ನು ತಾನೆ ಕಂಡುಕೊಳ್ಳುವ ಸ್ಥಿತಿಗೆ ಪೂರ್ವಭಾವಿಯಾದ ‘ತತ್ವ’ ಇಲ್ಲ. ಮಾನವ ತನ್ನ ಮನುಷ್ಯತ್ವವನ್ನು ತಾನೇ ಸೃಷ್ಟಿಸಿಕೊಳ್ಳಬೇಕು; ಇಲ್ಲಿಗೆ ನಾವು ಏನನ್ನೂ ಪಡೆದು ಬರುವುದಿಲ್ಲ; ಬಂದಮೇಲೆ ಬಂದದ್ದನ್ನು ಕಂಡುಕೊಂಡು ‘ಆಗ’ ಬೇಕೆಂದಿರುವುದನ್ನು ಮಾಡಿಕೊಳ್ಳಬೇಕು. ಅಂದರೆ ಮೊದಲು ಇಲ್ಲದಿದ್ದೊಂದು ಈಗ ಇದ್ದು, ತನ್ನ ಗುಣಸ್ವಭಾವಕ್ಕೆ ಸಂಪೂರ್ಣ ತಾನೇ ಹೊಣೆಯಾಗುವ ವಿಶೇಷ : ಮಾನವ, ಕಲ್ಲು, ಕುರ್ಚಿ, ಮೇಜುಗಳಂತಲ್ಲದೆ ಮನುಷ್ಯ ‘ವಿಶೇಷ’ನಾಗಿರುವುದು, ಗಂಭೀರಗಹನ ಪ್ರಾಣಿಯಾಗಿರುವುದು, ತನ್ನ ಇರುವಿಕೆಯನ್ನು ಗ್ರಹಿಸಿದ ಮೇಲೆ ತಾನು ಏನಾಗಬೇಕೆಂಬುದನ್ನು ನಿಶ್ಚಯಿಸುವ ಹೊಣೆ, ಸ್ವಾತಂತ್ರ್ಯ ಅವನ ಮೇಲಿರುವುದರಿಂದ. ಆದ್ದರಿಂದ ಗುಣದೋಷಗಳು ಮತ್ತು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಮೌಲ್ಯಗಳೂ ಸಾರ್ವತ್ರಿಕ, ಪೂರ್ವಸಿದ್ಧ ಎಂದು ಭಾವಿಸಿ, ಮನುಷ್ಯನೆಂದರೆ ‘ಹೀಗೆ’ ಎಂಬ ಖಚಿತವಾದ ಕೆಲವು ತಾತ್ವಿಕರ ತೀರ್ಮಾನ ಅಸಾಧ್ಯವೆಂದು ಅಸ್ತಿತ್ವವಾದಿ ಹೇಳುತ್ತಾನೆ. ಯಾಕೆಂದರೆ ಮನುಷ್ಯ ‘ಆಗು’ವ ಮುಂಚೆ ಬರೇ ‘ಇರು’ತ್ತಾನೆ. ತಾನು ಸ್ವಂತ ಏನಾಗಬೇಕೆಂದು ನಿಶ್ಚಯಿಸಿ ಮನುಷ್ಯ ಆಗುತ್ತಾನೊ ಅದೇ ಅವನ ಮನುಷ್ಯತ್ವ; ಕೆಲವು ಪೂರ್ವಸಿದ್ಧ ಸತ್ಯಗಳ, ಸತ್ವಗಳ, ಉದ್ದೇಶಪೂರ್ವಕ ಆವಿರ್ಭಾವವಲ್ಲ ಮನುಷ್ಯ.

ಇದರ ಪರಿಣಾಮ: ತನ್ನ ನಿರ್ಮಾಣದ ಸರ್ವಸ್ವ ಹೊಣೆಯನ್ನು ಹೊತ್ತು ಏನಾಗಬೇಕೆಂದು ನಿಶ್ಚಯಿಸಿ ಏನಾಗುತ್ತಾನೋ ಅದಕ್ಕೆ ಮಾನವ ಸಂಪೂರ್ಣ ಜವಾಬ್ದಾರ ಎಂಬುದು. ಆದರೆ ಈ ನಿಶ್ಚಯ ಆತ್ಮಸ್ಥವಾದರೂ ಆತ್ಮ ಪರಿಮಿತವಲ್ಲ. ತನ್ನ ಸ್ವಂತ ನಿಶ್ಚಯದ ಮೂಲಕ ವ್ಯಕ್ತಿ ಸಮಗ್ರ ಮಾನವತೆಯ ಪರವಾಗಿಯೂ ನಿಶ್ಚಯಿಸುತ್ತಾನೆ. ನಾನು ‘ಹೀಗೆ’ ಆಗಲೆ, ‘ಹಾಗೆ’ ಆಗಲೆ ಎಂದು ನೂರು ದಾರಿಗಳಲ್ಲಿ ಒಂದನ್ನು ನಿಶ್ಚಯಿಸುವ ಸಂದರ್ಭದಲ್ಲಿ, ತಾನು ಪಡೆಯುವ ಸ್ಥಿತಿ ಮಾನವ ಕುಟುಂಬಕ್ಕೆ ಸಮರ್ಪಕ ಹೌದೆ ಅಲ್ಲವೆ ಎನ್ನುವ ಒಳತೋಟಿಯ ಸಂಕಟದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ತನ್ನ ದೃಷ್ಟಿಯಲ್ಲಿ ಅಯೋಗ್ಯವಾದದ್ದನ್ನು ಮನುಷ್ಯ ಎಂದೂ ಆರಿಸಿಕೊಳ್ಳಲಾರ; ಆದ್ದರಿಂದ ‘ಇದ’ನ್ನಲ್ಲದೆ ‘ಅದ’ನ್ನು ತಾನು ಆರಿಸಿಕೊಳ್ಳುವಾಗ ತನಗೆ ಯೋಗ್ಯವಾದದ್ದು ಮಾನವತೆಗೂ ಯೋಗ್ಯವೆ ಎಂಬ ಸಂದಿಗ್ಧ ಏಳುತ್ತದೆ. ಹೀಗೆ ಸ್ವಂತ ಜೀವನಕ್ಕೆ ಸ್ಪಷ್ಟ ಆಕೃತಿ ರಚಿಸುವ ಘಟನೆಯಲ್ಲಿ ಮಾನವ ಕುಟುಂಬವನ್ನೂ ನಾವು ಒಳಪಡಿಸುತ್ತೇವೆ.

ಆದ್ದರಿಂದ ಈ ಗಂಭೀರ ನಿಶ್ಚಯದ ಸಂದರ್ಭವನ್ನು ‘ತಪ್ತಸ್ಥಿತಿ’ಯೆಂದು ಸಾರ್ತ್ರ್ ಕರೆಯುತ್ತಾನೆ. ಈ ತಪ್ತಸ್ಥಿತಿಯಲ್ಲಿದ್ದು ಮನುಷ್ಯ ಕ್ರಿಯಾಮುಖನಾಗಿ ನಿಶ್ಚಯಿಸಬೇಕಾಗುತ್ತದೆ. ವಿಷಾದ ಯೋಗದಲ್ಲಿ ಅಪ್ರತಿಭನಾದ ಅರ್ಜುನನ ಸ್ಥಿತಿ ಇದು. ಆದರೆ ಇಲ್ಲಿ ಕೃಷ್ಣನೂ ಇಲ್ಲ, ವಿಶ್ವರೂಪದ ಮಾರ್ಗದರ್ಶನವೂ ಇಲ್ಲ; ‘ದಿವ್ಯಂದದಾಮಿ ತೇ ಚಕ್ಷುಃ’ ಎಂದು ಹೇಳುವವನೂ ಇಲ್ಲ. ಚಿಹ್ನೆಗಳು ಕಂಡರೂ ಅದನ್ನು ಸ್ವಂತಕ್ಕೆ ಅರ್ಥೈಸಿಕೊಳ್ಳುವ ಹೊಣೆ ಮತ್ತೆ ಮನುಷ್ಯನ ಮೇಲೆಯೆ. ನಾನು ಹೀಗೆ ನಿಶ್ಚಯಿಸಲೆ? ನನ್ನ ಹಾಗೆ ಉಳಿದವರೂ ನಿಶ್ಚಯಿಸಿದರೆ ಏನು ಪರಿಣಾಮ? ಈ ನಿರಂತರ ಪ್ರಶನೆಗಳ ತಾಪದಿಂದ ಮನುಷ್ಯನಿಗೆ ಬಿಡುಗಡೆಯಿಲ್ಲ. ಇದನ್ನು ಗಮನಿಸಿದ ಯಾವನೂ, ಅಸ್ತಿತ್ವವಾದಿ ಕ್ರಿಯಾವಿಮುಖನೆಂದು ದೂರಲಾರ. ಹಾಗೆ ನೋಡಿದರೆ ನಿಶ್ಚಯ ಮತ್ತು ಹೊಣೆ ಹೊತ್ತ ಕ್ರಿಯೆಯ ಮೂಲಕ ಮಾತ್ರ ಬದುಕು ‘ಬಾಳ್ವೆ’ಯಾಗುತ್ತದೆಂಬ ಕ್ರಿಯಾಮುಖ ದಾರಿಗೆ ಗಂಟುಬಿದ್ದವನು ಅಸ್ತಿತ್ವವಾದಿ.

ನಿಯಂತ್ರಿಸುವ, ನಿಯಮಿಸುವ, ಸೃಷ್ಟಿಸುವ ದೇವರು ಇಲ್ಲ. ದೇವರು ಇಲ್ಲ ಎನ್ನುವುದರಿಂದ ಉದ್ಭವಿಸುವ ಸರ್ವ ಪರಿಣಾಮಗಳನ್ನು ತುದಿಮುಟ್ಟಿ ನೋಡಬೇಕು. ಒಂದು ಬಗೆಯ ನಿರೀಶ್ವರವಾದಿ ಹೀಗೆ ಹೇಳುತ್ತಾನೆ: ದೇವರು ಇಲ್ಲ, ಆದರೆ ಮೌಲ್ಯಗಳು ಇವೆ. ಆದ್ದರಿಂದ ದೇವರು ಇಲ್ಲದಿದ್ದರೂ ನಡೆಯುತ್ತದೆ. ಯಾಕೆಂದರೆ ಸಮಾಜಕ್ಕೆ ಅವಶ್ಯವಾದ ಕೆಲವೊಂದು ಮೌಲ್ಯಗಳು ಮಾನವಸ್ವಭಾವಕ್ಕೆ ಸಹಜವೆಂದು ನಂಬುವುದಾದರೆ ಮನುಷ್ಯನ ಬಾಳ್ವೆಯಲ್ಲಿ ಒಂದಿಷ್ಟೂ ಬದಲಾಗುವುದಿಲ್ಲ. ದೇವರು ಅನವಶ್ಯ ಸಿದ್ಧಾಂತ. ಮಕ್ಕಳನ್ನು ಸರಿಯಾಗಿ ಬೆಳೆಸಬೇಕು, ಹೆಂಡತಿಯನ್ನು ಹೊಡೆಯಕೂಡದು, ಸುಳ್ಳು ಹೇಳಬಾರದು – ಇತ್ಯಾದಿ ಕೆಲವು ಮೌಲ್ಯಗಳಲ್ಲಿ ಮನುಷ್ಯನ ಜೀವನ ನಡೆದರೆ ದೇವರು ಇಲ್ಲದೆಯೂ ಈ ಲೋಕ ನಡೆಯುತ್ತದೆ. ಅಸ್ತಿತ್ವವಾದಿ ಇದನ್ನು ಒಪ್ಪುವುದಿಲ್ಲ. ಅವನ ಪ್ರಕಾರ ದೇವರು ಇಲ್ಲ; ಆದ್ದರಿಂದ ಯಾವ ಸಾರ್ವತ್ರಿಕ ಮೌಲ್ಯಗಳೂ ಇಲ್ಲ. ಡಾಸ್ತೊಮಸ್ಕಿ ಅನ್ನುತ್ತಾನೆ : ದೇವರು ಇಲ್ಲವಾದರೆ ನಾವು ಏನನ್ನು ಬೇಕಾದರೂ ಮಾಡಬಹುದು; ಯಾವುದೂ ತಪ್ಪಲ್ಲ. ಅದನ್ನೆ ಅಸ್ತಿತ್ವವಾದಿ ಒತ್ತಿ ಒತ್ತಿ ಹೇಳುತ್ತಾನೆ; ದೇವರು ಇಲ್ಲದಿರುವುದರಿಂದ ಯಾವ ಸಾರ್ವತ್ರಿಕ ಮೌಲ್ಯಗಳಾಗಲಿ ಸತ್ಯಗಳಾಗಲಿ ಇಲ್ಲ. ಏನನ್ನು ಬೇಕಾದರೂ ಮಾಡಬಹುದಾದ ಸ್ವಾತಂತ್ರ್ಯದಲ್ಲಿ – ಈ ದಿಗ್ಭ್ರಮೆಯಲ್ಲಿ, ಈ ‘ಆತಂಕ’ದ ಸ್ಥಿತಿಯಲ್ಲಿ – ಮನುಷ್ಯ ತನ್ನನ್ನು ತಾನು ‘ಮಾಡಿ’ಕೊಳ್ಳಬೇಕು. ಇದು ಸಂಪೂರ್ಣ ಸ್ವತಂತ್ರಸ್ಥಿತಿ. ಯಾವುದು ನ್ಯಾಯ, ಧರ್ಮ, ಸತ್ಯ, ಎಂದು ನನಗೆ ಹೇಗೆ ಗೊತ್ತು? ದೇವರ ಠಸ್ಸೆ ಅವುಗಳ ಮೇಲೆ ಬಿದ್ದಿಲ್ಲ. ಆದ್ದರಿಂದ ನನಗೆ ಯಾವುದು ಸರಿ, ನನಗೆ ಸರಿಯಾದ್ದು ಉಳಿದವರಿಗೂ ಸರಿಯೆ ಎನ್ನುವ ಪ್ರಶ್ನೆಗಳಿಗೆ ಉತ್ತರರೂಪವಾಗಿ ನನ್ನ ನಿಶ್ಚಯವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಬೆರಳುಮಾಡಿ ತೋರಿಸಲು ಸಾರ್ವಕಾಲಿಕ ಪೂರ್ವನಿಶ್ಚಿತ ತತ್ವಗಳೂ ಇಲ್ಲದೆ, ದೇವರೂ ಇಲ್ಲದೆ, ಯಾವ ಆಸರೆಯೂ ಇಲ್ಲದೆ, ನಾನು ಇಲ್ಲಿ ಏಕಾಂಗಿಯಾಗಿ ನಿಲ್ಲಬೇಕು. ‘ಕತ್ತಲಲ್ಲಿ ಕಣ್ಣುನೆಟ್ಟು ತಡಕುವ ನನಗೆ’ ಹಠಾತ್ತನೆ ಏನೂ ಕಾಣಿಸುವುದಿಲ್ಲ. ‘ಹೆಜ್ಜೆ ಮೂಡದ ಹಾದಿ ಗಾಳಿ ಬೀದಿ.’ ಮನುಷ್ಯ ಕೇಳಿಕೊಂಡು ಹುಟ್ಟಲಿಲ್ಲ. ಆದರೆ ಹುಟ್ಟಿದ ಮೇಲೆ ಸ್ವತಂತ್ರ. ಹೀಗೆ ಸ್ವಂತ ನಿಶ್ಚಯವಿಲ್ಲದೆ ಈ ಜಗತ್ತಿಗೆ ಬಂದು ಬಿದ್ದು, ಸಂಪೂರ್ಣ ಸ್ವತಂತ್ರ ಏಕಾಕಿಯಾಗಿ, ಅನಿಶ್ಚಿತ ಮೌಲ್ಯಗಳ ನಡುವೆ ತನಗೆ ಮತ್ತು ಪರರಿಗೆ ಆಯ್ದುಕೊಳ್ಳುತ್ತ, ತನ್ನ ಬದುಕಿನ ಮುಖಾಂತರ ಮಾನವತೆಯ ಚಿತ್ರವನ್ನು ತಪ್ತ ನಿರಾವಲಂಬ ಸ್ಥಿತಿಯಲ್ಲಿ ಬರೆಯಬೇಕು. ಮನುಷ್ಯನ ಈ ‘ನಿರಾವಲಂಬ’ ‘ನಗ್ನ’ ‘ಆತಂಕ’ ಸ್ಥಿತಿಗೆ ಸಾರ್ತ್ರ್ ಒಂದು ಉದಾಹರಣೆ ಕೊಡುತ್ತಾನೆ:

ನನ್ನ ವಿದ್ಯಾರ್ಥಿಯೊಬ್ಬ ಒಮ್ಮೆ ಒಂದು ಸಮಸ್ಯೆಯನ್ನು ನನಗೆ ತಂದ. ನಾಟ್ಸಿ ಜರ್ಮನಿ ಫ್ರಾನ್ಸನ್ನು ಆಕ್ರಮಿಸಿದ ಕಾಲವದು. ಅವನ ಮನೆಯಲ್ಲಿ ತಾಯಿಗೂ ತಂದೆಗೂ ಆಗದು. ಅಲ್ಲದೆ ಆಕ್ರಮಿತ ಫ್ರಾನ್ಸಿನಲ್ಲಿ ಜರ್ಮನರ ಜೊತೆ ಸೇರಲು ಇಚ್ಛಿಸಿದ ದ್ರೋಹಿ ಅವನ ತಂದೆ. ನನ್ನ ವಿದ್ಯಾರ್ಥಿಯ ಸೋದರ ೧೯೪೦ರ ನಾಟ್ಸಿಗಳ ವಿರುದ್ಧದ ಹೋರಾಟದಲ್ಲಿ ಸತ್ತಿದ್ದ. ನನ್ನ ವಿದ್ಯಾರ್ಥಿಗೆ ಆ ರಚ್ಚನ್ನು ತೀರಿಸಿಕೊಳ್ಳಬೇಕು, ಸ್ವದೇಶವನ್ನು ಬಂಧವಿಮುಕ್ತಗೊಳಿಸಬೇಕು ಎಂದು ಆಸೆ. ಆದರೆ ಗಂಡನ ದ್ರೋಹ ಮತ್ತು ಒಬ್ಬ ಮಗನ ಸಾವಿನಿಂದ ದುಃಖಿತೆಯಾಗಿದ್ದ ಅವನ ತಾಯಿಗೆ ಈ ಉಳಿದೊಬ್ಬ ಮಗ ಜೀವನದ ಸರ್ವಸ್ವವಾಗಿದ್ದ. ನನ್ನ ವಿದ್ಯಾರ್ಥಿಗೆ ಆಗ ಸಂಭವಿಸಿದ ಸಮಸ್ಯೆ : ತಾನು ತಾಯಿಯ ಜೊತೆ ಇರುವುದು ಸರಿಯೊ, ಅಥವಾ ಜರ್ಮನರ ವಿರುದ್ಧ ಹೋರಾಡಲು ಇಂಗ್ಲೆಂಡಿಗೆ ಹೋಗಿ ಸೈನ್ಯ ಸೇರುವುದೊ? ತಾನು ತಾಯಿಯ ಜೊತೆ ಉಳಿದರೆ ಆಕೆಗೆ ದೊರೆಯಬಹುದಾದ ನೆಮ್ಮದಿ ನಿಶ್ಚಿತ. ವ್ಯಕ್ತಿಗಳ ನಡುವಣ ಪರಸ್ಪರ ಸಂಬಂಧವಾದ್ದರಿಂದ ಅದರ ಪರಿಣಾಮ ತಾಯಿಗೆ ಮತ್ತು ತನಗೆ ಸ್ಪಷ್ಟ. ಆದರೆ ನಾಸಿನಂ ವಿರುದ್ಧ ಹೋರಾಡುವುದರ ಪರಿಣಾಮ ಅಷ್ಟು ಖಚಿತವಲ್ಲ. ಸ್ವತಂತ್ರ ಫ್ರೆಂಚ್ ಸೈನ್ಯವನ್ನು ಸೇರಲೆಂದು ಇಂಗ್ಲೆಂಡಿಗೆ ಹೋಗುವ ಮಾರ್ಗದಲ್ಲಿ ಸ್ಪೈನ್‌ನಲ್ಲಿ ಒಂದು ಕ್ಯಾಂಪಿನಲ್ಲಿ ಅನಿರ್ದಿಷ್ಟಕಾಲ ಕೊಳೆಯಬೇಕಾಗಿ ಬರಬಹುದು. ಅಥವಾ ಸೈನ್ಯ ಸೇರಿದ ಮೇಲೆ ದಾಖಲೆಗಳನ್ನು ತುಂಬಿಸುವ ಕಾರಕೂನ ವೃತ್ತಿಯಲ್ಲಿ ಸಮಯ ಕಳೆಯಬೇಕಾಗಿ ಬರಬಹುದು. ಒಂದು ಕಡೆ ಉದಾತ್ತ ಉದ್ದೇಶದ ಅನಿರ್ದಿಷ್ಟತೆ, ಇನ್ನೊಂದು ಕಡೆ ಪ್ರೀತಿಯ ಸಂಬಂಧದ ಪರಿಮಿತವಾದರೂ ನಿರ್ದಿಷ್ಟವಾದ ನಿಶ್ಚಯ. ಎರಡು ನೈತಿಕ ಮೌಲ್ಯಗಳಲ್ಲಿ ಯಾವುದು ಸರಿ? ಕ್ರಿಶ್ಚಿಯನ್ ಧರ್ಮ ಅವನಿಗೇನನ್ನುತ್ತದೆ? ಔದಾರ್ಯದಲ್ಲಿ ನಡಿ. ನೆರೆಯವರನ್ನು ಪ್ರೀತಿಸು, ನಿನ್ನನ್ನು ಪರರಿಗೆ ತ್ಯಾಗಮಾಡು, ಕಷ್ಟದ ದಾರಿಯನ್ನು ಆರಿಸಿಕೊ – ಇತ್ಯಾದಿ. ಆದರೆ ಇವೆರಡರಲ್ಲಿ ಕಷ್ಟದ ದಾರಿ ಯಾವುದು? ಒಂದು ವ್ಯಕ್ತಿಯ ಸುಖವನ್ನು ಕಾಯುವುದು ದೊಡ್ಡ ತ್ಯಾಗವೊ ಅಥವಾ ಇಡೀ ಜನಾಂಗಕ್ಕಾಗಿ ಕಾದಾಡುವುದೊ? ಒಂದು ವಿಶಿಷ್ಟ ಸನ್ನಿವೇಶವನ್ನು ಎದುರಿಸುವಾಗ ಎಲ್ಲ ಸಾರ್ವತ್ರಿಕ ಮೌಲ್ಯಗಳೂ ಅಸಂಬದ್ಧವೆನಿಸುತ್ತವೆ. ಪ್ರತಿ ವಿಶಿಷ್ಟ ಸಂದರ್ಭದಲ್ಲೂ ನಾವೇ ತತ್ವಗಳನ್ನು ಸೃಷ್ಟಿಸಬೇಕು. ಯಾಕೆಂದರೆ ಎಲ್ಲ ಸಾರ್ವತ್ರಿಕ ತತ್ವಗಳೂ ವ್ಯಕ್ತಿಯ ಜೀವನಕ್ಕೆ ‘ಈ’ ಘಳಿಗೆಯಲ್ಲಿ ಅಸಮಂಜಸ. ಧರ್ಮದಲ್ಲಿ ಹೋಗಲಿ, ತತ್ವಶಾಸ್ತ್ರದಲ್ಲಿ ಉತ್ತರವಿದೆಯೆ? ಕ್ಯಾಂಟನ ಸಿದ್ಧಾಂತ ಅನ್ನುತ್ತದೆ : ಇನ್ನೊಬ್ಬ ವ್ಯಕ್ತಿಯನ್ನು ನಿನ್ನ ಸಾಧನವಾಗಿ ಉಪಯೋಗಿಸಬೇಡ. ಸರಿ, ನನ್ನ ತಾಯಿಯ ಜೊತೆ ನಾನು ಉಳಿದರೆ ನನ್ನ ತಾಯಿಯನ್ನು ನನ್ನ ಗುರಿಯ ಸಾಧನವಾಗಿ ಉಪಯೋಗಿಸಿದಂತೆ ಆಗಲಿಲ್ಲ, ನಿಜ. ಆದರೆ ಆಗ ನಮಗೋಸ್ಕರ ಹೋರಾಡುತ್ತಿರುವ ಇತರರನ್ನು ನನ್ನ ಗುರಿಯ ಸಾಧನವಾಗಿ ಉಪಯೋಗಿಸಿದಂತೆ ಆಯಿತು. ಇದನ್ನು ಬಿಟ್ಟು ನಾಸಿಸಂ ವಿರುದ್ಧ ಹೋರಾಡಲು ಸೈನ್ಯವನ್ನು ನಾನು ಸೇರಿದರೆ, ಆಗ ನನ್ನ ತಾಯಿಯನ್ನು ನನ್ನ ಗುರಿಗೆ ಸಾಧನವಾಗಿ ಉಪಯೋಗಿಸಿದಂತೆ ಆಯಿತು.

“ಧರ್ಮದಲ್ಲಿ ಉತ್ತರವಿಲ್ಲ, ತತ್ವಶಾಸ್ತ್ರದಲ್ಲಿ ಉತ್ತರವಿಲ್ಲ – ಮತ್ತೇನು ಮಾಡಬೇಕಾಯಿತು? ನೀವು ಅನ್ನಬಹುದು: ನಿನ್ನ ವಿದ್ಯಾರ್ಥಿ ಈ ಸಂದರ್ಭದಲ್ಲಿ ತನಗೆ ತೀವ್ರವಾಗಿ ಅನ್ನಿಸಿದಂತೆ ಮಾಡಬೇಕು. ಹೃದಯದ ಮಾತನ್ನು ಕೇಳಬೇಕು. ನನ್ನ ವಿದ್ಯಾರ್ಥಿ ಹಾಗೆಯೇ ನಡೆಯಲು ನಿರ್ಧರಿಸಿದ. ‘ನನ್ನ ಭಾವನೆ ಯಾವ ದಿಕ್ಕಿಗೆ ನನ್ನನ್ನು ತುಯ್ಯುತ್ತಿದೆಯೆಂದು ನೋಡುತ್ತೇನೆ. ತಾಯಿಯ ಮೇಲಿನ ಪ್ರೇಮ ದೇಶಪ್ರೇಮಕ್ಕಿಂತ ಹೆಚ್ಚೆನಿಸಿದರೆ ಮನೆಯಲ್ಲಿ ನಿಲ್ಲುತ್ತೇನೆ. ಇಲ್ಲವೆ ತಾಯಿಯನ್ನು ತೊರೆದು ಹೋರಾಡಲು ಹೋಗುತ್ತೇನೆ’ – ಎಂದು ನನಗೆ ಹೇಳಿದ. ಆದರೆ ಇಲ್ಲಿ ಏಳುವ ಪ್ರಶ್ನೆ : ನಮ್ಮ ಭಾವನೆ ಯಾವ ದಿಕ್ಕಿನಲ್ಲಿ ಅಧಿಕವಾಗಿದೆ ಎಂದು ಸ್ಪಷ್ಟವಾಗಿ ನಾವು ಅರಿಯುವುದು ಹೇಗೆ? ಅವನಿಗೆ ತನ್ನ ತಾಯಿಯ ಮೇಲಿನ ಪ್ರೇಮದ ಸ್ಪಷ್ಟತೆಯ ಅರಿವಾದದ್ದು ಅವನು ಆಕೆಯ ಜೊತೆ ಇದ್ದುದರಿಂದ. ನಮ್ಮ ಭಾವನೆ ಯಾವುದರಲ್ಲಿ ಎಷ್ಟು ಎನ್ನುವುದು ಖಚಿತವಾಗುವುದು ನಿಶ್ಚಯದ ನಂತರ, ನಿಶ್ಚಯದ ಮುಖಾಂತರ. ಕ್ರಿಯೆಯಲ್ಲಿ ಭಾವನೆ ಪ್ರತ್ಯಕ್ಷವಾಗುತ್ತದೆ; ಮೈದಾಳುತ್ತದೆ; ‘ಆಗು’ತ್ತದೆ. ಆದ್ದರಿಂದ ಒಂದು ಕ್ರಿಯೆಗೆ, ನಿಶ್ಚಯಕ್ಕೆ, ಅದಕ್ಕೆ ಪೂರ್ವಭಾವಿಯಾಗಿ ಇದ್ದಿರಬಹುದಾದ ಭಾವನೆಯನ್ನು ಸಮರ್ಥನೆಯಾಗಿ ಕೊಡುವುದು ನಿರರ್ಥಕ.

ಅಲ್ಲದೆ ಜೀಡ್ ಹೇಳುವಂತೆ ಯಾವ ಭಾವನೆ ಸಾಚ, ಯಾವುದು ಮೋಸ ಎಂದ ನಿರ್ಣಯಿಸುವುದು ಅಸಾಧ್ಯ. ನಿಜವಾಗಿ ಅನ್ನಿಸಿದ್ದರಿಂದ ನನ್ನ ತಾಯಿಯ ಜೊತೆ ನಾನು ಉಳಿಯುವ ನಿಶ್ಚಯ ಮಾಡಲಿ, ಅಥವಾ ಕೃತ್ರಿಮ ನಾಟಕವಾಡಿ ಪರಿಣಾಮವಾಗಿ ನಾನು ನನ್ನ ತಾಯಿಯ ಜೊತೆ ನಿಲ್ಲಲಿ – ಕ್ರಿಯೆಯಲ್ಲಿ ಪ್ರತ್ಯಕ್ಷವಾಗುವಷ್ಟು ಮಾತ್ರ ನಿಜ. ಒಟ್ಟಿನಲ್ಲಿ ಮಾರ್ಗದರ್ಶನ ಹೃದಯದಲ್ಲೂ ಇಲ್ಲ, ಧರ್ಮದಲ್ಲೂ ಇಲ್ಲ, ತತ್ವಶಾಸ್ತ್ರದಲ್ಲೂ ಇಲ್ಲ. ಮಾರ್ಗ ದರ್ಶನಕ್ಕೆಂದು ನಿನ್ನ ಹತ್ತಿರ ಅವನು ಬರಲಿಲ್ಲವೆ ಎಂದು ನೀವು ಕೇಳಬಹುದು. ಇಲ್ಲ – ನನ್ನ ಹತ್ತಿರ ಬರಲು ನಿಶ್ಚಯಿಸಿದಾಗ ತಾನು ಅಪೇಕ್ಷಿಸಿದ ಉತ್ತರವನ್ನು ನಾನು ಕೊಡುವೆನೆಂದು ನಿರೀಕ್ಷಿಸಿಯೇ ಅವನು ಬಂದಿದ್ದ. ನಾನು ಕೊಟ್ಟ ಉತ್ತರ ಇದು : ನೀನು ಸ್ವತಂತ್ರ, ಆದ್ದರಿಂದ ನಿಶ್ಚಯಿಸು – ಅಂದರೆ ಸೃಷ್ಟಿಸಿಕೊ. ಇದು ಸ್ವತಂತ್ರ ನಿರಾವಲಂಬ ನಗ್ನ ಸ್ಥಿತಿ; ತಪ್ತಸ್ಥಿತಿ. ನಿಶ್ಚಯದ ಮೂಲಕ ಮಾತ್ರ ನಮ್ಮ ಬದುಕನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಉಳಿದವರು ನಮ್ಮನ್ನು ನೋಡುತ್ತಿದ್ದಾರೆ ಎನ್ನುವ ಅರಿವಿನಲ್ಲಿ ಇದನ್ನು ಏಕಾಂಗಿಯಾಗಿ ಮಾರ್ಗದರ್ಶನವಿಲ್ಲದೆ ಮಾಡಬೇಕು.

ಅಲ್ಲದೆ ಕೆಲವೊಂದು ಸಾಧ್ಯತೆಗಳ ಮಿತಿಯಲ್ಲಿ ಮಾತ್ರ ನಮ್ಮ ನಿಶ್ಚಯ, ಕ್ರಿಯೆ ಸಾಧ್ಯ – ಈ ಸಾಧ್ಯತೆಯ ಆಚಿನ ಪರಿಣಾಮಗಳಲ್ಲಿ ನಾವು ಅನಾಸಕ್ತರಾಗಬೇಕಾಗುತ್ತದೆ. ಭರವಸೆಯಿಲ್ಲದ ಕರ್ಮವೆಂದರೆ ಇದೆಂದು ಅಸ್ತಿತ್ವವಾದಿ ಅನ್ನುತ್ತಾನೆ.

ಕ್ರಿಯಾವಿಮುಖ ಹೇಳುತ್ತಾನೆ : ನನ್ನಿಂದ ಏನು ತಾನೆ ಸಾಧ್ಯ? ಬೇರೆಯವರು ಈ ಕೆಲಸ ಮಾಡಲಿ. ಆದರೆ ನಾವು ಹೇಳುವುದು : ಕ್ರಿಯೆ ಮತ್ತು ನಿಶ್ಚಯಗಳ ಮುಖಾಂತರ ಮಾತ್ರ ನಮ್ಮ ವಾಸ್ತವತೆಯ್ನು ನಾವು ಸೃಷ್ಟಿಸಿಕೊಳ್ಳುತ್ತೇವೆ. ಇದನ್ನೇ ಇನ್ನಷ್ಟು ಸ್ಪಷ್ಟವಾಗಿ ಹೇಳಿದರೆ – ಮನುಷ್ಯನೆಂದರೆ ಅವನು ಮಾಡುವ ನಿಶ್ಚಯಗಳು, ತೊಡಗುವ ಕ್ರಿಯೆಗಳು : ಇವುಗಳ ಮುಖಾಂತರ ಎಷ್ಟು ಮೈಗೂಡುವುದೊ ಅಷ್ಟು ಅವನ ಪಾಲಿನ ವಾಸ್ತವ; ಬಾಳ್ವೆ ಎಂದರೆ ಬದುಕಿದಷ್ಟು ಮಾತ್ರ.

ಇಂತಹ ವಾದದಿಂದ ಕೆಲವರಿಗೆ ದಿಗಿಲಾಗುವುದು ಸಹಜ, ದುಃಖದಲ್ಲಿ ಕಷ್ಟದಲ್ಲಿ ಎಲ್ಲರೂ ಆತ್ಮಸಮಾಧಾನಕ್ಕೆ ಅಂದುಕೊಳ್ಳುವುದು ಹೀಗೆ : ‘ಪರಿಸ್ಥಿತಿಯಿಂದ ನಾನು ಕೆಟ್ಟೆ, ನಾನು ಬದುಕಿದ್ದಕ್ಕಿಂತ, ಸಾಧಿಸಿದ್ದಕ್ಕಿಂತ, ಹೆಚ್ಚಿನ ಯೋಗ್ಯತೆ ನನ್ನಲ್ಲಿ ಹುದುಗಿತ್ತು, ಆದರೇನು ಮಾಡಲಿ – ನನ್ನ ದುರ್ಗತಿ ತೀವ್ರ – ಪ್ರೇಮವಾಗಲೀ ಉದಾತ್ತ ಸ್ನೇಹವಾಗಲಿ ನನಗೆ ದೊರೆಯದೆ ಹೋಯಿತು; ಅದಕ್ಕೆ ಕಾರಣ ನನ್ನ ಹಂಬಲಕ್ಕೆ ತಕ್ಕಂತಹವರನ್ನು ನಾನು ಸಂಧಿಸದೆ ಇದ್ದುದರಿಂದ; ನಾನೊಂದು ಒಳ್ಳೆಯ ಪುಸ್ತಕ ಬರೆಯದಿರಲು ಕಾರಣ ಅದಕ್ಕೆ ಬೇಕಾದ ವಿರಾಮ ಸಿಗದೆಹೋದದ್ದರಿಂದ; ಇಷ್ಟೊಂದು ಸಾಧ್ಯತೆ, ಯೋಗ್ಯತೆ ಗುಪ್ತವಾಗಿ ಉಳಿದ ನನ್ನ ಬಾಳನ್ನು ನಾನು ಬದುಕಿದ್ದಷ್ಟರಿಂದ ಅಳೆಯುವುದು ತಪ್ಪು; ನನ್ನ ಕ್ರಿಯೆಗಳನಷ್ಟು ಕೂಡಿಸಿ ನೋಡಿ ಇಷ್ಟು ಮಾತ್ರ ನಾನು ಎಂದು ನಿರ್ಣಯಿಸುವುದು ಕ್ರೂರ ಅನ್ಯಾಯ…’

ಇದು ಆತ್ಮವಂಚನೆ, ಆತ್ಮಮರುಕ, ಮೋಸ ಎನ್ನುತ್ತಾನೆ ಅಂತಹವರಿಗೆ ಅಸ್ತಿತ್ವವಾದಿ. ನನ್ನಲ್ಲಿ ಎಷ್ಟೊಂದು ಪ್ರೇಮವನ್ನು ಕೊಡುವ ಸಾಧ್ಯತೆ ಹುದುಗಿದೆ ಎನ್ನುವುದು ದಗ; ನೀನು ಕೊಟ್ಟಷ್ಟು ಪ್ರೇಮ ಮಾತ್ರ ನಿಜ. ಪ್ರತ್ಯಕ್ಷವಾಗದ ಪ್ರತಿಭೆ ಇಲ್ಲ. ನಿನ್ನ ಪ್ರತಿಭೆಯ ಮಿತಿ ನಿನ್ನ ಕೃತಿ. ನಿನ್ನ ಸ್ನೇಹಪರತೆ, ಪ್ರೇಮಮಯತೆ ನಿನ್ನ ಪ್ರಣಯದಲ್ಲಿ ಗೆಳೆತನದಲ್ಲಿ ಕೈಗೂಡಿದಷ್ಟು ಮಾತ್ರ : ಅನಿರ್ವಾಚ್ಯ ಅಪ್ರತ್ಯಕ್ಷವಾಗಿ ಇದ್ದದ್ದು ಅಲ್ಲ. ಬದುಕಿನಲ್ಲಿ ಮನುಷ್ಯ ಸ್ವತಂತ್ರ ನಿಶ್ಚಯ ಮಾಡಿ ಬಾಳಿನ ದ್ರವ್ಯವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅಷ್ಟಲ್ಲದೆ – ಅವನು ಹಾಗೆ ಉಂಟುಮಾಡಿಕೊಂಡದ್ದಲ್ಲದೆ – ಬೇರೆ ಏನೂ ಇಲ್ಲ. ನಿರ್ಣಯಕ್ಕೆ ಬಾರದೆ ಸೋತವರಿಗೆ ಈ ವಾದ ನಿಷ್ಠುರ, ಹಿಡಿಸುವುದು ಕಠಿಣ.

ಇದು ನಿರಾಶಾವಾದವಲ್ಲ – ನಿಷ್ಠುರ ಆಶಾವಾದ. ಜೋಲಾ ಒಂದು ಹೇಯ ಪಾತ್ರವನ್ನು ಸೃಷ್ಟಿಸಿದರೆ ಅದಕ್ಕೆ ಕಾರಣ ಅವನ ಆವರಣ, ಪರಿಸ್ಥಿತಿ ಅಥವಾ ವಂಶ ಎನ್ನುತ್ತಾನೆ. ಅನುವಂಶಿ ಕತೆಯಲ್ಲೊ, ಆವರಣದ ಪ್ರಭಾವದಲ್ಲೊ ಪ್ರತಿಯೊಬ್ಬನ ಸ್ವಭಾವವನ್ನು ನಿರ್ಣಯಿಸುವ ಶಕ್ತಿಗಳಿದ್ದಾವೆ ಎಂದು ತೋರಿಸುತ್ತಾನೆ. ಇದು ಜನರಿಗೆ ಹಿತವಾದದ್ದು. ‘ನೋಡಿದಿಯಾ ನಾವು ಇರುವುದೇ ಹಾಗೆ, ಇದನ್ನು ಬದಲಾಯಿಸುವುದು ಅಸಾಧ್ಯ’ – ಅಂದು ಬೆಚ್ಚಗೆ ಕೂರುತ್ತಾರೆ. ಆದರೆ ಅಸ್ತಿತ್ವವಾದಿ ಒಬ್ಬ ಹೇಡಿಯನ್ನು ಚಿತ್ರಿಸಿದರೆ ಅವನ ಹೇಡಿತನ ಅವನೇ ಸ್ವತಂತ್ರಸ್ಥಿತಿಯಲ್ಲಿ ಮಾಡಿಕೊಂಡದ್ದು ಎನ್ನುತ್ತಾನೆ. ‘ಹೇಡಿ ಸ್ವಭಾವ’ ಅಂತ ಒಂದು ಸ್ಥಿತಿ ಇಲ್ಲ. ಆದರೆ ಜನರು ಇಚ್ಛಿಸುವುದು ಹುಟ್ಟುವಾಗಲೆ ಹೇಡಿಯಾಗಿರಬೇಕು ಅಥವಾ ಶೂರನಾಗಿರಬೇಕು ಎಂದು. ನಮ್ಮ ಪೂರ್ಣ ನಿಶ್ಚಿತ ಸ್ವತಂತ್ರ ಕ್ರಿಯೆಯಿಂದ ನಾವು ಹೇಡಿಗಳೊ ಶೂರರೊ ಆಗುತ್ತೇವೆನ್ನುವುದು ಅತ್ಯಂತ ಕಸಿವಿಸಿಗೆ ಒಳಪಡಿಸುವ ಸತ್ಯ.

ಮನುಷ್ಯ ತಾನು ಏನಾಗಬೇಕೆಂದು ನಿಶ್ಚಯಿಸುವುದರಲ್ಲಿ ವಿವಿಧ ಸಾಧ್ಯತೆಗಳಿವೆ; ಆದರೆ ಯಾವುದಾದರೂ ಒಂದನ್ನು ನಿಶ್ಚಯಿಸದೆ ಇರುವುದು ಅಸಾಧ್ಯ. ಯಾವುದನ್ನೂ ಆಯ್ದುಕೊಳ್ಳುವುದಿಲ್ಲ ಎಂದು ನಿಶ್ಚಯಿಸುವುದೂ ಒಂದು ನಿಶ್ಚಯವೇ. ಆಯ್ಕೆಯ ಮೂಲಕ ನಾವು ರೂಪಿಸಿಕೊಳ್ಳುವ ಮನುಷ್ಯ ನಾನು. ಮನುಷ್ಯ ಪೂರ್ವನಿಶ್ಚಿತನಲ್ಲ, ಸದಾ ಆಗುತ್ತಲೆ ಇರಬೇಕಾದವನು. ಈ ದೃಷ್ಟಿಯಿಂದ ಪ್ರಗತಿಯಿಲ್ಲ, ಅಂದರೆ ಪರಿಸರದ ಬದಲಾವಣೆಯ ಮೂಲಕ ಅವನ ಉದ್ಧಾರ ಸಾಧ್ಯವಿಲ್ಲ. ಸನ್ನಿವೇಶಗಳು ಸದಾ ಬದಲಾಗುತ್ತವೆ; ಆದರೆ ನಿಶ್ಚಯದ ಮೂಲಕ ನಮ್ಮ ಬದುಕನ್ನು ಬಾಳ್ವೆಯಾಗಿಸಿಕೊಳ್ಳುವ ಅನಿವಾರ್ಯತೆ ಬದಲಾಗುವುದಿಲ್ಲ.

ಬದುಕನ್ನು ಬಾಳ್ವೆ ಮಾಡಿಕೊಳ್ಳುವ, ಇರದ ಮೌಲ್ಯಗಳನ್ನು ನಿರಂತರ ಸೃಷ್ಟಿಸಿಕೊಳ್ಳುವ ಈ ಕ್ರಿಯೆಗೆ, ನಿಶ್ಚಯಕ್ಕೆ, ಮೂಲವಾದದ್ದು ಸ್ವಾತಂತ್ರ್ಯ. ನಾವು ಸಂಪೂರ್ಣ ಸ್ವತಂತ್ರರು. ಆತ್ಮವಂಚನೆಯಲ್ಲಿ ಈ ಸ್ವಾತಂತ್ರ್ಯ ಸ್ಥಿತಿಯನ್ನು ತನಗೆ ಮೀರಿದ ಶಕ್ತಿಗಳ ನೆವವೊಡ್ಡಿ ಕಳೆದುಕೊಳ್ಳುವವರು ಹೇಡಿಗಳು. ಸದಾ ಜಾಗ್ರತವಾಗಿರಬೇಕಾದ ತನ್ನ ಮತ್ತು ಪರರ ಈ ಸ್ವಾತಂತ್ರ್ಯ ಸ್ಥಿತಿಯನ್ನು ಕಾಯಲು ಅಸ್ತಿತ್ವವಾದಿ ಹೆಣಗುತ್ತಾನೆ. ಅವನ ಇಡೀ ವಾದದ ತಿರುಳು ಈ ಸಂಪೂರ್ಣ ಸ್ವತಂತ್ರ ಹೊಣೆಗಾರಿಕೆಯ ಸ್ಥಿತಿಯನ್ನು ಅರಿಯುವುದರಲ್ಲಿ ಇದೆ.

ಹಿಂದೇಟು ಹೊಡೆಯದೆ ಯಾವತ್ತು ಹುಡುಕುತ್ತ, ತನ್ನನ್ನೆ ತಾನು ಮೀರಲು ಯತ್ನಿಸುತ್ತ ತನ್ನ ಜಗತ್ತಿನ ಮೌಲ್ಯಗಳನ್ನು ತನ್ನ ಬಾಳಿನ ಮೂಲಕವೆ ಸೃಷ್ಟಿಸಿಕೊಳ್ಳುತ್ತ, ಯಾವ ಹೊರಗಿನ ಆಣತಿಯೂ ಇಲ್ಲದೆ ತನ್ನೊಳಗೆ ತನ್ನತನವನ್ನು ಸಾಧಿಸಿಕೊಳ್ಳುತ್ತ, ಈ ಸಾಧನೆಯಲ್ಲಿ ಮಾನವ್ಯವನ್ನು ಸೃಷ್ಟಿಸುತ್ತ – ನಿರಂತರ ಸ್ವಾತಂತ್ರ್ಯದಲ್ಲಿ ಮನುಷ್ಯ ಇದ್ದಾನೆ; ಹೀಗೆ ತನ್ನ ಸ್ಥಿತಿಯನ್ನು ನಿಜವಾಗಿ ಮಾನವೀಯವಾಗಿ ಮಾಡಿಕೊಳ್ಳುತ್ತಾನೆ ಎನ್ನುವುದು ಒಟ್ಟಿನಲ್ಲಿ ನಿರೀಶ್ವರವಾದಿ ಅಸ್ತಿತ್ವವಾದಿಯ ತತ್ವ. ದೇವರು ಇಲ್ಲ ಎನ್ನುವ ಸ್ಥಿತಿಯಿಂದ ಹೊರಟು ಅದರ ಸಮಸ್ತ ಪರಿಣಾಮಗಳನ್ನು ಹಗಲಿನಷ್ಟು ಸ್ಪಷ್ಟವಾಗಿ ನೋಡುವುದು – ಇದರ ಪ್ರಯತ್ನ. ಒಂದು ವೇಳೆ ದೇವರು ಇದ್ದರೂ ಕೂಡ ಮನುಷ್ಯನಿಗೆ ತನ್ನ ನಿಶ್ಚಯದಿಂದ ಮನುಷ್ಯನಾಗಬೇಕಾದ ಪರಿಸ್ಥಿತಿಯಿಂದ ಮುಕ್ತಿ ಇಲ್ಲ. ಅಸ್ತಿತ್ವವಾದ – ಆದ್ದರಿಂದ – ಪ್ರತಿ ಪಕ್ಷದವರು ವಾದಿಸುವ ಹಾಗೆ ಕಿಂಕರ್ತವ್ಯ ಮೌಢ್ಯದ ನಿರಾಶೆಯ ವಾದವಲ್ಲ; ‘ಕ್ರಿಯೆ’ ‘ನಿಶ್ಚಯ’ ಅನಿವಾರ್ಯವೆಂದು ತಿಳಿದು ಮನುಷ್ಯನನ್ನು ತನ್ನ ಮಾನವತೆಗೆ ಸಂಪೂರ್ಣ ಜವಾಬ್ದಾರರನ್ನಾಗಿ ಮಾಡುವ ಪ್ರಯತ್ನ.

—-
ಸಾರ್ತ್ರ್ Existentialism and Humanism ಎಂಬ ಭಾಷಣದಿಂದ ಆಯ್ದ ಕೆಲವು ವಿಚಾರಗಳು ಕನ್ನಡ ನಿರೂಪಣೆ; ಗೋಕುಲ (ವಾರ ಪತ್ರಿಕೆ), ೧೯೬೪.

* * *